ಕ್ಷೇತ್ರ ಪರ್ಯಟನೆ: ಮಧೂರು, ಅನಂತಪುರ, ಶರವು

3

ನಾಲ್ಕು ವರ್ಷಗಳ ಕಾಲ ಮಂಗಳೂರಿನಲ್ಲಿ ವಾಸವಾಗಿದ್ದರೂ, ಒಮ್ಮೆಯೂ ಮಧೂರಿಗೆ ಹೋಗಿರಲಿಲ್ಲ. ಪ್ರತಿ ವರ್ಷ ಮಳೆಗಾಲದ ಸಮಯದಲ್ಲಿ ಉದಯವಾಣಿಯಲ್ಲಿ ಮಧೂರಿನ ಚಿತ್ರ ನೋಡುತ್ತಿದ್ದೆವು ಏಕೆಂದರೆ ಭರ್ಜರಿ ಮಳೆ ಸುರಿದಾಗ ಪಕ್ಕದಲ್ಲಿರುವ ಮಧುವಾಹಿನಿ ಉಕ್ಕಿ ಹರಿದು ದೇವಸ್ಥಾನವನ್ನು ಕೃತಕ ಹೊಳೆಯನ್ನಾಗಿ ಮಾಡುತ್ತಿತ್ತು. ಇದು ಮಾತ್ರ ಅಲ್ಲ ಚೌತಿಯಂದು ಸಾಲುಗಟ್ಟಿ ನಿಂತಿರುವ (ಮಳೆ ಇದ್ದರೂ ಸಹ ಕೊಡೆ ಹಿಡಿದು ದರ್ಶನಕ್ಕೆ ಕಾಯುತ್ತಿರುವ) ಭಕ್ತ ಸಮೂಹ ನಮ್ಮನ್ನು ಅಲ್ಲಿಗೆ ಸೆಳೆಯುತ್ತಿತ್ತು. ಆದರೂ ಹೋಗಲು ಸಾಧ್ಯವಾಗಿರಲಿಲ್ಲ. ಅಂತೆಯೇ ಈ ಬಾರಿ ಮಧೂರಿಗೆ ಹೋಗುವ ಯೋಜನೆ ಇಟ್ಟುಕೊಂಡಿದ್ದೆವು. ಇದಕ್ಕೆ ನಿಗದಿಪಡಿಸಿದ ದಿನಾಂಕ ಮೇ ೩೧, ೨೦೦೯ ಭಾನುವಾರ. ಹಾಗೆ ವಾಪಾಸ್ ಬರುವಾಗ ಮಂಗಳೂರಿನ ಶರವಿಗೆ ಭೇಟಿ ನೀಡುವ ಯೋಚನೆ ನಮ್ಮದಾಗಿತ್ತು. ಹೌದು ಮಧೂರು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿದೆ. ಹಾಗಾದರೆ ಕರಾವಳಿಯ ಪ್ರಸಿದ್ಧ ಗಣಪತಿ ದೇವಸ್ಥಾನ ಹೇಗಾಗುತ್ತೆ ಎಂಬ ಪ್ರಶ್ನೆ ಕೂಡ ಕಾಡಬಹುದು. ಇದಕ್ಕೆ ಕಾರಣ, ಮೊದಲಿನಿಂದಲೂ ಕರಾವಳಿಯ ಆರು ಗಣಪತಿ ದೇವಸ್ಥಾನಗಳು ಬಹಳ ಪ್ರಸಿದ್ಧಿ.  ಭೌಗೋಳಿಕವಾಗಿ ಸ್ವಾತಂತ್ರ್ಯ ಬಂದ ನಂತರವೇ ವಿಭಜನೆಯಾಗಿದ್ದು. ಮತ್ತೊಂದು, ದಕ್ಷಿಣಕನ್ನಡ-ಉಡುಪಿ-ಕಾಸರಗೋಡು ಜಿಲ್ಲೆಗಳು ಭೌಗೋಳಿಕವಾಗಿ ವಿಭಜನೆಗೊಂಡರೂ ಮಾನಸಿಕವಾಗಿ ಈಗಲೂ ಒಂದೇ ಪ್ರದೇಶಗಳು.

ಬೆಳಿಗ್ಗೆ ಸುಮಾರು ೬:೩೦ಕ್ಕೆ ಹೊರಟೆವು. ಈ ಬಾರಿ ಕೆಲವರಿಗೆ ನೆಗಡಿ ಆದ್ದರಿಂದ ಮೊಸರವಲಕ್ಕಿ ಇರಲಿಲ್ಲ. ಮಳೆಗಾಲ ಇನ್ನೇನು ಶುರುವಾಗಲಿಕ್ಕಾಗಿತ್ತು. ಇದಕ್ಕೆ ಮುನ್ಸೂಚನೆ ಸಮುದ್ರ ತೀರದಲ್ಲಿ ಗುಡುಗುವ ಶಬ್ಧ. ಇಂತಹ ಗುಡುಗಿನ ನಂತರ ಇನ್ನು ನಾಲ್ಕೈದು ದಿನಗಳಲ್ಲಿ ಮಳೆ ಸುರಿವುದು ವಾಡಿಕೆ. ನಾವು ಹೋದ ದಿನ ಮಳೆಯ ಯಾವುದೇ ಸೂಚನೆ ಇರಲಿಲ್ಲ. ಸುಮಾರು ಒಂದು ವಾರ ಮಳೆ ಸುರಿದು ಸಧ್ಯಕ್ಕೆ ಮಳೆರಾಯ ವಿಶ್ರಾಂತಿ ತೆಗೆದುಕೊಳ್ಳುತ್ತಿರಬಹುದು. ಕರಾವಳಿಯಲ್ಲಿ ಮಳೆ ಇಲ್ಲವೆಂದರೆ ಸೆಖೆ. ಅವತ್ತು ಅಷ್ಟೆ ತುಂಬಾ ಸೆಖೆ ಜೊತೆಗೆ ಬೆವರಿಕೆ. ಒಟ್ಟಿನಲ್ಲಿ ೧೦ ಲೀಟರ್ ನೀರು ತೆಗೆದುಕೊಂಡು ಹೋಗಿದ್ದೆವು. ಸುಮಾರು ಒಂದು ಘಂಟೆಯ ಪ್ರಯಾಣದ ನಂತರ ಮಂಗಳೂರು ತಲುಪಿದೆವು. ಅಲ್ಲಿ ಒಂದು ಉಪಾಹಾರ ಗೃಹದಲ್ಲಿ ತಿಂಡಿ ತಿಂದು ಮಧೂರಿಗೆ ಹೋಗಲು ತಯಾರಾದೆವು.

