ವಿಜಯ ಕರ್ನಾಟಕದ ಹೊಗಳು ಭಟ್ಟರು: ಭಾಗ - 3

0

ಇದೇ ವಿಷಯದ ಮೇಲಿನ ಭಾಗ - 1 ಮತ್ತು ಭಾಗ - 2 ನ್ನು ನೋಡಿರುವ ಕೆಲವು ಭಕ್ತರು ಅಪಾರ ಕಿರಿಕಿರಿಗೆ ಒಳಗಾಗಿದ್ದಾರೆ. ಕೇವಲ ದ್ವೇಷ, ರೋಷ ಮತ್ತು ಅಸಹನೆಯಿಂದ ಕುದಿಯುವ ಕೆಲವರಿಗೆ ತಾವು ಎಷ್ಟು ಮಾತ್ರದ ಅಜ್ಞಾನಿಗಳು ಎನ್ನುವ ತಿಳಿವಳಿಕೆಯೂ ಇದ್ದಂತಿಲ್ಲ. ಒಂದು ಸಂಚಿಕೆಯ ದಿನಾಂಕ ಕೊಟ್ಟರೂ ಅದು ಹೊರಬರುವ ದಿನ ಯಾವುದಿರಬಹುದು ಎನ್ನುವ ಜ್ಞಾನವೂ ಇಲ್ಲ. ತಿಳಿದುಕೊಳ್ಳಬೇಕು ಎನ್ನುವ ಯಾವೊಂದು ಕುತೂಹಲವಾಗಲಿ, ಸತ್ಯದ ಬಗ್ಗೆ ಗೌರವವಾಗಲಿ ಇಲ್ಲದ ಅಹಂಕಾರಿಗಳಿಗೆ ಏನು ಹೇಳಿದರೂ ವಿವೇಚನೆ ಬರುವುದಿಲ್ಲ. ತಮ್ಮ ಸ್ವಯಂಕೃತಾಪರಾಧದಿಂದ, ಸ್ವ-ಇಚ್ಚೆಯಿಂದ, ಅಜ್ಞಾನದಲ್ಲಿಯೆ ಕಳೆಯುವಂತಹವರ ಬಗ್ಗೆ ಯಾಕೊ ನನ್ನಲ್ಲಿ ಕನಿಕರ ಹುಟ್ಟುತ್ತಿಲ್ಲ.

ಈ ಹೊಗಳಿಕೆಯ ಬಗ್ಗೆ ಒಂದೆರಡು ಬ್ಲಾಗ್‍ಗಳಲ್ಲಿ (ಅಂತರಂಗ ಮತ್ತು Land of Lime) ಪ್ರಸ್ತಾಪವಾಗಿದೆ. ನನಗೂ ಒಂದಿಬ್ಬರು ಹೇಳಿದ್ದೇನೆಂದರೆ, "ನಿಮ್ಮ ಆಭಿಪ್ರಾಯ, ಪ್ರಬುದ್ಧತೆ, ವಿಚಾರ, ಮುಂತಾದವುಗಳ ಬಗ್ಗೆ ಚರ್ಚೆಯಾಗಲಿ. ಅದನ್ನು ಬಿಟ್ಟು ವೈಯಕ್ತಿಕ ನಿಂದನೆ ಯಾಕೆ ಮಾಡುವುದು; ಹಾಗೆ ಆಗಲು ನೀವು ಬಿಡಬಾರದು." ನಮ್ಮ ಸಮಾಜದಲ್ಲಿ, ವಿಶೇಷವಾಗಿ ಇವತ್ತಿನ ಮಾಧ್ಯಮಗಳಲ್ಲಿ ಅಷ್ಟು ಪ್ರಬುದ್ಧತೆ ಇಲ್ಲ ಎನ್ನುವುದು ಗೊತ್ತಿರುವುದೆ. ಕೆಲವೊಮ್ಮೆ ನಾನೆ ಕೆಲವೊಂದು ವಿಷಯದ ಬಗ್ಗೆ ಚರ್ಚೆ ಎತ್ತಿದಾಗ, ಆ ಚರ್ಚೆಯ ವಿಷಯದ ಬಗ್ಗೆ, ನಾನು ಎತ್ತಿರುವ ಅಂಶಗಳ ಬಗ್ಗೆ ಮಾತನಾಡದೆ, ’ಆತನಿಗೆ ಸರಿಯಾಗಿ ಹೇಳಿದ್ದೀಯ’ ಎನ್ನುವ ಸ್ನೇಹಿತರು ನಮ್ಮ ಕಡೆಯೂ ಇದ್ದಾರೆ. ಈ ವಿಷವರ್ತುಲದಿಂದ ನಾವೂ ಸಹ ಹೊರಗೆ ಬರಬೇಕು. ಇಲ್ಲಿ ನಾವು ಧ್ವನಿ ಎತ್ತಬೇಕಿರುವುದು ವ್ಯಕ್ತಿಯ ವಿರುದ್ಧ ಅಲ್ಲ. ಬದಲಿಗೆ ಅಂತಹ ಮನಸ್ಥಿತಿಯ ವಿರುದ್ಧ. (ಆದರೂ, ಮನಸ್ಥಿತಿಯ ಬಗ್ಗೆ ಮಾತನಾಡುವಾಗ ಕೆಲವೊಮ್ಮೆ ವ್ಯಕ್ತಿಯ ಬಗ್ಗೆಯೂ ಮಾತನಾಡುವ ಅಗತ್ಯವನ್ನು ನಾವು ನಿರಾಕರಿಸುವುದು ಕಷ್ಟ.)

ಈ ಕೆಳಗಿನ ಲೇಖನ ಏಪ್ರಿಲ್ 4 ರಂದು ಮಾರುಕಟ್ಟೆಗೆ ಬಂದ "ಗೌರಿ ಲಂಕೇಶ್" ಪತ್ರಿಕೆಯಲ್ಲಿ ಪ್ರಕಟವಾಗಿದೆ. ಬರೆದಿರುವವರು ಉಡುಪಿಯ ಜಿ. ರಾಜಶೇಖರ್. "ಚುನಾವಣೆಯ ಲೆಕ್ಕಾಚಾರದಲ್ಲಿ ನಿಜಕ್ಕೂ ಮಾನಗೆಟ್ಟವರು ಯಾರು?" ಎನ್ನುವ ಬಹುಮುಖ್ಯ ಪ್ರಶ್ನೆಯನ್ನು ಲೇಖಕ ರಾಜಶೇಖರರು ಎತ್ತಿರುವುದರಿಂದ ಅದನ್ನು ಇಲ್ಲಿ ಕೊಡುವುದು ಮುಖ್ಯ ಎಂದು ನನಗನ್ನಿಸಿತು. ಆ ಪತ್ರಿಕೆಯವರ ಅನುಮತಿಯೊಂದಿಗೆ ಆ ಲೇಖನವನ್ನು ಇಲ್ಲಿ ಕೊಡುತ್ತಿದ್ದೇನೆ. ಗೂಗಲ್ ಸರ್ಚ್ ಮಾಡಿದಾಗಲೂ ಸಿಗಲಿ ಎನ್ನುವ ಉದ್ದೇಶದಿಂದ ಒಂದಷ್ಟು ಲೇಖನವನ್ನು ಯೂನಿಕೋಡ್‌ಗೆ ಬದಲಾಯಿಸಿ ಕೊಡುತ್ತಿದ್ದೇನೆ. ಪೂರ್ಣ ಲೇಖನದ .pdf ಇಲ್ಲಿದೆ.

