ಸೃಷ್ಟಿಕರ್ತನಾಗುವ ಹಾದಿಯಲ್ಲಿ...

5

ಮೇ ೨೦, ೨೦೧೦.

ಅಮೆರಿಕದ ಕ್ಯಾಲಿಫೋರ್ನಿಯದಲ್ಲಿರುವ ಜೆ.ಕ್ರೈಗ್ ವೆಂಟರ್ ಇನ್ಸ್ಟಿಟ್ಯೂಟ್ ತಾನು ಸ್ವ-ವಿಭಜಿಸುವ ಸಂಯೋಜಿತ ಬ್ಯಾಕ್ಟೀರಿಯವನ್ನು ಸೃಜಿಸಿರುವುದಾಗ ಸುದ್ಧಿಯನ್ನು ಸಾರಿತು!

ಜೆ. ಕ್ರೈಗ್ ವೆಂಟರ್ ಅಮೆರಿಕದ ಓರ್ವ ಜೀವಶಾಸ್ತ್ರಜ್ಞ. ಈಗಾಗಲೇ ಇಡೀ ಜಗತ್ತಿಗೆ ಪರಿಚಿತರಾಗಿರುವ ವಿಜ್ಞಾನಿ. ಮಾನವ ತಳಿಯೋಜನೆಯನ್ನು ಪೂರ್ಣಗೊಳಿಸಿದವರಲ್ಲಿ ಮೊದಲಿಗರು. ಅವರು ಕಳೆದ ೧೫ ವರ್ಷಗಳಿಂದ ಜೀವಿಯೊಂದರ ತಳಿಸಮಷ್ಠಿಯನ್ನು (ಜೀನೋಮ್) ಬುಡದಿಂದ ಆರಂಭಿಸಿ, ಒಂದು ಹೊಸ ಸಂಯೋಜಿತ ಜೀವಿಯನ್ನು ಸೃಜಿಸಬೇಕೆಂಬ ಕನಸನ್ನು ಕಂಡಿದ್ದರು. ಅವರ ಆಸೆ ಕೊನೆಗೂ ಕೈಗೂಡಿತು. ಈ ಸಂಯೋಜಿತ ಜೀವಿಯನ್ನು ರೂಪಿಸಲು ೪೦ ದಶಲಕ್ಷ ಅಮೆರಿಕನ್ ಡಾಲರುಗಳನ್ನು ಖರ್ಚು ಮಾಡಿರುವರು. ೨೦ ವಿಜ್ಞಾನಿಗಳು ಒಂದು ದಶಕಕ್ಕೂ ಹೆಚ್ಚು ಕಾಲ ಈ ಸಂಶೋಧನೆಯಲ್ಲಿ ತೊಡಗಿ ಈ ಸಾಧನೆಯನ್ನು ಮಾಡಿರುವರು.

ಹೊಸ ಜೀವಿಯೇ?

ಒಂದು ಜೀವಕೋಶದ ರಚನೆಯನ್ನು ಗಮನಿಸಿದರೆ ಅದರಲ್ಲಿ ಮುಖ್ಯವಾದ ಮೂರು ಭಾಗಗಳನ್ನು ಕಾಣಬಹುದು. ಮೊದಲನೆಯದು ಕೋಶಪೊರೆ. ಎರಡನೆಯದು ಕೋಶರಸ ಹಾಗೂ ಮೂರನೆಯದು ಕೋಶರಸದಲ್ಲಿ ತೇಲುತ್ತಿರುವ ಬೀಜ. ಬೀಜವು ಕೋಶದ ಮಿದುಳಿದ್ದ ಹಾಗೆ. ಕೋಶದ ಎಲ್ಲ ಕೆಲಸ ಕಾರ್ಯಗಳನ್ನು ಬೀಜವು ನಿಯಂತ್ರಿಸುತ್ತದೆ. ಬೀಜವೇ ಕೋಶದ ಸರ್ವಸ್ವ!

ಬೀಜದಲ್ಲಿ ವರ್ಣಕಾಯಗಳು ಅಥವ ಕ್ರೋಮೋಸೋಮುಗಳು ಇರುತ್ತವೆ. ವಂಶವಾಹಿಗಳು ಈ ಕ್ರೋಮೋಸೋಮನ್ನು ರೂಪಿಸುತ್ತವೆ. ವಂಶವಾಹಿಗಳನ್ನು ಡಿ.ಎನ್.ಎ ರೂಪಿಸುತ್ತದೆ. ಈ ಡಿ.ಎನ್.ಎಗಳನ್ನು ಅಡೇನಿನ್, ಥೈಮಿನ್, ಗ್ವಾನಿನ್, ಸೈಟೋಸಿನ್ ಎಂಬ ಘಟಕಗಳು (ಬೇಸಸ್) ರೂಪಿಸುತ್ತವೆ. ಒಂದು ಜೀವಿಯಲ್ಲಿರುವ ಎಲ್ಲ ಕ್ರೋಮೋಸೋಮುಗಳನ್ನು ತಳಿಸಮಷ್ಠಿ ಅಥವ ಜೀನೋಮ್ ಎಂದು ಕರೆಯುವರು.

ಕ್ರೈಗ್ ವೆಂಟರ್ ಸಂಸ್ಥೆಯು ಹೊಸ ಸಂಯೋಜಿತ ಜೀವಿಯನ್ನು ಸೃಜಿಸಿರುವುದಾಗಿ ಹೇಳಿಕೆ ನೀಡಿದೆ. ಇದು ಪೂರ್ಣ ಸಂಯೋಜಿತ ಜೀವಿಯಲ್ಲ. ಪೂರ್ಣವಾಗಿ ಪ್ರಯೋಗಾಲದಲ್ಲಿ ಸೃಷ್ಟಿಯಾಗಿಲ್ಲ. ಜೀವಕೋಶದ ಮೂರನೆಯ ಭಾಗವಾದ ತಳಿಸಮಷ್ಟಿಯನ್ನು ಮಾತ್ರ ಪ್ರಯೋಗಾಲಯದಲ್ಲಿ ಸೃಜಿಸಿದ್ದಾರೆ. ಕೋಶಪೊರೆ ಹಾಗೂ ಕೋಶರಸವನ್ನು ಸೃಜಿಸಿಲ್ಲ. ಜೀವಕೋಶದಲ್ಲಿರುವ ಬೀಜವನ್ನು ಅಂದರೆ, ಬೀಜದಲ್ಲಿರುವ ತಳಿಸಮಷ್ಟಿಯನ್ನು ಪ್ರಯೋಗಾಲಯದಲ್ಲಿ ಸಂಯೋಜಿಸಿ, ಅದು ಜೀವಕೊಶದ ಕೆಲಸ ಕಾರ್ಯಗಳನ್ನು ಮಾಡುವಂತಹ ಯಶಸ್ವೀ ಪ್ರಯೋಗವನ್ನು ಪೂರ್ಣಗೊಳಿಸಿದ್ದಾರೆ.

ಆಧುನಿಕ ಜೀವತಾಂತ್ರಿಕ ವಿಜ್ಞಾನದಲ್ಲಿ ಇದೊಂದು ಪ್ರಮುಖ ಘಟ್ಟ!

