"ಅಭಿವೃದ್ಧಿ" ನಮ್ಮ ಸಮಸ್ಯೆಗಳನ್ನು ನಿವಾರಿಸುತ್ತಿದೆಯೆ?

0

(ವಿಕ್ರಾಂತ ಕರ್ನಾಟಕದ ಮೇ 8, 09 ರ ಸಂಚಿಕೆಗಾಗಿ ಕಳೆದ ಭಾನುವಾರ ಬರೆದದ್ದು.)

ನಮ್ಮಲ್ಲಿ ಒಂದಷ್ಟು ಪರಂಪರಾಗತ ಸಮಸ್ಯೆಗಳಿವೆ: ಅನಕ್ಷರತೆ, ಜಾತೀಯತೆ, ಬಡತನ, ಮೌಢ್ಯ, ಇತ್ಯಾದಿ. ನನ್ನ ತಲೆಮಾರು ನಂಬಿಕೊಂಡು ಬಂದ ಅಥವ ನಂಬಿದ ಮಾತು ಏನೆಂದರೆ, ವಿದ್ಯೆ ಮತ್ತು "ಆರ್ಥಿಕ ಅಭಿವೃದ್ಧಿ" ನಮ್ಮ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಕೊಡುತ್ತದೆ ಮತ್ತು ಅವುಗಳನ್ನು ಇಲ್ಲವಾಗಿಸುತ್ತದೆ ಎನ್ನುವುದು. ಆದರೆ, ಕಳೆದ ಮಾರ್ಚ್ ತಿಂಗಳಿನಲ್ಲಿ ಸುಮಾರು ಮೂರು ವಾರಗಳ ಕಾಲ ಕರ್ನಾಟಕದ ಬೇರೆಬೇರೆ ಕಡೆ ಸುತ್ತಿದ ನನ್ನ ಅನುಭವಗಳ ಆಧಾರದ ಮೇಲೆ ಹೇಳುವುದಾದರೆ, ನನಗೆ ನಾನೂ ಸಹ ನಂಬಿಕೊಂಡೆ ಬಂದ ಈ ಮೇಲಿನ ಮಾತುಗಳ ಬಗ್ಗೆ ನಂಬಿಕೆ ಹೋಗಿದೆ. ಇದಕ್ಕೆ ಪೂರಕವಾಗಿ ನಾನು ಈ ಸಲದ ನನ್ನ ಪ್ರವಾಸದಲ್ಲಿ ಕಂಡ ಮೂರು ಪ್ರಮುಖ ಘಟನೆಗಳನ್ನು ಇಲ್ಲಿ ಪ್ರಸ್ತಾಪಿಸುತ್ತೇನೆ. ಇವು ಆ ದಿನಗಳಲ್ಲಿ ನನ್ನನ್ನು ತೀವ್ರವಾಗಿ ತಟ್ಟಿದ, ನನ್ನ ಮಾತು ಮತ್ತು ಆಲೋಚನೆಗಳನ್ನು ಬಹುವಾಗಿ ಪ್ರಭಾವಿಸಿದ, ಖಿನ್ನತೆ ಮೂಡಿಸಿದ ಘಟನೆಗಳೂ ಹೌದು.

ಇನ್ನೂ ಎಷ್ಟು ದಿನ ನರಬಲಿ ಬೇಡುತ್ತದೆ ಈ ಕ್ರೂರ ಜಾತಿವ್ಯವಸ್ಥೆ?

ಮೊದಲನೆಯದು, ಬೆಂಗಳೂರಿನಿಂದ ಕೇವಲ 70 ಕಿ.ಮೀ. ದೂರದ ಊರಿನಲ್ಲಿ ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಡೆದಿರುವ ಘಟನೆ. ಅದು ಮಾಗಡಿ ತಾಲ್ಲೂಕಿನ ಒಂದು ಹಳ್ಳಿ. ರಾಮನಗರ ಮತ್ತು ಮಾಗಡಿ ಪಟ್ಟಣಗಳಿಂದ ಸುಮಾರು 20 ಕಿ.ಮೀ. ಅಂತರದಲ್ಲಿರುವ ಊರು. ಆ ಊರಿನಿಂದ ಬೆಂಗಳೂರಿಗೆ ಹೋಗಿ ಲಾಯರ್

ಆಗಿರುವವರು ತಮ್ಮ ತಂದೆತಾಯಿಗಳಿಗೆ ಕಟ್ಟಿಸಿರುವ ಒಂದು ಭರ್ಜರಿ ಮನೆ ಬಿಟ್ಟರೆ ಉಳಿದಿರುವ ಬಹುತೇಕರ ಮನೆಗಳು ಹಳೆಯ ಹೆಂಚಿನ ಮನೆಗಳೆ. ಅಂತಹ ಗಟ್ಟಿಕುಳ ಎಂದು ಹೇಳುವವರಾಗಲಿ, ಜಮೀನ್ದಾರ ಒಕ್ಕಲಿಗರು ಎಂದುಕೊಳ್ಳುವವರಾಗಲಿ ಆ ಊರಿನಲ್ಲಿ ಇಲ್ಲ. ಬಹುಶಃ ಯಾವೊಬ್ಬ ದೊಡ್ಡ ರೈತನಿಗೂ ಆರೇಳು ಎಕರೆಗೆ ಮೀರಿದ ಜಮೀನಿಲ್ಲ. ಎಲ್ಲರೂ ಸಣ್ಣ ಪ್ರಮಾಣದ ರೈತರೆ. ಆ ಊರಿನಲ್ಲಿ ಇರುವುದೆ ಎರಡೂವರೆ ಜಾತಿ. ಮೇಲ್ಜಾತಿಗೆ ಸೇರಿದ ಒಕ್ಕಲಿಗರು, ಅಸ್ಪೃಶ್ಯ ಜಾತಿಯ ದಲಿತರು, ಮತ್ತು ಇನ್ಯಾವುದೊ ಒಂದೆರಡು ಮನೆಗಳು. ನನಗಂತೂ ಅಲ್ಲಿಯ ಎಷ್ಟೋ ಗೌಡರ ಮನೆಗಳಿಗೂ ದಲಿತರ ಮನೆಗಳಿಗೂ ಯಾವೊಂದು ಗಂಭೀರ ವ್ಯತ್ಯಾಸವಾಗಲಿ, ಸ್ಥಿತಿವಂತಿಕೆಯ ಏರುಪೇರಾಗಲಿ ಕಾಣಿಸಲಿಲ್ಲ. ಬಹುಶಃ ಎಲ್ಲರದೂ ಒಂದೇ ತರಹದ, "ಅಸ್ಥಿರತೆಯಲ್ಲಿ ಸ್ಥಿರತೆ" ಕಂಡ ಜೀವನ. ಒಬ್ಬರು ಜಮೀನು ಇರುವ ಕೃಷಿಕರಾದರೆ ಮತ್ತೊಬ್ಬರು ಆ ಜಮೀನುಗಳಲ್ಲಿ ಮತ್ತು ದೂರದ ರಾಮನಗರ-ಮಾಗಡಿಗಳಲ್ಲಿ ಕೆಲಸ ಮಾಡುವ ಕೃಷಿಕಾರ್ಮಿಕರು, ಕೂಲಿಗಳು.

