'ದಿಲ್ಲಿ'ಯ ಬೇತಾಳ 'ಬೆಂಗಳೂರ' ಬೆನ್ನೇರಬೇಕೆ!?

3.5

ವಿವಾದಗಳಿಲ್ಲದೇ ಆಡಳಿತ ನಡೆಸುವ ಮನಸು ನಮ್ಮ ರಾಜ್ಯ ಸರ್ಕಾರಕ್ಕಿಲ್ಲವೋ? ತಿಳಿಯುತ್ತಿಲ್ಲ. ಅದೇನು ಅಂತ ಈ ರೀತಿ ಯೋಜನೆಗಳನ್ನ ಹಾಕ್ತಾರೋ?ಯೋಜನೆಗಳ ಸಾಧಕ ಬಾಧಕಗಳ ಬಗ್ಗೆ ಕನಿಷ್ಠ ಯೋಚನೆಯನ್ನಾದರೂ ಮಾಡಿರುತ್ತಾರ? ಬಹುಷಃ ಆ ರೀತಿ ಯೋಚನೆಯನ್ನೆನಾದರು ಮಾಡಿದ್ದರೆ ಮೊನ್ನೆ ನಗರಾಭಿವೃದ್ಧಿ ಮಂತ್ರಿಗಳಾದ ಶ್ರೀ ಸುರೇಶ್ ಕುಮಾರ್ ಅವ್ರು " ಶೀಘ್ರದಲ್ಲೇ ಕರ್ನಾಟಕದ ಎಲ್ಲಾ ಮಹಾನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಖಾಸಗಿಯೋರ ಜೊತೆ ಸೇರ್ಕೊಂಡು ಸಿ.ಬಿ.ಎಸ್.ಇ ಶಾಲೆಗಳನ್ನು ಆರಂಭಮಾಡ್ತೀವಿ" ಅಂತಿದ್ರಾ?

ಅವರೇನು ಹೇಳಿದ್ರು ಅನ್ನೋದು ಈ ಕೊಂಡಿಯಲ್ಲಿದೆ ನೋಡಿ.ಅದರ ಪರಿಣಾಮವನ್ನ 'ಏನ್ಗುರು' ಇಲ್ಲಿ ಸರಿಯಾಗೇ ಬರೆದಿದ್ದಾರೆ.ಇವತ್ತಿನ ವಿಜಯ ಕರ್ನಾಟಕದಲ್ಲೂ ಈ ಬಗ್ಗೆ ವರದಿಯೊಂದು ಬಂದಿದೆ.

 

ಈಗಾಗಲೇ 'ರಾಷ್ಟ್ರ ಭಾಷೆಯ' ಎಂಬ ಶುದ್ಧ ಸುಳ್ಳನ್ನು ನಮ್ಮ ಮೇಲೇರಿ,ಸತ್ಯ ಏನು ಅಂತ ಹೇಳ ಹೋದ್ರೆ 'ನಮ್ಮ್ ಜನ ನಮ್ಮನ್ನೇ ಅನುಮಾನದಿಂದ ನೋಡುವಂತೆ' ಮಾಡಿಯಾಗಿದೆ. ಈಗ ನಮ್ಮ ರಾಜ್ಯ ಸರ್ಕಾರದ ಶಿಕ್ಷಣ ಗುಣಮಟ್ಟ ಸರಿಯಿಲ್ಲ ಅನ್ನೋ ನೆಪ ಹೇಳಿ  ಬುಡಕ್ಕೆ ಕೊಡಲಿಪೆಟ್ಟು ನೀಡಲೇನೋ ಎಂಬಂತೆ ಈ 'ಸಿ.ಬಿ.ಎಸ್.ಇ'  ಅನ್ನು ನಮ್ಮ ಮಕ್ಕಳ ಮೇಲೆ ಹೇರ ಹೊರಟಿದೆ!ಇದು ನಮಗೆ ಬೇಕಾ? ಗುಣ ಮಟ್ಟ ಸರಿ ಮಾಡಲಿಕ್ಕಾಗಿ ತಾನೇ ಇಲ್ಲೊಂದು ಸರ್ಕಾರ,ಶಿಕ್ಷಣಕ್ಕೆ ಅಂತಾನೆ ಒಬ್ಬ ಮಂತ್ರಿ,ಇಲಾಖೆಗಳು,ಶಿಕ್ಷಣ ತಜ್ಞರು ಇರೋದು? ಇವರೆಲ್ಲ ಇದ್ಕೊಂಡು ಮಾಡೋಕೆ ಸಾಧ್ಯ ಆಗದೆ 'ಕೇಂದ್ರ'ದ ತುತ್ತೂರಿಯನ್ನೇ ಊದುತ್ತಿವಿ ಅನ್ನೋದಾದರೆ ಇಂತ ಸರ್ಕಾರ,ಇಲಾಖೆ ಅದಕ್ಕೆ ನಮ್ಮ ತೆರಿಗೆಯ ಹಣವನ್ನೇಕೆ ಸುರಿಯಬೇಕು? ಹೇಗಿದ್ರು 'ಕೇಂದ್ರ'ದವರಿದ್ದಾರಲ್ಲ ಅವ್ರೆ ನೋಡ್ಕೋತಾರೆ.ಇವ್ರು ಮನೆಗೆಹೋಗ್ಬಹುದು ಅಲ್ವಾ?

ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವ ಮಾತುಗಳು ಎಲ್ಲಿ ಮರೆಯಾಗಿವೆ? ಒಂದು ಬಲಿಷ್ಠ ನಾಡು ಕಟ್ಟಲು ಅಷ್ಟೇ ಬಲಿಷ್ಟವಾದ ಗುಣ ಮಟ್ಟದ ಶಿಕ್ಷಣದ ಅಗತ್ಯವಿದೆ.ಭವ್ಯ ಕನ್ನಡನಾಡ ಕಟ್ಟಲು ಈ ನೆಲದ ಆಚಾರ,ವಿಚಾರ,ಭಾಷೆ,ಸಂಸ್ಕೃತಿ,ಇತಿಹಾಸ ಇವೆಲ್ಲದರ ಅರಿವು ಇರಲೇಬೇಕು.ಕನ್ನಡ ಮಾತಾಡಿದ್ರೆ ಏನ್ ಅನ್ಕೊತಾರೋ ಅನ್ನೋ ಕೀಳರಿಮೆಯನ್ನ ನಮ್ಮ ಈ ಶಿಕ್ಷಣ ವ್ಯವಸ್ಥೆ  ಈಗಾಗಲೇ ತುಂಬಿಯಾಗಿದೆ, ಇನ್ನ ಇದೆಲ್ಲ ಸಂಪೂರ್ಣ 'ಸಿ.ಬಿ.ಎಸ್.ಇ' ಮಯವಾದರೆ  ನಮ್ಮತನ ಅನ್ನುವುದನ್ನೇ ನಮ್ಮ ಮಕ್ಕಳು ಕಲಿಯುವುದಿಲ್ಲ.

