’ನೋ ಚೇಂಜ್ ಕಥೆಗಳು’-೨೩..ಅರ್ಜೆಂಟ್ ಅನ್ನೋದು ಆಗಲೂ ಇತ್ತು !

0

ಅರ್ಜೆಂಟ್ ಅನ್ನೋದು ಆಗಲೂ ಇತ್ತು !

ನೀವು ಹೀಗೆ ಅರ್ಜೆಂಟ್ ಮಾಡಿದರೆ ಹೇಗೆ ರಾಯರೆ ? ಕೆಲಸ ಮಾಡ್ಲಿಕ್ಕೆ ಕೊಟ್ಟಿದ್ದೇ ನಿನ್ನೆ. ಆಗಲೂ ನಿಮಗೆ ಹೇಳಿದ್ದೆ, ಈಗಲೂ ಅದನ್ನೇ ಹೇಳ್ತೇನೆ. ಇದು ಅರ್ಜೆಂಟಿಗೆ ಆಗುವ ಕೆಲಸ ಅಲ್ಲಾ....

ನಿನ್ನೆ ಹೇಳಿದಾಗ, ‘ಸ್ವಲ್ಪ ಕಷ್ಟ -ಆದರೂ ಹೇಗಾದರೂ ಮಾಡಿ ಕೊಡ್ತೇನೆ’ ಅಂತ ಹೇಳಿದ್ದೀರಲ್ಲ. ನಿಮ್ಮ ಮಾತಿನ ಮೇಲೆ ವಿಶ್ವಾಸ ಇಟ್ಟು ಈವತ್ತು ಬಂದಿದ್ದೇನೆ, ಈಗ ಹೀಗೆ ಹೇಳಿದರೆ ಹೇಗೆ ?

ಹೌದು ಹೇಳಿದ್ದೆ. ನೀವು ನನ್ನ ಖಾಯಂ ಗಿರಾಕಿ, ನಿಮ್ಮನ್ನು ಬಿಡ್ಲಿಕ್ಕೆ ಸಾಧ್ಯವಿಲ್ಲಾಂತ. ಆದ್ರೂ ನಿಮ್ಮ ಹಾಗೇ ಇನ್ನೂ ಇಬ್ಬರು ಬಂದ್ರು. ನಿಮಗೆ ಟ್ರಿಪ್ಪಿಗೆ ಹೋಗುವ ಅರ್ಜೆಂಟು -ಅವರಿಗೆ ಮದುವೆಗೆ ಹೋಗುವ ಅರ್ಜೆಂಟು ಇತ್ತು. ಯಾರ ಕೆಲಸವೂ ಆಗಿಲ್ಲ. ಏನು ಮಾಡೋದು ಹೇಳಿ !

ಅದೆಲ್ಲಾ ಈಗ ನನಗೆ ಗೊತ್ತಿಲ್ಲ. ನನಗೆ ಹೇಗಾದರೂ ಮಾಡಿ ಕೊಟ್ಟು ಬಿಡಿ ಮಾರಾಯ್ರೆ.... ನನ್ನ ಮರ್ಯಾದಿ ಪ್ರಶ್ನೆ. ಈ ಮಧ್ಯಾಹ್ನ ಅದು ಆಗಲೇ ಬೇಕು.

ಹಾಗಾದ್ರೆ ಅದನ್ನು ಕೊಡ್ಲಿಕ್ಕೆ ಇಷ್ಟು ದಿವಸ ತಡ ಯಾಕೆ ಮಾಡಿದ್ರಿ ? ಸ್ವಲ್ಪ ಮೊದಲೇ ಕೊಟ್ಟರೆ ಆಗಿ ಹೋಗ್ತಿತ್ತು. ನಿಮ್ಮ ಹಾಗೇ ಬೇರೆಯವರೂ ಅರ್ಜೆಂಟಿನಲ್ಲೇ ಇದ್ದಾರೆ. ಅವರ ಕೆಲಸ ನಾವು ಬಿಟ್ರೆ ನಮ್ಮ ದಿನ ಕಳಿಯೋದು ಹೇಗೆ ?

