ಒಂದು ಭೂಮಿ- ಒಂದು ಭವಿಷ್ಯ

4.5

 ವಿಶ್ವಪರಿಸರ ದಿನಾಚರಣೆ - ೨೦೧೦ 


ಅಸಂಖ್ಯ ಪ್ರಭೇದಗಳು- ಒಂದು ಭೂಮಿ- ಒಂದು ಭವಿಷ್ಯ


 


ಜೂನ್ ೫, ವಿಶ್ವ ಪರಿಸರ ದಿನಾಚರಣೆಯ ದಿನ. ನಮ್ಮ ಪರಿಸರದ ಬಗ್ಗೆ ಗಂಭೀರವಾಗಿ ಚಿಂತಿಸಲೆಂದೇ ಮೀಸಲಾಗಿರುವ ದಿನ. ಇಂತಹ ಮೊದಲ ದಿನವನ್ನು ೧೯೭೩ರಲ್ಲಿ ಆಚರಿಸಿದೆವು. ಪ್ರತಿವರ್ಷ ಒಂದೊಂದು ಘೋಷವಾಕ್ಯವನ್ನು ಹೊರಡಿಸುವುದು ವಾಡಿಕೆ. ಆಯಾ ವರ್ಷ ಆಯಾ ಘೋಷವಾಕ್ಯಕ್ಕೆ ಸಂಬಂಧಿಸಿದ ಚಿಂತನೆಯನ್ನು ವಿಶೇಷವಾಗಿ ಮಾಡುವುದುಂಟು.


ಇರುವುದೊಂದೇ ಭೂಮಿ!  • ನೀರು-ಜೀವರಾಶಿಗೆ ಜೀವಾಧಾರಕ ಸಂಪತ್ತು

  • ವಿನಾಶವಿಲ್ಲದೆ ಅಭಿವೃದ್ಧಿ

  • ಮರುಭೂಮೀಕರಣ

  • ಶಾಂತಿಗಾಗಿ ಒಂದು ಮರ!

  • ಜಾಗತಿಕ ಉಷ್ಣವೇರಿಕೆ! ಜಾಗತಿಕ ಉಷ್ಣವೇರಿಕೆ!!

  • ಒಂದು ಭೂಮಿ ಒಂದು ಕುಟುಂಬ

  • ಮಕ್ಕಳು ಮತ್ತು ಪರಿಸರ

  • ನಮ್ಮ ಭೂಮಿ, ನಮ್ಮ ಭವಿಷ್ಯ, ಕಾಪಾಡಿ

  • ನಮ್ಮ ಭೂಮಿಗೊಂದು ಅವಕಾಶವನ್ನು ಕೊಡಿ

  • ನೀರು! - ಎರಡು ಬಿಲಿಯನ್ ಜನರು ನೀರಿಗಾಗಿ ತಹತಹಿಸುತ್ತಿದ್ದಾರೆ!

ಇದುವರೆಗೆ ನೀವು ಓದಿದ ಶೀರ್ಷಿಕೆಗಳು, ಈ ಹಿಂದಿನ ವರ್ಷದಲ್ಲಿ ಬಳಕೆಯಾದ ಘೋಷವಾಕ್ಯಗಳು. ೨೦೧೦ರ ವರ್ಷಕ್ಕೆಂದೇ ಒಂದು ವಿಶೇಷ ಘೋಷವಾಕ್ಯವನ್ನು ಸಿದ್ಧಪಡಿಸಲಾಗಿದೆ. ಅಸಂಖ್ಯ ಪ್ರಭೇದಗಳು- ಒಂದು ಭೂಮಿ- ಒಂದು ಭವಿಷ್ಯ (


ನಮ್ಮ ಪರಿಸರವು ವಿನಾಶದತ್ತ ಸಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ನಾವು. ಅಂದರೆ ಈ ಭೂಮಿಯ ಮೇಲೆ ಬೀಡುಬಿಟ್ಟಿರುವ ಸುಮಾರು ೭ ಬಿಲಿಯನ್ ಗಿಂತಲೂ ಹೆಚ್ಚಿನ ಜನರು. ವಾಸ್ತವದಲ್ಲಿ ಇವರೆಲ್ಲರೂ ಭೂ ವಿನಾಶಕಾರ್ಯದಲ್ಲಿ ತೊಡಗಿಲ್ಲ. ಎಲ್ಲೋ ಕೆಲವು ಜನರು ಮಾತ್ರ! ಆದರೆ ಫಲವನ್ನು ಸಮಸ್ತ ಮಾನವ ಜನಾಂಗ ಹಾಗೂ ಎಲ್ಲ ಜೀವರಾಶಿ ಅನುಭವಿಸಬೇಕಿದೆ.


ಪರಿಸರ ವಿನಾಶವನ್ನು ಹೇಗೆ ತಪ್ಪಿಸಬಹುದು ಎಂದು ಪಂಚತಾರಾ ಹೋಟಲಿನ ಆರಾಮ ಕುರ್ಚಿಯಲ್ಲಿ ಕುಳಿತು ಭಾಷಣಗಳನ್ನು ಬಿಗಿಯುವುದು ಸುಲುಭ. ಆದರೆ ಅದರಲ್ಲಿ ನನಗೆ ಆಸಕ್ತಿಯಿಲ್ಲ. ನಾನು-ನೀವು ನಮ್ಮ ಬದುಕಿನಲ್ಲಿ ಯಾವ ಅಳಿಲುಸೇವೆಯನ್ನು ಮಾಡಬಹುದು ಎಂಬುದರ ಬಗ್ಗೆ ನನ್ನ ಕುತೂಹಲವಿದೆ. ಈ ಕೆಳಗಿನ ಕೆಲವು ಸಲಹೆಗಳನ್ನು ಗಂಭೀರವಾಗಿ ವಿಚಾರಮಾಡೋಣ. ನಮ್ಮ ಕೈಲಾಗುವುದನ್ನು ಜಾರಿಗೆ ತರಲು ಪ್ರಯತ್ನಿಸೋಣ.


 


ನಮ್ಮ ಮನೆ / ಕಚೇರಿ/ಉದ್ಯಾನವನ/ಹಳ್ಳಿಯಲ್ಲಿ...


