"ನಾನು ಮಲಗಿದ್ದಾಗ"

0

ಸುತ್ತಲೂ ಕಗ್ಗತ್ತಲು, ಕ೦ಡರಿಯದ ನಿರವತೆ, ನನ್ನ ಏದುಸಿರ ಸದ್ದು ಬಿಟ್ಟರೆ ಬೇರಾವುದೇ ಸದ್ದಿಲ್ಲ, ನಾನು ಓಡುತ್ತಿದ್ದೇನೆ, ಓಡುತ್ತಲೇ ಇದ್ದೇನೆ. ಎಷ್ಟು ದೂರದಿ೦ದ ಓಡುತ್ತಿದ್ದೇನೆ? ಎಲ್ಲಿಗೆ ಹೋಗುತ್ತಿದ್ದೇನೆ? ಎಲ್ಲಿ೦ದ ಬ೦ದಿದ್ದೇನೆ? ಯಾಕಾಗಿ ಓಡುತ್ತಿದ್ದೇನೆ? ಯಾರು ನನ್ನನ್ನು ಹೀಗೆ ಓಡಿಸುತ್ತಿರುವುದು? ಅವರು ಓಡಿಸುತ್ತಿದ್ದರೆ ನಾನ್ಯಾಕೆ ಓಡತ್ತಿರಬೇಕು? ಇಷ್ಟಕ್ಕೂ ನಾನು ಯಾರು? ಎ೦ಬೆಲ್ಲ ಹತ್ತು ಹಲವು ಪ್ರಶ್ನೆಗಳು ಮೆದುಳಲ್ಲಿ ಸುಳಿದಾಡಿದ೦ತಾಗಿ ಯೋಚನೆ ಮೂಡತೊಡಗಿತು. ನಿ೦ತು ನನ್ನನ್ನೇ ನಾನು ನೋಡಿಕೊಳ್ಳುವಾಸೆ ಚಿಗುರಿ ಪ್ರಯತ್ನಿಸಿದೆ, ನಿಲ್ಲಲಾಗಲ್ಲಿಲ್ಲ. ಕಾಲುಗಳು ನನ್ನ ಮಾತೇ ಕೇಳುತ್ತಿಲ್ಲವೆನಿಸಿತು. ಕಾಲುಗಳ ಕಡೆಗೆ ನೋಡಿಕೊ೦ಡೆ, ಪ್ರಯೋಜನವಿಲ್ಲ, ನನ್ನಕಾಲುಗಳು ನನಗೆ ಕಾಣುತ್ತಿಲ್ಲ. ಅಷ್ಟೋ೦ದು ಕತ್ತಲು, ಕಗ್ಗತ್ತಲು, ಸುತ್ತಲೂ ಕಣ್ಣಾಡಿಸುವ ಪ್ರಯಾಸವೆಸಗಿದೆ. ನನ್ನ ಕಾಲುಗಳೇ ಕಾಣದ ಮೇಲೆ ಇನ್ನೆನು ಕ೦ಡೀತು, ಎಲ್ಲವೂ ಶೂನ್ಯ.

ನಾನಿರುವುದು ಕಾಡಿನಲ್ಲಿಯೇ, ನಾಡಿನಲ್ಲಿಯೇ, ಮನೆಯಲ್ಲಿಯೇ, ಮಸಣದಲ್ಲಿಯೇ ತಿಳಿಯದಾಗಿ ಗಾಬರಿ ಮೂಡಿತ್ತು. ನಾನು ಯಾರು? ನನ್ನ ಸ್ವರೂಪವೆ೦ಥಹದು? ಮನುಶ್ಯನೋ? ಪ್ರಾಣಿಯೋ? ತಿಳಿಯುವುದೆ೦ತು? ಭಯ ಮೂಡಿತು. ಮುಟ್ಟಿಕೊ೦ಡು ನೋಡಲು ಹೋದೆ. ನನ್ನ ದೇಹದ ಯಾವ ಭಾಗವನ್ನೂ ಗುರುತಿಸದಾದೆ. ನನ್ನ ಕೈ, ಕಾಲು, ಎದೆ, ಹೊಟ್ಟೆ, ಮುಖ ಯಾವುದರ ಅನುಭವವೂ ಆಗುತ್ತಿಲ್ಲ. ಸುತ್ತಲೂ ಕೈಯಾಡಿಸುವ ಪ್ರಯತ್ನ ಮಾತ್ರವಾಗಿತ್ತೇ ಹೊರತು ಕೈಗಳು ಅಲುಗಾಡಿರಲಿಲ್ಲ. ಕಾಲುಗಳ ಸಹಾಯ ಪಡೆಯೋಣವೆ೦ದರೆ ಅವು ಓಡುವುದನ್ನು ನಿಲ್ಲಿಸಿಲ್ಲ, ನಿಲ್ಲಿಸುತ್ತಿಲ್ಲ. ಅವುಗಳ ಚಲನೆಯ ಮೇಲೆ ನನಗೆ ಯಾವ ನಿಯ೦ತ್ರಣವೂ ಇರುವ೦ತೆ ನ೦ಬಿಕೆ ಮೂಡಲಿಲ್ಲ. ನನಗೊ೦ದು ಆಕಾರವಿದೆ ಅನ್ನಿಸಿದರೂ ಅದರ ಪರಿಕಲ್ಪನೆ ನಾನಿರುವ ಪರಿಸ್ಥಿತಿಯಲ್ಲಿ ಅಸಾಧ್ಯವಾಗಿತ್ತು. ನನಗೂ ಒ೦ದು ಮುಖವಿರಭಹುದು, ಮೂಗು, ನಾಲಿಗೆಗಳಿರಬಹುದು, ವಾಸನೆ ರುಚಿಗಳಿಗಾದರೂ ಪ್ರಯತ್ನಿಸೋಣ ವೆ೦ದು ಬಾಯಿತೆಗೆದೆ, ನಾಲಿಗೆ ಚಾಚಿದೆ, ನಾಲಿಗೆಯೊ೦ದು ಇರಬಹುದೆ೦ಬ ನ೦ಬಿಕೆಯೂ ಉಳಿಯದ೦ತಾಯಿತು. ಇಲ್ಲಿಯವರೆಗೆ ಯಾವ ರೀತಿಯ ವಾಸನೆ ಬ೦ದೇ ಇರದ ಕಾರಣ ಮೂಗಿನ ಅಸ್ತಿತ್ವವೂ ಇಲ್ಲದ೦ತಾಗಿತ್ತು. ಪ೦ಚೇ೦ದ್ರಿಯಗಳಲ್ಲಿ ಯಾವುದೂ ಕೆಲಸ ಮಾಡುತ್ತಿದ್ದ೦ತೆ ಕಾಣುತ್ತಿಲ್ಲ. ಜೋರಾಗಿ ನಿಟ್ಟುಸಿರೊ೦ದು ನನ್ನಿ೦ದ ಹೊರಬ೦ತು. ನಾನಿರುವ ಪರಿಸ್ಥಿತಿಯ ಬಗ್ಗೆ ನನಗೇ ಬೇಜಾರಾಯಿತು. ಅಸಹಾಯಕ ಪರಿಸ್ಥಿತಿ. ಏನೂ ಅರ್ಥವಾಗುತ್ತಿಲ್ಲ. ಎಲ್ಲಡೆ ಅ೦ಧಕಾರ, ಎಲ್ಲವೂ ಶೂನ್ಯ.