ಮಂಗಳೂರಿನ ಉತ್ತರಕ್ಕೆ ಗುರುಪುರ ನದಿ ಹರಿಯುತ್ತದೆ ಹಾಗೆ ದಕ್ಷಿಣದಲ್ಲಿ ನೇತ್ರಾವದಿ ನದಿ. ಇವೆರಡು ನದಿಗಳು ಮಂಗಳೂರು ನಗರವನ್ನು ಸುತ್ತುವರಿದು ನಂತರ ಒಂದು ಜಾಗದಲ್ಲಿ ಕೂಡಿ (ಮಂಗಳೂರು ಹಳೆ ಬಂದರು ಬಳಿ) ನಂತರ ಒಟ್ಟಿಗೆ ಅರಬ್ಬಿ ಸಮುದ್ರ ಸೇರುತ್ತವೆ. ಇಂತಹ ಕೂಡುವಿಕೆಯಿಂದಾಗಿ ಮಂಗಳೂರು ನಗರಕ್ಕೆ ತುಳುವಿನಲ್ಲಿ ಕುಡ್ಲ ಎಂದು ಹಾಗೆ ಕೊಂಕಣಿಯಲ್ಲಿ ಕೊಡಿಯಾಲ್ ಎಂಬ ಹೆಸರು ಬಂದಿದೆ. ಅಲ್ಲಿನ ಚಿತ್ರಗಳನ್ನು ವೀಕ್ಷಿಸಿ.

ಪಣಂಬೂರು ಬಳಿಯ ಗುರುಪುರ ನದಿ

ಉಳ್ಳಾಲದ ನೇತ್ರಾವತಿ ನದಿ

ನಾನು ಹೊನ್ನಾವರದ ಶರಾವತಿ ಸೇತುವೆ ತುಂಬಾ ಸುಂದರ ಅಂದುಕೊಂಡಿದ್ದೆ. ಆದರೆ ಅಷ್ಟೆ ಸುಂದರ ಮಂಗಳೂರಿನ ನೇತ್ರಾವತಿ ನದಿ ಸೇತುವೆ ದೃಶ್ಯಗಳು. ಶರಾವತಿ ನದಿ ಸೇತುವೆಯಂತೆ ಒಂದು ಬಳಿ ಬೆಟ್ಟ ಮತ್ತೊಂದು ಬಳಿ ರೈಲ್ವೇ ಸೇತುವೆ ಹಾಗೂ ನೇತ್ರಾವತಿ ಸಮುದ್ರಕ್ಕೆ ಸೇರುವ ರಮಣೀಯ ನೋಟವಿದೆ. ನಾಲ್ಕು ವರ್ಷ ಇದ್ದವನಿಗೆ ಇದು ಕಣ್ಣಿಗೆ ಬೀಳದೆ ಇದ್ದಿದ್ದು ಬಹಳ ಬೇಸರ ತಂದಿತು. ಮನೆಯಲ್ಲಿ ಬೆಣ್ಣೆ ಇಟ್ಟುಕೊಂಡು ಊರೆಲ್ಲ ತುಪ್ಪಕ್ಕೆ ಹುಡುಕಾಡಿದ ಹಾಗೆ ಆಯಿತು ನನ್ನ ಸ್ಥಿತಿ. ಈಗಲಾದರೂ ನೋಡಿದೆನಲ್ಲ ಎಂಬುದೇ ಸಮಾಧಾನ.

ಕೇರಳದಲ್ಲಿ ಹರತಾಳಗಳು ಹೆಚ್ಚು ಆದ್ದರಿಂದ ಹೆದ್ದಾರಿಗಳು ಸಮತಟ್ಟಾಗಿರಬಹುದು ಅಂದುಕೊಂಡಿದ್ದೆ. ಆದರೆ ಎಲ್ಲಾ ಉಲ್ಟಾ. ದೊಡ್ಡ ಹೊಂಡಗಳು ನಮ್ಮನ್ನು ಸ್ವಾಗತಿಸಿದವು. ತಂದೆ ನಿಧಾನವಾಗಿ ವಾಹನ ಚಲಾಯಿಸುತ್ತಿದ್ದರಿಂದ ತೊಂದರೆಯಾಗಲಿಲ್ಲ. ದಾರಿಯುದ್ದಕ್ಕೂ ಹಲವು ಕಡೆ ಹೆದ್ದಾರಿಯಿಂದ ಸಮುದ್ರ ಗೋಚರಿಸುತ್ತಿತ್ತು. ಅಂತಹ ಒಂದು ಪ್ರದೇಶ ಕುಂಬಳೆ. ತುಂಬಾ ಸುಂದರವಾದ ನೋಟಗಳು. ಹೆದ್ದಾರಿ ಪಕ್ಕ ರೈಲ್ವೇ ಸೇತುವೆ ಹಿನ್ನೆಲೆಯಲ್ಲಿ ಸಮುದ್ರವಿರುವ ನೋಟ

ಕುಂಬಳೆ ಬಳಿಯ ಹಿನ್ನೀರು ಅಲ್ಲಿ ಒಂದು ದೋಣಿ

ಕುಂಬಳೆ ಬಳಿಯ ರೈಲ್ವೇ ಸೇತುವೆ ಮಧ್ಯೆ ಹಕ್ಕಿ ಹಿನ್ನೆಲೆಯಲ್ಲಿ ಸಮುದ್ರ (ಚಿತ್ರ ಹೆದ್ದಾರಿಯಿಂದ ತೆಗೆದಿದ್ದು)