ವಿ.ಕ. ಸಂಪಾದಕರ ‘ಇಮೋಷನಲ್ ಅತ್ಯಾಚಾರಗಳು’

ಲೇಖಕ: ಜಿ. ರಾಜಶೇಖರ

ಅತಿಹೆಚ್ಚು ಸುಳ್ಳು ಹೇಳುವ ಕನ್ನಡ ದಿನಪತ್ರಿಕೆ ಯಾವುದು? ಸ್ಪರ್ಧೆಯ ಮುಂಚೂಣಿಯಲ್ಲಿ ಉದಯವಾಣಿ (ಮಣಿಪಾಲ ಆವೃತ್ತಿ) ಮತ್ತು ವಿ.ಕ. ಇರುವುದರಿಂದ ನಿಖರವಾಗಿ ಹೇಳುವುದು ಕಷ್ಟ. ಎರಡು ಪತ್ರಿಕೆಗಳ ಸಂಪಾದಕರಲ್ಲಿ ಯಾರು ಹೆಚ್ಚು ಸೋಗಲಾಡಿ? ತನ್ನ ಶಂಖ ತಾನೇ ಹೆಚ್ಚು ಊದಿಕೊಳ್ಳುವ ದಾಸಯ್ಯ ಯಾರು? ಈ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟವೇನಲ್ಲ. ಸ್ಪರ್ಧೆಯ ಕಣದಲ್ಲಿ ವಿ.ಕ. ಸಂಪಾದಕ ಒಬ್ಬರೇ ಇದ್ದಾರೆ. ಇನ್ನೊಂದು ಪತ್ರಿಕೆಗೆ ಸಂಪಾದಕ ಇರುವುದು ಹೆಸರಿಗೆ ಮಾತ್ರ. ವಿ.ಕ. ಸಂಪಾದಕರಿಗೆ ಅವರ ಪತ್ರಿಕೆಯ ಹೆಸರಿನಲ್ಲೇ ‘ವಿಜಯ’ ಎಂದು ಇರುವುದಕ್ಕೋ ಏನೋ, ಸೋತವರನ್ನು ಕಂಡರೆ ಎಲ್ಲಿಲ್ಲದ ತಿರಸ್ಕಾರ.

ತಮ್ಮ ದೇವರನ್ನು ಪೂಜಿಸದ, ತಮ್ಮ ಹಾಗೆ ಯೋಚಿಸದ "ಅನ್ಯಮತೀಯ"ರ ಕುರಿತ ದ್ವೇಷ ಪ್ರತಿಪಾದನೆಗೆ ಇವರ ಪತ್ರಿಕೆಯೇ ದಿನನಿತ್ಯದ ಕರಪತ್ರ. ಅತ್ಯಧಿಕ ಪ್ರಸಾರದ ಕನ್ನಡ ದಿನಪತ್ರಿಕೆಯನ್ನು ಫ್ಯಾಸಿಸಂನ ಪ್ರಚಾರಕ್ಕೆ ತೆರವು ಮಾಡಿಕೊಡುವುದರ ಜೊತೆ, ಈ ಸಂಪಾದಕರು ಮೊದಲೇ ಸೋತು ನೆಲಕಚ್ಚಿದವರನ್ನು ಮೆಟ್ಟಿ ತುಳಿದು ಗಹಗಹಿಸಿ ನಗುವ ಫ್ಯಾಸಿಸಂನ ಅಮಾನುಷತೆಯನ್ನೂ ಮೈಗೂಡಿಸಿಕೊಂಡಿದ್ದಾರೆ. ಕಳೆದ ಸೆಪ್ಟಂಬರ್ ತಿಂಗಳಲ್ಲಿ ನಡೆದ ಚರ್ಚ್ ದಾಳಿಗಳ ನಂತರ, ಈ ಸಂಪಾದಕ, ಸತತವಾಗಿ ಒಂದು ತಿಂಗಳ ಕಾಲ, ತನ್ನ ಪತ್ರಿಕೆಯಲ್ಲಿ ಕ್ರೈಸ್ತ ಸಮುದಾಯದ ವಿರುದ್ಧ ನಡೆಸಿದ ದೈವನಿಂದನೆ, ಜನಾಂಗ ನಿಂದನೆ ಮತ್ತು ಅಪಪ್ರಚಾರಗಳ ಅಭಿಯಾನವನ್ನು ನೆನಪಿಸಿಕೊಳ್ಳಿ. ಅನಂತಮೂರ್ತಿ ವಿರುದ್ಧ ವಿಜಯ ಕರ್ನಾಟಕದಲ್ಲಿ ನಡೆದ ಎಸ್‌ಎಂಎಸ್ ವಾಗ್ದಾಳಿಯನ್ನು ನೆನಪಿಸಿಕೊಳ್ಳಿ.

