೨೦೦೭-೦೮ ರಣಜಿ ಋತು ಮತ್ತು ಕರ್ನಾಟಕ

0

೭೪ನೇ ರಣಜಿ ಋತು ನವೆಂಬರ್ ೩ ರಂದು ಆರಂಭಗೊಂಡಿದೆ. ಈ ಬಾರಿಯಾದರೂ ಮುಂಬೈ ಬಿಟ್ಟು ಬೇರೆ ತಂಡ ರಣಜಿ ಟ್ರೋಫಿ ಗೆಲ್ಲುವುದೋ ... ಕಾದು ನೋಡಬೇಕು. ಕಳೆದ ಋತುವಿನಲ್ಲಿ ಸೆಮಿಫೈನಲ್ ನಲ್ಲಿ ತನ್ನ ಅಭಿಯಾನ ಮುಗಿಸಿದ ಕರ್ನಾಟಕ, ಈ ಋತುವಿನಲ್ಲಿ ಸೆಮಿಫೈನಲ್ ಪ್ರವೇಶಿಸಿದರೆ ಅದೇ ದೊಡ್ಡ ಸಾಧನೆ.

ಕಳೆದ ಋತುವಿನಲ್ಲಿ ಕರ್ನಾಟಕದ ಉತ್ತಮ ಪ್ರದರ್ಶನಕ್ಕೆ ಕಾರಣ ರಾಬಿನ್ ಉತ್ತಪ್ಪ. ಪ್ರಮುಖ ಪಂದ್ಯಗಳಲ್ಲಿ ರಾಬಿನ್ ನೀಡಿದ ಉತ್ತಮ ಆರಂಭದಿಂದ ಕರ್ನಾಟಕ ಉತ್ತಮ ಮೊತ್ತಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಗಿತ್ತು. ಆದ್ದರಿಂದ ಬೌಲರ್ ಗಳಿಗೂ ಉತ್ತಮ ಮೊತ್ತದ ಬೆಂಬಲವಿದ್ದರಿಂದ ಎದುರಾಳಿ ತಂಡಗಳನ್ನು ಕಬಳಿಸುವಲ್ಲಿ ಕರ್ನಾಟಕ ಸಾಕಷ್ಟು ಯಶಸ್ವಿಯಾಗಿತ್ತು.

ಅದೇನು ಯೇಸು ಕ್ರಿಸ್ತನ ಮಾಯೆಯೋ, ಆ ರೋಲಂಡ್ ಬ್ಯಾರಿಂಗ್ಟನ್ ಮತ್ತೆ ತಂಡದಲ್ಲಿ ಸ್ಥಾನ ಪಡೆದದ್ದು ಮಹಾದಾಶ್ಚರ್ಯ! ಕಳೆದೆರಡು ಋತುವಿನಲ್ಲಿ ಕಳಪೆ ಪ್ರದರ್ಶನ ನೀಡಿದರೂ ಬ್ಯಾರಿಂಗ್ಟನ್ ಮತ್ತೆ ತನ್ನ ಸ್ಥಾನ ಕಾಯ್ದುಕೊಂಡಿದ್ದಾರೆ. ರೋಲಂಡ್ ಬ್ಯಾರಿಂಗ್ಟನ್ ಒಬ್ಬ ಕಲಾತ್ಮಕ ಆರಂಭಿಕ ಆಟಗಾರ. ತನ್ನಲ್ಲಿರುವ ಪ್ರತಿಭೆಗೆ ತಕ್ಕಂತೆ ಆಡಿದರೆ ಈತನನ್ನು ಔಟ್ ಮಾಡಲು ಎದುರಾಳಿ ಬೌಲರ್ ಗಳು ಹೆಣಗಾಡಬೇಕಾಗುತ್ತದೆ. ಆದರೆ ಕಳೆದೆರಡು ಋತುಗಳಿಂದ ಕ್ರಿಕೆಟ್ ಬಗ್ಗೆ ಮಾತನಾಡುವುದು ಮತ್ತು ಯೋಚಿಸುವುದನ್ನು ಬಿಟ್ಟು ತನ್ನ ಧರ್ಮದ ಬಗ್ಗೆ ಅತಿಯಾಗಿ ಮಾತನಾಡುವುದು ಮತ್ತು ಯೋಚಿಸುವುದನ್ನು ಮಾಡುತ್ತಿರುವುದರಿಂದ ಬ್ಯಾರಿಂಗ್ಟನ್ ಆಟದ ಮೇಲೆ ಗಮನ ಕಳೆದುಕೊಳ್ಳುತ್ತಿದ್ದಾರೆ. ಬ್ಯಾರಿಂಗ್ಟನ್ ಈಗ ಸೀನಿಯರ್ ಆಟಗಾರ. ಅದರಂತೆಯೇ ಅವರು ನಡೆದುಕೊಳ್ಳುವುದೂ ಲೇಸು. ಈ ಋತುವಿನಲ್ಲಾದರೂ ರೋಲಂಡ್, ಕರ್ನಾಟಕಕ್ಕೆ ಒಂದೆರಡಾದರೂ ಉತ್ತಮ ಆರಂಭವನ್ನು ದೊರಕಿಸಿಕೊಡಲಿ. ಆಮೆನ್.

ಸಿಕ್ಕಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಿದ್ದ ಭರತ್ ಚಿಪ್ಲಿ ತಂಡದಲ್ಲಿಲ್ಲ! ಆಕರ್ಷಕ ಆಟಗಾರ ಭರತ್, ಕಳೆದ ರಣಜಿ ಋತು ಮತ್ತು ಹಾಲಿ ಕೆ.ಎಸ್.ಸಿ.ಎ ಬೆಂಗಳೂರು ಲೀಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಅವರ ಆಯ್ಕೆ ಆಗದಿರುವುದು ಕೆ.ಎಸ್.ಸಿ.ಎ ಯಲ್ಲಿ ಚುಕ್ಕಾಣಿ ಹಿಡಿಯುವವರು ಬದಲಾದರೂ, ಶಿಫಾರಸಿನ ಮತ್ತು ರಾಜಕೀಯದ ಹಳೇ ಚಾಳಿ ಬದಲಾಗಿಲ್ಲ ಎಂಬುದಕ್ಕೆ ನಿದರ್ಶನ. ಸಾಗರದವರಾದ ಭರತ್ ಚಿಪ್ಲಿ ಈ ಹಿನ್ನಡೆಯಿಂದ ಎದೆಗುಂದದೆ ಇನ್ನಷ್ಟು ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಮರಳಿ ಬರಲಿ.

ಆರಕ್ಕಿಂತ ಮೇಲೇರದ ಮತ್ತು ೩ಕ್ಕಿಂತ ಕೆಳಗಿಳಿಯದ ತಿಲಕ್ ನಾಯ್ಡುವಿಗೇ ಮತ್ತೆ ಮಣೆ ಹಾಕಲಾಗಿದೆ. ಈ ನಾಯ್ಡುಗಾರುಗೆ 'ಇನ್-ಫ್ಲುಯನ್ಸ್'ಗೇನೂ ಕಡಿಮೆ ಇಲ್ಲ. ಕಳೆದ ಋತುವಿನಲ್ಲಿ ದೇವರಾಜ್ ಪಾಟೀಲ್ ರೂಪದಲ್ಲಿ ಪ್ರತಿಸ್ಪರ್ಧಿಯೊಬ್ಬ ತಂಡದಲ್ಲಿದ್ದರಿಂದಲೇ ತಿಲಕ್, ತನ್ನ ರಣಜಿ ಜೀವನದ ಉತ್ತಮ ಋತುವನ್ನು ಆಡಿದ್ದರು. ಅದೇ ಕಾರಣದಿಂದ ಈಗ ತಂಡದಲ್ಲಿದ್ದಾರೆ. ಕಳೆದ ಋತುವಿನ ೨೦-೨೦ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಕರ್ನಾಟಕದ ವಿಕೆಟ್ ಕೀಪರ್ ಆಗಿ ಪಾಟೀಲ್ ಆಡಿದ್ದರು. ವಿಕೆಟ್ ಹಿಂದೆ ಉತ್ತಮ ನಿರ್ವಹಣೆ ತೋರಿದ್ದಲ್ಲದೇ, ಆರಂಭಿಕ ಆಟಗಾರನಾಗಿ ಬಿರುಸಿನ ಆರಂಭವನ್ನೂ ನೀಡಿ ಪಾಟೀಲ್ ಗಮನ ಸೆಳೆದಿದ್ದರು. ಕಳೆದ ಋತುವಿನಲ್ಲಿ ತಂಡದಲ್ಲಿದ್ದೂ ಒಂದೇ ಪಂದ್ಯವನ್ನಾಡದ ದೇವರಾಜ್ ಪಾಟೀಲ್-ಗೆ ಈ ಬಾರಿಯಾದರೂ ತಿಲಕ್ ನಾಯ್ಡು ಜಾಗದಲ್ಲಿ ಒಂದೆರಡು ಅವಕಾಶ ನೀಡಿದರೆ, ಕರ್ನಾಟಕಕ್ಕೆ ಒಬ್ಬ ಉತ್ತಮ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್-ಮನ್ ದೊರಕಿದಂತಾಗುವುದು.

