ಅಲೆಮಾರಿಯಾದಾಗಿನ ಅವಿಸ್ಮರಣೀಯ ಅನುಭವಗಳು - ಭಾಗ ೨

0

(ನೋಡಿ: ಭಾಗ ೧)

ಮೈಲಾಪುರದ
ಬೆಟ್ಟದ ದಾರಿ ಇನ್ನೂ ಮುಗಿದಿರಲಿಲ್ಲ. ಕೊನೆಯಿಲ್ಲದ ಭಿಕ್ಷುಕರ ಸಾಲು, ಜಾನಪದ
ಹಾಡುಗಳನ್ನು ಹಾಡುವ ಭಕ್ತರು, ಗೊರವರು, ಸಾಧುಗಳು, ಪೂಜಾರಿಗಳು, ಭಂಡಾರದ
ತಿಲಕವನ್ನಿಡುವ ಭಕ್ತರು, ಹೀಗೆ ಹಲವರನ್ನು ಕುತೂಹಲದಿಂದ ನೋಡಿದೆ. ಪ್ರತಿಯೊಬ್ಬರ
ಬದುಕಿನ ಹಿಂದೆ ಶತಶತಮಾನಗಳ ಕಥೆಯಿದೆ, ಹೃದಯ ವಿದ್ರಾವಕ ನೋವಿನ ಗಂಟಿದೆ.
ತಲೆತಲಾಂತರದಿಂದ ಬಂದ ಅವರ ಮೂಢ ನಂಬಿಕೆ ಅವರ ಬದುಕೆಂಬ ಕುದುರೆಗೆ ಚಾಟಿಯಂತೆ ಕೆಲಸ
ಮಾಡುತ್ತಿದೆ. ಸ್ವಾತಂತ್ರ್ಯವಿದ್ದರೂ ತಮ್ಮ ಅಂತರಂಗದ ಇಚ್ಚಾನುಸಾರವಾಗಿ ಬದುಕುವ
ಸ್ವಾತಂತ್ರ್ಯವಿಲ್ಲ. ಒಟ್ಟಿನಲ್ಲಿ, ಒಬ್ಬ ದೇವರಿದ್ದಾನೆ, ಅವನನ್ನೊಲಿಸಿಕೊಳ್ಳಲು ತಾನು
ಇದೇ ರೀತಿ ನಡೆದುಕೊಳ್ಳಬೇಕು, ಅವನೊಲಿದರೆ ಸ್ವರ್ಗ, ಇಲ್ಲದಿದ್ದರೆ ನರಕ ಎಂಬ ಗಾಢವಾದ
ನಂಬಿಕೆ. ಸಂಪ್ರದಾಯ ಸಂಸ್ಕೃತಿಗಳಿಗೆ ಕಟ್ಟುಬಿದ್ದು ತಮ್ಮ ಜೀವನವನ್ನು 'ಇದೇ' ರೀತಿ
ನಡೆಸಬೇಕಂಬ ವಿಚಾರಹೀನ ನಿರ್ಣಯ ಅವರ ಬದುಕನ್ನು ಶೋಚನೀಯ ಪರಿಸ್ಥಿತಿಗೆ ಗುರಿಪಡಿಸಿದೆ.


ಇಂತಹ
ಹಲವಾರು ವಿಚಾರಗಳನ್ನು ಹೊತ್ತುಕೊಂಡು ಬೆಟ್ಟ ಹತ್ತುತ್ತಾ ಮುಂದೆ ಸಾಗಿದೆ.