ವಿವಿಧ ಘಟ್ಟಗಳು: 

ಕ್ರೈಗ್ ವೆಂಟರ್, ಕ್ಲೈಡ್ ಹಚಿನ್ಸನ್ ಮತ್ತು ಹ್ಯಾಮಿಲ್ಟನ್ ಸ್ಮಿಥ್ ಎಂಬ ಮೂವರು ತ್ರಿಮೂರ್ತಿ ವಿಜ್ಞಾನಿಗಳು ಕ್ರೈಗ್ ವೆಂಟರ್ ಅವರ ನೇತೃತ್ವದಲ್ಲಿ ಸಂಯೋಜಿತ ತಳಿಸಮಷ್ಟಿಯನ್ನು ರೂಪಿಸುವ ಕನಸನ್ನು ಕಂಡರು. ಇವರ ಪ್ರಯೋಗವು ಹಲವು ಪ್ರಮುಖ ಘಟ್ಟಗಳನ್ನು ಒಳಗೊಂಡಿತು.

ಮೊದಲು ಅತ್ಯಂತ ಕಡಿಮೆ ಘಟಕಗಳನ್ನು ಹೊಂದಿರುವ ಜೀವಿಯನ್ನು ಹುಡುಕಬೇಕಿತ್ತು. ಈ ಕೆಲಸವನ್ನು ತ್ರಿಮೂರ್ತಿ ವಿಜ್ಞಾನಿಗಳು ೧೯೯೫ರಲ್ಲಿ ಪೂರ್ಣಗೊಳಿಸಿದರು. ಈ ಭೂಮಿಯ ಮೇಲೆ ಇರುವ ಜೀವರಾಶಿಯಲ್ಲಿ ಅತ್ಯಂತ ಕನಿಷ್ಠ ಘಟಕಗಳನ್ನು ಹೊಂದಿರುವ ಜೀವಿಯನ್ನು ಹುಡುಕಿದರು. ಅದುವೇ ‘ಮೈಕೋಪ್ಲಾಸ್ಮ ಜೆನಿಟೇಲಿಯಮ್ ಎಂಬ ಜೀವಿ! ಈ ಜೀವಿಯು ಒಟ್ಟು ೫೦೦ ವಂಶವಾಹಿಗಳನ್ನು ಒಳಗೊಂಡಿದ್ದು, ಆ ೫೦೦ ವಂಶವಾಹಿಗಳನ್ನು ೬೦೦,೦೦೦ ಘಟಕಗಳು ರೂಪಿಸುತ್ತಿದ್ದವು. ವಿಜ್ಞಾನಿಗಳು ಈ ೫೦೦ ವಂಶವಾಹಿಗಳಲ್ಲಿ ಕೆಲಸಕ್ಕೆ ಬಾರದ ೧೦೦ ವಂಶವಾಹಿಗಳನ್ನು ಪ್ರತ್ಯೇಕಿಸಿದರು. ಈ ೧೦೦ ವಂಶವಾಹಿಗಳನ್ನು ಪ್ರತ್ಯೇಕಿಸಿದರೂ ಸಹಾ, ಜೀವ ಕೋಶದ ಅಸ್ತಿತ್ವಕ್ಕೆ ಹಾಗೂ ಸಹಜ ಕೆಲಸ ಕಾರ್ಯಗಳಿಗೆ ಯಾವುದೇ ತೊಂದರೆಯಾಗುತ್ತಿರಲಿಲ್ಲ. 

ಈ ಘಟಕಗಳ ಕ್ರಮಗತಿಯನ್ನು (ಸೀಕ್ವೆನ್ಸ್) ಕಂಪ್ಯೂಟರಿನ ಸಹಾಯದಿಂದ ಗುರುತಿಸಬೇಕಿತ್ತು. ಇದು ಎರಡನೆಯ ಘಟ್ಟ.

ಮೂರನೆಯ ಘಟ್ಟದಲ್ಲಿ, ಈ ಕ್ರಮಗತಿಗೆ ಅನುಗುಣವಾಗಿ ಪ್ರಯೊಗಾಲಯದಲ್ಲಿ ಜೀವರಾಸಾಯನಿಕಗಳನ್ನು ಸಂಯೋಜಿಸಬೇಕಿತ್ತು.

ನಾಲ್ಕನೆಯ ಘಟ್ಟದಲ್ಲಿ ಒಂದು ಬ್ಯಾಕ್ಟೀರಿಯದ ತಳಿಸಮಷ್ಟಿಯನ್ನು ತೆಗೆಯಬೇಕಿತ್ತು. ಅದರ ಸ್ಥಳದಲ್ಲಿ ಪ್ರಯೋಗಾಲಯದಲ್ಲಿ ಸಂಯೋಜಿಸಿದ ಹೊಸ ತಳಿಸಮಷ್ಟಿಯನ್ನು ಪ್ರತಿಷ್ಠಾಪಿಸಬೇಕಿತ್ತು. (ಈ ಪ್ರಯೋಗವನ್ನು ಮೊದಲು ಒಂದು ಸಹಜ ಬ್ಯಾಕ್ಟೀರಿಯದ ತಳಿಸಮಷ್ಟಿಯನ್ನು ತೆಗೆದು, ಅದನ್ನು ಮತ್ತೊಂದು ಬ್ಯಾಕ್ಟೀರಿಯದ ತಳಿಸಮಷ್ಟಿಯ ಸ್ಥಳದಲ್ಲಿ ಪ್ರತಿಷ್ಠಾಪಿಸಿ, ಅದು ಯಶಸ್ವಿಯಾಗಿ ಕೆಲಸ ಮಾಡುವ ತಂತ್ರಜ್ಞಾನವನ್ನು ಕೈವಶ ಮಾಡಿಕೊಳ್ಳಬೇಕಿತ್ತು. ಆನಂತರ ನೈಜ ತಳಿಸಮಷ್ಟಿಯ ಬದಲು ಪ್ರಯೋಗಾಲಯದಲ್ಲಿ ಸಂಯೋಜಿಸಿದ ತಳಿಸಮಷ್ಟಿಯನ್ನು ಬಳಸಬೇಕಿತ್ತು)

ಐದನೆಯ ಘಟ್ಟದಲ್ಲಿ ಈ ಸಂಯೋಜಿತ ತಳಿಯು ಜೀವ ಕೋಶದ ಎಲ್ಲ ಕೆಲಸಕಾರ್ಯಗಳನ್ನು ನಿರ್ವಹಿಸಬೇಕಿತ್ತು. ಮುಖ್ಯವಾಗಿ ಸಂತಾನಾಭಿವೃದ್ಧಿಯನ್ನು ಮಾಡಬೇಕಿತ್ತು. ವಿಭಜನೆ ಹೊಂದಬೇಕಿತ್ತು. ಹಾಗೆ ಮಾಡುವುದು ಸಾಧ್ಯವಾದರೆ ಪ್ರಯೋಗ ಯಶಸ್ವಿಯಾದಂತೆಯೇ!