ನಮ್ಮ ಕಾರು ಸಾಗುತ್ತಿತ್ತು. ಆದರೆ ಮಧೂರಿನ ಸುದ್ಧಿಯೇ ಇಲ್ಲ. ಒಂದೇ ಒಂದು ನಾಮಫಲಕ ಇಲ್ಲ. ಅಲ್ಲಿದ್ದ ಜನರನ್ನು ಕೇಳಿದಾಗ ಕೆಲವರಿಗೆ ಮಧೂರಿನ ಪರಿಚಯವೇ ಇಲ್ಲ :(. ಕಾಸರಗೋಡು ಬರುವ ಮುಂಚೆ ೫ ಕಿ.ಮೀ ಹಿಂದೆ ಚೌಕಿ ಎಂಬ ಪ್ರದೇಶ ಸಿಗುತ್ತದೆ. ಅಲ್ಲಿನ ರಿಕ್ಷಾದವರನ್ನು ವಿಚಾರಿಸಿದಾಗ ಅವರು ಸೂಕ್ತ ಮಾರ್ಗದರ್ಶನ ನೀಡಿದರು. ಆದರೂ ಅಲ್ಲಿಂದ ಇನ್ನೂ ಅನೇಕ ಅಡ್ಡ ದಾರಿಗಳಿದ್ದವು. ಎಲ್ಲೂ ನಾಮಫಲಕಗಳಿಲ್ಲ. ಅಲ್ಲಿನ ಜನರ ಸಹಾಯ ಸ್ವಭಾವ ನಮಗೆ ದಾರಿ ತೋರಿಸಿತು. ಸಾವಿರಾರು ಜನ ಬರುವ ಈ ಕ್ಷೇತ್ರಕ್ಕೆ ಸೂಕ್ತ ಮಾರ್ಗದರ್ಶನ ಇಲ್ಲದಿರುವುದು ಬೇಸರ ತಂದಿತು. ತಂದೆಯ ಸ್ನೇಹಿತರೊಬ್ಬರು ’ಸರಕಾರಗಳಿಗೆ ದೇವರ ನೆನಪಾಗುವುದು ಅದರ ಆದಾಯದ ಮೇಲೆ ಮಾತ್ರ. ಅದು ವಿಶೇಷವಾಗಿ ಹಿಂದೂ ದೇವಾಲಯಗಳ ಮೇಲೆ ವಿಶೇಷ ಕಣ್ಣು. ಇದರ ಕಾರಣ ಎಲ್ಲರಿಗೂ ತಿಳಿದೇ ಇದೆ. ನಂತರ ಅದರ ಹಣ ಎಲ್ಲಿಗೆ ಹೋಗುತ್ತೊ ಆ ಕ್ಷೇತ್ರಾಧೀಶನಿಗೆ ಗೊತ್ತು’ ಎಂದು ಖೇದ ವ್ಯಕ್ತಪಡಿಸಿದ್ದರು. ಯಾಕೆಂದರೆ ಅವರು ಸುಮಾರು ವರ್ಷಗಳ ಕಾಲ ಕಾಸರಗೋಡಿನಲ್ಲಿ ಕಲಿತವರು. ಅವರಿಗೆ ಅಲ್ಲಿನ ಅನೇಕ ಅನುಭವಗಳು ಈಗಲೂ ಮಾಸಿಲ್ಲ. ಇರಲಿ ಬಿಡಿ ಇದರ ಬಗ್ಗೆ ಯೋಚಿಸಿ  ಏನಾಗಬೇಕಿದೆ.

ಅಂತು ಇಂತು ಮಧೂರು ತಲುಪಿದೆವು. ಸುಂದರ ದೇವಸ್ಥಾನ. ಗಜಾಮಯ ಆಕೃತಿಯಲ್ಲಿರುವ ಮೂರು ಅಂತಸ್ತಿನ ದೇವಸ್ಥಾನ. ತುಂಬಾ ವಿಶಾಲವಾದ ಆವರಣ. ದೇವಸ್ಥಾನ ಒಳಹೊಕ್ಕ ಕೂಡಲೆ ಕಾಣಿಸುವುದು ಅನಂತೇಶ್ವರ ಮೂರ್ತಿ. ಇದು ಪೂರ್ವಾಭಿಮುಖವಾಗಿ ಪ್ರತಿಷ್ಠೆಗೊಂಡಿದೆ. ನಂತರ ಕಾಶಿ ವಿಶ್ವನಾಥ ಗುಡಿ. ನಂತರ ಕಾಣಿಸುವುದು ಗಣಪನ ಗುಡಿ. ಇಲ್ಲಿನ ಗಣಪ ದಕ್ಷಿಣಾಭಿಮುಖವಾಗಿ ಮುಖ ಮಾಡಿದ್ದಾನೆ. ನೋಡುವುದು ಬಹಳ ಕಷ್ಟ ದೀಪವೂ ಸರಿಯಿಲ್ಲ. ತುಂಬಾ ಸನಿಹದಿಂದ ಸೂಕ್ಷ್ಮವಾಗಿ ಗಮನಿಸಿದರೆ ಗಣಪ ಸ್ವಲ್ಪ ಕಾಣಿಸುತ್ತಾನೆ. ಮುಂದೆ ಅಯ್ಯಪ್ಪ, ಪಾರ್ವತಿ ಗುಡಿಗಳಿವೆ. ದೇವಸ್ಥಾನದ ಮುಂಭಾಗದಲ್ಲಿ ಮಧುವಾಹಿನಿ ಹೊಳೆ ಹರಿಯುತ್ತದೆ. ಮುಂಭಾಗದ ಎಡಗಡೆ ಪುಷ್ಕರಿಣಿ ಇದೆ. ಎಡಭಾಗದಲ್ಲಿ ಭೋಜನ ಶಾಲೆಯಿದೆ. ಎಲ್ಲರಿಗೂ ಮಧ್ಯಾಹ್ನ ಉಚಿತ ಊಟದ ವ್ಯವಸ್ಥೆ ಇದೆ. ಇದರ ಸಲುವಾಗಿ ಸೇವಾ ಕೌಂಟರಿನಲ್ಲಿ ಉಚಿತ ಪಾಸ್ ವಿತರಿಸುತ್ತಾರೆ. ಉಳಿದುಕೊಳ್ಳುವವರಿಗಾಗಿ ಮಧುವಾಹಿನಿ ಅತಿಥಿ ಗೃಹವಿದೆ. ದೇವಸ್ಥಾನಕ್ಕೆ ಬೆಳಿಗ್ಗೆ ಬೇಗ ಬರಬೇಕು. ಬೆಳಿಗ್ಗೆ ೮ ಗಂಟೆಗೆ ತೆರೆಯುವ ದೇವಸ್ಥಾನ ನಂತರ ೧೨:೩೦ವರೆಗೆ ಮುಚ್ಚುತ್ತದೆ. ಇದು ತಪ್ಪಿದ್ದಲ್ಲಿ ಇನ್ನು ಸಂಜೆ ೫:೩೦ವರೆಗೆ ತೆರೆಯುವುದು. ಮಳೆಗಾಲದಲ್ಲಿ ಖಂಡಿತ ಬರಕೂಡದು.

ಅನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ, ಮಧೂರು.

ಹಕ್ಕಿ ಚಿಲಿಪಿಲಿ ಎನ್ನಲಿ ಹರಿಯೆ, ಕಾಗೆ ಕಾ ಕಾ ಎನ್ನಲಿ
ಕೋಗಿಲೆ ಸ್ವರಗೈಯಲಿ ಕೃಷ್ಣ, ನಾಗಸಂಪಿಗೆ ಅರಳಲಿ ರಾಮ
ಮಧೂರು ದೇವಸ್ಥಾನದ ಮುಂದೆ ನಾಗಸಂಪಿಗೆ ಹೂವಿನ ಮರ ಕಂಡಾಗ ನೆನಪಾಗಿದ್ದು ಪುರಂದರದಾಸರ ಈ ಕೀರ್ತನೆ. ಈ ಹೂವು ಬಹಳ ವಿರಳ

ದೇವಸ್ಥಾನದ ಪುಷ್ಕರಿಣಿ

ಟಿಪ್ಪುಸುಲ್ತಾನ ಇಲ್ಲಿನ ದೇವಸ್ಥಾನವನ್ನು ಕೆಡವಲು ಬಂದಿದ್ದನೆಂಬ ಇತಿಹಾಸವಿದೆ. ಇನ್ನೇನು ಕೆಡವಬೇಕೆಂದು ಅನ್ನುವಷ್ಟರಲ್ಲಿ ಬಾಯಾರಿ ಅಲ್ಲಿನ ಬಾವಿಯ ನೀರನ್ನು ಕುಡಿದನಂತೆ. ನೀರು ಕುಡಿದರಿಂದ ಕೇವಲ ಬಾವಿಯ ಮಂಟಪಕ್ಕೆ ಕತ್ತಿ ಬೀಸಿ ದೇವಸ್ಥಾನವನ್ನು ಹಾಗೆ ಬಿಟ್ಟನಂತೆ. ಅವನ ಖಡ್ಗದ ಕುರುಹು ಈಗಲೂ ದೇವಸ್ಥಾನದಲ್ಲಿ ಕಾಣಬಹುದು. ದೇವಸ್ಥಾನವನ್ನು ಕೆಡವದೇ ಬಿಟ್ಟ ಸಂಭ್ರಮಕ್ಕಾಗಿ ಆಗಿನ ಕಾಲದಲ್ಲಿ ಬೃಹತ್ ಮೂಡಪ್ಪ ಸೇವೆ ಜರುಗಿದೆ. ಇಲ್ಲಿದೆ ಅದರ ಚಿತ್ರ

ಇಡಗುಂಜಿಯಲ್ಲಿ ತುಂಬಾ ಜನಸಂದಣಿ ಎಂದೆಣಿಸಿದ್ದೆ ಆದರೆ ಮಧೂರು ಜನಸಂದಣೆ ನೋಡಿದಾಗ ಸಾಕಾಗಿ ಹೋಯಿತು. ಸೇವಾ ಕೌಟರಿನಲ್ಲಿ ಚೀಟಿ ಪಡೆಯಲು ಸುಮಾರು ಅರ್ಧ ಗಂಟೆ ಕಾಯಬೇಕಾಯಿತು. ಅಂದು ಸುಮಾರು ೨೦೦೦ ಜನ ಭೇಟಿ ನೀಡಿರಬೇಕು. ೩೦ ನಿಮಿಷಕ್ಕೊಮ್ಮೆ ಸುಮಾರು ೩ ಬಸ್ಸುಗಳು ಕಾಸರಗೋಡಿನಿಂದ ಮಧೂರಿಗೆ ಭಕ್ತರನ್ನು ತುಂಬಿಕೊಂಡು ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಾವು ಮಧೂರಿಗೆ ತಲುಪಿದಾಗ ಸಮಯ ೯:೪೫. ಜನ ಎಷ್ಟಿದ್ದರೆಂದರೆ ಅಂದಿನ ಉದಯಾಸ್ತಮಾನ ಸೇವೆ, ಮೂಡಪ್ಪ ಸೇವೆ ಮತ್ತು ಅಪ್ಪ ಪ್ರಸಾದಗಳು ಮುಗಿದುಹೋಗಿತ್ತು. ಇಲ್ಲಿನ ಅಪ್ಪ ತುಂಬಾ ರುಚಿ. ಆದರೆ ನಮಗೆ ತಪ್ಪಿಹೋಯಿತು. ಕಡೆಗೆ ಗಣಹೋಮ, ಮಹಾಪೂಜೆ ಹಾಗೂ ರುದ್ರಾಭಿಷೇಕ ಸೇವೆ ಮಾಡಿಸಿದೆವು. ಪ್ರಸಾದ ೧೨:೩೦ವರೆಯ ಮಹಾಪೂಜೆಯ ನಂತರ ಕೊಡುವುದಂತೆ. ಮಹಾಪೂಜೆಯ ನಂತರ ಪ್ರಸಾದ ತೆಗೆದುಕೊಳ್ಳಲು ವಿತರಣಾ ಕೌಂಟರಿಗೆ ತೆರಳಿದೆವು. ಆಹಾ ಮಹಾಪೂಜೆಯ ಸೇವೆಗೆ ಅಪ್ಪ ಪ್ರಸಾದ ನೀಡುತ್ತಾರೆ. ನನ್ನ ನಿರಾಸೆ ಮಾಯವಾಯಿತು. ನಂತರ ಭೋಜನಕ್ಕೆ ನಮ್ಮ ಲಗ್ಗೆ. ಎಲ್ಲರಿಗೂ ಮಧ್ಯಾಹ್ನ ಉಚಿತ ಊಟದ ವ್ಯವಸ್ಥೆ ಇದೆ. ಇದರ ಪ್ರಕಟಣೆ ಕೂಡ ನೀಡುತ್ತಾರೆ. ಪ್ರಕಟಣೆಗಳು ತ್ರಿಭಾಷ ಸೂತ್ರದಲ್ಲಿದೆ. ಆಂಗ್ಲ, ಹಿಂದಿ, ಮಲಯಾಳಂ ಅಲ್ಲ ಬದಲಾಗಿ ಕನ್ನಡ, ತುಳು, ಮಲಯಾಳಂ. ಇಲ್ಲಿನ ಫಲಕಗಳು ತ್ರಿಭಾಷೆಯಲ್ಲಿದೆ(ಕನ್ನಡ, ಮಲಯಾಳಂ, ಆಂಗ್ಲ) ಜನಸಂದಣಿ ಹೆಚ್ಚಿದ್ದರಿಂದ ತುಂಬಾ ಹೊತ್ತು ಕಾಯಬೇಕಾಯಿತು. ಊಟ ತುಂಬಾ ರುಚಿಯಾಗಿದೆ. ಅನ್ನ ಬೇಕಾದಷ್ಟು ಬಡಿಸುತ್ತಾರೆ. ಸಾರು, ಕುಂಬಳಕಾಯಿ ಕೊದ್ದೆಲ್, ಮಜ್ಜಿಗೆ ಎಲ್ಲವೂ ಚೆನ್ನಾಗಿತ್ತು. ದೇವಸ್ಥಾನದ ಆವರಣದಲ್ಲಿ ಕುಂಬಳಕಾಯಿ ರಾಶಿ ನೋಡಿದಾಗಲೆ ಕೊದ್ದೆಲ್ ಕುಂಬಳಕಾಯಿದೆ ಇರಬಹುದೆಂದು ಊಹಿಸಿದ್ದೆ. (ಸಮಯದ ಅಭಾವದಿಂದ ಬೇಕಲ ಕೋಟೆ ನೋಡಲು ಸಾಧ್ಯವಾಗಲಿಲ್ಲ. ಸಮುದ್ರ ತೀರದ ಬಳಿಯ ಸುಂದರವಾದ ಜಾಗ. ಕಾಸರಗೋಡಿನಿಂದ ದಕ್ಷಿಣಕ್ಕೆ ೧೪ ಕಿ.ಮೀ ದೂರದಲ್ಲಿದೆ)