ಎರಡೂ ಸಮುದಾಯಗಳಲ್ಲಿ ಆರ್ಥಿಕ ದೃಷ್ಟಿಯಿಂದ ಸುಮಾರು ಸಮಾನತೆಗಳಿದ್ದರೂ ಅಲ್ಲಿರುವ ಜಾತಿಪ್ರಜ್ಞೆ ಮಾತ್ರ ನರಬಲಿಯನ್ನೆ ತೆಗೆದುಕೊಳ್ಳುವಷ್ಟು ಅಸಮಾನವಾದದ್ದು. ಇಂದಿನ "ಅಭಿವೃದ್ಧಿ ಮಾನದಂಡ"ಕ್ಕೆ ಅನುಗುಣವಾಗಿ ಆ ಊರಿನಲ್ಲಿಯೂ ನೀರಿಗೆ ಬೋರ್‌ವೆಲ್ ಮತ್ತು ಟ್ಯಾಂಕ್‌ಗಳ ವ್ಯವಸ್ಥೆ ಇದೆ. ಸಣ್ಣ ಊರಾಗಿರುವುದರಿಂದ ಮತ್ತು ದಲಿತರ ಹಾಗು ಸವರ್ಣೀಯರ ಮನೆಗಳು ಹತ್ತಿರಹತ್ತಿರ ಹೊಂದಿಕೊಂಡೇ ಇರುವುದರಿಂದ ಇಬ್ಬರೂ ಒಂದೇ ಟ್ಯಾಂಕ್ ಮತ್ತು ನಲ್ಲಿಯನ್ನು ಬಳಸುತ್ತಾರೆ. ಕಳೆದ ಡಿಸೆಂಬರ್‌ನಲ್ಲಿ ದಲಿತರ ಹೆಣ್ಣುಮಗಳು ಕುಡಿಯಲೆಂದು ಒಂದು ಬಿಂದಿಗೆ ನೀರು ತರಲು ನಲ್ಲಿಯ ಬಳಿಗೆ ಹೋಗಿದ್ದಾಳೆ. ಅಲ್ಲಿ ಸವರ್ಣೀಯ ಹೆಣ್ಣುಮಗಳೊಬ್ಬಳು ತನ್ನ ಮೂರ್ನಾಲ್ಕು ಬಿಂದಿಗೆಗೆ ನೀರು ತುಂಬಿಸಿಕೊಳ್ಳುತ್ತಿದ್ದಾಳೆ. ತಾನು ಹಿತ್ತಲಿನಲ್ಲಿ ಬೆಳೆಸಿರುವ ತರಕಾರಿಗಳಿಗೆ ನೀರು ಹಾಕಲು ಆಕೆ ಅಷ್ಟೊಂದು ಬಿಂದಿಗೆಗಳನ್ನು ಸಾಲಿಗೆ ಇಟ್ಟಿದ್ದಳು ಎನ್ನುವುದು ಸುದ್ದಿ. ದಲಿತ ಸಮುದಾಯದ ಹೆಣ್ಣಿಗೆ ಸಹಜವಾಗಿಯೆ ತನಗೆ ಮನೆಗೆ ಬೇಕಿರುವ ಒಂದೇಒಂದು ಬಿಂದಿಗೆ ಹಿಡಿದುಕೊಳ್ಳಲು ಕೇಳಬಹುದಲ್ಲ ಎನ್ನಿಸಿದೆ. ಕೇಳಿದ್ದಾಳೆ. ಆಹಂ ತಲೆ ಎತ್ತಿದೆ. ಮಾತು ಜಾರಿದೆ. ವಿಷಯ ಸ್ಪೃಶ್ಯ, ಅಸ್ಪೃಶ್ಯ, ಕೊಬ್ಬು, ಹಕ್ಕು, ಹೀಗೆ ಎಲ್ಲೆಲ್ಲೊ ಹೋಗಿದೆ. ಒಬ್ಬಳು 'ನೀನು ಮುಟ್ಟಿಸಿಕೊಳ್ಳಬಾರದ ಕೀಳು ಜಾತಿಯವಳು' ಅಂದರೆ, ಇನ್ನೊಬ್ಬಳು 'ಅದ್ಯಾಕೆ? ಹೋಟೆಲ್‌ಗಳಲ್ಲಿ ನಾವು ತಿನ್ನುವ ತಟ್ಟೆಯಲ್ಲಿಯೆ, ನಮ್ಮ ಪಕ್ಕದಲ್ಲಿಯೆ ಕುಳಿತು ತಿನ್ನುವುದಿಲ್ಲವಾ?' ಎಂದಿದ್ದಾಳೆ. ಆ ಊರಿನಲ್ಲಿ ಒಬ್ಬ ದಲಿತರ ಹೆಣ್ಣುಮಗಳು ಮಾಗಡಿಯ ಒಕ್ಕಲಿಗ ಯುವಕನನ್ನು ಮದುವೆ ಆಗಿದ್ದಾಳೆ. ಅದೂ ಪ್ರಸ್ತಾಪವಾಗಿದೆ. ಕೊನೆಗೆ, ಮೇಲ್ಜಾತಿಯ ಹೆಣ್ಣಿನ ಗಂಡನೂ ಜಗಳಕ್ಕೆ ಬಂದಿದ್ದಾನೆ.

ಅಂದು ರಾತ್ರಿ ದಲಿತರ ಹೆಣ್ಣುಮಗಳ ಗಂಡ ನಿನಗ್ಯಾಕೆ ಬೇಕಿತ್ತು ಈ ಜಗಳ ಎಂದು ಹೆಂಡತಿಯನ್ನು ಗದರಿದ್ದಾನೆ. ಬೆಳಿಗ್ಗೆ ಎದ್ದು ಮಾಗಡಿಗೆ ಕೂಲಿಗೆ ಹೋಗಿದ್ದಾನೆ. ಅಂದೇ ಊರಿನಲ್ಲಿ ಪಂಚಾಯಿತಿ ಕರೆದಿದ್ದಾರೆ. ಗಂಡ ಊರಿನಲ್ಲಿ ಇಲ್ಲವಾದ್ದರಿಂದ ಆಕೆ ಮತ್ತು ಆಕೆಯ ಅತ್ತೆಮಾವ ಪಂಚಾಯಿತಿಗೆ ಹೋಗಿದ್ದಾರೆ. ಪಂಚಾಯಿತಿ ಕೇವಲ ಮೇಲ್ಜಾತಿಯವರ ದರ್ಬಾರು. ಜಾತಿ ವ್ಯವಸ್ಥೆ ಎನ್ನುವುದೆ ಕೊಳಕು, ಅದರ ಆಚರಣೆ ಮಾಡುವುದು ಅನೈತಿಕ, ಎಲ್ಲಾ ಮನುಷ್ಯರೂ ಸಮಾನರೆ, ಇಂತಹ ಯಾವೊಂದೂ ಭಾರತದ ಸಂವಿಧಾನಾತ್ಮಕ ಆಶಯಗಳು ಮತ್ತು ಹಕ್ಕುಗಳು ಅಲ್ಲಿ ಚರ್ಚೆಗೆ ಬಂದಿಲ್ಲ. ಜನ್ಮಜಾತವಾಗಿ ಬಂದಿರುವ ಮೇಲುಕೀಳೆಂಬ ಪವಿತ್ರತೆಯನ್ನು ಗಮನಿಸದೆ ಉಚ್ಚರ ಎದುರು ನಿಂತು ವಾದಿಸಿದ್ದಕ್ಕೆ ದಲಿತ ಮಗಳಿಗೆ 150 ರೂಪಾಯಿ ದಂಡ ಹಾಕಿದ್ದಾರೆ.

ಅಂದು ರಾತ್ರಿ ಗಂಡ ಇದನ್ನು ಕೇಳಿ ಬಹುಶಃ ಹೆಂಡತಿಗೆ ತಿರುಗಿಬಿದ್ದಿದ್ದಾನೆ. 150 ರೂಪಾಯಿ ಸಣ್ಣಮೊತ್ತವೇನಲ್ಲ. ಅದು ಅವನ ಒಂದೆರಡು ದಿನದ ದುಡಿಮೆ. ಊರಿನವರ ಪ್ರಕಾರ ಆತ ಅಂದು ಹೆಂಡತಿಗೆ ಹೊಡೆದೊ ಅಥವ ಬೈದೊ ಮಾಡಿದ್ದಾನೆ. (ಆತ ನನಗೆ ಹೇಳಿದ ಪ್ರಕಾರ ಆ ಘಟನೆಯಿಂದ ತೀವ್ರವಾಗಿ ನೊಂದಿದ್ದ ತನ ಹೆಂಡತಿಗೆ ಅಂದು ರಾತ್ರಿ ಸಾಂತ್ವನ ಹೇಳಿದನಂತೆ.) ಮಾರನೆಯ ದಿನ ಬೆಳ್ಳಂಬೆಳಿಗ್ಗೆಯೇ ಎದ್ದ ಆ ಹೆಣ್ಣುಮಗಳು ಅವಮಾನ ಮತ್ತು (ಮಾನಸಿಕ-ದೈಹಿಕ) ಹಿಂಸೆಯನ್ನು ತಾಳಲಾರದೆ ತನ್ನ ಪಕ್ಕದ ಮನೆಯ ನೆಂಟರ ಮನೆಗೆ ಹೋಗಿ ಅವರಲ್ಲಿದ್ದ ಕೀಟನಾಶಕವನ್ನು ಅವರಿಗೆ ಗೊತ್ತಾಗದ ಹಾಗೆ ತಂದು ತನ್ನ ಗಂಡ ಬೆಳಿಗ್ಗೆ ಎದ್ದು ಆಚೆ ಹೋದಾಗ ಕುಡಿದಿದ್ದಾಳೆ. ಅಸೂಕ್ಷ್ಮ ಸಮಾಜದ ಕ್ಷುಲ್ಲಕ ನಡವಳಿಕೆ ನರಬಲಿ ಪಡೆದೇ ತೀರಿದೆ. ಭಾರತ ಜನನಿಯ ಆ ತನುಜಾತೆಯ ವಯಸ್ಸು ಸುಮಾರು 25. ಆರೇಳು ವರ್ಷದ ಮಗ, ನಾಲ್ಕೈದು ವರ್ಷದ ಮಗಳು ಅಮ್ಮನಿಲ್ಲದೆ ಬೆಳೆಯುತ್ತಿದ್ದಾರೆ.