ಅದೆಲ್ಲ ನನಗೆ ಗೊತ್ತಿಲ್ಲ. ನಾನೇನು ಹೇಳ್ಲಿಕ್ಕೂ ಸಾಧ್ಯವಿಲ್ಲ. ನನಗೆ ಅದು ಈ ಮಧ್ಯಾಹ್ನಕ್ಕೆ ಆಗಲೇ ಬೇಕು. ಈಗ ಹತ್ತಿರ ಚರ್ಚೆ ಮಾಡಿ ಸುಮ್ಮನೆ ಸಮಯ ಕಳೆಯುವ ಬದಲು ಓ ಅವನ ಹತ್ತಿರ ಕೊಟ್ಟು ಬೇಗ ಕೆಲಸ ಮಾಡಿಸಿ. ಇನ್ನು ಅರ್ಧ ಗಂಟೆ ಒಳಗೆ ನನಗೆ ಅದು ಬೇಕೇ ಬೇಕು. ಅಷ್ಟರ ವರೆಗೂ ನಾನು ಇಲ್ಲೇ ಕೂತುಕೊಳ್ತೇನೆ.

ಹ್ಹಾ ! ಇದೊಳ್ಳೆ ಗ್ರಹಚಾರ ಆಯಿತು. ಬೇಡಬೇಡ - ನೀವು ಇಲ್ಲೇ ಕೂತುಕೊಂಡರೆ ನಮಗೆ ಮತ್ತೂ ತೊಂದರೆಯಾಗ್ತದೆ. ನಿಮ್ಮ ಬೇರೆ ಕೆಲಸ ಏನಾದರೂ ಇದ್ದರೆ, ಹೋಗಿ ಮಾಡಿ ಮುಗಿಸಿ ಬನ್ನಿ - ಇನ್ನು ಒಂದು ಗಂಟೆ ಬಿಟ್ಟು. ಅಷ್ಟೊತ್ತಿಗೆ ಹೇಗಾದರೂ ಮಾಡಿ ಇಡ್ತೇವೆ.
.............
ಅದು, ನಮ್ಮ ಬೀಡಿ ಅಂಗಡಿ (ನನ್ನ ಅಂಗಡಿಯಲ್ಲ, ನಾನು ಬೀಡಿ ತೆಗೆದುಕೊಳ್ಳುವ ಅಂಗಡಿ)ಯ ಪಕ್ಕದ ಟೈಲರ್ ಶಾಪ್ನ.ಲ್ಲಿ ನಿನ್ನೆ ಅಲ್ಲ ಮೊನ್ನೆ-ನಡೆದ ಸಂಭಾಷಣೆ. ಬೀಡಿ ಅಂಗಡಿಯ ಬೂಬಣ್ಣನಿಗೂ, ಅಲ್ಲೇ ನಿಂತಿದ್ದ ನನಗೂ ಸ್ಪಷ್ಟವಾಗಿ ಕೇಳಿಸಿದ್ದು.

ಆ ಟೈಲರ್ ಅಂಗಡಿ ಒಳಗೆ ಹೊಕ್ಕರೆ, ಅದೇ ‘ಡೈಲಾಗ್’ ಯಾವಾಗಲೂ ಕೇಳುತ್ತದೆ. ಹೊರಗೆ ನಿಂತಿದ್ದವರಿಗೂ ಕೇಳಿಸುತ್ತದೆ. ಆದ್ದರಿಂದ ಅದು ನನಗೆ ಪರಿಚಿತ.

ಹಿಂದೆ ಒಮ್ಮೆ ನನ್ನ ಒಂದು ಶರ್ಟ್ ಹೊಲಿಗೆಗೆ ಕೊಟ್ಟಿದ್ದಾಗ, ನಾನೂ ಅಂಥದ್ದೇ ಮಾತು ಆಡಿದ್ದೆ. ನನಗೆ ಅಂಥದ್ದೇ‍ಉತ್ತರವೂ ಸಿಕ್ಕಿತ್ತು. ಹೇಳಿದ್ದ ಒಂದು ಗಂಟೆ ಹೊತ್ತಿನ ಬದಲು ಎರಡೂವರೆ ಗಂಟೆ ಹೊತ್ತು ಕಾಯಿಸಿದ ಮೇಲೆ ಶರ್ಟೂ ಸಿಕ್ಕಿತ್ತು. (ನಾನೊ, ಅದು ಸಿಕ್ಕದೆ ಬಿಡುವ ಗಿರಾಕಿ ? ಹೊಲಿಗೆ ಮಾತ್ರ ಹೇಗೇಗೋ ಆಗಿತ್ತು. ಅದು ಬೇರೆ ವಿಷಯ)

ಮೊನ್ನೆಯೂ ಅದೇ ‘ಟೇಪ್’ ಕೇಳಿಸಿದಾಗ,ಹಿಂದಿನ ಎಲ್ಲ ಅನುಭವಗಳೂ ನೆನಪಾದವು. ನಗು ಬಂತು.