ಸರ್ಕಾರದ ಇಂತ ತಲೆ-ಬುಡ ನಿರ್ಧಾರಗಳನ್ನ ಎಲ್ಲರು ಖಂಡಿಸೋಣ.ಇಲ್ಲದಿದ್ದರೆ ನಮ್ಮ ಮುಂದಿನ ಪೀಳಿಗೆ ಸಿ.ಬಿ.ಎಸ್.ಇ ಅನ್ನೋ ಹಿಂದಿ ಸಮುದ್ರದಲ್ಲಿ ಮುಳುಗಿ 'ಕನ್ನಡ' ಕ್ಕೆ ತಿಲಾಂಜಲಿ ಇಡುತ್ತಾರೆ.ಎಚ್ಚರ!!    ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (6 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಜವಾಗಿ ನೋಡಿದರೆ ನಮ್ಮ ಶಾಲೆಗಳಲ್ಲಿ ಚಾಲ್ತಿಯಲ್ಲಿರುವ ತ್ರಿಭಾಷಾ ಸೂತ್ರವನ್ನು ತೆಗೆದು ಹಾಕಿ ದ್ವಿಭಾಷಾ ಕಲಿಕೆಯನ್ನು ಅಳವಡಿಸಿಕೊಳ್ಳಬೇಕಾಗಿತ್ತು. ಯಾ ಒಂದು ಭಾಷೆಯಾಗಿ ಕನ್ನಡವನ್ನು ಆಯ್ಕೆ ಮಾಡಲೇಬೇಕೆಂದು ಕಡ್ಡಾಯ ಮಾಡಬೇಕು. ಸಿ.ಬಿ.ಎಸ್.ಸಿ. ಸಿಲೆಬಸ್-ನಲ್ಲಿ ಕಲಿತವರು ಹೆಚ್ಚು ಓದಿರುತ್ತಾರೆಂಬುದೇನೋ ನಿಜವೇ. ಆದರೆ ಈಗಿರುವ ಶಾಲೆಗಳಲ್ಲೇ ಸಿ.ಬಿ.ಎಸ್.ಸಿ. ಆಧಾರಿತ ಹೊಸ ಸಿಲೆಬಸ್ ಜಾರಿ ಮಾಡಬಹುದಾಗಿತ್ತಲ್ಲಾ? ಅದನ್ನು ಬಿಟ್ಟು ಸರಕಾರವೇ ಖಾಸಗಿಯವರೊಂದಿಗೆ ಸೇರಿ ಸಿ.ಬಿ.ಎಸ್.ಸಿ. ಶಾಲೆಗಳನ್ನು ಪ್ರಾರಂಭ ಮಾಡುವುದು ಹಾಸ್ಯಾಸ್ಪದ. ಇಂಥಾ ಸರಕಾರಿ-ಖಾಸಗಿ ಸಮನ್ವಯ ಮುಂತಾದವುಗಳೆಲ್ಲಾ ಆನಂತರ ಏನಾಗುತ್ತವೆಂದು ಗೊತ್ತೇ ಇದೆ.. ಇದರಲ್ಲಿ ಏನೋ ದೊಡ್ಡ ಮಟ್ಟದ "ವ್ಯವಹಾರ" ಇರಬಹುದು ಎಂದು ಅನುಮಾನ ಬರುವುದು ಸಹಜವೇ.. ಇಂಥಾ ಅದ್ಭುತ ಐಡಿಯಾಗಳೆಲ್ಲಾ ನಮ್ಮ ನಾಯಕರಿಗೆ ಮಾತ್ರ ಏಕೆ ಹೊಳೆಯುತ್ತವೋ ಗೊತ್ತಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂತಹ ಅದ್ಭುತ ತಂತ್ರಗಳು ಭಾರತದ ರಾಜಕಾರಣಿಗಳಿಗೆ ಜನ್ಮದತ್ತವಾಗಿ ಬಂದ "ಮಾಯಾ ವಿದ್ಯೆ", ಬೇರೆ ಯಾವ ದೇಶದಲ್ಲೂ ಬಹುಶಃ ಇದು ಸಾಧ್ಯವಿಲ್ಲವೇನೋ! ಇಷ್ಟೊಂದು "ಛೂ ಮಂತ್ರ ಕಾಳಿ"ಗಳು ಬೇರೆಲ್ಲಿರಲು ಸಾಧ್ಯ? ಇವರು ಏನು ಬೇಕಾದರೂ ಮಾಡುತ್ತಾರೆ. ಕೊನೆಗೊಂದು ದಿನ ಹಣಕ್ಕಾಗಿ ಖಾಸಗಿಯವರ ಜೊತೆ ಸೇರಿ ತಮ್ಮ ಅಪ್ಪ-ಅಮ್ಮಂದಿರನ್ನೇ ಪ್ರತಿಸೃಷ್ಟಿ ಮಾಡಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಛೇ ಛೇ! ಎಂಥ ಮಾತುಗಳನ್ನಾಡುತ್ತಿದ್ದೀರಿ...! ಭವ್ಯ ಭಾರತ ಮಾತೆಯ ಹೃದಯಕ್ಕೆ ನೋವಾಗುವುದಿಲ್ಲವೇ? ಇದರಿಂದ ವಿವಿಧತೆಯಲ್ಲಿ ಏಕತೆ ಇರುವ ನಮ್ಮ ಮಣ್ಣಿಗೆ ಧಕ್ಕೆಯಾಗುವುದಿಲ್ಲವೇ? ಭಾರತದ ಗಾಳಿಯನ್ನು ಸೇವಿಸಿ, ಭಾರತದ ನೀರನ್ನು ಕುಡಿದು ಇಂತಹ ಮಾತುಗಳೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಕೇಶ್ ಇದಕ್ಕೆ ನನ್ನ ಸಹಮತವಿಲ್ಲ, ಬಡ ಮಕ್ಕಳಿಗೆ ಉನ್ನತ ಮಟ್ಟದಲ್ಲಿ ಬೆಳೆಯಲು ಇದೊಂದು ಸದಾವಕಾಶ. ನೀವು ಹೇಳಿದ ಹಾಗೆ ಒಂದು ವಿಷಯ ಕನ್ನಡ ಇಡಲಿ. ಹಾಗಂತ ಪೂರ್ಣ ಕನ್ನಡ ಮಯವಾದರೆ ನಮ್ಮ ರಾಜ್ಯದ ಮಕ್ಕಳು ಉನ್ನತ ಸ್ಥಾನಕ್ಕೆ ಏರಲು ಸಾದ್ಯವೆ. ಇವತ್ತು ಎಲ್ಲೆಡೆ ಇಂಗ್ಲೀಷ್ ಮಯವಾಗಿರಬೇಕಾದರೆ ರಾಜ್ಯದ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಸಿಗುವಂತಹ ವಿದ್ಯಾಭ್ಯಾಸದಿಂದ ಆ ಮಟ್ಟಕ್ಕೆ ತಲುಪುತ್ತಾರಾ ಎನ್ನುವುದು ಮುಖ್ಯ ಪ್ರಶ್ನೆಯಾಗುತ್ತದೆ. ಇವತ್ತು ಬೆಂಗಳೂರಿಗೆ ಅನೇಕ ಬಂಡವಾಳ ಹೂಡಿಕೆದಾರರು ಬರುತ್ತಿದ್ದಾರೆ. ಅವರುಗಳು ಯಾರಲ್ಲಿ ಉತ್ತಮ ಜ್ಞಾನವಿದೆಯೋ ಅಂತವರನ್ನು ಆರಿಸುವುದು ಸಹಜ. ಅದಕ್ಕೆ ತಕ್ಕಂತೆ ಕನ್ನಡ ಮಕ್ಕಳು ಬೆಳೆಯಬೇಕು. ಇಲ್ಲದೇ ಹೋದರೆ ಹೊರ ರಾಜ್ಯದವರು ಮತ್ತೊಮ್ಮೆ ಹೆಚ್ಚಿನ ಸಂಖ್ಯೆಯಲ್ಲಿ ಬರುವುದು ನಿಶ್ಚಿತ. ಕನ್ನಡದವರಿಗೆ ಸ್ಥಾನಕೊಡಿ ಎಂದು ಕಿರುಚುವ ನಾವುಗಳು ಕಂಪೆನಿಯ ಬದ್ದತೆಗೆ ಸರಿಯಿರಬೇಕಾಗುತ್ತದೆ. ಸದ್ಯದ ಮಟ್ಟಿಗೆ ಇದು ಉತ್ತಮ ಬೆಳವಣಿಗೆಯೆಂದು ಕಾಣದೇ ಹೋದರೂ ಸರ್ಕಾರದ ನಿರ್ಧಾರ ನನ್ನ ಮಟ್ಟಿಗೆ ಸರಿ ಎನಿಸುತ್ತದೆ. ಇಲ್ಲಿಯ ತನಕ ಕೇವಲ ಶ್ರೀಮಂತರ ಪಾಲಾಗಿದ್ದ ಸಿ.