ವಿವೇಕಾನಂದರನ್ನು ಅಡಿಗಡಿಗೆ ಅವಮಾನಿಸಿದ ಯಡ್ಡಯೂರಪ್ಪ...

0

ಆಧುನಿಕ ಕನ್ನಡದ ಸರ್ವಶ್ರೇಷ್ಠ, ದಾರ್ಶನಿಕ ಮನಸ್ಸೊಂದು ಹೀಗೆ ದಾಖಲಿಸುತ್ತದೆ:
"ನಮ್ಮ ರಾಜಕೀಯವಲಯದಲ್ಲಿಯೋ ಭವಿಷ್ಯನಿರ್ಣಯ ಮಾಡುವ ಜ್ಯೋತಿಷಿಗಳಿಗೆ ಪರಮಾಧಿಕಾರ ಲಭಿಸಿದಂತಾಗಿದೆ. ಅಧಿಕಾರಿ ತನ್ನ ಮೇಲ್ಮೆಯನ್ನು ಸಾಧಿಸಲು ಸೇವಾನಿಷ್ಠೆಯನ್ನು ಅನುಸರಿಸುವ ಕ್ಲೇಷಕ್ಕೆ ಹೋಗುವುದಿಲ್ಲ; ಜ್ಯೋತಿಷಿಯನ್ನೋ ಮಾಂತ್ರಿಕನನ್ನೋ ಆಶ್ರಯಿಸುತ್ತಾನೆ. ಮಂತ್ರಿ ತನ್ನ ರಾಜಕೀಯ ಭದ್ರತೆಯನ್ನು ಪ್ರಜಾಸತ್ತೆಯ ಋಜುನಿಯಮಗಳಿಂದ ಸ್ಥಾಪಿಸಿಕೊಳ್ಳುವ 'ಅಭದ್ರ ವಿಜ್ಞಾನ'ಕ್ಕೆ ಬಿಟ್ಟುಕೊಡದೆ ಜ್ಯೋತಿಷಿಯ 'ಸುಭದ್ರ ಅಜ್ಞಾನ'ಕ್ಕೇ ಶರಣು ಹೋಗುತ್ತಾನೆ. ಮಂತ್ರಿತ್ವ ವಹಿಸಿಕೊಳ್ಳುವ ಕಾಲನಿರ್ಣಯ ಮಾಡುವವನು ಜ್ಯೋತಿಷಿ. ಕೊನೆಗೆ ವಿಮಾನ ಏರುವ ಮುಹೂರ್ತ ಇಟ್ಟುಕೊಡುವವನೂ ಜ್ಯೋತಿಷಿ; ಕೊನೆಗೆ ವಿಮಾನ ಹಾರುವ ಸಮಯ ಗೊತ್ತು ಮಾಡುವುದೂ ಇವನ ಕೈಲಿರದಿದ್ದರೆ, ಜೋಯಿಸನ 'ನಿಮಿತ್ತ'ಕ್ಕೆ ಶರಣಾಗಿ,

ತನ್ನ ನಿವಾಸದಿಂದಾದರೂ ಆ ಸುಮುಹೂರ್ತಕ್ಕೆ ಹೊರಡದಿದ್ದರೆ ಆತನ ಮನಸ್ಸಿಗೆ ನೆಮ್ಮದಿ ಇಲ್ಲ. ತನ್ನ ಅವಿವೇಕದಿಂದ ಏನಾದರೂ ಕೆಟ್ಟುದಾದರೆ, ಸರಿ, ಹೊರಟ ಗಳಿಗೆಯ ಮೇಲೆ ಹೊರೆ ಹೇರುತ್ತಾರೆ. ಅಧ್ಯಾಪಕ, ಅಧಿಕಾರಿ, ಮಂತ್ರಿ, ವ್ಯಾಪಾರಿ, ಮಠಾಧಿಪತಿ, ಶ್ರಮಜೀವಿ, ಕೂಲಿ, ಕೊನೆಗೆ ಕಳ್ಳ-ಎಲ್ಲರಲ್ಲಿಯೂ ಎಲ್ಲೆಲ್ಲಿಯೂ ಇಂತಹ ಅವೈಜ್ಞಾನಿಕತೆ ಮತ್ತು ಅವಿಚಾರತೆ ವ್ಯಾಪಿಸಿ ವರ್ಧಿಸುತ್ತಿರುವುದನ್ನು ಸಂಕಟದಿಂದ ನೋಡುತ್ತಿರಬೇಕಿದೆ."

ನಿಮಗೆ ಈಗಾಗಲೆ ಗೊತ್ತಾಗಿರಬಹುದು, ಇದನ್ನು ಬರೆದವರು ಋಷಿಪ್ರಜ್ಞೆಯ ಕವಿ, ಸಾಹಿತಿ, ವಿಚಾರವಾದಿ, ಗುರು, ಚಿಂತಕ, ಎಲ್ಲವೂ ಆಗಿದ್ದ ಶ್ರೀ ಕುವೆಂಪುರವರು ಎಂದು. ಅವರು ಇದನ್ನು ಬರೆದದ್ದು ಸರಿಯಾಗಿ 43 ವರ್ಷಗಳ ಹಿಂದೆ; ದಿನಾಂಕ ಮೇ 5, 1963 ರಂದು; "ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ" ಪುಸ್ತಕದ ಮುನ್ನುಡಿಯಲ್ಲಿ.

ಎಂತಹ ಘೋರ, ಅವಮಾನಕರ ಬೌದ್ಧಿಕ ಹಿನ್ನಡೆ ನೋಡಿ, ಕರ್ನಾಟಕಕ್ಕೆ... ಕಳೆದ ನಾಲ್ಕೈದು ದಶಕಗಳಲ್ಲಿ ರಾಜ್ಯದಲ್ಲಿ ಬೌದ್ಧಿಕ ಪ್ರಗತಿ ಆದಂತೆಯೇ ಇಲ್ಲ. ಇಷ್ಟೊತ್ತಿಗೆಲ್ಲ ಯಾವಯಾವ ಕೆಲಸಗಳು ಅವಮಾನಕರವೂ, ತುಚ್ಛವೂ, ಕೀಳುಮಟ್ಟದ್ದೂ ಆಗಬೇಕಿತ್ತೊ ಅವಕ್ಕೆಲ್ಲ ಈಗ "ರಾಜಕೀಯ ಅಧಿಕೃತತೆ" ಸಿಕ್ಕಿಬಿಟ್ಟಿದೆ. ಕಳೆದ ಹತ್ತು ವರ್ಷಗಳಿಂದ ಕರ್ನಾಟಕವನ್ನು ಆಳಿದ ದೇವೇಗೌಡ, ಎಸ್ಸೆಮ್ ಕೃಷ್ಣ, ಕುಮಾರಸ್ವಾಮಿ, ಯಡ್ಡಯೂರಪ್ಪ ಮುಂತಾದವರ ಮಾಟಮಂತ್ರಜ್ಯೋತಿಷ್ಯವಾಸ್ತುಗಳ ಪ್ರಚ್ಛನ್ನ ನಿರ್ಲಜ್ಜ ಆಚರಣೆ ಮತ್ತು ಪ್ರದರ್ಶನ ಕುವೆಂಪುರಂತಹವರು ಯಾವುದರ ವಿರುದ್ಧ ಹೋರಾಡಿದರೊ ಅದೆಲ್ಲವನ್ನೂ ಅಣಕ ಮಾಡುತ್ತಿದೆ. ಅದರಲ್ಲೂ ಹಿಂದೂ ಮತಾಂಧತೆಯನ್ನು ಉದ್ಧೀಪಿಸಿ "ಸಾತ್ ದಿನ್ ಕಾ ಸಾಮ್ರಾಟ್" ಆಗಿಹೋದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಂತೂ, ಕ್ಷಮಿಸಿ, ಯಡ್ಡಯೂರಪ್ಪನವರಂತೂ ಹಿಂದಿನ ಎಲ್ಲಾ ಮತಮೂಢ ಕಂದಾಚಾರಿ ರಾಜಕಾರಣಿಗಳಿಗಿಂತ ಮುಂದಕ್ಕೆ ಹೋಗಿಬಿಟ್ಟಿದ್ದಾರೆ; ಬಹಿರಂಗ ಆಚರಣೆಗೆ ಇಳಿದುಬಿಟ್ಟಿದ್ದಾರೆ. ಸುಂದರವಾದ, ಜೀವಪರವಾದ, ವಿಚಾರಪರವಾದ, ಆಧುನಿಕ ದೃಷ್ಟಿಕೋನದ ಪ್ರಜಾಪ್ರಭುತ್ವಕ್ಕೆ ಕಳಂಕವಾಗಿ ಕಾಡುತ್ತಿದ್ದಾರೆ.

