ನೆನಪು...

0

ಅಪ್ಪ ಹೋದಾಗಿನಿಂದ ನನ್ನ ಮನಸ್ಸಿಗೆ ಸಮಾಧಾನ ಸಿಕ್ಕುತ್ತಿಲ್ಲ. ನಾನು ಅಪ್ಪನೊಂದಿಗೆ ಕಳೆದ ಪ್ರತೀ ಕ್ಷಣ ನನ್ನ ಕಣ್ಮುಂದೆ ಹಾದು ಬರುತ್ತವೆ, ನನ್ನನ್ನು ಕೂಗಿ ಕರೆಯುತ್ತವೆ. ನಾನು ಇನ್ನೇನು ಆ ಕ್ಷಣವನ್ನ ಹಿಡಿದು ಅದರೊಡನೆ ಬೆರೆಯಬೇಕೆನಿಸುವಷ್ಟರಲ್ಲಿ ವಿಕ್ರಮನ ಕೈಗೆ ಸಿಕ್ಕದ ಬೇತಾಳದಂತೆ ಮತ್ತೆಲ್ಲೋ ಮರೆಯಾಗಿ ಹುದುಗಿಬಿಡುತ್ತದೆ. ಪ್ರತೀದಿನ ಪ್ರತೀಕ್ಷಣ ನಾನು ಜೀವನದಲ್ಲಿ ಒಂಟಿ ಪಯಣಿಗ ಎನ್ನುವ ಸತ್ಯವನ್ನ ಕಣ್ಮುಂದೆ ತೋರುತ್ತದೆ.

ಅಪ್ಪನ ನೆನಪಾದಾಗಲೆಲ್ಲಾ ನಾನು ಅವರೊಡನೆ ಕಳೆದ ಕೆಲವು ಘಟನೆಗಳ ದ್ರುಶ್ಯಾವಳಿಗಳು ಪದೇ ಪದೇ ಕಾಣುತ್ತವೆ. ವಾರಾಂತ್ಯದಲ್ಲಿ ಬಿಡುವಿದ್ದಾಗ ಮನೆಗೆ ಹೋಗಿ ಮನೆಯ ಹೊಸ್ತಿಲು ತುಳಿಯುತ್ತಿದ್ದಂತೆಯೇ ತಮಾಷೆಯಾಗಿ "ಏನ್ ಬುದ್ದೀ ಹೇಗಿದ್ದೀರಾ !!!, ಮನೆ ಕಡೆ ಮಳೆ ಬೆಳೆ ಎಲ್ಲಾ ಚೆನ್ನಾಗಿ ಆಗ್ತಾ ಐತೋ ??? " ಎಂದೆಲ್ಲಾ ಮಾತನಾಡಿದ್ದು ನೆನಪಿಗೆಬರುತ್ತದೆ.