ಒಂದು ಗಿಡವನ್ನು ನೆಡೋಣ. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುನೈಟೆಡ್ ನೇಶನ್ಸ್ ಎನ್ವೈರಮೆಂಟಲ್ ಪ್ರೊಗ್ರಾಮ್: ಯು.ಎನ್.ಇ.ಪಿ) ‘ಬಿಲಿಯನ್ ಮರಗಳ ಆಂದೋಳನವನ್ನು ಆರಂಭಿಸಿದೆ. ಈ ಭೂಮಿಯ ಮೇಲೆ ಸುಮಾರು ೭ ಬಿಲಿಯನ್ ಮನುಷ್ಯರು ವಾಸಿಸುತ್ತಿದ್ದಾರೆ. ಈ ಏಳು ಬಿಲಿಯನ್ ಜನರು ತಲಾ ಒಂದು ಮರವನ್ನು ನೆಟ್ಟರೆ ಏಳು ಬಿಲಿಯನ್ ಮರಗಳನ್ನು ನೆಡಬಹುದು. ಆ ಏಳು ಮಿಲಿಯನ್ ಜನರಲ್ಲಿ ನಾನು ನೀವೂ ಬರುತ್ತೇವೆ. ಹಾಗಾಗಿ ಎಲ್ಲಾದರೂ ಸರಿ ಒಂದು ಗಿಡವನ್ನು ನೆಡೋಣ (ನೆಟ್ಟಬಿಟ್ಟರಾಯಿತೆ? ಅದನ್ನು ಪಾಲಿಸಿ ಪೋಷಿಸುವ ಜವಾಬ್ದಾರಿಯನ್ನೂ ಹೊರೋಣ). ಏಳು ಬಿಲಿಯನ್ ಮರಗಳನ್ನು ಈ ವರ್ಷಾಂತ್ಯದಲ್ಲಿ ನೆಡಬೇಕು ಎಂದು ಯು.ಎನ್.ಇ.ಪಿ ಸಂಕಲ್ಪಿಸಿದೆ.


ಶಾಲೆಯಲ್ಲಿ ಪ್ರತಿಯೊಂದು ಮಗುವಿನ ಕೈಯಲ್ಲಿ ಒಂದು ಗಿಡವನ್ನು ನೆಡಿಸಿ. ಆ ಗಿಡದ ಮುಂದೆ ಆ ಹುಡುಗನ ಹೆಸರಿರುವ ಫಲಕವನ್ನು ನೆಡಿ. ಆ ಗಿಡದ ಆರೈಕೆ ಅವನದೆನ್ನಿ. ಪ್ರತಿದಿನ ಆ ಗಿಡಕ್ಕೆ ನೀರು ಹಾಕಲು ಅವಕಾಶವನ್ನು ಕೊಡಿ. ಆ ಮರ ಬೆಳೆದು ದೊಡ್ಡದಾದ ಮೇಲೂ ಅವನ ಹೆಸರು ಹಾಗೆಯೇ ಉಳಿದಿರಬೇಕು! ಆ ಹುಡುಗ ಬೆಳೆದು ದೊಡ್ಡವನಾಗಿ ಆ ಶಾಲೆಗೆ ಬಂದು ತಾನು ನೆಟ್ಟಿರುವ ಮರ ದೊಡ್ಡದಾಗಿರುವುದನ್ನು ನೋಡಿದಾಗ...!


ನಮ್ಮ ಮನೆಯಲ್ಲಿರುವಾಗ:


            ನೀರು: ನಮ್ಮ ಮನೆಯಲ್ಲಿ ನೀರು ಪೋಲಾಗುವುದನ್ನು ತಪ್ಪಿಸೋಣ. ಕ್ಷೌರ ಮಾಡುವಾಗ, ಹಲ್ಲನ್ನು ಉಜ್ಜುವಾಗ, ಮುಖ ತೊಳೆಯುವಾಗ ನಲ್ಲಿಯಿಂದ ನೀರು ಧಾರಾಕಾರವಾಗಿ ಹರಿದುಹೋಗಬಹುದು. ನೀರು ಪೋಲಾಗುವುದನ್ನು ನಿಯಂತ್ರಿಸೋಣ.


            ಸ್ನಾನಕ್ಕೆ ಬಿಸಿ ನೀರು: ಸ್ನಾನಕ್ಕೆ ಬಿಸಿ ನೀರನ್ನು ಬಳಸುವುದುಂಟು. ವಾಟರ್ ಹೀಟರಿಗೆ ಸೂಕ್ತ ಶಾಖಪ್ರವಾಹ ತಡೆಗಳನ್ನು (ಇನ್ಸುಲೇಶನ್) ಹಾಕಿರುವುದನ್ನು ಖಚಿತಪಡಿಸಿಕೊಳ್ಳೋಣ. ಕಾಲನಿಯಂತ್ರಕವಿರುವ (ಟೈಮರ್) ಹೀಟರ್-ಗಳನ್ನು ಬಳಸೋಣ. ಸ್ನಾನ ಮಾಡಲು ಅಲ್ಪ ಪ್ರವಾಹದ ಷವರ್-ಗಳನ್ನು ಅಳವಡಿಸಬಹುದು.


            ಶಾಂಪೂ: ತಲೆಗೂದಲನ್ನು ಸ್ವಚ್ಚಗೊಳಿಸಲು ಶಾಂಪೂ ಬಳಕೆಯನ್ನು ಮಿತಗೊಳಿಸಿ ಇಲ್ಲವೇ ನಿಲ್ಲಿಸಬೇಡಿ. ಈ ಶಾಂಪೂ ಅಚಿತಿಮವಾಗಿ ಯಾವುದಾದರೂ ಕೆರೆಯೋ ಅಥವ ನದಿಯನ್ನು ಸೇರುತ್ತದೆ. ನದಿಯ ನೀರಿನ ಮೇಲೆ ತೆಪ್ಪಗಟ್ಟುತ್ತದೆ. ಆಮ್ಲಜನಕ ವಿನಿಮಯವನ್ನು ತಪ್ಪಿಸುತ್ತದೆ. ಆಗ ನೀರಿನ ಬಿಓಡಿ (ಬಯಲಾಜಿಕಲ್ ಆಕ್ಸಿಜನ್ ಡಿಮಾಂಡ್) ಕಡಿಮೆಯಾಗಿ ಮೀನು ಮುಂತಾದ ಜಲಚರಗಳು ಸಾಯುತ್ತವೆ. ನಿಮಗೆ ಗೊತ್ತಿಲ್ಲದಂತೆಯೇ ನೀವು ಮೀನುಗಳನ್ನು ಕೊಲ್ಲುತ್ತೀರಿ! ಶಾಂಪುವಿನ ಬದಲು ಸೀಗೆಪುಡಿ (೯೦%) + ಅಂಟುವಾಳಕಾಯಿ (೧೦%) ಯ ಮಿಶ್ರಣ ಒಳ್ಳೆಯದು.