ಲೇಖನದ ವಿಡಿಯೊ ಪ್ರಸ್ತುತಿ - ಭಾಗ 1

ಎಷ್ಟೊಂದು ಹೋಮಗಳು; ಯಜ್ಞಗಳು; ಯಾಗಗಳು; ಪೂಜೆಗಳು; ವ್ರತಗಳು; ಮೌನವ್ರತಗಳು; ಶಕುನಗಳು; ಆಶೀರ್ವಾದಗಳು; ದೇವಾಲಯ ಸಂದರ್ಶನಗಳು; ದೈವಕ್ಕೆ ಪೂಜೆ; ಯಾವುದಕ್ಕೂ ಇರಲೆಂದು ದೆವ್ವಕ್ಕೂ ಪೂಜೆ.. ಇವೆಲ್ಲವೂ ಏನಕ್ಕಾಗಿ? ಜನರ ಕ್ಷೇಮಕ್ಕಾಗಿ ಎನ್ನುತ್ತಾರಲ್ಲ ಈ ಎರಡು ನಾಲಿಗೆಯ ವಚನಭ್ರಷ್ಟರು! ತಮ್ಮ ವೈಯಕ್ತಿಕ ಅಧಿಕಾರ ಲಾಲಸೆಗಾಗಿ ಮಾಡಿದ ಈ ತುಚ್ಛ, ನಿರ್ಲಜ್ಜ ಕಂದಾಚಾರಗಳನ್ನು ಜನಸಾಮಾನ್ಯರ ಹಿತಕ್ಕಾಗಿ ಎನ್ನುತ್ತಾರಲ್ಲ, ಯಾವ ಸಂಸ್ಕೃತಿ ಇವರದು? ಇವೆಲ್ಲವನ್ನೂ ಜನರ ಕ್ಷೇಮಕ್ಕಾಗಿಯೇ ಮಾಡುವ ಹಾಗಿದ್ದರೆ, ಇದೆಲ್ಲವನ್ನೂ ಮಾಡಲು ಇಲ್ಲಿಯ ತನಕ ಕಾಯಬೇಕಿತ್ತೆ? ಮುಖ್ಯಮಂತ್ರಿ ಕೂಡುವ ಕುರ್ಚಿಗೆ ಅದ್ಯಾವನೊ ಅವಿವೇಕಿ ಮುಟ್ಠಾಳ ಪೂಜೆ ಮಾಡಿ, 'ಇನ್ನು ಇಪ್ಪತ್ತು ವರ್ಷ ಈ ಕುರ್ಚಿ ನಿಮಗೇ ಸಿಗುವಂತಹ ಪೂಜೆ ಮಾಡಿದ್ದೇನೆ,' ಎಂದನಂತೆ!! ಇದೇನು ಪ್ರಜಾಪ್ರಭುತ್ವವೊ, ಕಾಡುಮೃಗಗಳ ಸಾಮ್ರಾಜ್ಯವೊ? ಮಾರನೆಯ ದಿನ ಮತ್ಯಾವನೊ ಮುಖ್ಯಮಂತ್ರಿಯ ಬಾಯಿಗೆ ಏನನ್ನೋ ಹಾಕಿ, 'ಅದನ್ನು ತೆಗೆದುಕೊಂಡು ಹೋಗಿ ಹಿಂದಿನ ದಿನ ಪೂಜೆ ಮಾಡಿದ್ದ ಅದೇ ಕುರ್ಚಿಗೆ ಹೋಗಿ ಉಗಿ,' ಎಂದನಂತೆ! ಆಹಾ, ಕುರ್ಚಿಯ ಕರ್ಮವೆ! ಅಕಟಕಟಾ... ಕೊನೆಗೂ ಏನಾಯಿತು? ಕೇವಲ ತನ್ನ ಸ್ವಾರ್ಥಕ್ಕಾಗಿಯೇ ಮಾಡಿದ ಈ ಎಲ್ಲಾ ಯಜ್ಞಯಾಗಾದಿಗಳು, ವ್ರತಗಳು, ಪೂಜೆಪುನಸ್ಕಾರಗಳು ಗಳಿಸಿ ಕೊಟ್ಟ ಅಧಿಕಾರಾವಧಿ ಎಷ್ಟು ದಿನ? ಇನ್ನೊಂದು ಕೈಯ ಬೆರಳುಗಳಲ್ಲಿ ಎರಡು ಎಣಿಸುವಷ್ಟರಲ್ಲಿ ಎಲ್ಲಾ ಮುಗಿದೇ ಹೋಯಿತು. ರಾಮ್ ನಾಮ್ ಸತ್ಯ್ ಹೈ!!! ರಾಮ್ ನಾಮ್ ಸತ್ಯ್ ಹೈ!!! ರಾಮ್ ನಾಮ್ ಸತ್ಯ್ ಹೈ!!!

ನಮ್ಮ ದೇಶ ಮತ್ತು ಧರ್ಮಕ್ಕೆ ಕೀರ್ತಿಯ ಕಲಶವನ್ನಿಟ್ಟ" ಒಬ್ಬ ಸನ್ಯಾಸಿಯ ಬಗ್ಗೆ ಕುವೆಂಪು ಹೀಗೆ ಬರೆಯುತ್ತಾರೆ:
"(ದೇವರು, ಧರ್ಮ, ಭಕ್ತಿ, ಪೂಜೆ, ಇಹ, ಪರ ಮೊದಲಾದ) ವಿಚಾರಗಳನ್ನು ಬಹು ಸುಲಭವಾಗಿ ಲೋಕಕ್ಕೆ ತಿಳಿಸಿದ ಒಬ್ಬರು ಮಹಾತ್ಮರಿದ್ದಾರೆ. ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು ಓದು ಬರೆಹ ಚೆನ್ನಾಗಿ ತಿಳಿದವರಲ್ಲ. ಆದರೂ ಪಾಶ್ಚಾತ್ಯ ದೇಶಗಳಿಂದ ಪಂಡಿತವರ್ಯರಾಗಿ ಬಂದವರೂ ಕೂಡ, ಅವರ ಪದತಲದಲ್ಲಿ, ನಿರಕ್ಷರಕುಕ್ಷಿಗಳಾದ ಸಾಮಾನ್ಯರೊಡನೆ ಕುಳಿತು, ಅವರ ಉಪದೇಶಾಮೃತವನ್ನು ಸವಿದರು. ಅವರ ಶಿಷ್ಯರಾದ ಸ್ವಾಮಿ ವಿವೇಕಾನಂದರು ಯೂರೋಪು ಅಮೆರಿಕಾಗಳಿಗೆ ಹೋಗಿ ವೇದಾಂತ ಬೋಧೆ ಮಾಡಿ ಜಗದ್ವಿಖ್ಯಾತ ರಾದುದಲ್ಲದೆ, ನಮ್ಮ ದೇಶ ಮತ್ತು ಧರ್ಮಗಳಿಗೆ ಕೀರ್ತಿಯ ಕಲಶವನ್ನಿಟ್ಟರು."