"ಅಪ್ಪಾ, ನಾನು ಬಂದ್ಮೇಲೆ ನಿಮ್ಗೆ ಟಿವಿ ಸಿಕ್ಕೊದಿಲ್ಲ, ಒಂದು ದಿನ ಅಡ್ಜಸ್ಟ್ ಮಾಡ್ಕೊಳಿ ಆಯ್ತಾ ??" ಹೀಗೆ ಹೇಳಿದಾಗ ಅಪ್ಪ, "ಪರ್ವಾಗಿಲ್ಲ ಬಿಡೋ, ನಾನೇನು ನೋಡೋದಿಲ್ಲ, ಎಲ್ಲಾ ನಿಮ್ ಅಮ್ಮನೇ ನೋಡೋದು... ನೀನು ಏನ್ ಬೇಕಾದ್ರೂ ಹಾಕ್ಕೊ. ಹೇಗಿದ್ರೂ ನೀನು ಅಲ್ಲಿ ಅಂತೂ ನೋಡೋದಿಲ್ಲ" ಅಂತ ಹೇಳಿ ಒಂದು ಕಿರುನಗೆ ನಕ್ಕು ತಾವೂ ನನ್ನಜೊತೆಯಲ್ಲಿ ಕುಳಿತು ಹಿಂದಿ ಸಿನಿಮಾದ ಸಿಡಿಯನ್ನ ನೋಡುತ್ತಲಿದ್ದರು. "ಅಪ್ಪಾ !!! ಕನ್ನಡಕ ಹಳೇದಾಗಿದೆ, ಅದೂ ಅಲ್ದೇ ಗಾಜಿನ ಕನ್ನಡಕ ಅಪ್ಪಾ, ಇದು ಬೇಡ, ಪ್ಲಾಸ್ಟಿಕ್ ದು ಮಾಡಿಸ್ಕೊಳಿ, ಅದು ಭಾರ ಕಮ್ಮಿ ಇರತ್ತೆ ಅಂತ ಹೇಳಿದ್ರೆ, ಅಯ್ಯೋ ಬಿಡೋ ಪರ್ವಾಗಿಲ್ಲ, ಇದ್ದರೆ ಇನ್ನೆಷ್ಟುದಿನಾ ಅಂತ ಇರ್ತೀನಿ, ಇವತ್ತು ಇದ್ದು ನಾಳೆ ಹೋಗೋ ಶರೀರ !!! ಅದಕ್ಕೆ ಹೊಸಾ ಕನ್ನಡಕ ಅಂತ ದುಡ್ಡು ಖರ್ಚುಮಾಡಬೇಡ, ಅದನ್ನೇ ಕೂಡಿಡು... ಮುಂದೆ ನಿನ್ನ ಮದುವೇ ಆದಮೇಲೆ ಬೇಕಾಗತ್ತೆ" ಅಂತೆಲ್ಲಾ ಹೇಳ್ತಾ ಇದ್ರು.

"ನಾಳೆ ನಿನಗೆ ಪುರುಸೊತ್ತಾದಾಗ ತೆಂಗಿನ ಕಾಯಿ ಕುಯ್ಯೋಣ, ಟೈಮ್ ಇಲ್ಲಾ ಅಂದ್ರೆ ಬೇಡ". ನೆಕ್ಸ್ಟ್ ಟೈಮ್ ತೆಗೆದ್ರಾಯ್ತು ಅಂತ ಹೇಳಿದಾಗ ನಾನು ಸಾಧ್ಯವಾದಷ್ಟೂ ನನ್ನ ಎಲ್ಲಾಕೆಲಸಗಳನ್ನ ಬಿಟ್ಟು ಹೋಗಿ ತೆಂಗಿನ ಕಾಯಿ ಕುಯ್ದು ಕೊಡುತ್ತಿದ್ದೆ. ಕಾಯಿ ತೆಗೆಯುವಾಗಲೂ ಅಪ್ಪ ಕೆಳಗೆ ನಿಂತು ನನಗೆ ಮಾರ್ಗದರ್ಶನ ನೀಡ್ತಾಇದ್ರು. "ಅದುಬೇಡ, ಅದರ ಪಕ್ಕದ್ದ್ನ ತೆಗಿ, ಸ್ವಲ್ಪ ತಡಿ ಯಾರೂ ಬರ್ತಾ ಇದಾರೆ, ಇಗ ತೆಗೀಬಹುದು, ಆ ಕಾಯಿ ಬೇಡ ಅದು ಇನ್ನೂ ಎಳೆಸು. ಅದರ ಪಕ್ಕದ್ದನ್ನ ತೆಗಿ" ಅಂತೆಲ್ಲಾ ಹೇಳಿದಮೇಲೆ ನಾನು ಕಾಯಿ ಕೆಡವಿದ ನಂತರ ಅದನ್ನೆಲ್ಲಾ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಈ ಸಾರಿ ಏಷ್ಟು ಕಾಯಿ ಕಿತ್ತಿದ್ದು ಅಂತ ಎಣಿಕೆ ಮಾಡ್ತಾ ಇದ್ರು. ಸ್ವಾಭಿಮಾನಿಯಾದ ಅಪ್ಪ ಕಾಯಿ ಕಿತ್ತಾದಮೇಲೆ ತಾವೇ ಆ ಚೀಲವನ್ನ ಮಹಡಿಯ ಮೇಲೆ ಇಡಲು ಅದನ್ನ ಹೊತ್ತುಕೊಂಡು ಹೋಗುತ್ತಿದ್ದರು, ಆದರೆ ನಾನು ಅದಕ್ಕೆ ಅವಕಾಶ ನೀಡುತ್ತಿರಲಿಲ್ಲ. "ಬಿಡೋ ಪರ್ವಾಗಿಲ್ಲ, ನೀನು ಕಾಯಿ ಕಿತ್ತು ಸುಸ್ತಾಗಿರ್ತೀಯ. ಸ್ವಲ್ಪ ಸುಧಾರಿಸ್ಕೋ... ಕಣ್ಣಿಗೆ ಧೂಳು ಬಿತ್ತಾ !!! ಸ್ವಲ್ಪ ನೀರು ಹಾಕಿ ತೊಳ್ಕೊ !!!" ಎಂದೆಲ್ಲಾ ಬರೀ ನನ್ನಬಗ್ಗೆ ಕಾಳಜಿವಹಿಸುತ್ತಿದ್ದರೇ ಹೊರತು ಅವರ ಬಗೆಗೆ ಕಾಳಜಿ ವಹಿಸಿದ್ದು ಕಡಿಮೆಯೇ.