೨೦೦೭ ರಲ್ಲಿ ತ್ರಿಮೂರ್ತಿಗಳು ಹಾಗೂ ಅವರ ಸಂಗಡಿಗರು ಒಂದು ನೈಜ ಬ್ಯಾಕ್ಟೀರಿಯದ ತಳಿಸಮಷ್ಟಿಯನ್ನು ಮತ್ತೊಂದು ಬ್ಯಾಕ್ಟೀರಿಯಕ್ಕೆ ಯಶಸ್ವಿಯಾಗಿ ವರ್ಗಾವಣೆ ಮಾಡಿದರು.

೨೦೦೮ ರಲ್ಲಿ ‘ಮೈಕೋಪ್ಲಾಸ್ಮ ಜೆನಿಟೇಲಿಯಮ್ ಬ್ಯಾಕ್ಟೀರಿಯದ ತಳಿಸಮಷ್ಟಿಯ ಕ್ರಮಗತಿಯನ್ನು ಕಂಪ್ಯೂಟರಿನಲ್ಲಿ ಸಂಯೋಜಿಸಿದರು. ಜೊತೆಗೆ ಈ ಸಂಯೋಜಿತ ತಳಿಸಮಷ್ಟಿಯನ್ನು ಗುರುತಿಸಲು ಅದಕ್ಕೆ ಒಂದು ಪತಾಕೆಯನ್ನು ಹಚ್ಚಿದರು. ಇದು ಸಂಯೋಜಿತ ತಳಿಸಮಷ್ಟಿ ಕೆಲಸ ಮಾಡುತ್ತಿದೆಯೇ ಇಲ್ಲವೇ ಎಂಬುದನ್ನು ನಿಖರವಾಗಿ ತಿಳಿಸುತ್ತಿತ್ತು.

ಈ ಹಂತದಲ್ಲಿ ವಿಜ್ಞಾನಿಗಳಿಗೆ ಒಂದು ದೊಡ್ಡ ಸಮಸ್ಯೆ ಎದುರಾಯಿತು. ಈ ‘ಮೈಕೋಪ್ಲಾಸ್ಮ ಜೆನಿಟೇಲಿಯಮ್ ಬ್ಯಾಕ್ಟೀರಿಯವು ಅತ್ಯಂತ ನಿಧಾನವಾಗಿ ವರ್ಧಿಸುತ್ತಿತ್ತು. ಇದರಿಂದ ಪ್ರಯೋಗದ ವೇಗ ಅನಗತ್ಯ ವಿಳಂಬವಾಗುತ್ತಿತ್ತು. ಹಾಗಾಗಿ ಇನ್ನು ಮುಂದಿನ ಪ್ರಯೋಗದಲ್ಲಿ, ಈ ನಿಧಾನ ವರ್ಧಕ ಜೀವಿಯನ್ನು ಬಿಟ್ಟು ವೇಗವಾಗಿ ವರ್ಧಿಸುವ ಹೊಸ ಜೀವಿಯನ್ನು ಆಯ್ಕೆ ಮಾಡಲು ನಿರ್ಧರಿಸಿದರು. ಹಾಗೆಯೇ ಸುಮಾರು ೧ ದಶಲಕ್ಷ ಘಟಕಗಳನ್ನು ಹೊಂದಿದ್ದ ಮೈಕೋಪ್ಲಾಸ್ಮ ಮೈಕಾಯ್ಡೆಸ್ ಎಂಬ ಜೀವಿಯನ್ನು ಆಯ್ಕೆಮಾಡಿಕೊಂಡರು.

೨೦೦೯ರಲ್ಲಿ ಒಂದು ವಿಶೇಷ ಪ್ರಯೋಗವನ್ನು ಮಾಡಿದರು. ಮೈಕೋಪ್ಲಾಸ್ಮ ಮೈಕಾಯ್ಡೆಸ್-ನ ಸಹಜ ತಳಿಸಮಷ್ಟಿಯನ್ನು ಪ್ರತ್ಯೇಕಿಸಿದರು. ಅದನ್ನು ಒಂದು ಯೀಸ್ಟ್ ಜೀವಕೋಶದ ಒಳಗೆ ವರ್ಗಾಯಿಸಿದರು. ಯೀಸ್ಟಿನ ಒಡಲ ಒಳಗೆ ಮೈಕೋಪ್ಲಾಸ್ಮ ಮೈಕಾಯ್ಡೆಸ್-ನ ತಳಿಸಮಷ್ಟಿಯನ್ನು ತಮಗೆ ಅಗತ್ಯಕಂಡಂತೆ ಬದಲಾಯಿಸಿದರು. ಆನಂತರ ಬದಲಾಯಿಸಿದ ತಳಿಸಮಷ್ಟಿಯನ್ನು ಮೈಕೋಪ್ಲಾಸ್ಮ ಕ್ಯಾಪ್ರಿಕೋಲಮ್ ಎಂಬ ಸನಿಹ ಸಂಬಂಧಿಯ ಒಡಲಿನೊಳಗೆ ವರ್ಗಾಯಿಸಿದರು. ಪ್ರಯೋಗವು ಯಶಸ್ವಿಯಾಯಿತು. ಈಗ ಪ್ರಯೋಗಾಲಯದಲ್ಲಿ ಸೃಜಿಸಿದ ಮೈಕೋಪ್ಲಾಸ್ಮ ಮೈಕಾಯ್ಡೆಸ್ ತಳಿಸಮಷ್ಟಿಯನ್ನು ಮತ್ತೊಂದು ಬ್ಯಾಕ್ಟೀರಿಯದ ಒಡಲಿನ ಒಳಗೆ ಪ್ರತಿಷ್ಠಾಪಿಸಿ, ಅದು ಕಾರ್ಯಪ್ರವೃತ್ತವಾಗುವಂತೆ ನೋಡಿಕೊಳ್ಳಬೇಕಿತ್ತು.

ಈಗ ಮೈಕೋಪ್ಲಾಸ್ಮ ಮೈಕಾಯ್ಡೆಸ್ ಜೀವಿಯ ತಳಿಸಮಷ್ಟಿಯನ್ನು ಪ್ರಯೋಗಾಲಯದಲ್ಲಿ ಸೃಜಿಸುವ ಮಹತ್ತರ ಘಟ್ಟ! ತ್ರಿಮೂರ್ತಿಗಳು ಒಂದು ಸಂಸ್ಥೆಯಿಂದ ೧೦೦೦೧೦೮೦ ಮೈಕೋಪ್ಲಾಸ್ಮ ಮೈಕಾಯ್ಡೆಸ್ ನಿರ್ಮಾಣಕ್ಕೆ ಅಗತ್ಯವಾದ ಘಟಕಗಳನ್ನು ಕೊಂಡುಕೊಂಡು ಬಂದರು. ಈಗ ಘಟಕಗಳ ಕ್ರಮಜೋಡಣೆಯ ಕೆಲಸವನ್ನು ಆರಂಭಿಸಿದರು. ಒಂದೊಂದು ಕ್ರಮಗತಿ ಮುಗಿಯುತ್ತಿರುವಂತೆಯೇ ೮೦ ವಿಶೇಷ ಘಟಕಗಳನ್ನು ನಡು ನಡುವೆ ಸೇರಿಸಿದರು. ಈ ಘಟಕಗಳು ನೈಜ ಹಾಗೂ ಸಂಯೋಜಿತ ತಳಿಸಮಷ್ಟಿಯನ್ನು ಪ್ರತ್ಯೇಕಿಸಿ ಗುರುತಿಸಲು ನೆರವಾಗುತ್ತಿದ್ದವು. ಕೆಲವು ಘಟಕಗಳಲ್ಲಿ ಈ ಪ್ರಯೋಗದಲ್ಲಿ ಭಾಗಿಯಾದ ವಿಜ್ಞಾನಿಗಳ ಹೆಸರನ್ನು ಸೂಚಿಸುತ್ತಿದ್ದವು. ಇ-ಮೇಲ್ ವಿಳಾಸ ಹಾಗೂ ಕೆಲವು ಪ್ರಖ್ಯಾತ ಸೂಕ್ತಗಳನ್ನು ಹೇಳುತ್ತಿದ್ದವು.