            ಮುಖಕ್ಷೌರ: ಮುಖಕ್ಷೌರವನ್ನು ಮಾಡಿಕೊಳ್ಳಲು ಒಂದು ಸಲ ಬಳಸಿ ಎಸೆಯುವ ರೇಜ಼ರ್ (ಡಿಸ್ಪೋಸಬಲ್ ರೇಜ಼ರ್ಸ್) ಬಳಸುವುದುಂಟು. ಪ್ಲಾಸ್ಟಿಕ್ ತಯಾರಿಕೆಯಲ್ಲಿ ಬಳಸುವ/ಹೊರಬರುವ ಮಾರಕ ರಾಸಾಯನಿಕಗಳು ಇವು ಪರಿಸರ ಮಾಲೀನ್ಯಕ್ಕೆ ಕಾರಣವಾಗುತ್ತವೆ. ಇದರ ಬದಲು ಸಾಂಪ್ರದಾಯಿಕ ಬ್ಲೇಡುಗಳನ್ನು ಒಳಗೊಂಡ ರೇಜ಼ರುಗಳನ್ನು ಬಳಸಬಹುದು.


            ಟಿಶ್ಯೂ ಕಾಗದ: ಬಹುರಾಷ್ಟ್ರೀಯ ಸಂಸ್ಥೆಗಳ ಸಂಸ್ಕೃತಿ ಎಂದರೆ ಕೈಯನ್ನು ತೊಳೆದುಕೊಂಡಮೇಲೆ ಟಿಶ್ಯೂ ಕಾಗದದಿಂದ ಕೈಗಳನ್ನು ಒರೆಸಿಕೊಳ್ಳುತ್ತಾರೆ ಇಲ್ಲವೇ ಡ್ರೈಯರ್-ಗಳಿಂದ ಹೊರಬರುವ ಬಿಸಿಗಾಳಿಗೆ ಕೈಗಳನ್ನು ಒಡ್ಡಿ ಒಣಗಿಸಿಕೊಳ್ಳುತ್ತಾರೆ. ಇದರ ಬದಲು ನಮ್ಮ ಅಮ್ಮ ಬಳಸುವುದನ್ನು ಕಲಿಸಿಕೊಟ್ಟ ಕರವಸ್ತ್ರವನ್ನು ಬಳಸೋಣ. ಪ್ರತಿದಿನ ಒಗೆದ ಒಂದು ಕರವಸ್ತ್ರ ನಮ್ಮ ಅಗತ್ಯಗಳನ್ನು ಪೂರೈಸುತ್ತದೆ. ಅಲ್ಲವೆ! ಸಾಧ್ಯವಾದಲ್ಲಿ ಪುಟ್ಟ ಟವಲನ್ನು ಬಳಸಬಹುದು. ಮರಗಳ ಬಲಿಯನ್ನು ತಪ್ಪಿಸೋಣ. ರೈತರಿಗೆ ವಿದ್ಯುತ್ತನ್ನು ಒದಗಿಸೋಣ.


            ರೆಫ್ರಿಜರೇಟರ್: ನಮಗೆ ರೆಫ್ರಿಜರೇಟರ್ ನಿಜಕ್ಕೂ ಅಗತ್ಯವೆ? ಯೋಚಿಸಿ ನೋಡಿ. ಅನಿವಾರ್ಯ ಶನಿ (ನೆಸಸರಿ ಈವಿಲ್) ಎನ್ನುವಿರಾ? ಹಾಗೆಂದಾದಲ್ಲಿ ಅದರೊಳಗೆ ಹಿತಮಿತವಾಗಿ ವಸ್ತುಗಳನ್ನು ಇಡಿ. ಹೆಚ್ಚು ತುರುಕಿದಷ್ಟು ಹೆಚ್ಚು ವಿದ್ಯುತ್ ಬೇಕು. ಮನೆಗೆ ಅತಿಥಿಗಳಿಗೆ ನೀಡಲೆಂದೇ ೨-೩ ಸ್ಕ್ವಾಶ್ ಬಾಟಲನ್ನು ಸಂಗ್ರಹಿಸಿ ಇಡುವುದುಂಟು. ಇವನ್ನು ತಂಪಾಗಿಡಲು ವಿದ್ಯುತ್ ನಷ್ಟವಾಗುತ್ತಿರುತ್ತದೆ. ಒಂದು ಉಪಾಯ ಮಾಡಿ. ಡೀಪ್ ಫ್ರೀಜ಼ರಿನಲ್ಲಿ ಐಸ್ ಟ್ರೇ ಇರುತ್ತದೆ. ಖಾಲಿ ಐಸ್ ಟ್ರೇ ತೆಗೆದುಕೊಳ್ಳಿ. ಟ್ರೇ ಒಳಗಿನ ಗೂಡುಗಳ ಒಳಗೆ ನಿಂಬೆ ಹಣ್ಣಿನ ಪ್ರಬಲ ರಸವನ್ನು (ಯಾವುದೇ ಹಣ್ಣಿನ ನೀರು ಬೆರೆಸದ ರಸವನ್ನು) ಹಿಂಡಿ. ಡೀಪ್ ಫ್ರೀಜ಼ರಿನಲ್ಲಿ ಇಡಿ. ನಿಂಬೆ ಕ್ಯೂಬ್ ಸಿದ್ಧವಾಗಿರುತ್ತದೆ. ಅತಿಥಿಗಳು ಬಂದಾಗ ಒಂದು ಲೋಟ ನೀರಿಗೆ ಎರಡು ನಿಂಬೆ ಕ್ಯೂಬ್ ಹಾಕಿ. ಅಗತ್ಯವಿದ್ದಷ್ಟು ಸಕ್ಕರೆ ಬೆರೆಸಿ. ತಣ್ಣಗೆ ಕುದಿಯಲು ಕೊಡಿ. 


