’ನೋ ಚೇಂಜ್ ಕಥೆಗಳು’ -- ೨೦...ನಿಮ್ಮನ್ನೇ ರಿಪೇರಿ ಮಾಡುವವರು !

5

ಹೊಸಸಂಜೆ ಪತ್ರಿಕೆಗಾಗಿ ಹೆಸರಾಂತ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಇಪ್ಪತ್ತನೇ ಅಂಕಣ.

ನಿಮ್ಮನ್ನೇ ರಿಪೇರಿ ಮಾಡುವವರು !

ನಿನ್ನೆಯಲ್ಲ ಮೊನ್ನೆ, ಹೆದ್ದಾರಿ ಪೂರ್ತಿ ಇದ್ದ ಹೊಂಡಗಳನ್ನೆಲ್ಲ ತಪ್ಪಿಸಿಕೊಂಡು ನಡೆದು ಹೋಗಲು ಪ್ರಯತ್ನಿಸುತ್ತಾ ಇದ್ದೆ. ತಲೆ ಎತ್ತಿ ನಡೆಯಲು ಸಾಧ್ಯವಿರಲಿಲ್ಲ. ಮಾರ್ಗದಲ್ಲಿ ‘ಹಾರಾಡುವ’ ಬಸ್ಸು ಕಾರು, ಸ್ಕೂಟರ್, ಬೈಕುಗಳ ಎಡೆಯಲ್ಲಿ ಸಿಕ್ಕಿ ಹಾಕಿಕೊಳ್ಳದೆ ಜೀವಸಹಿತ ಮನೆಗೆ ಹಿಂದಿರುಗಬೇಕಾಗಿತ್ತು. ಹಾಗಾಗಿ, ನಿಧಾನವಾಗಿ ಹೋಗುತ್ತಾ ಇದ್ದೆ.

ಇದ್ದಕ್ಕಿದ್ದ ಹಾಗೆ ಬಹಳ ಸಮೀಪದಿಂದ ಕಿಲಕಿಲ ನಗು ಕೇಳಿಸಿತು. ನಕ್ಕದ್ದು ಖಂಡಿತವಾಗಿಯೂ ಯಾರೋ ಹುಡುಗಿ ಎಂದು ನನ್ನ ಮುದಿಕಿವಿ ಕೂಡಾ ಪತ್ತೆ ಹಚ್ಚಿತು. “ಯಾರಾದರೂ ಇರಲಿ, ನನಗೇನು?” ಎಂದುಕೊಂಡೆ: ಬಗ್ಗಿಸಿದ ಕತ್ತೆತ್ತದೆ ನಡಿಗೆ ಮುಂದುವರಿಸಿದೆ.

“ಏನು ಅಂಕಲ್, ಹಾಗೇ ಹೋಗ್ತಾ ಇದ್ದೀರಿ ?” ಪ್ರಶ್ನೆಯೂ ಬಂತು. ನನ್ನನ್ನೇ ಕೇಳಿರಬೇಕು. ನೋಡಿಯೇ ಬಿಡೋಣ ಎಂದೆ. ಕತ್ತು ಹೊರಳಿಸಿ ನೋಡಿಯೂ ನೋಡಿದೆ.

ಅರೆ! ಹೆಲ್ಮೆಟ್ಟಿನಿಂದ ಮುಚ್ಚಿದ್ದ ತಲೆಯ ಗುರುತಾಗಲಿಲ್ಲವಾದರೂ ಧರಿಸಿದ್ದ ಚೂಡಿದಾರ್ ಸ್ಟೈಲ್ ಎಲ್ಲೋ ನೋಡಿದ ಹಾಗಿತ್ತು. ಬಾಯಿಬಿಟ್ಟೆ. ಧೈರ್ಯವಾಗಿ “ಏನಮ್ಮಾ?” ಎಂದು ವಿಚಾರಿಸಿಯೂ ಬಿಟ್ಟೆ. ಹುಡುಗಿ ಯಾರಾಗಿರಬಹುದು ?