ಘಟಕಗಳನ್ನು ನಿಗದಿತ ಕ್ರಮದಲ್ಲಿ ಜೋದಿಸುವುದು ಹೇಳುವಷ್ಟು ಸುಲುಭವಾಗಿ ಆಗುವ ಕೆಲಸವಲ್ಲ. ಈ ಬಿಡಿ ಬಿಡಿ ಘಟಕಗಳನ್ನು ಯೀಸ್ಟ್ ಜೀವಿಯ ಒಡಲಿನೊಳಗೆ ಪೋಣಿಸಬೇಕಾಗಿತ್ತು. ಮೊದಲು ೧೦,೦೦೦ ಘಟಕಗಳನ್ನು  ಪೋಣಿಸಿದರು. ಆನಂತರ ಉಳಿದ ಘಟಕಗಳನ್ನು ಪೋಣಿಸಿದರು. ಅತ್ಯಂತ ತಾಳ್ಮೆಯನ್ನು ಬೇಡುವ ಈ ಕೆಲಸವನ್ನು ಕೊನೆಗೂ ಮಾಡಿ ಮುಗಿಸಿದರು.

ಕೊನೆಗೂ ಮೈಕೋಪ್ಲಾಸ್ಮ ಮೈಕಾಯ್ಡೆಸ್ - ನ ಸಂಯೋಜಿತ ತಳಿಸಮಷ್ಟಿ ಸಿದ್ಧವಾಯಿತು. ಈಗ ಈ ಸಂಯೋಜಿತ ತಳಿಸಮಷ್ಟಿಯನ್ನು ಮೈಕ್ರೋಪ್ಲಾಸ್ಮ ಕ್ಯಾಪ್ರಿಕೋಲಮ್ ನ ದೇಹದಲ್ಲಿ ಪ್ರತಿಷ್ಠಾಪಿಸಬೇಕಿತ್ತು.

ಪ್ರತಿಷ್ಠಾಪನಾ ದಿನವೂ ಬಂದಿತು ಸಂಯೋಜಿತ ತಳಿಸಮಷ್ಟಿಯನ್ನು ಜತನದಿಂದ ಯಶಸ್ವಿಯಾಗಿ ಪ್ರತಿಷ್ಠಾಪಿಸಿದರು! ಆದರೆ... ಸಂಯೋಜಿತ ತಳಿಸಮಷ್ಟಿಯು ನೈಜ ತಳಿಸಮಷ್ಟಿಯಂತೆ ಮೈಕೋಪ್ಲಾಸ್ಮ ಕ್ಯಾಪ್ರಿಕೋಲಮ್ ಜೀವಿಯ ಎಲ್ಲ ಕೆಲಸ ಕಾರ್ಯಗಳನ್ನು ನಿಯಂತ್ರಿಸಬೇಕಿತ್ತಲ್ಲವೆ?! ಹಾಗಾಗಲೇ ಇಲ್ಲ! ೧೫ ವರ್ಷಗಳ ಕನಸು ಭಗ್ನವಾಯಿತೆ???

ಹಾಗೇನೂ ಆಗಲಿಲ್ಲ. ಕಂಪ್ಯೂಟರ್ ಲಘು ತಂತ್ರಾಂಶವನ್ನು ಬರೆಯುವಾಗ (ಸಾಫ್ಟ್‌ವೇರ್) ಕೆಲವು ಸಲ ತಪ್ಪುಗಳು (ಬಗ್ಸ್) ನುಸುಳುವುದುಂಟು. ಹಾಗೆಯೇ ಕಂಪ್ಯೂಟರಿನಲ್ಲಿ ಕ್ರಮಗತಿಯನ್ನು ಮೈಕೋಪ್ಲಾಸ್ಮ ಮೈಕಾಯ್ಡೆಸ್ ಕ್ರಮಗತಿಯನ್ನು ರೂಪಿಸುವಾಗ ಒಂದಷ್ಟು ಬಗ್ಸ್‌ಗಳು ನುಸುಳಿಬಿಟ್ಟಿದ್ದವು. ಆ ಬಗ್ಸ್‌ಗಳನ್ನು ಗುರುತಿಸಿ ನಿವಾರಿಸಿದರು. ಇದಕ್ಕಿ ಮೂರು ತಿಂಗಳು ಹಿಡಿಯಿತು. ಅಂತೂ ಇಂತೂ ಹೊಸ ತಳಿಸಮಷ್ಟಿಯನ್ನು ರೂಪಿಸಿದರು. ಅದನ್ನು ಮೈಕ್ರೋಪ್ಲಾಸ್ಮ ಕ್ಯಾಪ್ರಿಕೋಲಮ್ ಒಡಲಿನಲ್ಲಿ ಪ್ರತಿಷ್ಠಾಪಿಸಿದರು!

ಪವಾಡ ನಡೆಯಿತು! ವಾರಾಂತ್ಯವನ್ನು ಮುಗಿಸಿಕೊಂಡು ಬಂದ ತ್ರಿಮೂರ್ತಿಗಳನ್ನು ನೀಲಿಬಣ್ಣದ ಕೃಷಿಕೆ (ಕಲ್ಚರ್) ಸ್ವಾಗತವನ್ನು ಕೋರಿತು! ಮನುಷ್ಯನು ಸೃಷ್ಟಿಕರ್ತನಾಗಿಬಿಟ್ಟ! ಮೈಕೋಪ್ಲಾಸ್ಮ ಕ್ಯಾಪ್ರಿಕೋಲಮ್  ಒಡಲಿನಲ್ಲಿದ್ದ ಸಂಯೋಜಿತ ತಳಿಸಮಷ್ಟಿಯು ಕಾರ್ಯಪ್ರವೃತ್ತವಾಗಿತ್ತು. ಸಂತಾನವರ್ಧನೆಯನ್ನು ಸಮರ್ಪಕವಾಗಿ ನಿರ್ದೇಶಿಸಿತ್ತು! ಸಂಯೋಜಿತ ತಳಿಸಮಷ್ಟಿಯನ್ನು ಹೊಂದಿದ್ದ ಮೈಕೋಪ್ಲಾಸ್ಮ ಕ್ಯಾಪ್ರಿಕೋಲಮ್-ನ್ನು ಗುರುತಿಸಲು, ಅದರ ಸಮುದಾಯ (ಕಾಲನಿ) ನೀಲಿಬಣ್ಣದಲ್ಲಿ ಬೆಳೆಯುವಂತೆ ಯೋಜಿಸಲಾಗಿತ್ತು!