            ಪತ್ರಿಕೆಗಳು: ಕೆಲವರು ೨-೩ ದಿನಪತ್ರಿಕೆ/ವಾರಪತ್ರಿಕೆಗಳನ್ನು ತರಿಸುವುದುಂಟು. ಇದರ ಬದಲು ಒಂದೊಂದು ಮನೆಯವರು ಒಂದೊಂದು ಪತ್ರಿಕೆ ತರಿಸಿ. ಸಾವಕಾಶವಾಗಿ ಹಂಚಿಕೊಂಡು ಓದಿ. ಹೀಗೆ ಮಾಡುವುದರಿಂದ ಪತ್ರಿಕಾ ಪ್ರಸಾರ ಕುಗ್ಗುತ್ತದೆ. ಆದರೆ ಒಂದಷ್ಟು ಮರಗಳ ಜೀವ ಉಳಿಯುತ್ತದೆ ಅಲ್ಲವೆ!


            ಬುತ್ತಿ: ನಾವು ಶಾಲೆಗೆ ಹೋಗುವಾಗ ನಮ್ಮ ಅಮ್ಮ ತಿಂಡಿಯನ್ನು ಒಂದು ಸ್ಟೀಲ್ ಡಬರಿಯಲ್ಲಿ ಹಾಕಿಕೊಡುತ್ತಿದ್ದಳು. ಅದನ್ನೇ ನಾವು ತಿನ್ನುತ್ತಿದ್ದೆವು. ನನ್ನ ಹೆಂಡತಿ ಮಗನಿಗೆ ತಿಂಡಿಕಟ್ಟಿಕೊಡುವಾಗ ಬಿಸಿ ಆರದಿರಲಿ ಎಂದು ಅಲ್ಯುಮಿನಿಯಂ ಹಾಳೆ / ಪ್ಲಾಸ್ಟಿಕ್ ಹಾಳೆಯನ್ನು ಬಳಸಿದ್ದುಂಟು. ನಂತರ ಗಾಳಿ ಹೋಗದ ಡಬ್ಬಿಗಳು ಬಳಸಿದಳು. ಸ್ವಲ್ಪ ತಣಿದ ಆಹಾರ ಪದಾರ್ಥಗಳನ್ನು ಇಂತಹ ಡಬ್ಬಿಗಳಲ್ಲಿ ಇಟ್ಟರೆ, ಆಹಾರ ತಾಜಾ ಇರುತ್ತದೆ. ರುಚಿ ಇರುತ್ತದೆ.  ತಿನ್ನಬಲ್ ಆಗಿರುತ್ತದೆ.


            ಸಸ್ಯಾಹಾರಿಗಳಾಗಿ: ಕಟ್ಟಾ ಮಾಂಸಾಹಾರಿಗಳು ವಾರಕ್ಕೆ ಎರಡು ಪೂರ್ಣ ಸಸ್ಯಾಹಾರಿಗಳಾಗುವುದು ಒಳ್ಳೆಯದು. ಪ್ರಾಣಿ ಹತ್ಯೆಯನ್ನು ತಪ್ಪಿಸಬಹುದು. ಆ ಪ್ರಾಣಿಗಳಿಗೆ ಮೇವನ್ನು ಒದಗಿಸಲು ಬೆಳೆಸುವ ಕೃಷಿ ಭೂಮಿ ವಿನಾಶವನ್ನು ತಪ್ಪಿಸಬಹುದು. ಹಾಗೆಯೇ ಹಸಿರುಮನೆ ಪರಿಣಾಮವನ್ನು ಉಂಟುಮಾಡುವ ಪ್ರಾಣಿಗಳ ಅಪಾನವಾಯು (ಹೂಸು) ಪ್ರಮಾಣವನ್ನು ತಗ್ಗಿಸಬಹುದು.


            ಮೊಬೈಲ್ ಚಾರ್ಜಿಂಗ್: ನಿಮ್ಮ ಮೊಬೈಲ್ ಚಾರ್ಜ್ ಪೂರ್ಣವಾದ ನಂತರ ಚಾರ್ಜರನ್ನು ಹಾಗೆಯೇ ಪ್ಲಗ್-ನಲ್ಲಿ ಬಿಡಬೇಡಿ. ಮೊಬೈಲ್ ಚಾರ್ಜ್ ಆಗದಿದ್ದರು ವಿದ್ಯುತ್ ಖರ್ಚಾಗುತ್ತಿರುತ್ತದೆ. ಹಾಗೆಯೇ ಇಂಡಿಕೇಟರ್ ಇರುವ ಟಿವಿ / ವಿಸಿಆರ್ ಇತ್ಯಾದಿಗಳನ್ನು ಬಿಡಬೇಡಿ. ಅಗತ್ಯವಿದ್ದಾಗ ಮಾತ್ರ ಸ್ವಿಚ್ ಹಾಕಿ. ಇಲ್ಲದಿದ್ದರೆ ಪೂರ್ಣ ಆರಿಸಿ.


            ದೀಪಗಳು: ವಿದ್ಯುತ್ ಬಲ್ಬ್ ಬದಲು ಟ್ಯೂಬ್ ಲೈಟ್ ಬಳಸಿ. ಟ್ಯೂಬ್ ಲೈಟ್ ಬದಲು ಸಿ.ಎಫ್.ಎಲ್ ಬಳಸಿ. ಸಿ.ಎಫ್.ಎಲ್ ಬದಲು ಎಲ್.ಇ.ಡಿ ಬಳಸಿ. ಸಿ.ಎಫ್.ಎಲ್ ಮತ್ತು ಎಲ್.ಇ.ಡಿಗಳು ದುಬಾರಿ. ನಿಜ. ಆದರೆ ಅವು ಹೆಚ್ಚು ಬಾಳಿಕೆ ಬರುತ್ತವೆ ಹಾಗೂ ಕಡಿಮೆ ವಿದ್ಯುತ್ತನ್ನು ಬಳಸಿಕೊಳ್ಳುತ್ತವೆ. ಒಟ್ಟಾರೆ ಲೆಕ್ಕಾಚಾರದಲ್ಲಿ ಸಿ.ಎಫ್.ಎಲ್ ಹಾಗೂ ಎಲ್.ಇ.ಡಿಗಳು ಲಾಭದಾಯಕ.