ಕರ್ನಾಟಕಕ್ಕೆ ಮತ್ತೊಮ್ಮೆ ರಣಜಿ ಟ್ರೋಫಿ ಸಿಗುವವರಗೆ ತಾನು ನಿವೃತ್ತನಾಗುವುದಿಲ್ಲ ಎಂದು ಸುನಿಲ್ ಜೋಶಿ ಪಣತಟ್ಟಿರುವಂತೆ ತೋರುತ್ತಿದೆ. ಸ್ಪಿನ್ ವಿಭಾಗದಲ್ಲಿ ಅಪ್ಪಣ್ಣ, ಜೋಶಿಗೆ ಉತ್ತಮ ಜೊತೆ ನೀಡಬಲ್ಲರು. ಕೊಡಗಿನ ಪಾಲಿಬೆಟ್ಟದ ಸಮೀಪ ಕಾಲಹರಣ ಮಾಡುತ್ತಿದ್ದ ಅಪ್ಪಣ್ಣ, ಕಳೆದ ಋತುವಿನಲ್ಲಿ ರಣಜಿಗೆ ಪಾದಾರ್ಪಣ ಮಾಡಿ, ಭಾರತ ೧೯ ವರ್ಷದೊಳಗಿನವರ ತಂಡಕ್ಕೆ ಆಡುವಷ್ಟರ ಮಟ್ಟಕ್ಕೆ ಬೆಳೆದದ್ದು ಸೋಜಿಗದ ಕತೆ. ಇನ್ನು ದಾವಣಗೆರೆಯ ವಿನಯ್ ಕುಮಾರ್, ಕೊಡಗಿನ ಅಯ್ಯಪ್ಪ ಮತ್ತು ಮೈಸೂರಿನ ಧನಂಜಯ ವೇಗದ ಬೌಲರ್ ಗಳು.