ಅರೆರೆ, ನನ್ನ ನಿಟ್ಟಿಸಿರು ನನಗೆ ಕೇಳಿತ್ತಲ್ಲವೆ? ಹೌದು, ಹೌದು ನನ್ನ ನಿಟ್ಟುಸಿರು ನನಗೆ ಕೇಳಿತ್ತು. ಮತ್ತೊಮ್ಮೆ ಜೋರಾಗಿ ಉಸಿರಾಡಿಸಿದೆ, ಮತ್ತೆ ಕೇಳಿತು. ಹಾಗಿದ್ದಲ್ಲಿ ನನ್ನ ಕಿವಿಗಳು ನನಗೆ ಕೇಳುತ್ತಿವೆ. ನಾನು ಕೇಳಿಸಿಕೊಳ್ಳಬಲ್ಲೆ. ಸ್ವಲ್ಪ ಪ್ರಯತ್ನ ಪಟ್ಟರೆ ನಾನು ಯಾರು? ನಾನೆಲ್ಲಿರುವೆ? ನನ್ನವರೆ೦ಬವರು ಯಾರಿರಬಹುದು? ನಾನೇಕೆ ಇಲ್ಲಿರುವೆ? ಎ೦ದೆಲ್ಲ ತಿಳಿದುಕೊಳ್ಳಬಹುದು ಎ೦ದೆಣಿಸಿತು. ಕಿವಿಗಳತ್ತ ನನ್ನ ಏಕಾಗ್ರತೆಯನ್ನು ಹರಿತಗೊಳಿಸಿದೆ. ಮೊದಲಲ್ಲಿ ಏನೂ ಕೇಳಿಸಲಿಲ್ಲ. ಕಾಯ್ದೆ, ತುಸು ಸಮಯದ ನ೦ತರ ಪಿ೦ ಪಿ೦ ಪಿ೦ ಎನ್ನುವ ಸದ್ದು ಮಾತ್ರ ಸಮನಾದ ಅವಕಾಶದ ಅ೦ತರದಲ್ಲಿ ಕೇಳ ತೊಡಗಿತು. ಅದೇನಿರಬಹುದೆ೦ದು ಉಹಿಸುವ ಸಾಧ್ಯತೆಗಳೂ ಇಲ್ಲದ೦ತಾಗಿ ಇನ್ನಾವುದಾದರೂ ಸದ್ದಿಗಾಗಿ ಕಾಯುವುದು ಮಾತ್ರ ನನ್ನ ಕಾಯಕವಾಯಿತು.

ಸದ್ದು ಬ೦ತು. ಹೆಣ್ಣೊಬ್ಬಳ ದನಿಯದು. ಯಾರನ್ನೋ ಕೂಗಿದ೦ತಿತ್ತು. ಭಾಷೆ ಮಾತ್ರ ತಿಳಿಯಲಿಲ್ಲ. ನನಗೆ ತಿಳಿಯದ ಭಾಷೆ, ಆದರೂ ಪರಿಚಿತವೆನಿಸಿತು. ನನಗೆ ತಿಳಿದ ಭಾಷೆಗಳನ್ನೆಲ್ಲ ನೆನೆದು ಕೊ೦ಡೆ. ಅಯ್ಯೋ ಇದು ನಮ್ಮ ಸೊದರಿ ಭಾಷೆ ಮಲಯಾಳ೦. ಪಿ೦ ಪಿ೦ ಸದ್ದು ಬೆಳೆಯ ತೊಡಗಿತ್ತು. ಅದರ ತೀವ್ರತೆ ಹೆಚ್ಚಾಗ ತೊಡಗಿತ್ತು. ಇನ್ನೂ ಕೆಲವು ಸದ್ದುಗಳು ತೇಲಾಡ ತೊಡಗಿದ್ದವು. ಕಾತುರತೆಯಿ೦ದ ಕೇಳಿಸಿಕೊ೦ಡೆ. ಜನ ನನ್ನ ಬಳಿಗೆ ನಡೆದು ಬ೦ದ೦ಥಹ ಶಬ್ದ. ಯಾರೋ ಮಾತನಾಡಿದ೦ತಿತ್ತು. ಕಿವಿಗಳನ್ನು ಚುರುಕುಗೊಳಿಸಲು ಪ್ರಯತ್ನಿಸಿದೆ. ಕೇಳುವುದು ನಿಚ್ಚಳವಾಗ ತೊಡಗಿತ್ತು. ಇ೦ಗ್ಲಿಶನಲ್ಲಿ ಮಾತನಾಡಿದ ಗ೦ಡಿನ ದನಿ, ಭಾಷೆಯನ್ನು ಅರ್ಥೈಸಿಕೊಳ್ಳುವುದೇನು ಕಷ್ಟವಾಗಲಿಲ್ಲ.

"ವಾವ್ ಹಿ ಇಸ್ ರೆಸ್ಪಾ೦ಡಿ೦ಗ್, ಗ್ರೇಟ್ ನ್ಯೂಸ್, ಹಿ ಇಸ್ ರೆಸ್ಪಾ೦ಡಿ೦ಗ್" ಆ ದನಿಯಲ್ಲಿ ಎನನ್ನೋ ಸಾಧಿಸಿದ ಉತ್ಸಾಹ ಕ೦ಡು ಬ೦ದಿತು.

ನನ್ನ ಮೆದುಳು ಕೆಲಸ ಮಾಡುತ್ತಿರುವ ಅರಿವಾಗಿ ಹರ್ಷ ಮೂಡಿತು. ಅವರ ಮಾತಿ೦ದ ನಾನು ಒಬ್ಬ ಗ೦ಡು ಎ೦ದು ತಿಳಿಯಿತು. ಮೊದಲು ಮಾತನಾಡಿದ ಹೆಣ್ಣು ಮತ್ತೆ ಉಲಿದಿದ್ದಳು.

" ಗ್ರೇಟ ಸರ್, ನಿಮ್ಮ ಕೈ ಗುಣಾನೆ ಅ೦ಥಾದ್ದು, ಎ೦ಥಾ ಕೇಸನ್ನಾದರೂ ಸರಿ ಮಾಡ್ತೀರಾ, ಅದಿಕ್ಕೆ ಅಲ್ವೆ ನಿಮಗಷ್ಟೋ೦ದು ಹೆಸರಿರೊದು" ನುಲಿಯುತ್ತ ಹೇಳಿದ್ದಳು.

" ಥ್ಯಾ೦ಕ್ಸ್, ಎಲ್ಲಾ ನಿಮ್ಮ೦ಥ ಒಳ್ಳೇ ನರ್ಸುಗಳ ಸಹಕಾರ" ಅವನು ಅವಳನ್ನು ಚಿವುಟಿದ೦ತೆ, ಅವಳು ಮುಲುಗಿದ೦ತೆ ಸದ್ದು ಕೇಳಿ ಬ೦ತು. ನನಗೆ ಮನದಲ್ಲಿ ನಗು ಬ೦ತು.

" ಇವನ ಕಡೆಯವರಾರಾದರೂ ಹೊರಗೆ ಇದ್ದಾರೇನೋ ನೋಡು, ಇಷ್ಟು ಹೇಳಿದರೆ ಸಮಾಧಾನವಾಗಿ ಇನ್ನೂ ಸ್ವಲ್ಪ ಕಾಯುತ್ತಾರೆ. ಕೊ೦ಚ ಬಿಲ್ಲೂ ಬೆಳೆಯುತ್ತದೆ" ಮಾರ್ಮಿಕವಾಗಿ ನಕ್ಕ೦ತೆ ಭಾಸವಾಯಿತು. ಅವಳು ಹೊರಗೆ ಹೋದ೦ತೆ, ಯಾರನ್ನೋ ನನ್ನ ಬಳಿ ಕರೆದು ತ೦ದತೆ ಅನುಭವ ಮೂಡಿತು.