ಮನೆಯಿಂದ ಹೊರಗೆ ಹೋಗುವಾಗ:


            ಬಟ್ಟೆ ಚೀಲ: ಮನೆಯಿಂದ ಹೊರಗೆ ಹೋಗುವಾಗ ಒಂದು ಬಟ್ಟೆಯ ಚೀಲವನ್ನು ಕೊಂಡೊಯ್ಯಿರಿ. ಅಂಗಡಿಯಲ್ಲಿ ಏನಾದರೂ ಕೊಂಡುಕೊಂಡಾಗ ಪ್ಲಾಸ್ಟಿಕ್/ಪಾಲಿಥೀನ್ ಚೀಲಗಳನ್ನು ಅಂಗಡಿಯಲ್ಲಿ ಬಿಡಿ. ನಿಮ್ಮ ಚೀಲದಲ್ಲಿ ವಸ್ತುಗಳನ್ನು ಹಾಕಿಸಿಕೊಂಡು ಬನ್ನಿ.


            ಸಂಚಾರ ಸಾಧನಗಳು: ಬೆಂಗಳೂರು ನಗರಗಳಲ್ಲಿರುವಂತಹ ಶ್ರೀಮಂತರ ಮನೆಯಲ್ಲಿ ಕನಿಷ್ಠ ೩-೪ ಕಾರುಗಳಿರುತ್ತವೆ. ಗಂಡನಿಗೆ ಒಂದು, ಹೆಂಡತಿಗೆ ಒಂದು. ಮಗನಿಗೆ ಒಂದು. ಮಗಳಿಗೆ ಒಂದು ಹೀಗೆ. ವಾಹನಗಳನ್ನು ಕನಿಷ್ಠ ಉಪಯೋಗಿಸಿ. ಮಕ್ಕಳಿಗೆ ವಿದ್ಯುತ್ ಬ್ಯಾಟರಿ ಚಾಲಿತ ವಾಹನಗಳನ್ನು ಕೊಡಿಸುವ ಬಗ್ಗೆ ಯೋಚಿಸಿ. ಸೈಕಲ್-ಬಳಕೆಯನ್ನು ಜನಪ್ರಿಯಗೊಳಿಸಬೇಕಿದೆ. ಕಾರ್-ಪೂಲಿಂಗ್ ಬಗ್ಗೆ ಗಂಭೀರವಾಗಿ ಆಲೋಚಿಸಬಹುದು. ಅನಿವಾರ್ಯ ಎಂಬ ಸಂದರ್ಭಗಳನ್ನು ಬಿಟ್ಟು ಉಳಿದ ಸಮಯದಲ್ಲಿ ಸಾರ್ವಜನಿಕ ಸಂಚಾರ ಸಾಧನವಾದ ಬಸ್-ನಲ್ಲಿ ಪಯಣಿಸುವುದು ಒಳ್ಳೆಯದಲ್ಲವೆ!


            ವಾಹನದ ಆರೋಗ್ಯ: ನೀವು ಮುಂದೆ ವಾಹನವನ್ನು ಖರೀದಿಸುವಾಗ ಪರಿಸರ ಪೂರಕವಾದ ವಾಹನವನ್ನು ಹುಡುಕಿ. ವಾಹನದ ಚಕ್ರಗಳ ಗಾಳಿಯ ಪ್ರಮಾಣ ಸೂಚಿತ ಒತ್ತಡದಲ್ಲಿರುವುದನ್ನು ಖಚಿತಪಡಿಸಿಕೊಳ್ಳಿ. ಕಾರಿನ ಸರ್ವೀಸಿಂಗನ್ನು ನಿಯಮಿತ ಕಾಲಕ್ಕನುಗುಣವಾಗಿ ಮಾಡಿಸುತ್ತಿರಿ.


            ಮಾರ್ಗ: ನಿಮ್ಮ ಕಾರು ಅಥವ ಬೈಕಿನಲ್ಲಿ ಹೋಗುವಾಗ ಕನಿಷ್ಠ ದೂರವಿರುವ ಹಾಗೂ ವಾಹನ / ಜನ ಸಂಚಾರ ಕಡಿಮೆ ಇರುವ ಮಾರ್ಗವನ್ನು ಬಳಸಿ. ಪದೇ ಪದೇ ಬ್ರೇಕ್ ಹಾಕಬೇಡಿ. ವಾಹನ ತಯಾರಕರು ಸೂಚಿಸಿರುವ ತೈಲ ಕ್ಷಮತೆಯ ಮಿತಿಯಲ್ಲಿ ವಾಹನವನ್ನು ನಡೆಸಿ.


            ಸಿಗ್ನಲ್ ನಿಲುಗಡೆಗಳು: ಸಿಗ್ನಲ್ ಇರುವ ಕಡೆ ವಾಹನಗಳು, ಅದರಲ್ಲಿಯೂ ಬೈಕುಗಳು ಆಕ್ಸಿಲೇಟರನ್ನು ಏರಿಳಿಸುತ್ತಿರುತ್ತಾರೆ. ಹಿಂದೆ ಇರುವ ಚಾಲಕರಿಗೆ ಧೂಪಸೇವೆಯನ್ನು ಮಾಡುತ್ತಿರುತ್ತಾರೆ. ಬದಲಿಗೆ ವಾಹನವನ್ನು ಸ್ವಿಚ್-ಆಫ್ ಮಾಡುವುದು ಒಳ್ಳೆಯದು.