ಅದಾದ ನಂತರ ಪೊಲಿಸ್ ಕೇಸ್ ಆಗಿದೆ. ದಲಿತ ಸಂಘಟನೆಗಳು ಜಾತಾ ತೆಗೆದಿವೆ. ಸರ್ಕಾರ ಹೆಂಡತಿ ಕಳೆದುಕೊಂಡವನಿಗೆ ಒಂದೆರಡು ಲಕ್ಷ ಪರಿಹಾರ ಕೊಟ್ಟಿದೆ. ಇನ್ನೂ ಒಂದೆರಡು ಸೌಕರ್ಯ ಕೊಡುವುದಾಗಿ ಆಶ್ವಾಸನೆ ನೀಡಿದೆ. ಊರಿನ ಮೇಲ್ಜಾತಿಯ ಬಹುತೇಕ ಗಂಡಸರು ಇದು ಜಾಮೀನಿಲ್ಲದ ಪ್ರಕರಣವಾದ್ದರಿಂದ ಮೊದಲಿಗೆ ಮನೆಬಿಟ್ಟು ಓಡಿಹೋಗಿದ್ದಾರೆ. ಎಲ್ಲೆಲ್ಲೊ ಲಕ್ಷಾಂತರ ರೂಪಾಯಿ ಒಟ್ಟುಗೂಡಿಸಿ ಜಾಮೀನು ಸಿಕ್ಕ ನಂತರ ಮನೆಗಳಿಗೆ ವಾಪಸಾಗಿದ್ದಾರೆ. ಊರಿನಲ್ಲಿ ದಲಿತರಿಗೆ ಬಹಿಷ್ಕಾರ ಹಾಕಿದ್ದಾರೆ. ಅವರಿಗೆ ಊರಿನಲ್ಲಿ ಕೂಲಿ ಕೊಡುತ್ತಿಲ್ಲ. ರಾಗಿಗಿರಣಿಯಲ್ಲಿ ಹಿಟ್ಟು ಮಾಡಿಕೊಡುತ್ತಿಲ್ಲ. ಅಂಗಡಿಗಳ ಬಳಿಗೂ ಸೇರಿಸುತ್ತಿಲ್ಲ. ಅಷ್ಟೇ ಯಾಕೆ, ಹ್ಮೂ.. ಈ ಘಟನೆ ಹೇಳಿದರೆ ಮಿಕ್ಕ ಚಿತ್ರವೂ ಸಿಗುತ್ತದೆ: ನಾನು ಕಳೆದ ತಿಂಗಳು ಆ ಊರಿನಲ್ಲಿ ಒಂದೆರಡು ರಾತ್ರಿ ಇದ್ದೆ. ಒಮ್ಮೆ ಹೀಗೆ ಸಾಯಂಕಾಲ ನನ್ನ ನಾಲ್ಕೂವರೆ ವಯಸ್ಸಿನ ಮಗಳ ಜೊತೆ ದಲಿತರ ಮನೆಗಳನ್ನು ಹಾಯ್ದು ಬರುತ್ತಿದೆ. ಒಬ್ಬ ಯುವಕ ಕಾಣಿಸಿದ. ಹೋಗಿ ಆತನ ಜಗಲಿಯ ಮೇಲೆ ಮಾತನಾಡಿಸುತ್ತ ಕುಳಿತೆ. ಆಗ ಗೊತ್ತಾಗಿದ್ದು, ಆತನೆ ಹೆಂಡತಿ ಕಳೆದುಕೊಂಡವನು ಎಂದು. ನನ್ನ ಮಗಳದೇ ವಯಸ್ಸಿನ ಆತನ ತಬ್ಬಲಿ ಮಗಳೂ ಅಲ್ಲಿದ್ದಳು. ಹೊಲಗಳಲ್ಲಿ ಸುತ್ತಾಡಿ ಸುಸ್ತಾಗಿದ್ದ ನನ್ನ ಮಗಳು ನನ್ನ ತೊಡೆಯ ಮೇಲೆ ಹಾಗೆಯೆ ನಿದ್ದೆ ಹೋದಳು. ಮಾತನಾಡುತ್ತ ಕತ್ತಲಾಯಿತು. ಮಗಳನ್ನು ಎಬ್ಬಿಸುವುದು ಬೇಡವೆಂದು ಭುಜದ ಮೇಲೆ ಹಾಕಿಕೊಂಡು ನನ್ನ ನೆಂಟರ ಮನೆಯ ಕಡೆ ಹೊರಟೆ. ಕೂಡಲೆ ಮೂರ್ನಾಲ್ಕು ಬೀದಿ ನಾಯಿಗಳು ಬೊಗಳುತ್ತ ಸುತ್ತುವರೆದವು. ಮಗಳು ಭುಜದ ಮೇಲೆ ಇದ್ದಿದ್ದರಿಂದ ಕೈಯ್ಯಲ್ಲಿ ಕೋಲು-ಕಲ್ಲು ಹಿಡಿಯುವ ಸ್ಥಿತಿ ಇರಲಿಲ್ಲ. ಹಾಗಾಗಿ ನಾಯಿಗಳ ಸಮಸ್ಯೆ ಬೇಡ ಎಂದು ನನ್ನ ಜೊತೆಗೆ ಮನೆಯ ತನಕ ಬರಲು ಅಲ್ಲಿಯ ದಲಿತ ಯುವಕನೊಬ್ಬನನ್ನು ಕರೆದೆ. ಅದು ಎರಡು ಜೋಡಿ-ಹಳ್ಳಿಗಳ ಊರು. ನನ್ನ ನೆಂಟರ ಮನೆ ಇದ್ದದ್ದು ಆ ಊರಿಗೆ ನೂರಿನ್ನೂರು ಮೀಟರ್ ದೂರದಲ್ಲಿರುವ ಅವಳಿ ಹಳ್ಳಿಯಲ್ಲಿ. ಊರು ಹತ್ತಿರ ಬರುತ್ತಲೆ ದಲಿತರ ಹುಡುಗ ನಿಂತುಬಿಟ್ಟ. 'ಇನ್ನು ನೀವೆ ಹೋಗಿ ಸಾರ್, ಊರೊಳಗೆ ನಾವೊಬ್ಬೊಬ್ಬರೆ ಓಡಾಡುವುದಿಲ್ಲ.' ಎಂದ. ಯಾಕೆ ಎಂದಿದ್ದಕ್ಕೆ, 'ಒಬ್ಬೊಬ್ಬರೆ ಸಿಕ್ಕರೆ ಹೊಡೆದಾಕಿಬಿಡುತ್ತಾರೆ ಸಾರ್! ನಾವು ಎಲ್ಲಾದರೂ ಹೋಗುವ ಹಾಗಿದ್ದರೆ ಮೂರ್ನಾಲ್ಕು ಜನ ಸೇರಿ ಹೋಗುತ್ತೇವೆ. ಆಗಲೂ ಊರೊಳಗೆ ಹೋಗುವುದಿಲ್ಲ. ಹೀಗೆ ಹೊಲ-ಗುಡ್ಡ ಬಳಸಿಕೊಂಡು ಹೋಗುತ್ತೇವೆ,' ಎಂದ. ಬಹಿಷ್ಕಾರದಿಂದ ತಮಗೆ ಜೀವನ ಮಾಡಲು ಕಷ್ಟವಾಗಿರುವುದರ ಬಗ್ಗೆ, ಅದು ಹುಟ್ಟಿಸಿರುವ ಭಯದ ಬಗ್ಗೆ ಹೇಳಿಕೊಂಡ.

"ನಮ್ಮ ಗುಡಿಸಲಿಗೆ 'ಅವರು' ಬರಂಗಿಲ್ಲ.": ಬಡವರು, ಆದರೂ ಜಾತಿವಾದಿಗಳು.