ಕರ್ನಾಟಕದ ಬ್ಯಾಟಿಂಗ್ ರಘು ಮತ್ತು ಯೆರೆ ಗೌಡರನ್ನೇ ನೆಚ್ಚಿಕೊಂಡಿದೆ. ಇವರಿಬ್ಬರೊಂದಿಗೆ ಯುವ ಆಟಗಾರ ಪವನ್, ನಾಯ್ಡು ಮತ್ತು ಸವ್ಯಸಾಚಿ ಬಾಲಚಂದ್ರ ಅಖಿಲ್. ಕಳೆದ ಋತುವಿನಲ್ಲಿ ಬ್ಯಾಟಿಂಗ್-ನಲ್ಲಿ ಉತ್ತಪ್ಪ ಬಳಿಕ ಮಿಂಚಿದವರು ರಘು ಮತ್ತು ನಾಯಕ ಯೆರೆ ಗೌಡ. ಈ ಬಾರಿ ಇವರಿಬ್ಬರು ಚೆನ್ನಾಗಿ ಆಡಿದರೆ ಮಾತ್ರ ಕರ್ನಾಟಕಕ್ಕೆ ಉಳಿಗಾಲ. ಮುಂಬೈ ವಿರುದ್ಧ ಕಳೆದ ವಾರ ನಡೆದ ಪಂದ್ಯದಲ್ಲಿ ಕರ್ನಾಟಕವನ್ನು ಪಾರು ಮಾಡಿದ್ದೇ ರಾಹುಲ್ ದ್ರಾವಿಡ್. ರಾಹುಲ್ ದ್ವಿಶತಕ ಮತ್ತು ಪವನ್ ಜತೆ ಅವರ ಶತಕದ ಜೊತೆಯಾಟದಿಂದ ಕರ್ನಾಟಕ ಪಂದ್ಯವನ್ನು ೧೪೨ ರನ್ನುಗಳ ಹಿನ್ನಡೆಯಿದ್ದರೂ ಡ್ರಾ ಮಾಡಿಕೊಂಡು ಒಂದು ಅಂಕವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ರಾಹುಲ್ ಇನ್ನು ಒಂದು ಪಂದ್ಯಕ್ಕೆ ಮಾತ್ರ ಲಭ್ಯವಿರುವರು. ತನ್ನ ಎರಡನೇ ರಣಜಿ ಪಂದ್ಯವನ್ನಾಡುತ್ತಿದ್ದ ಯುವ ಆಟಗಾರ ಪವನ್, ದ್ರಾವಿಡ್ ನಂತಹ ಮಹಾನ್ ಆಟಗಾರನ ಜೊತೆ ಶತಕದ ಜೊತೆಯಾಟದಲ್ಲಿ ಪಾಲ್ಗೊಂಡು, ಇನ್ನಿಂಗ್ಸ್ ಹೇಗೆ ಆಡಬೇಕು ಎಂಬ ಪಾಠ ಕಲಿಯಲು ಸಿಕ್ಕಿದ್ದು ಅವರ ಅದೃಷ್ಟ. ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯಗಳಿಗೆ ರಾಬಿನ್ ಉತ್ತಪ್ಪ ಆಯ್ಕೆಯಾಗಲಾರರು ಎಂದಾದರೆ ಕರ್ನಾಟಕದ ಎರಡನೇ ಪಂದ್ಯದ ನಂತರ ಅವರು ಲಭ್ಯವಿರಬಹುದು. ಮೊದಲೆರಡು ಪಂದ್ಯಗಳಿಗೆ ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಲಭ್ಯವಿರುವರು.

ಮತ್ತೊಂದು ಸಂತೋಷದ ಸುದ್ದಿಯೆಂದರೆ ಉದಿತ್ ಪಟೇಲ್ ಮತ್ತು ಸ್ಟುವರ್ಟ್ ಬಿನ್ನಿ ತಂಡದಲ್ಲಿಲ್ಲ. ಇಂಡಿಯನ್ ಕ್ರಿಕೆಟ್ ಲೀಗ್ ಸೇರಿದ್ದರಿಂದ ಬಿನ್ನಿ, ತಾನಾಗಿಯೇ ಆಯ್ಕೆಗೆ ತನ್ನನ್ನು ಅನರ್ಹಗೊಳಿಸಿಕೊಂಡರೆ (ಆಯ್ಕೆಯಾಗಲಾರೆನು ಎಂದು ತಿಳಿದ ಬಳಿಕ ಇಂಡಿಯನ್ ಕ್ರಿಕೆಟ್ ಲೀಗ್ ಸೇರಿರಬೇಕು!) ಉದಿತ್ ಆಯ್ಕೆಯಾಗಲಿಲ್ಲ (ದೇವರ ದಯೆ).

ಸುಧೀಂದ್ರ ಶಿಂದೆ ಮತ್ತೆ ಮರಳಿ ತಂಡಕ್ಕೆ ಬಂದಿದ್ದಾರೆ. ಇವರೊಬ್ಬ ಉತ್ತಮ ಆಟಗಾರ. ಈ ಬಾರಿಯಾದರೂ ಸಿಕ್ಕಿದ ಅವಕಾಶಗಳನ್ನು ಶಿಂದೆ ಸರಿಯಾಗಿ ಉಪಯೋಗಿಸಿಕೊಂಡು ತಂಡದಲ್ಲಿ ತನ್ನ ಸ್ಥಾನ ಭದ್ರಗೊಳಿಸಲಿ.

ತಂಡ: ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಎನ್.ಸಿ.ಅಯ್ಯಪ್ಪ, ಸುನಿಲ್ ಜೋಶಿ, ಯೆರೆ ಗೌಡ, ಸಿ.ರಘು, ಬ್ಯಾರಿಂಗ್ಟನ್ ರೋಲಂಡ್, ಕೆ.ಬಿ.ಪವನ್, ಶ್ರೀನಿವಾಸ ಧನಂಜಯ, ಆರ್.ವಿನಯ್ ಕುಮಾರ್, ಸುಧೀಂದ್ರ ಶಿಂದೆ, ಬಾಲಚಂದ್ರ ಅಖಿಲ್, ಕೆ.ಪಿ.ಅಪ್ಪಣ್ಣ, ದೇವರಾಜ ಪಾಟೀಲ್, ತಿಲಕ್ ನಾಯ್ಡು ಮತ್ತು ರಾಬಿನ್ ಉತ್ತಪ್ಪ.

ಇತರೆಡೆ ಕಳೆದ ಋತುವಿನಲ್ಲಿ ಪ್ಲೇಟ್ ಲೀಗ್-ನಲ್ಲಿ ಅಸ್ಸಾಮ್ ತಂಡವನ್ನು ನಾಯಕನಾಗಿ ಪ್ರತಿನಿಧಿಸಿದ್ದ ಕರ್ನಾಟಕದ ಮಾಜಿ ಆರಂಭಿಕ ಆಟಗಾರ ಜಗದೀಶ್ ಅರುಣ್ ಕುಮಾರ್, ಈ ಋತುವಿನಲ್ಲಿ ಪ್ಲೇಟ್ ಲೀಗ್-ನಲ್ಲಿ ಗೋವಾದ ಪರವಾಗಿ ಆಡಲಿದ್ದಾರೆ. ಅರುಣ್ ಗೋವಾವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ ಮತ್ತು ಈ ಋತುವಿನ ಮೊದಲ ಪಂದ್ಯದಲ್ಲಿ ಅರುಣ್ ನಾಯಕತ್ವದಲ್ಲಿ ಗೋವಾ ತನ್ನ ಮೊದಲ ಪಂದ್ಯವನ್ನು ಹರ್ಯಾನಾ ವಿರುದ್ಧ ಗೆದ್ದಿದೆ. ೨೦೦೫-೦೬ ಋತುವಿನಲ್ಲಿ ರಾಜಸ್ಥಾನದ ಪರವಾಗಿ ೩ ಪಂದ್ಯಗಳನ್ನು ಆಡಿದ್ದ ಕರ್ನಾಟಕದ ಮತ್ತೋರ್ವ ಮಾಜಿ ಆರಂಭಿಕ ಆಟಗಾರ ಮಿಥುನ್ ಬೀರಾಲ ಈ ಋತುವಿನಲ್ಲಿ ಹರ್ಯಾನವನ್ನು ಪ್ರತಿನಿಧಿಸಲಿದ್ದಾರೆ.