            ಸ್ಪರ್ಧೆ ಬೇಡ: ಸಾಯುವುದಕ್ಕೆ ಅದೇನು ಸ್ಪರ್ಧೆ!! ಕೆಲವರು ಬೈಕ್ ಇಲ್ಲವೇ ಕಾರಿನಲ್ಲಿ ಕುಳಿತಾಗ ಇಡೀ ರಸ್ತೆಯ ಒಡೆಯರು ತಾವೇ ಎಂಬಂತೆ ಕಣ್ಣು ಮುಚ್ಚಿಕೊಂಡು (ಹೌದು. ಗಂಟೆಗೆ ೧೦೦ ಕಿ.ಮೀ.ವೇಗದಲ್ಲಿ ಬೈಕ್ ಓಡಿಸುವವ ರೆಪ್ಪೆಯನ್ನು ಮುಚ್ಚಿತೆಗೆಯುವಾಗ ೨ ಮೀಟರ್ ದೂರವನ್ನು ಕಣ್ಣುಮುಚ್ಚಿಕೊಂಡು ಓಡಿಸಿರುತ್ತಾನೆ! ಆರೋಗ್ಯವಂತ ವಯಸ್ಕ ವಿಶ್ರಾಮಾವಧಿಯ ರೆಪ್ಪೆ ಮಿಡಿತದ ಕಾಲಾವಧಿ ೧ರಿಂದ ೧.೫ ಸೆಕಂಡ್. ನಿಮಿಷಕ್ಕೆ ೧೫-೨೦ ಸಲ ಕಣ್ಣನ್ನು ಮುಚ್ಚಿತೆಗೆಯಬಹುದು. ವಾಹನ ಓಡಿಸುವಾಗ ನಿಮಿಷಕ್ಕೆ ೧೫ ಸಲಕ್ಕಿಂತ ಕಡಿಮೆ ಸಲ ಕಣ್ಣನ್ನು ಮುಚ್ಚಿ ತೆಗೆಯುತ್ತಾನೆ. ಆದರೆ ಕಣ್ಣು ಮುಚ್ಚಿರುವ ಅವಧಿಯು ಹೆಚ್ಚು ಕಡಿಮೆ ೧ ಸೆಕಂಡ್ ಇರುತ್ತದೆ) ಓಡಿಸುತ್ತಾರೆ. ಅತಿವೇಗವು, ಅತಿ ತ್ವರಿತವಾಗಿ ಪೆಟೋಲನ್ನು ಭಸ್ಮೀಕರಿಸುತ್ತದೆ. ನೀವು ವಾಹನ ಚಲಿಸುವಾಗ ಯಾರಾದರು ನಿಮ್ಮನ್ನು ಓವರ್ ಟೇಕ್ ಮಾಡಿದರೆ, ನೀವೂ ತಕ್ಷಣ ನಿಮ್ಮ ವಾಹನದ ಆಕ್ಸಿಲೇಟರನ್ನು ಹೆಚ್ಚಿಸಬೇಡಿ. ಒಂದರಿಂದ ಹತ್ತರವರೆಗೆ ಎಣಿಸಿ. ಪರಿಸರದೇವಿಯ ಸೇವೆಗೆ ಕಂಕಣಬದ್ಧರಾಗಿರುವುದನ್ನು ಸ್ಮರಿಸಿಕೊಳ್ಳಿ.


 ನಿಮ್ಮ ಕಛೇರಿಯಲ್ಲಿ:


            ಕಾಫಿ ಕಪ್: ಕಛೇರಿಯಲ್ಲಿ ನೀವು ಪದೇ ಪದೇ ಕಾಳಿ/ಚಹ ಕುಡಿಯುತ್ತೀರಾ? ಪ್ರತಿಸಲ ಪರಿಸರಮಾರಕ ಸ್ಟೈರೋಫೋಮ್ ಕಪ್/ಲೋಟಗಳನ್ನು ಬಳಸುವ ಬದಲು ನಿಮ್ಮದೇ ಆದ ಸುಂದರವಾದ ಪಿಂಗಾಣಿ ಕಾಫಿ ಕಪ್ಪನ್ನು ಇಟ್ಟುಕೊಳ್ಳಿ. ಕಾಫಿ ಕುಡಿದಾದ ಮೇಲೆ ತೊಳೆದು ಮತ್ತೆ ಅದನ್ನು ಉಪಯೋಗಿಸಿ.


            ಫೂಡ್ ಗ್ರೇಡ್ ಬಾಟಲಿ: ಕುಡಿಯುವುದಕ್ಕೆ ನೀರಿನ ಬಾಟಲಿಯನ್ನು ಬಳಸಿ. ಬಾಟಲನ್ನು ಕೊಳ್ಳುವಾಗ ಫುಡ್-ಗ್ರೇಡ್ ಬಾಟಲಿಯನ್ನು ಕೊಳ್ಳಿ. ಪ್ರತಿದಿನ ಇದೇ ಬಾಟಲಿಯನ್ನು ಬಳಸಿ. ಬಳಸಿ ಎಸೆವ ಪ್ಲಾಸ್ಟಿಕ್ ಬಾಟಲಿಗಳನ್ನು ಇಲ್ಲವೇ ಲೋಟಗಳನ್ನು ಉಪಯೋಗಿಸಬೇಡಿ.


            ಕಾಗದವನ್ನು ಮರುಬಳಸಿ: ಕಂಪ್ಯೂಟರ್ ಪ್ರಿಂಟ್ ಔಟ್ ಸಾಮಾನ್ಯವಾಗಿ ಒಂದೇ ಬದಿಯಲ್ಲಿ ತೆಗೆಯುವುದುಂಟು. ಹಾಗೆಯೇ ಅನೇಕ ಮಾಹಿತಿಯನ್ನು ಪುಟದ ಒಂದು ಬದಿಯಲ್ಲಿ ಮಾತ್ರ ಮುದ್ರಿಸುವುದುಂಟು. ಆ ಮುದ್ರಿತ ಪುಟದ ಕೆಲಸ ಮುಗಿದ ಮೇಲೆ ಅವನ್ನು ಸುಮ್ಮನೇ ಎಸೆಯಬೇಡಿ. ಬದಲಿಗೆ ಅಂತಹವನ್ನೆಲ್ಲ ಸೇರಿಸಿ ಒಂದು ಪುಟ್ಟ ಪುಸ್ತಕವನ್ನು ಮಾಡಿ. ಆ ಪುಸ್ತಕವನ್ನು ಕರಡು ಕೆಲಸಗಳಿಗೆ ಬಳಸಿ. ನಮ್ಮ ಸಂಸ್ಥೆಯೇ ಇಂತಹ ಪುಸ್ತಕಗಳನ್ನು ಎಲ್ಲರಿಗೂ ಹಂಚುತ್ತದೆ. ಜಗತ್ತಿನಲ್ಲಿ ಕ.ಬು. ಹೋಗುವ ೭೫% ರಷ್ಟನ್ನು ಮರುಬಳಸಲು ಸಾಧ್ಯವಿದೆಯಂತೆ!