ಸಿಕ್ಕಾಪಟ್ಟೆ ವಯಸ್ಸಾದರೂ ಹದಿವಯಸ್ಸಿನ ಹುಡುಗಿಯಷ್ಟೇ ಚುರುಕಾದ "ದೇವದಾಸಿ"
ಅಜ್ಜಿಯನ್ನು ಕಂಡೆ. ದೇವದಾಸಿಯರ ಜೀವನ ಶೈಲಿಯ ಕಥೆಯನ್ನು ಕಾಕಾನಿಂದ ಮೊದಲೇ
ತಿಳಿದಿದ್ದೆ. ಈ ಅಜ್ಜಿ ಚಿಕ್ಕ ವಯಸ್ಸಿನವಳಾಗಿದ್ದಾಗಲೇ ಅವಳ ತಂದೆ ತಾಯಿಗಳು ಅವಳನ್ನು
ಸವದತ್ತಿ ಎಲ್ಲಮ್ಮನಿಗೆ ಧಾರೆಯೆರೆದರು. ಅಂದರೆ ಅವಳನ್ನು ದೇವದಾಸಿಯನ್ನಾಗಿ ಮಾಡಿದರು.
ದೇವದಾಸಿಯರು ವಯಸ್ಸಿಗೆ ಬಂದಾಗ, ಊರಿನಲ್ಲಿ ಯಾರದರೊಬ್ಬರು ಅವಳ "ಉಡಿ ತುಂಬುತ್ತಾರೆ".
ಅಂದರೆ, ಒಂದು ದಿನದ ಮಟ್ಟಿಗೆ ಅವಳನ್ನು ಮದುವೆಯಾಗಿ, ಅವಳ ಜೊತೆ ದೈಹಿಕ ಸಂಭಂಧ
ಬೆಳೆಸಿ, ಅವಳಿಗೆ ಸಂತಾನದ ಭಾಗ್ಯವನ್ನು ಕೊಡುವುದು. ಹೀಗೆ ದೇವದಾಸಿಯರನ್ನು ಯಾರಾದರು
ಉಡಿ ತುಂಬಿದ ಮೇಲೆ, ಅವಳನ್ನು ಯಾರಾದರೂ ವರಿಸಬಹುದು (ಅಂಗೀಕರಿಸಬಹುದು)! ಅಂದರೆ ಅವಳ
ಮುಂದಿನ ಬದುಕು ವೇಶ್ಯಯಂತೆ. ಅವಳು ಜೀವನ ಪೂರ್ತಿ ಎಲ್ಲಮ್ಮನ ಹೆಸರಿನಲ್ಲಿ ಭಿಕ್ಷೆ
ಬೇಡುತ್ತ, ಎಲ್ಲಮ್ಮನನ್ನು ಆರಾಧಿಸುತ್ತ, ವೇಶ್ಯಯ ಜೀವನವನ್ನು ಕಳೆಯುವುದು. ಯಾರು
ಬೇಕಾದವರ ಮಕ್ಕಳಿಗೆ ತಾಯಿಯಾಗುವುದು. ಆ ಮಕ್ಕಳ ಪಾಲನೆಯ ಭಾರ ಕೂಡ ದೇವದಾಸಿಯರ ಮೇಲೆಯೆ!
ಇದೂ ಸಹ ಶ್ರೀಮಂತ ಸಂಸ್ಕೃತಿಯ ಕ್ರೂರ ಹಿನ್ನೆಲೆ!


ಸರಕಾರ
ದೇವದಾಸಿ ಪದ್ಧತಿ ಕಾನೂನು ಬಾಹಿರ ಎಂದು ಘೋಶಿಸಿದರೂ, ಈ ಪದ್ಧತಿ ವ್ಯಾಪಕವಾಗಿ ಇನ್ನೂ
ಉಳಿದಿದೆ. ಸವದತ್ತಿಯ ಸುತ್ತಮುತ್ತಲಂತೂ ಕಿಂಚಿತ್ತೂ ಬದಲಾಗಿಲ್ಲ. ದೇವದಾಸಿ
ಪದ್ಧತಿಯನ್ನು ರದ್ದುಗೊಳಿಸಲು ಹಲವಾರು ಸಂಘಸಂಸ್ಥೆಗಳು ಮುಂದೆ ಬಂದಿವೆ. ಆದರೂ ಈ
ಪದ್ಧತಿಯ ನಿರ್ಮೂಲನೆ ಸಾಧ್ಯವಾಗುತ್ತಿಲ್ಲ. ಯಾಕೆ? ಜನರಿಗೆ ಈ ಹೀನ ಪದ್ಧತಿಯಲ್ಲಿ
ಇನ್ನೂ ನಂಬಿಕೆಯಿದೆ. ಜನರ ಮಾನಸಿಕ ಪರಿಕಲ್ಪನೆ (mind set) ಬದಲಾಗಬೇಕು. ಹೇಗೆ?