ಬಿ.ಎಸ್.ಇ ಇವತ್ತು ಬಡ ಮಕ್ಕಳಿಗೂ ಸಿಗುತ್ತದೆ ಎಂದರೆ ಹರ್ಷ ಪಡಬೇಕು ಅಲ್ಲವಾ. ನೀವು ಕೊಟ್ಟಂತಹ ಕೊಂಡಿ ಓದಿದೆ ಖುಷಿಯಾಯಿತು. ಬಡಮಕ್ಕಳು ಇನ್ನು ಮುಂದೆ ಇಂಗ್ಲೀಷ್ ನಲ್ಲಿ ಮಾತನಾಡುತ್ತಾರೆ ಎನ್ನುವುದು ಸಂತಸದ ಸಂಗತಿಯಂತೆ ಕಂಡಿತು. ಇದರಿಂದಾಗಿ ಮುಂದಿನ ವರ್ಷಗಳಲ್ಲಿ ಅನಾಗರಿಕತೆ ಕಡಿಮೆಯಾಗುತ್ತದೆ ಎನ್ನವುದು ನನ್ನ ಭಾವನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>ಬಡಮಕ್ಕಳು ಇನ್ನು ಮುಂದೆ ಇಂಗ್ಲೀಷ್ ನಲ್ಲಿ ಮಾತನಾಡುತ್ತಾರೆ ಎನ್ನುವುದು ಸಂತಸದ ಸಂಗತಿಯಂತೆ ಕಂಡಿತು. ’ಬಡವರು’ ಇಂಗ್ಲಿಷ್ ಮಾತಾಡಿದ್ರೆ ಅವ್ರ ಸ್ಥಿತಿ ಒಳ್ಳೇದಾಗುತ್ತೆ ಅಂತ ಹೇಗಂತೀರಾ? ಗಾಣಿಗ ಅಯ್ಯೋ ಅಂದ್ರೆ ನೆತ್ತಿ ತಣ್ಣಗಾಗುತ್ತಾ ? >>>ಇದರಿಂದಾಗಿ ಮುಂದಿನ ವರ್ಷಗಳಲ್ಲಿ ಅನಾಗರಿಕತೆ ಕಡಿಮೆಯಾಗುತ್ತದೆ ಎನ್ನವುದು ನನ್ನ ಭಾವನೆ. ಇಂಗ್ಲಿಷ್ ಮಾತಾಡಿದ್ರೆ ನಾಗರಿಕತೆ ಅಂತ ನೀವಂತೀರ. ನೀವು ನಾಗರೀಕ = city dweller ಅನ್ನೋ ಅರ್ಥದಲ್ಲಿ ಹೇಳಿದ್ರೆ ನನಗೇನೂ ಪರವಾಗಿಲ್ಲ. ಆದ್ರೆ cultured ಅನ್ನುವ ಅರ್ಥದಲ್ಲಿ (ಬಹಳ ಜನ ಇದೇ ರೂಢಿಯಲ್ಲಿ ಬಳಸೋದಿದೆ) ಅದನ್ನು ನಾನು ಒಪ್ಪಲಾರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗಾದ್ರೆ ಬಡವರಿಗೆ ಒಳ್ಳೇ ವಿದ್ಯಾಭ್ಯಾಸ ಸಿಗಬಾರದಾ. ಅವರಿ ಇಂಜಿನಿಯರ್ ಅಥವಾ ಡಾಕ್ಟರ್ ಆಗಬಾರದಾ. ಅವರು ಹಾಗೇ ಹಳೇ ಕೊಂಪೆ ಶಾಲೆಯಲ್ಲೇ ಕೊಳೆಯಬೇಕಾ. ಮಾತೃಭಾಷೆ ಅಭಿಮಾನವಿರಲಿ ಹಾಗಂತ ಇತರೆ ಭಾಷೆಗಳನ್ನು ಕಲಿತು ಮುಂದೆ ಹೋಗಬಹುದಲ್ಲವಾ, ಈ ಹಿಂದೆ ಅವರ ತಲೆ ಮಾರಿನವರು ಮಾಡುವಂತಹ ಕೆಲಸಗಳನ್ನೇ ಮುಂದುವರೆಸಬೇಕಾ. ಅವರಿಗೆ ಮಾಮೂಲಿ ಸರ್ಕಾರಿ ಶಾಲೆಗಳಲ್ಲಿ ಸಿಗುವ ವಿದ್ಯಾಭ್ಯಾಸಕ್ಕಿಂತ ಸಿ.ಬಿ.ಎಸ್.ಇ ಶಾಲೆಯಲ್ಲಿ ಉತ್ತಮ ವಿದ್ಯಾಭ್ಯಾಸ ಸಿಗುತ್ತದೆ. ಅವರ ನಡುವಳಿಕೆಯಲ್ಲೂ ಬದಲಾವಣೆ ಖಂಡಿತಾ ಆಗುತ್ತದೆ ಎನ್ನುವುದು ನನ್ನ ಭಾವನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಡಿಗರೆ, ಹಗಲುಗನಸು ಕಾಣಬೇಡಿ, ಆಂಗ್ಲ ಮಾಧ್ಯಮದ ವಿದ್ಯಾಭ್ಯಾಸದಿಂದ ಮುಂದಿನ ದಿನಗಳಲ್ಲಿ ಅನಾಗರಿಕತೆ ಕಡಿಮೆಯಾಗುತ್ತದೆಂದು ಎಂದಿಗೂ ಭಾವಿಸಬೇಡಿ. ನಿಮಗೆ ಪ್ರತ್ಯಕ್ಷ ಸಾಕ್ಷಿ ಬೇಕಾದಲ್ಲಿ ಒಮ್ಮೆ ಬರೀ ವಿದ್ಯಾವಂತರಿಂದ ತುಂಬಿ ತುಳುಕುತ್ತಿರುವ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಐಐಎಮ್ ಕಡೆಗೋ, ಎಮ್.ಜಿ.ರಸ್ತೆ, ಇಂದಿರಾನಗರ, ಕೋರಮಂಗಲ, ಮಡಿವಾಳಗಳ ಕಡೆಗೆ ಹೋಗಿ ಬನ್ನಿ. ಈ ವಿದ್ಯಾವಂತರ ನಾಗರಿಕತೆಯ ಪರಿಚಯ ಚೆನ್ನಾಗಿ ಆಗುತ್ತದೆ. ಆಂಗ್ಲ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಜಾಗತೀಕರಣದ ಇಂದಿನ ದಿನಗಳಲ್ಲಿ ಇತರರೊಂದಿಗೆ ಸ್ಪರ್ಧಿಸಿ ಕೆಲಸ ಗಿಟ್ಟಿಸಲು ಈ ನೆಲದ ಮಕ್ಕಳಿಗೆ ಬೇಕು, ಆದರೆ ಅದೇ ಸಮಯದಲ್ಲಿ ನಮ್ಮ ಭಾಷೆಗೂ ಅಷ್ಟೇ ಪ್ರಾಮುಖ್ಯತೆ ಇರಬೇಕು. ನೈತಿಕ ಮೌಲ್ಯಗಳು ನೆಲ ಕಚ್ಚಿರುವ ಈ ದಿನಗಳಲ್ಲಿ ಮಕ್ಕಳಿಗೆ ಜರೂರಾಗಿ ಬೇಕಿರುವುದು ನಮ್ಮ ಸಂಸ್ಕೃತಿ, ಸಂಸ್ಕಾರ, ನೈತಿಕತೆಯ ಪಾಠ. ಇವುಗಳ ಜೊತೆಗೆ ಆಂಗ್ಲ ಭಾಷೆಯೂ ಇರಲಿ. ಎಲ್ಲವನ್ನೂ ಬಿಟ್ಟು ಕೇವಲ ಸಿಬಿಎಸ್ಸಿಯಿಂದ ಏನನ್ನೂ ಸಾಧಿಸಲಾಗದು ಎಂದು ನನ್ನ ಅಭಿಪ್ರಾಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುನಾಥರೆ, ನಾವೆಲ್ಲಾ ಓದಿದ್ದು ಸರ್ಕಾರಿ ಶಾಲೆಯಲ್ಲೇ. ಹಾಗಂತ ಇವತ್ತು ಇಷ್ಟೆಲ್ಲಾ ಚರ್ಚೆ ಮಾಡುವ ನಾವು ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತೇವೆಯೇ ಖಂಡಿತಾ ಇಲ್ಲ. ಮತ್ತೆ ನಾವು ಅವರುಗಳನ್ನು ಸೇರಿಸುವುದು ಸಿ.