            ಎರಡೂ ಕಡೆ ಮುದ್ರಿಸಿ: ಕಾಗದದ ಮರುಬಳಕೆ ಅಸಾಧ್ಯವೆನಿಸಿದಲ್ಲಿ, ಕಾಗದದ ಎರಡೂ ಕಡೆ ಮುದ್ರಿಸುವ ಬಗ್ಗೆ ಗಂಭೀರವಾಗಿ ಯೋಚಿಸಿ. ಮರಗಳನ್ನು ಉಳಿಸಬಹುದು.


            ಕಂಪ್ಯೂಟರ್ ಭಾಗಗಳ ಮರುಬಳಕೆ: ನಿಮ್ಮ ಕಚೇರಿಯ ಕಂಪ್ಯೂಟರ್, ದೀಪ, ಮಾನಿಟರ್, ಪ್ರಿಂಟರ್, ಸ್ಪೀಕರ್ ಇತ್ಯಾದಿಗಳನ್ನು ಹಿತ-ಮಿತವಾಗಿ ಬಳಸಿ. ಮನೆಗೆ ಹೋಗುವಾಗ ಎಲ್ಲವನ್ನು ಸ್ವಿಚ್-ಆಫ್ ಮಾಡಿ. ಸಿಡಿ, ಡಿವಿಡಿ, ಕಾರ್ಟ್ರಿಡ್ಜಸ್ ಇತ್ಯಾದಿಗಳನ್ನು ಮರುಬಳಸಲು ಸಾಧ್ಯವೇ ಎಂದು ಯೋಚಿಸಿ. ಕಾರ್ಯರೂಪಕ್ಕೆ ತನ್ನಿ.


            ಹವಾನಿಯಂತ್ರಣ: ಹವಾನಿಯಂತ್ರಣವು ಹಿತವೆನಿಸುವ ೨೩ಡಿಗ್ರೀ ಸೆಲ್ಷಿಯಸ್-ನಲ್ಲಿದ್ದರೆ ಒಳ್ಳೆಯದು. ಕೆಲವು ಕಡೆ ಕೊರೆಯುತ್ತಿರುತ್ತದೆ. ಅಗತ್ಯವಿರದಿದ್ದರೂ ಏಸಿ ಕೆಲಸ ಮಾಡುತ್ತಿರುತ್ತದೆ. ೫೦ ಜನರು ಕುಳಿತುಕೊಳ್ಳುವ ಏಸಿ ಹಾಲಿನಲ್ಲಿ ೧೦ ಜನರು ಕುಳಿತು ಕೆಲಸ ಮಾಡಿದರೆ ವಿದ್ಯುತ್ ವ್ಯರ್ಥವಾಗುತ್ತದೆಯಲ್ಲವೆ! ಯಾವುದಾದರೂ ಎಸಿ/ಫ್ಯಾನ್ ಇರುವ ಚಿಕ್ಕ ಕೊಠಡಿಗೆ ಹೋಗಬಹುದಲ್ಲ!


            ಬಿಸಿವಸ್ತುಗಳನ್ನು ದೂರವಿಡಿ: ಏರ್-ಕಂಡೀಶನಿಂಗ್ ಸಾಧನದಾ ಉಷ್ಣನಿಯಂತ್ರಕದ (ಥರ್ಮೋಸ್ಟಾಟ್) ಬಿಸಿಯನ್ನು ಹೊರಚೆಲ್ಲುವ ಟಿ.ವಿ, ದೀಪ ಮುಂತಾದ ಸಾಧನಗಳನ್ನು ಇಡಬೇಡಿ. ಯಂತ್ರವು ಕೋಣೆಯ ಶೀತಲತೆ ಸಾಕಾಗಲಿಲ್ಲವೆಂದು ಹೆಚ್ಚು ಶೀತಲಗೊಳಿಸಲು ಹೆಚ್ಚು ವಿದ್ಯುತ್ತನ್ನು ಉಪಯೋಗಿಸೀತು!


             ಹತ್ತಿಬಟ್ಟೆ: ಬೇಸಿಗೆಯಲ್ಲಿ ಹತ್ತಿಬಟ್ಟೆ ಧರಿಸಿದಾಗ ಅದು ಹೆಚ್ಚುವರಿ ಬೆವರನ್ನು ಆವಿಯಾಗಲು ಅವಕಾಶ ಮಾಡಿಕೊಡುತ್ತದೆ. ಸಂಯೋಜಿತ ನೂಲಿನ ಬಟ್ಟೆ ಬೆವರನ್ನು ಹೆಚ್ಚಿಸುತ್ತದೆ. ಆಗ ಹೆಚ್ಚು ಎಸಿ/ಫ್ಯಾನ್ ಬೇಕಾಗುತ್ತದೆ. ಹತ್ತಿಬಟ್ಟೆಯನ್ನು ಧರಿಸಿ. ಸ್ವಲ್ಪಮಟ್ಟಿಗಾದರೂ ವಿದ್ಯುತ್ ಉಳಿಸಿ.


            ಗುಲಾಬಿ ಹೂವು: ನಿಮ್ಮ ಕಚೇರಿಯ ಮೇಜಿನ ಮೇಲೆ ಗುಲಾಬಿ ಹೂವಿದ್ದರೆ ನಿಜಕ್ಕೂ ಅದು ನಿಮ್ಮ ಮೌಲ್ಯವನ್ನು ಹೆಚ್ಚಿಸುತ್ತದೆ. ಹಾಗೆಯೇ ಒಂದು ಪುಟ್ಟ ಗಿಡವನ್ನು ಇಟ್ಟುಕೊಳ್ಳಲು ಸಾಧ್ಯವೆ ಎಂದು ಗಂಭೀರವಾಗಿ ಯೋಚಿಸಿ.


            ಅಕ್ವೇರಿಯಂ: ಅಕ್ವೇರಿಯಂ ಒಂದು ಅತ್ಯುತ್ತಮ ಸ್ಟ್ರೆಸ್ ಬಸ್ಟರ್!  ನಿಮ್ಮ ಕಚೇರಿಯಲ್ಲಿ ಅಕ್ವೇರಿಯಮ್ಮಿಗೆ ಅವಕಾಶವಿದೆಯೇ ಎಂದು ಯೋಚಿಸಿ.