ಇದ್ದಕ್ಕಿದ್ದ ಹಾಗೆ ಹ್ಹೆ ಹ್ಹೆ ಹ್ಹೆ ಎಂದ ನನ್ನನ್ನು ಗಾಬರಿಯಿಂದ ನೋಡಿದ ಬೂಬಣ್ಣ “ಏನು ರಾಯರೆ, ನಗಾಡಿದ್ದು?” ಎಂದು ಕೇಳಿಯೇ ಬಿಟ್ಟ. ಈ ಮುದುಕನಿಗೆಲ್ಲಾದರೂ ಗಿರ್ಮಿಟ್ ಶುರುವಾಗಿದೆಯೋ ಹೇಗೆ ಎಂದು ತಿಳಿಯುವ ಕುತೂಹಲ ಅವನಿಗೆ.

ಅಂಥಾದ್ದೇನೂ ಇಲ್ಲ ಬೂಬಣ್ಣ (ಅಂಥಾದ್ದು ಅಂದರೆ ಎಂಥಾದ್ದು ಅಂತ ಅವನಿಗೆ ಅರ್ಥವಾಗಿತ್ತು) ಎಂದೆ. ನಗುವಿನ ಹಿನ್ನೆಲೆ ವಿವರಿಸಿದೆ.

ಈ ಅರ್ಜೆಂಟಿನ ಕಿಟಿಪಿಟಿ ಎಲ್ಲ ಕಡೆಯೂ ಇದ್ದೇ ಇದೆ. ಯಾವಾಗಲೂ ಅದನ್ನು ನಾವು ಅನುಭವಿಸ್ತೇವೆ. ಮತ್ತೆ ಸುಮ್ಮನಾಗ್ತೇವೆ. ಅಲ್ವಾ ರಾಯ್ರೆ ? ಎಂದ ಬೂಬಣ್ಣನನ್ನು ಅಷ್ಟಕ್ಕೇ ಬಿಟ್ಟುಬಿಡಲು ಮನಸ್ಸಾಗಲಿಲ್ಲ.

ಅಂಥಾ ವಿಶೇಷ ಅನುಭವ ಯಾವುದಾದ್ರೂ ಆಗಿದೆಯಾ ನಿನಗೆ ? ಎಂದು (ಸುಮ್ಮನೆ ಇರಲಾರದೆ) ಕೇಳಿಯೇ ಕೇಳಿದೆ.

ಅಂಥದ್ದು ಒಂದಲ್ಲ - ನೂರು ಅನುಭವ ಇದೆ. ನಿಮಗೆ ಕೇಳುವ ಪುರುಸೊತ್ತು‍ಇದ್ದರೆ ಹೇಳ್ಲಿಕ್ಕೂ ನಾನು ರೆಡಿ, ಎಂದ. ಹೇಳಿಯೂ ಹೇಳಿದ.

ಅವನು ಹೇಳಿದ್ದನ್ನು ಅವನ ಮಾತಿನಲ್ಲೇ ವಿವರಿಸಿದರೆ ನಿಮ್ಮಲ್ಲಿ ಕೆಲವರಿಗಾದರೂ ಮುಜುಗರ ಮೂಡಬಹುದು. ಆದ್ದರಿಂದ, ಅದರ ಸಂಕ್ಷಿಪ್ತ ಸಾರ ಮಾತ್ರ ಕೊಡುತ್ತೇನೆ.........

ಸಣ್ಣಪುಟ್ಟ ರೀತಿಯಲ್ಲಿ ನಡೆಯುವ ಹೊಲಿಗೆ ಕೆಲಸ, ಚಿನ್ನದ ಕೆಲಸ ಅಥವಾ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ಇನ್ವಿಟೇಶನ್ ಪ್ರಿಂಟ್ ಮಾಡುವ ಕೆಲಸ - ಯಾವುದಾದರೂ ಸರಿ, ಗಿರಾಕಿಗಳು ಬಂದಾಗ ಮಾತ್ರವೇ ನಡೆಯುತ್ತದೆ. ಅಂಥವರಿಗೆ ಖಾಯಂಆಗಿ ಏನೂ ಕೆಲಸ ಇರುವುದಿಲ್ಲ. ಬಂದರೆ ಒಂದರ ಹಿಂದೆ ಇನ್ನೊಂದು - ಇಲ್ಲವಾದರೆ ಏನೂ ಇಲ್ಲ ಅಂತ ಇರುವುದು ಸರ್ವಸಾಮಾನ್ಯ ಪರಿಸ್ಥಿತಿ. ದೊಡ್ಡ ಬಿಸಿನೆಸ್ನಂವರಾದರೆ ಅದು ಬೇರೆ ಮಾತು.