ಸ್ವಾಮಿ ವಿವೇಕಾನಂದ ಎಂಬ ಸನ್ಯಾಸಿ ಹೇಳಿದ ವಿಚಾರಗಳಿಗೆ ಭದ್ರವಾಗಿ ಗೋರಿಯನ್ನು ಕಟ್ಟಿ, ಅಷ್ಟೇ ಭದ್ರವಾಗಿ ಆತನ ಆಕಾರವನ್ನು ಮಾತ್ರ ತಮ್ಮ ಅತ್ಯಮೂಲ್ಯ ಆಸ್ತಿಯನ್ನಾಗಿ ಮಾಡಿಕೊಂಡಿರುವವರು ಈಗಿನ ಮೂಢ ಹುಸಿಹಿಂದುತ್ವವಾದಿಗಳು. ಇವರು ಹೇಳುವ ಸುಳ್ಳುಗಳು ಏನೇ ಇರಲಿ, ವಿವೇಕಾನಂದರ ಬಗ್ಗೆ ಏಳೆಂಟು ದಶಕಗಳ ಹಿಂದೆಯೆ ಮತ್ತೊಬ್ಬ ಋಷಿಕವಿ ಠಾಗೂರರು "ನಿಮಗೆ ಭಾರತದ ಬಗ್ಗೆ ತಿಳಿದುಕೊಳ್ಳಬೇಕಿದ್ದರೆ ವಿವೇಕಾನಂದರನ್ನು ಅಭ್ಯಸಿಸಿ. ಅವರಲ್ಲಿ ಪ್ರತಿಯೊಂದೂ ಗುಣಾತ್ಮಕವೆ. ಋಣಾತ್ಮಕವಾದದ್ದು ಅವರಲ್ಲಿ ಯಾವುದೂ ಇಲ್ಲ," ಎಂದಿದ್ದರು. ಭಾರತದಲ್ಲಿನ ಹಿಂದೂ ಸಮಾಜವನ್ನು ಸುಧಾರಿಸಲು ಮಹಾನ್ ಪ್ರಯತ್ನ ಮತ್ತು ಪ್ರಯೋಗಗಳನ್ನು ಮಾಡಿದ, ಭಾರತದ ಸರ್ವಶ್ರೇಷ್ಠ ಜಾತ್ಯತೀತನಾಗಿದ್ದ, ಆದರೆ ಹಿಂದೂ ಮತಾಂಧನಿಂದಲೆ ಹತನಾಗಿ ಹೋದ ಮಹಾತ್ಮ ಗಾಂಧಿ, "ನನ್ನ ದೇಶದ ಮೇಲಿನ ನನ್ನ ಪ್ರೀತಿ ವಿವೇಕಾನಂದರ ಪ್ರಭಾವದಿಂದಾಗಿ ಸಾವಿರಪಟ್ಟು ಹೆಚ್ಚಾಯಿತು," ಎಂದಿದ್ದಾರೆ. ಗಾಂಧಿಯ ಅನುಯಾಯಿಯಾಗಿದ್ದ ಚಕ್ರವರ್ತಿ ರಾಜಗೋಪಾಲಚಾರಿಯವರಂತೂ "ವಿವೇಕಾನಂದರು ಹಿಂದೂಯಿಸಮ್ ಅನ್ನು ಕಾಪಾಡಿದರು," ಎಂದಿದ್ದರೊಮ್ಮೆ.

ಕಳೆದ ನೂರು ವರ್ಷಗಳಿಂದ ಭಾರತದ ಹಲವಾರು ಶ್ರೇಷ್ಠ ಮನಸ್ಸುಗಳನ್ನು ಪ್ರಭಾವಿಸುತ್ತ ಬಂದಿರುವ, ಹಿಂದುತ್ವವವನ್ನು ಕಾಪಾಡಿದ ಸ್ವಾಮಿ ವಿವೇಕಾನಂದರು ಮೂಢನಂಬಿಕೆಗಳ ಬಗ್ಗೆ ಒಮ್ಮೆ ಹೀಗೆ ಹೇಳುತ್ತಾರೆ:

"ಶತಮಾನಗಳಿಂದ ನಾವು ಎದೆಗೊತ್ತಿಕೊಂಡು ಬಂದಿರುವ ಈ ಮೂಢನಂಬಿಕೆಗಳನ್ನು ಭಾರತದ ಮಣ್ಣಿನಿಂದ ಕಿತ್ತೆಸೆಯಬೇಕು. ಮತ್ತೆ ಅವು ಎಂದೂ ಬೆಳೆಯದಂತಹ ಕಡೆ, ಶಾಶ್ವತವಾಗಿ ನಿರ್ನಾಮವಾಗುವಂತಹ ಕಡೆ ಬಿಸಾಕಿಬಿಡಬೇಕು. ಹಿಂದೂ ಜನಾಂಗದ ಮತಿ ಕುಲಗೆಡುತ್ತ ಬಂದಿರುವುದಕ್ಕೆ ಈ ಮೂಢನಂಬಿಕೆಗಳೆ ಕಾರಣ. ಇವು ಮತಿ ದುರ್ಬಲವಾಗಲು ಪ್ರೇರೇಪಿಸುತ್ತವೆ. ಸ್ವಂತಿಕೆಯನ್ನು ಸಂಪೂರ್ಣವಾಗಿ ಕಳೆದುಕೊಂಡ, ಎಲ್ಲಾ ತರಹದ ತೇಜಸ್ಸನ್ನು ಕಳೆದುಕೊಂಡ, ಮಹತ್ತರವಾದದ್ದನ್ನು, ಅತ್ಯುತ್ತಮವಾದದ್ದನ್ನು ಯೋಚಿಸಲಾರದ ಮೆದುಳು ಧರ್ಮದ ಹೆಸರಿನಲ್ಲಿ ಕಾಣಿಸುವ ಎಲ್ಲಾ ತರಹದ ಸಣ್ಣಪುಟ್ಟ ಮೂಢನಂಬಿಕೆಗಳಿಂದ ತನ್ನನ್ನು ವಿಷಯುಕ್ತ ಗೊಳಿಸಿಕೊಳ್ಳುತ್ತಿರುತ್ತದೆ. ಹಾಗಾಗಿ ನಮಗೆ ಇದೆಲ್ಲ ತಿಳಿದಿರಬೇಕು.