ಶಿಕ್ಷಣ, ಸಂಘಟನೆಯಿಂದ ಸಾಧ್ಯ. ದೇವದಾಸಿ ಮಹಿಳೆಯರ ಸಂಘಗಳಿದ್ದರೂ ಎಲ್ಲಾ ದೇವದಾಸಿಯರು
ಅಂತಹ ಸಂಘಗಳಲ್ಲಿಲ್ಲ. ಸರಕಾರ ಮತ್ತು ಸಮಾಜ ಇಂತಹ ಸಂಘಗಳನ್ನು ಬಲಪಡಿಸಿ,
ದೇವದಾಸಿಯರಿಗೆ ಸೂಕ್ತ ಶಿಕ್ಷಣ, ಅವಕಾಶಗಳನ್ನು ಕಲ್ಪಿಸಬೇಕು. ಅಂದಾಗ ಮಾತ್ರ, ಈ
ತಲೆಮಾರಲ್ಲದಿದ್ದರೂ, ಮುಂದಿನ ತಲೆಮಾರಿನಲ್ಲಾದರೂ, ದೇವದಾಸಿ ಪದ್ಧತಿಯನ್ನು
ನಿರ್ಮೂಲನೆಗೊಳಿಸಬಹುದು. ಒಂದು ರೀತಿಯಲ್ಲಿ ಬಡತನ ಮತ್ತು ಅನಕ್ಷರತೆ ಪ್ರತಿಯೊಂದು
ಸಮಸ್ಯಯ ಬೇರುಗಳೆನ್ನಬಹುದು. ಸಂಸ್ಕೃತಿ, ಸಂಪ್ರದಾಯಗಳಿಗೆ ಸಂಭಂದಿಸಿದ ಮೂಢನಂಬಿಕೆಗಳ
ಮೂಲ ಅನಕ್ಷರತೆ ಮತ್ತು ಬಡತನ. ಎಲ್ಲಿ ವಿದ್ಯ ಒಬ್ಬ ವ್ಯಕ್ತಿಯ ಮನಸ್ಸನ್ನು
ಆವರಿಸಿರುತ್ತದೆಯೋ ಅಲ್ಲಿ ಅರ್ಥಹೀನ ಆಚಾರ ವಿಚಾರಗಳಿಗೆ ಅವಕಾಶವಿರುವುದಿಲ್ಲ.