ಅಂಥದ್ದೊಂದು ದೊಡ್ಡ ಪ್ರೆಸ್ ಮಂಗಳೂರಿನ ಕೊಡಿಯಾಲಬೈಲಿನಲ್ಲಿ ಇತ್ತು. “ಸ್ವಾಮೀ, ನಾಡಿದ್ದು ೩೦ನೇ ತಾರೀಕಿಗೆ ಮದುವೆ - ಇದು, ಎರಡು ಸಾವಿರ ಇನ್ವಿಟೇಶನ್ ಆಗಬೇಕಿತ್ತಲ್ಲ” ಎಂದು ಅವರಲ್ಲಿ ಹೋಗಿ ಹೇಳಿದರೆ ಮುಂದಿನ ೩ನೇ ತಾರೀಕಿಗೆ ಪ್ರಿಂಟ್ ಮಾಡಿ ಕೊಡ್ತೇವೆ. - ಬೇಕಾದರೆ ಮಾಡಿಸಿ, ಎನ್ನುವ ನೌಕರರೂ ಅಲ್ಲಿ ಇದ್ದರು. ಅಂಥಾದ್ದೆಲ್ಲ, ಚರಿತ್ರೆ -ಕಥೆ.

ಆದರೆ -“ಟಿಕೆಟ್ ಎಲ್ಲ ಖಾಲಿಯಾಗಿದೆ. ಮುಂದಿನ ಟ್ರಿಪ್ ಹೋಗಬೇಕಾದರೆ ಟಿಕೆಟ್ ಪ್ರಿಂಟ್ ಮಾಡಿಸಿ ಹಿಡ್ಕೊಂಡು ಬಾ ಅಂತ ಧನಿ ಹೇಳಿದ್ದಾರೆ. ನಾಲ್ಕು ಟಿಕೆಟ್ ಬುಕ್ಕಾದರೂ ಈಗ್ಲೆ ಕೊಡಿ” ಎಂದು ಖಾಯಂ ಆಗಿ ಬಂದು ಹೋಗುವ ಕಂಡಕ್ಟರ್ರದ ನುಡಿ, ಕಂಕನಾಡಿಯ ಒಂದು ಪ್ರೆಸ್ನಿಲ್ಲಿ ಈಗಲೂ ಆಗಾಗ ಕೇಳಿಸುತ್ತದೆ. “ಕೆಲವು ಪುಸ್ತಕವಾದರೂ ಪ್ರಿಂಟ್ ಮಾಡಿ ಇಟ್ಟುಬಿಡಬಹುದಲ್ಲ -ರಗಳೆ ತಪ್ಪುತ್ತದೆ” ಎಂದು ಯಾರಾದರೂ ಸಲಹೆ ಕೊಟ್ಟರೆ, ಆ ಪ್ರೆಸ್ನಲ ಮಾಲಿಕರು ಬೇರೆಯೇ ಕಥೆ ಹೇಳುತ್ತಾರೆ.

ಚಿನ್ನದ ಕೆಲಸದಲ್ಲಿ ಹಾಗೆಲ್ಲ ಗಲಾಟೆ ಆಗುವ ಚಾನ್ಸ್ ಇಲ್ಲ ಅಂತ ತಿಳಿದಿದ್ದೀರಾ ? ಅಲ್ಲಿಯದ್ದೂ ಒಂದು ಸಣ್ಣ ಕಥೆ ನನ್ನ ಹತ್ತಿರ ಇದೆ. ನನ್ನ ತಂಗಿ ಮದುವೆ ನಿಶ್ಚಯ -ಏನೋ ಸಂಬಂಧ ಕೂಡಿ ಬಂತೂಂತ - ಅವಸರದಲ್ಲಿ ಆಯಿತು. ಅಷ್ಟೇ ಅವಸರದಲ್ಲಿ ಒಡವೆ ಮಾಡಿಸಲಿಕ್ಕೆ ಕೊಟ್ಟೂ ಆಯಿತು. ಮಾಡಿಸಲಿಕ್ಕೆ ಕೊಟ್ಟದ್ದು ಆರು ದಿನ ಮೊದಲು, ಅದು ಸಿಕ್ಕಿದ್ದು ಮಾತ್ರ ಮುಹೂರ್ತಕ್ಕೆ ಅರ್ಧ ಗಂಟೆ ಬಾಕಿ ಇರುವಾಗ.