ಮೂಢನಂಬಿಕೆಗಳನ್ನು "ನಂಬುವ ಮೂಢರಾಗುವುದರ ಬದಲು ನೀವು ಅತ್ಯುಗ್ರ ನಾಸ್ತಿಕರಾದರೂ ಆದರೆ ಅದರಿಂದ ನನಗೇನೂ ಬೇಜಾರಿಲ್ಲ. ಯಾಕೆಂದರೆ, ನಾಸ್ತಿಕ ಚೈತನ್ಯಶೀಲ; ಅವನನ್ನು ಎಂದಾದರೂ ಬದಲಾಯಿಸಬಹುದು. ಆದರೆ ಈ ಮೌಢ್ಯಗಳು ಆವರಿಸಿಕೊಂಡವೆಂದರೆ ಬುದ್ಧಿ ಹೊರಟೇ ಹೋಯಿತು; ಮತಿ ದುರ್ಬಲವಾಯಿತು; ಜೀವನವನ್ನು ಕೊಳೆಯುವಿಕೆ ಅಮರಿಕೊಂಡು ಕೊಳೆಸಲಾರಂಭಿಸಿಬಿಟ್ಟಿತು.

"ಓ ಧೀರನೆ, ಕೆಚ್ಚಿನ ಮನುಷ್ಯನೆ, ನಮಗೆ ಬೇಕಿರುವುದು ರಕ್ತದಲ್ಲಿ ಅಪರಿಮಿತವಾದ ಚೈತನ್ಯ, ನರಗಳಲ್ಲಿ ಭೀಮಬಲ, ಕಬ್ಬಿಣದ ಮಾಂಸಖಂಡಗಳು, ಮತ್ತು ಎಂದಿಗೂ ಎದೆಗುಂದದ ಉಕ್ಕಿನಂತಹ ಸ್ಥೈರ್ಯವೇ ಹೊರತು, ದುರ್ಬಲವಾದ, ತುಚ್ಛವಾದ ಆಲೋಚನೆಗಳಲ್ಲ. ಅಂತಹ ತುಚ್ಛ, ಕೀಳು ಆಲೋಚನಗಳನ್ನೆಲ್ಲವನ್ನೂ ನಿರಾಕರಿಸಿ. ಎಲ್ಲಾ ತರಹದ ಮೂಢನಂಬಿಕೆಗಳನ್ನು ನಿರಾಕರಿಸಿ. ಎಲ್ಲಾ ತರಹದ ಮೌಢ್ಯಗಳಿಂದ ಕಳಚಿಕೊಳ್ಳಿ. ಧೈರ್ಯವಂತರಾಗಿ; ಸ್ವತಂತ್ರರಾಗಿ.

"ಮೌಢ್ಯತೆ ಮಾನವನ ಅತಿ ದೊಡ್ಡ ಶತ್ರು. ಆದರೆ ಈ ಮತಾಂಧತೆ ಮತ್ತು ಅಸಹಿಷ್ಣುತೆ ಅದಕ್ಕಿಂದ ದೊಡ್ಡ ಶತ್ರು."

ಹಿಂದೂ ಮತದ ಬಗ್ಗೆ, ಉಪನಿಷತ್ತುಗಳ ಬಗ್ಗೆ, ಭಾರತೀಯ ಜೀವನದರ್ಶನದ ಬಗ್ಗೆ ಅಪಾರ ಹೆಮ್ಮೆ ಹೊಂದಿದ್ದ ಕುವೆಂಪುರವರು ಮತ್ತು ವಿಶ್ವವಿಖ್ಯಾತ ಸನ್ಯಾಸಿ ವಿವೇಕಾನಂದರು ಹೇಳಿದ ಮಾತುಗಳ ಹಿನ್ನೆಲೆಯಲ್ಲಿ ಈಗ ಕರ್ನಾಟಕದ ವರ್ತಮಾನವನ್ನು ಗಮನಿಸೋಣ. ಆ ಮಹಾಪುರುಷರ ವಿಚಾರಗಳ್ಯಾವುವೂ ಈ ಮತಾಂಧರಿಗೆ, ಶಿಲಾಯುಗದ ಅವಿವೇಕಿಗಳಿಗೆ ಬೇಕಿಲ್ಲ. ಇವರಿಗೆ ಬೇಕಿರುವುದೆಲ್ಲ ವಿವೇಕಾನಂದರ ಧೀರೊದ್ಧಾತ್ತ ನಿಲುವಿನ ಒಂದು ವಿಗ್ರಹ; ಒಂದು ಕ್ಯಾಲೆಂಡರ್ ಪೋಟೊ; ಅವರು ಧಿಕ್ಕರಿಸಿದ ಮೌಢ್ಯ ಕಂದಾಚಾರಗಳು ಮಾತ್ರ. ಹಾಗೆಯೆ, ತಮ್ಮಂತಹುದೇ ಮತಭ್ರಾಂತರ ಪ್ಯಾಂಫ್ಲೆಟ್ ಸಾಹಿತ್ಯ.

ಮೌಢ್ಯತೆ ಮಾನವನ ಅತಿ ದೊಡ್ಡ ಶತ್ರು; ಮತಾಂಧತೆ ಅದಕ್ಕಿಂತ ದೊಡ್ಡ ಶತ್ರು, ಎಂದರು ಸ್ವಾಮಿ ವಿವೇಕಾನಂದ. ಕರ್ನಾಟಕದ ದುರ್ಗತಿ ನೋಡಿ... ಯಾವುದನ್ನು ಮಾನವನ ಎರಡು ಅತಿ ದೊಡ್ಡ ಶತ್ರುಗಳು ಎಂದು ವಿವೇಕಾನಂದರು ಹೇಳಿದರೊ, ಆ ಎರಡೂ ದುಷ್ಟಶತ್ರುಗಳ ಅಡಿಯಾಳಾಗಿ ಹೋಗಿರುವ ಯಡ್ಡಯೂರಪ್ಪ ಇವತ್ತು ಕರ್ನಾಟಕದ ಮುಖ್ಯಮಂತ್ರಿ; ಕ್ಷಮಿಸಿ. ಏಳೇ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ. ಹ್ಞಾಂ.. ಭಾಗ್ಯವೇ... "ಆವರಣ"ವೇ...

ಈಗ ವಿಚಾರ ಮಾಡೋಣ, ಹಿಂದುವಿನ ಸದ್ಯದ ನಿಜ ಶತ್ರು ಯಾರು? ಎಂದು. ತಮ್ಮ ಬಹಿರಂಗ ಕ್ರಿಯೆಗಳಿಂದ ಕರ್ನಾಟಕವನ್ನು ಅಧಿಕೃತವಾಗಿ ಮೌಢ್ಯಕ್ಕೆ ತಳ್ಳಲು ಯತ್ನಿಸಿದ, ಸ್ವಾಮಿ ವಿವೇಕಾನಂದರನ್ನು ಅಡಿಗಡಿಗೆ ಧಿಕ್ಕರಿಸಿದ, ಅವಮಾನಿಸಿದ ಈ ಯಡ್ಡರು ವಿಶ್ವಮಾನವನಾಗುವುದು ಇರಲಿ, ಕನಿಷ್ಠ ಒಳ್ಳೆಯ ಹಿಂದುವಾಗಲಾದರೂ ಯೋಗ್ಯರೆ?