ಬೆಟ್ಟದ
ತುದಿ ಸಮೀಪಿಸುತ್ತಿದ್ದಂತೆ ಭಿಕ್ಷುಕರ ಸಂಖ್ಯೆ ಮತ್ತಷ್ಟು ಹೆಚ್ಚಿತು. ಚಿಲ್ಲರೆ
ಹಣವೆಲ್ಲ ಮೊದಲೇ ಖಾಲಿಯಾಗಿತ್ತು. ಚಿಲ್ಲರೆ ಇಲ್ಲ ಅಂದರೆ, "ನೋಟು ಕೊಡು, ಚಿಲ್ಲರೆ
ಕೊಡುತ್ತೇನೆಂಬ" ಭಿಕ್ಷುಕರ ಚಪಲ ಗೊತ್ತೆ ಇತ್ತು. ಮನಸ್ಸಿನ ಯಾವುದೋ ಮೂಲೆಯಲ್ಲಿ
ದುಡ್ಡು ಕೊಡಬೇಕೆಂದು ಅನಿಸಿದರೂ, ಕೊಡುವ ಗೋಜಿಗೆ ಹೋಗಲಿಲ್ಲ. ಎಷ್ಟು ಕೊಟ್ಟರೂ, ನನ್ನ
ಹಣ ಯಾರನ್ನೂ ಉದ್ಧಾರ ಮಾಡಲಾಗುವುದಿಲ್ಲ ಅನ್ನಿಸಿಬಿಟ್ಟಿತು. ಅತ್ತ ಇತ್ತ ನೋಡುತ್ತ
ನೋಡುತ್ತ ಮುಂದೆ ಸಾಗುವಾಗ ಬೆಟ್ಟದ ತುದಿಯಲ್ಲಿ ಜನ್ಮ ಪೂರ್ತಿ ಮರೆಯಲಾಗದ
ಘಟನೆಯೊಂದನ್ನು ಕಂಡೆ. ಭಿಕ್ಷುಕರಲ್ಲಿದ್ದ ಒಬ್ಬ ಅಜ್ಜಿಗೆ ಯಾರೊ ಬಂದು
ಹೋಳಿಗೆ(ಒಬ್ಬಟ್ಟು) ಮತ್ತು ಪಲ್ಯಾ (ಸಬ್ಜಿ) ಕೊಟ್ಟರು. ಅವಳು ಹೋಳಿಗೆಯನ್ನು
ಬುಟ್ಟಿಯಲ್ಲಿಟ್ಟುಕೊಂಡು, ಅತ್ತಿತ್ತ ನೋಡಲಾರಂಬಿಸಿದಳು. ಮೆಟ್ಟಿಲುಗಳ ಪಕ್ಕದಲ್ಲಿ
ಸಿಕ್ಕಾಪಟ್ಟೆ ಧೂಳು, ಭಂಡಾರ ಬಣ್ಣದ ಕಸದ ರಾಶಿಯಿತ್ತು. ಅದರಲ್ಲಿ ಒಂದು ಪ್ಲಾಸ್ಟಿಕ್
ಚೀಲ ಕೂಡ ಬಿದ್ದಿತ್ತು. ಪ್ಲಾಸ್ಟಿಕ್ ಚೀಲ ಕಣ್ಣಿಗೆ ಬೀಳುತ್ತಲೆ ಅಜ್ಜಿ ಅದರತ್ತ
ಕೈಹಾಕಿ ಎಳೆದುಕೊಂಡಳು, ಅದಕ್ಕೆ ಹತ್ತಿದ್ದ ಧೂಳು, ಕಸ, ಸ್ವಲ್ಪ ಕೆಸರನ್ನು ಝಾಡಿಸಿ
ಅದರೊಳಗೆ ಯಾರೋ ಒಬ್ಬರು ಕೊಟ್ಟ ಆ ಪಲ್ಯಾವನ್ನು (ಸಬ್ಜಿಯನ್ನು) ಹಾಕಿ, ಅದನ್ನು ತನ್ನ
ಸೀರೆಯ ಸೆರಗಿನಲ್ಲಿ ಕಟ್ಟಿಕೊಂಡಳು. ಮನುಷ್ಯನಿಗೆ ಹಸಿವು ಎಷ್ಟು ಘೋರವಾದದ್ದು ಅಲ್ಲವೇ?
ಹೊಟ್ಟೆಗಾಗಿ ಒಬ್ಬ ಮನುಷ್ಯ ಎಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದಲ್ಲವೇ?
Luxurious ಹೊಟೇಲಿನ ಊಟದಲ್ಲಿ ಒಂದು ಕಸದ ಕಡ್ಡಿ ಕಂಡರೆ ಸಾಕು, ತಟ್ಟೆಯಲ್ಲಿದ್ದ
ಎಲ್ಲವನ್ನು ಬದಲಿಸುತ್ತೇವೆ. ಆದರೆ ಈ ಅಜ್ಜಿ.....? ಎಂತಹ ಘೋರ ಸತ್ಯ ಅಲ್ಲವೆ?