ಎರಡನೆಯ ಅನುಭವವಾದದ್ದು ಬೆಂಗಳೂರಿನಿಂದ ಸುಮಾರು 150 ಕಿ.ಮೀ. ದೂರದಲ್ಲಿರುವ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಳ್ಳಿಯೊಂದರಲ್ಲಿ. ಅದು ಹಳ್ಳಿಯಲ್ಲ. ಗೊಲ್ಲರ ಹಟ್ಟಿ. ಆ ಹಟ್ಟಿಯಲ್ಲಿ ಸರ್ಕಾರ ಇತ್ತೀಚೆಗೆ ಕಟ್ಟಿಸಿರುವ ಕೆಲವು ಹೆಂಚಿನ ಮನೆಗಳನ್ನು ಬಿಟ್ಟರೆ ಎಲ್ಲರಿಗೂ ಇರುವುದು ಗುಡಿಸಲುಗಳೇ. ಆ ಇಟ್ಟಿಗೆ-ಹೆಂಚಿನ ಮನೆಗಳಿಗೂ ಇನ್ನೂ ಯಾರೂ ವಾಸಕ್ಕೆ ಹೋಗಿಲ್ಲ. ಆ ಹಟ್ಟಿಯ ಪ್ರತಿ ಗುಡಿಸಲಿಗೂ ಹೆಚ್ಚೆಂದರೆ ಬಹುಶಃ ಐದಾರು ಸಾವಿರ ರೂಪಾಯಿ ತಗಲಬಹುದೇನೊ. ಅದೇ ಅವರ 'ಅರಮನೆ'ಗಳು. ಅಲ್ಲಿ ನನಗೆ ಕಂಡವರೋ ಸರಿಯಾಗಿ ಪೌಷ್ಟಿಕ ಆಹಾರವಿಲ್ಲದ ನರಪೇತಲರು. ಕನಿಷ್ಠ ಸೌಲಭ್ಯಗಳೂ ಇಲ್ಲದೆ ಬದುಕುತ್ತಿರುವವರು. ಮಕ್ಕಳನ್ನು ಕುರಿಮೇಯಿಸಲು ಕಳುಹಿಸುವ ದಟ್ಟದಾರಿದ್ರ್ಯದವರು. ಓದು-ವಿದ್ಯೆ ಇಲ್ಲದ ಆ ಮಕ್ಕಳು ಎಂದಿಗೂ ಮುಖ್ಯವಾಹಿನಿಗೆ ಬರುವ ಸಾಧ್ಯತೆ ಇಲ್ಲದವರು. ಅಂತಹ ಕ್ಷುದ್ರ ಬಡತನದಲೂ ಅವರಲ್ಲಿ ಜಾತೀಯತೆ ಎಷ್ಟು ತೀವ್ರವಾಗಿ ಉಳಿದಿದೆ ಅಂದರೆ, ದಲಿತರಷ್ಟೆ ಅಥವ ದಲಿತರಿಗಿಂತ ಹೆಚ್ಚಿನ ದಾರಿದ್ರ್ಯದಲ್ಲಿ, ದಲಿತರಿಗಿಂತ ಹೆಚ್ಚಿನ ಅಲೆಮಾರಿ ಬದುಕು ಬದುಕುವ ಈ ಜನ ತಮ್ಮ ಗುಡಿಸಲುಗಳ ಒಳಗೆ ದಲಿತರನ್ನು ಬಿಟ್ಟುಕೊಳ್ಳುವುದಿಲ್ಲ. ಕೇವಲ ಸ್ಪೃಶ್ಯರಿಗೆ ಮಾತ್ರ ಪ್ರವೇಶ. ಕೇಳಿದರೆ ಮತ್ತೆ ಅದೆ ಮೇಲುಕೀಳು, ಸಂಪ್ರದಾಯದ ಸೋಗು.

ಜಾತಿವ್ಯವಸ್ಥೆ ಇದ್ದರೆ ತಾನೆ ಏನು? What is your problem, man?

ಮೂರನೆಯ ಅನುಭವ ಶಿವಮೊಗ್ಗ ನಗರದಲ್ಲಿ. ಆ ಯುವಕನ ಹೆಸರು ಮರೆತಿದ್ದೇನೆ. ಹೇಳಲಿರುವ ವಿಷಯಕ್ಕೆ ಆತನ ಹೆಸರಿನ ಅಗತ್ಯವೂ ಇಲ್ಲ. ಆತನನ್ನು ಒಂದು ತಲೆಮಾರಿನ ಪ್ರತಿನಿಧಿ ಎಂದುಕೊಂಡರೆ ಸಾಕು. ಆ ಯುವಕ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಮಾಡುತ್ತಿದ್ದಾನೆ. ಜೊತೆಗೆ ಕವಿ ಕೂಡ. ಜಾತಿವ್ಯವಸ್ಥೆ ಎನ್ನುವುದೆ ಬ್ರಿಟಿಷರ ಸೃಷ್ಟಿ ಎನ್ನುವ ಸಂಶೋಧಕರ ಹಿಂಬಾಲಕ. ಹೀಗೆಯೆ ಮಾತನಾಡುತ್ತ, "ಜಾತಿಆಚರಣೆ ಇದ್ದರೆ ತಾನೆ ಏನು? ನಾನೊಂದು ಹಳ್ಳಿಗೆ ಹೋಗಿದ್ದೆ. ಆ ಊರಿನ ಗೌಡ ತನ್ನ ಊರಿನ ದಲಿತರಿಗೆ ಏನಾದರೂ ಬೇಕಿದ್ದರೆ ಸ್ವತಃ ತಾನೆ ಒದಗಿಸುತ್ತಾನೆ. ಅವರನ್ನು ಅವನೆ ನೋಡಿಕೊಳ್ಳುತ್ತಾನೆ. ಅಲ್ಲಿ ತಮ್ಮತಮ್ಮ ಸಂಪ್ರದಾಯಗಳನ್ನು ಪಾಲಿಸಿಕೊಂಡು ಅವರ ಪಾಡಿಗೆ ಇದ್ದಾರೆ. ಅವರು ಹಾಗೆ ಸಾಮರಸ್ಯದಿಂದ ಇರುವಾಗ ಅದನ್ನು ತಪ್ಪು ಎನ್ನಲು ನಾವು ಯಾರು?" ಎಂದ. ಸಜ್ಜನಿಕೆಯ ಸಮಾಜದಲ್ಲಿ ಜಾತಿವ್ಯವಸ್ಥೆ ಹೇಗೆ ಅನೈತಿಕ, ಅದು ಯಾವಯಾವ ಸ್ಥರದಲ್ಲಿ ಸೂಕ್ಷ್ಮವಾಗಿ ಹರಿಯುತ್ತದೆ, Feudal ವ್ಯವಸ್ಥೆಯ ಸೃಷ್ಟಿಗೆ ಹೇಗೆ ಕಾರಣವಾಗುತ್ತದೆ, ಸ್ವಲ್ಪ ಏರುಪೇರಾದರೂ ಆ ವ್ಯವಸ್ಥೆ ಹೇಗೆ ಹಿಂಸಾತ್ಮಕವೂ ಶೋಷಕವೂ ಆಗುವ ತಿರುವು ತೆಗೆದುಕೊಳ್ಳುತ್ತದೆ ಎನ್ನುವುದನ್ನು ಆತನಿಗೆ ಒಂದೆರಡು ವಾಕ್ಯದಲ್ಲಿ ವಿವರಿಸುವುದು ಹೇಗೆ ಎಂದು ಯೋಚಿಸುತ್ತ, "ಅದು ಹಾಗಲ್ಲಾರೀ, ಆ ವ್ಯವಸ್ಥೆಯೇ ಒಂದು ವರ್ಗಕ್ಕೆ ಸ್ವಾಭಿಮಾನ, ಸ್ವಾವಲಂಬನೆಯನ್ನು ನಿರಾಕರಿಸುತ್ತದೆ. ದಲಿತರ..." ಎಂದು ಏನೋ ಹೇಳಲು ಹೊರಟೆ. ಅಷ್ಟಕ್ಕೆ ಆತ, "ಅವರ ಊರಲ್ಲಿ ಅವರು ಯಾವುದೊ ವ್ಯವಸ್ಥೆಯಲ್ಲಿ ಚೆನ್ನಾಗಿದ್ದರೆ ಅದು ಹೇಗೆ ತಪ್ಪು? ಅವರಿಗಿಲ್ಲದ ಸಮಸ್ಯೆ ನಿಮಗೇನು? ಅವರೇ ಹಾಗಿರಬೇಕಾದರೆ What is your problem, man?" ಎಂದು ಇಂಗ್ಲಿಷ್ ಕಲಿಕೆಯಿಂದ ಬಂದಿರುವ ವಿಚಿತ್ರ Sophisticated ಹಾವಭಾವದಲ್ಲಿ ತೀಕ್ಷ್ಣವಾಗಿ ಕೇಳಿದ. ಅದು ಆತನೊಬ್ಬನ ಮಾತಲ್ಲ. ಆತ ಒಂದು ಸಮುದಾಯವನ್ನೆ ಪ್ರತಿನಿಧಿಸುತ್ತಿದ್ದಾನೆ. ಅದನ್ನು ಹೇಗೆ ಎದುರಿಸುವುದು? ಎನ್ನುವ ಪ್ರಶ್ನೆ ನನ್ನಲ್ಲಿ ಹುಟ್ಟಿತು. ಹಾಗೆಯೆ ಮಾತನಾಡುತ್ತ ಆತ ಹೇಳಿದ ಇನ್ನೊಂದು ಮಾತೂ ಇಲ್ಲಿ ಮುಖ್ಯ: "ಅಂತರ್ಜಾತಿ ವಿವಾಹವಾದರೆ ಸಂಪ್ರದಾಯಗಳಲ್ಲಿನ ಭಿನ್ನತೆಯಿಂದಾಗಿ ನಮ್ಮ ತಾಯಂದಿರಿಗೆ ಇರಿಸುಮುರಿಸಾಗುತ್ತದೆ. ಹಾಗಿರುವಾಗ ಅಂತರ್ಜಾತಿ ವಿವಾಹ ಯಾಕಾಗಬೇಕು?" ತನಗೆ ಇಷ್ಟವಾದ, ತನ್ನ Intellectuality ಯನ್ನು ಪ್ರಚೋದಿಸಬಹುದಾದ, ಸಮಾನಸಕ್ತಿಗಳನ್ನು ಹೊಂದಿರುವ ಒಂದು ಹುಡುಗಿಯನ್ನು ಆಕೆಯ ಜಾತಿಮತ ನೋಡದೆ ಪ್ರೇಮಿಸಲು, ತನ್ನ ಸಂಗಾತಿಯನ್ನಾಗಿ ಆಯ್ದುಕೊಳ್ಳಲು ತನ್ನ ತಾಯಿಯ ಇರಿಸುಮುರಿಸಿನ ಹೆಸರಿನಲ್ಲಿ ಈತ ನಿರಾಕರಿಸುತ್ತಿದ್ದ. ಇಲ್ಲಿ ಇನ್ನೂ ಸ್ವಲ್ಪ ಮುಂದಕ್ಕೆ ಹೋಗಿ ಈಗಿನ ಕೌಟುಂಬಿಕ ವಾಸ್ತವಗಳನ್ನು ಗಮನಿಸುತ್ತ ನಾವು ಯೋಚಿಸಬೇಕು. ತಮ್ಮ ಸ್ವಂತ ದುಡಿಮೆಯ ಮೇಲೆ ನಿಲ್ಲಬಲ್ಲ ಬಹುತೇಕ ಗಂಡುಮಕ್ಕಳು ತಮಗೆ ಸಿಗುವ ಅವಕಾಶ ಅಥವ ಅನಿವಾರ್ಯತೆಯಿಂದಾಗಿ ಇಂದು ಹೆತ್ತವರಿಂದ ಬೇರೆಯೆ ಇರುತ್ತಿದ್ದಾರೆ. ಹಾಗಾಗಿ, ತಾಯಿ ಪಾಲಿಸುವ ಸಂಪ್ರದಾಯಗಳು, ರೀತಿರಿವಾಜುಗಳು ಎನ್ನುವುದೇ ಈಗಿನ ಸೊಸೆ-ಅತ್ತೆ ಸಂದರ್ಭದಲ್ಲಿ ಅಪ್ರಸ್ತುತ. ಹಾಗಿರುವಾಗ, ಜಾತಿವ್ಯವಸ್ಥೆಯಿಂದ ಲಾಭವಿಲ್ಲದ, ಅನುಕೂಲವಿಲ್ಲದ, ಅಹಂಕಾರವಿಲ್ಲದ ಯಾರು ತಾನೆ ಇಷ್ಟೆಲ್ಲ ಓದು-ಡಿಗ್ರಿ ಪಡೆದುಕೊಂಡರೂ ಜಾತಿ-ಆಚರಣೆ ಸರಿ ಎನ್ನುತ್ತಾರೆ? ಈಗಿನ ಈ ಎಲ್ಲಾ ಓದು-ವಿದ್ಯೆ ನಮ್ಮಲ್ಲಿ ಎಷ್ಟು ಮಾತ್ರದ ಸುಧಾರಣೆ ತಂದಿದೆ? ನೈತಿಕತೆಯ ಪಾಠ ಕಲಿಸಿದೆ? ಕ್ಷುದ್ರ ಮನೋಭಾವಗಳನ್ನು ಕದಲಿಸಿದೆ?