“ಗುರ್‍ತು ಸಿಕ್ಲೇ ಇಲ್ಲ, ಅಲ್ವಾ ಅಂಕಲ್?” ಎನ್ನುತ್ತಾ ಹುಡುಗಿ ಹೆಲ್ಮೆಟ್ ಕಳಚಿ ಇನ್ನೊಮ್ಮೆ ನಕ್ಕಾಗ ನೋಡುತ್ತೇನೆ -

ಅವಳೇ ! ನಮ್ಮ ನೆರೆಯ ಉದ್ಗಾರಿ ನಂ.೧ ಮಹನೀಯರ ಮೊಮ್ಮಗಳು! ದಿನಂಪ್ರತಿ ಭುರ್‍ರಂತ ಟಿ.ವಿ.ಎಸ್.ಹಾರಿ ಏರಿ ಕಾಲೇಜಿಗೆ ಓಡಿಸುತ್ತಾ ಇದ್ದವಳು- ಇಲ್ಲಿ, ಈ ದಾರಿ ಬದಿಯಲ್ಲಿ, ಅದೂ ಇಷ್ಟು ಹೊತ್ತಿಗೆ, ಯಾಕೆ ನಿಂತಿದ್ದಾಳೆ?

ಆಚೀಚೆ ಕಣ್ಣು ಹಾಯಿಸಿದೆ. ಅವಳ ಉರುಳುಬಂಡಿ ಎಲ್ಲೂ ಕಾಣಿಸಲಿಲ್ಲ. ಮತ್ತೆ ಹೆಲ್ಮೆಟ್ ಯಾಕೆ ತಲೆಯಲ್ಲಿ?

ನನ್ನಲ್ಲೆದ್ದ ಸಮಸ್ಯಾಪ್ರಶ್ನೆಗಳೆಲ್ಲವನ್ನೂ ಊಹಿಸಿದವಳ ಹಾಗೆ -

“ಬೈಕ್ ಇಲ್ಲ ಅಂಕಲ್.. ರಿಪೇರಿಗೆ ಕೊಟ್ಟು ನಾಲ್ಕು ದಿವಸ ಆಯ್ತು. ಇನ್ನೂ ಆಗಿಲ್ಲ-ಆಗಿಲ್ಲ ಅಂತ ಹೇಳ್ತಾನೇ ಇದ್ದಾನೆ. ಈವತ್ತು ನಾಳೇ ಅಂತ ಪ್ರತಿ ದಿವ್ಸವೂ ಬಂದು ಹೋಗುವುದೇ ಕೆಲಸ ಆಯ್ತು. ಈ ಹೆಲ್ಮೆಟ್ ಆದರೂ ಬಿಟ್ಟು ಹೋಗ್ತೇನೆ ಅಂದ್ರೆ ಅದಕ್ಕೂ ಒಪ್ಲಿಲ್ಲ. ಅದನ್ನೂ ಕಾಲೆಜಿಗೆ ತೆಕ್ಕೊಂಡು ಹೋಗಿ ಫ್ರೆಂಢ್ಸ್ ಎಲ್ಲಾ ತಮಾಷೆ ಮಾಡುವ ಹಾಗಾಗಿದೆ...” ವರ್ಣನೆ ಮುಂದುವರಿಯುತ್ತಿದ್ದ ಹಾಗೆ ನಗುಮುಖ ಅಳುಮೂಂಜಿ ಆಗುತ್ತಾ ಬಂತು. ಆದರೂ ಉಪಾಯವಿಲ್ಲದೆ-

“ಅದನ್ನು ತಲೆಯಲ್ಲೇ ಯಾಕೆ ಹೊರ್‍ತಿಯಮ್ಮಾ ಕೈಯಲ್ಲಿ ಹಿಡ್ಕೊಳ್ಬಾರ್‍ದಾ?” ಎನ್ನಲೇ ಬೇಕಾಯಿತು. “ಇದೂ.... ನನ್ನನ್ನು ಯಾರೂ ಗುರ್‍ತು ಹಿಡಿಯದ ಹಾಗೆ ಮಾಡಿದ ಉಪಾಯ” ಎಂಬ ಉತ್ತರವೂ ಸಿಕ್ಕಿತು. ಇನ್ನೀಗ ಏನು ಮಾಡುವುದು ಕಾಲೇಜಿಗೆ ಹೋಗ್ತೀಯೋ -ಅಲ್ಲ ಮನೆಗೋ? ಎಂದು ವಿಚಾರಿಸಿದೆ.

ಇಷ್ಟು ಲೇಟಾಗಿ ಕಾಲೇಜಿಗೆ ಹೋಗಿ ಮಾಡುವುದೇನಿದೆ, ಮಣ್ಣು !