ಅಂತೂ
ಬೆಟ್ಟವನ್ನು ಹತ್ತಿ ಗುಡಿಯ ದ್ವಾರಬಾಗಿಲಿನಲ್ಲೆ ಸ್ವಲ್ಪ ಹೊತ್ತು ಕುಳಿತು, ನಡೆದ
ಘಟನೆಗಳನ್ನೆಲ್ಲ ಮೆಲುಕು ಹಾಕುತ್ತಿದ್ದೆ. ಈ ಜಾತ್ರೆಯಲ್ಲಿ ಇನ್ನೊಂದು ವಿಷೇಶತೆಯಿದೆ.
ಸರಪಳಿ ಕಡೆಯುವುದು. ಒಂದು ಕಲ್ಲಿಗೆ ಸರಪಳಿಯನ್ನು ಕಟ್ಟಿ, ಅದನ್ನು ಒಬ್ಬ ಮುದಿ ಪೂಜಾರಿ
ಎಳೆಯುತ್ತಾನೆ, ಕಣ್ಣು ಮುಚ್ಚಿ ಕಣ್ಣು ತೆರೆಯುವುದರೊಳಗಾಗಿ ಸರಪಳಿ ತುಂಡಾಗಿರುತ್ತದೆ!
ಆನೆಯೂ ಸಹ ಕಡಿಯಲಾಗದ ಸರಪಳಿಯನ್ನು ಒಬ್ಬ ವಯಸ್ಸಾದ ಪೂಜಾರಿ ತುಂಡು ಮಾಡುತ್ತಾನೆ.
ಮೊದಲು ಈಟಿವಿ(E TV) ಯವರು ಇದರ ಸತ್ಯವನ್ನು ತಿಳಿಯಲು ಹಲವಾರು ಪ್ರಯೋಗಳನ್ನು ಮಾಡಿ
'ಸರಪಳಿ ಕಡೆಯುವ' ಘಟನೆಯನ್ನು ಸುಳ್ಳು ಎಂದು ಸಾಧಿಸಲು ವಿಫಲರಾಗಿದ್ದರಂತೆ. ಈ ಘಟನೆ
ನಡೆಯುವುದು ಜಾತ್ರೆಯ ದಿನ ಮಾತ್ರ. ಜಾತ್ರೆಯ ದಿನ ಬಿಟ್ಟು ಯಾವುದೆ ದಿನದಲ್ಲಿ ಸರಪಳಿ
ಕಡೆಯಲು ಪ್ರಯತ್ನಿಸಿದರೆ (ಅದೇ ಪೂಜಾರಿಯಿಂದ!) ಸಾಧ್ಯವೇ ಆಗುವುದಿಲ್ಲವಂತೆ! ಸರಪಳಿ
ಕಡೆಯುವುದನ್ನು ನೋಡಲೇ ಬೇಕೆಂದು ತೀರ್ಮಾನಿಸಿದೆ. ಅದು ಅಷ್ಟೊಂದು ಸುಲಭವಲ್ಲ.