ಬೆಂಗಳೂರಿನ ದಕ್ಷಿಣಕ್ಕೆ ಇರುವ ನನ್ನ ಹಳ್ಳಿಯ ಸುತ್ತಮುತ್ತಲೂ ಮಾಗಡಿಯ ಹಳ್ಳಿಗಳಲ್ಲಿ ಇರುವಂತಹುದೇ ಜಾತೀಯತೆಯನ್ನು ನಾನು ಚಿಕ್ಕಂದಿನಿಂದಲೂ ಕಂಡಿದ್ದೇನೆ. ಹಾಗಾಗಿ ಆ ಘಟನೆ ನನಗೆ ಆಘಾತ ಉಂಟುಮಾಡಲಿಲ್ಲ. ಅಭಿವೃದ್ಧಿ ಆಗಿರುವ ಬೆಂಗಳೂರಿಗೆ ಇಷ್ಟು ಹತ್ತಿರದಲ್ಲಿದ್ದರೂ, ಸ್ವಾತಂತ್ರ್ಯ ಮತ್ತು ಅಸ್ಪೃಶ್ಯತೆ ನಿವಾರಣೆಯ ಕಾಯ್ದೆಗಳು ಬಂದು ಇಷ್ಟು ದಿನವಾದರೂ, ಈ ಜನ ಈಗಲೂ ಜಾತೀಯತೆ ಮಾಡುತ್ತಿದ್ದಾರಲ್ಲ ಎನ್ನುವ ಆಕ್ರೋಶ, ಸಿಟ್ಟು, ಅಸಹಾಯಕತೆಯನ್ನು ಆ ಘಟನೆ ನನ್ನಲ್ಲಿ ಉಂಟುಮಾಡಿತು. ಆದರೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗುಡಿಸಲಿನಲ್ಲಿ ಕಂಡ ಕಡುಬಡತನದ ಸಮುದಾಯವೂ ತನ್ನ ಜಾತಿ-ಸ್ಪೃಶ್ಯ ಮೇಲ್ಗಾರಿಕೆಯನ್ನು ಶತಮಾನಗಳ ಕಾಲ ಹೇಗೆ ಉಳಿಸಿಕೊಳ್ಳಲು ಸಾಧ್ಯ ಎನ್ನುವ ಪ್ರಶ್ನೆ ನನ್ನಲ್ಲಿ ನಿಜಕ್ಕೂ ಗಾಬರಿ ಮೂಡಿಸಿತು. ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡುತ್ತ ಅಲ್ಲಿಯೇ ಪಾಠ ಮಾಡುತ್ತಿರುವ ಇಂಗ್ಲಿಷ್ ಕಲಿತಿರುವ ಯುವಕ--ಕವಿತೆಗಳನ್ನೂ ಬರೆಯಬಲ್ಲವನು, ಹುಟ್ಟಿನಿಂದ ನಿರ್ಧರಿಸಲ್ಪಡುವ ಮೇಲುಕೀಳು ಆಚರಣೆ ಸರಿ ಎಂದದ್ದು ಇನ್ನೂ ಹೆಚ್ಚಿನ ಗಾಬರಿ ಹುಟ್ಟಿಸಿತು.