ವಿವೇಕ ನುಡಿಯ ಹಿನ್ನೆಲೆಯಲ್ಲಿ...
ಸ್ವಾಮಿ ವಿವೇಕಾನಂದರು ಅಮೆರಿಕದಲ್ಲಿನ ವಿಶ್ವಧರ್ಮಸಂಸತ್‌ನಲ್ಲಿ ಪಾಲ್ಗೊಂಡದ್ದು 1893 ರಲ್ಲಿ. ಅಲ್ಲಿಗೆ ಹೋಗುವುದಕ್ಕಿಂತ ಮೊದಲು ಅವರು ಭಾರತದಾದ್ಯಂತ ಯಾತ್ರೆ ಕೈಗೊಂಡಿದ್ದರು. ಆ ಸಮಯದಲ್ಲಿ ಕರ್ನಾಟಕಕ್ಕೂ ಬಂದಿದ್ದರು. 1892 ರಲ್ಲಿ ಮೈಸೂರಿನಲ್ಲಿ ಅಂದಿನ ಮಹಾರಾಜರಾಗಿದ್ದ ಒಂಬತ್ತನೇ ಚಾಮರಾಜ ಒಡೆಯರ ಅತಿಥಿಯಾಗಿ ಒಂದೆರಡು ವಾರ ಇದ್ದರು. ಅದೇ ಪರಿಚಯದ ಮೇಲೆ, ಹೆಚ್ಚುಕಮ್ಮಿ ತಮ್ಮದೇ ವಯಸ್ಸಿನವರಾಗಿದ್ದ ಆ ಯುವ ಮಹಾರಾಜರಿಗೆ ಸ್ವಾಮಿ ವಿವೇಕಾನಂದರು 1894 ರಲ್ಲಿ ಅಮೆರಿಕಾದಿಂದಲೆ ಒಂದು ಕಾಗದ ಬರೆಯುತ್ತಾರೆ: "ಪ್ರತಿಯೊಂದು ದೇಶವೂ, ಪ್ರತಿಯೊಬ್ಬ ಗಂಡಸೂ, ಪ್ರತಿಯೊಬ್ಬ ಹೆಂಗಸೂ ತಮ್ಮ ಆತ್ಮೋದ್ಧಾರವನ್ನು ತಾವೇ ಸಂಪಾದಿಸಿಕೊಳ್ಳಬೇಕು. ಅವರಲ್ಲಿ ಆಲೋಚನೆಗಳನ್ನು ತುಂಬುವುದಷ್ಟೇ ಅವರಿಗೆ ನಾವು ಮಾಡಬೇಕಿರುವ ಸಹಾಯ. ಮಿಕ್ಕದ್ದು ತಾನೇ ತಾನಾಗಿ ಆಗುತ್ತದೆ. ಓ ನನ್ನ ಉದಾತ್ತ ಗುಣದ ರಾಜಕುಮಾರನೆ, ಈ ಜೀವನದ ಆಯಸ್ಸು ಬಹಳ ಕಮ್ಮಿ; ಈ ಪ್ರಪಂಚದ ದುರಹಂಕಾರ ಮತ್ತು ಒಣಪ್ರತಿಷ್ಠೆಗಳು ಬಹಳ ಅಸ್ಥಿರ, ಅಶಾಶ್ವತ. ಆದರೆ ಯಾರು ಇನ್ನೊಬ್ಬರಿಗಾಗಿ ಜೀವಿಸುತ್ತಾರೊ ಅವರು ಮಾತ್ರ ಬದುಕಿರುತ್ತಾರೆ. ಮಿಕ್ಕವರು ಬದುಕಿರುವುದಕ್ಕಿಂತ ಹೆಚ್ಚಾಗಿ ಸತ್ತೇ ಇರುತ್ತಾರೆ."

ಲೇಖನದ ವಿಡಿಯೊ ಪ್ರಸ್ತುತಿ - ಭಾಗ 2

ಈಗಿನ ವಿರೋಧಾಭಾಸ ನೋಡಿ: ಏಳೇ ದಿನಗಳಲ್ಲಿ ಮಾಜಿಯಾಗಿಬಿಟ್ಟ ಕರ್ನಾಟಕದ ಇತ್ತೀಚಿನ ಮುಖ್ಯಮಂತ್ರಿ ತಮಗಾಗಿ ಬದುಕುತ್ತ, ತಮ್ಮ ಕುರ್ಚಿಗಾಗಿ ಹೋಮಹವನಗಳನ್ನು, ಪುರಾಣಗಳಲ್ಲಿನ ರಾಜರು ಮಾಡಿಸುತ್ತಿದ್ದಂತೆ ಯಜ್ಞಯಾಗಾದಿಗಳನ್ನು ಮಾಡಿಸಿದರು. ಇವರು ಜನರಲ್ಲಿ ಅಧಿಕೃತವಾಗಿ ತುಂಬಲು ಯತ್ನಿಸಿದ ಆಲೋಚನೆಗಳೆಲ್ಲ ಮೌಢ್ಯವನ್ನು ಹೆಚ್ಚಿಸುವ ಆಲೋಚನೆಗಳೆ. ಬದುಕುತ್ತಿರುವುದು ತಮಗಾಗಿ; ತುಂಬುತ್ತಿರುವುದು ತುಚ್ಛ ಆಲೋಚನೆಗಳು. ವಿವೇಕಾನಂದರಿಗೆ, ಅವರ ಪ್ರಭಾವಕ್ಕೊಳಗಾಗಿದ್ದ ಮೈಸೂರಿನ ಆ ಯುವ ಮಹಾರಾಜರಿಗೆ ಇವರು ಸಲ್ಲಿಸುತ್ತಿರುವ ಗೌರವವಾದರೂ ಎಂತಹುದು? ಒಂದು ಶ್ರೇಷ್ಠ ಪರಂಪರೆಗೆ ಇವರೆಂತಹ ಉತ್ತರಾಧಿಕಾರಿ? ಇದನ್ನು ಜನರಷ್ಟೇ ಅಲ್ಲ, ಇಂತಹವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಸರ್ಕಾರ ಕಾರು ಕಳುಹಿಸಿತೆಂದು ಹೋಗುವ "ವಯೋ"ವೃದ್ಧರು ನಿಷ್ಠುರವಾಗಿ ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ ಇದು.


ದುರ್ಜನಃ ಸಜ್ಜನೋ ಭೂಯಾತ್ ಸಜ್ಜನಃ ಶಾಂತಿಮಾಪ್ನುಯಾತ್
ಶಾಂತೋ ಮುಚ್ಯೇತ ಬಂಧೇಭ್ಯೋ ಮುಕ್ತಶ್ಚಾನ್ಯಾನ್ ವಿಮೋಚಯೇತ್||

(ದುರ್ಜನರು ಸಜ್ಜನರಾಗಲಿ, ಸಜ್ಜನರಿಗೆ ಶಾಂತಿ ಲಭಿಸಲಿ, ಶಾಂತರು ಬಂಧಮುಕ್ತರಾಗಲಿ, ಮುಕ್ತರು ಇತರರನ್ನೂ ಮುಕ್ತರನ್ನಾಗಿ ಮಾಡಲಿ.)

(ವಿಕ್ರಾಂತ ಕರ್ನಾಟಕ - ನವೆಂಬರ್ 30, 2007 ರ ಸಂಚಿಕೆಯಲ್ಲಿನ ಬರಹ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೆಚ್ಚು ಕಡಿಮೆ ಎಲ್ಲ ರಾಜಕಾರಣಿಳೂ ಹೀಗೇನೇ...
೧> ಎಸ್ಎಮ್ ಕೃಷ್ಣರವರು ವಾಸ್ತುವಿಗಾಗಿ ಲಕ್ಷಗಟ್ಟಲೇ ಖರ್ಚು ಮಾಡಿದ್ದು...
೨> ದೇವೇ ಗೌಡರ ಪರಿವಾರ ಹೋಮಗಳನ್ನು ಮಾಡಿದ್ದು, ದೇವಾಲಯಗಳಿಗೆ ಭೇಟಿ ಕೊಟ್ಟಿದ್ದು, ಜ್ಯೋತಿಷಿಗಳ ಮೊರೆ ಹೋಗಿದ್ದು ಯಾರಿಗೆ ಗೊತ್ತಿಲ್ಲ?
೩> Left ಪಾರ್ಟಿಗಳ ಾಜಕಾರಣಿಗಳೂ ಜ್ಯೋತಿಶಿಗಳ ಬಳಿ ಹೋಗಿರುವ ಉದಾಹರಣೆಗಳಿವೆ.