ಕಿಕ್ಕಿರಿದ ಜನರಾಶಿಯಲ್ಲಿ ಕ್ಷಣಾರ್ಧದಲ್ಲಿ ಮುಗಿಯುವ ಘಟನೆಯನ್ನು ನೋಡುವುದು
ಸುಲಭವಲ್ಲ. ಗುಡಿಯ ಒಳಗೆ ಸಿಕ್ಕಾಪಟ್ಟೆ rush. ಹೋಗಲು ಸಾದ್ಯವೇ ಇರಲಿಲ್ಲ. ಗುಡಿಯ
ದ್ವಾರದಲ್ಲಿ ನಿಂತಿದ್ದ ಪೋಲಿಸ್ ಮಾಮಾನನ್ನು ಮಾತನಾಡಿಸಿ, ಅವನದೊಂದು ಫೋಟೊ ತೆಗೆದೆ,
ಅವರ ಜೊತೆ ಹಾಗೆ ಮಾತನಾಡುತ್ತ ನನ್ನ ಪರಿಚಯ ಕೂಡ ಮಾಡಿಕೊಂಡೆ. ಸರಪಳಿ ಕಡೆಯುವುದನ್ನು
ನೋಡುವ ಬಯಕೆಯನ್ನು ತೋಡಿಕೊಂಡೆ. ಒಪ್ಪಿಕೊಂಡರು!!


ಬೆಟ್ಟ
ಹತ್ತುವ ದಾರಿಯ ಮಧ್ಯದಲ್ಲಿ ಒಂದು ಕಲ್ಲಿನ ಕಂಬವಿದೆ. ಅದನ್ನು ಬೆಟ್ಟ ಹತ್ತುವಾಗಲೇ
ನೋಡಿದ್ದೆ, ಪೋಲಿಸ್ ಮಾಮಾನ ಜೊತೆ ಮತ್ತೆ ಅಲ್ಲಿಗೆ ಬಂದೆ. ಅವರು ನನ್ನನ್ನು ಕಿಕ್ಕಿರಿದ
ಜನಸಮೂಹದಲ್ಲಿ ಅತ್ಯಂತ ಸಮೀಪಕ್ಕೆ ಕರೆದೊಯ್ದರು. ನನಗೆ ಎಲ್ಲವೂ ಸ್ಪಷ್ಟವಾಗಿ
ಕಾಣುವಂತಿದ್ದ ಜಾಗವದು. ಒಬ್ಬರ ಮೇಲೊಬ್ಬರು ಬೀಳುತ್ತಿದ್ದರೂ, ನನಗೆ ಫೋಟೊ ತೆಗೆಯುವ
ಚಪಲ ಬೇರೆ. ಹೇಗಾದರು ಮಾಡಿ ಆ ಕ್ಷಣಾರ್ಧ ಘಟನೆಯ ಫೋಟೊ ತೆಗೆಯಬೇಕೆಂದುಕೊಂಡೆ. ಮೈಲಾರ
ಮಲ್ಲಯ್ಯನ ಪಲ್ಲಕ್ಕಿ ಆ ಜಾಗಕ್ಕೆ ಬಂದ ಮೇಲೆ ಸರಪಳಿ ಕಡೆಯುವ ಕಾರ್ಯ. ಪಲ್ಲಕ್ಕಿ ಬರಲು
ಇನ್ನು ಅರ್ಧ ಗಂಟೆ ಇತ್ತು. ಯಾರೊ ಒಬ್ಬ ಪೋಲಿಸರು 'ಹಿಂದಕ್ಕೆ ಸರಿ' ಎಂದು ಲಾಠಿ
ಎತ್ತಿದರು! ಸದ್ಯ, ಅಷ್ಟರಲ್ಲಿ ಮೊದಲೇ ಪರಿಚಯವಾಗಿದ್ದ ಪೋಲಿಸ್ ಮಾಮಾ ಬಂದು, "ಹೇಯ್
ಅವರು ನಮ್ಮವ್ರ್ ಅದಾರ", ಅಂದ. ಲಾಠಿ ಏಟು ತಪ್ಪಿತು. ನಾನು ಮತ್ತು ನನ್ನ ಕ್ಯಾಮರಾ
ಬದುಕಿಕೊಂಡೆವು. ಎಲ್ಲಿ ನೋಡಿದರಲ್ಲಿ ಭಂಡಾರದ್ದೇ (ಹಳದಿ ಬಣ್ಣ) ವೈಭವ. ಜನರು
ಚೀಲದಲ್ಲಿ ಭಂಡಾರವನ್ನು ತುಂಬಿಕೊಂಡು ಎಲ್ಲೆಂದರಲ್ಲಿ ಎರಚುತ್ತಿದ್ದರು. ಮೈಮೇಲೆ ಭಂಡಾರ
ಬಿದ್ದರೂ ಚಿಂತೆಯಿಲ್ಲ ಕ್ಯಾಮೆರಾದ ಮೇಲೆ ಮಾತ್ರ ಬೀಳಬಾರದು ಎಂದು ಮಲ್ಲಯ್ಯನಲ್ಲಿ
ಪ್ರಾರ್ಥಿಸುತ್ತಿದ್ದೆ. ಅತ್ತಿತ್ತ ಫೋಟೊ ಕ್ಲಿಕ್ಕಿಸುತ್ತ ಅರ್ಧ ಗಂಟೆ ಕಳೆದೆ.