ಇದೆಲ್ಲ ಮಾಮೂಲಿ ಅನುಭವ, ಅಲ್ವಾ ? ಅವರು ಮಾಡುವುದೂ ಒಂದು ಲೆಕ್ಕದಲ್ಲಿ ಸರಿ ಅಂತಲೇ ಕಾಣುತ್ತದೆ. ಅವರಿಗೆ ಒಂದು ಕ್ರಮದಲ್ಲಿ ಕೆಲಸ ಬರುವುದೂ ಇಲ್ಲ - ಬಂದ, ಬರುವ ಕೆಲಸವನ್ನು ಅವರು ಬಿಡುವ ಹಾಗೂ ಇಲ್ಲ. ಹಾಗೆ, ಇಂತಿಷ್ಟು ದಿವಸ ಕಳೆದು ಬನ್ನಿ ಅಂತ ಕೆಲಸ ಕೊಟ್ಟವರಿಗೆ ಹೇಳೋದಿಕ್ಕೆ ಅದೇನು ರಿಜಿಸ್ಟ್ರಿ ಆಫೀಸಾ ? ಅಥವಾ, ಕೆಲಸ ಮಾಡಿಸುವವರಿಗೆ ಮೊದಲೇ ಎಲ್ಲ ಲೆಕ್ಕಾಚಾರ ಹಾಕಿ ಕೆಲಸ ಮಾಡಿಸ್ಲಿಕ್ಕೆ ಸಾಧ್ಯವಾದರೂ ಆಗ್ತದಾ ?

ಇದೆಲ್ಲ ‘ಪಿರಾಕ್’ನಿಂದಲೂ ನಡೆದು ಬಂದ ರಿವಾಜು. ಅದು ಈಗ ಬದಲಾಗಬೇಕೂ ಅಂದರೆ ಹೇಗೆ ಸಾಧ್ಯ ? ಅಲ್ವೊ ರಾಯರೆ ?

“ನಿಜ ಬೂಬಣ್ಣ. ನೀನು ಈಗ ಹೇಳಿದ ಮಾತನ್ನೇ ನಾನೂ ಹೇಳುತ್ತಾ ಬಂದಿದ್ದೇನೆ. ಹಾಗೆ ನೋಡಿದರೆ, ಅಂಥಾ ಯಾವ ತೊಂದರೆಯೂ ಇಲ್ಲದೆ ನಡಿಯುವ ವ್ಯವಹಾರ ನಿನ್ನಂಥವರದು ಮಾತ್ರ ಅಂತ ಕಾಣುತ್ತದೆ. ಸರಿಯೋ?”

ನನ್ನ ವಹಿವಾಟಿನ ಕಥೆ ಕೇಳ್ಬೇಡಿ. ಅದನ್ನು ಇನ್ನೊಮ್ಮೆ ಹೇಳ್ತೇನೆ, ಈಗ ನೀವು ಮನೆಗೆ ಹೋಗಿ ಎಂದ ಬೂಬಣ್ಣ ನನ್ನನ್ನು ಕಳುಹಿಸಿದ.
----
ಹೊಸಸಂಜೆ ಪತ್ರಿಕೆಗಾಗಿ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಇಪ್ಪತ್ಮೂರನೇ ಅಂಕಣ.
----

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.

ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.
----

ಶೀರ್ಷಿಕೆಯ ೧೯೯೧ರ ವರ್ಣಚಿತ್ರ :

ಕುಟುಂಬದ ಸಮಾರಂಭದಲ್ಲಿ ಪಾಲ್ಗೊಂಡ ತಮ್ಮ ಭಾವ ನೆಂಟ ಶ್ರೀ.ನೂಜಿಬೈಲು ಗೋಪಾಲ್ ಭಟ್ ಜೊತೆ ಶ್ರೀ.ಪ.ಗೋ.
----
ಕೃಪೆ: ಗಲ್ಫ್ ಕನ್ನಡಿಗ
ಲಿಂಕ್ : http://www.gulfkannadiga.com/news-7943.html

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.