ಪತ್ರಿಕೆಯೊಂದು ತಾನೇ ನಡೆಸುವ ಇಂತಹ ವಾಗ್ವಾದಗಳಲ್ಲಿ ಎದುರಾಳಿ ಅಸಹಾಯಕ ಎಂದು ಗೊತ್ತಿದ್ದೇ ವಿ.ಕ. ಸಂಪಾದಕರು ಅಂತಹವರನ್ನು ನೆಲಕ್ಕೆ ಕೆಡವಿ ಅಟ್ಟಹಾಸದಲ್ಲಿ ನಗುತ್ತಾರೆ. ಈಗ ಈ ಅಲ್ಪನಿಂದ ಇಕ್ಕಿಸಿಕೊಳ್ಳುವ ಸರದಿ ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ರವಿಕೃಷ್ಣಾ ರೆಡ್ಡಿಯವರದ್ದು. ಇದೇ ತಾ. 29.3.09 ರ ಭಾನುವಾರದ ವಿ.ಕ. ಸಂಚಿಕೆಯಲ್ಲಿ ಬರುವ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿರುವ ಜಗದೀಶ್ ರಾವ್ ಕಲ್ಮನೆ ಎಂಬ ಅನಿವಾಸಿ ಕನ್ನಡಿಗನ ಹುಂಬತನದ ಬಗ್ಗೆ ಬರೆದಿದ್ದಾರೆ. ಜೊತೆಗೆ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ಜಯನಗರ ಕ್ಷೇತ್ರದಲಿ ಸ್ಪರ್ಧಿಸಿದ್ದ ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ರವಿ ಕೃಷ್ಣಾ ರೆಡ್ಡಿಯವರನ್ನೂ ತನ್ನ ಮಾತಿನಲ್ಲಿ ಎಳೆದು ತಂದಿದ್ದಾರೆ. ವಿ.ಕ. ಸಂಪಾದಕರ ಬಾಯಿಯ ತಾಂಬೂಲವಾಗಲು ರವಿ ಕೃಷ್ಣಾ ರೆಡ್ಡಿ ಮಾಡಿದ್ದಾದರೂ ಏನು?

  1. ವಿ.ಕ. ಸಂಪಾದಕರ ಅನುಮತಿ ಇಲ್ಲದೆ ರವಿ ಕೃಷ್ಣಾ ರೆಡ್ಡಿ ಅಮೆರಿಕದಿಂದ ಬೆಂಗಳೂರು ಜಯನಗರದವರೆಗೆ ಬಂದು ಅಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿದ್ದು.
  2. ಚುನಾವಣೆಯ ವೆಚ್ಚಕ್ಕೆಂದು ರವಿಕೃಷ್ಣಾ ರೆಡ್ಡಿ ತನ್ನ ಸ್ನೇಹಿತರಿಂದ ಸಂಗ್ರಹಿಸಿದ 4.20 ಲಕ್ಷ ರೂಪಾಯಿಯ ಲೆಕ್ಕವನ್ನು ವಿ.ಕ. ಸಂಪಾದಕರಿಗೆ ಕೊಡದೆ ಇದ್ದದು.
  3. ಆ ಚುನಾವಣೆಯಲ್ಲಿ ರವಿ ಕೃಷ್ಣಾ ರೆಡ್ಡಿ ‘ಎರಡೂ ನೂರು ಚಿಲ್ಲರೆ’ ಮತಗಳನ್ನು ಪಡೆದುಕೊಂಡದ್ದು.

ಈ 'ಅಪರಾಧ'ಗಳ ಪೈಕಿ, ಮೊದಲ ಎರಡಕ್ಕೆ ರವಿ ಕೃಷ್ಣಾ ರೆಡ್ಡಿ ಚುನಾವಣೆ ಆಯೋಗಕ್ಕೆ ಮಾತ್ರ ಉತ್ತರದಾಯಿ. ಉಳಿದವರಿಗೆ ಅವರು ವಿವರಣೆ ನೀಡಬೇಕಾದ ಆಗತ್ಯವಿಲ್ಲ. ವಿ.ಕ. ಸಂಪಾದಕರ ಪ್ರಕಾರ ರವಿ ಕೃಷ್ಣಾ ರೆಡ್ಡಿ ಜಯನಗರ ಕ್ಷೇತ್ರದಲ್ಲಿ 200 ಚಿಲ್ಲರೆ ಮತ ಪಡೆದುಕೊಂಡು ತನ್ನ ಡಿಪಾಜಿಟ್ಟಿನ ಜೊತೆಗೆ ಮಾನವನ್ನೂ ಕಳೆದುಕೊಂಡಿದ್ದಾರೆ. ಆದರೆ ಚುನಾವಣೆಯ ಈ ಲೆಕ್ಕಾಚಾರದಲ್ಲಿ ನಿಜಕ್ಕೂ ಮಾನಗೆಟ್ಟವರು ಯಾರು? ರವಿ ಕೃಷ್ಣಾ ರೆಡ್ಡಿಯೋ, ಜಯನಗರದ ಸುಶಿಕ್ಷಿತ ಮತದಾರ-ಅಥವಾ ವಿ.ಕ. ಸಂಪಾದಕರೋ? ಆ ಕ್ಷೇತ್ರದಲ್ಲಿ ರವಿ ಕೃಷ್ಣಾ ರೆಡ್ಡಿಗೆ ಪ್ರತಿದ್ವಂದ್ವಿಗಳಾಗಿದ್ದ ಎರಡು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಕೋಟಿಗಟ್ಟಲೆ ಹಣ ಖರ್ಚು ಮಾಡಿ, ಅವರಲ್ಲಿ ಒಬ್ಬ ಗೆದ್ದಿದ್ದಾನೆ. ಅವನು ಮಾನಬಿಟ್ಟವನು ಅಥವಾ ಹಾಸ್ಯಾಸ್ಪದ ಮನುಷ್ಯ ಎಂದು ವಿ.ಕ. ಸಂಪಾದಕರಿಗೆ ಖಂಡಿತ ಅನ್ನಿಸಿರಲಿಕ್ಕಿಲ್ಲ. ಯಾಕೆಂದರೆ ಗೆದ್ದವರನ್ನು ಆರಾಧಿಸುವುದು ಹಾಗೂ ಸೋತವರನ್ನು ತಿರಸ್ಕಾರದಲ್ಲಿ ತುಳಿಯುವುದು ವಿ.ಕ. ಪತ್ರಿಕೆಯ ವೃತ್ತಿಮೌಲ್ಯ.