ಅನುಕೂಲತೆಗಳು: 

೪೦ ದಶಲಕ್ಷ ಡಾಲರುಗಳನ್ನು ಖರ್ಚು ಮಾಡಿ ಸೃಷ್ಟಿಕರ್ತನಾಗುವ ‘ಆಟ ವನ್ನು ಮನುಷ್ಯನೇಕೆ ಮಾಡುತ್ತಿದ್ದಾನೆ? ಇದರಿಂದ ಅವನಿಗೆ ಆಗುವ ಲಾಭವಾದರೂ ಏನು? ಈ ಪ್ರಶ್ನೆಗೆ ವಿಜ್ಞಾನಿಗಳು ಖಚಿತ ಉತ್ತರವನ್ನು ನೀಡುತ್ತಾರೆ.

  • ಜೀವಕೋಶವು ಹೇಗೆ ಕೆಲಸ ಮಾಡುತ್ತದೆ ಎಂಬ ಮೂಲಭೂತ ಅರಿವು ನಮಗೆ ದೊರೆಯುತ್ತದೆ.
  • ಇದರಿಂದ ಸುರಕ್ಷಿತವಾಗಿ ಲಸಿಕೆಗಳನ್ನು ಹಾಗೂ ಹೊಸ ಹೊಸ ಔಷಧಗಳನ್ನು ಸಿದ್ಧಪಡಿಸಬಹುದು.
  • ಈಗ ಲಭ್ಯವಿರುವ ನೈಜ ಇಂಧನಗಳು ಸೀಮಿತ ಪ್ರಮಾಣದಲ್ಲಿವೆ. ಇವು ಇಂದಲ್ಲ ನಾಳೆ ಪೂರ್ಣ ಖರ್ಚಾಗಲಿದೆ. ಹಾಗಾಗಿ ನಾವು ಹೊಸ ಜೈವಿಕ ಇಂಧನವನ್ನು ರೂಪಿಸಬೇಕಿದೆ. ಇಂತಹ ಜೈವಿಕ ಇಂಧನ ಹಾಗೂ ಇತರ ಜೈವರಾಸಾಯನಿಕಗಳನ್ನು ತಯಾರಿಸಲು ಈ ತಂತ್ರಜ್ಞಾನವನ್ನು ಕರಗತ ಮಾಡಿಕೊಳ್ಳುವುದು ಅಗತ್ಯ.
  • ಕಲುಷಿತ ನೀರನ್ನು ಶುದ್ಧಗೊಳಿಸಬಹುದು. ಆಹಾರದ ಹೊಸ ಹೊಸ ಮೂಲಗಳನ್ನು ಹುದುಕಬಹುದು. ಹೀಗೆ ಹಲವು ಕ್ಷೇತ್ರಗಳಲ್ಲಿ ಸಂಯೋಜಿತ ನೂತನ ಉಪಯುಕ್ತವಾಗಲಿವೆ.

ಅನಾನುಕೂಲತೆಗಳು:

ಮನುಷ್ಯನು ಬ್ರಹ್ಮನಾಗುವುದಕ್ಕೆ ಹೋಗುವುದು ಎಷ್ಟರ ಮಟ್ಟಿಗೆ ಸಮಂಜಸ? ಮನುಷ್ಯನು ಸೃಷ್ಟಿ ಮಾಡಿದ ಈ ಜೀವಿಯನ್ನು ಪಯೋಗಾಲಯದಿಂದ ಹೊರಗೆ ಮುಕ್ತವಾಗಿ ಬಿಟ್ಟರೆ, ಅದು ಹೇಗೆ ವರ್ತಿಸಬಹುದು? ನಾವು ಕಾಣದ ಅನಾಹುತಗಳನ್ನು ಮಾಡಬಹುದೆ? - ಈ ಪ್ರಶ್ನೆಯು ಸಹಜವಾಗಿ ನಮ್ಮನ್ನು ಕಾಡುತ್ತದೆ. ಇದಕ್ಕೆ ‘ಇದಮಿತ್ಥಂ ಎಂಬ ಉತ್ತರವನ್ನು ಯಾರೂ ನೀಡಲಾರರು. ಒಂದು ಸಲ ಈ ಜೀವಿಯು ಮುಕ್ತವಾಗಿ ಪ್ರಕೃತಿಯಲ್ಲಿ ಬೆರೆತರೆ, ಅದು ಅಲ್ಲಿ ಹೇಗೆ ವರ್ತಿಸಬಹುದು, ಇತರ ಜೀವಿಗಳ ಮೇಲೆ ಯಾವ ಪ್ರಭಾವವನ್ನು ಬೀರಬಹುದು ಎಂಬುದರ ಬಗ್ಗೆ ಖಚಿತ ಮಾಹಿತಿಯಿಲ್ಲ. ಆದರೆ ವಿಜ್ಞಾನಿಗಳು ಹೀಗಾಗದಂತೆ ಎಚ್ಚರವಹಿಸಿದ್ದಾರೆ. ಒಂದು ವೇಳೆ ಈ ಜೀವಿಯು ಪ್ರಯೋಗಾಲಯದಿಂದ ತಪ್ಪಿಸಿಕೊಂಡರೆ, ಹೊರಗೆ ಸ್ವತಂತ್ರವಾಗಿ ಬದುಕಲಾರದು. ಬದುಕುವುದಕ್ಕೆ ಅಗತ್ಯವಾದ ಕೆಲವು ಪೋಷಕಾಂಶಗಳು ಪ್ರಯೋಗಾಲಯದಲ್ಲಿ ಮಾತ್ರ ದೊರೆಯುವಂತೆ ಮಾಡಿರುತ್ತಾರೆ. ಹಾಗೆಯೇ ಇಂತಹ ಸಂಯೋಜಿತ ಜೀವಿಗಳಲ್ಲಿ ‘ಆತ್ಮಹತ್ಯೆಯ ವಂಶವಾಹಿ ವ್ಯವಸ್ಥೆಯನ್ನು ಅಳವಡಿಸಿರುತ್ತಾರೆ. ನಿರ್ದಿಷ್ಠ ಅವಧಿಯ ನಂತರ ಸಂಯೋಜಿತ ಜೀವಕೋಶ ಸ್ವಯಂನಾಶವಾಗುತ್ತದೆ.