ಪಲ್ಲಕ್ಕಿ ಸಮಯಕ್ಕೆ ಸರಿಯಾಗಿ ಬಂತು. ಅಲ್ಲಿದ್ದ ಪೂಜಾರಿಯೊಬ್ಬ ಸರಪಳಿಯನ್ನು ಎಲ್ಲರಿಗೂ
ತೋರಿಸಿದ. ತುಂಬಾ ಗಟ್ಟಿಯಾದ, ಬಲವಾದ ಸರಪಳಿಯದು. ಎಲ್ಲರೂ ಮೈಲಾರಲಿಂಗನ ಜಯಕಾರ (ಏಳ್
ಕೋಟಿ ಏಳ್ ಕೋಟಿಗೆ ಅಂತ, ಹಿಂದೆ ಮೈಲಾರಲಿಂಗ ಶ್ರೀಮಾನ್ ವೆಂಕಟರಮಣನಿಗೆ ಏಳು ಕೋಟಿ
ರೂಪಾಯಿ ಸಾಲ ಕೊಟ್ಟಿದ್ದನಂತೆ, ವೆಂಕಟರಮಣ ದೇವರು ಅದನ್ನು ಮೈಲಾರಲಿಂಗನಿಗೆ ವಾಪಸ್
ಕೊಡಲೇ ಇಲ್ಲವಂತೆ, ಅದಕ್ಕೆ ವೆಂಕಟರಮಣ ದೇವರಿಗೆ ಜನ "ಗೊವಿಂದ, ಗೋssssವಿಂದ"
ಎನ್ನುವರಂತೆ, ಏಳು ಕೋಟಿ ಸಾಲ ಕೊಟ್ಟ ಸರದಾರ ಮಲ್ಲಯ್ಯನಿಗೆ, "ಏಳ್ ಕೋಟಿ ಏಳ್ ಕೋಟಿಗೆ"
ಎನ್ನುವ ಜೈಕಾರ) ಹಾಕಿದರು. ಮುದಿವಯಸ್ಸಿನ ಪೂಜಾರಿಯೊಬ್ಬ ಪಲ್ಲಕ್ಕಿಯನ್ನು ನಮಸ್ಕರಿಸಿ,
ಸರಪಳಿಯತ್ತ ಧಾವಿಸಿದ, ಕ್ಯಾಮರ ಕ್ಲಿಕ್ಕಿಸಲು ನಾನು ರೆಡಿಯಾದೆ. ಸರಪಳಿಯನ್ನು ನಮಿಸಿ,
"ಏಳ್ ಕೋಟಿ ಏಳ್ ಕೋಟಿಗೆ" ಅಂತ ಸರಪಳಿಯನ್ನು ಎಳೆದ. ಸರಪಳಿ ಎರಡು ಭಾಗವಾಯಿತು!! ಎಂತಹ
ಅದ್ಭುತ! ಫೋಟೊ ಕ್ಲಿಕ್ಕಿಸುವಷ್ಟರಲ್ಲಿ ಯಾವನೋ ಒಬ್ಬ ಕೈ ತಾಗಿಸಿಬಿಟ್ಟ, ನೆಲಕ್ಕೆ
ಬೀಳುತ್ತಿತ್ತು ನನ್ನ ಕ್ಯಾಮೆರ! ಸದ್ಯ, ಯಾರೋ ಒಬ್ಬರು ಅದನ್ನು ಹಿಡಿದು ನನ್ನ ಕೈಗೆ
ಕೊಟ್ಟರು. ತಕ್ಷಣ ಇನ್ನೊಂದು ಫೋಟೊ ತೆಗೆದೆ. ಪೂಜಾರಿ ಸಿಕ್ಕ ನನ್ನ ಕ್ಯಾಮರಾದಲ್ಲಿ!