ಆ ಚುನಾವಣೆಗಳಲ್ಲಿ ತಾನು ಯಾಕೆ ಸ್ಪರ್ಧಿಸುತ್ತಿದ್ದೇನೆ ಎಂದು ತನಗೆ ಗೊತ್ತಿರುವ ಎಲ್ಲರಿಗೂ ರವಿ ಕೃಷ್ಣಾ ರೆಡ್ಡಿ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದರು. ಅವರ ಈ ಪ್ರಯತ್ನದಲ್ಲಿ ಪ್ರಾಮಾಣಿಕತೆಯೂ ಇತ್ತು; ಆರ್ತತೆಯೂ ಇತ್ತು. ತನ್ನ ಚುನಾವಣಾ ಪ್ರಚಾರಕ್ಕೆ ಅವರು ಲಭ್ಯವಿರುವ ಎಲ್ಲ ನ್ಯಾಯಯುತ ಹಾಗೂ ಗೌರವಯುತ ಮಾರ್ಗಗಳನ್ನೂ ಅನುಸರಿಸಿದರು. ವಿ.ಕ. ಸಂಪಾದಕರನ್ನು ಭೇಟಿ ಮಾಡಿದ್ದೂ ಚುನಾವಣಾ ಪ್ರಚಾರದ ಅಂತಹ ಒಂದು ಗೌರವಯುತ ವಿಧಾನವಾಗಿತ್ತು. ವಿ.ಕ. ಸಂಪಾದಕ ಈಗ ಅದನ್ನೇ ಆಡಿಕೊಂಡು ನಗುತ್ತಿದ್ದಾರೆ! ನಗಬೇಕಾದ್ದೆ. ದಿ. ಲಂಕೇಶ್ ಹೇಳುತ್ತಿದ್ದ ಹಾಗೆ “ದಗಾಕೋರರ ಜಗತ್ತಿನಲ್ಲಿ ಪ್ರಾಮಾಣಿಕನಾಗಿರುವುದು ಮೂರ್ಖತನ." (ಆದರೆ ತನ್ನ ಈ ಮಾತಿಗೆ ಮೊದಲು ಅವರು “ಪ್ರಾಮಾಣಿಕರ ಜಗತ್ತಿನಲ್ಲಿ ದಗಾಕೋರನಾಗಿರುವುದು ಅನೈತಿಕ" ಎಂದೂ ಹೇಳಿದ್ದರು).

ರವಿ ಕೃಷ್ಣಾ ರೆಡ್ಡಿ ಮತ್ತು ಜಗದೀಶ್ ರಾವ್ ಕಲ್ಮನೆ ಹುಂಬರೇ ಇರಬಹುದು. ಆದರೆ ಚುನಾವಣೆಗೆ ನಿಂತು ಸೋಲುವುದು ಅಪರಾಧವಲ್ಲ; ಅತ್ಯಂತ ಕಡಿಮೆ ಮತಗಳನ್ನು ಪಡೆಯುವುದೂ ಅಪರಾಧವಲ್ಲ. ಚುನಾವಣೆಯಲ್ಲಿ ಗಳಿಸಿದ ಮತಗಳಿಂದ ಅಭ್ಯರ್ಥಿಗಳ ಯೋಗ್ಯತೆ ಅಳೆಯುವುದಂತೂ ಮೂರ್ಖತನವೇ ಸರಿ. ಹಿಂದೆ ಬೆಂಗಳೂರಿನಿಂದ ಲೋಕಸಭೆಗೆ ಸ್ಪರ್ಧಿಸಿದ್ದ ಕವಿ ಗೋಪಾಲ ಕೃಷ್ಣ ಅಡಿಗ ಮತ್ತು ಉತ್ತರ ಕನ್ನಡ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಿವರಾಮ ಕಾರಂತ, ಇಬ್ಬರೂ ಭಾರೀ ಅಂತರದಲ್ಲಿ ಸೋತಿದ್ದರು. ಶಿವರಾಮ ಕಾರಂತರಂತೂ ಅವರ ನಂತರದ ಪ್ರತಿಸ್ಪರ್ಧಿ ಚಲನಚಿತ್ರ ನಟ ಅನಂತನಾಗ್ ಅವರಿಗಿಂತಲೂ ಕಡಿಮೆ ಮತ ಪೆಡದುಕೊಂಡು ಮೂರನೆಯ ಸ್ಥಾನದಲ್ಲಿದ್ದರು. ಹಾಗೆಂದು ವಿ.ಕ.ಸಂಪಾದಕರು ಕನ್ನಡದ ಆ ಇಬ್ಬರು ಧೀಮಂತರ ಮುಖಕ್ಕೂ ಮಂಗಳಾರತಿ ಮಾಡುವವರೋ?

ವಿ.ಕ. ಸಂಪಾದಕರ ಪ್ರಕಾರ ರವಿ ಕೃಷ್ಣಾ ರೆಡ್ಡಿ ಮತ್ತು ಜಗದೀಶ್ ರಾವ್ ಕಲ್ಮನೆ ‘ಲೂಸು’ಗಳು ಹಾಗೂ ಅವರಿಬ್ಬರಿಂದ ವಿ.ಕ. ಪತ್ರಿಕಾ ಸಿಬ್ಬಂದಿ ಸಖತ್ತು ಮನರಂಜನೆ ಪಡೆದುಕೊಂಡಿದೆ. ಚುನಾವಣೆಗಳನ್ನು ಗೆಲ್ಲುವು ದಕ್ಕಾಗಿ ಜನರನ್ನು ಕೊಲ್ಲಲು ಹಿಂದೆಮುಂದೆ ಯೋಚಿಸದ ಮೋದಿ, ಅಧ್ವಾಣಿ ವಗೈರೆಗಳು ಆ ಪತ್ರಿಕೆಯ ಹೀರೋಗಳಾಗಿರುವುದರಿಂದ ವಿ.ಕ.ದ ಸಂಪಾದಕ ಮತ್ತು ಅವರ ಸಿಬ್ಬಂದಿಗೆ ಮನರಂಜನೆ ಒದಗಿಸುವ ಚಟುವಟಿಕೆಗಳ ಕುರಿತು ಯೋಚಿಸಲೂ ಭಯವಾಗುತ್ತದೆ. ವಿ.ಕ. ಸಂಪಾದಕರು ಲೂಸೂ ಅಲ್ಲ, ಮೆಂಟಲ್ ಕೇಸು ಕೂಡ ಅಲ್ಲ ಎಂದೇ ಇಟ್ಟುಕೊಂಡರೂ ಅವರ ಪತ್ರಿಕೆಯಿಂದ ನಮ್ಮಂತಹವರು ಪಡೆಯುವ ಮನರಂಜನೆಯ ಬಗ್ಗೆ ಪ್ರಾಯಶಃ ಅವರಿಗೆ ಗೊತ್ತಿಲ್ಲ. ವಿ.ಕ. ಪ್ರತಿನಿತ್ಯ ಕೋಮುದ್ವೇಷದ ವಿಷವನ್ನು ಎಂತಹ ಹಾಸ್ಯಾಸ್ಪದ ಸುಳ್ಳುಗಳ ಜೊತೆ ಬೆರೆಸಿ, ತನ್ನ ಓದುಗರಿಗೆ ಉಣಬಡಿಸು ತ್ತದೆ ಎನ್ನುವುದಕ್ಕೆ ಒಂದು ಉದಾಹರಣೆ, ವಿ.ಕ. ಸಂಪಾದಕರ ಮೇಲೆ ಹೇಳಿದ ಹೀನ ಅಭಿರುಚಿಯ ಬರಹ ಪ್ರಕಟವಾದ ದಿನ, ಅದೇ ಸಂಚಿಕೆಯ ಇನ್ನೊಂದು ಪುಟದಲ್ಲಿ (ಮಂಗಳೂರು ಆವೃತ್ತಿಯ ಪುಟ 2) ಪ್ರಕಟವಾಗಿರುವ ಈ ವರದಿಯಲ್ಲಿದೆ. ವಿ.ಕ.ದ ಹಸಿಸುಳ್ಳು (ಈ ಘಟನೆಯನ್ನು ವರದಿ ಮಾಡಿದ ಉದಯವಾಣಿಯೂ ಈ ಸುಳ್ಳನ್ನು ರಿಪೀಟ್ ಮಾಡಿದೆ) ಸುದ್ದಿ ಶೀರ್ಷಿಕೆಯಿಂದಲೇ ಪ್ರಾರಂಭವಾಗುತ್ತದೆ....