ಸಂಯೋಜಿತ ತಳಿಸಮಷ್ಟಿ ಸೃಜನೆಯ ತಂತ್ರಜ್ಞಾನವು ಸಮಾಜ ವಿರೋಧಿ ಶಕ್ತಿಯಗಳ ಕೈಗೆ ಸಿಕ್ಕರೆ, ಅವರು ಅದನ್ನು ಖಂಡಿತ ದುರುಪಯೋಗಪಡಿಸಿಕೊಳ್ಳಲು ಅವಕಾಶವಿದೆ. ಇದುವರೆಗೂ ಈ ಭೂಮಿಯ ಮೇಲೆ ಹುಟ್ಟದಂತಹ ಮಾರಕ ಜೀವಿಯನ್ನು ಸೃಷ್ಟಿ ಮಾಡುವ ಅಪಾಯವನ್ನು ತಳ್ಳಿಹಾಕುವಂತಿಲ್ಲ. ಹಾಗಾಗಿ ಈ ತಂತ್ರಜ್ಞಾನವು ಅನರ್ಹ ವ್ಯಕ್ತಿಗಳ ಕೈಗೆ ಸಿಲುಕದ ಹಾಗೆ ನೋಡಿಕೊಳ್ಳುವುದು ಒಂದು ದೊಡ್ಡ ಜವಾಬ್ದಾರಿಯಾಗಲಿದೆ.

ಪ್ರಸ್ತುತ ಈ ತಂತ್ರಜ್ಞಾನವನ್ನು ಬ್ಯಾಕ್ಟೀರಿಯ ಮಟ್ಟದಲ್ಲಿ ಯಶಗೊಳಿಸಲಾಗಿದೆ. ನಾಳೆ ಇದು ಮಾನವ ಮಟ್ಟದಲ್ಲಿ ಪ್ರಯೋಗಗೊಳ್ಳಬಹುದೆ? ‘ರಾಮನನ್ನೋ ಇಲ್ಲ ‘ರಾವಣನನ್ನೋ ಸೃಜಿಸುವ ಮಟ್ಟಕ್ಕೆ ಹೋಗಬಹುದೆ? - ಈ ಪ್ರಶ್ನೆಗೆ ಇಲ್ಲ ಎನ್ನುತ್ತಾರೆ ವಿಜ್ಞಾನಿಗಳು. ಈ ಪ್ರಯೋಗವನ್ನು ಮನುಷ್ಯರ ಮೇಲೆ ಯೋಜನೆ ತಮ್ಮಲ್ಲಿ ಇಲ್ಲವೆನ್ನುತ್ತಾರೆ. ಆದರೆ ಈ ತಂತ್ರಜ್ಞಾನವು ಅನರ್ಹ ವ್ಯಕ್ತಿಗಳ ಕೈಗೆ ಸಿಕ್ಕರೆ, ಅವರು ಪೆಡಂಭೂತವನ್ನು ಸೃಜಿಸಲಾರರು ಎಂಬುದಕ್ಕೆ ಯಾವ ಭರವಸೆಯೂ ಇರುವುದಿಲ್ಲ. ಹಾಗಾಗಿ ಭವಿಷ್ಯದ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ.

ಅಂತಿಮ ಪ್ರಶ್ನೆ! ಮನುಷ್ಯನು ಹೀಗೆ ದೇವರಾಗಲು ಹೊರಟಿರುವುದು ಸಾಧುವೆ??! ಈ ಪ್ರಶ್ನೆಗೆ ಉತ್ತರ ಸ್ಪಷ್ಟ. ಪ್ರಕೃತಿಯ ಒಂದೊಂದೇ ರಹಸ್ಯವನ್ನು ಒಡೆಯಲು ಮನುಷ್ಯ ಮನ ಮಾಡಿದ್ದಾನೆ. ಆ ರೀತಿ ಒಡೆಯುವಂತಹ ಬುದ್ಧಿಶಕ್ತಿಯನ್ನು ಪ್ರಕೃತಿಯೇ ಮನುಷ್ಯನಿಗೆ  ನೀಡಿದೆ. ಹಾಗಿರುವಾಗ ಅವನು ‘ದೇವನಾಗಲು ಹೊರಟರೆ ಅದು ಅವನ ತಪ್ಪಲ್ಲ ಅಲ್ಲವೆ!!

 

                                              ----------

 