ಕಾಯಿಕಿತ್ತಾದಮೇಲೆ ಒಣಗಿರುವ ತೆಂಗಿನ ಗರಿಗಳೂ ಬೀಳುತ್ತಿದ್ದವು, ಅದನ್ನ ಕತ್ತಿ ಹಿಡಿದು ತುಂಡು ತುಂಡುಮಾಡಿ ಬಿಸಿಲಿಗೆ ಹಾಕದಿದ್ದರೆ ಅಪ್ಪನಿಗೆ ಸಮಾಧಾನ ಸಿಕ್ಕುತ್ತಿರಲಿಲ್ಲ. ಸಾಧ್ಯವಾದಷ್ಟೂ ನಾನು ಅದಕ್ಕೆ ಅವಕಾಶ ನೀಡದ ಕಾರಣ, ನಾನು ಅಲ್ಲಿ ಇರದಿದ್ದಾಗ ಆ ಕೆಲಸಕ್ಕೆ ಕೈ ಹಾಕುತ್ತಿದ್ದರು.

ಮೊನ್ನೆತಾನೆ ನಮ್ಮ ಮನೆಯಲ್ಲಿ ನಾನು ಮತ್ತೆ ನನ್ನ ಅಕ್ಕ ಸೇರಿ ಕಾಯಿಗಳನ್ನ ತೆಗೆಯುತ್ತಿದ್ದಾಗ ನನಗರಿವಿಲ್ಲದೇ ಅಪ್ಪಾ !!! ಅಂತ ಬಾಯಿಯಿಂದ ಸ್ವರ ಹೊರಬಂದು ತಕ್ಷಣ ಅವರಲ್ಲಿ ಇಲ್ಲವೆಂದು ಅರಿವಾಯಿತು. ಕಣ್ಣಿನಿಂದ ಅವರ ನೆನಪಬಿಂದುಗಳು ಹರಿದುಬಂದವು. ಕೆಳಗಿದ್ದ ಅಕ್ಕ "ಏನಾಯ್ತೋ ?" ಅಂತ ಕೇಳಿದ್ದಕ್ಕೆ "ಏನಿಲ್ವೇ, ಧೂಳು ಕಣ್ಣಿಗೆ ಬಿತ್ತು..." ಅಂತ ಸುಳ್ಳು ಹೇಳಿದ್ದು ಅವಳ ಅರಿವಿಗೂ ಬಂದಿತ್ತು. "ಆ ಕಾಯಿ ಬೇಡ ಅದು ಇನ್ನೂ ಎಳೆಸು. ಅದರ ಪಕ್ಕದ್ದನ್ನ ತೆಗಿ" ಅಂತ ಹೇಳಲು ಅಲ್ಲಿ ಅಪ್ಪ ಇರಲಿಲ್ಲ...