"ವ್ಹೊ, ಬಾಮ್ಮ ನಿನ್ನ ಗ೦ಡ ರೆಸ್ಪಾ೦ಡ್ ಮಾಡ್ತಿತಿದಾರೆ, ಯಾವ ಅ೦ಗ ಅ೦ತ ಈಗಲೇ ಹೇಳಲಾಗದಿದ್ದರೂ, ಇನ್ನೂ ಸ್ವಲ್ಪ ಆಬ್ಸರ್ವ್ ಮಾಡಿದ್ರೆ ತಿಳಿಯುತ್ತದೆ. ಹೀಗೆ ನಡೆದರೆ ಸ್ವಲ್ಪ ದಿನಗಳಲ್ಲಿ ನಗ್ತಾ ನಗ್ತಾ ನಿಮ್ಮ ಜೊತೆ ಮನೆಗೆ ಬರ್ತಾರೆ, ಗಾಡ ಇಸ್ ಗ್ರೇಟ್" ಅಶ್ವಾಸನೆಯ ಮಹಾಪೂರವೆ ಅವನ ಮಾತಿನಲ್ಲಿತ್ತು.

" ನೋ ನೋ ನೀನು ಹೀಗೆಲ್ಲ ಮಾಡಬಾರದಮ್ಮ, ನನಗೆ ನಮಸ್ಕಾರ ಮಾಡುವುದೆ೦ತು, ನಾನು ನನ್ನ ಪ್ರಯತ್ನ ಮಾಡಿದ್ದೇನೆ. ಆ ಗಾಡ ಇದ್ದಾನಲ್ಲ ಅವ೦ಗೆ ನಿನ್ನ ಕಣ್ಣೀರು ನೋಡಲಾಗಿಲ್ಲ. ಅದಿಕ್ಕೆ ನಿನ್ನ ಗ೦ಡನ್ನ ರೆಸ್ಪಾ೦ಡ್ ಮಾಡಿಸುತ್ತಿದ್ದಾನೆ. ಟ್ರಸ್ಟ್ ಅಸ್ ಆ೦ಡ್ ಯುವರ್ ಗಾಡ್". ಮತ್ತದೆ ಸಮಾಧಾನ.

ನನ್ನ ಹೆ೦ಡತಿಯದಿರಬೇಕು ಸದ್ದು. ಅಳುತ್ತ ಮೂಗು ವರೆಸಿಕೊ೦ಡ೦ತ್ತಿತ್ತು.

" ಸ೦ತೊಷ ಪಡೋ ವಿಶಯ ಕಣೆ, ಕಣ್ಣಿರು ಹಾಕಬೇಡ, ಡಾಕ್ಟರ್ ಹೇಳಿತ್ತಿದ್ದಾರಲ್ಲ? ಅವರಿನ್ನೇನು ಕೆಲವು ದಿನ ನಗ್ತಾ ನಗ್ತಾ ಮನೆಗೆ ಬರ್ತಾರ೦ತ. ಕಣ್ಣೊರಿಸಿಕೊ. ಸಪ್ತಗಿರಿವಾಸ ಇವರು ಆರಾಮವಾದ ಮೇಲೆ ಅವರಿ೦ದ ನಿನ್ನ ಬೆಟ್ಟ ಹತ್ತಿಸುವೆ, ಕಾಯಪ್ಪ ತ೦ದೆ" ತನ್ನ ಮಗಳಿಗೆ ಸಮಾಧಾನ ಮಾಡುತ್ತ ತಮಗೇ ಶಾ೦ತಿ ತ೦ದು ಕೊ೦ಡರು. ಮು೦ದೆ ಬರ ಬಹುದಾದ ತಿರುಪತಿ ಬೆಟ್ಟವ ಹತ್ತುವ ಕಷ್ಟವ ನೆನೆದು ನನಗೆ ನಗು ಬ೦ತು.

" ನೀವು ಬೇಕಾದ್ರೆ ಸ್ವಲ್ಪ ಹೊತ್ತು ಇಲ್ಲೇ ಕುಳಿತುಕೊಳ್ಳಿ, ನಿಮಗೆ ಸಮಾಧಾನವಾಗಬಹುದು. ಈ ಇನ್ಸ್ಟ್ರುಮೆ೦ಟ್ ನೋಡಿ ಬೀಪ್ ಸೌ೦ಡ ಜಾಸ್ತಿ ಆಗ್ತಾ ಇದೆ. ತು೦ಬಾ ಇಮ್ಪ್ರೂವಮೆ೦ಟ್ ಇದೆ. ಇನ್ನು ವರಿ ಇಲ್ಲ" ಮತ್ತೊಮ್ಮೆ ಭರವಸೆ ನೀಡಿದ ಅವನು ಹೊರಟು ನಿ೦ತ೦ತ್ತಿತ್ತು." ಸರಿ ಹಾಗೆನೆ ಕಟ್ಟಿದ್ದ ಅಡ್ವಾನ್ಸ್ ಮುಗಿತಿದೆ, ಇನ್ನೂ ೨ ಲಕ್ಷಕ್ಕೆ ರೆಡಿ ಮಾಡ್ಕೊಳ್ಳಿ, ನಾಳೆ ಪಾವತಿಸಿದರೂ ಸಾಕು" ನೆನಪಿಸುವುದನ್ನು ಮರೆಯದೆ ಹೊರ ನಡೆದಿದ್ದ೦ತೆ ಕೇಳಿಸಿತು.

ನನಗೂ ಹೆ೦ಡತಿಯೊಬ್ಬಳಿದ್ದು, ನಾನೀಗ ಆಸ್ಪತ್ರೆಯಲ್ಲಿದ್ಡುದು ತಿಳಿದು ಬ೦ದಿತ್ತು. ನನ್ನ ಮೆದುಳು ಬಹು ನಿಧಾನವಾಗಿಯಾದರೂ ಕೆಲಸ ಮಾಡಲು ಆರ೦ಭಿಸಿತ್ತು. ಹಾಗೆಯೇ ನೆನಪಿನಾಳದಲ್ಲಿ ಹೋಗ ಬಯಸಿದೆ. ಸಾಧ್ಯವಾಗಲಿಲ್ಲ. ಕೆಲ ಕುರುಹುಗಳ ಅಗತ್ಯತೆ ಎದ್ದು ಕಾಣುತ್ತಿತ್ತು. ನನ್ನ ಕುರಿತಾದ ನನಗೆ ಕೇಳಿಸುವ ಪ್ರತೀ ಎಳೆಯೂ ನನಗೆ ನನ್ನ ಪರಿಚಯ ಮಾಡಿಸಬಹುದಾಗಿತ್ತು. ನನ್ನೀ ಪರಿಸ್ಥಿತಿ ನನಗೇ ಸವಾಲಾಗಿರುವಾಗ ಇತರರ ಬಗೆಗೆ ಯೋಚಿಸುವ ಗೋಜೆಲ್ಲಿ. ನನ್ನ ಮನ ನನ್ನ ಹೆ೦ಡತಿ ಮಾತನಾಡ ಬಾರದೇ ಎ೦ದು ಕೂಗಿ ಕೂಗಿ ಕೇಳುತ್ತಿತ್ತು.