ಹೀಗೆ ಮುಂದುವರೆಯುವ ಲೇಖನ, ಕೊನೆಗೆ "ವಿ.ಕ. ಸಂಪಾದಕರಂತೂ ಹಿಂದೂ ವೀರರ ಈ ಬಗೆಯ ಹಿಂಸಾಚಾರವನ್ನು ಸಮರ್ಥಿಸುವ ಲೆಕ್ಕಣಿಕೆ ವೀರ. ಅವರಷ್ಟು ಹಾಸ್ಯಾಸ್ಪದ ವ್ಯಕ್ತಿ ಬೇರೆ ಯಾರಿದ್ದಾರು?" ಎನ್ನುವ ಪ್ರಶ್ನೆಯೊಂದಿಗೆ ಮುಗಿಯುತ್ತದೆ.

* ಪೂರ್ಣ ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.

ವಿಜಯ ಕರ್ನಾಟಕದ ಹೊಗಳು ಭಟ್ಟರು: ಭಾಗ - 1

ವಿಜಯ ಕರ್ನಾಟಕದ ಹೊಗಳು ಭಟ್ಟರು: ಭಾಗ - 2

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಈ ಲೇಖನವನ್ನು ಆ ದಿನವೇ ಓದಿದ್ದೆ. ವಿಕ ದಲ್ಲಿ ಈ ರೀತಿಯ 'ಚೀಪ್' ಟೀಕೆಯನ್ನು ಓದಿ ಬೇಜಾರಾಯಿತು.

ಎಸ್ಸೆಮ್ಮೆಸ್ ಗಳನ್ನೂ ಪುಸ್ತಕ ಮಾಡಿ ಮಾರುವ ಭಟ್ಟರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ ?
ತಮಗೆ ಬೇಕಾದವರನ್ನು ತಾರಾಮಾರಿ ಹೊಗಳುವುದು ಬೇಡಾದವರಿಗೆ ಉಗಿಯುವುದು ಎಲ್ಲರಲ್ಲೂ ಇದ್ದದ್ದೇ. ಭಟ್ಟರು ಇದರಲ್ಲಿ ಪರಿಣಿತರು. ತಮಗೆ ಬೇಕಾದವರು ಎಂಬ ಮಾತ್ರಕ್ಕೆ ಟಿ.ಏನ್.ಸೀತಾರಾಂ ರ ಚಿತ್ರವನ್ನು ಹೊಗಳಿದ್ದರು. ಎಂ ಟಿ ಆರ್ ಮಾರಾಟವನ್ನು ಬಹುವಾಗಿ ಮೆಚ್ಚಿಕೊಂಡಿದ್ದರು.
ವಿಜಯ ಸಂಕೇಶ್ವರ ಜೆ ಡಿ ಎಸ್ ಸೇರಿದಾಗ ದೇವೇಗೌಡರ ವಿರುದ್ಧ ಯಾವ ಲೇಖನವೂ ಬರುತ್ತಿರಲಿಲ್ಲ. ಅವರ 'ಕನ್ನಡನಾಡು' ಪಕ್ಷದ ಹಳ್ಳಿ ಹಳ್ಳಿಯ ಪದಾಧಿಕಾರಿಗಳ ಫೋಟೋ ದಿನವೂ ಪ್ರಕಟವಾಗುತ್ತಿದ್ದವು. ಸಂಕೇಶ್ವರರು ಬಿಜೆಪಿ ಯಲ್ಲಿದ್ದಾಗ ಬಿಜೆಪಿ ವಿರುದ್ಧ ಲೇಖನಗಳನ್ನು ಬರೆಯುತ್ತಿರಲಿಲ್ಲ.
ಟೈಮ್ಸ್ ಗ್ರೂಪ್ ನದು ಅಕ್ಷರ ವ್ಯಭಿಚಾರ ಎಂದು ಬಡಕೊಳ್ಳುತ್ತಿದ್ದ ಭಟ್ಟರು ಮತ್ತು ಪ್ರತಾಪ್ ಸಿಂಹ ಇಬ್ಬರೂ ಈಗ ಮೌನಕ್ಕೆ ಶರಣಾಗಿದ್ದಾರೆ. ತತ್ವಕ್ಕಿಂತ ಹೊಟ್ಟೆಪಾಡು ದೊಡ್ಡದಲ್ಲವೇ ?
ಈ ಬಳಗದ ತಲೆಯಲ್ಲಿ ಸರಕೇ ಇಲ್ಲದ ಇನ್ನೊಬ್ಬ ಬರಹಗಾರ ಮಣಿಕಾಂತ್. ಮೊದಮೊದಲು ಸಿಕ್ಕವರನೆಲ್ಲ ಹಿಗ್ಗಾ ಮುಗ್ಗಾ ಹೊಗಳುತ್ತಿದ್ದವರು ಕೊನೆಕೊನೆಗೆ ನಾಗಶೇಖರ್ ರಂತಹ ನಿರ್ದೇಶಕನನ್ನೂ ತಮ್ಮ ವ್ಯಾಪ್ತಿಗೆ ಎಳೆತಂದರು. ಯಾರೋ ಉಗಿದರೆನೋ ಮೇಲ್ ಎಸ್ಸೆಮ್ಮೆಸ್ ಗಳ ಕಥೆಗಳನ್ನು ಅನುವಾದಿಸಿ ಇಡತೊಡಗಿದರು. ಅಲ್ಲೋ ಸರಕು ಖಾಲಿಯಾದಂತೆ ಮಕ್ಕಳ ಜ್ಯೋತಿಷ್ಯವನ್ನೂ ಬರೆಯತೊಡಗಿದರು.

