ಹೊಸ ಸರಕಾರ, ಅಭಿವೃದ್ಧಿ ನಶ್ವರ

0

ಕರ್ನಾಟಕದಲ್ಲಿ ಹೊಸ ಸರಕಾರ ಬಂದು ನೂರು ದಿನಗಳಾಗುತ್ತ ಬಂದಿವೆ, ಬೆಂಗಳೂರು ಅಭಿವೃದ್ಧಿಯ ಬಗ್ಗೆ ಮುಖ್ಯಮಂತಿಗಳು ಮತ್ತು ಮಂತ್ರಿಗಳು ಪುಂಖಾನುಪುಂಖವಾಗಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ, ಪತ್ರಿಕೆಗಳು ತಾವೂ ಹಿಂದಿಲ್ಲವೆನ್ನುವಂತೆ ಬೆಂಗಳೂರು ಅಭಿವೃದ್ಧಿಯ ಬಗ್ಗೆ ಜನರಿಂದ ತಯಾರಿಸಿದ ಬೇಡಿಕೆಯ ಪಟ್ಟಿಯನ್ನು ಸರಕಾರಕ್ಕೆ ನೀಡಿದ್ದಾರೆ. ಇನ್ನು ಕೆಲ ಪ್ರತಿಷ್ಠಿತರು, ಕಲಾವಂತರು, ಚಿಂತಕರು ಬೆಂಗಳೂರಿನಲ್ಲಿ 'ರಾತ್ರಿ ಜೀವನ' ನೀರಸವಾಗಿದೆ, ಅದಕ್ಕೆ ಲೈವ್ ಬ್ಯಾಂಡಗಳನ್ನು, ಡಿಸ್ಕೋ ಬಾರಗಳನ್ನು ರಾತ್ರಿ ಆದಷ್ಟು ಹೆಚ್ಚೊತ್ತು ತೆಗೆದಿರಿಸಬೇಕೆಂದೊ ಬೇಡುತ್ತಿದ್ದಾರೆ. ಇನ್ನು ಐ.ಟಿ ದಿಗ್ಗಜರು ತಮ್ಮ ಕಂಪನಿಯ ವಹಿವಾಟು ಹೆಚ್ಚಿಸಲು ಬೆಂಗಳೂರಿನಲ್ಲಿ ೪೦೦-೫೦೦ ಎಕರೆ ಜಮೀನು ಕೊಡಬೇಕೆಂದು ಕೇಳುತ್ತಿದ್ದಾರೆ (ಇಷ್ಟು ಜಾಗೆಯಲ್ಲಿ ಯಾವ ಬೆಳೆಯನ್ನು ಬೆಳೆಯುತ್ತಾರೆ ಎಂಬುದು ತಿಳಿಯದ ವಿಷಯ). ಈ ಎಲ್ಲ ಅಂಶಗಳು ಬೆಂಗಳೂರಿನ ಬಗೆಗಿವೆ. ಹೊಸ ಸರಕಾರ ಬಂದರೂ ಸಂಚಾರ ದಟ್ಟಣೆ ಕಡಿಮೆಯಾಗಿಲ್ಲ, ಸುಗಮ ಸಂಚಾರದ ಮಾತು ಕನಸಾಗಿಯೇ ಉಳಿಯುವದು ಖಚಿತವಾಗಿದೆ. ಇದು ಎಲ್ಲರ ಕೇಂದ್ರಬಿಂದುವಾಗಿರುವ ಬೆಂಗಳೂರಿನ ಸ್ಥಿತಿ.