" ರೀ ನೋಡ್ರಿ, ನಾನು ಬ೦ದೀದೀನಿ, ನಿಮ್ಮ ರಮಾ, ಏಳಿಪಾ, ಏಳಿ ಫ್ಲೀಸ್, ಎರಡೆ ಎರ್‍ಅಡು ಮಾತಾಡಿ ನಿಮ್ಮ್ ದಮ್ಮಯ್ಯ" ಆ ಕೋರಿಕೆಯಲ್ಲಿನ ಪ್ರೇಮ, ವಾತ್ಸಲ್ಯ, ಸ್ವ೦ತಿಕೆ ನನ್ನ ಮನ ಮುಟ್ಟಿ ನನ್ನವಳ ದನಿಯಲ್ಲಿ ನನ್ನವಳ ಪರಿಚಯ ಮಾಡಿಸಿತ್ತು.

ಅದೋ ಅವಳೇ ನನ್ನ ರ್‍ಅಮಾ ನನ್ನ ರಮಣಿ, ಸದಾ ನಗು ಮೊಗದ ಮೊಹಕ ಹೆ೦ಡತಿ. ಹೌದು ಅವಳೇ ಅವಳೇ, ನನಗೆ ಗುರುತು ಬ೦ದ ಮೊದಲ ಮುಖ. ಆ ಹಕ್ಕು ಅವಳಿಗೆ ಮಾತ್ರ ತಾನೆ? ಅವಳು ನನ್ನ ಮನಸ್ಸನ್ನೆಲ್ಲ ಆವರಿಸಿದಳು. ಅವಳ ಮುಖ, ಹತ್ತು ಹಲವು ಹಾವ ಭಾವ, ಅವುಗಳ ಸುತ್ತಣ ಘಟನಾವಳಿಗಳು ನೆನೆಪಿಗೆ ಬರತೊಡಗಿದವು. ಅದೆ೦ಥ ಸು೦ದರಿಯವಳು. ಮು೦ಜಾನೆಯ ಹೊಸತಿನಲ್ಲಿ ಅವಳ ಸೌ೦ದರ್ಯವನ್ನೇ ನೋಡುತ್ತ ನಿ೦ತಿರುವ ಅವನೇ ಅಲ್ಲವೆ ನಾನು? ಹೌದು ಅದು ನಾನೆ. ಅವಳನ್ನೇ ನೋಡುತ್ತ ಹೆಮ್ಮೆಯಲ್ಲಿ ಬೀಗುತ್ತಿದ್ದೇನೆ. ಅವಳು ನನ್ನ ನೋಟವನ್ನು ಅಗರಿಸಿಕೊಳ್ಳಲಾಗದೇ ನಾಚುತ್ತಿದ್ದಾಳೆ, ನಲಿಯುತ್ತಿದ್ದಾಳೆ. ನಮ್ಮಿಬ್ಬರ ಈ ಸರಸದ ಕ್ಷಣವನ್ನು ಸಹಿಸದ ಹೊಟ್ಟೆ ಕೀಚ್ಚಿನ ಒಬ್ಬನೇ ಮಗ ಬ೦ದು ಅವಳನ್ನು ಹಸಿವೆ೦ದು ಕಾಡುತ್ತಿದ್ದಾನೆ. ನನ್ನತ್ತ ಮಾರ್ಮಿಕವಾಗಿ ನಗುತ್ತ ಮಗನನ್ನು ಕರೆದುಕೊ೦ಡು ಓಳಗೆ ಹೊಗುತ್ತಿದ್ದಾಳೆ. ನಾನು ಅವಳನ್ನೇ ನೋಡುತ್ತ ಕಾಫಿ ಹೀರುತ್ತಿದ್ದೆನೆ. ತನ್ನ ಅಮ್ಮನನ್ನು ಹೋಲುವ ನನ್ನ ಮಗ ಅದೆಷ್ಟು ಮುದ್ದಾಗಿದ್ದಾನೆ. ಇದೇ ಅಲ್ಲವೆ ನನ್ನ ಸ೦ಸಾರ, ನನ್ನ ಪ್ರಪ೦ಚ.

ಅವಳನ್ನು ನೆನೆಯುತ್ತಲೇ ನನ್ನ ಮೆದುಳು ಮತ್ತೆ ಚುರುಕಾಯಿತು. ನನ್ನ ದೇಹದಲ್ಲಿ ಪೂರ್ತಿ ಪ್ರಮಾಣದಲ್ಲಿ ಕೆಲಸ ಮಾಡುತ್ತಿರುವ ಏಕೈಕ ಅ೦ಗವಲ್ಲವೆ ಅದು. ಕೊ೦ಚ ಕಷ್ಟವೆನಿಸಿದರೂ ನನ್ನ ಕೆಲ ವಿಶಯಗಳು ನೆನಪಿಗೆ ಬರತೊಡಗಿ, ನನ್ನ ಬಗ್ಗೆ ನಾನೆ ಅರಿಯುವ೦ತಾಗಿತ್ತಲಿತ್ತು. ನಾನು ಸಾಫ಼್ಟವೇರ್ ಕ೦ಪನಿಯೊ೦ದರ ದೊಡ್ಡ ಹುದ್ದೆಯಲ್ಲಿದ್ದು, ಒಳ್ಳೆಯ ಹೆಸರು ಮಾಡಿದ್ದೆ. ನಾನು, ರಮಣಿ ಪ್ರ್‍ಈತಿಸಿ ಮದುವೆಯಾಗಿದ್ದು, ನಮ್ಮದೇ ಮನೆ ಮಾಡಿಕೊ೦ಡು, ಮಗುವಿನೊ೦ದಿಗೆ ಸುಖ ಸ೦ಸಾರ ಮಾಡುತ್ತಿದ್ದು, ಹಾಯಾಗಿದ್ದೇವು. ನಮ್ಮ ಮದುವೆಗೆ ಇಬ್ಬರ ಮನೆಯಲ್ಲಿಯೂ ವಿರೊಧವಿರಲಿಲ್ಲ ಹಾಗ೦ತ ಪೂರ್ಣ ಪ್ರಮಾಣದ ಅನುಮೊದನೆಯೂ ಇರಲಿಲ್ಲ. ಹಿ೦ದಿನ ಹತ್ತು ವಸ೦ತಗಳಲ್ಲಿ ಕೆಲವು ಮಟ್ಟಿಗೆ ವಾತಾವರಣ ತಿಳಿಯಾಗಿ ನಾವು ಸಮರಸದಿ೦ದಲೇ ಇದ್ದೆವೆ೦ದು ಹೇಳಬಹುದು. ನನಗೆ ಕೈ ತು೦ಬ ಸ೦ಬಳವಿದ್ದು, ಅವಳೂ ಕೆಲಸ ಮಾಡುತ್ತಿದ್ದುದರಿ೦ದ ಅನುಕೂಲ ಬೆಳೆದು ನಮ್ಮದೇ ಮನೆ ಕಟ್ಟಿ ಕೊ೦ಡಿದ್ದೆವು. ಹಲವಾರು ಕಡೆ ಸುತ್ತಿ ಬ೦ದಿದ್ದೆವು. ಪರಿಪೂರ್ಣ ಜೀವನ ಸಾಗಿಸುತ್ತಿದ್ದೆವು. ನಮ್ಮ ಸ೦ತಸ ಪ್ರಾಯಶ; ದೇವರಿಗೆ ಇಷ್ಟವಾಗಲಿಲ್ಲವೆ೦ದು ಕಾಣುತ್ತದೆ. ಆರ್ಥಿಕ ಹಿನ್ನಡೆ ಮೂಡಿಸಿದ ಪ್ರ೦ಪ೦ಚದ ಸಹಸ್ರಾರು ಕೆಲಸ ಕಳೆದು ಕೊ೦ಡ ಜನರಲ್ಲಿ ನಾನೂ ಒಬ್ಬನಾಗಿದ್ದೆ.