ಅಂತೆಯೇ ಅರುಣ್ ಕುಮಾರ್ ತೆರವುಗೊಳಿಸಿದ ಅಸ್ಸಾಮ್ ತಂಡದ ನಾಯಕತ್ವವನ್ನು ತಮಿಳುನಾಡಿನ ಶ್ರೀಧರನ್ ಶರತ್ ವಹಿಸಿಕೊಂಡಿದ್ದಾರೆ. ಕಳೆದ ಋತುವಿನ ಅಂತ್ಯದಲ್ಲಿ ಪ್ರಥಮ ದರ್ಜೆ ಕ್ರಿಕೆಟ್-ನಿಂದ ನಿವೃತ್ತಿ ಘೋಷಿಸಿದ್ದ ಶರತ್, ಈಗ ನಿವೃತ್ತಿಯಿಂದ ಹೊರಬಂದು ಅಸ್ಸಾಮ್ ತಂಡದ ಚುಕ್ಕಾಣಿ ಹಿಡಿದಿದ್ದಾರೆ. ಅವರೊಂದಿಗೆ ಮಾಜಿ ಭಾರತ ಮತ್ತು ತಮಿಳುನಾಡಿನ ಆರಂಭಿಕ ಆಟಗಾರ ಸದಗೋಪನ್ ರಮೇಶ್ ಕೂಡಾ ಅಸ್ಸಾಮ್ ಪರವಾಗಿ ಆಡುತ್ತಿದ್ದಾರೆ.

ಕರ್ನಾಟಕದ ಪಂದ್ಯಗಳು:
೧. ನವೆಂಬರ್ ೩ ರಿಂದ ೬ - ಮುಂಬೈ ವಿರುದ್ಧ ಮುಂಬೈನಲ್ಲಿ
೨. ನವೆಂಬರ್ ೧೫ ರಿಂದ ೧೮ - ಹಿಮಾಚಲ ಪ್ರದೇಶ ವಿರುದ್ಧ ಬೆಂಗಳೂರಿನಲ್ಲಿ
೩. ನವೆಂಬರ್ ೨೩ ರಿಂದ ೨೬ - ತಮಿಳುನಾಡು ವಿರುದ್ಧ ಚೆನ್ನೈನಲ್ಲಿ
೪. ಡಿಸೆಂಬರ್ ೧ ರಿಂದ ೪ - ರಾಜಸ್ಥಾನ ವಿರುದ್ಧ ಬೆಂಗಳೂರಿನಲ್ಲಿ
೫. ಡಿಸೆಂಬರ್ ೯ ರಿಂದ ೧೨ - ಸೌರಾಷ್ಟ್ರ ವಿರುದ್ಧ ಬೆಂಗಳೂರಿನಲ್ಲಿ
೬. ಡಿಸೆಂಬರ್ ೧೭ ರಿಂದ ೨೦ - ದೆಹಲಿ ವಿರುದ್ಧ ಬೆಂಗಳೂರಿನಲ್ಲಿ
೭. ಡಿಸೆಂಬರ್ ೨೫ ರಿಂದ ೨೮ - ಮಹಾರಾಷ್ಟ್ರ ವಿರುದ್ಧ ಪುಣೆ/ ಕೊಲ್ಲಾಪುರ/ ನಾಸಿಕ್ ನಲ್ಲಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ರಣಜಿ ಪಂದ್ಯಗಳು ಶುರುವಾದವು.ಕಾಯುತಿದ್ದೆ ನಿಮ್ಮ ಬರವಣಿಗೆಗೆಗಾಗಿ.

ಪಟೇಲ್ ಮತ್ತು ಬಿನ್ನಿ ಇಲ್ಲದಿರುವುದು ಸಂತಸದ ವಿಷಯ..ಆದರೆ ವೇಗದ ಬೌಲಿಂಗ್ ಮಾಡುವವರಲ್ಲಿ ಯಾವುದೇ ಹೊಸ ಹೆಸರುಗಳಿಲ್ಲ..ಕಳೆದ ವರ್ಷ ವೆಂಕಿ ಕೋಚ್ ಆಗಿದ್ರು.ರಾಬಿನ್ ಪ್ರಕಾರ ವೆಂಕಿ ಕೊಡುಗೆ ತುಂಬ ಇತ್ತು..ಈ ವರ್ಷ ವಿಜಯ್ ಹೇಗೆ ನಿಭಾಯಿಸುತ್ತಾರೋ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.