ಬಿ.ಎಸ್.ಇ ಅತವಾ ಐ.ಸಿ.ಎಸ್.ಇ ಇರುವಂತಹ ಶಾಲೆಗಳಿಗೆ ಕಾರಣ ಮಕ್ಕಳು ಬುದ್ದಿವಂತರಾಗಬೇಕು ಎನ್ನುವ ಏಕೈಕ ಉದ್ದೇಶದಿಂದ. ಸರ್ಕಾರದ ಒಂದು ಉತ್ತಮ ನಿರ್ಧಾರದಿಂದ ಇವತ್ತು ಬಡ ಮಕ್ಕಳಿಗೆ ಅವಕಾಶ ಸಿಗುತ್ತಿದೆ ಎಂದಾದರೆ ನಾವೆಲ್ಲಾ ಹರ್ಷ ಪಡಬೇಕು ಅಲ್ಲವಾ. ಅವರ ಜೀವನಗಳು ಕೂಡ ಮುಂದಿನ ದಿನಗಳಲ್ಲಿ ಸುಧಾರಿಸುತ್ತದೆ. ನಾನು ಇಂಗ್ಲೀಷ್ ಪ್ರಸ್ತಾಪ ಮಾಡಿದ್ದು ಯಾಕೆಂದರೆ ವಿದೇಶಿ ಕಂಪೆನಿಗಳಿಗೆ ಸೇರಬೇಕಾದರೆ ಕೆಲವೊಂದು ಅರ್ಹತೆ ಇರುತ್ತದೆ. ಆ ಅರ್ಥದಲ್ಲಿ ನಾನು ಚರ್ಚೆ ಮಾಡಿದ್ದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಡಿಗರೆ, ನಾನು ಓದಿದ್ದು ಸರ್ಕಾರಿ ಶಾಲೆಯಲ್ಲಿ, ಪದವಿ ಪಡೆದಿದ್ದು ಕನ್ನಡ ಮಾಧ್ಯಮದಲ್ಲಿ, ಇಂದು ಕೆಲಸ ಮಾಡುತ್ತಿರುವುದು ದುಬೈನ ಪ್ರತಿಷ್ಠಿತ ಕಂಪನಿಯಲ್ಲಿ, ಇದರ ಹಿಂದೆ ಯಾವ ಆಂಗ್ಲ ಮಾಧ್ಯಮ ಶಾಲೆಯೂ ಇಲ್ಲ! ನನ್ನ ಮಕ್ಕಳನ್ನು ನಾನು ಓದಿಸಿದ್ದು ಕನ್ನಡ ಮಾಧ್ಯಮದಲ್ಲಿ, ನನ್ನ ಮಗಳು ೧೦ನೆ ತರಗತಿಯಲ್ಲಿ ಶೇ.೯೩ ಅಂಕ ತೆಗೆದುಕೊಂಡಳು! ಈಗ ಇಂಜಿನಿಯರಿಂಗ್ ಓದುತ್ತಿದ್ದಾಳೆ, ಅದು ಆಂಗ್ಲ ಮಾಧ್ಯಮದಲ್ಲಿ. ಆದರೆ ನಮ್ಮ ಸಂಸ್ಕಾರ, ಸಂಸ್ಕೃತಿಗಳನ್ನು ಮರೆತಿಲ್ಲ!! ಕನ್ನಡ ಮಾಧ್ಯಮದಲ್ಲಿ ಓದಿಯೂ ನಾವು ಸಾಧನೆ ಮಾಡಬಹುದು, ಇತರರೊಂದಿಗೆ ಸ್ಪರ್ಧಿಸಬಹುದು, ಸಾಧಿಸುವ ಛಲವೊಂದಿದ್ದರೆ. ಇದು ನನ್ನ ಜೀವನದಲ್ಲಿನ ಜೀವಂತ ಉದಾಹರಣೆ. http://sampada.net/b...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುನಾಥರೆ ನಾನು ಇಂಗ್ಲೀಷ್ ಶಾಲೆಯಲ್ಲಿ ಓದಿದವರು ಬುದ್ದಿವಂತರು ಅಂತಾ ಹೇಳುತ್ತಿಲ್ಲ. ದಿನಾ ನಾನು ಊರಿಗೆ ನಡೆದುಕೊಂಡು ಹೋಗುತ್ತೇನೆ. ಇದೀಗ ಉಚಿತವಾಗಿ ಬಸ್ಸು ಬಿಟ್ಟಿದ್ದಾರೆ ಅಂದಾಗ ನಡೆದುಕೊಂಡು ಹೋಗುವುದು ಸೂಕ್ತನಾ ಅಥವಾ ಬಸ್ಸಿನಲ್ಲಿ ಯಾವುದೇ ಭಯವಿಲ್ಲದೆ ಬೇಗ ಊರು ತಲುಪುವುದು ಸೂಕ್ತನಾ ಎನ್ನುವುದನ್ನು ಕೂಡ ಇಲ್ಲಿ ಚಿಂತಿಸಬೇಕಾಗುತ್ತದೆ. ಅವಕಾಶ ಸಿಕ್ಕಿದೆ ಯಾಕೆ ಬಳಸಿಕೊಳ್ಳಬಾರದು. ನೀವು ಹೇಳಿದ ಹಾಗೆ ಸರ್ಕಾರಿ ಶಾಲೆಗಳಲ್ಲಿ ಬುದ್ದಿವಂತರು ಇರುತ್ತಾರೆ ಇಲ್ಲಾ ಅಂತಲ್ಲ. ಹಾಗೇ ಹೆಚ್ಚಿನ ಮಟ್ಟದಲ್ಲಿ ದಡ್ಡರೂ ಸಿಗುತ್ತಾರೆ. ಇಂತಹ ಶಾಲೆಗಳಲ್ಲಿಯಾದರೆ ಬಲವಂತವಾಗಿ ಓದುವ ಮೂಲಕ ಕಡೇ ಪಕ್ಷ ವಿದ್ಯಾಬ್ಯಾಸವನ್ನಾದರೂ ಮುಗಿಸುತ್ತಾರೆ. ಮುಂದಿನ ದಿನಗಳಲ್ಲಿ ವಿದೇಶಕ್ಕೆ ಹೋಗಬೇಕು ಅಂದಾಗ ಸುಲಭವಾಗುತ್ತದೆ ಅಲ್ಲವಾ. ಕನ್ನಡ ಶಾಲೆಗಳಲ್ಲಿ ಓದಿರುವಂತಹ ನಾವುಗಳು ಯಾವುದಾದರೂ ಎಂ.ಎನ್.ಸಿ ಕಂಪೆನಿಗಳ ಸಂದರ್ಶನಕ್ಕೆ ಹೋಗಬೇಕು ಎಂದಾಗ ಸ್ವಲ್ಪ ಮನದಲ್ಲೇ ಕಸಿವಿಸಿ ಮಾಡಿಕೊಳ್ಳುತ್ತೇವೆ. i can manage english ಎನ್ನುತ್ತೇವೆ. ಅದೇ ಇಂಗ್ಲೀಷ್ ನಲ್ಲಿ ಪರಿಣಿತಿ ಹೊಂದಿದ್ದರೆ ಸಹಾಯವಾಗುತ್ತದಲ್ಲಾ ಎನ್ನುವ ಅರ್ಥದಲ್ಲಿ ಹೇಳಿದ್ದು. ನನಗೂ ಕನ್ನಡದ ಬಗ್ಗೆ ಹೆಮ್ಮೆ ಇದೆ. ಹಾಗೇ ಇತರರಂತೆ ಬಾಳಬೇಕು ಎನ್ನುವ ಆಸೆಯೂ ಇದೆ. ಎಂದಾಗ ಆಂಗ್ಲ ಅನಿವಾರ್ಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಂಗ್ಲ ಶಾಲೆಯಲ್ಲಿ ಓದಿದರೆ ಮಾತ್ರ ಉದ್ದಾರ ಆಗಿಬಿಡ್ತಾರೆ ಅನ್ನೋ ಮೂಡನಂಬಿಕೆ !!!! -ಚೈತನ್ಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉದ್ದಾರ ಆಗ್ತಾರೆ ಅನ್ನುವುದಕ್ಕಿಂತ ಕಡೇ ಪಕ್ಷ ಆಂಗ್ಲ ಭಾಷಾ ಜ್ಞಾನವಾದರೂ ಹುಟ್ಟುತ್ತದೆ ಎನ್ನುವುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಬಡ ಮಕ್ಕಳಿಗೆ ಉನ್ನತ ಮಟ್ಟದಲ್ಲಿ ಬೆಳೆಯಲು ಇದೊಂದು ಸದಾವಕಾಶ>> ಇದೊಂದು ಮರೀಚಿಕೆಯಾಗುದರಲ್ಲಿ ಏನೂ ಸಂಶಯವಿಲ್ಲ ನಾಡಿಗ ಸರ್. ಇಂಥಾ ಸರಕಾರಿ-ಖಾಸಗಿ ಸಹಭಾಗಿತ್ವಗಳೆಲ್ಲಾ ಮುಂದೆ ಒಂದು ದಿನ ಸಂಪೂರ್ಣವಾಗಿ ಖಾಸಗಿಯವರ ಪಾಲಾಗುವುದೇ ಖಂಡಿತ. ನಮ್ಮ ಮಾರುತಿ ಉದ್ಯೋಗ್ ಈಗೇನಾಗಿದೆ ನೋಡಿ. ಆನಂತರ ಈ ಖಾಸಗಿ ಶಾಲೆಗಳಿಗೂ, ಈಗ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳನ್ನು ನಡೆಸುವವರಿಗೂ ಯಾ ಈಗಾಗಲೇ ಸಣ್ಣ ಪಟ್ಟಣಗಳಲ್ಲೂ ಪ್ರಾರಂಭವಾಗಿರುವ ಕಾನ್ವೆಂಟ್ಗಳ ಮಾಲಿಕರಿಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಕೇಳಿದಷ್ಟು ಡೊನೇಶನ್, ಫೀ ಕಟ್ಟಿದರೆ ಮಾತ್ರ ಅಲ್ಲಿ ಅವಕಾಶ, ಇಲ್ಲವೇ ಹಳೇ ಗಂಡನ ಪಾದವೇ ಗತಿ ಎಂಬಂತೆ ಇವರಿಗೆ ಸರಕಾರೀ ಶಾಲೆಗಳೇ ಗತಿ. <<<ಹಾಗಂತ ಪೂರ್ಣ ಕನ್ನಡ ಮಯವಾದರೆ ನಮ್ಮ ರಾಜ್ಯದ ಮಕ್ಕಳು ಉನ್ನತ ಸ್ಥಾನಕ್ಕೆ ಏರಲು ಸಾದ್ಯವೆ. ಇವತ್ತು ಎಲ್ಲೆಡೆ ಇಂಗ್ಲೀಷ್ ಮಯವಾಗಿರಬೇಕಾದರೆ ರಾಜ್ಯದ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಸಿಗುವಂತಹ ವಿದ್ಯಾಭ್ಯಾಸದಿಂದ ಆ ಮಟ್ಟಕ್ಕೆ ತಲುಪುತ್ತಾರಾ ಎನ್ನುವುದು ಮುಖ್ಯ ಪ್ರಶ್ನೆಯಾಗುತ್ತದೆ.>>> ಮೊದಲನೆಯದಾಗಿ ಕರ್ಣಾಟಕದಲ್ಲಿ ಸಂಪೂರ್ಣ ಕನ್ನಡಮಯವಾಗಲು ಸಾಧ್ಯವಿಲ್ಲ. ಏಕೆಂದರೆ ಈಗಿರುವ ಶಿಕ್ಷಣ ಲಾಬಿ ಇದನ್ನು ಆಗಿಬರಲು ಬಿಡುವುದಿಲ್ಲ. ಇದನ್ನು ಇನ್ನೊಂದು ರೀತಿಯಲ್ಲಿ ನೋಡಿದರೆ, ಕನ್ನಡ ಪಠ್ಯಪುಸ್ತಕಗಳಲ್ಲಿ ಸಂಸ್ಕೃತ ಶಬ್ದಗಳನ್ನು ತುರುಕಿದರೆ ಕನ್ನಡ ಮಾಧ್ಯಮವಾಗಿಬಿಡುತ್ತದೆ ಎಂದು ಶಿಕ್ಷಣ ತಜ್ಞರು ಭಾವಿಸಿರುವ ಹಾಗಿದೆ. ನಾನು ಇತ್ತೀಚಿನ ಪಠ್ಯ ಪುಸ್ತಕಗಳನ್ನು ತೆರೆದು ನೋಡಿಲ್ಲ; ಆದರೆ ನಾನು ಶಾಲೆಯಲ್ಲಿ ಓದುವಾಗಂತೂ ಇದು ಸಂಸ್ಕೃತ ಪಠ್ಯವೋ ಕನ್ನಡ ಮಾಧ್ಯಮದ ವಿಜ್ಞಾನ ಪಠ್ಯವೋ ಎಂದು ಗೊಂದಲವಾಗುತ್ತಿತ್ತು. ಹೀಗಾಗಿ ಕನ್ನಡ ಪಠ್ಯಗಳನ್ನು ಕನ್ನಡದಲ್ಲಿಯೇ ಬರೆಯದ ಹೊರತು ನಮ್ಮ ಭಾಷೆಯಲ್ಲಿ ಕಲಿಯುತ್ತಿದ್ದೇವೆ ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡುವುದಿಲ್ಲ. ಸರಕಾರಿ ಶಾಲೆಗಳಲ್ಲಿ ಓದುವ ಬಡ ವಿದ್ಯಾರ್ಥಿಗಳು ಹಿಂದುಳಿಯಲು ಕನ್ನಡ ಮಾಧ್ಯಮದಲ್ಲಿ ಓದುತ್ತಿರುವುದೇ ಕಾರಣ ಎಂದು ಹೇಳುವಾಗ ಇದನ್ನೂ ಗಮನದಲ್ಲಿಡಬೇಕಾಗುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುನಾಥರೆ, ಡೊನೇಷನ್, ಫಿ ಅಂತಾದರೆ ಅದಕ್ಕೆ ಖಂಡಿತಾ ನನ್ನದೂ ವಿರೋಧವಿದೆ. ಉಚಿತವಾಗಿ ಸಿಕ್ಕರೆ ಮಾತ್ರ ಎಂದು. ನೀವು ಹೇಳಿದ್ದು ಸತ್ಯ ಇತ್ತೀಚಿನ ದಿನಗಳಲ್ಲಿ ಕನ್ನಡ ಪಠ್ಯ ಪುಸ್ತಕಗಳೇ ಗೊಂದಲ ಮಯವಾಗಿದೆ. ಮಂಜುನಾಥರೆ ಸರ್ಕಾರಿ ಶಾಲೆಗಳಲ್ಲಿ ಬಂದಂತಹ ಶಿಕ್ಷಕರು ಬಿ.ಇಡ್ ನಲ್ಲಿ ಹೆಚ್ಚಿನ ಅಂಕಗಳನ್ನು ಪಡೆದಂತವ್ರು. ಅದೇ ಖಾಸಗಿ ಶಾಲೆಗಳಲ್ಲಿ ಕಡಿಮೆ ಅಂಕ ಪಡೆದವರು ಇರುತ್ತಾರೆ. ಆದರೂ ಖಾಸಗಿ ಶಾಲೆಗಳಲ್ಲಿ ಫಲಿತಾಂಶ ಹೆಚ್ಚಿರುತ್ತದೆ. ಕಾರಣ ವ್ಯವಸ್ಥೆ. ಪಾಠ ಮಾಡಲಿ ಬಿಡಲಿ ಸಂಬಳ ಬರುತ್ತದೆ ಎಂಬ ಧೋರಣೆ. ಖಂಡಿತಾ ನಿಮ್ಮ ವಾದಕ್ಕೆ ನನ್ನ ಸಹಮತವಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುನಾಥರೆ ನನ್ನದೊಂದು ಅನುಭವ, ನಾನು ಎಸ್.