ಹೀಗೆ ಉದ್ದ ಪಟ್ಟಿ ಬರೀತಾ ಹೋಗ್ಬಹುದು...ಎಲ್ಲ ರಾಜಕಾರಣಿಗಳ ಚರಿತ್ರೆ...

ಖುರ್ಚಿ ಪೂಜೆ ಬಿಡ್ರೀ, ಹಾಗದ್ರೆ ಯಾವುದೇ ಸರ್ಕಾರ ಬರಲಿ/ಮುಖ್ಯ ಮಂತ್ರಿ ಆಗಲಿ, ಯಾಕೆ ಪ್ರತಿ projectಗೂ ಗುದ್ದಲಿ ಪೂಜೆ ಮಾಡ್ತಾರೆ?
ಎರಡು ಒಂದೇ ಆಯ್ತಲ್ವ??? ಅದಕ್ಕ್ಯಾಕೆ ಕಟಕಿ ಆಡಿಲ್ಲ??

Biased ಬರಹ ಯಾರಿಗೂ ಇಷ್ಟ ಆಗಲ್ಲ...ಮುಖ್ಯವಾಗಿ ಲೇಖನದ ಶೀರ್ಷಿಕ ಅಂಥೂ Target ಮಾಡಿರೋ ಹಾಗಿದೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬುದ್ದಿ ಜೀವಿಗಳು, ವಿಚಾರವಾದಿಗಳು ಅನ್ನಿಸಿಕೊಳಲು ಕೆಲವರ ಸುಲಬೋಪಯ ಅಂದರೆ ಹಿಂದುಗಳನ್ನು ಕೀಳಾಗಿ ಬರೆಯೋದು, ಕೋಮುವಾದಿಗಳು ಅಂತ ಹೇಳಿ ತಮಗೆ ಗೊತ್ತಿರುವ ಪಾಂಡಿತ್ಯ ಮೆರೆಯೋದು. ಯಡಿಯುರಪ್ಪ ಪೂಜೆ ಮಾಡಿರೊದೆ ದೊಡ್ಡ ಅಪರಾದದ ತರ ಬರೆದಿದ್ದಾರೆ, ಹೀಗೆಯೆ ಯಡಿಯೂರಪ್ಪ ಅವತ್ತು ತನ್ನ ಕೋಣೆಯಲ್ಲಿ ಇದ್ದ ಅಂಬೇಡ್ಕರ್ ಚಿತ್ರ ತೆಗಿಸಿದರು ಅಂತ ಕೆಲವರು ಯೆನೋಆಗಬಾರದ್ದು ಆಯಿತು ಅನ್ನುವಂತೆ ಗಲಾಟೆ ಮಾಡಿದರು. ನಾನೆನು ಯಡಿಯುರಪ್ಪ ಅಭಿಮಾನಿ ಅಲ್ಲ, ಆದರೆ ನನಗೆ ಡಬ್ಬಲ್ ಸ್ಟಾಂಡರ್ಡ್ ಬೇಸರ ತರಿಸುತ್ತದೆ. ಯಾವ ಪಾರ್ಟಿಯವರು ಪೂಝೇ ಮಾಡ್ಸೊದಿಲ್ಲ. ಮಲ್ಲಿ ಕಾರ್ಜುನ ಖರ್ಗೆ ಕೂಡ ಗ್ರಹ ಮಂತ್ರಿ ಆಗಿರುವಾಗ ವಿಧಾನ ಸೌದದಲ್ಲಿ ಅವರ ಕೊಟಡಿಯಲ್ಲಿ ಪೂಝೆ ಮಾಡಿಸಿದರು.
ಈಬರಹಗಾರ ಮೊನ್ನೆ ಯಾರೊ ಅಮೆರಿಕ ಗೌರ್ನರ್ ಆದರು ಅದಕ್ಕೆ ಇಲ್ಲಿ ಯ ಕಟ್ಟಾ ಹಿಂದುಗಳು ಕುಣಿದರು ಅಂತ ಬರೆದರು ಅದು ಯೆಲ್ಲಿ ಯಾವಾಗ ಅಂತ ಗೊತಾಗಿಲ್ಲ. ಇಂತಾ ಕೇಳಮಟದ ಪ್ರಚಾರ ಮಾಡುವುದು ನಮ್ಮ ಮಾಧ್ಯಮಗಳು.
ಈ ರೀತಿ ಬರೆಯುದರಿಂದ ಕೆಲವು ಕೀಳುಮಟ್ಟದ ಆನಂದ ಲೇಖಕರಿಗೆ ಸಿಗುತ್ತೋ ಏನೋ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಈಬರಹಗಾರ ಮೊನ್ನೆ ಯಾರೊ ಅಮೆರಿಕ ಗೌರ್ನರ್ ಆದರು ಅದಕ್ಕೆ ಇಲ್ಲಿ ಯ ಕಟ್ಟಾ ಹಿಂದುಗಳು ಕುಣಿದರು ಅಂತ ಬರೆದರು ಅದು ಯೆಲ್ಲಿ ಯಾವಾಗ ಅಂತ ಗೊತಾಗಿಲ್ಲ. ಇಂತಾ ಕೇಳಮಟದ ಪ್ರಚಾರ ಮಾಡುವುದು ನಮ್ಮ ಮಾಧ್ಯಮಗಳು."

