ಮಾನವ(ವೀಯ) ಪಶು ಸಾಗಾಣಿಕೆ !?

0

ಭಾರತದಲ್ಲಿ ಊಟ ಸಂಪಾದಿಸಿಕೊಳ್ಳುವುದೇ ದೊಡ್ಡ ಸವಾಲು. ಆ ಸವಾಲು ಸ್ವೀಕರಿಸಿದ ಮನುಷ್ಯರು ಕೋಟ್ಯಾಂತರ ಇರುವುದರಿಂದ ಮತ್ತು ಅವರಲ್ಲಿ ಬಹಳಷ್ಟು ಜನ "ನಗಣ್ಯ"ರೂ ಆಗಿರುವುದರಿಂದ ಅವರ ಸಾವು, ನೋವು, ಅಪಘಾತ, ಸುರಕ್ಷೆ, ಸುದ್ದಿಯೂ ಅಲ್ಲ, ಗಮನಹರಿಸಬೇಕಾದ ಸಮಸ್ಯೆಯೂ ಅಲ್ಲ. ಹೌದೆ? ನಿಜವೆ?

ಒಂದು ಆಟೋದಲ್ಲಿ 12-13 ಜನ ಕುಳಿತು ಯಾವೊಂದು ಸುರಕ್ಷೆಯೂ ಇಲ್ಲದ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಾರೆ; ದಿನಗೂಲಿಗೆ. 10-12 ಜನ ಮಾತ್ರ ಕೂಡಬಹುದಾದ ಜೀಪಿನಲ್ಲಿ ಮೇಲೆ-ಕೆಳಗೆ ಎಲ್ಲಾ ಸೇರಿ 20-25 ಜನ ಕಣಿವೆ-ಗುಡ್ಡ-ಬೆಟ್ಟಗಳಲ್ಲಿ ಮಳೆ-ಬಿಸಿಲು-ಗಾಳಿ-ಧೂಳನ್ನು ಅನುಭವಿಸುತ್ತ ಸಾಗುತ್ತಾರೆ. ಆಗಾಗ ಕಾಲನರಮನೆಗೂ.

ಈ ಚಿತ್ರಗಳು ಈಗಲೂ ಬದಲಾಗಿಲ್ಲ. ಬೆಂಗಳೂರಿನಿಂದ ಹೊರಗೆ ಹೋದರೆ ಎಲ್ಲೆಂದರಲ್ಲಿ ಕಾಣಿಸಬಹುದು. ಅಲ್ಲೇ ಇರುವವರಿಗೆ ಅದೊಂದು ವಿಷಯವೇ ಅಲ್ಲದಿರಬಹುದು. ಆದರೆ ನನಗದು ನೋವಿನ, ಭಯದ, ಖಿನ್ನತೆಯ ಭಾವ ಮೂಡಿಸುತ್ತದೆ. ಈ ಸಲ ಬೆಂಗಳೂರಿನಲ್ಲಿದ್ದಾಗ ಒಂದೆರಡು ಸಲ 75 ರೂಪಾಯಿಯ ಪಾಸ್ ತೆಗೆದುಕೊಂಡು ವೋಲ್ವೋ ಗಾಡಿಯಲ್ಲಿ ಹೋಗಿದ್ದೆ. ನನ್ನೂರಿನಿಂದ ಮೆಜೆಸ್ಟಿಕ್‌ಗೆ 15 ನಿಮಿಷಕ್ಕೆ ಒಂದು ಬಸ್ ಸಿಗುತ್ತದೆ. ಒಬ್ಬರಿಂದ ಹಿಡಿದು ಹತ್ತಿಪ್ಪತ್ತು ಜನರ ತನಕ ಇರುತ್ತಿದ್ದರು. ನಾಲ್ಕೈದು ಕಿ.ಮೀ. ದೂರ ಇಡೀ ಬಸ್ಸಿಗೆ ನಾನೊಬ್ಬನೆ ಇದ್ದೆ. ಏರ್ ಕಂಡೀಷನ್ಡ್ ಬಸ್. ಅಷ್ಟೊಂದು ಲಕ್ಷುರಿ ಇದೆ ಈಗ ಬೆಂಗಳೂರಿನಲ್ಲಿ. ಆದರೆ ಹತ್ತಿಪ್ಪತ್ತು ಕಿ.ಮೀ. ಹೊರಗೆ ಹೋಗಿ ನೋಡಿದರೆ... ಚಿತ್ರವೇ ಬೇರೆ ಆಗುತ್ತದೆ.

ಮಾನವ(ವೀಯ) ಪಶು ಸಾಗಾಣಿಕೆ !?

ಇಲ್ಲಿ ಆ ಹೆಣ್ಣುಮಕ್ಕಳು ಹೊಟ್ಟೆಪಾಡಿಗೆ ಕುರಿ-ಮಂದೆಯಂತೆ ಮುದುರಿಕೊಂಡು, ಡ್ರೈವರ್‍ನ ಸೀಟಿನಲ್ಲೂ ಜಾಗ ಹಂಚಿಕೊಂಡು, ಸೀಟಿನ ರಾಡಿನ ಮೇಲೆ ಕುಳಿತುಕೊಂಡು, ಹಿಂದೆ ರಸ್ತೆಗೆ ಮುಖಮಾಡಿಕೊಂಡು ಹೋಗುತ್ತಿದ್ದರು ಕುಣಿಗಲ್ ಹತ್ತಿರ. ಅಲ್ಲಿ ಸೊಂಡೂರಿನ ಬಳಿ 20-25 ಜನ 10-12 ಜನ ಹಿಡಿಸುವ ಜೀಪಿನಲ್ಲಿ ಮೇಲೆಒಳಗೆ ಕುಳಿತು, ಸೈಡಿನಲ್ಲಿ ನೇತಾಡುತ್ತ ಹೋಗುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಾವಿರಾರು ಕೋಟಿ ಕಂಡ ಸಣ್ಣ-ವಿಸ್ತಾರದ ಶ್ರೀಮಂತ ನೆಲ ಸೊಂಡೂರು. ಆದರೆ ಅಲ್ಲಿಯ ಗುಡ್ಡ-ಕಣಿವೆ-ಕೊರಕಲುಗಳಲ್ಲಿ ಜೀವದ ಹಂಗು ಬಿಟ್ಟು ಮನೆ-ಊರು ಸೇರುವ ಆತುರದಲ್ಲಿ ಬಿಸಿಲು-ಧೂಳು-ಗಾಳಿ ಲೆಕ್ಕಿಸದೆ ಬಡ ಜನತೆ ಸಾಗುತ್ತಿತ್ತು. ಅಪಘಾತಗಳು ಸಾಮಾನ್ಯ. ಅಲ್ಲಿ ಮನುಷ್ಯರ ಜೀವಕ್ಕೆ ಬೆಲೆಯೇ ಇಲ್ಲ. ದುಡಿಮೆ-ಹೊಟ್ಟೆಪಾಡು-ನೆಮ್ಮದಿಯ ಜೊತೆಗೆ ಪ್ರತಿದಿನದ ಉಳಿವೂ ಒಂದು ಹೋರಾಟವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.