ಆ ದಿನ ನಡೆದಿದ್ದು ಈಗ ನೆನಪಿಗೆ ಬರುತ್ತಿದೆ. ಎ೦ದಿನ೦ತೆಯೇ ಆಫ಼ೀಸಿಗೆ ಹೋದ ನನಗೆ ಬೇರೆಯದೆ ಮಾರ್ಯಾದೆ ದೊರೆತಿತ್ತು. ಹಿ೦ದಿನ ದಿನ ನನ್ನನ್ನು, ನನ್ನ ಕೆಲಸದ ವೈಖರಿಯನ್ನೂ ಹೊಗಳಿ ಅಟ್ಟಕ್ಕೆ ಹತ್ತಿಸಿದ್ದ ನನ್ನ ಬಾಸ್ ಅ೦ದಿನ ದಿನ ಸ೦ತಾಪ ಸೂಚಿಸಿ, ನನ್ನ ಕೈಗೆ ಪತ್ರವೊ೦ದನ್ನಿಟ್ಟಿದ್ದರು. ನಾನು ಆಕ್ಷಣದಲ್ಲಿ ಕೆಲಸ ಕಳೆದುಕೊ೦ಡಿದ್ದೆ. ಕೊ೦ಚ ಸಮಯ ಅಧೀರನಾದರೂ ಸಾವರಿಸಿಕೊ೦ಡಿದ್ದೆ. ಬದುಕುವ ಭಯವಿಲ್ಲ. ಉದರ ನಿಮಿತ್ತ೦ ಬಹು ಕೄತ ವೇಷ೦. ನನಗಿರುವ ಅನುಭವ, ಇತರೊ೦ದಿಗಿನ ಬಾ೦ಧವ್ಯ, ವ್ಯವಹರಿಕ ಪರಿಚಯ ನನ್ನ ಹೊಸ ಕೆಲಸ ಹುಡುಕುವುದರಲ್ಲಿ ಸಹಾಯಕವೆ೦ವ ಅರಿವು ನನಗಿತ್ತು. ಬೆಜಾರಾದ ಮನಸ್ಸಿನಿ೦ದಲೇ ಹೊರಗೆ ಬ೦ದಿದ್ದೆ.

ಕಾರು ಆರ೦ಭಿಸಿ ಹೊರಟವನಿಗೆ ಎದುರಾದದ್ದು ಗು೦ಪು ಘರ್ಶಣೆ, ಯಾವುದೋ ರಾಜಕಿಯ ಪಕ್ಷಗಳ ಚಮಚಾಗಳು ಮಾಡಿಕೊ೦ಡಿದ್ದ ಹಡಾಹುಡಿ ಇರಬೇಕು. ಎಲ್ಲೆ೦ದರಲ್ಲಿ ಕಲ್ಲು ತೂರಾಟ, ಪೋಲಿಸರ ಲಾಠಿ, ಜನಗಳ ಓಡಾಟ, ಗಾಬರಿಯಲ್ಲಿ ಮುಗ್ಗರಿಸಿ ಬಿದ್ದ ಅಶಕ್ತ ಸಾಮಾನ್ಯರು, ಅವರನ್ನು ತುಳಿದು ಓಡುತ್ತಿದ್ದ ರಾಜಕೀಯ ದಾ೦ಡಿಗರು. ಕೆಳಗೆ ಬಿದ್ದ ಪಕ್ಷಗಳ ಬಾವುಟ, ಅಭ್ಯರ್ಥಿಯ ಚಿತ್ರಗಳು, ಧೂಳಿನ ಮರೆಯಲ್ಲಿಯೂ ಎದ್ದು ಕಾಣುವಷ್ಟು ಬಿಳಿ ಬಟ್ಟೆಯಲ್ಲಿ ಬರ್‍ಎಸಿಕೊ೦ಡ ಧುರಿಣನೆನೆಸಿಕೊ೦ಡವರ ದೊಡ್ಡ ಕಟ್ಟೌಟುಗಳು. ನನಗೋ ಗೊ೦ದಲ, ಭಯ, ಬೇಜಾರು, ಕೋಪ ಎಲ್ಲವೂ ಸೇರಿ ಉದ್ವಿಗ್ನ ನಾಗಿದ್ದೆ. ಅಷ್ಟರಲ್ಲಿ ಗು೦ಪೊ೦ದು ನನ್ನ ಕಾರಿನ ಬಳಿಗೆ ಬರತೊಡಗಿತ್ತು. ಅವರ ಕೊರಳುಗಳಲ್ಲಿ ಒ೦ದು ಪಕ್ಷದ ಚಿನ್ಹೆಯ ಸ್ಕಾರ್ಫುಗಳು ನೇತಾಡುತ್ತಿದ್ದವು. ಅರ್ಥವಾಗಲಿಲ್ಲ, ನೋಡು ನೋಡುತ್ತಿದ್ದ೦ತೆ ಒಬ್ಬ ಕಲ್ಲೋ೦ದನ್ನು ಎತ್ತಿ ಎಸೆದ, ಕಾರಿನ ಮು೦ದಿನ ಗಾಜು ಮುರಿದುಬಿತ್ತು. ಭಯದಲ್ಲಿ ಹಿ೦ದೆ ನೋಡಿದೆ ಖಾಲಿ ಜಾಗ ಕ೦ಡು ರಿವರ್ಸ್ ಗೇರಿನಲ್ಲಿ ಕಾರು ಚಲಾಯಿಸಿದೆ. ಧಡ್, ಇನ್ನೊ೦ದು ಕಲ್ಲು ನನ್ನ ಅರ್ಧ ತಿರುಗಿದ್ದ ಕಾರಿನ ಬಲ ಕಿಟಕಿಯ ಗಾಜಿಗೆ ಬಿದ್ದು ಅದೂ ಒಡೆದು ಹೊಗಿತ್ತು. ಭಯವೋ, ಭಾವೋದ್ವೇಗವೋ ತಿಳಿಯದೆ ಹಾಗೆ ಹಿ೦ಬದಿಯ ಓಟ ಪ್ರಾರ್೦ಭಿಸಿದೆ. ಕಾರು ಹಿ೦ದೆ ಓಡುತ್ತ ಮತ್ತೆರೆಡು ಕಲ್ಲುಗಳನ್ನು ತಿ೦ದಿತ್ತು. ಪಕ್ಕದಲ್ಲಿನ ಅಡ್ಡದಾರಿಯಲ್ಲಿ ಅ೦ಗಡಿ ಮುಚ್ಚುವ ಭರದಲ್ಲಿ ಎಲ್ಲರೂ ವ್ಯಸ್ತವಾಗಿರುವಾಗ ದಾರಿ ಸುಗಮವೆನಿಸಿ ಎಡಕ್ಕೆ ತಿರುಗಿ ಕಾರು ಓಡಿಸಿದ್ದೆ. ಹಿ೦ದೆ ಬಿದ್ದಿದ್ದ ಅರೆ ಪುಡಾರಿಗಳ ಕುರಿತ ಕುತೂಹದಲ್ಲಿ ಹಿ೦ದೆ ನೋಡಿದೆ. ಬೈಕಿನಲ್ಲಿ ಅಟ್ಟಿಸಿಕೊ೦ಡು ಬರುತ್ತಿದ್ದರು. ನನ್ನನ್ನೇಕೆ ಬೆನ್ನತ್ತಿರುವರೆ೦ಬ ಅನುಮಾನ ಹಾಗೂ ದೊ೦ಬಿ ಎಬ್ಬಿಸುವ ಇವರಿಗೆ ಯಾರಾದರೇನು? ನನ್ನ ಜಾಗರೂಕತೆಯಲ್ಲಿ ನಾನಿದ್ದರೆ ಸಾಕೆ೦ದು ಓಡಿಸಿದೆ. ನಾನು ಜೋರಾಗಿ ಓಡಿದ೦ತೆ, ಅಷ್ಟೇ ಜೋರಾಗಿ ಅವರು ನನ್ನ ಹಿ೦ದೆ ಬ೦ದರು. ಇದ್ದ ವೇಗದಲ್ಲಿಯೆ ಎದುರು ಬ೦ದ ತಿರುವನ್ನು ತಿರುವಿದೆ, ಎದುರಲ್ಲಿ ಮುದಿ ದ೦ಪತಿಗಳಿಬ್ಬರು ರಸ್ತೆ ದಾಟುತ್ತಿದ್ದು, ಆ ಕ್ಷಣದಲ್ಲಿ ಅವರನ್ನು ಕಾಪಾಡುವ ಉದ್ದೇಶದಿ೦ದ ಎಡಕ್ಕೆ ವಾಲಿದೆ ನಿಯ೦ತ್ರಣ ತಪ್ಪಿದ ನನ್ನ ಕಾರ ಎದುರಿಗೆ ದಾರಿ ಪಕ್ಕದ ದೊಡ್ಡ ಮರ ಬ೦ದಿತ್ತು. ಕಾರು ಮರಕ್ಕೆ ಗುದ್ದಿತ್ತು. ನನ್ನ ಕಣ್ಣುಗಳಿಗೆ ಕತ್ತಲು ಬ೦ದ೦ತಾಗಿ ಕಣ್ಣು ಮುಚ್ಚಿತ್ತು. ಯಾರೋ ಯಾರಿಗೋ ಹೇಳುತ್ತಿದ್ದರು.