ಹಾಗೆ ನೋಡಿದರೆ ಗೌರಿ ಕೂಡ ಏನು ಸಾಚಾ ಅಲ್ಲ. ಮಲೆಬೇನ್ನುರಿನ ಹಿಂದೂ ಮಸ್ಲಿಂ ಗಲಾಟೆಗೆ ಲಿಂಗಾಯತರು ಮುಸ್ಲಿಂ ಹುಡುಗಿಯರನ್ನು ಅತ್ಯಾಚಾರ ಮಾಡಿದ್ದು ಕಾರಣ ಎಂದು ಅಪದ್ಧ ಮಾತಾಡಿ ವೇದಿಕೆಯ ಮೇಲೆ ಹೇಳಿ ಚಪ್ಪಲಿ ಏಟು ಸವಿದಿದ್ದರು.

ಆಹಾ! ಪತ್ರಿಕೋದ್ಯಮ...!!! ಸಂವಿಧಾನದ ನಾಲ್ಕನೆಯ ಅಂಗ ! ಉದ್ಧಾರವಾಯಿತು ಭಾರತ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ವೈಯಕ್ತಿಕ ಕೆಸರೆರಚಾಟದ ಸರಣಿ ಇಲ್ಲಿಗೇ ಮುಗಿಯಿತೋ ಅಥವಾ ಏಕ್ತಾ ಕಪೂರ್ ಧಾರಾವಾಹಿಗಳ ಥರ ನಿರ೦ತರವೋ? ಓತಿಕ್ಯಾತಕ್ಕೆ ಬೇಲಿ ಸಾಕ್ಷಿ ಅನ್ನೋ ಹಾಗಿವೆ ಈ ಕ೦ತುಗಳು. ಒ೦ದೊ೦ದು ವಾರ ಒಬ್ಬೊಬ್ಬರ ವರಸೆಗಳು. ಭಟ್ಟರ ಬ೦ಡವಾಳವೂ ಗೊತ್ತು. ಗೌರಿಯವರ ಬುದ್ಧಿಜೀವಿಯ ಸೋಗೂ ಗೊತ್ತು. ಮೇಲೆ ಹರ್ಷ ಸಾಕಷ್ಟು ಉದಾಹರಣೆಗಳನ್ನು ನೀಡಿದ್ದಾರೆ. ಜಾತ್ಯಾತೀತತೆಯ ಢಾ೦ಭಿಕತೆಯೊ೦ದಿಗೆ ಒ೦ದು ವೋಟ್ ಬ್ಯಾ೦ಕಿನ ಕಡೆ ಒಬ್ಬರಾದರೆ, ಹಿ೦ದುತ್ವದ ಸೋಗಿನೊ೦ದಿಗೆ ಇನ್ನೊ೦ದು ವೋಟ್ ಬ್ಯಾ೦ಕಿನ ಕಡೆ ಮತ್ತೊಬ್ಬರು. ಅಭಿವೃದ್ಧಿ ಕಾರ್ಯಗಳ ಕುರಿತು ಹೇಳಲೇ ಹಿ೦ಜರಿಕೆ. ಉಧ್ಧಾರ ಮಾಡಿಯೇ ತೀರುತ್ತೇವೆ೦ದು ಗ್ಯಾರ೦ಟಿ ಕೊಡಲು ಯಾರೂ ತಯಾರಿಲ್ಲ. ಈ ರೀತಿ ಅವರಿವರ ಬೆ೦ಬಲ ಅರಸುವುದನ್ನು ಬಿಟ್ಟು ನೀವೇನು ವಿಭಿನ್ನವಾಗಿ ಮಾಡಹೊರಟಿದ್ದೀರ, ಅದರಿ೦ದ ಜನತೆಗೆ ಏನು ಪ್ರಯೋಜನ/ ಒಳ್ಳೆಯದಾಗುತ್ತದೆ೦ದು ಹೇಳಿದರೆ, ಇ೦ಥದೊ೦ದು ವೇದಿಕೆಯ ಸಾರ್ಥಕ ಬಳಕೆಯಾದೀತು.
ಹಾ, ಮರೆತಿದ್ದೆ. ಕೆಲ ಒಳಹರಿವುಗಳನ್ನು ಕ೦ಡುಕೊ೦ಡು ಪ್ರಶ್ನಿಸಿದ್ದೇ ತಪ್ಪೆನ್ನುವ೦ತೆ, ಓದುಗರನ್ನು 'ಭಕ್ತ' 'ಅಜ್ಞಾನಿ' 'ಅಹ೦ಕಾರಿ' ಎ೦ಬ ವಿಶೇಷಣಗಳಿ೦ದ ಸ೦ಭೋದಿಸಿರುವ ನಿಮ್ಮ ಮಾತುಗಳು, ನಿಜವಾಗಿಯೂ ನಿಮ್ಮ ಕೀಳರಿಮೆ, ಅಜ್ಞಾನ ಹಾಗು ಅವಿವೇಕತನವನ್ನು ಪ್ರದರ್ಶಿಸುತ್ತಿರುವುದು ಸುಳ್ಳಲ್ಲ. ನಮ್ಮ ಕನಿಕರವಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನುತಾ, ನನಗೆ ಸಂಪದದ ಬಗ್ಗೆ ಹೆಮ್ಮೆ ಅನಿಸುತ್ತದೆ.
http://sampada.net/blog/asuhegde/14/04/2009/19074

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನುತಾ
ನಾನು ಹೇಳಬೇಕಿದ್ದ ಮಾತುಗಳನ್ನೇ ನೀವು ಹೇಳಿದ್ದೀರಾ.
ಈ ಪುಟದಲ್ಲಿರುವ ಒಳ್ಳೆಯ ಅಂಶವೆಂದರೆ ನಿಮ್ಮ ದಿಟ್ಟ ಪ್ರತಿಕ್ರಿಯೆ ಮಾತ್ರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

well Said Vinuta!

"ಹಾ, ಮರೆತಿದ್ದೆ. ಕೆಲ ಒಳಹರಿವುಗಳನ್ನು ಕ೦ಡುಕೊ೦ಡು ಪ್ರಶ್ನಿಸಿದ್ದೇ ತಪ್ಪೆನ್ನುವ೦ತೆ, ಓದುಗರನ್ನು 'ಭಕ್ತ' 'ಅಜ್ಞಾನಿ' 'ಅಹ೦ಕಾರಿ' ಎ೦ಬ ವಿಶೇಷಣಗಳಿ೦ದ ಸ೦ಭೋದಿಸಿರುವ ನಿಮ್ಮ ಮಾತುಗಳು, ನಿಜವಾಗಿಯೂ ನಿಮ್ಮ ಕೀಳರಿಮೆ, ಅಜ್ಞಾನ ಹಾಗು ಅವಿವೇಕತನವನ್ನು ಪ್ರದರ್ಶಿಸುತ್ತಿರುವುದು ಸುಳ್ಳಲ್ಲ. ನಮ್ಮ ಕನಿಕರವಿದೆ. "

ಇಷ್ಟು ಬರೆದ ಮೇಲೆ ನೀವು "ನೀವೇನು ವಿಭಿನ್ನವಾಗಿ ಮಾಡಹೊರಟಿದ್ದೀರ, ಅದರಿ೦ದ ಜನತೆಗೆ ಏನು ಪ್ರಯೋಜನ/ ಒಳ್ಳೆಯದಾಗುತ್ತದೆ೦ದು " ಕೇಳುತ್ತಿದ್ದೀರಾ?