                                                                               -        ಡಾ.ನಾ.ಸೋಮೇಶ್ವರ

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸೋಮೇಶ್ವರರೇ, ಒ೦ದು ಉತ್ತಮ ಮಾಹಿತಿ ನೀಡಿದ್ದೀರಿ. ಅದಕ್ಕೆ ನಿಮಗೆ ಧನ್ಯವಾದಗಳು. ಪ್ರಕೃತಿಯಿ೦ದ ಪಡೆದ ಶಕ್ತಿಯನ್ನು ಪ್ರಕೃತಿಗೆ ವಿರುಧ್ಧವಾಗಿಯೇ ಮಾನವನು ಬಳಸುತ್ತಿರುವುದು ವಿಷಾದನೀಯ. ಸ೦ಶೋಧಿಸಿರುವ ನೂತನ ತ೦ತ್ರಜ್ಞಾನವನ್ನು ಜಗತ್ ಕಲ್ಯಾಣಕ್ಕೆ ಬಳಸಲಿ ಎ೦ಬುದೇ ನನ್ನ ಹಾರೈಕೆ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರನಾವಡರಿಗೆ ಧನ್ಯವಾದಗಳು. ಮನುಷ್ಯ ಮನಸ್ಸು ಮಾಡಿದರೆ ಜಗತ್ ಕಲ್ಯಾಣವನ್ನು ಮಾಡಬಲ್ಲ! ಆದರೆ ಅವನು ಮನಸ್ಸು ಮಾಡಬೇಕಲ್ಲ! - ನಾಸೋ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೋಮೇಶ್ವರರೇ ಉತ್ತಮ ವಿಷಯ ಕೊಟ್ಟದ್ದಕ್ಕಾಗಿ ಧನ್ಯವಾದಗಳು. ಪ್ರಕೃತಿಯಲ್ಲಿ ಪರ ಮತ್ತು ವಿರೋಧ ಎರಡಕ್ಕೂ ಇದೆ ಅವಕಾಶ. ಇದೇ ಜೀವನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಿನಾಥ್ ಅವರೆ! ಪ್ರಕೃತಿ ಯಾವಾಗಲೂ ಪೂರಕವೇ! ಮಾನವನ ಸ್ವಾರ್ಥ ಹಾಗೂ ದುರಾಸೆಯು ಪ್ರಕೃತಿಯನ್ನು ಕೆರಳಿಸಿ, "ವಿರೋಧಿಯಾಗುವಂತೆ" ಪ್ರೇರೇಪಿಸುತ್ತದೆ. ಅಲ್ಲವೆ! ಪ್ರತಿಕ್ರಿಯೆ ನೀಡಿದುದಕ್ಕೆ ಧನ್ಯವಾದಗಳು. - ನಾಸೋ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡಾ. ಸೋಮೇಶ್ವರರೇ, ಅದ್ಭುತ ವಿಷಯ ತಿಳಿಸಿದ್ದೀರಿ. ಎಲ್ಲಾ ವೈಜ್ಞಾನಿಕ ಅಂಶಗಳು ನನ್ನಂತಹವರ ತಲೆಗೆ ಹೋಗುವುದು ಕಷ್ಟ. ಆದರೆ ಸಾರಾಂಶ ಅರ್ಥವಾಯಿತು. ಒಂದಂತೂ ಸತ್ಯ. ಸೃಷ್ಟಿಕರ್ತನೂ ಲಯಕರ್ತನಾಗುವ ಸಾಧ್ಯತೆಯಂತೂ ಇದೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿನಾಗರಾಜ್ ಅವರೆ! ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಜನಸಾಮಾನ್ಯರಿಗೆ ವೈಜ್ಞಾನಿಕ ವಿಷಯಗಳನ್ನು ಆದಷ್ಟು ಸರಳವಾಗಿ ತಿಳಿಸಬೇಕು ಎನ್ನುವುದು ನನ್ನ ಆಶಯ. ಎಸ್.ಎಸ್.ಎಲ್.ಸಿ ಮಟ್ಟದ ವಿದ್ಯಾರ್ಥಿಯನ್ನು ನನ್ನ ಮನಸ್ಸಿನಲ್ಲಿಟ್ಟುಕೊಂಡು ಲೇಖನವನ್ನು ಬರೆಯುವುದಕ್ಕೆ ಪ್ರಯತ್ನಿಸುತ್ತೇನೆ. ನಿಮಗೆ ಲೇಖನದ ಯಾವ ಭಾಗ ಕ್ಲಿಷ್ಠವೆನಿಸಿತು ಎಂಬುದನ್ನು ತಿಳಿಸಿದರೆ, ಅಂತಹ ವಿಷಯಗಳನ್ನು ಮತ್ತಷ್ಟು ಸರಳವಾಗಿ ಬರೆಯಲು ಪ್ರಯತ್ನಿಸುತ್ತೇನೆ. ಚಿತ್ರಗಳಿದ್ದರೆ ಮಾತ್ರ ವ್ವೈಜ್ಞಾನಿಕ ಲೇಖನಗಳು ಸುಲುಭವಾಗಿ ಅರ್ಥವಾಗುತ್ತವೆ. ಪ್ರಸ್ತುತ ಲೇಖನದಲ್ಲಿ ಐದು ಚಿತ್ರಗಳಿದ್ದವು.ಒಂದಕ್ಕಿಂತ ಹೆಚ್ಚಿನ ಚಿತ್ರಗಳನ್ನು ಹೇಗೆ ಅಪ್ ಲೋಡ್ ಮಾಡುವುದು ಎನ್ನುವುದು ನನಗೆ ತಿಳಿದಿಲ್ಲ. ಹಾಗಾಗಿ ಲೇಖನ ಅಪೂರ್ಣವಾಗಿದೆ. ಮನುಷ್ಯ ಸೃಷ್ಟಿಕರ್ತನಾಗುತ್ತಾನೋ ಇಲ್ಲವೋ ಅದು ನನಗೆ ತಿಳಿಯದು. ಆದರೆ ಖಂಡಿತ ಲಯಕರ್ತನಾಗಬಲ್ಲ. ಇದರಲ್ಲಿ ಯಾವುದೇ ಅನುಮಾನವಿಲ್ಲ. - ನಾಸೋ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೋಮೇಶ್ವರ ಅವರೇ, ನೀವು ಮೇಲೆ ಹೇಳಿದಂತೆ ಕನ್ನಡದಲ್ಲಿ ವೈಜ್ಞಾನಿಕ ಲೇಖನಗಳನ್ನು ಬರೆಯುವುದರ ಜೊತೆಯಲ್ಲಿ ಇಂತಹ ಟಿವಿ ಕಾರ್ಯಕ್ರಮಗಳನ್ನು ಯಾಕೆ ಮಾಡಬಾರದು? ನಾನು ಹೀಗೆ ಹೇಳುತ್ತಿರುವುದರ ಉದ್ದೇಶ ಡಿಸ್ಕವರಿ ಮತ್ತು ಎನ್.ಜಿ.ಸಿ ಯಂತಹ ಚಾನೆಲ್ ಗಳಲ್ಲಿ ಬರುವಂತಹ ವಿಜ್ಞಾನ ಮತ್ತು ತಂತ್ರಜ್ಞಾನದ ಕಾರ್ಯಕ್ರಮಗಳಂತೆ ಯಾಕೆ ಮಾಡಬಾರದು? ಮತ್ತು ವಿಜ್ಞಾನ ಎಂದರೆ ಕೇವಲ ಗಣಕಯಂತ್ರ ಅಥವ ವಿದ್ಯುನ್ಮಾನವಷ್ಟೇ ಅಲ್ಲ ಎಂದು ತೋರಿಸಬಹುದುದಲ್ಲವೇ?