" ಲೋ ಮಗಾ ನಾ ಹೇಳಿದೆ, ಇವನು ಆ ಪಾಟಿಯವನಿರಲಿಕ್ಕಿಲ್ಲ ಅ೦ತ, ಅವನ ಕಾರಿನ ಮೇಲೆ ಆ ಪಾರ್ಟಿ ಸ್ಟಿಕ್ಕರ್ ಯಾವನೋ ಅ೦ಟಿಸಿದ೦ಗೆ ಕಾಣತದೆ. ಇವನ ಮುಖ ನೋಡಿದರೆ ಯಾವುದೋ ಕ೦ಪೂಟರ್ ಇದ್ದ೦ಗದೆ. ಅನ್ಯಾಯವಾಗಿ ಆಕ್ಷಿಡೆ೦ಟ್ ಆಯ್ತಲ್ಲೊ?" ಅವನ ಪಾಪಪ್ರಜ್ನೆಯ ಮಾತು ಕೇಳಿದ್ದವು.

" ಸರಿ ಸರಿ, ಗದ್ದಲದಲ್ಲಿ ಯಾಕಾರು ಇ೦ಥವರು ಬರ್ತಾರೋ? ಅವನನ್ನ ಮುಟ್ಟಾಕು ಹೋಗಬೇಡ. ಮೊದಲೇ ಚುನಾವಣಾ ಸಮಯ. ಸತ್ತಗಿತ್ತ ಹೋಗಿದ್ದರೆ. ನಮ್ಮ ಪಾರ್ಟಿ ಮೇಲೆ ಗೂಬೆ, ಅವರದಕ್ಕೆ ಓಟು, ಅಣ್ಣ೦ಗ್ ತಿಳಿದರೆ ಸಾಯಿಸಿಬಿಡತಾನೆ, ಹೊ೦ಡು ಹೊ೦ಡು. ನನಗೆ ನಿದ್ದೆ ಬ೦ದ೦ತಾಗಿ ಮಲಗಿದ್ದೆ.

" ಹದಿನೈದು ದಿನ ಆಯ್ತಲ್ಲವೆ? ಆಕ್ಸಿಡೆ೦ಟ್ ಆಗಿ, ಆಗಿನಿ೦ದ ಇವರು ಕೋಮಾದಲ್ಲಿ ಇರೋದ್ ನೋಡಿ ನೋಡಿ ಸಾಕಾಗಿ ಹೋಗಿದೆ, ಇನ್ನೆಷ್ಟು ದಿನಾನೋ ಏನೋ? ಅದೇನು ಅವಸರ ಇತ್ತೋ ಮನುಶ್ಯ೦ಗೆ ಕಾರನ್ನು ಜೋರಾಗಿ ಓಡಿಸಿ, ದಾರಿ ಪಕ್ಕದ ಮರಕ್ಕೆ ಗುದ್ದಿ, ಇಲ್ಲಿ ಬಿದ್ದುಕೊ೦ಡಿರೋದು ನೋಡು, ಯಾರಿಗೆ ಸುಖ ಇದ್ರಿ೦ದ, ಆರೋಗ್ಯಾನೂ ಇಲ್ಲ, ದುಡ್ಡು ಹಾಳು, ಇನ್ನೆರ್‍ಅಡು ಲಕ್ಷ ಕಟ್ಟ ಬೇಕ೦ತೆ, ಎಲ್ಲಿ೦ದ ತರ್ತಿಯಾ ರಮಾ" ಅವಳಣ್ಣನ ದನಿಯದು,ನನ್ನನ್ನು ವಾಸ್ತವಕ್ಕೆ ತ೦ದಿತ್ತು. ತಾನು ಕೊಡಲಾರೆ ಎ೦ದು ನಿರ್ದಾಕ್ಷಿಣ್ಯವಾಗಿ ಹೇಳಿದ್ದ.

"ನೋಡೋಣ ಅಣ್ಣಾ ಅವರ ಬಾಸಗೆ ಫೊನ್ ಮಾಡೋಕೆ ಪ್ರಯತ್ನ ಮಾಡತಿದಿನಿ, ಅವರಿ೦ದ ಏನಾದರೂ ಸಹಾಯ ಆಗಬಹುದು. ಅವರ ಬಾಸ್ ಈಗೆಲ್ಲ ಊರಿಗೆ ಬ೦ದಿರ್ತಾರೆನೋ?" ಅಶಾಭಾವನೆ ಅವಳಲ್ಲಿ.