ಎಲ್ಲ ಪತ್ರಿಕೆಗಳೂ ಅವರಿಗೆ ಬೇಕಾದವರಿಗೆ, ಬೇಕಾದ ಸಿದ್ದ್ದಾಂತಗಳಿಗೆ ಬೆಂಬಲ, ಅಗತ್ಯಕ್ಕಿಂತ ಹೆಚ್ಚು ಪ್ರಚಾರ ನೀಡುತ್ತಾ ಇದ್ದಾರೆ, ಇದಕ್ಕೆ ವಿಜಯ.ಕ ಏನೂ ಹೆಚ್ಚಿಲ್ಲ ಕಮ್ಮಿ ಇಲ್ಲ,
ಆದರೆ ಭಟ್ಟರನ್ನು ಹೊಗಳು ಭಟ್ಟರೆಂದು ಗರಿ ಮೂಡೀಸಿದವರು ಎನು ಮಾಡಿದ್ದಾರೆ , ಮಾಡುತ್ತಾರೆ ಅನ್ನುವುದು ಚೆನ್ನಗಿ ಗೊತ್ತಗುತ್ತಿದೆ ಬಿಡೀ,, ಜನ ನಿರ್ಧರಿಸುತ್ತಾರೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಮ್ಮಾ ವಿನುತಾ ಅವರೇ, ನೀವು ಈ ಒಂದು ಹೋಲಿಕೆ ನೋಡಿ, ಆಮೇಲೆ ಹೇಳಿ.
http://suddimaatu.blogspot.com/2009_03_01_archive.html

ಪ್ರೀತಿಯಿಂದ
ಸಿ ಮರಿಜೋಸೆಫ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನೂ ವಿಶೇಷ ಇಲ್ಲ.. ೩ ಘಂಟೆ ಸಿನೆಮ ದ ೧೦ ನಿಮಿಷದ ಟ್ರೈಲರ್ ಇದ್ದ ಹಾಗೆ ಮೇಳಿನ ಕೋಂಡಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ೦ಭೋದಿಸುವಾಗ ಮಾತುಗಳಲ್ಲಿ ಹಿಡಿತವಿರಲಿ ಶ್ರೀಯುತ ಮರಿಜೋಸೆಫ್. ನೀವು ನೀಡಿರುವ ಕೊ೦ಡಿಯನ್ನು ನೋಡಿದ್ದೆ. ಅದರಲ್ಲಿರುವ ವಿಷಯಕ್ಕೂ, ಈ ಬ್ಲಾಗಿನ ಬರಹಗಾರರ ವರಸೆಗೂ ಏನೂ ವ್ಯತ್ಯಾಸ ಇಲ್ಲ. ಅದರ ಬದಲು ಅವರ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರೆ ಮಾತದಾರನಿಗೂ ಆರಿಸುವಲ್ಲಿ ಸಹಾಯವಾದೀತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೈರಿಯ ವೈರಿ ತನಗೆ ಸ್ನೇಹಿತ ಅಂತಾರಲ್ಲಾ ... ಹಾಗೇ ...ಇದೂ ಕೂಡಾ...ಅಷ್ಟೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಮ್ಮಾ ವಿನುತಾ ಅವರೇ,

>>ಸ೦ಭೋದಿಸುವಾಗ ಮಾತುಗಳಲ್ಲಿ ಹಿಡಿತವಿರಲಿ ಶ್ರೀಯುತ ಮರಿಜೋಸೆಫ್.

ಎಂದು ಹೇಳಿದ್ದೀರಿ. ಇದೇಕೆಂದು ನನಗೆ ಅರ್ಥವಾಗಲಿಲ್ಲ. ದಯವಿಟ್ಟು ವಿವರವಾಗಿ ಹೇಳುವಿರಾ?

ಪ್ರೀತಿಯಿಂದ
ಸಿ ಮರಿಜೋಸೆಫ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವೆಷ್ಟೇ ಗೌರವಪೂರ್ವಕವಾಗಿ 'ಅಮ್ಮಾ' ಎ೦ಬ ಪದ ಬಳಸಿದ್ದರೂ, ಪರಸ್ಪರ ಪರಿಚಯವಿಲ್ಲದ ಇಲ್ಲಿ, ಅದು ಆಭಾಸವನ್ನೇ ಸೃಷ್ಟಿಸುವುದು. ಆ ಪದವನ್ನು ತೀರ ಹಿರಿಯರೆನಿಸಿಕೊ೦ಡವರಿಗೆ, ಆಪ್ತರಾದವರಿಗೆ ಮಾತ್ರ ಕರೆಯುವುದು ವಾಡಿಕೆಯೆ೦ದು ನನ್ನರಿವು. ಅದೇನೇ ಇರಲಿ, ಆ ರೀತಿಯ ವಿಶೇಷಣಗಳ ಬಳಕೆ ಬೇಡ. ಕೇವಲ ಹೆಸರಿನ ಸರಿಯಾದ ಬಳಕೆ ಸಾಕು.
ನನ್ನಿ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ನೀವೆಷ್ಟೇ ಗೌರವಪೂರ್ವಕವಾಗಿ 'ಅಮ್ಮಾ' ಎ೦ಬ ಪದ ಬಳಸಿದ್ದರೂ, ಪರಸ್ಪರ ಪರಿಚಯವಿಲ್ಲದ ಇಲ್ಲಿ, ಅದು ಆಭಾಸವನ್ನೇ ಸೃಷ್ಟಿಸುವುದು. ಆ ಪದವನ್ನು ತೀರ ಹಿರಿಯರೆನಿಸಿಕೊ೦ಡವರಿಗೆ, ಆಪ್ತರಾದವರಿಗೆ ಮಾತ್ರ ಕರೆಯುವುದು ವಾಡಿಕೆಯೆ೦ದು ನನ್ನರಿವು. ಅದೇನೇ ಇರಲಿ, ಆ ರೀತಿಯ ವಿಶೇಷಣಗಳ ಬಳಕೆ ಬೇಡ. ಕೇವಲ ಹೆಸರಿನ ಸರಿಯಾದ ಬಳಕೆ ಸಾಕು.<<