ಇನ್ನು ಸಮಗ್ರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಮಾತನಾಡುವದು ಯಾವಾಗ? ಮಾತೆತ್ತಿದರೆ ನಂಜುಂಡಯ್ಯ ವರದಿಯ ಅನುಷ್ಠಾನದ ಬಗ್ಗೆ ಮಾತಾಡುವ ಮಂತ್ರಿಗಳು, ಆ ವರದಿ ಎಷ್ಟು ಹಳೆಯದೆಂದು ತಿಳಿದಿದ್ದಾರೆಯೆ? ನಂಜುಂಡಯ್ಯನವರು ೨೫ ವರ್ಷಗಳ ಹಿಂದೆ ಹೇಳಿದ್ದ ಅಂಶಗಳು ಇವತ್ತಿನ ಸನ್ನಿವೇಶಕ್ಕೆ ಅನ್ವಯವಾಗುತ್ತವೆಯೆ? ಉದಾಹರಣೆಗೆ, ೨೫ವರ್ಷಗಳ ಹಿಂದೆ ಯಾವುದೋ ಕೆಲವು ತಾಲೂಕು ಕೇಂದ್ರಗಳಲ್ಲಿ ೨೫ಹಾಸಿಗೆಯ ಒಂದು ಆಸ್ಪತ್ರೆ ಸ್ಥಾಪಿಸಬೇಕೆಂದು ವರದಿ ಹೇಳುತ್ತದೆ, ಆದರೆ ಇಂದಿನ ಜನಸಂಖ್ಯೆಗೆ ಅನುಗುಣವಾಗಿ ಮತ್ತು ಭವಿಷ್ಯದ ದೃಷ್ಟಿಯಿಂದ ಕನಿಷ್ಟ ೧೦೦ ಹಾಸಿಗೆಯ ಆಸ್ಪತ್ರೆ ಬೇಕಾದರೂ ೨೫ಹಾಸಿಗೆಯ ಆಸ್ಪತ್ರೆಯನ್ನು ಸ್ಥಾಪಿಸಿ ಸರಕಾರ ವರದಿ ಅನುಷ್ಠಾನವಾಗಿದೆ ಎಂದು ಹೇಳುತ್ತಾರೆ, ಇದು ಸರಿಯೇ?

'ಆಪರೇಶನ್ ಕಮಲ'ದಲ್ಲಿಯೇ ಕಾಲ ಕಳೆಯುತ್ತಿರುವ ಆಡಳಿತ ಪಕ್ಷ, ಆ ಕೆಸರಿನಲ್ಲಿಯೇ ಮುಳುಗದಿರಲಿ. ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಬೇಸತ್ತಂತಿರುವ ಶಾಸಕವರೇಣ್ಯರು 'ಅಕ್ಕ'ನ ಸಾಹಿತ್ಯ ಸಮ್ಮೇಳನದ ನೆವದಲ್ಲಿ ಅಮೇರಿಕಾ ಯಾತ್ರೆಗೆ ಹೊರಟಿದ್ದಾರೆ. ಇಲ್ಲಿ ನಡೆಯುತ್ತಿರುವ ಕನ್ನಡ ಸಮ್ಮೇಳನದ ಗೋಜಿಗೆ ಹೋಗದ ಈ ಮಹಾಶಯರು ಅಲ್ಲಿ ಏನು ಮಾಡಬಹುದು ಎನ್ನುವದು ಎಲ್ಲರಿಗೂ ತಿಳಿದ ವಿಷಯ.

ಬೆಂಗಳೂರಿನಲ್ಲಿ ಅನೇಕ ರೀತಿಯ ಬಸ್ಸುಗಳು ಓಡುತ್ತವೆ(ಉ: ವೋಲ್ವೊ, ಸುವರ್ಣ), ಅದೇ ಬೇರೆ ಕಡೆಗೆ ಹಳೆಯ, ಕೆಡುತ್ತಿರುವ ಬಸ್ಸುಗಳು ಓಡುತ್ತವೆ, ಬೇರೆ ಊರುಗಳು ಕರ್ನಾಟಕದಲ್ಲಿಲ್ಲವೋ? ಸಾರಿಗೆ ಮಂತ್ರಿಗಳು ಇನ್ನೂ ಬೆಂಗಳೂರನ್ನು ಬಿಟ್ಟು ಬೇರೆಡೆಗೆ ಹೋಗಿ ಪರಿಸ್ಥಿತಿಯನ್ನು ತಿಳಿಯುವ ಪ್ರಯತ್ನವನ್ನೂ ಮಾಡಿಲ್ಲ.