:)
ಅದನ್ನೂ ಓದಿದೆ...ಬಯ್ಕೊಂಡ್ ಸುಮ್ಮನಾದೆ...
ಈ ಸರತಿ ತಡ್ಕೊಳ್ಳಾಕಾಗಲಿಲ್ಲ...ಈ ಥರ ಲೇಖನಗಳು ನೋಡ್ತಾ ಇದ್ರೆ, ವಿಕ್ರಾಂತ ಕರ್ನಾಟಕ ದ ಬಗ್ಗೆನೂ ಅನುಮಾನ ಬರ್ತಾ ಇದೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎರಡು ಮೂರು ವಾದಗಳನ್ನು ಮಿಕ್ಸ್ ಮಾಡಿ ಬರೆದಿದ್ದೀರಿ. ಯಡಿಯೂರಪ್ಪಾನವರನ್ನು ವಿವೇಕಾನ೦ದರ ಹೆಸರ ಜೊತೆ ಸೇರಿಸ ಬಾರದಾಗಿತ್ತು.
ಯಡಿಯೂರಪ್ಪನವರನ್ನು ಬೈಯುವಾಗ ಕುವೆ೦ಪು, ವಿವೇಕಾನ೦ದರ ನ್ನು ಹೊಗಳಬೇಕಾಗಿಲ್ಲಾ. ಅವರು ಲೋಕ ಪೂಜ್ಯರು.
ಬಹುಶ : ಈ ಮೂರು ಬೇರೆ ಬೇರೆ ಬರಹಗಳನ್ನು ಬರೆಯಬೇಕಾಗಿತ್ತು ಅನ್ಸತ್ತೆ !
೧> ಹಿ೦ಧೂ ಧರ್ಮ ದ ಲ್ಲಯ ಮೂಡ ನ೦ಬಿಕೆಗಳು ಮತ್ತು ಅವನ್ನು ಮೀರಿದ ವ್ಯಕ್ತಿಗಳು + ಅವರ ವಿಚಾರ
೨> ಬಿ ಜೇ ಪಿ ಯ ಸುಳ್ಳು ಧರ್ಮದ ಆಡ೦ಭರ.
೩> ಕರ್ನಾಟಕ ರಾಜಕೀಯದ ಗೊ೦ದಲ.
ಬಿಡಿ ಬಿಡಿಯಾಗಿ ಶಾವಗೆ ಹಿ೦ಡಿದ೦ತೆ ಇರಬೇಕು. ಆಮೇಲೆ ಒಗ್ಗರಣೆ, ಸ್ವೀಟ್ ಮಿಕ್ಸ್ ಮಾಡಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿವೇಕಾನಂದ = ಸೂರ್ಯ
ಯಡ್ಡಯೂರಪ್ಪ = ಮು೦ಬತ್ತಿ ದೀಪ. (ಹೊಗೆ ಜಾಸ್ತಿ)
ಎಲ್ಲಕ್ಕು ತಮ್ಮ ತಮ್ಮ ಮಿತಿಗಳಿವೆ ! ಮು೦ಬತ್ತಿ ಸೂರ್ಯನಷ್ಟು ಬೆಳಕು ಕೊಟ್ಟಿಲ್ಲಾ ಅ೦ತಾ ಬೈಯುವುದಕ್ಕೆ ಆಗುತ್ತೋ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರವಿಯವರೇ,
ಈ ನುಡಿ ನೋಡಿ ಬ್ಯಾಸರ ಆತರೀ,,,
ಎಷ್ಟೊಂದು ಹೋಮಗಳು; ಯಜ್ಞಗಳು; ಯಾಗಗಳು; ಪೂಜೆಗಳು; ವ್ರತಗಳು; ಮೌನವ್ರತಗಳು; ಶಕುನಗಳು; ಆಶೀರ್ವಾದಗಳು; ದೇವಾಲಯ ಸಂದರ್ಶನಗಳು; ದೈವಕ್ಕೆ ಪೂಜೆ; ಯಾವುದಕ್ಕೂ ಇರಲೆಂದು ದೆವ್ವಕ್ಕೂ ಪೂಜೆ.. ಇವೆಲ್ಲವೂ ಏನಕ್ಕಾಗಿ? ಜನರ ಕ್ಷೇಮಕ್ಕಾಗಿ ಎನ್ನುತ್ತಾರಲ್ಲ ಈ ಎರಡು ನಾಲಿಗೆಯ ವಚನಭ್ರಷ್ಟರು! ತಮ್ಮ ವೈಯಕ್ತಿಕ ಅಧಿಕಾರ ಲಾಲಸೆಗಾಗಿ ಮಾಡಿದ ಈ ತುಚ್ಛ, ನಿರ್ಲಜ್ಜ ಕಂದಾಚಾರಗಳನ್ನು ಜನಸಾಮಾನ್ಯರ ಹಿತಕ್ಕಾಗಿ ಎನ್ನುತ್ತಾರಲ್ಲ, ಯಾವ ಸಂಸ್ಕೃತಿ ಇವರದು?

ನೀವು ಕರ್ಚಿಗಾಗಿ ಹೋಮ ಮಾಡಿದ್ದಕ್ಕೆ ಆಕ್ಷೇಪಣೆ ಮಾಡ್ರಿ ಒಪಗೊಂತೀನಿ. ಆದರೆ ಮೇಲಿ ಸಾಲು ನೋಡಿ ಬ್ಯಾಸರಾತು. ಪೂಜೆ ಪುನಸ್ಕಾರಗಳಿಗೆ ತುಚ್ಛ ನಿರ್ಲಜ್ಜ ಅನ್ನೋ ಪದ ಬಳಸೀರಲ್ಲಾ ನಿಮ್ಮದ್ಯಾವ ಸಂಸ್ಕೃತಿ?????????
ನಿಮ್ಮವ,
ಗಿರೀಶ ರಾಜನಾಳ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote]ಮಾರನೆಯ ದಿನ ಮತ್ಯಾವನೊ ಮುಖ್ಯಮಂತ್ರಿಯ ಬಾಯಿಗೆ ಏನನ್ನೋ ಹಾಕಿ, 'ಅದನ್ನು ತೆಗೆದುಕೊಂಡು ಹೋಗಿ ಹಿಂದಿನ ದಿನ ಪೂಜೆ ಮಾಡಿದ್ದ ಅದೇ ಕುರ್ಚಿಗೆ ಹೋಗಿ ಉಗಿ,' ಎಂದನಂತೆ![/quote]
ಇದು ಯಡಿಯೂರಪ್ಪನ ಕರ್ಮಕಾಂಡ..ಅದಕ್ಕಿಂತ ನಾಚಿಕೆಗೇಡು ,ಕುರ್ಚಿಯಿಂದ ಕೆಳಗಿಳಿದ ಮೇಲೆ, ’ನಾನು ಸತ್ತರೆ ಅದಕ್ಕೆ ದೇವೇಗೌಡ ಮಾಡಿದ ಮಾಟ, ಮಂತ್ರವೇ ಕಾರಣ’ವೆಂದು ಹೇಳಿದ್ದು ..ತಲೆಯೊಳಗೆ ಏನೂ ಇಲ್ವಾ? ಇಷ್ಟು ವರ್ಷ ರಾಜಕೀಯದಲ್ಲಿದ್ದು, ಏನು ಹೇಳ್ಬೇಕು,ಏನು ಹೇಳಬಾರದು ಅನ್ನೋದು ಗೊತ್ತಿಲ್ವಾ?

ಇಶ್ಟೆಲ್ಲಾ ಆದ ಮೇಲೆ, ಟಿವಿ9 ಮಾತನಾಡಿಸಿದಾಗ,ವಿವೇಕಾನಂದರ ಹೇಳಿಕೆಯೊಂದನ್ನು ಬಳಸಿಕೊಂಡು ತನ್ನನ್ನು ಸಮರ್ಥಿಸಿಕೊಂಡದ್ದು..