ಮನೆಗೇ ಹೋಗ್ತೇನೆ ಎಂದವಳಿಗೆ -ನಡಿ ಹಾಗಾದ್ರೆ ನಾನೂ ನಿನ್ನ ಜೊತೆಗೆ ಬರುತ್ತೇನೆ ಎಂದಾಗ ಖುಷಿಯೋ ಖುಷಿ. ಒಳ್ಳೇದಾಯ್ತು... ಬನ್ನಿ ಹೋಗುವಾ ಎಂದು ಹೊರಟೇ ಬಿಟ್ಟಳು. ಪಯಣದ ದಿಕ್ಕು ಬದಲಾಯಿಸಿ “ಸ್ವಲ್ಪ ನಿಧಾನ ನಡಿಯಮ್ಮಾ. ನಿನ್ನಷ್ಟು ಬೇಗ ನಡೀಲಿಕ್ಕೆ ಆಗುವುದಿಲ್ಲ” ಎಂದು ಅವಳೊಂದಿಗೆ ಹೆಜ್ಜೆ ಹಾಕಿದೆ.

ಅವಳ ಖುಷಿಯ ಹಿನ್ನೆಲೆ ಹೇಗೂ ಗೊತ್ತಿತ್ತು. ನನ್ನಿಂದ ಹಳೆ ಕಥೆಗಳನ್ನು ಕೇಳಿಸಿಕೊಳ್ಳುವ ಚಪಲ ಅವಳಿಗೂ ಇತ್ತು. ಬಹಳ ಹುಷಾರಾಗಿ ನನ್ನನ್ನು ರಸ್ತೆ ದಾಟಿಸಿ, ವಾಹನಗಳ ಭರಾಟೆ ಅಷ್ಟೊಂದಿಲ್ಲದ ನಮ್ಮ ಓಣಿ ಬರುವವರೆಗೂ ತಾಳ್ಮೆಯಿಂದ ಕಾದು, “ಇನ್ನು ಹೇಳಿ ಅಂಕಲ್, ನಿಮ್ಮ ಕಾಲದ ಗರಾಜಿನವರ ಕಥೆ - ಒಂದೆರಡು” ಎಂದಳು. ಅವಕಾಶಕ್ಕಾಗಿಯೇ ಕಾದಿದ್ದ ನಾನು - ಕಥೆ ಪ್ರಾರಂಭಿಸಿದೆ.

ಈ ‘ಗೇರೇಜು’ - ವರ್ಕುಶೋಪು - ಮೆಕ್ಯೇನಿಕ್ಕುಗಳ ಕಥೆಯೋ, ಹೇಳಿ ಪ್ರಯೋಜನ ಇಲ್ಲ ಮಗೂ... ಹಿಂದೆ... ಅಂದ್ರೆ ನಮ್ಮ ಹಾಗಿರುವವರೆಲ್ಲಾ ಮಂಗಳೂರು ಸೇರುವ ಬಹಾಳ ಮೊದಲು... ವಾಹನಗಳೂ ಬಹಳ ಕಡಿಮೆ ಇದ್ದುವು........ ಡಾಮಾರು ರಸ್ತೆಗಳೂ ಇಲ್ಲದಿದ್ದಾಗ -

ಹಂಪನಕಟ್ಟೆ, ಮೈದಾನ ರಸ್ತೆ, ಕೊಡಿಯಾಲಬೈಲು, ಜೆಪ್ಪುಗಳಲ್ಲಿ ಮೂರ್‍ನಾಲ್ಕು ದೊಡ್ಡ ವರ್ಕ್‍ಶಾಪ್‍ಗಳೂ, ಬೇರೆ ಕೆಲವು ಕಡೆ ಒಬ್ಬಿಬ್ಬರು ಚಿಲ್ಲರೆ ಮೆಕ್ಯಾನಿಕ್‍ಗಳೂ ಇದ್ದವು - ಇದ್ದರು ಅಂತ ಹೇಳುತ್ತಾರೆ. ಆಗ ಕೂಡಾ, ಕೆಟ್ಟುಹೋದ ವಾಹನಗಳು ಸರಿಯಾಗಬೇಕಾದರೆ, ಅವರ ಮರ್ಜಿ ಕಾಯದೆ ಬೇರೆ ದಾರಿಯೇ ಇರಲಿಲ್ಲವಂತೆ. ಕೂಡ್ಲೆ ಜಟ್‍ಪಟ್ ಆಗಿ ರಿಪೇರಿ ಮಾಡಿ ಕೊಡಲು ಒಪ್ಪಿದ ಕೆಲಸಗಳಿಗೂ ವಾರಗಟ್ಟಲೆ ಸಮಯ ತೆಗೆದುಕೊಳ್ಳುವ ಅಭ್ಯಾಸ ಆಗಲೂ ಇತ್ತಂತೆ. ಅಭ್ಯಾಸ, ಹತ್ತೈವತ್ತರಷ್ಟಿದ್ದ ಕಾರ್ -ಬಸ್‍ಗಳಿಗೇ ಆಗಲಿ, ಇದ್ದ ನಾಲ್ಕೈದು ಮೋಟರ್ ಸೈಕಲಿಗಾಗಲಿ, ಸಮಪ್ರಮಾಣದಲ್ಲೇ ಅನ್ವಯವಾಗುತ್ತಿತ್ತಂತೆ. ವಾಹನ ರಿಪೇರಿ ಮಾಡಿ ಯಾವಾಗ ಕೊಡಬಹುದು ಎಂದು ಹೇಳುವುದೇ ಕಷ್ಟ, ಒಂದು ವೇಳೆ ಹೇಳಿದರೆ - ಹೇಳಿದ ದಿನ ಕೊಡದೆ ಇರುವುದಂತೂ ಗ್ಯಾರಂಟಿ ಎಂಬ ಪರಿಸ್ಥಿತಿಯಂತೆ.

