ಬೈಲುದಾರಿ

5

ನಸುಕಿನ ಚುಮು ಚುಮು ಬಿಸಿಲಿನಲ್ಲಿ ಆ ದಾರಿಯಲ್ಲಿ ನಡೆದರೆ ಅಕ್ಷರಶ: ವಜ್ರ ಮುತ್ತುಗಳನ್ನು ದಾರಿಯುದ್ದಕ್ಕೂ ಕಾಣಬಹುದು! ಇರುಳೆಲ್ಲ ಬಿದ್ದ ಇಬ್ಬನಿಯು ದಾರಿಯ ಇಕ್ಕೆಲಗಳಲ್ಲೂ ಹುಲ್ಲಿನ ಮೇಲೆ ಮುತ್ತಿನ ಮಣಿಗಳಂತೆ ಕೂತಿರುತ್ತಿದ್ದವು. ಬೆಳಗಿನ ಬಿಸಿಲಿನಲ್ಲಿ ಫಳಫಳನೆ ವಜ್ರಗಳಂತೆ ಮಿನುಗುತ್ತಿದ್ದವು. ಆ ದಾರಿಯಲ್ಲಿ ನಡೆದಂತೆಲ್ಲ ಆ ಮುತ್ತು - ವಜ್ರಗಳು ನಮ್ಮ ಕಾಲಿಗೆ ತಾಗಿ ನಲುಗಿ, ಪಾದಗಳನ್ನು ತೊಳೆಯುತ್ತಿದ್ದವು.

    ನಮ್ಮ ಮನೆಗೆ ಸಾಗುವ ಬೈಲುದಾರಿಯಲ್ಲಿ ನಡೆಯುವುದೆಂದರೆ, ಅದೊಂದು ವಿನೂತನ ಅನುಭವ; ಪ್ರಕೃತಿಯೊಂದಿಗೆ ಅನಿವಾರ್ಯವಾಗಿ ಬೆರೆಯುವ ಒಂದು ಅನುಭೂತಿ. ನಿಸರ್ಗದ ಪರಿಶುದ್ದ ಗಾಳಿಯನ್ನು ಸೇವಿಸುತ್ತಾ ಬಯಲಿನಲ್ಲಿ ಹಸಿರಾಗಿ ಬೆಳೆದ ಬೆಳೆಯನ್ನು ನೋಡುತ್ತಾ, ಪಚ್ಚೆ ಸಿರಿಯ ನಡುವೆ ಬೈತಲೆಯಂತೆ ಹಾದು ಹೋದ ದಾರಿಯಲ್ಲಿ ನಡೆಯುವಾಗ ಹಕ್ಕಿಗಳು ಕೂಗುತ್ತಿರುತ್ತವೆ, ಕೀಟಗಳು ಕಿಚಗುಡುತ್ತವೆ, ತೋಡಿನ ನೀರು ಜುಳು ಜುಳು ಎನ್ನುತ್ತಾ ಹರಿಯುತಿರುತ್ತದೆ. ಆ ಬೈಲುದಾರಿಯ ನಡುಗೆಯೇ ಒಂದು ನಿರಂತರ ಕವನವೆನ್ನಬಹುದು.

    ನಾನು ಶಾಲೆಗೆ ಹೋಗಿ ಬರುತ್ತಿದ್ದಾಗ, ನಮ್ಮ ಮನೆಗೆ ಇದ್ದುದು ಅದೊಂದೇ ದಾರಿ - ಆ ಬೈಲುದಾರಿ. ನಂತರದ ವರ್ಷಗಳಲ್ಲಿ ಗುಡ್ಡದ ಮೇಲೆ ಸಾಗಿ ಬರುವ, ಕಾಡಿನ ನಡುವಿನ ಮತ್ತೊಂದು ದಾರಿ ತಯಾರಾದರೂ, ಮೊದಮೊದಲ ಕೆಲವು ವರ್ಷಗಳಲ್ಲಿ, ಅನಿವಾರ್ಯವಾಗಿ ಆ ದಾರಿಯಲ್ಲಿ ಒಂದು ಕಿ.