ಮೇಲಿನ ಘಟನೆಗಳ ಅವಲೋಕನ, "ಸರ್ಕಾರಗಳು ಹೇಳುತ್ತ ಬಂದಿರುವ 'ಅಭಿವೃದ್ಧಿ' ನಮ್ಮ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ; ಅವುಗಳಿಗೆ ಅಲ್ಲಿ ಪರಿಹಾರವಿಲ್ಲ;" ಎನ್ನುವ ಸಂದೇಹವನ್ನು ನನ್ನಲ್ಲಿ ಹುಟ್ಟಿಸಿದೆ. ಹಾಗೆಯೆ, "ಆರ್ಥಿಕ ಅಭಿವೃದ್ಧಿ"ಗೇ ಸೀಮಿತಗೊಳಿಸಿಕೊಂಡು ನೋಡಿದರೆ, ಬೆಂಗಳೂರು ಮತ್ತು ಅದರ ಸುತ್ತಮುತ್ತಲು ಆಗಿರುವ ಆರ್ಥಿಕ ಅಭಿವೃದ್ಧಿ ಮಾಗಡಿ-ರಾಮನಗರಗಳ ಕುಗ್ರಾಮಗಳನ್ನು ದಾಟಿ, ಚಿಕ್ಕನಾಯಕನಹಳ್ಳಿ-ಹಿರಿಯೂರುಗಳ ಹಟ್ಟಿಗಳನ್ನು ಮುಟ್ಟಿ, ಗುಲ್ಬರ್ಗ-ಬೀದರ್‌ಗಳ ತಾಂಡಾಗಳನ್ನು ತಲುಪಬೇಕಾದರೆ ಇನ್ನೂ ಎಷ್ಟು ಶತಮಾನಗಳು ಬೇಕಾಗಬಹುದು? ಆಗ ಬರುವ ಆ ಅಭಿವೃದ್ಧಿಯೂ ಒಟ್ಟಾರೆ ಸಮಾಜದದಲ್ಲಿ ಯಾವ ರೀತಿಯ ಸಾಮಾಜಿಕ-ಮಾನಸಿಕ ಪರಿವರ್ತನೆಯನ್ನು ತರಬಲ್ಲದು? ಜನರ ಯೋಚನಾಲಹರಿಯಲ್ಲಿ ಪರಿವರ್ತನೆ ಆಗದಿದ್ದಾಗ ನಮ್ಮ ಪರಂಪರಾಗತ ಸಮಸ್ಯೆಗಳು ಮತ್ತು ಮೇಲುಕೀಳುಗಳು ಎಂದಾದರೂ ಸುಧಾರಿಸಲು ಸಾಧ್ಯವೆ? ನಮ್ಮ ಜನ ಕಲಿಯುತ್ತಿರುವ ವಿದ್ಯೆ-ಓದು ಸಾಕಾಗುತ್ತಿದೆಯೆ? ಪಂಚಾಯಿತಿ ಮಾಡಿದ ಆ ಊರಿನ ಬಹುಪಾಲು ಗಂಡಸರು ಅವಿದ್ಯಾವಂತರಲ್ಲ. ಅದು ಟಿವಿ, ಬಸ್ಸು ಇಲ್ಲದೆ ಇರುವ ಕುಗ್ರಾಮವೂ ಅಲ್ಲ. ಆ ಜನ ಕಾಯ್ದೆಗಳ ಬಗ್ಗೆ, ರಾಜಕೀಯದ ಬಗ್ಗೆ ಅಜ್ಞಾನ ಇರುವವರೂ ಅಲ್ಲ. ಈ ಎಲ್ಲಾ 'ಅಭಿವೃದ್ಧಿ' ಮತ್ತು 'ಸೀಮಿತವಾದ ಅಕ್ಷರ ಜ್ಞಾನ' ಆ ಊರಿಗೆ ತಂದದ್ದಾದರೂ ಏನು? ಅಲ್ಲಿ ಆಗಿರುವ ಸುಧಾರಣೆಯಾದರೂ ಯಾವ ಮಟ್ಟದ್ದು? ಆ ಹಳ್ಳಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಂಡರೂ ಅಲ್ಲಿನ ಜನರ ಮನಸ್ಥಿತಿ ಸುಧಾರಿಸುತ್ತದೆಯೆ? ಅದನ್ನು ಸುಧಾರಿಸುವ ಪೂರ್ಣ-ಶಿಕ್ಷಣ ಇಲ್ಲದೆ ಆಗುವ ಈ ಆರ್ಥಿಕ ಅಭಿವೃದ್ಧಿ ನಮ್ಮ ಸಮಾಜ ಸುಧಾರಣೆಗೆ ನೆರವಾಗುತ್ತದೆಯೆ?

ಗಾಂಧೀಜಿಯ "ಹಿಂದ್ ಸ್ವರಾಜ್", ಜಗಳಗಂಟ ನೀರು, ಹಂದಿ-ಜ್ವರ

ನಾನು ಈ ಲೇಖನದಲ್ಲಿ ಮುಖ್ಯವಾಗಿ ಹೇಳಬಯಸಿರುವುದು ನಾವು ಇಂದು ಪರಿಭಾವಿಸಿಕೊಂಡಿರುವ ಅಭಿವೃದ್ಧಿಯ ಪರಿಕಲ್ಪನೆಯನ್ನೆ ಇಂದು ನಾವು ಚರ್ಚೆಗೆ ಒಡ್ಡಬೇಕಿದೆ ಎಂದು. ಈ ಚರ್ಚೆಯಲ್ಲಿ ಅಭಿವೃದ್ಧಿ ಎಂತಹುದಾಗಿರಬೇಕು ಮತ್ತು ಅದರ ಅಂತಿಮ ಗುರಿ ಏನಾಗಿರಬೇಕು ಎನ್ನುವುದು ಮುಖ್ಯವಾಗಬೇಕು. ಈ ಲೇಖನದಲ್ಲಿ ಮೊದಲಿಗೆ ಉದಾಹರಿಸಿದ ನಲ್ಲಿನೀರಿನ ಘಟನೆ ಇಟ್ಟುಕೊಂಡು ಇವತ್ತಿನ ಅಭಿವೃದ್ಧಿ ನಮ್ಮನ್ನು ಮುಟ್ಟಿಸಿರುವ ಅಧೋಗತಿ ಮತ್ತು ಅವಲಂಬನೆ ಕುರಿತು ನಾವು ಯೊಚಿಸಬೇಕು. ಇವತ್ತು ಯಾವೊಂದು ಬಯಲುಸೀಮೆಯ ಹಳ್ಳಿಯಲ್ಲೂ ಜನ ತಮ್ಮ ಕುಡಿಯುವ ನೀರಿಗೆ ಆ ಊರುಗಳಲ್ಲಿ ಪಾರಂಪರಿಕವಾಗಿ ಇದ್ದಂತಹ ಬಾವಿಗಳನ್ನು ಬಳಸುತ್ತಿಲ್ಲ. ಅಂತರ್ಜಲದ ಮಟ್ಟ ಕುಸಿದು ಆ ಬಾವಿಗಳಲ್ಲಿ ಇಂದು ನೀರಿಲ್ಲ. ಇದ್ದರೂ, ಅನುಕೂಲ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಅಲ್ಲಿ ಬೋರ್‌ವೆಲ್‌ಗಳನ್ನು ಕೊರೆದು ಟ್ಯಾಂಕ್ ಕಟ್ಟಿ ನಲ್ಲಿನೀರಿಗೆ ವ್ಯವಸ್ಥೆ ಮಾಡಿದ್ದಾರೆ. ಹಳ್ಳಿಗಳ ಜನ ನೀರಿಗಾಗಿ ಸಂಪೂರ್ಣವಾಗಿ ವಿದ್ಯುತ್ ಅನ್ನೆ ಅವಲಂಬಿಸಿರುವ ಗುಲಾಮಿ ವ್ಯವಸ್ಥೆ ಇದು. ಸಮಯಕ್ಕೆ ಇಲ್ಲದ ವಿದ್ಯುತ್, ಇಂಗುವ ಅಥವ ಸಾಕಾಗದ ಬೋರ್‌ವೆಲ್‌ಗಳು, ಅನಿರ್ದಿಷ್ಟ ನೀರಿನ ವ್ಯವಸ್ಥೆ, ಲಭ್ಯವಿರುವ ಸೀಮಿತ ನೀರಿಗಾಗಿ ಎಲ್ಲರ ಪೈಪೋಟಿ, ಹೀಗೆ ಈ ಅಭಿವೃದ್ಧಿ ಒಂದು ಅನೈಸರ್ಗಿಕ ಅವಲಂಬನೆಯನ್ನು ಮತ್ತು ಸಮಸ್ಯೆಗಳನ್ನು ಸೃಷ್ಟಿಸಿದೆ. ಇಂದು ಹಳ್ಳಿಗಳ ಹೆಂಗಸರ ನಡುವೆ ಮನಸ್ತಾಪ ಸೃಷ್ಟಿಸುತ್ತಿರುವುದರಲ್ಲಿ ಬಹುಶಃ ನೀರು ಮೊದಲ ಸ್ಥಾನದಲ್ಲಿದೆಯೇನೊ.