ಆದರೆ, ಏನು ಮಾಡುವುದು ಬೇರೆ ಯಾವ ದಾರಿಯೂ ಇಲ್ಲದೆ ವಾಹನಗಳ ಮಾಲೀಕರು ಅದನ್ನು ಸೊಲ್ಲೆತ್ತದೆ ಸಹಿಸಿಕೊಂಡಿದ್ದರಂತೆ.

ನಾವು ಮಂಗಳೂರು ಸೇರುವ ಹೊತ್ತಿಗೆ, ಕಾಲ ಬದಲಿತ್ತು. ರಸ್ತೆಗಳು ‘ತಾರು’ ಕಂಡಿದ್ದವು. ಕಾರು,ಬಸ್ಸುಗಳೂ ಹೆಚ್ಚಾಗಿದ್ದವು.ಡಾಕ್ಟ್ರ ಸರ್ಕಲಿನಲ್ಲಿದ್ದ ಸುಬ್ರಾಯ ನಾಯಕರ ‘ರೋಯಲ್ ಎನ್‍ಫೀಲ್ಡ್’ ಮೋಟರ್ ಸೈಕಲ್‍ಗಳ ಜೊತೆಗೆ ಸಂಜೀವ ನಾಯಕರ ‘ಲ್ಯಾಂಬ್ರೆಟ್ಟಾ’ಗಳೂ ರಸ್ತೆಗಳಲ್ಲಿ ಸುತ್ತಾಡತೊಡಗಿದ್ದವು. ಅಂಬಾಸಿಡರ್, ಫಿಯೆಟ್, ಸ್ಟೆಂಡಾರ್ಡ್‍ಗಳ ಹೆಸರುಗಳೇ ರಾರಾಜಿಸುತ್ತಿದ್ದವು.

ಎಡ್ವಾನ್ಸ್ ಬುಕಿಂಗ್ ಇತ್ಯಾದಿ ತರಳೆ ಮುಗಿಸಿದ ಗಿರಾಕಿಗೆ ಹೊಸ ವಾಹನ ಮಾರುವಾಗ ಕೊಟ್ಟ ಸರ್ವಿಸ್ ಗ್ಯಾರಂಟಿ -ಗೀರಂಟಿಗಳ ಅವಧಿಯಲ್ಲಿದ್ದ ‘ಸಿಸ್ಟಂ’ಗಳು, ವಾಹನಗಳು ಮಾಲಿಕರ ಸ್ವಂತ ಖರ್ಚಿನಲ್ಲೇ ರಿಪೇರಿಯಾಗಬೇಕಾದ ಹೊತ್ತು ವಾಹನಗಳಿಂದ ಮಾಯವಾಗುತ್ತಿದ್ದ ಅನುಭವ ಎಷ್ಟೋ ಮಂದಿಯಿಂದ ಕೇಳಿ ಬರುತ್ತಿತ್ತು. ‘ಜಾಬ್‍ಕಾರ್ಡ್’ - ‘ಡ್ಯೂ ಡೇಟ್’ ಇತ್ಯಾದಿ ಶಬ್ದಗಳೆಲ್ಲ, ಇಂಗ್ಲಿಷ್ ಅರ್ಥ ತಿಳಿಯದ ಮರಿ ಮೆಕ್ಯಾನಿಕ್‍ಗಳಿಗೂ ಬಾಯಿಪಾಠವಾಗಿತ್ತು - ಆಚರಣೆ ಅನಗತ್ಯವಾದ ಕಾರಣ - ಬರಹೇಳಿದ್ದ ದಿನವೇ ಹೋದರೆ “ಇನ್ನೂ ಸಣ್ಣ ಚಿಲ್ಲರೆ ಕೆಲಸ ಮಾತ್ರ ಬಾಕಿ ಇದೆ.... ನಾಳೆ ಬರುತ್ತೀರಾ” ಎನ್ನುವ ಧ್ವನಿಮುದ್ರಿಕೆ ಎಲ್ಲ ಕಡೆಯಲ್ಲೂ ಕೇಳಿಸುತ್ತಿತ್ತು.