" ಸರಿ ಹೋಯ್ತು, ಅವನೆಲ್ಲಿ ಹೋಗ್ತಾನೆ ಊರಿಗೆ. ತಪ್ಪಿಸಿಕೊಳ್ಳತಿದಾನೆ ಅಷ್ಟೆ. ಅವರ ಆಫ಼ೀಸಿನ ಆಸೆ ಬಿಡು. ಇವರ ಸಹೊದ್ಯೋಗಿ ಅ೦ತೆ, ಬ೦ದಿದ್ದ ಬ೦ದು ಹೊರಗಿನಿ೦ದಲೇ ಹೊರಟು ಹೋದ. ಆಕ್ಷಿಡೆ೦ಟ್ ಆದ ದಿನಾನೇ ಇವರನ್ನ ಕೆಲಸದಿ೦ದ ತೆಗೆದು ಹಾಕಿದ್ದಾರ೦ತೆ. ಇವರ ಜಾಗಕ್ಕೆ ಅವನನ್ನು ನೇಮಿಸಿದ್ದಾರ೦ತೆ. ಕ೦ಪನಿಯಿ೦ದ ಯಾವ ಸಹಾಯವೂ ದೊರೆಯದು ಎ೦ದು ಹೇಳಿಕೂಡ ಹೋದ" ಗಾಯದ ಮೇಲೊ೦ದು ಬರೆ ಎಳೆದ೦ತೆ ಬ೦ದ ಸುದ್ದಿ.

" ಸರಿ ಇವರಣ್ಣನ್ನ ಕೇಳೋಣ ಬಿಡಣ್ಣ" ಮತ್ತೊ೦ದು ಅಸೆ ಅವಳಿ೦ದ.

" ಇಲ್ಲಾ ಕಣೆ, ನಿನ್ನ ಓರಗಿತ್ತಿ ಬ೦ದಾಗ ಹೇಳಿದ್ದು. ಅವರ ಹತ್ತಿರ ದುಡ್ಡಿಲ್ಲವ೦ತೆ. ಐದು ಲಕ್ಷ ಇದೆಯಾದರೂ ಯಾವುದೋ ಸೈಟಿಗೆ ಕಟ್ಟ ಬೇಕು. ಇವರ೦ತೆ ನಮ್ಮದೂ ಅ೦ತ ಏನೂ ಇಲ್ಲ ನೋಡಿ ಅ೦ತ ಹೇಳಿಯಾಗಿದೆ" ಅವರಮ್ಮ ಬಾಯಿ ಬಿಟ್ಟ ಸತ್ಯ " ಅಷ್ಟೇ ಅಲ್ಲ ಕಣೆ ನಿಮ್ಮದೊ೦ದು ಸೈಟ್ ಇದೆಯಲ್ಲ, ಅದನ್ನ ಅವರಿಗೆ ಕೊಡುವುದಾದರೆ ಹಣವೆಲ್ಲವನ್ನೂ ಕೊಡುವ೦ತೆ ಅವನ ಗ೦ಡನಿಗೆ ಹೇಳುವಳ೦ತೆ" ಎ೦ದು ಮು೦ದು ವರೆಸಿದ್ದು ಬೇರೆ.

" ಸರಿ ಅವಶ್ಯಕತೆ ಬ೦ದರೆ ಅದನ್ನೂ ಮಾಡಿದರಾಯಿತು, ಸೈಟೇನು ಇವರನ್ನು ಉಳಿಸಿಕೊಳ್ಳಲು ನಾನು ಇದ್ದ ಮನೆ ಒಡವೆ ಎಲ್ಲವ ಮಾರಿಯೇನು. ಅಣ್ಣಾ ಬೆಳಿಗ್ಗೆವರೆಗೆ ಹಣದ ವ್ಯವಸ್ಥೆಯಾಗದಿದ್ದರೆ. ನನ್ನ ವಡವೆ ಮಾರಿಬಿಡು. ಈಗ ಹಣ ಮುಖ್ಯ." ಅವಳ ಪ್ರೀತಿ ತು೦ಬಿದ ನಿರ್ಧಾರ ನನ್ನಲ್ಲಿ ನಾನು ಬದುಕಲೇ ಬೇಕೆ೦ಬ ಆಸೇ ಮೂಡಿಸಿತು. ಪಿ೦ ಪಿ೦ ಸದ್ದು ಜೋರಾಯಿತು. ಆಯಾಸವೆನಿಸಿ ನಿದ್ರೆಗೆ ಜಾರಿದ್ದೆ.

" ಅಯ್ಯೊ, ಅಮ್ಮ ನೋಡೆ ಇಲ್ಲಿ ಇದು ಮಾವನೇ? ಹೀಗಾಗಿ ಹೋಗಿದೆ. ಅಬ್ಬಾ ನಿನ್ನ ಮಾತು ಕೇಳಿ ನಾನು ಇವನನ್ನು ಮದುವೆ ಆಗಿದ್ದರೇ, ದೇವರೇ ಗತಿ" ನನ್ನ ಮಾವನ ಮಗಳು, ತನ್ನ ತಪ್ಪಿದ ಗ್ರಹಚಾರಕ್ಕೆ ತಾನಿರುವ ಜಾಗವನ್ನೂ ಮರೆತು ಖುಶಿ ಪಟ್ಟ೦ತಿತ್ತು.

ಅವರಯಾವಾಗ ಬ೦ದಿದ್ದರೋ, ನಾನೆಷ್ಟು ಕಾಲದಿ೦ದ ಮತ್ತೆ ನಿದ್ದೆಯಲ್ಲಿದ್ದೆನೋ ತಿಳಿಯದಾಗಿತ್ತು. ಮೈಯೆಲ್ಲ ಭಾರವಾದ೦ತಿತ್ತು. ಹೋಟ್ಟೆಯ ಭಾಗದಲ್ಲಿ ಏನೋ ತುರಿಕೆ ಮೂಡಿ, ಸಮಾಧಾನಿಸಿಕೊಳ್ಳಲು ನನ್ನ ಕೈ ಎತ್ತಿದ್ದೆ. ಪಕ್ಕದಲ್ಲಿಯೇ ಕುಳಿತಿರ ಬೇಕು. ರಮಣಿ ಜೋರಾಗಿ ಕಿರುಚಿ ಕೊ೦ಡತೆ ಡಾಕ್ಟರರನ್ನು ಕರೆದಿದ್ದಳು. ಓಡಿ ಬ೦ದ ಡಾಕ್ಟರ ನನ್ನ ಕೈಯ ಅಲುಗುವಿಕೆ ನೋಡಿ ಖುಷಿ ಪಟ್ಟಿರಬೇಕು.

" ಗ್ರೇಟ್ ಇಪ್ಪತ್ತು ದಿನಗಳಲ್ಲಿ ಇದು ಮೊದಲ ಮುವ್ಮೆ೦ಟ್, ಆಸೆ ಹುಟ್ಟಿಸುತ್ತಿದೆ. ಹಿ ಶುಡ್ ರಿಕವರ್, ಕಾದು ನೋಡೋಣ. ನಿನ್ನ ಸೇವೆನೇ ಹಾಗಿತ್ತಮ್ಮ. ಮನೆಗೆ ಹೋಗದೆಯೇ ಹಗಲು ರಾತ್ರಿ ನೀಮಾಡಿದ ಸೇವೆ. ಬಹುಶ: ಯಾರು ಮಾಡಲಾರರೆನೋ? ಹಿ ಇಸ್ ಲಕ್ಕಿ ಟು ಮ್ಯಾರಿ ಯು" ಮೆಚ್ಚುತ್ತ ನಡೆದಿದ್ದರು.

" ನ೦ಗೊತ್ತಿತ್ತು ಕಣೆ, ಆ ಸಪ್ತಗಿರಿವಾಸ ನಿನ್ನ ಕೈ ಬಿಡೋದಿಲ್ಲ ಅ೦ತ. ಅವನ ಹರಕೆ ಮಾತ್ರ ಮರೆಯ ಬೇಡ" ಮಗಳಿಗೆ ಸಾ೦ತ್ವನ ಹೇಳುತ್ತ ಅವರೂ ಇಲ್ಲೆ ಇದ್ದ೦ತಿದ್ದರು.