ಇನ್ನು ವಿದ್ಯುತ್ ಪರಿಸ್ಥಿತಿಯಂತೂ ದೇವರಿಗೆ ಪ್ರೀತಿ. ಮಳೆ ಬಂದರೂ ವಿದ್ಯುತ್ ನಿಲುಗಡೆ, ಬರದಿದ್ದರೂ ನಿಲುಗಡೆ! ಹೊಸ ಯೋಜನೆಗಳು ಒಂದೂ ಕಾಣಿಸುತ್ತಿಲ್ಲ. ಮಳೆಗಾಲದಲ್ಲಿ ಹೀಗಾದರೆ, ಮುಂದಿನ ದಿನಗಳಲ್ಲಿ ಯಾವ ಪರಿಸ್ಥಿತಿ ಬರಬಹುದು ಎನ್ನುವದು ಎಲ್ಲರ ಊಹೆಗೆ ಬಿಟ್ಟ ವಿಚಾರ.

ದೇಶದೆಲ್ಲೆಡೆ ಭಯೋತ್ಪಾದನೆ, ಬಾಂಬ್ ಸ್ಫೋಟ ದಿನನಿತ್ಯದ ಮಾತಾಗಿರುವಾಗ ಸರಕಾರ ಒಂದೇ ಜಾತಿಯ ಜನರನ್ನು ಆಯಕಟ್ಟಿನ ಸ್ಥಳಗಳಲ್ಲಿ ವರ್ಗಾವಣೆ ಮಾಡಿ ತನ್ನ ಸ್ಥಾನವನ್ನು ಮಾತ್ರ ಭದ್ರಗೊಳಿಸುವ ಯೋಜನೆ ಮಾಡಿದೆ. ಬೆಂಗಳೂರಿನ ಸ್ಫೋಟದ ತನಿಖೆಯ ಬಗ್ಗೆ ಯಾವುದೇ ಚಕಾರವನ್ನು ಪೋಲೀಸ್ ಆಯುಕ್ತರು ಎತ್ತುತ್ತಿಲ್ಲ. ಪೋಲೀಸ್ ಬಲವನ್ನು ಆಧುನೀಕರಣಗೊಳಿಸುವ, ಭಯೋತ್ಪಾದನಾ ನಿಗ್ರಹಣ ದಳ ಸ್ಥಾಪಿಸುವ ನಿಟ್ಟಿನಲ್ಲಿ ಸರಕಾರ ವಿಚಾರ ಮಾಡುವಂತೆ ಕಾಣುತ್ತಿಲ್ಲ. ಇವತ್ತಿನ ಪರಿಸ್ಥಿತಿಯಲ್ಲಿ ಮಾಹಿತಿಯನ್ನು ಕ್ರೋಢಿಕರಿಸಿ ಮುಂದಾಗಬಹುದಾದ ಘಟನೆಗಳನ್ನು ತಡೆಗಟ್ಟುವದು ಒಂದು ಸಶಕ್ತ ಮತ್ತು ಆಧುನಿಕ ಪತ್ತೇದಾರಿ ಘಟಕದಿಂದ ಮಾತ್ರ ಸಾಧ್ಯ.

ಎಷ್ಟೆಲ್ಲಾ ಸಮಸ್ಯೆಗಳಿದ್ದರೂ ಏನು ಆಗದಿರುವಂತೆ ಇರುವ ಮಂತ್ರಿಗಳನ್ನು ಶಾಸಕರನ್ನು ನೋಡಿದರೆ, ಸರಕಾರವು ಪಕ್ಷದ, ಶಾಸಕರ, ಮಂತ್ರಿಗಳ ಅಭಿವೃದ್ಧಿಗೆ ಮಾತ್ರವಿದೆ, ಜನರ ಅಭಿವೃದ್ಧಿಗೆ ಅಲ್ಲವೇನಿಸುವದಿಲ್ಲವೇ??

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.