ನನಗೆ ನಿಮ್ಮಷ್ಟು ಅನುಭವವಿಲ್ಲ ಆದರೆ ಹೀಗೊಂದು ಕಾರ್ಯಕ್ರಮ ಕನ್ನಡ ವಾಹಿನಿಗಳಲಗಲ್ಲೂ ಬರುವಂತಾದರೆ ತುಂಬಾ ಉಪಯುಕ್ತ ಎಂಬ ಆಸೆಯಷ್ಟೇ. -ವಿಶ್ವನಾಥ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿಶ್ವನಾಥ್, ವಾಸ್ತವದಲ್ಲಿ ನಾನು ವೈದ್ಯಕೀಯ ಹಾಗೂ ವಿಜ್ಞಾನ ಕಾರ್ಯಕ್ರಮಗಳಿಂದ ದೂರದರ್ಶನವನ್ನು ಪ್ರವೇಶಿಸಿದವನು. ಆರಂಭದ ದಿನಗಳಲ್ಲಿ ’ವಿಸ್ಮಯ ವಿಜ್ಞಾ” ಎನ್ನುವ ಕಾರ್ಯಕ್ರಮವನ್ನು ಮಾಡುತ್ತಿದ್ದೆ. ೨೫ ನಿಮಿಷದ ಅವಧಿಯಲ್ಲಿ ನಾಲ್ಕು ಪ್ರಯೋಗಗಳು. ಒಂದನ್ನು ನಾನು ಮಾಡುತ್ತಿ. ಉಳಿದ ಮೂರನ್ನು ಮೂವರು ತಜ್ಞರಿಂದ ಮಾಡಿ ತೋರಿಸುತ್ತಿದ್ದೆ. ಬಹಳ ಜನಪ್ರಿಯವಾಗಿತ್ತು. ಥಟ್ ಅಂತ ಹೇಳಿ - ಕಾಲೇಜು ವಿದ್ಯಾರ್ಥಿಗಳಿಗಾಗಿ ಮಾಡುತ್ತಿದ್ದ ಕಾರ್ಯಕ್ರಮ ಒಂದು ಪ್ರಧಾನ ಪ್ರಯೋಗವನ್ನು ಒಳಗೊಂಡಿತ್ತು. ಪ್ರಯೋಗದ ನಂತರ ಪ್ರಶ್ನೆಗಳನ್ನು ಕೇಳುತ್ತಿದ್ದೆವು. ಇದು ನನ್ನ ಮೆಚ್ಚಿನ ಕಾರ್ಯಕ್ರಮ. ಆನಂತರವೇ ಅನಿವಾರ್ಯ ಕಾರಣಗಳಿಂದ ಪ್ರಸ್ತುತ ರೂಪದ ಥಟ್ ಅಂತ ಹೇಳಿ ಕಾರ್ಯಕ್ರಮವನ್ನು ರೂಪಿಸಿದೆ. ಈಗಲೂ ಸಹಾ ವಿಸ್ಮಯ ವಿಜ್ಞಾನವನ್ನು ಮತ್ತೊಮ್ಮೆ ಆರಂಭಿಸಲು ಸಿದ್ಧ. ಇಂತಹ ಕಾರ್ಯಕ್ರಮಗಳಿಗೆ ತುಂಬಾ ತಯಾರಿ ಬೇಕಾಗುತ್ತದೆ. ಆದರೂ ಹೆಚ್ಚಿನ ಶ್ರಮ ವಹಿಸಲು ನಾನು ಸಿದ್ಧನಿದ್ದೇನೆ. ಆದರೆ ಒಂದು ವಿಭಾಗದಲ್ಲಿ ಕೆಲಸ ಮಾಡುವವರು ಇನ್ನೊಂದು ವಿಭಾಗದಲ್ಲಿ ಕೆಲಸ ಮಾಡುವ ಹಾಗಿಲ್ಲ. ಹಾಗಾಗಿ.... ನೋಡೋಣ. ಥಟ್ ಅಂತ ಹೇಳಿಯ ಪರಿಷ್ಕೃತ ರೂಪದಲ್ಲಿ ವಿಜ್ಞಾನ ಪ್ರಯೋಗಗಳನ್ನು ಸೇರಿಸೋದಿಕ್ಕೆ ಸಾಧ್ಯವಾ ಅಂತ! - ನಾಸೋ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೋಮೇಶ್ವರರೇ, ನಮಸ್ಕಾರಗಳು. ಮೊದಲು ನೀವು ಲೇಖನಕ್ಕೆ ಹಾಕಬೇಕೆ೦ದು ಆಯ್ಕೆ ಮಾಡಿದ ಎಲ್ಲಾ ಭಾವಚಿತ್ರಗಳನ್ನೂ ಪಿಕಾಸಾ ವೆಬ್ ಆಲ್ಬಮ್ ನಲ್ಲಿನ upload ಎನ್ನುವ ಆಯ್ಕೆಯನ್ನು ಕ್ಲಿಕ್ಕಿಸಿ, ಬೇರೆ ಬೇರೆ ಆಲ್ಬಮ್ ಹೆಸರು ಕೊಟ್ಟುಕೊ೦ಡು ( ಉದಾ: ಲೇಖನದ ಹೆಸರಿನೊ೦ದಿಗೆ, ೧,೨,೩,೪,೫ ಹೀಗೆ)ಅಪ್ ಲೋಡ್ ಮಾಡಿ. ಅಪ್ ಲೋಡ್ ಮಾಡುವಾಗ ಒ೦ದಕ್ಕಿ೦ತ ಹೆಚ್ಚಾಗಿದ್ದರೆ ಅಲ್ಲಿರುವ add photos ಆಯ್ಕೆಯನ್ನು ಕ್ಲಿಕ್ಕಿಸಿ, ಬರುವ ಆಯ್ಕೆಯಲ್ಲಿ browse ಎ೦ದಿರುತ್ತದೆ. ಆ browse ನಲ್ಲಿ ಒ೦ದೊ೦ದೇ ಭಾವಚಿತ್ರಗಳನ್ನು (ನಿಮ್ಮ ಫೈಲಿನಲ್ಲಿರುವ) ಆಯ್ಕೆ ಮಾಡಿ ಪಿಕಾಸಾ ಕ್ಕೆ ಅಪ್ ಲೊಡ್ ಮಾಡಿದ ನ೦ತರ, ಲೇಖನ ಸೇರಿಸುವ ಸ್ಥಳದಲ್ಲಿನ ಮೇಲ್ಬಾಗದ ಮರದ ಚಿತ್ರವನ್ನು ಕ್ಲಿಕ್ಕಿಸಿದರೆ ಇಮೇಜ್ ಸೇರಿಸಿ ಎ೦ಬ ಆಯ್ಕೆ ಬರುತ್ತದಲ್ಲವೆ ಅಲ್ಲಿಗೆ ಪಿಕಾಸದಲ್ಲಿನ ಯು.ಆರ್.ಎಲ್. ಅನ್ನು ಕಾಪಿ ಮಾಡಿ(ನೀವು ಆಯ್ಕೆ ಮಾಡಿದ ಭಾವಚಿತ್ರಗಳ ಮೇಲೆ ರೈಟ್ ಕ್ಲಿಕ್ ಮಾಡಿದಾಗ ಸಿಗುವ ಪ್ರಾಪರ್ಟೀಸ್ ನಲ್ಲಿನ ) ಹಾಕಿ. ಲೇಖನದಲ್ಲಿ ಚಿತ್ರ ಮೂಡುತ್ತದೆ. ಕರ್ಸರ್ ಅನ್ನು ಎಲ್ಲಿ ಬೇಕೋ ಅಲ್ಲಿಗೆ ನಿಲ್ಲಿಸಿ ಆ ಬಾವಚಿತ್ರವನ್ನು ಕಾಪಿ ಪೇಸ್ಟ್ ಮಾಡಿ. ಅಷ್ಟೇ. ರೀತಿ ಒ೦ದು ಭಾವಚಿತ್ರಕ್ಕೂ ಅಷ್ಟೇ,ಒ೦ದಕ್ಕಿ೦ತ ಹೆಚ್ಚಕ್ಕೂ ಅಷ್ಟೇ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[ರೀತಿ ಒ೦ದು ಭಾವಚಿತ್ರಕ್ಕೂ ಅಷ್ಟೇ, ಒ೦ದಕ್ಕಿ೦ತ ಹೆಚ್ಚಕ್ಕೂ ಅಷ್ಟೇ.] ಹೌದು. ಹರಿ ಪ್ರಸಾದ್ ನಾಡಿಗ್ ಅವರ ಸಹಾಯ ಇಲ್ಲಿದೆ: http://sampada.net/h... ಪಿಕಾಸಾ ಬೇಕು ಎಂದೇನಿಲ್ಲ. ನಾನೂ ಒಂದು ಬ್ಲಾಗ್ನಲ್ಲಿ ಪ್ರಯೋಗಾರ್ಥ ಮಾಡಿ ನೋಡಿದೆ. http://sampada.net/b...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡಾ. ನಾ. ಸೋಮೇಶ್ವರ ಅವರೇ, ನೀವು ಲೇಖನಕ್ಕೆ ಚಿತ್ರಗಳನ್ನು ಸೇರಿಸುವಿರೆಂದು ಕಾಯುತ್ತಿರುವೆ ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.