ಮೀ. ನಡೆದ ನಂತರವಷ್ಟೇ, ನಮ್ಮ ಮನೆಯ ಹೊಸ್ತಿಲನ್ನು ತುಳಿಯಬಹುದಾಗಿತ್ತು. ಆ ಬೈಲುದಾರಿ, ಅದೆಷ್ಟೋ ನೂರು ವರ್ಷಗಳಿಂದಲೂ ಹಾಗೇ ಇತ್ತೆಂದು ಅನಿಸುತ್ತದೆ. ಆ ಬೈಲಿನ ಒಂದು ತುದಿಯಲ್ಲಿ ನಮ್ಮ ಮನೆಯಿತ್ತು - ಅಥವಾ ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ನಮ್ಮ ಮನೆಯಿಂದ ಉತ್ತರದಿಕ್ಕಿಗೆ ಒಂದು ಕಿ.ಮೀ.ನಷ್ಟು ದೂರಕ್ಕೆ ಗದ್ದೆ ಬಯಲು ಸಾಗಿತ್ತು - ಮತ್ತು ಪೂರ್ವಕ್ಕೆ ಸಹಾ ಒಂದು ಕಿ.ಮೀ. ಅದೇ ಗದ್ದೆ ಬೈಲು ಮುಂದುವರಿದಿತ್ತು. ಪೂರ್ವಕ್ಕೆ ಸಾಗಿದರೆ, ಬೈಲು ದಾಟಿದ ನಂತರ ಹರನಗುಡ್ಡೆ ಎಂಬ ಎತ್ತರದ ಗುಡ್ಡ ಮತ್ತು ಕಾಡು. ಉತ್ತರಕ್ಕೆ ಸಾಗುವ ದಾರಿಯು ಒಂದು ಕಿ.ಮೀ. ಮುಂದುವರಿದು, ಕಾಡನ್ನು ದಾಟಿಸಿ, ಹಾಲಾಡಿಯನ್ನು ತಲುಪಿಸುತ್ತಿದ್ದುದರಿಂದ,ನಾವು ಹಾಲಾಡಿ ಶಾಲೆಗೆ ಹೋಗುವಾಗ ಅದೇ ದಾರಿಯನ್ನು ಹಿಡಿಯುತ್ತಿದ್ದೆವಾದ್ದರಿಂದ, ಈ ಬೈಲು ದಾರಿ ನಿಜಕ್ಕೂ ಜನಪ್ರಿಯ ದಾರಿ! ಬೇಸಗೆ, ಮಳೆಗಾಲ, ಚಳಿಗಾಲದಲ್ಲಿ ವಿವಿಧ ರೂಪ ಪಡೆಯುತ್ತಿದ್ದ ಈ ಬೈಲು ದಾರಿಯು, ನಮ್ಮ ಶಾಲಾ ದಿನಗಳಲ್ಲಿ ನನಗೆ ಓರ್ವ ಅಮೂರ್ತ ಸಂಗಾತಿಯೇ ಆಗಿತ್ತು. ವಿವಿಧ ಋತುಗಳಲ್ಲಿ ಬದಲಾಗುತ್ತಿದ್ದ ಆ ಬಯಲಿನ ಸ್ವರೂಪವು ಸ್ಪಷ್ಟವಾಗಿ ಒಂದು ನಿಸರ್ಗ ಪಾಠಶಾಲೆಯಾಗಿತ್ತು. ಬೇಸಗೆಯಲ್ಲಿ ಬೋಳು ಬೋಳಾಗಿ, ಧೂಳಿನಿಂದ ತುಂಬುವ ಇಡೀ ಬಯಲು. ಆಗ ಗದ್ದೆಗಳಲ್ಲಿ ಉಳುಮೆ ನಂತರ ಹರಡಿದ ಮಣ್ಣಿನ ಹೆಂಟೆಗಳ ಅಡಿಯಲ್ಲಿ ಜುಟ್ಟಿನ ಗುಬ್ಬಿ ಗೂಡು ಕಟ್ಟುವುದೂ ಉಂಟು. ವಸಂತ ಮಾಸ ಕಳೆದ ನಂತರ, ಒಣಗಿ ನಿಲ್ಲುವ ಇಡೀ ಬೈಲು ಮಧ್ಯಾಹ್ನದ ಹೊತ್ತಿನಲ್ಲಿ ಬಿರುಬಿಸಿಲಿಗೆ ಕುಣಿಯುತ್ತಿರುವಂತೆ ಕಾಣುತ್ತಿತ್ತು! ಆ ಬೈಲಿನ ಮಧ್ಯೆ ಸಾಗುವ ದಾರಿ ಬೇಸಗೆಯ ಬಿಸಿಲಿಗೆ ಒಣಗಿ ಬೆಂಡಾಗುತ್ತಿತ್ತು.