ನಮ್ಮ ಮುಂದಿನ ಪ್ರಯಾಣ ಅನಂತಪುರದ ಸರೋವರ ದೇವಸ್ಥಾನಕ್ಕೆ. ಮಧೂರಿನಿಂದ ಇಲ್ಲಿಗೆ ಬರಲು ಕೆಲವು ಕಡೆ ಮಾರ್ಗದರ್ಶನಗಳಿವೆ. ಆದರೆ ತುಂಬಾ ಅಡ್ಡರಸ್ತೆಗಳಿರುವುದರಿಂದ ಜನರ ಸಹಾಯ ಪಡೆಯಬೇಕಾಯಿತು.ಮೂರು ಸಾವಿರ ವರ್ಷ ಇತಿಹಾಸವಿರುವ ದೇವಸ್ಥಾನವಿದು. ದೇವಸ್ಥಾನಕ್ಕೆ ನಾವು ಹೋದಾಗ ಗರ್ಭಗುಡಿಯ ಬಾಗಿಲು ಮುಚ್ಚಿತ್ತು. ಸುಂದರವಾದ ದೇವಸ್ಥಾನ. ಕಳೆದ ವರ್ಷವಷ್ಟೆ ಜೀರ್ಣೋದ್ಧಾರವಾಗಿದ್ದು. ಇಲ್ಲಿನ ವಿಶೇಷತೆ ಎಂದರೆ ಇಲ್ಲಿನ ವಿಗ್ರಹಗಳು ಯಾವುದೆ ಲೋಹ ಅಥವಾ ಶಿಲೆಯಿಂದ ರಚಿಸಲಾಗಿಲ್ಲ. ಬದಲಾಗಿ ೬೪ ಬಗೆಯ ಗಿಡಮೂಲಿಕೆಗಳಿಂದ ತಯಾರಿಸಿದ್ದು. ಲೋಹದ ಮೂರ್ತಿಯನ್ನು ರಚಿಸಲು ಪ್ರಯತ್ನಿಸಿದರೂ ಸಾರ್ಥಕವಾಗದೆ ಕಡೆಗೆ ಮತ್ತೆ ಅದೇ ಕಡುಶರ್ಕರಪಾಕದ ವಿಗ್ರಹಗಳನ್ನು ರಚಿಸಬೇಕಾಯಿತಂತೆ. ಗರ್ಭಗುಡಿಯಲ್ಲಿ ಒಟ್ಟು ೭ ವಿಗ್ರಹಗಳಿವೆ. ಅನಂತಪದ್ಮನಾಭ (ಇಲ್ಲಿನ ಕ್ಷೇತ್ರಾಧೀಶ), ಶ್ರೀದೇವಿ, ಭೂದೇವಿ, ಗರುಡ, ಹನುಮಂತ ಮತ್ತು ಎರಡು ನಾಗಕನ್ನಿಕೆಯರು. ವಿಗ್ರಹವನ್ನು ಹೇಗೆ ರಚಿಸಿದರು ಎಂಬುದನ್ನು ತಿಳಿದುಕೊಳ್ಳಬೇಕಾದರೆ ದೇವಸ್ಥಾನದ ಆಲ್ಬಮ್ ವೀಕ್ಷಿಸಬಹುದು. ಇಲ್ಲಿನ ವಿಶೇಷ ಸೇವೆ ’ಮೊಸಳೆ ನೈವೇದ್ಯ’. ಪರಂಪರಾನುಗತವಾಗಿ ಇಲ್ಲಿ ಮೊಸಳೆ ನೆಲೆಸಿದೆ. ೬೭ ವರ್ಷದ ಹಿಂದೆ ಬ್ರಿಟಿಷರು ಇಲ್ಲಿನ ಮೊಸಳೆಯನ್ನು ಕೊಂದಾಗ ಮರುದಿನ ಮತ್ತೊಂದು ಮೊಸಳೆ ಪ್ರತ್ಯಕ್ಷವಾಗಿದೆ. ಆದರೆ ಮೊಸಳೆ ಹೇಗೆ ಬಂತೆಂದು ಯಾರಿಗೂ ತಿಳಿದಿಲ್ಲ. ಯಾರು ತಂದು ಹಾಕಿದ್ದಂತು ಅಲ್ಲ. ಈಗಲೂ ಅದೆ ಮೊಸಳೆ ಇದೆ. ಹೆಸರು ಬಬಿಯಾ. ಅನಂತಪುರದ ಕೆಲವು ಚಿತ್ರಗಳು.