ಗಾಂಧಿ "ಹಿಂದ್ ಸ್ವರಾಜ್"ನಲ್ಲಿ ರೈಲ್ವೇ ವ್ಯವಸ್ಥೆ ಸೃಷ್ಟಿಸಬಹುದಾದ ಸಮಸ್ಯೆಗಳ ಕುರಿತು ಹೇಳಿದ್ದರು. ಅದೇ ರೀತಿ ನಾವೂ ನಮ್ಮ ಇಂದಿನ ಅಭಿವೃದ್ಧಿ ಹುಟ್ಟಿಸಬಹುದಾದ ಸಮಸ್ಯೆಗಳ ಕುರಿತು ಯೋಚಿಸಬೇಕಿದೆ. ಇವತ್ತು ಭಾರತದಂತಹ ದೇಶದಲ್ಲಿ ಪೆಟ್ರೊಲ್ ಸರಬರಾಜು, ವಿದ್ಯುತ್ ಉತ್ಪಾದನೆ, ಮತ್ತು ಟೆಲಿಫೋನ್ ವ್ಯವಸ್ಥೆಯನ್ನು ಹದಗೆಡಿಸಿದರೆ ಸಾಕು, ಇಡೀ ದೇಶವನ್ನೆ ಮಂಡಿಯೂರುವಂತೆ ಮಾಡಬಹುದು. ಇದನ್ನು ನಾವು ವಿದೇಶಿ ಶಕ್ತಿಗಳೆ ಮಾಡುತ್ತವೆ ಎಂದು ಭಾವಿಸಬೇಕಿಲ್ಲ. ನೈಸರ್ಗಿಕ ವಿಕೋಪಗಳಾಗಿ ಈ ವ್ಯವಸ್ಥೆಗೆ ಪೆಟ್ಟುಬಿದ್ದರೂ ಸಾಕು, ನಾವು ಏನು ನಾಗರಿಕ ವ್ಯವಸ್ಥೆ ಕಟ್ಟಿಕೊಂಡಿದ್ದೆವೆಯೊ ಅದೆಲ್ಲವೂ ಕುಸಿದು ಬಿದ್ದು ಅರಾಜಕತ್ವ ಮೇಲುಗೈ ಪಡೆದುಕೊಳ್ಳುತ್ತದೆ. ನಮ್ಮ ಆಧುನಿಕ ಸಮಾಜ ಮನುಷ್ಯನನ್ನು ದಿನೆದಿನೇ ನಿಸರ್ಗದಿಂದ ವಿಮುಖನನ್ನಾಗಿ ಮಾಡುತ್ತ, ತಂತ್ರಜ್ಞಾನದ ಮೇಲೆ ವಿಪರೀತವೆನ್ನಿಸುವಷ್ಟು ಅವಲಂಬಿತನನ್ನಾಗಿ ಮಾಡುತ್ತ ಸಾಗುತ್ತಿದೆ. "ಆರ್ಥಿಕ ಅಭಿವೃದ್ಧಿ"ಯೆ ಎಲ್ಲಕ್ಕೂ ಪರಿಹಾರ ಎಂದುಕೊಂಡಿರುವ ವಿದ್ಯಾವಂತ ಜನ ಮತ್ತು ರಾಜಕೀಯ ನಾಯಕತ್ವ ಇಂತಹ ವಿಷಯದ ಬಗ್ಗೆ ಯೋಚನೆಯೂ ಮಾಡದಷ್ಟು ಅಹಂಕಾರದಲ್ಲಿದೆ.

ಗಾಂಧೀಜಿ "ರೈಲ್ವೇ ವ್ಯವಸ್ಥೆ" ಸಾಂಕ್ರಾಮಿಕ ರೋಗಗಳನ್ನು ಸುಲಭವಾಗಿ ಎಲ್ಲೆಂದರಲ್ಲಿ ಹರಡುತ್ತದೆ ಎಂದಿದ್ದರು. ಇವತ್ತಿನ ಸಂದರ್ಭದಲ್ಲಿ ಇದನ್ನು ನಾವು ಇಡೀ ಸಾರಿಗೆ ವ್ಯವಸ್ಥೆಯ ಕುರಿತೆ ಯೋಚಿಸಬೇಕು. ಜಾಗತಿಕವಾಗಿ ಈ ವಾರ ಬಹಳ ಪ್ರಾಮುಖ್ಯತೆ ಗಳಿಸಿಕೊಂಡ ವಿಷಯವನ್ನೆ ಇಲ್ಲಿ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಮೆಕ್ಸಿಕೋದಲ್ಲಿ ಕಾಣಿಸಿಕೊಂಡ "ಹಂದಿ-ಜ್ವರ" ಎಂಬ ಸಾಂಕ್ರಾಮಿಕ ಕಾಯಿಲೆ ಪಕ್ಕದ ಅಮೆರಿಕಕ್ಕೇ ಅಲ್ಲದೆ ಬಹುದೂರದ ನ್ಯೂಜಿಲ್ಯಾಂಡ್‌ಗೂ ಕೇವಲ ದಿನವೊಂದರಲ್ಲಿ ಹಾರಿದೆ. ಯಾವುದೊ ಒಂದು ಸಾಂಕ್ರಾಮಿಕ ರೋಗ ಎಲ್ಲೋ ಕಾಣಿಸಿಕೊಂಡರೆ ಅದು ಒಂದೇ ದಿನದಲ್ಲಿ ಬಸ್ಸು-ರೈಲು-ವಿಮಾನಗಳ ಮೂಲಕ ಸಹಸ್ರಾರು ಮೈಲು ದೂರ ಸಾಗುತ್ತಿದೆ. ಸೀಮಿತ ಭೌಗೋಳಿಕ ಪರಿಸರಕ್ಕೆ ಪರಿಮಿತ ಮಾಡಬಹುದಾದದ್ದನ್ನು ಈ ಆಧುನಿಕ ಸೌಲಭ್ಯಗಳು "ಜಾಗತೀಕರಣ" ಮಾಡುತ್ತಿವೆ. ಆ ಮೂಲಕ ಸಾವುನೋವುಗಳನ್ನು ಹೆಚ್ಚು ಮಾಡುತ್ತಿವೆ. ನಮ್ಮ ಕುಗ್ರಾಮಗಳಲ್ಲೂ ಜನ ಎಲ್ಲೆಲ್ಲೊ ಹೋಗಿ ಅಂಟಿಸಿಕೊಂಡು ಬಂದ ಏಡ್ಸ್‌ನಿಂದ ಸಾಯುತ್ತಿದ್ದಾರೆ. ಆಧುನಿಕ ಸೌಲಭ್ಯಗಳು ಮನುಷ್ಯನ ಕಾಮನೆ ಮತ್ತು ಅಹಂಕಾರಕ್ಕೆ ಸಂಯಮ ಇಲ್ಲದಂತೆ ಮಾಡಿದೆ. ಸರಿಯಾಗಿ ಒಂದು ಶತಮಾನದ ಹಿಂದೆ ಗಾಂಧೀಜಿ ಬರೆದ "ಹಿಂದ್ ಸ್ವರಾಜ್" ಅನು ಕನಿಷ್ಠ ಭಾರತ ದೇಶವಾದರೂ ಈಗ ಮತ್ತೊಮ್ಮೆ ಓದಬೇಕಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ರವಿ, ಯೋಚನೆಗೆ ಹಚ್ಚುವಂತಹ ಬರಹ.

[quote] ತನಗೆ ಇಷ್ಟವಾದ, ತನ್ನ Intellectuality ಯನ್ನು ಪ್ರಚೋದಿಸಬಹುದಾದ, ಸಮಾನಸಕ್ತಿಗಳನ್ನು ಹೊಂದಿರುವ ಒಂದು ಹುಡುಗಿಯನ್ನು ಆಕೆಯ ಜಾತಿಮತ ನೋಡದೆ ಪ್ರೇಮಿಸಲು, ತನ್ನ ಸಂಗಾತಿಯನ್ನಾಗಿ ಆಯ್ದುಕೊಳ್ಳಲು ತನ್ನ ತಾಯಿಯ ಇರಿಸುಮುರಿಸಿನ ಹೆಸರಿನಲ್ಲಿ ಈತ ನಿರಾಕರಿಸುತ್ತಿದ್ದ. [/quote]

ಇಂಟೆಲೆಕ್ಚುಯಾಲಿಟಿಯನ್ನು ಪ್ರಚೋದಿಸುವಂತಹವರನ್ನೇ ಎಲ್ಲರೂ ಮದುವೆಯಾಗಬಯಸುತ್ತಾರೆಯೇ? ಲೋಕೋಭಿನ್ನರುಚಿಃ ಅಲ್ವೇ :)?

[quote] ಇಲ್ಲಿ ಇನ್ನೂ ಸ್ವಲ್ಪ ಮುಂದಕ್ಕೆ ಹೋಗಿ ಈಗಿನ ಕೌಟುಂಬಿಕ ವಾಸ್ತವಗಳನ್ನು ಗಮನಿಸುತ್ತ ನಾವು ಯೋಚಿಸಬೇಕು. ತಮ್ಮ ಸ್ವಂತ ದುಡಿಮೆಯ ಮೇಲೆ ನಿಲ್ಲಬಲ್ಲ ಬಹುತೇಕ ಗಂಡುಮಕ್ಕಳು ತಮಗೆ ಸಿಗುವ ಅವಕಾಶ ಅಥವ ಅನಿವಾರ್ಯತೆಯಿಂದಾಗಿ ಇಂದು ಹೆತ್ತವರಿಂದ ಬೇರೆಯೆ ಇರುತ್ತಿದ್ದಾರೆ. ಹಾಗಾಗಿ, ತಾಯಿ ಪಾಲಿಸುವ ಸಂಪ್ರದಾಯಗಳು, ರೀತಿರಿವಾಜುಗಳು ಎನ್ನುವುದೇ ಈಗಿನ ಸೊಸೆ-ಅತ್ತೆ ಸಂದರ್ಭದಲ್ಲಿ ಅಪ್ರಸ್ತುತ. ಹಾಗಿರುವಾಗ, ಜಾತಿವ್ಯವಸ್ಥೆಯಿಂದ ಲಾಭವಿಲ್ಲದ, ಅನುಕೂಲವಿಲ್ಲದ, ಅಹಂಕಾರವಿಲ್ಲದ ಯಾರು ತಾನೆ ಇಷ್ಟೆಲ್ಲ ಓದು-ಡಿಗ್ರಿ ಪಡೆದುಕೊಂಡರೂ ಜಾತಿ-ಆಚರಣೆ ಸರಿ ಎನ್ನುತ್ತಾರೆ? [/quote]

ನಾನು ಜಾತಿ ರೀತಿ ರಿವಾಜುಗಳನ್ನು ಸಮರ್ಥಿಸುತ್ತಿಲ್ಲ - ಆದರೆ, ತಾಯಿಯ ಸಂಪ್ರದಾಯವನ್ನು ( ಅದು ಬೇರೆಯವರಿಗೆ ತೊಂದರೆ ಮಾಡದೇ ಇರುವ ತನಕ) ಪಾಲಿಸಬೇಕೆಂದು ಒಬ್ಬ ಮಗನಿಗೇ ಆಗಲಿ, ಮಗಳಿಗೇ ಆಗಲಿ, ಅನ್ನಿಸಿದರೆ ಅದರಲ್ಲಿ ತಪ್ಪೇನಿಲ್ಲವಲ್ಲ?