    ಬೈಲಿನ ತುದಿಯಲ್ಲಿ ನಮ್ಮ ಮನೆ. ಸಹಜವಾಗಿ ಒಂದು ಕಿ.ಮೀ. ದೂರದ ತನಕ ಬೈಲುದಾರಿಯು ಮನೆಯ ಮುಂದೆ ನಿಂತರೆ ಕಾಣುತ್ತಿತ್ತು. "ಮಕ್ಕಳೇ, ಬೈಲುದಾರಿಯಲ್ಲಿ ಯಾರೋ ನಡ್ಕಂಡು ಬತ್ರ್, ಕಾಣಿ!" ಎನ್ನುತ್ತಿದ್ದರು ಅಮ್ಮಮ್ಮ. ನಾವೆಲ್ಲ ಚಿಟ್ಟೆಯ ತುದಿಯಲ್ಲಿ ನಿಂತು, ಆ ಬೈಲುದಾರಿಯನ್ನು ನೋಡುತ್ತಾ, ಅಲ್ಲಿ ನಡೆದುಕೊಂಡು ಬರುವವರು ಯಾರು ಎಂದು ಊಹಿಸತೊಡಗುತ್ತಿದ್ದೆವು. ದೂರದಲ್ಲಿ ಕಟ್ಟಿನಗುಂಡಿಯ ಹತ್ತಿರ ನಡೆದು ಬರುತ್ತಿದ್ದ ಆಕೃತಿ ಮೊದಮೊದಲಿಗೆ ಚಿಕ್ಕದಾಗಿ ಕಾಣುತ್ತಿತ್ತು; ಆ ಆಕೃತಿ ನಡೆಯುತ್ತಾ ನಿಧಾನವಾಗಿ ಹತ್ತಿರ ಬಂದಂತೆ, " ಹೋ, ಇದು . . . . . ಇವರೇ ಅಲ್ದಾ?" ಎಂದು ಗುರುತಿಸುವಷ್ಟು ಸ್ಪಷ್ಟವಾಗತೊಡಗುತ್ತದೆ. ಇನ್ನೂ ಹತ್ತಿರ ಬಂದು, ಕಂಬಳಗದ್ದೆಯ ಕಂಟದಲ್ಲಿ ನಡೆದು ಬರುವಾಗ, ಬೈಲು ದಾರಿಯಲ್ಲಿ ಬರುತ್ತಿರುವವರು "ಇಂಥವರೇ" ಎಂದು ಸ್ಪಷ್ಟವಾಗುತ್ತದೆ. ನಮ್ಮ ಮನೆಗೆ ಬರುವವರಾದರೆ ಖುಷಿ; ಇನ್ನೂ ಮುಂದೆ ಅದೇ ಬೈಲುದಾರಿಯನ್ನು ತುಳಿದು ಚೇರ್ಕಿಗೆ ಹೋಗುವವರು ಹೋಗುತ್ತಿದ್ದರು. ಸುಮಾರು ಕಾಲು ಗಂಟೆಯ ತನಕ ಬೈಲುದಾರಿಯಲ್ಲಿ ನಡೆದು ಬರುವವರನ್ನು ಆಗಾಗ ಇಣುಕಿ ನೋಡುವುದೇ ಮಕ್ಕಳ ಕೆಲಸ. ಬೇಸಗೆಯಾದರೆ, ಅಷ್ಟು ದೂರ ನಡೆದುಬರುವವರು, ಬಿಸಿಲಿಗೆ ಬೆವರಿಳಿದು ಬಸವಳಿದು ಹೋಗುತ್ತಾರೆ! ಮನೆಗೆ ಬಂದವರಿಗೆ, ಮುದ್ದೆಬೆಲ್ಲದ ಜೊತೆ ನೀರನ್ನು ಕೊಡುವುದು ಅಂದಿನ ಸಂಪ್ರದಾಯ.

    ಇದೇ ದಾರಿಯಲ್ಲಿ ಮಳೆಗಾಲದಲ್ಲಿ ನಡೆದು ಬರುವುದು ಮತ್ತೊಂದೇ ಅನುಭವ. ಇಡೀ ಬಯಲನ್ನು ಹಸಿರು ಹಚ್ಚಡದಂತೆ ಹೊದ್ದಿರುವ, ಗಾಳಿಗೆ ಓಲಾಡುವ ಬತ್ತದ ಬೆಳೆ. ನಡುವೆ ಗದ್ದೆಯ ಅಂಚಿನಲ್ಲಿ ಸಾಗುವ ದಾರಿ; ದಾರಿಯುದ್ದಕ್ಕೂ ನೀರಿನದ್ದೇ ರಾಜ್ಯ. ಗದ್ದೆ ಅಂಚುಗಳನ್ನು ಅಲ್ಲಲ್ಲಿ ಕಡಿದು ನೀರು ಸಾಗಲು ಮಾಡಿರುವ "ನೀರ್ ಕಡು" ಗಳನ್ನು ನೋಡಿಕೊಂಡು, ದಾಟಿ ನಡೆಯಬೇಕು. ನೋಡದೇ ಕಾಲಿಟ್ಟರೆ, ಗದ್ದೆಗೆ ಬೀಳುವ ಸಾಧ್ಯತೆ! ಕೆಸರಿನ ಸ್ನಾನ! ಇಂಥ ಗದ್ದೆ ಅಂಚಿನಲ್ಲಿ ನಾವು ಮಕ್ಕಳು ಸಾಲಾಗಿ ಶಾಲೆಗೆ ಹೋಗುವ ಪರಿಯನ್ನು ನೋಡಬೇಕಿತ್ತು. ಒಬ್ಬರ ಹಿಂದೆ ಒಬ್ಬರು, ಕಪ್ಪನೆಯ ಕೊಡೆಯನ್ನು ಮಳೆಗೆ ಎದುರಾಗಿ ಹಿಡಿದು, ಮಾತನಾಡುತ್ತಾ ಶಾಲೆಗೆ ಹೋಗುವ ಅನುಭವವೇ ಅನುಪಮ. ಎಷ್ಟೊಂದು ಮಕ್ಕಳು ಆಗ ನಡೆದೇ ಶಾಲೆಗೆ ಹೋಗುತ್ತಿದ್ದರು! ನಾನು, ಇಂದಿರಾ, ಭಾರತಿ, ವಸಂತಿ, ವೇದಾವತಿ, ಗೌರೀಶ ಉಪ್ಪೂರ, ಸುರೇಶ ಉಪ್ಪೂರ, ದಿನೇಶ ಉಪ್ಪೂರ, ದುಗ್ಗ ನಾಯಕ........ ... ಈ ರೀತಿ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮಳೆಗಾಲದಲ್ಲಿ ನೆರೆ ಬಂದಾಗ ಒಂದು ರೀತಿಯ ಪಜೀತಿ; ಆದರೂ ಗಮ್ಮತ್ತು! ತುಂಬಾ ಮಳೆ ಬಂದಾಗ, ಶಾಲೆಗೆ ರಜಾ ಕೊಡುವುದು ನಾವು ಶಾಲೆಗೆ ಹೋದ ನಂತರವೇ! ಮಳೆಗಾಗಿ ಒಂದು ದಿನ ರಜಾ ಎಂದಾಗ, ನಾವೆಲ್ಲಾ ಸಾಲಾಗಿ ವಾಪಸು ಹೊರಡುವೆವು. ಈ ಬೈಲುದಾರಿಯ ಹತ್ತಿರ ಬಂದು ನೋಡಿದರೆ, ಮಳೆಯಿಂದಾಗಿ ಬೈಲು ತುಂಬಾ ನೆರೆ! ಬೈಲು ದಾರಿಯು ಅರ್ಧಕ್ಕರ್ಧ ಮಾಯ! ಬಯಲಿನ ಪಕ್ಕದ ತೋಡಿನ ನೀರು ಉಕ್ಕಿ ಹರಿದು, ಈ ದಾರಿಯು ನೀರಿನ ಅಡಿ ಅಂತರ್ಧಾನವಾಗಿತ್ತು. ಒಬ್ಬರ ಕೈ ಒಬ್ಬರು ಹಿಡಿದು, ಪ್ರತಿದಿನ ಆ ದಾರಿಯಲ್ಲಿ ನಡೆದು ಹೋದ ಅಂದಾಜಿನ ಮೇಲೆ ಹಗೂರ ನಡೆಯುತ್ತಾ, ಕೆಸರು ನೀರಿನ ಅಡಿಯಲ್ಲಿ ಅಂತರ್ಧಾನವಾಗಿದ್ದ ಗದ್ದೆಯ ಅಂಚಿನ ಮೇಲೆ ನಡೆಯಬೇಕಾಗುತ್ತಿತ್ತು. ತಗ್ಗಿನ ಜಾಗವಾದ ಕಟ್ಟಿನಗುಂಡಿಯ ಹತ್ತಿರ ಈ ರೀತಿ, ದಾರಿಯು ಒಂದೆರಡು ಫರ್ಲಾಂಗಿನಷ್ಟು ದೂರ ನೀರಿನಲ್ಲಿ ಮುಳುಗಿಹೋಗುತ್ತಿತ್ತು. ಇತ್ತ ಮನೆಯ ಹತ್ತಿರದ ಬೈಲುದಾರಿ ಎತ್ತರವಾದ ಜಾಗದಲ್ಲಿದ್ದುದರಿಂದ, ಮುಳುಗುತ್ತಿರಲಿಲ್ಲ. ಗಾಳಿಯ ಹೊಡೆತ ತಡೆದು,ಮಳೆನೀರು ತಲೆಯ ಮೇಲೆ ಬೀಳದಂತೆ ಕೊಡೆಯನ್ನು ಹಿಡಿದು ಮನೆಗೆ ಬರುವುದೇ ಒಂದು ದೊಡ್ಡ ಕೆಲಸ. ಮನೆಗೆ ಬಂದು, ಚಂಡಿ ಮುದ್ದೆಯಾದ ಬಟ್ಟೆ ಬದಲಿಸಿ, ನೀರಿನಲ್ಲಿ ನೆನೆದ ಪುಸ್ತಕಗಳನ್ನು ಗರಂ ಮಾಡುವ ಕೆಲಸವೂ ಮುಖ್ಯವೇ. ನೆರೆಯ ನೀರಿನಲ್ಲಿ ಓಡುತ್ತಿದ್ದ ಒಳ್ಳೆಹಾವು, ಕಪ್ಪೆ, ಏಡಿ, ಮೀನುಗಳನ್ನು ನೋಡುವ ಮಜವೇ ಮಜ. ಮಳೆಯ ದಿನಗಳಲ್ಲಿ ತೋಡಿನ ಬದಿಯ ಮುಂಡುಕನ ಹಿಂಡಲಿನಲ್ಲಿ ಕೂಗುತ್ತಿದ್ದ ವಾಂಟೆ ಕೋಳಿ, ನೀರು ಕೋಳಿಗಳ ಕೂಗು ಮಳೆಯ ಸದ್ದಿನ ಜೊತೆ ಮೇಳೈಸುತ್ತಿತ್ತು.