ಅನಂತಪುರ ದೇವಸ್ಥಾನ. ಮಳೆಗಾಲದಲ್ಲಿ ಸರೋವರ ಉಕ್ಕಿ ದೇವಸ್ಥಾನಕ್ಕೆ ನುಗ್ಗುತ್ತದೆ. ಆದರೆ ಎಂದಿಗೂ ಸರೋವರದ ನೀರು ಬತ್ತುವುದಿಲ್ಲ.

ಬಬಿಯಾ ಈ ಗುಹೆಯೊಳಗೆ ಇರುವುದು. ಸುಮಾರು ೧೧:೪೫ಕ್ಕೆ ಈ ಮೊಸಳೆಗೆ ಅರ್ಚಕರು ನೈವೇದ್ಯ ಸಲ್ಲಿಸುತ್ತಾರೆ. ಗುಹೆಯ ಮೆಟ್ಟಿಲಿನಲ್ಲಿ ಇಳಿದು ಬಬಿಯಾ ಎಂದು ಕೂಗಿದರೆ ಮೊಸಳೆ ಹೊರಬಂದು ಬಾಯಿ ತೆರೆಯುತ್ತದೆ. ಈ ಮೊಸಳೆ ನಿರುಪದ್ರವಿ. ಸಂಜೆ ಕೆಲವೊಮ್ಮೆ ಗುಹೆಯಿಂದ ಹೊರಗೆ ಬರುತ್ತದೆಯಂತೆ

ಮತ್ತೊಂದು ಗುಹೆ. ಈ ಗುಹೆಯೊಳಗೆ ಸಣ್ಣ ಬಾವಿಯಿದೆ. ಇಲ್ಲಿಂದಲೇ ಅರ್ಚಕರು ಪೂಜೆಗೆ ನೀರು ತೆಗೆದುಕೊಂಡು ಹೋಗಬೇಕು. ಹಿಂದೆ ಈ ಗುಹೆಯ ಮೂಲಕವಾಗಿ ಬಿಲ್ವಮಂಗಲ ಮುನಿಯು ವಿಷ್ಣುವನ್ನು ಅರಸಿಕೊಂಡು ಒಂದು ಜಾಗಕ್ಕೆ ಸೇರಿದರಂತೆ (ಯಾಕೆ? ಸಮಯವಿದ್ದಾಗ ಬರೆಯುತ್ತೇನೆ). ಆ ಜಾಗವೇ ತಿರು-ಅನಂತಪುರ(ಕೇರಳದ ರಾಜಧಾನಿ) ಎಂದು ಪ್ರಸಿದ್ಧಿಯಾಗಿದೆ. ಅಲ್ಲಿಯೂ ಇದೇ ಗಿಡಮೂಲಿಕೆಗಳ ಮೂರ್ತಿಗಳಿವೆ. ಈತರದ ಮತ್ತೊಂದು ದೇವಸ್ಥಾನ ಕೇರಳದ ಕಣ್ಣೂರಿನ ಬಳಿಯಲ್ಲಿದೆ.

ಅನಂತಪುರದ ದರ್ಶನದ ನಂತರ ನಾವು ಮತ್ತೆ ಮಂಗಳೂರಿನ ಕಡೆ ಪ್ರಯಾಣದ ಬೆಳೆಸಿದೆವು. ಕುಂಬಳೆಯ ಗೋಪಾಲಕೃಷ್ಣ ದೇವಸ್ಥಾನ ಮುಚ್ಚಿದ್ದರಿಂದ ಅಲ್ಲಿನ ಕಾರ್ಯಕ್ರಮ ರದ್ದುಪಡಿಸಿದೆವು. ಮಾರ್ಗಮಧ್ಯದಲ್ಲಿ ಮತ್ತದೆ ಸುಂದರ ಜಾಗಗಳನ್ನು ನೋಡಿ ಆನಂದಿಸಿದೆವು. ಮಂಗಳೂರಿಗೆ ತಲುಪಿದಾಗ ೪:೩೦ಆಗಿತ್ತು. ಸುಮಾರು ದಿನಗಳ ನಂತರ ಅತ್ತೆ ಮನೆಗೆ ಹೋಗಿದ್ದು. ಅತ್ತೆ ಸೆಖೆಗೆ ಥಂಡ ಧಂಡ ಮಾವಿನಹಣ್ಣಿನ ರಸಾಯನ ಕೊಟ್ಟರು. ಸಂಜೆ ಸುಮಾರು ೬:೩೦ವರೆಗೆ ಶರವು ಗಣಪತಿ ದೇವಸ್ಥಾನ ತಲುಪಿದೆವು. ಹೋದಾಗ ತಾಳಮದ್ದಳೆ ನಡೆಯುತ್ತಿತ್ತು. ಇಲ್ಲಿ ಎಲ್ಲರೂ ನಮಗೆ ಪರಿಚಿತರು. ಈ ದೇವಸ್ಥಾನ ಪರಂಪರಾನುಗತವಾಗಿ ಬಂದಿದ್ದರಿಂದ ಇದು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿಲ್ಲ. ಮಧೂರು ಮತ್ತು ಶರವಿಗೆ ವ್ಯತ್ಯಾಸವೆಂದರೆ ಇಲ್ಲಿ ಶಿವನು ಪಶ್ಚಿಮಾಭಿಮುಖವಾಗಿ ಪ್ರತಿಷ್ಠೆಗೊಂಡಿದ್ದರೆ ಮಧೂರಿನಲ್ಲಿ ಪೂರ್ವಾಭಿಮುಖವಾಗಿದೆ. ಎರಡು ಕಡೆ ಗಣಪತಿ ದಕ್ಷಿಣಾಭಿಮುಖವಾಗಿದೆ. ಇಲ್ಲಿನ ಕೆಲವು ಚಿತ್ರಗಳು