ಅಪ್ಪ ನನ್ನೊಡನೆ ಇಲ್ಲದಿದ್ದರೂ ಅವರು ಕಲಿಸಿರುವ ಸ್ವಾಭಿಮಾನ, ಆತ್ಮಾಭಿಮಾನ ಅವರೊಡನೆ ಕಳೆದ ಮಧುರ ವಾತ್ಸಲ್ಯಭರಿತ ಕ್ಷಣಗಳು ನನ್ನೊಂದಿಗಿದ್ದಾವೆ. ಅವರು ಸ್ವರ್ಗಸ್ಥರಾದ ೫ ತಿಂಗಳುಗಳ ನಂತರವೂ ನಾನು ಮನೆಗೆ ಹೋದಾಗ ನನಗರಿವಿಲ್ಲದಂತೆ ಮನಸ್ಸಿನಿಂದ ಮಾತು ಹೊರಡುತ್ತದೆ... "ಏನ್ ಬುದ್ದೀ, ಹೇಗಿದ್ದೀರಾ !!!"

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಮ್ಮ ಈ ಬ್ಲಾಗ್ ಬರಹ ಓದಿ ನನ ಕಣ್ಣಲ್ಲಿ ಹನಿಗೂಡಿದವು. ನಿಮ್ಮ ದುಖಃದಲ್ಲಿ ನಾನು ಭಾಗಿ.
-ನಂದನ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಬರಹ ಓದಿ ಕಣ್ಣಲ್ಲಿ ನೀರು ಬಂತು....ಪಪ್ಪಗೆ ಕಾಲ್ ಮಾಡಿ ಮಾತಾಡೋ ತನಕ ನೆಮ್ಮದಿನೇ ಇರ್ಲಿಲ್ಲ...ಒಂದು ತಿಂಗಳಿಂದೆ ಪಪ್ಪನಿಗೆ ಹಾರ್ಟ್ ಪ್ರಾಬ್ಲೆಮ್ ಅಂತ ಗೊತ್ತಾಯಿತು...ಅಂದಿನಿಂದ ಏನೋ ಯಾವಾಗಲು ಭಯ.. :(
ನಿಮ್ಮ ದುಃಖದಲ್ಲಿ ನಾವೆಲ್ಲ ಭಾಗಿಗಳು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:(

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಮ್ಮನ ಪ್ರೀತಿನೇ ಬೇರೆ, ಅಪ್ಪನ ಪ್ರೀತಿನೇ ಬೇರೆ... ಅಪ್ಪ ನನ್ನೊಂದಿಗಿದ್ದ ಪ್ರತೀ ದಿನ, ಪ್ರತೀ ಕ್ಷಣ ನಾನು ಅವರನ್ನ ನಗು ನಗುತ್ತಾ ಇರೋಹಾಗೆ ಮಾಡ್ತಾ ಇದ್ದೆ... ಈಗ ಅಪ್ಪ ನಮ್ಮನ್ನ ಬಿಟ್ಟು ಹೋದಮೇಲೆ ಅಮ್ಮ ಒಂಟಿಯಾಗಿದ್ದಾರೆ, ಅವರಿಗೆ ಹೇಗೆ ಸಮಾಧಾನ ಮಾಡೋದೋ ತಿಳೀತಾ ಇಲ್ಲ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.