    ಬೈಲುದಾರಿಯು ಚಳೀಗಾಲದಲ್ಲಿ ಮತ್ತೊಂದು ರೂಪವನ್ನು ಪಡೆಯುತ್ತಿತ್ತು. ಸುಂದರ ನೀಲ ಗಗನ, ಬಯಲ ತುಂಬಾ ಹಸಿರುಕ್ಕಿಸುವ ಭತ್ತದ ಗದ್ದೆ, ಗದ್ದೆಯಾಚೆಗಿನ ದಟ್ಟವಾದ ಕಾಡು. ಸಂಜೆಯ ಆರು ಗಂಟೆಗಾಗಲೇ, ಅಂದರೆ, ನಾವು ಶಾಲೆಯಿಂದ ನಡೆದುಕೊಂಡು ಹಿಂತಿರುಗುವ ಸಮಯಕ್ಕೆ, ಒಂದೊಂದು ಇಬ್ಬನಿಯನ್ನು ಮುತ್ತಿನಂತೆ ಹಿಡಿದಿಟ್ಟ ಭತ್ತದ ಗಿಡಗಳು. ಅದೊಂದು ಸುಂದ‘ರ ಲೋಕ. ಅನತಿ ದೂರದಲ್ಲಿ ಆಲೆಮನೆಯಲ್ಲಿ ಒಳಲು ಹಾಕುವ ಸದ್ದು, ಕೋಣನ ಕುತ್ತಿಗೆಯ ಗಗರದ ಸದ್ದು, ಅಲ್ಲಿ ಆಲೆಮನೆಯವರು ವಿಶ್ವಾಸದಿಂದ ಕೊಟ್ಟ ಕಬ್ಬಿನ ಹಾಲು ಕುಡಿದು, ಅವರು ಕೊಡುವ ಕಬ್ಬನ್ನು ತಿನ್ನುತ್ತಾ ಆ ಬೈಲು ದಾರಿಯಲ್ಲಿ ನಡೆಯುವ ಅನುಭವವೇ ವಿಶಿಷ್ಟ.

     ಅಂಥ ಸುಂದರ ಬೈಲು ದಾರಿ ಕ್ರಮೇಣ ನಶಿಸಿ ಹೋಯ್ತು. ಮೊದಲಿಗೆ ಬೈಲಿಗೆ ಅಡ್ಡವಾಗಿ, ಗದ್ದೆಗಳೆಲ್ಲಾ ವಿಶಾಲವಾದ ಅಡಿಕೆ ತೋಟಗಳಾದವು. ತೋಟಕ್ಕೆ ಬೇಲಿ ಹಾಕಿದರು. ಬೈಲಿನ ಉದ್ದಕ್ಕೂ ಮನೆ ಕಟ್ಟಿಕೊಂಡು ಇದ್ದವರಲ್ಲಿ ಕೆಲವರು ಗದ್ದೆ ಮತ್ತು ಜಾಗ ಮಾರಿ, ಪೇಟೆಯತ್ತ ಮುಖಮಾಡಿದರು. ಆ ಬೈಲುದಾರಿಯನ್ನು ದಿನವೂ ತುಳಿದು, ಅಲ್ಲಿ ನಿಸರ್ಗ ಪಾಠಗಳನ್ನು ಹೇಳಿಸಿಕೊಳ್ಳುತ್ತಾ, ಶಾಲೆಯಲ್ಲಿ ಪರೀಕ್ಷೆ ಪಾಸು ಮಾಡಿದ ನನ್ನಂತಹ ಹಲವು, ಆ ವಿದ್ಯಾಭ್ಯಾಸದ ಸರ್ಟಿಫಿಕೇಟಿನ ಆಧಾರದ ಮೇಲೆ, ಪೇಟೆಯಲ್ಲಿ ಕೆಲಸಕ್ಕೆ ಸೇರಿದರು.ಬೈಲು ದಾರಿಯ ಬದಲು ಗುಡ್ಡದ ದಾರಿಯಲ್ಲಿ ಬೈಕು, ಆಟೊರಿಕ್ಷಾದ ಮೂಲಕ ಪೇಟೆಗೆ ಮತ್ತು ಶಾಲೆಗೆ ಹೋಗುವವರು ಹೆಚ್ಚಾದರು. ಬೈಲುದಾರಿ ಕ್ರಮೇಣ ತೆರೆಗೆ ಸರಿಯಿತು.     ಚಿತ್ರಕೃಪೆ: gurudongma.com               

                                                                                                                                                                                                                                                      -ಶಶಿಧರ ಹೆಬ್ಬಾರ ಹಾಲಾಡಿ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಆತ್ಮೀಯ ಶಶಿಯವರೇ ಲೇಖನ ತುಂಬಾ ಚೆನ್ನಾಗಿದೆ ಅದರಲ್ಲೂ ಕೊನೆಯ ಭಾಗ ತುಂಬಾ ಹಿಡಿಸಿತು. ನಿಜ ನೀವು ನಾವೆಲ್ಲರೂ ಓಡಾಡಿದ ಅದೆಷ್ಟೋ ಬಯಲುದಾರಿಗಳು ಅದೆಷ್ಟೋ ಬಯಲುದಾರಿಗಳು ಈಗ ಮಾಯವಾಗಿವೆ. ಇನ್ನೊಂದು ಸಲಹೆ ಮಾರ್ರೆ ಕುಂದಾಪ್ರ ಕನ್ನಡದಲ್ಲಿ ಬರ್ದ್ರೆ ಓದೋಕೆ ಖುಷಿ ಆತ್ . ನಿಮ್ಮ ಕಾಮತ್ ಕುಂಬ್ಳೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಕಾಮತ್, ಲೇಖನ ಓದಿ ನಿಮಗೆ ಖುಷಿಯಾಯ್ತು ಎಂದು ತಿಳಿದು ನನಗೆ ತುಂಬಾ ಖುಷಿಯಾಯ್ತು. ಧನ್ಯವಾದ. - ಶಶಿಧರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮನುಷ್ಯನ ಜೀವನ ಒಂದು ಸಂಚಾರ ಕ್ರಿಯೆಯಾಗಿ ಇದ್ದಾರೆ ಉತ್ತಮ .ಇಲ್ಲದಿದ್ದರೆ ನಿಂತ ನೀರಿನ ಹಾಗೇ ನೋಡಿ . ಹರಿಯುವ ನದಿ ಎಷ್ಟು ಸುಂದರ.ಹಾಗೆಯೇ ಬ್ಯಾಂಕ್ ಉಧ್ಯೋಗಿ ಗಳಾಗಿ ನಾವು ರಾಜ್ಯ ವಲ್ಲದೆ ರಾಷ್ಟ್ರ ಗಳಲ್ಲಿ ಸ್ಥಳ ಬದಲಾವಣೆ ೩ ವರ್ಷಕೊಮ್ಮೆ ಸಂಚರಿಸಿ ಭಾಷೆ ಕಲಿಯುವ ಅವಕಾಶಗಳು ಇವೆ .ಜನರ ಸಂಪರ್ಕವೂ ಇರುತ್ತದೆ . ಬಾವಿಯೊಳಗಿನ ಕಪ್ಪೆಗಳ ಜೀವನ ಆಗಬಾರದು .ಸಂಕುಚಿತ ಮನೋಭಾವನೆ ಇಲ್ಲದೆ ವಿಶಾಲ ಹ್ರದಯಿ ಗಳಾಗುವುದು ಲೇಸು . ಕೋಶ ಓದಿ ದೇಶ ತಿರುಗಿ . ಇಂದಿನ ಪೀಳಿಗೆ ವಿದೇಶದಲ್ಲಿ ಓದು ಮತ್ತು ಉದ್ಯೋಗದಲ್ಲಿ ಇರುವುದರಿಂದ ನಾವು ಹಿರಿಯ ನಾಗರೀಕರು ಮಕ್ಕಳ ಜೊತೆ ಪ್ರವಾಸ ಮಾಡಬೇಕಾಗುತ್ತದೆ . ನಿಮ್ಮ ಲೇಖನ ಚೆನ್ನಾಗಿದೆ. ನಮ್ಮ ಕುಂದಾಪುರ ಚಿತ್ರ ಲಾಯಕಾತ್ತ್ ಮಾರಾಯ್ರೆ . ಕುಂದಾಪುರ ನಾಗೇಶ್ ಪೈ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪೈಯವರೆ, ೩ ವರ್ಷಕ್ಕೆ ಒಂದ್ ಸರ್ತಿ ಟ್ರಾನ್ಸ್ ಫರ್ ಆದಾಗ, ಭಾರೀ ಪಚೀತಿ-ತೊಂದರೆ ಆದ್ರೂ, ಬೇರೆ ಬೇರೆ ಊರುಗಳನ್ನು ನೋಡಿದ್ದರಿಂದ, ತಿಳುವಳಿಕೆ ಜಾಸ್ತಿ ಆಗೋದಂತೂ ನಿಜ, ಅಲ್ವಾ? ಧನ್ಯವಾದ,ಲೇಖನ ಓದಿ, ಅಭಿಪ್ರಾಯ ತಿಳಿಸಿದ್ದಕ್ಕೆ. -ಶಶಿಧರ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಇಷ್ಟವಾಯ್ತು ಬರಹ ..ಈ ಬದುಕು ಮತ್ತು ಹಳ್ಳಿ ಎಷ್ಟು ಬೇಗ ಆಧುನಿಕ ಆಗಿಬಿಟ್ಟಿತಲ್ಲ ಅನಿಸತ್ತೆ.ಜಾರುವ ಗದ್ದೆ ಅಂಚಿನಲ್ಲಿ ಎದ್ದು ಬಿದ್ದು ಮೈ ತುಂಬಾ ಕೆಸರು ಮಾಡಿಕೊಂಡು ಮನೆಗೆ ಬಂದು ಓಲೆ ಎದುರು ಕುಳಿತುಕೊಂಡ ನೆನಪೆಲ್ಲ ಎಂದಿಗೂ ಹಸಿ ಹಸಿ..