ರಂಗ ಪ್ರವೇಶ

0

ಆಫ್-ಕೋರ್ಸ್ ನಾವೆಲ್ಲಾ ಮನೆಯಲ್ಲಿ ಅಪ್ಪ ಅಮ್ಮನ ಹತ್ರ ನಾಟಕ ಮಾಡೇ ಇರ್ತೀವಿ. ಆದ್ರೆ ಇದು ಗಂಭೀರವಾಗಿ, ನನ್ನ ನಾಟಕದ ರಂಗ ಪ್ರವೇಶ. ನಾನು ಆಗ ದ್ವಿತೀಯ ವರ್ಷದ ಬಿ.ಎಸ್ಸಿ ಓದುತ್ತಿದ್ದೆ. ನ್ಯಾಷನಲ್ ಕಾಲೇಜಿನ ಒಂದು ವೈಶಿಷ್ಟ್ಯವೆಂದರೆ, ಅಂತರ್ವರ್ಗೀಯ ನಾಟಕ ಸ್ಪರ್ಧೆ. ಇದು ಎಂಥವರಲ್ಲೂ ನಾಟಕದ ಕಿಚ್ಚು ಹೊತ್ತಿಸುವಂಥ ಸಂದರ್ಭ ಸೃಷ್ಟಿಸುತ್ತದೆ. ಅಂಥದ್ದರಲ್ಲಿ, ಹಾಡು, ಹಸೆ ಅಂತ ತಿರುಗಾಡ್ತಾ ಇದ್ದ ನನಗೆ ಇದ್ದಕ್ಕಿದ್ದಂತೆ, ರೆಕ್ಕೆ ಪುಕ್ಕ ಬಂದಂತಾಯಿತು. ಮೊದಲಿಗೆ ನಾವು ನಮ್ಮ ವರ್ಗದ ಎಲ್ಲರೂ ಸೇರಿ, ಯಾವ ನಾಟಕ ಮಾಡಬೇಕೆಂದು ನಿಶ್ಚಯಿಸಬೇಕೆಂದು ಎಲ್ಲರೂ ಒಂದೆಡೆಗೆ ಸೇರಿದೆವು. ಕಾಲೇಜು ಮುಗಿದ ನಂತರ, ಸಂಜೆ ಎಲ್ಲರೂ ಸೇರಿ ನಾಟಕದ ಬಗೆಗೆ ಮಾತಾಡಿಕೊಂಡೆವು. ಮರುದಿನ ನಮ್ಮ ಗೆಳೆಯ ಮಹಂತೇಶನ ಗೆಳೆಯರಾದ, ಈಗ ಕಿರುತೆರೆಯಲ್ಲಿ ಜನಪ್ರಿಯ ನಟರಾದ, ಹಾಗೂ ನಮ್ಮ ನ್ಯಾಷನಲ್ ಕಾಲೇಜಿನ ಪೂರ್ಣಚಂದ್ರ ತೇಜಸ್ವಿರವರು ನಿರ್ದೇಶನ ಮಾಡಲು ಒಪ್ಪಿದರು ನಂತರ ಅವರ ಸಮುದಾಯ ತಂಡದ ಗೆಳೆಯರಾದ ಪ್ರತಾಪ್ ಮೆಂಡನ್ ಅವರ ಕಲಾ ನಿರ್ದೇಶನ ಮತ್ತು ಅದೇ ತಂಡದ ಕಿಶೋರ್ ಅವರ ಸಂಗೀತ ನಿರ್ದೇಶನದಲ್ಲಿ ನಾವುಗಳು ಮಾಡಿದ ನಾಟಕ ಶ್ರೀಯುತ ವೀ. ಸೀ ರವರ "ಆಗ್ರಹ" ನಾಟಕವನ್ನು. ಆದರೆ ನಾಟಕಕ್ಕೆ "ಇಹೈವ ಫಲಂ" ಎಂದು ಹೆಸರಿತ್ತು. ಈ ಸಮಯದಲ್ಲಿ ನಾವು ಕಲಿತದ್ದು ಬಹುಷಃ, ಜೀವನದಲ್ಲಿ ಎಂದಿಗೂ ಮರೆಯಲಾಗದ್ದು. ನಾವುಗಳು ಈ ಸಮಯದಲ್ಲಿ ಮುಖ್ಯವಾಗಿ, ಒಗ್ಗಟಾಗಿ, ಒಬ್ಬರಿಗೊಬ್ಬರು ಆಸರೆಯಾಗಿ ನಿಂತೆವು. ನಂತರದ ದಿನಗಳಲ್ಲಿ ನಮ್ಮ ವರ್ಗದಲ್ಲಿ ಒಗ್ಗಟ್ಟು ಬಹಳವಾಗಿ ಬೇರೂರಿತ್ತು.
ನಮ್ಮ ನಾಟಕ ಅಕ್ಟೋಬರ್ ೨ ನೇ ತಾರೀಖಿನಂದು ನಡೆಯಿತು. ನಾನು ಧರ್ಮರಾಯನ ಪಾತ್ರವನ್ನು ವಹಿಸಿದ್ದೆನು. ಈ ನಾಟಕ ನನ್ನ ನಾಟಕ ಪ್ರೇಮವನ್ನು ಇಮ್ಮಡಿಗೊಳಿಸಿತು. ಇಂದಿಗೂ ಆ ನಾಟಕದ ಹಾಡುಗಳನ್ನು ಮರೆಯುವಂತಿಲ್ಲ.
"ಅಪಶಕುನಿಗೆ ಕತ್ತಲಲ್ಲೇ ಶಕುನ....
ಶುಭಶಕುನ........" ಹೀಗೆ ಆ ಹಾಡು ಮೊದಲಾಗುತ್ತಿತ್ತು.
ಇಂದಿಗೂ ನಾವುಗಳು ಭೇಟಿಯಾದಾಗಲೆಲ್ಲ, ಆ ಮಧುರ ಕ್ಷಣಗಳನ್ನು ಮೆಲುಕು ಹಾಕುತ್ತಿರುತ್ತೇವೆ. ಇದೇ ನನ್ನ ನಾಟಕದ ರಂಗ ಪ್ರವೇಶ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನೀವು ಪೂರ್ಣ ಹಾಗು ಪ್ರತಾಪ ರವರ ಸ್ನೇಹಿತರೆಂದು ತಿಳಿದು ಸಂತೋಶವಾಯಿತು... :)
ನೀವು ಹಲಗಲಿ ಬೇಡರ ದಂಗೆಯಲ್ಲಿ ಮಾಡಲಿಲ್ಲವೇ..? ಅದು ಕೂಡ ಪೂರ್ಣ ಪ್ರತಾಪ ರವರು ನ್ಯಾಷನಲ್ ಕಾಲೇಜಿನಲ್ಲಿ ನಾಟಕ ಮಾಡಿದ್ದರಲ್ಲವೇ...?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.