[quote] ಈಗಿನ ಈ ಎಲ್ಲಾ ಓದು-ವಿದ್ಯೆ ನಮ್ಮಲ್ಲಿ ಎಷ್ಟು ಮಾತ್ರದ ಸುಧಾರಣೆ ತಂದಿದೆ? ನೈತಿಕತೆಯ ಪಾಠ ಕಲಿಸಿದೆ? [/quote]

ಇದೀಗ ನೋಡಿ - ಇದು ನಿಜವಾದ ಹುರುಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ನಮ್ಮ ಆಧುನಿಕ ಸಮಾಜ ಮನುಷ್ಯನನ್ನು ದಿನೆದಿನೇ ನಿಸರ್ಗದಿಂದ ವಿಮುಖನನ್ನಾಗಿ ಮಾಡುತ್ತ, ತಂತ್ರಜ್ಞಾನದ ಮೇಲೆ ವಿಪರೀತವೆನ್ನಿಸುವಷ್ಟು ಅವಲಂಬಿತನನ್ನಾಗಿ ಮಾಡುತ್ತ ಸಾಗುತ್ತಿದೆ. "ಆರ್ಥಿಕ ಅಭಿವೃದ್ಧಿ"ಯೆ ಎಲ್ಲಕ್ಕೂ ಪರಿಹಾರ ಎಂದುಕೊಂಡಿರುವ ವಿದ್ಯಾವಂತ ಜನ ಮತ್ತು ರಾಜಕೀಯ ನಾಯಕತ್ವ ಇಂತಹ ವಿಷಯದ ಬಗ್ಗೆ ಯೋಚನೆಯೂ ಮಾಡದಷ್ಟು ಅಹಂಕಾರದಲ್ಲಿದೆ.>>

ರವಿಯವರೇ,
ನಿಮ್ಮ ಈ ಮೇಲಿನ ಮಾತು ನೂರಕ್ಕೆ ನೂರರಷ್ಟು ನಿಜ.

-----------

"ಅಭಿವೃದ್ಧಿ" ನಮ್ಮ ಸಮಸ್ಯೆಗಳನ್ನು ನಿವಾರಿಸುತ್ತಿದೆಯೆ?

ನಮ್ಮ ದೇಶದಲ್ಲಿ ನಾಗರೀಕ ಸಮಾಜದಲ್ಲಿ ಭಾಗವಹಿಸಲು ಬೇಕಾದ ಶಿಕ್ಷಣವನ್ನ ಹಿಂದೆ ಧರ್ಮದ ಪ್ರತಿನಿಧಿಗಳು ಕೊಡುತ್ತಿದ್ದರು. ಅವರನ್ನು ಅಲ್ಲಗಳೆದ ಮೇಲೆ ಅದರ ಬದಲಾಗಿ ಯಾವುದೇ ರೀತಿಯ ಸಾರ್ಥಕವೆನಿಸುವ ನೈತಿಕ ಶಿಕ್ಷಣವನ್ನು ನಾವು ರೂಪಿಸದೇ ಹೋದುದು ನಮ್ಮ ದೇಶದ ದೊಡ್ಡ ದುರಂತ. ಭಾರತದ ಯಾವ ಪ್ರತಿಷ್ಠಿತ ಶಾಲೆಯಲ್ಲಾಗಲೀ, ಅಮೆರಿಕೆಯ ಒಂದು ಬಾಲವಾಡಿಯಲ್ಲಿ ಹೇಳಿಕೊಡುವಷ್ಟು ಸರಳವಾಗಿ ಸನ್ನಡತೆಯನ್ನು ಹೇಳಿಕೊಡುತ್ತಾರೆಯೆ? ೩ ವರುಷದ ಮಗುವಿಗೆ, ಇತರರ ಮೈ ನೋಯಿಸಬಾರದು, ಹೊಡೆಯಬಾರದು, ಮನಸ್ಸು ನೋಯಿಸಬಾರದು, ಸುಳ್ಳು ಹೇಳಬಾರದು, ಇನ್ಥವನ್ನೆಲ್ಲ ಎಷ್ಟು ಮನ ಮುಟ್ಟುವಂತೆ ಹೇಳಿ ಕೊಡುತ್ತಾರೆ? ಅಕ್ಷರ, ಸಂಖ್ಯೆಗಳು ಇವನ್ನೆಲ್ಲ ಕಲಿಯುವ ಮೊದಲು ಮಕ್ಕಳು ಕಲಿಯಬೇಕಾದುದು ಒಳ್ಳೆಯ ನಡತೆ. ನಮ್ಮ ದೇಶದಲ್ಲಿ ಸಾಕ್ಷರತೆ ಹೆಚ್ಚಿಸುವುದಕ್ಕಿಂತ ಜೀವನಕ್ರಮವನ್ನು ಉತ್ತಮಪಡಿಸಿಕೊಳ್ಳುವ ಬಗ್ಗೆ, ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ, ಶುಚಿತ್ವದ ಮಹತ್ವದ ಬಗ್ಗೆ, ಸಹಜೀವನದ ಬಗ್ಗೆ ಹೆಚ್ಚು ತಿಳಿಸಿಕೊಟ್ಟಿದ್ದರೆ ಸಮಾಜ ಈ ರೀತಿ ದಿಕ್ಕು ಕೆಡುತ್ತಿರಲಿಲ್ಲ ಅಂತ ನನ್ನ ಅನಿಸಿಕೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರವಿಯವರೆ,
ಕೊನೆಯ ಪ್ಯಾರ ಬಿಟ್ಟರೆ, ಮಿಕ್ಕಿದ್ದೆಲ್ಲ ಕಣ್ಣು ತೆರೆಸುವಂತಹ ಬರಹ ಎನ್ನಿಸಿತು. ಬರಿಯ ಓದಿನಿಂದ ಮನುಷ್ಯ ಜಾತಿ ಪದ್ಧತಿಯನ್ನು ಖಂಡಿಸುವುದಾಗಲಿ, ಮೀರುವುದಾಗಲಿ ಮಾಡುವುದಿಲ್ಲ. ಆದ್ದರಿಂದ, ಇದರ ವಿರುದ್ಧ ಕಾನೂನು ಮತ್ತು ಈ ಕಾನೂನನ್ನು strict ಆಗಿ ಜಾರಿಗೆ ತರುವುದರಿಂದ ಮಾತ್ರ ಪ್ರಗತಿ ಸಾಧ್ಯ. ಈ ಪಂಚಾಯ್ತಿ ವ್ಯವಸ್ಥೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಲ್ಲವೆ? ಇದರಲ್ಲಿ ಊರಿನ ಪ್ರಬಲ ವ್ಯಕ್ತಿಗಳು, ಮೇಲ್ಜಾತಿಯವರು ಇದ್ದರೆ, ಆ ದಲಿತ ಹೆಣ್ಣುಮಗಳಂತಹವರಿಗೆ ನ್ಯಾಯ ಎಲ್ಲಿಂದ ಒದಗಿಬರಲು ಸಾಧ್ಯ? ಈ ಶತಮಾನದಲ್ಲೂ ಬಹಿಶ್ಕಾರ ಇತ್ಯಾದಿ ಇದೆ ಎಂದರೆ ನಂಬಲಾಗುತ್ತಿಲ್ಲ! ಹಾಗೆ ನೋಡಿದರೆ, ಅಮೇರಿಕದ ಹಳ್ಳಿಗಳಲ್ಲೂ ರೇಸಿಸಂ ಇನ್ನೂ ಇದೆ. ಸಿಟಿಯಲ್ಲಿ ಕುಳಿತಿರುವ ನಮಗೆ ಅದರ ಬಗ್ಗೆ ಹೆಚ್ಚಾಗಿ ತಿಳಿಯುವುದಿಲ್ಲ ಅಷ್ಟೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.