ಎಲ್ಲ ಊರಿಂದೆ ನೆನ್ಪ್ ಮಾಡ್ಸಿ ಬಿಟ್ರಿ ಮರ್ರೆ... ಧನ್ಯವಾದಗಳೊಂದಿಗೆ ವಾಣಿ ಶೆಟ್ಟಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಊರಿನ / ಹಳ್ಳಿಯ ನೆನಪುಗಳೆಲ್ಲ ಈಗ ಕೇವಲ ನೆನಪುಗಳಾಗಿ ಹೋಗಿ ಬಿಟ್ಟಿವೆ ಅಲ್ವೆ? ಅಂದಿನ ಹಳ್ಳಿ ಇಂದು ಇಲ್ಲ ; ಮನದ ಮೂಲೆಯಲ್ಲೆಲೋ ಒಂದು ಪುಟ್ಟ ಕೊಠಡಿಯಲ್ಲಿ ಆ ಹಳ್ಳಿಯ ನೆನಪುಗಳೆಲ್ಲ ಮುದುರಿಕುಳಿತಿವೆ, ಅನಿಸುತ್ತಿಲ್ವೆ? ಧನ್ಯವಾದ, ಪ್ರತಿಕ್ರಿಯಿಸಿದ್ದಕ್ಕೆ. - ಶಶಿಧರ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಶಿಯವರೇ ಮತ್ತೆ ಹಳೆಯ ನೆನಪೆಲ್ಲಾ ತನಂತಾನೆ ಹಸಿರಾಯ್ತು ಧನ್ಯವಾದಗಳು ಸ್ವಾಗತ ಸಂಪದಂಗಳಕೆ ನಾವೆಲ್ಲಾ ಶಂಕರ ನಾರಾಯಣ ಶಾಲೆಗೇ ನಡೆದೇ ಹೋಗುತ್ತಿದ್ದುದು ನಾನು ಹಾಗೆ ಅಂದಿಗೆ ನಡೆದುಬಿಟ್ಟೆ .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ರಾಯರೆ. ಹೊಳೆಸಾಲಿನ ದಾರಿ ಯಾವುದಾದರೂ ನೆನಪಿದ್ದರೆ, (ಉದಾ; ರಟ್ಟಾಡಿ ದಾರಿ) ನೀವೂ ಆ ಬಗ್ಗೆ ಬರೆಯಬಹುದೇನೋ. ಹಳೆಯ ನೆನಪುಗಳು ತಂತಾನೇ ಹಸಿರಾಯ್ತು ಎಂಬ ನಿಮ್ಮ ವಾಕ್ಯ ನಿಜಕ್ಕೂ ಚಂದ. --ಶಶಿಧರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಳೆಯ ನೆನಪುಗಳು ಹಾಗೆ ಹಾದು ಹೋದವು. ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓದಿ, ಪ್ರತಿಕ್ರಿಯಿಸಿದ್ದಾಗಿ ಧನ್ಯವಾದ -ಶಶಿಧರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹಳ ಸೊಗಸಾಗಿದೆ.ಬಾಲ್ಯದ ದಿನಗಳು ಮತ್ತೊಮ್ಮೆ ನೆನಪಾದವು. ತೋಟಗಳಿಗೆ ಬೇಲಿ ಹಾಕಿದರು,ಮನಸ್ಸುಗಳಿಗೂ ಹಾಕಿದರು ಅಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ, ಗದ್ದೆ ಅಂಚಿಗೆ ಬೇಲಿ ಹಾಕಿದಾಗ, ಮನುಷ್ಯರ ಭಾವನಾತ್ಮಕ ಸಂಬಂಧಗಳಿಗೂ ಬೇಲಿ ಹಾಕಿದಂತಾಗುತ್ತದೆ, ತಂತಾನೇ, ಎಂದು ಗುರುತಿಸಿದಿರಲ್ಲಾ, ! ಧನ್ಯವಾದ, ಪ್ರತಿಕ್ರಿಯೆಗಾಗಿ. -ಶಶಿಧರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಚೆನ್ನಾಗಿದೆ.