ಪೋಲಿಸ್
ಮಾಮಾರಿಗೆ ವಂದನೆಗಳನ್ನು ಸಲ್ಲಿಸಿ, ಮತ್ತೊಂದು ಫೋಟೊ ತೆಗೆದು, ಭಂಡಾರಕ್ಕೆ ಹೆದರಿ
ಜಾತ್ರೆಯ ಹೊರಗಿನ ಹೊಲದಲ್ಲಿ ಕುಳಿತಿದ್ದ ಕಾಕಾನ ಕಡೆ ನಡೆದೆ. ಜನ ಎಷ್ಟೊಂದು
ಕಿಕ್ಕಿರಿದಿತ್ತೆಂದರೆ, ಮುಂಬಯಿ ಲೋಕಲ್ ರೈಲಿನ ಬಾಗಿಲಿನಲ್ಲಿರುವ ಜನರಿಗಿಂತ ಎಷ್ಟೋ
ಪಟ್ಟು ಜಾಸ್ತಿ! ಸುಮ್ಮನೆ ಜನರ ಮಧ್ಯದಲ್ಲಿ ನಿಂತರೆ ಸಾಕು, ಜನರೇ ನಮ್ಮನ್ನು
ದೂಡಿಕೊಂಡು ಹೊರಗೆ ಕರೆದೊಯ್ಯುತ್ತಾರೆ! ಸುಮಾರು ಅರ್ಧ ಕಿಲೋ ಮೀಟರ್ ಇದ್ದ ಇಂತಹ
ಜನದಟ್ಟನೆಯ ದಾರಿ ಅಪೂರ್ವ ಅನುಭವ ಕೊಟ್ಟಿತು. ಅಂತೂ ಬದುಕಿಕೊಂಡು ಜಾತ್ರೆಯ ಹೊರಗೆ
ಬಂದೆ. ದಾರಿಯಲ್ಲಿ ಕಬ್ಬು (sugar cane) ಖರೀದಿಸಿ ತಿನ್ನುತ್ತಾ ಕಾಕಾ ಇದ್ದ ಜಾಗಕ್ಕೆ
ಬಂದೆ. ಕಾಕಾನಿಂದ ಜಾತ್ರೆಯ ಬಗ್ಗೆ ಮತ್ತಷ್ಟು ವಿಷಯಗಳನ್ನು ತಿಳಿದುಕೊಂಡು ಸ್ವಲ್ಪ ಕಾಲ
ಕಳೆದೆ. ಒಂದೆರಡು ಗಂಟೆಯ ನಂತರ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಜನದಟ್ಟಣೆ
ಕಡಿಮೆಯಾಯಿತು. ದೇವರ ದರ್ಶನವನ್ನಾದರೂ ಮಾಡೋಣವೆಂದು ಎಲ್ಲರೂ (ನಾನು, ಕಾಕಾ ಮತ್ತು ಅವನ
ಸ್ನೇಹಿತ ಲೋಕನಾಥ ಸರ್) ಬೆಟ್ಟದ ಮೇಲಿರುವ ಗುಡಿಯ ಕಡೆ ಹೊರಟೆವು.

ಮುಂದುವರಿಯುವುದು........

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.