 


ಹನಿ ಹನಿಗೂಡಿದರೆ ಹಳ್ಳ! ತೆನೆ ತೆನೆಗೂಡಿದರೆ ಬಳ್ಳ


         


                                               


-       ನಾ.ಸೋಮೇಶ್ವರ


           

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (6 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಮೋ ನಮಃ ಸೋಮೆಶ್ವರರೇ ತುಂಬಾ ಉತ್ತಮೋತ್ತಮ ಬರಹ ತುಂಬಾ ತುಂಬಾ ಧನ್ಯವಾದಗಳು ಇದರಲ್ಲಿ ಕೆಲವನ್ನು ನಾವಾಗಲೇ ಅನುಷ್ಠಾನಕ್ಕೆ ತಂದಾಗಿದೆ, ಉಳಿದುವನ್ನು ತರಲು ಆರಂಭ ಮಾಡುತ್ತೇನೆ ಇಂದಿನಿಂದಲೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಸೋ ಅವರೇ. ಉತ್ತಮ ಬರಹ ಪರಿಸರ ರಕ್ಷಣೆಗೆ ಪಾಲಿಸಲು ಯೋಗ್ಯವಾದ ಮಾಹಿತಿಗಳನ್ನು ಕೂಡಿ ಹಾಕಿ ಕೊಟ್ಟಿರುವಿರಿ .. ಧನ್ಯವಾದ >ಮನೆಯಿಂದ ಹೊರಗೆ ಹೋಗುವಾಗ:< ಇದಕ್ಕೆ ನನ್ನದೊಂದು ಸೇರ್ಪಡೆ !! ಕಿಸೆಯಲ್ಲಿ /ಅಥವಾ ಬ್ಯಾಗ್ನಲ್ಲಿ ಒಂದು ಪ್ಲಾಸ್ಟಿಕ್/ಹಾಳೆಯ ಚಿಕ್ಕ ಬ್ಯಾಗ ಇರಲಿ.. ದಾರಿಯಲ್ಲಿ ತೆಗೆದುಕೊಳ್ಳುವ ತಿಂಡಿ ತಿನಿಸುಗಳ ತ್ಯಾಜ್ಯಗಳನ್ನು ಅದರಲ್ಲಿ ಹಾಕಿ ಮನೆಗೆ ಬಂದ ನಂತರ ಅಥವಾ ಕಸದ ಡಬ್ಬಿ ಸಿಕ್ಕ ನಂತರ ಒಗೆಯಬಹುದು. ಇದರಿಂದ ಪರಿಸರ ಶುಚಿಯಾಗಿರುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪರಿಸರ ದಿನಕ್ಕೊಂದು ಉತ್ತಮ ಪಾಠ ಹೇಳಿ ಕೊಟ್ಟಂತಿದೆ ನಾಸೋರವರೆ, ಕೆಲವನ್ನು ಅದಾಗಲೇ ನಾವು ಆರಂಭಿಸಿಯಾಗಿದೆ, ಇನ್ನು ಕೆಲವನ್ನು ಇನ್ನು ಮುಂದೆ ಅನುಷ್ಠಾನಗೊಳಿಸಬೇಕಿದೆ. ನಮ್ಮ ಅಳಿಲುಸೇವೆ, ಪರಿಸರ ಸಂರಕ್ಷಣೆಗೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇನ್ನೊಂದಷ್ಟು ಭೂಮಿ ತಂಪಾಗಲು ನಮ್ಮ ಅಳಿಲು ಸೇವೆ ಇದರಲ್ಲಿ ಅನೇಕವನ್ನು ನಾನು ಪಾಲಿಸುತ್ತಿದ್ದೇನೆ. ನಾರಾಯಣ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೊಳಚೆ ನೀರಿನಿಂದ (grey water) ಪೊಟಾಸಿಯಂ ಅನ್ನು ಬೇರ್ಪಡಿಸುವ ತಂತ್ರಜ್ಞಾನದ ಮಾಹಿತಿ ಬೇಕಿತ್ತು. ಮನೆಯಲ್ಲೇ ಅಳವಡಿಸುವಂತಹದ್ದು. ಪರ್ಯಾಯವಾಗಿ ಬಟ್ಟೆ, ಪಾತ್ರೆ ತೊಳೆಯುವ ಸೋಪುಗಳಿಗೆ ನೈಸರ್ಗಿಕ ಪರ್ಯಾಯ ವಸ್ತುಗಳಿದ್ದರು ಒಳ್ಳೆಯದೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್ ನಿಮ್ಮ ಬರಹದಲ್ಲಿ ಇರುವ೦ತೆ ಕೆಲವು ವಿಶಯಗಳನ್ನು ಪಾಲಿಸುತ್ತಿದ್ದೇವೆ........ಇನ್ನು ಕೆಲವು ಪ್ರಯತ್ನದಲ್ಲಿ ಇದ್ದೇವೆ.....ಚೆನ್ನಾಗಿದೆ........ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ಬರಹ ಧೀರಜ್ ಜೋಶಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಸೂಕ್ತ ಮತ್ತು ಉತ್ತಮ ಬರಹ ನಾ.ಸೋಮೇಶ್ವರರವರೇ... ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾ.ಸೋ ಅವರೆ ಪರಿಸರ ಕುರಿತಾದ ನಿಮ್ಮ ಬರಹ ತುಂಬ ಚೆನ್ನಾಗಿ ಮೂಡಿಬಂದಿದೆ, ವಿದ್ಯುತ್ ಉಪಯೋಗಿಸುವ ಬಗ್ಗೆ ನಾವಿನ್ನೂ ಜಾಗ್ರತರಾಗಬೇಕು ಏಕೆಂದರೆ ಉಳಿಸಿದ ಒಂದು ಯೂನಿಟ್ ವಿದ್ಯುತ್, ಉತ್ಪಾದಿಸಿದ ಎರಡು ಯೂನಿಟ್ ಗೆ ಸಮ ಹೀಗಾಗಿ ಅನವಶ್ಯಕವಾಗಿ ಪೋಲಾಗುವ ವಿದ್ಯುತ್ ನ್ನು ನಾವು ತಡೆಯಲೇಬೇಕು. ದನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್ ಉಪಯುಕ್ತ ಲೇಖನ. ಇದರಲ್ಲಿನ ನಾನು ಪಾಲಿಸದಿರುವ ಕೆಲವು ಅ೦ಶಗಳು ಇನ್ನು ಮು೦ದೆ ಪಾಲಿಸುವ ಪ್ರಯತ್ನ ಖ೦ಡಿತ ಮಾಡುವೆ. -- ಹರ್ಷ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.