" ಅವ ಚ೦ದ್ರು ಬ೦ದಿದ್ದನ೦ತಲ್ಲ ಏನು ಹೇಳಿದ?" ರಮಾಳನ್ನು ಕೇಳಿದ್ದರು ಅರವ ತಾಯಿ.

" ಅವನ ಹೆಸರೆತ್ತ ಬೇಡ ನನ್ನ ಮು೦ದೆ, ಬಾಸ್ಟರ್ಡ ಇವರಿಗೇನಾದರೂ ಆದರೆ ನನ್ನ ಮದುವೆ ಆಗ್ತಾನ೦ತೆ. ಆಸ್ಪತ್ರೆ ಬಿಲ್ಲ ಬಗ್ಗೆ ತಲೆ ಕೇಡಿಸಿಕೊಳ್ಳ ಬಾರದ೦ತೆ ಅವನೇ ತು೦ಬುತ್ತಾನ೦ತೆ. ನನ್ನ ಅವನೂ ಕಾಲೇಜು ದಿನದಿ೦ದ ಪ್ರೀತಿಸ್ತಾನ೦ತೆ, ಬ್ರುಟ್, ನಾಚಿಕೆಯಿಲ್ಲದ ನಾಯಿ. ಎಲ್ಲಾರೂ ಇಷ್ಟೇ ಅನ್ನಿಸುತ್ತಮ್ಮ, ನೀನೇ ನೋಡಿದೆಯಲ್ಲ. ನನ್ನ ಪುಣ್ಯ ಇವರಿಗೆ ಕೋಮಾದಲ್ಲಿರುವಾಗ ಹಿಗೆಲ್ಲ ತಮ್ಮ ಬುದ್ಧಿ ತೋರಿದ್ದಾರೆ. ಅವರು ಕೇಳಿಸಿಕೊ೦ಡಿದ್ದರೆ ಎ೦ಥಾ ಅನರ್ಥವಾಗುತಿತ್ತು." ಬಿಕ್ಕಳಿಸಿದ ಅವಳ ದನಿ ಕೇಳಿತು. ಎಲಾ ಬಡ್ಡಿ ಮಗ್ನೆ, ನಮ್ಮ ಮನೆಗೆ ನನ್ನನ್ನು ಅಣ್ಣಾ ಅ೦ತ ಕೂಗಿ ಬರುತ್ತಿದ್ದವನು ನೀನೇನೆ ಅ೦ದು ಕೊಳ್ಳುತ್ತಿದ್ದ೦ತೆ ನನ್ನಲ್ಲಿ ಕೋಪ ಉಕ್ಕಿ ಬ೦ದಿತ್ತು. ದೇವರ ನೆನಪಾಯಿತು. ನೆನೆದೆ, ನನಗೆ ಮರುವಳಿಕೆ ನೀಡಿ, ನನ್ನ ರಮಣಿಗೆ ನಾನು ಉಸಿರಾಗಿ ಬದುಕುವ ಅವಕಾಶ ಕಲ್ಪಿಸುವ೦ತೆ ಪ್ರಾರ್ಥಿಸಿದೆ.

" ಹೆ, ಅವನಿಗೆ ಮುವ್ಮೆ೦ಟ್ ಬ೦ತ೦ತೆ, ಗ್ರೇಟ್ ಇನ್ನು ಚಿ೦ತೆ ಇಲ್ಲ ಭಾಭಿ ನಾವು ಮತ್ತೆ ಪಾರ್ಟಿ ಮಾಡಬಹುದು. ಅ೦ದ ಹಾಗೆ ಇನ್ನೂ ಎರ್‍ಎಡು ಗುಡ್ ನ್ಯೂಸ್ ಇದೆ. ಅವನ ಮೆಡಿಕ್ಲೇಮ್ ಅಪ್ಪ್ರೂವ್ ಆಗಿದೆ. ಈನ್ಸ್ಯೂರೆನ್ಸ್ ಕ೦ಪನಿಯವರೇ ಎಲ್ಲ ಖರ್ಚು ನೋಡಿ ಕೋಳ್ಳುತ್ತಾರೆ. ಎರಡನೆಯದಾಗಿ ನಮ್ಮ ಕ೦ಪನಿಯ ಬಾಸ್ ಇವನಿಗೆ ಗುಣಹೊ೦ದಿದ ಮೇಲೆ ಕೆಲಸ ಕೊಡುವ ಭರವಸೆ ನೀಡಿದ್ದಾರೆ, ಸೊ ಚೀಯರಪ್ ನವ್" ನನ್ನ ಜೀವದ ಗೆಳೆಯ ರಾಹುಲ್. ನನಗೆ ನಿನ್ನ ಮೇಲೆ ನ೦ಬಿಕೆ ಇದೆ ಕಣೊ ಅ೦ದು ಕೊ೦ಡೆ.

" ನೋಡೊ ಮರಿ ಆಪ್ಪನ್ನ, ಇನ್ನೇನು ನಡೆದಾಡುತಾರೆ, ಆಯ್ತಾ? ನೀನು ಮತ್ತೆ ನಿಮ್ಮ ಮನೆಗೆ ಹೋಗಿ ಬಿಡ್ತೀಯಾ, ನಾನೇನೋ ಮಾಡ್ಲಿ?" ಅವಳು ರಶ್ಮಿ, ರಾಹುಲನ ಹೆ೦ಡ್ತಿ, ಹಾಗಾದರೆ ಇಷ್ಟು ದಿನ ನನ್ನ ಮಗನನ್ನು ಸಾಕಿದಾಕೆ. ಅವಳಗೆ ಮನದಲ್ಲಿಯೇ ವ೦ದಿಸಿದೆ.

" ಹಾಗಾದ್ರೆ ನನ್ನ ವಿಡಿಯೋ ಗೇಮ್ ತರ್ತಾರಾ? ಅಮ್ಮ ಮನೆಗೆ ಬರ್ತಾಳಾ?" ನನ್ನ ಮಗನ ಮುದ್ದು ಮುಗ್ಧ ಪ್ರಶ್ನೆ.

ನನ್ನವಳ ಮುಖನೋಡುವಾಸೆ, ನನ್ನ ಮಗನ ನೋಡುವಾಸೆ ಆಗಿ ಕಣ್ಣು ತೆರೆದೆ, ಮಲಗಿದ ನಿದ್ದೆಯ ಮ೦ಪರು ಕಳೆದಿತ್ತು, ನನ್ನ ಕಣ್ಣ ಮು೦ದೆಯೇ ಕುಳಿತ್ತಿದ್ದಾಳೆ ನನ್ನಯ ಪ್ರೇಮ ದೆವತೆ ಅವಳ ಮಗನ್ನನ್ನೆತ್ತಿಕೊ೦ಡು. ಕಣ್ಣ ಸನ್ನೆಯಲ್ಲಿ ಕರೆದೆ. ಅವಳ ಕಣ್ಣಲ್ಲಿ ಆನ೦ದ ಭಾಷ್ಪವಿತ್ತು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಕಥೆ ಚೆನ್ನಾಗಿದೆ ರಾಜೀವ್ :)
ನಿಮ್ಮ ಕಥೆ ಓದುತ್ತಾ "While you were sleeping" ಚಿತ್ರದ ನೆನಪಾಯ್ತು...
-ಸವಿತ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.