ಎಸ್.ಎಲ್.ಸಿ ಹಾಗೂ ಡಿಪ್ಲೊಮೊದಲ್ಲಿ ಶೇ.70 ಅಂಕ ಪಡೆದಿದ್ದೇನೆ. ನಾನು ಓದಿದ್ದೆಲ್ಲಾ ಸರ್ಕಾರಿ ಶಾಲೆಯಲ್ಲೇ. 1990-91ರಲ್ಲಿ ಬಿಪಿಎಲ್ ನಲ್ಲಿ ಕೆಲಸ ಸಿಕ್ಕಿತು. ಅಲ್ಲಿರುವವರೆಲ್ಲಾ ಮಲೆಯಾಳಿಗಳು.ನನಗೆ ಇಂಗ್ಲೀಷ್ ಚೆನ್ನಾಗಿಯೇ ಅರ್ಥವಾಗುತ್ತಿತ್ತು. ಆದರೆ ಮಾತನಾಡಿದರೆ ಎಲ್ಲಿ ತಪ್ಪಾಗುತ್ತದೋ ಎನ್ನುವ ಭಯ. ಹೀಗಾಗಿ ಪ್ರಾರಂಭದಲ್ಲಿ ನನ್ನನ್ನು ಪ್ರೊಡಕ್ಷನ್ ನಿಂದ ಟೂಲಿಂಗ್ ಗೆ ಹಾಕಿದರು. ಅದನ್ನು ಅವಮಾನ ಅಂತ ಪರಿಗಣಿಸದೆ ಹಠದಿಂದ ಇಂಗ್ಲೀಷ್ ಕಲಿತೆ. ಆ ನಂತರ ದೆಹಲಿ ಸೇರಿದಂತೆ ವಿವಿಧೆಡೆ ಭೇಟಿ ನೀಡಿದೆ. ಎಲ್. ಜಿ, ವಿಡಿಯೋಕಾನ್ ಸೇರಿದಂತೆ ವಿವಿಧ ಕಂಪೆನಿಗಳ ಜೊತೆ ಗಂಟೆಗಟ್ಟಲೆ ಚರ್ಚೆ ಮಾಡುತ್ತಿದ್ದೆ. ಆಗ ನಾನು ಅಂದುಕೊಂಡಿದ್ದು ನನಗೆ ಇಂಗ್ಲೀಷ್ ಏನಾದರೂ ಸರಿಯಾಗಿ ಬಂದಿದ್ದರೆ ಮಲೆಯಾಳಿಗಳಿಗೆ ಬುದ್ದಿ ಕಲಿಸಬಹುದಲ್ಲಾ ಅನ್ನಿಸುತ್ತಿತ್ತು. ಆದರೆ ನನ್ನ ಜೊತೆಯಲ್ಲಿದ್ದ ವಿಜಯ್ ಎನ್ನುವವನಿಗೆ ಇಂಗ್ಲೀಷ್ ಭಾಷಾ ಸಮಸ್ಯೆಯಿಂದಾಗಿ ಆತ ಬಿಪಿಎಲ್ ಬಿಟ್ಟು ಹೊರ ಬರಲಿಲ್ಲ. ನನಗೆ ಸಿಟ್ಟು ಬಂದಿದ್ದೂ ಇದೆ. ಇವರು ನಮ್ಮಲ್ಲೇ ಬಂದು ನಮಗೆ ಆಟ ಆಡಿಸುತ್ತಾರಲ್ಲಾ ಅಂತ. ಅಸಾಹಯಕರಾಗಿರುತ್ತೇವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುರೇಶ್, ಇಂಗ್ಲೀಷ್ ಬೇಕು ಅಂತೇಳಿ ಕಡೆಗೆ ನಿಮ್ಮ ವಾದ ಬಂದು ನಿಂತಿದ್ದು ">> ಇವರು ನಮ್ಮಲ್ಲೇ ಬಂದು ನಮಗೆ ಆಟ ಆಡಿಸುತ್ತಾರಲ್ಲಾ ಅಂತ. ಅಸಾಹಯಕರಾಗಿರುತ್ತೇವೆ. " ಅನ್ನುವಲ್ಲಿಗೆ. ನನ್ನ ಲೇಖನದ ಮೂಲ ಆಶಯ ಇರುವುದು ಇಲ್ಲೇ.ನಾವ್ಯಾಕೆ ಅವರ ಜೊತೆ ಇಂಗ್ಲೀಷ್ ಮಾತಾಡ ಬೇಕಾಗಿ ಬಂತು ಅಂತ ಒಮ್ಮೆ ಯೋಚಿಸಿ.ಆ ಮಲಯಾಳಿಗಳು ಇಲ್ಲೇ ಹುಟ್ಟಿ ಬೆಳೆದರೂ ಇದೆ 'ಸಿ.ಬಿ.ಎಸ್.ಇ' ತರದ ಕರ್ನಾಟಕದಲ್ಲೇ ಕನ್ನಡವನ್ನ ಕಲಿಸದ ಶಾಲೆಗಳಲ್ಲಿ ಓದಿ ಬಂದಿರುತ್ತಾರೆ. ಇನ್ನ ಅವ್ರು ಕನ್ನಡ ಕಲಿಯುವುದೆಲ್ಲಿ? ಅವರಿಗೋಸ್ಕರ ನಾವು ನಮ್ಮತನವನ್ನ ಬಲಿ ಕೊಡಬೇಕಾ? ಈ ರೀತಿಯ ಅನುಭವ ನನಗೂ ಆಗಿದೆ.ಕೇವಲ ನಂಗೆ-ನಿಮಗಲ್ಲ ಕನ್ನಡ ಮಾಧ್ಯಮದಿಂದ ಬಂದ ಬಹುತೇಕರಿಗೆ ಆಗಿರಬಹುದು.ಆದರೆ ಅದಕ್ಕೆ ನಾವು ಕನ್ನಡ ಮಾಧ್ಯಮದಲ್ಲಿ ಓದಿದ್ದು ಕಾರಣ ಅಂತ ತಿಳಿಯುವದು ತಪ್ಪು. ಸಮಸ್ಯೆಯಿರುವುದು ಕನ್ನಡ ಮಾಧ್ಯಮದ ಶಿಕ್ಷಣದಲ್ಲಿ ಕಲಿಯುವುದರಿಂದಲ್ಲ.ಆ ಶಿಕ್ಷಣದ ಗುಣಮಟ್ಟದಲ್ಲಿ,ಅದನ್ನ ಪರಿಹರಿಸುವ ಬಗ್ಗೆ ಸರ್ಕಾರ ಗಮನ ಕೊಡಬೇಕು.ಅದು ಬಿಟ್ಟು ನಮ್ಮ ನೆಲದ ಬೇರು ಸಡಿಲಿಸುವ 'ಸಿ.ಬಿ.ಎಸ್.ಇ' ಏಕೆ ಬೇಕು ನಮಗೆ?, ನೀವೆಳಿದಂತೆ ಇಂಗ್ಲೀಷ್ ಕಲಿಯುವುದೇ ನಾಗರೀಕತೆ,ಇಂಗ್ಲಿಶ್ ಕಲಿತರೆ ಬಡವರು ಉದ್ದಾರ ಆಗ್ತಾರೆ ಅನ್ನುವ ಮಾತುಗಳನ್ನ ನಾನು ಒಪ್ಪಲಾರೆ. ಇಂದಿನ ಯುಗಕ್ಕೆ ಇಂಗ್ಲೀಷಿನ ಅವಶ್ಯಕತೆಯಿರುವುದು ಅಗತ್ಯ,ನಿಜ.ಇಂಗ್ಲೀಶನ್ನ ಒಂದು ಭಾಷೆಯಾಗಿ (ಭಾಷೆಯಾಗಿ ಮಾತ್ರ) ಪ್ರಾಥಮೀಕ ಶಾಲೆಯಿಂದಲೂ ಕಲಿಸಲಿ.ಉಳಿದಂತೆ ಕನ್ನಡ ಮಾಧ್ಯಮವಿರಲಿ.ಇಂಗ್ಲೀಷನ್ನು ಒಂದು ಭಾಷೆಯಾಗಿ ಕಲಿತವನಿಗೆ ಉನ್ನತ ಶಿಕ್ಷಣ ಆಂಗ್ಲಮಯವಾದಾಗ ಅದನ್ನ ಹೆದರಿಸುವ ಮನೋಸ್ಥಿತಿ,ಜ್ಞಾನ ಎಲ್ಲವು ಬಂದಿರುತ್ತದೆ.ನಾನು ಓದಿದ್ದು ಹಳ್ಳಿಯ ಶಾಲೆಯಲ್ಲೇ, ಕನ್ನಡ ಮಾಧ್ಯಮದಲ್ಲೇ. ಹಾಗೇ ಈಗ ಕನ್ನಡ ಮಾಧ್ಯಮದಲ್ಲಿ ಬಳಸುತ್ತಿರುವ ಭಾಷ ಪ್ರಯೋಗವನ್ನ ಬದಲಾಯಿಸದೆ ಇದ್ದರೆ, ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ಉನ್ನತ ಶಿಕ್ಷಣದಲ್ಲಿ ಅನುಭವಿಸುವ ಪಾಡೇನು ಅನ್ನುವುದರ ಸ್ಪಷ್ಟ ಅರಿವು ನನಗೂ ಇದೆ,ಏಕೆಂದರೆ ನಾನು ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಓದಿ ಬಂದವನು.