ನನ್ನ ಮಗಳನ್ನು ನಾನು ಅಮ್ಮಾ ಎಂದೇ ಕರೆಯುತ್ತೇನೆ. ನನ್ನ ಸಹೋದ್ಯೋಗಿಗಳನ್ನೂ ಅಮ್ಮಾ ಎಂದೇ ಸಂಬೋಧಿಸುತ್ತೇನೆ. ಅವರಲ್ಲಿ ಎಷ್ಟೋ ಮಂದಿ ಕನ್ನಡಿಗರಲ್ಲದಿದ್ದರೂ ಕನ್ನಡಿಗರಾದಿಯಾಗಿ ಯಾರೂ ಕುಸುಕುಸು ಅಂದಿಲ್ಲ. ಇಂಗ್ಲಿಷಿನಲ್ಲಿ ಮಾತನಾಡುವಾಗಲೂ ನಾನು ಅಪ್ರಯತ್ನವಾಗಿ ಅಮ್ಮಾ ಅನ್ನೋ ಪದ ಬಳಸುತ್ತಿರುತ್ತೇನೆ. ಕೆಲವೊಮ್ಮೆ ನನ್ನ ಹೆಂಡತಿಗೂ ಅಮ್ಮ ಎನ್ನುತ್ತೇನೆ. ’ಅಮ್ಮಾ’ ಅನ್ನೋದನ್ನ ಗೌರವಪೂರ್ವಕವಾಗಿಯಲ್ಲದೆ ಪ್ರೀತಿಪೂರ್ವಕವಾಗಿಯೂ ಬಳಸಬಹುದೆಂಬುದು ನನ್ನ ಅರಿವು.

ನಿಮ್ಮ ಹೆಸರಿನ ಸರಿಯಾದ ಬಳಕೆ ಎಂದರೇನು ತಿಳಿಸುವಿರಾ?

ನಿಮ್ಮ ಪರಿಚಯವೇನೂ ಬೇಕಾಗಿಲ್ಲ ಬಿಡಿ.

ಪ್ರೀತಿಯಿಂದ
ಸಿ ಮರಿಜೋಸೆಫ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮರಿಜೋಸೆಫ್ ಅವರೇ, ನೀವು ಹಾಗೆ ಎಲ್ಲರನ್ನು ಕರೀತಿರಿ ಅಂತ ನನಗೆ ಹೇಗೆ ಗೊತ್ತಾಗಬೇಕು? ಅದು ಅಲ್ದೆ ನನಗೆ ಈ ಥರ ಕರೆಸಿಕೊ೦ಡು ಬೇರೆ ಅಭ್ಯಾಸ ಇಲ್ಲ. ಅದಕ್ಕೆ ಅದು ವಿಚಿತ್ರವಾಗಿ ಕಾಣಿಸಿದೆ. ಇಲ್ಲಿ ಎಲ್ಲರೂ ಬರಿ ಹೆಸರಿ೦ದ ಮಾತ್ರ ಕರೆಯೋದಲ್ವ? ಆದ್ರೂ ಮೊದಲನೇ ಸಲಾನೆ ವಿಷಯ ತಿಳೀದೆ ಮಾತುಗಳು ಹಿಡಿತದಲ್ಲಿರಲಿ ಅ೦ದಿದ್ದು ತುಂಬಾ rude ಆಯಿತು ಅನಿಸ್ತಿದೆ. ಕ್ಷಮಿಸಿ. ಇನ್ಮು೦ದೆ ಯಾರಾದ್ರು ಹೀಗೆ ಕರೆದರೆ ತಪ್ಪು ತಿಳಿಯೋಲ್ಲ ಬಿಡಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೋಗ್ಲಿ ಬಿಡಮ್ಮ, ಟೇಮ್ ಸಂದಾಕಿರ್ಲಿಲ್ಲ ಅಂದ್ಕೊಂಡ್ರಾಯ್ತು.

ಪ್ರೀತಿಯಿಂದ
ಸಿ ಮರಿಜೋಸೆಫ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನುತ,
ಈ ಲೇಖನ ನಾನು ಓದಿಲ್ಲ. ಆದರೆ ಮರಿಜೋಸೆಫ್ ರ ಹಾಗೂ ನಿಮ್ಮ ಪ್ರತಿಕ್ರಿಯೆಗಳನ್ನು ಮಾತ್ರ ಓದಿ ಪ್ರತಿಕ್ರಿಯಿಸುತ್ತಿರುವೆ. " ಅಮ್ಮಾ" ಅನ್ನೋ ಪದಕ್ಕೆ ಯಾಕೆ ಹೀಗಾಡ್ತಾ ಇದ್ದಾರೆ! ಅಂತಾ ಯೋಚಿಸ್ತಾ ಇದ್ದೆ. ಅಷ್ಟರೊಳಗೆ ಮುಂದಿನ ಪ್ರತಿಕ್ರಿಯಗಳಲ್ಲಿ ಇಬ್ಬರೂ ಸೂಕ್ತವಾಗಿ ಪ್ರತಿಕ್ರಿಯಿಸಿದ್ದೀರಿ. ನೋದಿ ಸಮಾಧಾನ ವಾಯ್ತು. ಹಾಗೇ ನೆನಪಾಯ್ತು " ಅಮ್ಮಾ ಎಂದಾಗ ಏನು ಸಂತೋಶವೂ, ಅಮ್ಮಾ ಎಂದಾಗ ಏನು ಆನಂದವೂ"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರವಿಯವರೇ,

ಮಾತ್ಗಿಂತಾ ಕೆಲ್ಸಾ, ಜನ್ರಿಗೆ ಅನ್ಕೂಲಾನೂ ಮಾಡತ್ತೆ, ನಮ್ಬಗ್ಗೆ/ನಾವ್ಯಾರೂ ಅಂತ್ಲೂ ಹೇಳತ್ವೆ; ಅಲ್ಲ್ವಾ? ಅವ್ರ್ಹಾಗ್ ಹೇಳ್ದ್ರು, ಇವ್ರ್ಹಾಗಂದ್ರು ಎಲ್ಲಾ ಇದ್ದಿದ್ದೇ. ಅವ್ರ್ಗಳಿರ್ರೋದೇ ಹೇಳೋಕ್ಕೆ, ಮಾಡೋಕ್ಕ್ಬರೋರ್ತುಂಬಾ ಕಮ್ಮಿ. ಮುಂದ್ಹೋಗೋಣ ಇವನ್ಬಿಟ್ಟು.

ತಪ್ತಿಳ್ಕೊಳೋಲ್ಲಾ ಅಂದ್ಕೊಂಡಿದೀನಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.