ಶರವು ದೇವಸ್ಥಾನ. ಈ ದೇವಸ್ಥಾನವನ್ನೂ ಟಿಪ್ಪುಸುಲ್ತಾನ ಕೆಡವಲು ಬಂದಿದ್ದನಂತೆ. ಆದರೆ ಹಿಂದಿನ ರಾತ್ರಿ ಬಿದ್ದ ಕನಸಿನ ಪರಿಣಾಮವಾಗಿ ಮನಸ್ಸು ಬದಲಿಸಿದ ಎಂದು ಹೇಳಲಾಗಿದೆ.

ಪ್ರತಿ ಭಾನುವಾರ ನಡೆಯುವ ತಾಳಮದ್ದಳೆ ಇಲ್ಲಿನ ವಿಶೇಷ.

[ಶರವು ದರ್ಶನದ ನಂತರ ಸಮಯವಿದ್ದರೆ ಪಕ್ಕದಲ್ಲೇ ಇರುವ ವಿಶ್ವಭವನಕ್ಕೆ ಹೋಗಿ ಗೋಳಿಬಜೆಯನ್ನು ಸವಿಯಿರಿ. ಸ್ವಲ್ಪ ಮುಂದೆ ಹೋದರೆ ಕರ್ನಾಟಕದ ಮೊದಲ,ಐಸ್-ಕ್ರೀಮ್‍ಗೆಂದೆ ಮೀಸಲಾದ ಹೋಟೆಲ್, ಐಡಿಯಲ್ ಐಸ್-ಕ್ರೀಮ್‍ಗೆ ಭೇಟಿ ನೀಡಿ ನಾನಾ ಬಗ್ಗೆಯ ಐಸ್ ಕ್ರೀಮ್ ಸವಿಯಿರಿ]

ಶರವು ನೋಡಿದ ನಂತರ ವಾಪಾಸ್ ಮನೆ ಕಡೆ ಮುಖ. ಹಾಗೆ ಮಂಗಳೂರು ನಗರದ ಮೇಲೆ ಕಣ್ಣಾಡಿಸಿದೆ. ಹೆಂಚಿನ ಮನೆಗಳು ಹೋಗಿ ಅಲ್ಲೆಲ್ಲಾ ಮಾಲ್‍ಗಳು ಬಂದಿವೆ. ತುಂಬಾ ಮಾಲ್‍ಗಳಾಗಿವೆ. ಹೃದಯ ಭಾಗದಲ್ಲಿ ನಗರದ ಹಳೆಯ ಸೊಬಗು ಮಾಯವಾಗಿದೆ. ರಸ್ತೆಗಳು ಸುಂದರವಾಗಿದೆ. ಬಹುತೇಕ ರಸ್ತೆಗಳು ಕಾಂಕ್ರೀಟೀಕರಣಗೊಂಡಿದೆ. ಸ್ವಲ್ಪ ಸಮಯದ ನಂತರ ಮಂಗಳೂರು ನಗರದಿಂದ ಹೊರಗೆ ಬಂದೆವು. ಮಾರ್ಗಮಧ್ಯೆ ಮುಲ್ಕಿಯಲ್ಲಿ ಭಾರಿ ಮಳೆ ಸುರಿಯಲು ಪ್ರಾರಂಭವಾಯಿತು. ಆದ್ದರಿಂದ ಸ್ವಲ್ಪ ತಡವಾಗಿ ಸೂರು ಮುಟ್ಟಿದೆವು. ಮನೆಗೆ ತಲಿಪಿದಾಗ ರಾತ್ರಿ ೮:೩೦ ಆಗಿತ್ತು. ಮಧೂರಿನ ಅಪ್ಪದ  ರುಚಿ ನೋಡಲು ಮನಸ್ಸಾಯಿತು, ತಿಂದಾಗ ನಿರಾಸೆಯಾಯಿತು. ಗುಣಮಟ್ಟ ಚೆನ್ನಾಗಿರಲಿಲ್ಲ. ಹಿಂದಿನ ಕಾಲದಲ್ಲಿ ಬರಿ ಅಪ್ಪ ತಿನ್ನಲು ಮಧೂರಿಗೆ ನನ್ನ ತಂದೆ ಸ್ನೇಹಿತರು ಹೋಗುತ್ತಿದ್ದರಂತೆ. ಆದರೆ ಈಗ ಅಷ್ಟೇನು ಚೆನ್ನಾಗಿಲ್ಲ ಅಂತ ಅವರೇ ಹೇಳಿದ್ದರು. ಸೌತಡ್ಕದ ಅಪ್ಪ ರುಚಿ ಮುಂದೆ ಈ ಅಪ್ಪ ಅಷ್ಟಾಗಿ ರುಚಿಸಲಿಲ್ಲ. ಅತ್ತೆ ಕೊಟ್ಟ ಕುಸುಬಲಿಕ್ಕೆ ಶ್ಯಾವಿಗೆ ಹಾಗೂ ಸೌತೆಕಾಯಿ ಮಜ್ಜಿಗೆಹುಳಿ ತಿಂದು ಅಂದಿನ ದಿನ ಮುಕ್ತಾಯವಾಯಿತು.
------------------------------------------------------------------------------------------------------------------
ಚಿತ್ರಗಳ ಮೇಲೆ ಕನ್ನಡದಲ್ಲಿ ಬರೆಯಲು Paint.NET ಎಂಬ ಉಚಿತ ತಂತ್ರಾಶ ಹಾಗೂ BarahaIME(ಯುನಿಕೋಡ್) ಉಪಯೋಗಿಸಿದ್ದೇನೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಂದ,
ಉಪಯುಕ್ತ ಮಾಹಿತಿಗೆ ಧನ್ಯವಾದಗಳು.

ಅಂದಹಾಗೆ, ಬಹಳ ವಿರಳ ಆಗಿದ್ದೀರ?

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎರಡು ವಾರದಿಂದ ತುಂಬಾ ಕೆಲಸ ಅದಿಕ್ಕೆ ಸಂಪದದಿಂದ ಕೊಂಚ ದೂರ. ಇನ್ನೆರಡು ದಿನ ವಿರಾಮ ಮತ್ತೆ ಕೆಲಸ ಇದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕ್ಷೇತ್ರ ಪರ್ಯಟನೆ ಸೂಪರ್... ಒಳ್ಲೆ ಚಿತ್ರಗಳು... ಈ ಚಿತ್ರಗಳು ನೋಡಿ ಒಮ್ಮೆಯಾದರು ಇಲ್ಲಿಗೆ ಭೇಟಿ ನೀಡಲೇಬೇಕೆಂಬ ಬಯಕೆ ಹುಟ್ಟಿದೆ.... ಅದರಲ್ಲು ನೇತ್ರಾವತಿ ಸೇತುವೆಯೆ ರಮಣೀಯ ದೃಶ್ಯ ಅದ್ಬುತ.... ಪರಿಚಯಿಸಿದಕ್ಕೆ ನನ್ನೀ... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಮಂಜುನಾಥರೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಂದಕುಮಾರ್,
ಪ. ಘಟ್ಟದಲ್ಲಿ ಹುಟ್ಟಿ ಪೊಳಲಿ (ಪಲ್ಗುಣಿ ನದಿ),ಗುರುಪುರಕ್ಕಾಗಿ ಮಂಗಳೂರು ತಲಪುವ ಗುರುಪುರ ನದಿ.
ಧರ್ಮಸ್ಥಳ, ಉಪ್ಪಿನಂಗಡಿಗಾಗಿ ಮಂಗಳೂರು ತಲಪುವ ನೇತ್ರಾವತಿ. ಈ ಪುಣ್ಯ ನದಿಗಳ ಚಿತ್ರದಲ್ಲಿ ಮುಳುಗಿಸಿ, ಪುಣ್ಯಕ್ಷೇತ್ರಗಳಾದ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಮಧೂರು , ಅನಂತಪುರ, ಶರವು ಮಹಾ ಗಣಪತಿ ದೇವಸ್ಥಾನಗಳ ದರ್ಶನ ಮಾಡಿಸಿದ್ದಕ್ಕೆ ತುಂಬಾ ತುಂಬಾ ನನ್ನಿ.
>> ಶರವು ದರ್ಶನದ ನಂತರ ಸಮಯವಿದ್ದರೆ ಪಕ್ಕದಲ್ಲೇ ಇರುವ ವಿಶ್ವಭವನಕ್ಕೆ ಹೋಗಿ ಗೋಳಿಬಜೆಯನ್ನು ಸವಿಯಿರಿ..
-ನನ್ನ ಫ್ರೆಂಡ್(ಮಂಗಳೂರಲ್ಲಿ) ಕಾರು ತೆಗೆದುಕೊಂಡಾಗ ಮೊದಲು ಶರವು ದೇವಸ್ಥಾನದಲ್ಲಿ ಪೂಜೆ ಮಾಡಿಸಲು ಹೋಗಿದ್ದೆವು. ದೇವಸ್ಥಾನದ ಬಾಗಿಲು ತೆರೆಯಲು ಒಂದು ಗಂಟೆ ಕಾದಿದ್ದೆವು.
ಮೊದಲೇ ಗೊತ್ತಿರುತ್ತಿದ್ದರೆ :(
>>ಮಧೂರಿನ ಅಪ್ಪದ ರುಚಿ ನೋಡಲು ಮನಸ್ಸಾಯಿತು, ತಿಂದಾಗ ನಿರಾಸೆಯಾಯಿತು. ಗುಣಮಟ್ಟ ಚೆನ್ನಾಗಿರಲಿಲ್ಲ.
-ನಿಜ. ನನಗೂ ಇಷ್ಟವಾಗಿರಲಿಲ್ಲ.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮತ್ತಷ್ಟು ಮಾಹಿತಿಗಾಗಿ ವಂದನೆಗಳು ಗಣೇಶರೆ. ಗೋಳಿಬಜೆ ತಪ್ಪಿಸಿಕೊಂಡಿರಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಂದಕುಮಾರ್ ಅವರೆ ತುಂಬಾ ಚೆನ್ನಾಗಿ ನಿಮ್ಮ ಮಂಗಳೂರು ಪರ್ಯಟನೆಯನ್ನು ವರ್ಣಿಸಿದ್ದೀರಿ.....ಸ್ಥಳಗಳು ತುಂಬಾ ಮೆಚ್ಚುಗೆಯಾದವು......ಮೊಸಳೆಯ ವಿಚಾರ ಆಶ್ಚರ್ಯ ವೆನಿಸಿತು....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೊಸಳೆ ವಿಚಾರದ ಬಗ್ಗೆ ನಮಗೂ ಅಲ್ಲಿಗೆ ಹೋದಾಗ ಕುತೂಹಲವಾಗಿತ್ತು. ಅರ್ಚಕರು ತುಂಬಾ ಚೆನ್ನಾಗಿ ವಿವರಿಸಿದ್ದರು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರಗಳು ಹಾಗೂ ಲೇಖನ ಎರಡೂ ತುಂಬಾ ಚೆನ್ನಾಗಿವೆ. ಈ ಮೊಸಳೆ ದೇವಸ್ಥಾನದ ವಿಷಯ ಸುಮಾರು ಎರಡು ವರ್ಷಗಳ ಹಿಂದೆಯೇ ಟಿ ವಿ ೯ ನಲ್ಲಿ ತೋರಿಸಿದ್ದರು. ನಿಮ್ಮ ವಿವರಣೆ ಚೆನ್ನಾಗಿದೆ.

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲ ಚಿತ್ರ ಹಾಗು ವಿವರಣೆ ಚೆನ್ನಾಗಿದೆ ನಂದಕುಮಾರ್ ರವರೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.