ಏನು ಮಾಡಕಾಗೊಲ್ಲ.ಸಿದ್ದರಾಮಯ್ಯನಂತ ಸಿದ್ದರಾಮಯ್ಯನೇ ಧರ್ಮಸ್ಥಳದಲ್ಲಿ ಬರಿ ಮೈಯಲ್ಲಿ ಇರುವ ಚಿತ್ರ(photo) ನೋಡಿದ ಮೇಲೆ, ಈ ಯಡಿಯೂರಪ್ಪನದೇನು !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮೆಲ್ಲಾ ಬುದ್ಧಿ(?)ಜೀವಿಗಳಿಗೂ ಮೂಢನಂಬಿಕೆಗಳನ್ನು ಹೀಗಳೆಯಲು ಸಿಗುವವರು ಹಿಂದೂಗಳೇ! ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗಗಳಾದ ಪೂಜೆ, ಪುನಸ್ಕಾರ, ಹೋಮ ಹವನಗಳನ್ನೇಕೆ ಹೀಗೆಳೆಯುತ್ತಿದ್ದೀರಿ? ಸಂಬಂಧಪಡದ ವಿಷಯಕ್ಕೆ ರಾಮಕೃಷ್ಣಪರಮಹಂಸ, ವಿವೇಕಾನಂದ ಹಾಗೂ ಕುವೆಂಪುರವರನ್ನೇಕೆ ಎಳೆತಂದು ನಿಮ್ಮ ಮೂರ್ಖವಾದವನ್ನು (ನಿಮ್ಮ ಮೂರ್ಖತನವನ್ನೇ ತೋರಿಸುತ್ತಿದ್ದೀರಿ) ಮಂಡಿಸುತ್ತಿದ್ದೀರಿ? ನಿಮ್ಮ ಅಹಂಕಾರಕ್ಕೆ ಮಿತಿಯೇ ಇಲ್ಲವಾಗಿದೆ. ತಮಗದರಲ್ಲಿ ನಂಬಿಕೆಯಿಲ್ಲದಿದ್ದರೆ ನೀವದನ್ನು ಆಚರಿಸಬೇಡಿ. ಮೊದಲಾಗಿ ನೀವೇನು ಸಾಧನೆ ಮಾಡಿ ಇವುಗಳನ್ನು ಕಂಡುಕೊಂಡಿದ್ದೇರೆಂಬುದನ್ನು ತಿಳಿಸಿ. ಅಷ್ಟಕ್ಕೂ ನಿಮ್ಮನ್ಯಾರೂ ಇವುಗಳನ್ನು ಆಚರಿಸಲು ಒತ್ತಾಯಪಡಿಸುವುದೂ ಇಲ್ಲ. ತಮ್ಮ ಕೋಳಿ ಕೂಗದಿದ್ದರೆ ಬೆಳಗಾಗುವುದಿಲ್ಲವೇ? ನೀವು ಬರೀ ಮಾಧ್ಯಮಗಳಲ್ಲಿ ಬಂದ ವಿಚಾರಗಳನ್ನೇ ಇಡಿದು ಏನೇನೋ ಕಾಡುಹರಟೆಯೊಡೆಯುತ್ತಿದ್ದೀರಿ. ರಾಮಕೃಷ್ಣರೆಂದರು "ಯಾರು ಎಲ್ಲಿ ಕೈಮುಗಿಯುತ್ತಾರೋ ಅಲ್ಲಿ ಕೈಮುಗಿ!".
ರಾಮಕೃಷ್ಣ ಜಯಂತಿ, ವಿವೇಕ ಜಯಂತಿ ಮುಂತಾದವುಗಳೆಲ್ಲವುಗಳಲ್ಲೂ ರಾಮಕೃಷ್ಣಮಠದವರು (ವಿವೇಕಾನಂದರೇ ಪ್ರತಿಯೊಂದು ನಿಯಮಗಳನ್ನೂ ಮಾಡಿ ಸ್ಥಾಪಿಸಿದ ಸಂಸ್ಥೆ) ಹೋಮಹವನ ಮಾಡುವುದು ತಮಗೆ ತಿಳಿದಿದೆಯೇ? ಎಂದಾದರೂ ತಾವು ರಾಮಕೃಷ್ಣರ ಹಾಗೂ ವಿವೇಕಾನಂದರ ಸಂಪೂರ್ಣ ಜೀವನಚರಿತ್ರೆಯನ್ನೋದಿದ್ದೀರೋ ಹೇಗೆ? ಇವರಿಬ್ಬ ಮಹಾಮಹಿಮರೂ ತಮ್ಮ ಮರಣವನ್ನು ಪಂಚಾಗವನ್ನು ನೋಡಿಯೇ (ನೀವೇಳುವ ಮುಹೂರ್ತ!) ನಿರ್ಧರಿಸಿದ್ದುದು ತಮಗೆ ತಿಳಿದಿದೆಯೇ? ತಮ್ಮಂತಹ ಡಾಂಭಿಕರಿಂದಾಗಿಯೇ ನಮ್ಮ ಸಮಾಜವು ಈ ರೀತಿಯಾಗಿರುವುದು.
ರಾಜಕೀಯದ ಬಗ್ಗೆ ಮಾತಾಡುವುದಾದರೇ ಅದನ್ನಷ್ಡೇ ಬೊಗಳಿ. ಯಾವುದೇ ರಾಜಕೀಯಕ್ಕೂ ಒಳಪಡದ ಮಹಾಮಹಿಮರ ಪುರಾಣವನ್ನೇಕೆ ತೆಗೆದಿದ್ದೀರಿ?
ಮೈಯ್ಯಲ್ಲಿ ಎಚ್ಚರವಿರಲೀ!
ತಮ್ಮಂತಹ ಬುದ್ಧಿ(?)ಜೀವಿಗಳಿಗೆ ಧಿಕ್ಕಾರ! ಧಿಕ್ಕಾರ! ಧಿಕ್ಕಾರ!

ಈ.ನಾ.ಕೇಸರ್ಕರ್‍

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಡೆಯೂರಪ್ಪನವರು.... ವಿವೇಕಾನಂದರ ಹೆಸರನ್ನು ಬಳಸುವುದಕ್ಕಿಂತ ...ಹೆಚ್ಚು ಬಳಸಿರುವುದು ಬಸವಣ್ಣನವರ ಹೆಸರು. ಎಲ್ಲೋ ಒಂದು ಕಡೆ ದುರ್ಬಳಕೆಯೂ ನಡೆದಿದೆ ಅನ್ನಿಸಿದೆ. ಬಹುಶ ಬಸವಣ್ಣ ಅರ್ಥ ವಾಗಿದ್ದರೆ ಈ ಹೋಮ-ಹವನಗಳಿಗೆ ಅವರು ನಿಜವಾಗಿಯೂ ಹೋಗುತ್ತಿರಲಿಲ್ಲ. ನಾವು ಯಾರ ಹೆಸರು ಬಳಸಿ ಲಾಭ ಮಾಡಿಕೊಳ್ಳಲು ಬಯಸುತ್ತೆವೆಯೋ ಅವರೆಲ್ಲರೂ ನಮಗೆ ಅರ್ಥ ಆಗ್ಲೆಬೇಕೆಂದೇನೂ ಇಲ್ಲ.

ನನ್ನ ಪ್ರಕಾರ ಈ ಯಜ್ಞ - ಯಾಗಾದಿಗಳು ಅಗ್ನಿಯ ಆರಾಧಕ ಸಂಸ್ಕೃತಿಯ ಒಂದು ಆಚರಣೆ. ಈ ಯಜ್ಞ-ಹೋಮಗಳಿಗೆ ಇತ್ತೀಚೆಗೆ ಅದೆಷ್ಟೇ ಹೊಸ ಅರ್ಥ-ವಿವರಣೆಗಳು ಬಂದಿರಲಿ, ಅವು ಒಂದು ಆಚರಣೆ ಅಷ್ಟೆ. ನಂಬಿಕೆ ಅಷ್ಟೆ. ಈ ನಂಬಿಕೆ ಯಾವಾಗಲೂ ವೈಯಕ್ತಿಕ. ಅಂಥ ವೈಯಕ್ತಿಕ ಆಚರಣೆಗಳಿಗೆ ಈ ಮಾಧ್ಯಮದವರು ಹೆಚ್ಚಿನ ಪ್ರಾಮುಖ್ಯತೆ ಕೊಟ್ಟರಷ್ಟೇ.

ಎಲ್ಲ ನಂಬಿಕೆಗಳೂ ಮೂಡ ನಂಬಿಕೆಗಳೇ ಬೇರೆ ಬೇರೆ ದೃಷ್ಟಿ ಕೋನಗಳಲ್ಲಿ. ಆಗಂತ ಎಲ್ಲ ನಮ್ಬಿಕಗಳನ್ನೋ ನಿಷೇಧಿಸಿದರೆ ಮುಂದೊಮ್ಮೆ ಬಾಳ ಯಡವತ್ಟು ಆಗಬಹುದು.

ಸವಿತೃ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.