ಅನಂತರದ ದಿನಗಳಲ್ಲಿ,ವಾಹನಕ್ಕಾಗಿ ದುಡ್ಡುಕಟ್ಟಿ ವರ್ಷಗಟ್ಟಲೆ ಕಾಯಬೇಕಾದ ತೊಂದರೆ ತಪ್ಪಿತು. ಕಾಯಲು ತಾಳ್ಮೆಯಿಲ್ಲದವರು ‘ಬ್ಲೇಕಿನಲ್ಲಿ’ ಖರೀದಿಸಬೇಕಾದ ಪರಿಸ್ಥಿತಿ ಬದಲಿ, “ಕಾಸು ಕೊಡಿ, ಕೀ ತೆಗೆದುಕೊಳ್ಳಿ” ಹಂತಕ್ಕೆ ಬಂದಾಗ ವಾಹನಗಳ ಬಿಡಿಭಾಗದ ಅಂಗಡಿಗಳ ಮತ್ತು ಮೆಕ್ಯಾನಿಕ್ ಗರಾಜ್‍ಗಳ ಸಂಖ್ಯೆಯೂ - ಕುಲಗೆಟ್ಟ.... ರಸ್ತೆಗಳ ಹೊರತಾಗಿಯೂ- ಹೆಚ್ಚುಹೆಚ್ಚಾಗುತ್ತಾ ಹೋಯಿತು.

“ಮತ್ತೆ ಬಾ - ಹೋಗಿ ಬಾ - ನಾಳೆ ಬಾ” ಧ್ವನಿಗಳು ಮಾತ್ರ ಉಳಿದವು. ಎಷ್ಟು ಅರ್ಜೆಂಟ್ ಮಾಡಿದರೂ, “ನೋಡಿ, ಇದೊಂದು ಗಾಡಿ ದೂರದಿಂದ ಬಂದು ಒಂದು ವಾರ ಆಯಿತು.ಇದರ ಕೆಲಸ ಮಾಡದೆ ಉಪಾಯವೇ ಇಲ್ಲ. ನೀವು ಇಲ್ಲಿಯವರೇ ಅಲ್ವಾ? ನಾಳೆ ಬನ್ನಿ. ಖಂಡಿತವಾಗಿಯೂ ನಿಮ್ಮ ಗಾಡಿ ರೆಡಿ ಇರ್‍ತದೆ.” ಎಂಬ ‘ಟೇಪ್’ಗಳೂ ಉಳಿದುಕೊಂಡವು.

“ನಿನಗಾದ ಅನುಭವವೂ ಅದೇ ಅಲ್ವಾ ಮಗೂ..” ಮನೆ ಸಮೀಪಿಸಿತ್ತು.

“ಹೌದು ಅಂಕಲ್, ನಿಮ್ಮ ಲಟಾರಿ ಸ್ಕೂಟರಿಗೂ ಅದೇ - ನನಗೂ ಅದೇ. ನೋ ಚೇಂಜ್ ಎಟಾಲ್ ! .. ಟಾ ಟಾ..ಬರ್‍ತೇನೆ” ಎಂದು ಮನೆಗೋಡಿದ ಕಾಲೇಜ್ ಕನ್ಯೆಯ ಹೆಸರು ನಿಮಗ್ಯಾಕೆ?
-----
ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.

ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.

----
ಶೀರ್ಷಿಕೆಯ ೧೯೬೦ರ ದಶಕದ ಛಾಯಚಿತ್ರ:

ನಾಡಿನ ಹಿರಿಯ ಪತ್ರಕರ್ತ ಶ್ರೀ. ಹೆಚ್.ಆರ್.ನಾಗೇಶರಾವ್ ಅವರ ಸಂಗ್ರಹದಲ್ಲಿ ಲಭ್ಯವಾದ ಶ್ರೀ. ಪ. ಗೋ.ಬರೆದ ದಿನಾಂಕ ೧೦ ಏಪ್ರಿಲ್ ೧೯೬೪ರ ಪತ್ರ.
----
ಕೃಪೆ: ಗಲ್ಫ್ ಕನ್ನಡಿಗ

ಲಿಂಕ್ : http://www.gulfkannadiga.com/news-7077.html

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.