ಕನ್ನಡದ ವಿಜ್ಞಾನ,ಗಣಿತ ಪಾಠಗಳಲ್ಲಿ ಬಳಸುವ 'ಮಡಿ'ವಂತಿಕೆ ಪದಗಳನ್ನ ತೆಗೆದು, ಆದಷ್ಟು ಆಡು ಭಾಷೆಯಲ್ಲಿ ಬಳಸುವಂತಹ ಪದಗಳನ್ನ ಬಳಸಿದರೆ ಅದು ಪರಿಣಾಮಕಾರಿಯಾದೀತು. ಉದಾಹರಣೆಗೆ ಗೆಳೆಯ ವಸಂತ್ ಯಾವಾಗಲು ಹೇಳುತ್ತಿರುತ್ತಾರೆ.'ಪೀನ ದರ್ಪಣ, ನಿಮ್ನ ದರ್ಪಣ' ಅಂತ. ಪೀನ ಅಂದ್ರೇನು ನಿಮ್ನ ಅಂದ್ರೇನು ಅಂತ ಇವತ್ತಿಗೂ ನನಗೆ confusion ಇದೆ.ಇಷ್ಟೆಲ್ಲಾ ಮಡಿವಂತಿಕೆಯ ಬದಲು ನೇರವಾಗಿ ಪೀನ,ನಿಮ್ನ ಬೇಡ 'ಉಬ್ಬು,ತಗ್ಗು' ಅನ್ನೋ ಸಾಮನ್ಯ ಜನರ ಭಾಷೆ ಬಳಸಲಿ. ಬಡವರ ಮಕ್ಕಳು ಇಂಗ್ಲಿಷ್ ಕಲಿಯಲಿ ಅಂತ ಸರ್ಕಾರದ ಈ ನಿರ್ಧಾರವನ್ನ ಬೆಂಬಲಿಸುವ ಮೊದಲು ಅಲ್ಲಿ 'ಖಾಸಗಿ ಸಹಭಾಗಿತ್ವ' ಅನ್ನೋ ಮಾತನ್ನು ನೋಡಿ.ಖಾಸಗಿಯವರು ಬಂದರೆ ಬಡವರಿಗೆ ಸಿಕ್ಕಂತೆಯೇ! ನೀವು ಹೇಳಿದಂತೆ, ಇಷ್ಟೆಲ್ಲಾ ಇಲ್ಲಿ ಚರ್ಚೆ ಮಾಡುವ ನಾವೆಲ್ಲರೂ ಅಂತಿಮವಾಗಿ ಮಕ್ಕಳನ್ನ ಆಂಗ್ಲ ಮಾಧ್ಯಮಕ್ಕೆ ಕಳಿಸುತ್ತಿರುವುದು ನಿಜ.ಆದರೆ ಅದಕ್ಕೆ ಕಾರಣ ನಮ್ಮ ಸರ್ಕಾರದ ಶಿಕ್ಷಣ ವ್ಯವಸ್ತೆ ಮತ್ತು ಈ ದೇಶದ ಶಿಕ್ಷಣದ ದ್ವಂದ್ವ ನೀತಿ. ಒಂದಂತು ಸತ್ಯ ಶಿಕ್ಷಣದ ರಾಷ್ಟ್ರೀಕರಣವಾಗದೆ 'ಸರ್ವರಿಗೂ ಸಮಾನ ಶಿಕ್ಷಣ' ಸಿಗದೇ ಇದ್ದಾರೆ ನಮ್ಮ ದೇಶದ ಅಸಮಾನತೆ,ಅಪಸವ್ಯದ ಕೂಗು ಎಂದಿಗೂ ಮರೆಯಾಗದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನ್ನಡ ಕಲಿತರೆ ಕರ್ನಾಟಕ,ಹಿಂದಿ ಕಲಿತರೆ ಭಾರತ ಅನ್ನೋ ಮನಸ್ಥಿತಿಯೇ ಇವೆಲ್ಲಕ್ಕೂ ಕಾರಣ. ಕನ್ನಡದ ಬಗ್ಗೆ ಮಾತನಾಡಿದರೆ ಅದು ದೇಶ ದ್ರೋಹ ಅನ್ನುವ ಮುಗ್ದ ಮನಸುಗಳೆಡೆಗೆ ನನಗೆ ಕನಿಕರವಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮಗೂ ಗೊತ್ತಿರಬಹುದು ನಾಡಿಗ ಸರ್.. ಈ ಬಿಪಿಎಲ್ ಕಂಪೆನಿಯ ಸ್ಥಾಪಕ ಒಬ್ಬ ಮಲೆಯಾಳಿ (ಟಿ.ಪಿ.ಜಿ. ನಂಬಿಯಾರ್). ಹೀಗಾಗಿ ನಿಮಗೆ ಕೈಗೊಬ್ಬ ಕಾಲಿಗೊಬ್ಬ ಮಲೆಯಾಳಿ ನೌಕರ ಆ ಕಂಪೆನಿಯಲ್ಲಿ ಕಾಣಸಿಗುತ್ತಿದ್ದಲ್ಲಿ ಅದರಲ್ಲಿ ಆಶ್ಚರ್ಯವೇನೂ ಇಲ್ಲ. ಈತನ ಅಳಿಯ ಈಗ ನಮ್ಮ ಕರ್ಣಾಟಕದಿಂದ ರಾಜ್ಯಸಭಾ ಸದಸ್ಯನಾಗಿ ಆಯ್ಕೆಯಾಗಿರುವ ರಾಜೀವ್ ಚಂದ್ರಶೇಖರ್ ಎಂಬ ಮಲೆಯಾಳಿ ಉದ್ಯಮಿ. ಈತನ ಹೆಸರಿಗೆ ಈಗ ಕನ್ನಡಪ್ರಭ ಪತ್ರಿಕೆಯ ಶೇರು ಹಕ್ಕುಗಳು ಮಾರಾಟವಾಗಿವೆ. ಏನೇ ಆಗಲಿ, ಜೈ ಕರ್ಣಾಟಕ!! ಜೈ ಕನ್ನಡ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೇಂದ್ರ ಸರಕಾರದ ಯೋಜನೆಗಳಡಿ ರಾಜ್ಯಗಳಿಗೆ ಸಹಕಾರ ಸಿಗಬೇಕಾದರೆ, ಕೇಂದ್ರದ ನೀತಿಯನ್ನೇ ಅನುಸರಿಸಬೇಕು ಅನ್ನುವ ಕಡ್ಡಾಯ ಆದೇಶ ಇರುವಂತೆ ಭಾಸವಾಗುತ್ತಿದೆ. "ಸಿ.ಬಿ.ಎಸ್.ಇ."ಯವರೇ ನಮ್ಮ ರಾಜ್ಯದ ಸರಕಾರೀ ಶಾಲೆಗಳನ್ನು ನಡೆಸುವುದಾದರೆ, ರಾಜ್ಯದ ಶಿಕ್ಷಣ ಇಲಾಖೆ ಇನ್ನೇಕೆ ಬೇಕು? ಭ್ರಷ್ಟರಾಜಕಾರಣಿಗಳು ಕಣ್ಣಿದ್ದೂ ಕುರುಡರು. ಎಲ್ಲರಿಗೂ ತಮ್ಮ ತಮ್ಮ ಬೇಳೆ ಬೇಯಿಸ್ಕೊಳ್ಳುವುದಕ್ಕೇ ಸಮಯ ಸಾಲುತ್ತಿಲ್ಲ. ನಮ್ಮ ಮುಖ್ಯಮಂತ್ರಿಗಳಿಗೆ ತಾವೇ ಕೆಳಗಿಳಿಸಿದ್ದ ಮಹಿಳಾಮಂತ್ರಿಯನ್ನು ವಾಪಾಸು ಕರೆದು ಮಂತ್ರಿಯಾಗಿಸಿ ಸಂಪುಟ ಸಭೆಯಲ್ಲಿ ಭಾಗವಹಿಸುವಂತೆ ಮಾಡುವವರೆಗೆ ಮನಶ್ಯಾಂತಿಯೇ ಇಲ್ಲ. ಅವರಿಗೆ ಬೇರಾವ ವಿಚಾರಗಳೂ ಮನದಟ್ಟು ಆಗುತ್ತಲೇ ಇಲ್ಲ. ಇನ್ನು ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಸಂಘಟನೆಗಳು, ಬೀದಿ ಪ್ರತಿಭಟನೆಗಳನ್ನಷ್ಟೇ ಮಾಡಿ, ಸುಮ್ಮನಾಗಿಬಿಡುತ್ತಿವೆ. ಮುಂದೊಂದು ದಿನ ಇವೆಲ್ಲಾ ಕುಟಕು ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದರೂ ಆಶ್ಚರ್ಯವೇನಿಲ್ಲ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಇನ್ನು ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಸಂಘಟನೆಗಳು, ಬೀದಿ ಪ್ರತಿಭಟನೆಗಳನ್ನಷ್ಟೇ ಮಾಡಿ, ಸುಮ್ಮನಾಗಿಬಿಡುತ್ತಿವೆ. ಮುಂದೊಂದು ದಿನ ಇವೆಲ್ಲಾ ಕುಟಕು ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದರೂ ಆಶ್ಚರ್ಯವೇನಿಲ್ಲ. ಇದು ಕೇವಲ ಸಂಘಟನೆಗಳಿಂದ ಆಗುವ ಕೆಲಸವಲ್ಲ.ಸಾಹಿತಿಗಳು,ಬುದ್ದಿಜೀವಿಗಳು,ವಿವಿಧ ಕ್ಷೇತ್ರದ ಗಣ್ಯರು,ಕಡೆಗೆ ಜನಸಾಮಾನ್ಯರ ಜವಾಬ್ದಾರಿ ಕೂಡ.ಇಂತ ತಲೆ ಕೆಟ್ಟ ನಿರ್ಧಾರಗಳನ್ನ ತೆಗೆದುಕೊಂಡಾಗ ಅದನ್ನ ವಿವಿಧ ವೇದಿಕೆಗಳಲ್ಲಿ ಪ್ರತಿಭಟಿಸಿ ಸರ್ಕಾರಕ್ಕೆ ಒಂದು ಸಂದೇಶನೀಡಬೇಕು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲಿ ವಿಚಿತ್ರ ಅಂದ್ರೆ, ಒಂದು ಕಡೆ ನಮ್ ಸರ್ಕಾರ ಖಾಸಗಿ ಶಾಲೆಗಳ ವಿರುದ್ಧ ಸುಪ್ರೀಂ ಕೋರ್ಟ್ ಗೆ ಹೋಗಿ ಕನ್ನಡ ಮಾಧ್ಯಮದಲ್ಲಿ ಕಲಿಕೆಯಾಗಬೇಕು ಅಂತೆಲ್ಲ ವಾದ ಮಂಡಿಸ್ತಾ ಇದೆ. ಇನ್ನೊಂದು ಕಡೆ ತನ್ನ ತೆಕ್ಕೆಯಲ್ಲಿರುವ ಪಾಲಿಕೆ ಶಾಲೆಯಲ್ಲಿ ಸಿಬಿಎಸ್‘ಇ ಸಿಲಾಬಸ್ ಇರೋ ಇಂಗ್ಲಿಷ್ ಮಾಧ್ಯಮ ತರ್ತಿನಿ ಅಂತಾರೆ. ಜೊತೆಗೆ ಕರ್ನಾಟಕದ ಪಠ್ಯಕ್ರಮ outdated ಅನ್ನೋ ರೀತಿಯಲ್ಲಿದೆ ಇವರ ಹೇಳಿಕೆ. ಇದೊಳ್ಳೆ ವಿರೋಧ ಪಕ್ಷದ ಹೇಳಿಕೆ ಇದ್ದಂಗಿದೆ. ಇವರ ಕೈಲೇ ಅಧಿಕಾರ ಇದ್ದಾಗ, ಕರ್ನಾಟಕದ ಪಠ್ಯಕ್ರಮ ಸುಧಾರಿಸಿ up-to-date ಮಾಡೋದು ಬಿಟ್ಟು, ನಮ್ ಕೈಲಾಗಲ್ಲ ಅದಕ್ಕೆ ಸಿ.ಬಿ.ಎಸ್.ಇ ನೇ ಪರಿಹಾರ ಅಂದಂಗಿದೆ. ಇದು ಬಲ್ ಅಪರೂಪದ contradiction :) ಈ ವಿಷಯದ ಬಗ್ಗೆ ನನ್ನ ಗೆಳತಿ ಪೂರ್ಣಿಮಾ ಅನಿಸಿಕೆ ಇಂತಿದೆ: ನಮ್ಮ ಮನೆ ಶ್ರೀರಾಮಪುರದ ಹತ್ತಿರ ಇರುವುದು. ಅಲ್ಲಿ ಇರುವ ಸ್ಲಮ್ ಅಲ್ಲಿರುವ ಹೆಚ್ಚಿನವರು ತಮಿಳು ಮೂಲದವರು. ಆ ಮಕ್ಕಳೆಲ್ಲ ಹೋಗುವುದು ಕಾರ್ಪೊರೇಶನ್ ಶಾಲೆಗೆ. ಹೀಗಾಗಿ ವಲಸಿಗರ ಈ ಮಕ್ಕಳೆಲ್ಲ ಕನ್ನಡ ಕಲಿತು ಕನ್ನಡಿಗರಾಗುತ್ತಾ ಇದ್ದಾರೆ. ಈಗ ಆ ಎಲ್ಲ ಶಾಲೆ ಸಿ.ಬಿ.ಎಸ್.ಇ ಮಾಡಿ ಬಿಟ್ಟರೆ,ಆಮೇಲೆ ಐಟಿ.ಬಿಟಿ ಕಂಪನಿಗಳಲ್ಲಿರುವ ಶ್ರೀಮಂತ ವಲಸಿಗರಂತೆ ಈ ಬಡ ವಲಸಿಗರು ಕನ್ನಡ ಕಲಿಯಲ್ಲ. ನಿಧಾನಕ್ಕೆ ಬೆಂಗಳೂರಲ್ಲಿ ಕನ್ನಡದ ಗಂಧ ಗಾಳಿ ಇಲ್ಲದ ಕನ್ನಡಿಗರ ಮತ್ತು ವಲಸಿಗರ ಪೀಳಿಗೆಯೇ ಹುಟ್ಟಬಹುದು. ಇದೆಲ್ಲ ನೆನೆದರೆ ಭಯವಾಗುತ್ತೆ. ನಮ್ಮ ಸರ್ಕಾರ ಯಾಕಿಂತಹ ನಾಡು ಒಡೆಯುವ ಕೆಲಸ ಮಾಡುತ್ತಾ ಇದೆ ಅಂತ. ಕನ್ನಡ ಮಾಧ್ಯಮದ ವ್ಯವಸ್ಥೆಯಲ್ಲಿ ಚೆನ್ನಾಗಿ ಸುಧಾರಣೆ ತಂದು, ಅದರಿಂದ ಜೀವನಕ್ಕೆ ಅನುಕೂಲವಾಗುವಂತಹ ವ್ಯವಸ್ಥೆ ನಮ್ಮ ಸರ್ಕಾರ ಕಟ್ಟಬೇಕು. ಆದರೆ, ಈಗ ಆಗುತ್ತಿರುವುದನ್ನೆಲ್ಲ ನೋಡಿದರೆ ಮುಂದೇನಾಗುತ್ತೋ ಅನ್ನುವ ಆತಂಕ ಕಾಡುತ್ತೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಕನ್ನಡ ಮಾಧ್ಯಮದ ವ್ಯವಸ್ಥೆಯಲ್ಲಿ ಚೆನ್ನಾಗಿ ಸುಧಾರಣೆ ತಂದು, ಅದರಿಂದ ಜೀವನಕ್ಕೆ ಅನುಕೂಲವಾಗುವಂತಹ ವ್ಯವಸ್ಥೆ ನಮ್ಮ ಸರ್ಕಾರ ಕಟ್ಟಬೇಕು. ಆದರೆ, ಈಗ ಆಗುತ್ತಿರುವುದನ್ನೆಲ್ಲ ನೋಡಿದರೆ ಮುಂದೇನಾಗುತ್ತೋ ಅನ್ನುವ ಆತಂಕ ಕಾಡುತ್ತೆ. ಒಪ್ಪುವಂತ ಮಾತು ವಸಂತ್.ಅಂತಿಮವಾಗಿ ಹೇಳುವುದಾದರೆ ಶಿಕ್ಷಣದ ರಾಷ್ಟ್ರೀಕರಣ,ಹಾಗು ಆಯಾ ರಾಜ್ಯಗಳ ಮಾತೃ ಭಾಷೆಗಳಲ್ಲೇ ಶಿಕ್ಷಣ ನೀಡುವುದೇ ಉತ್ತರ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.