ಬಾಲ್ಯದ ಆ ದಿನಗಳು ಮತ್ತೆ ನೆನಪಾದವು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ. ನಿಮ್ಮ ಊರಿನ ಕಾಡಿನ ದಾರಿಯ ನೆನಪುಗಳನ್ನು ನೀವೂ ಬರೆಯಬಹುದಲ್ವೆ? --ಶಶಿಧರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖಂಡಿತಾ.ಸದ್ಯದಲ್ಲೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖಂಡಿತ ಶಶಿಧರ್ ರವರೇ ಬರೆಯುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್.. ತುಂಬಾ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯಿಸಿದ್ದಾಗಿ ಧನ್ಯವಾದ -ಶಶಿಧರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಲೇಖನ ನನ್ನ ಬಾಲ್ಯದ ದಿನಗಳನ್ನು ನೆನಪಿಸಿದವು. ನಾನು ಮತ್ತು ನನ್ನ ತಂಗಿ ಬಯಲು, ಕಾಡುಗಳನ್ನು ದಾಟಿ ಶಾಲೆಗೆ ಹೋಗುತ್ತಿದ್ದೆವು. ಚಳಿಗಾಲದ ದಿನಗಳಲ್ಲಿ ಶನಿವಾರ ಯಾಕೆ ಬರುತ್ತದೋ ಎಂದುಕೊಳ್ಳುತ್ತಿದ್ದೆವು. ಏಕೆಂದರೆ ಶನಿವಾರ 8:30 ಕ್ಕೆ ಶಾಲೆ ಪ್ರಾರಂಭವಾಗುವುದರಿಂದ 7 ಗಂಟೆಗೆಲ್ಲಾ ಮನೆಯಿಂದ ಹೊರಡಬೇಕಿತ್ತು. ಆಗುಂಬೆ ಸೀಮೆಯ ಚಳಿಯಲ್ಲಿ ಬಯಲಿನ ಹುಲ್ಲುಗಳ ಮೇಲೆ ಬಿದ್ದ ಇಬ್ಬನಿಯ ಹನಿಗಳು ಮಂಜುಗಡ್ಡೆಯಷ್ಟು ತಣ್ಣಗಾಗಿರುತ್ತಿತ್ತು. ನಮ್ಮ ಕಾಲಿನಲ್ಲಿ ಚಪ್ಪಲಿಗಳು ಇರುತ್ತಿರಲಿಲ್ಲ (ನಾನು ಮೊದಲು ಚಪ್ಪಲಿ ಹಾಕಿದ್ದು ಹೈಸ್ಕೂಲಿಗೆ ಹೋಗಲು ಶುರು ಮಾಡಿದಾಗ). ಹುಲ್ಲಿನ ಮೇಲೆ ನಡೆಯುವಾಗ ನೂರು ಮುಳ್ಳುಗಳು ಚುಚ್ಚಿದ ಅನುಭವವಾಗಿ ಅದೆಷ್ಟು ಹಿಂಸೆ ಅನುಭವಿಸಿದ್ದೆವೆಂದು ನಿಮ್ಮ ಲೇಖನ ಓದುತ್ತಿರುವಾಗ ನೆನಪಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಬರಹ ನಿಮ್ಮಬಾಲ್ಯವನ್ನು ನೆನಪಿಸಿತು ಅಂದ್ರೆ, ಅದು ನಿಮ್ಮ ಹೃದಯವನ್ನು ನಿಜಕ್ಕೂ ಸ್ವಲ್ಪಮಟ್ಟಿಗಾದರೂ ತಟ್ಟಿದೆ ಎಂದರ್ಥ. ಚಳಿಗಾಲದಲ್ಲಿ, ಬೆಳಗಿನ ಇಬ್ಬನಿಯು ಕಾಲಿನಲ್ಲಿ ಸೂಜಿ ಚುಚ್ಚುವ ಅನುಭವ ತರುವುದು ನನಗೂ ನೆನಪಾಯ್ತು. ಮತ್ತೆ, ಹಳ್ಳಿ ಶಾಲೆಯ ಹೆಚ್ಚಿನವರಿಗೆ ಚಪ್ಪಲಿ ಇರುತ್ತಿರಲಿಲ್ಲವಲ್ಲ! ನಿಮ್ಮ ಕಾಡುದಾರಿಯ ಅನುಭವ ಹೇಗಿದೆ ಎಂದು ಓದುವ ಕುತೂಹಲ ನನಗೆ. -ಶಶಿಧರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.