ಮಳೆ ಮತ್ತು ಬೋಂಡ........

0

ಮಳೆಗಾಲ ಶುರುವಾಯ್ತು. ಮಳೆಗಾಲದ ಬಗ್ಗೆ ನೆನೆದಾಗಲೆಲ್ಲ ಮತ್ತು ಮಳೆಯಲ್ಲಿ ನೆನೆದಾಗಲೆಲ್ಲ ಬಹಳವಾಗಿ ನೆನಪಾಗುವುದು ಅಮ್ಮನ ಕೈಯ ಬೋಂಡ, ಬಜ್ಜಿ ಅಥವಾ ಪಕೋಡ. ಮಳೆಗಾಲದಲ್ಲಿ ಶಾಲೆಯಿಂದ ಬಂದೊಡನೆ ಅಡುಗೆಯ ಮನೆಯತ್ತಲೇ ನಮ್ಮ ಗಮನ ಬಹಳವಾಗಿ ಹರಿಯುತ್ತಿತ್ತು. ಏನೋ ಘಮ್ಮೆಂದು ವಾಸನೆ ಬಂದೊಡನೆಯೇ, ಅಮ್ಮ ನಮಗಾಗಿಯೇ ಏನೋ ತಯಾರಿಸಿದ್ದಾಳೆಂದು ಬಹಳ ಸಂತೋಷವಾಗುತ್ತಿತ್ತು. ಅಂದು ನೆನೆಸಿದಾಗ ತಯಾರಾಗುತ್ತಿದ್ದ ಬೋಂಡ ಅಥವಾ ಪಕೋಡ ಇಂದು ಕೇವಲ ಮದುವೆಯ ಮನೆಯಲ್ಲಿ ಮತ್ತು ಹಬ್ಬಗಳಲ್ಲಿ ಮಾತ್ರ ಕಾಣುವಂತಾಗಿದೆ. ಅಂದು, ತಮ್ಮನ ಕೈಯಲ್ಲಿನ ಬೋಂಡಕ್ಕಾಗಿ ಕಚ್ಚಾಡಿ, ಅಮ್ಮನ ಕೈಯಲ್ಲಿಯೂ ಬೋಂಡ ತಿನ್ನುವಂಥಾಗಿದ್ದನ್ನು ಇಂದಿಗೂ ಮರೆಯಲಾಗದು. ಹಾಗೆಯೇ ನಾನು ಮತ್ತು ನನ್ನ ತಮ್ಮ ಇಬ್ಬರೂ, ಶ್ರದ್ಧೆ ವಹಿಸಿ ನಮ್ಮ, ನಮ್ಮ ಪಾಲಿನ ಬೋಂಡಗಳನ್ನೂ ಎಣಿಸಿ, ಇಬ್ಬರಿಗೂ ಸಮವಾಗಿ ಹಂಚಿಕೆಯಾಗಿದೆಯೋ, ಇಲ್ಲವೊ ಎಂದು ಖಚಿತ ಪಡಿಸಿಕೊಳ್ಳುತ್ತಿದ್ದೆವು. ನಂತರ, ಒಬ್ಬರ ಬೋಂಡವನ್ನು ಮತ್ತೊಬ್ಬರು ಅಪಹರಿಸಲು ಒಳ್ಳೆಯ ಉಪಾಯ ಹುಡುಕುತ್ತಿದ್ದೆವು. ಅದರಂತೆಯೇ, ಸಮಯ ಹೊಂಚಿ, ಅಪಹರಿಸಿ ತಿನ್ದುಹಾಕಿ, ಅಮ್ಮನ ಕೈಯಲ್ಲಿ ಒದೆ ತಿಂದ ನೆನಪುಗಳು ಇನ್ನೂ ಹಸಿರಾಗಿದೆ. ಈ ಮಳೆಗೂ, ಮತ್ತು ಬೋಂಡಕ್ಕೂ ಅವಿನಾಭಾವ ಸಂಬಂಧ ಏರ್ಪಟ್ಟಿದ್ದು ಏಕೋ ಎಂದು ಬಹಳಷ್ಟು ಸಾರಿ ಅನಿಸುತ್ತದೆ. ಆದರೆ, ಈ ಎಲ್ಲ ಕಾರಣಗಳಿಂದ, ಈ ಸಂಬಂಧ ಬಹಳ ಮಧುರವಾದದ್ದು ಎಂದು ಅನಿಸುತ್ತದೆ. ಇಂದಿಗೂ ಆಫೀಸಿನ ಕ್ಯಾಂಟೀನಿನಲ್ಲಿ, ಆ ಸಮಯಕ್ಕೆ ಸಿಗುವ ಬೋಂಡ ತಿಂದಿದ್ದೇನೆ. ಆದರೆ, ಆ ಜಗಳ, ಕಚ್ಚಾಟ, ಅಮ್ಮನ ಪ್ರೀತಿ ಬೆರೆತ ಒದೆ ಮತ್ತು ಬೋಂಡದ ಸವಿ ಇಂದಿಗೂ ನೆನಪಿನ ಕಡಲೆ ಹಿಟ್ಟಿನಲ್ಲಿ ಮುಳುಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

<<ಅಂದು ನೆನೆಸಿದಾಗ ತಯಾರಾಗುತ್ತಿದ್ದ ಬೋಂಡ ಅಥವಾ ಪಕೋಡ ಇಂದು ಕೇವಲ ಮದುವೆಯ ಮನೆಯಲ್ಲಿ ಮತ್ತು ಹಬ್ಬಗಳಲ್ಲಿ ಮಾತ್ರ ಕಾಣುವಂತಾಗಿದೆ.>>
ನಮ್ಮ ಮನೇಲಿ ಹಾಗೇನೂ ಇಲ್ಲ... ಈಗ ಕೂಡ ಬೇಕೆಂದಾಗ ಬೋಂಡ ಸಿಗುತ್ತೆ..(ಕಡಲೆ ಹಿಟ್ಟಿಂದು ಒದೆಯಲ್ಲ ;) )
ಆದ್ರೆ ಅಪರೂಪಕ್ಕೊಮ್ಮೆ ಮಾತ್ರ ತಿನ್ನಬೇಕು ಅನ್ನಿಸೋದು...
<<ನಮ್ಮ ಪಾಲಿನ ಬೋಂಡಗಳನ್ನೂ ಎಣಿಸಿ,>>
ಈ ಲೆಕ್ಕಾಚಾರ ಏನಿದ್ರು ಸಧ್ಯ ನನ್ನ ತಮ್ಮನ ಡಿಪಾರ್ಟ್ಮೆಂಟ್... ಅವನೇ ಲೆಕ್ಕ ಹಾಕಿ ಎಲ್ಲರಿಗೂ ಹಂಚುತ್ತಾನೆ. ತಾನು ಸ್ವಲ್ಪ ಜಾಸ್ತಿ ತಗೊಂಡು...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮಾತೂ ಸರಿಯೇ...
ನೀವು ಹೇಳಿದಂತೆ ಮನೆಯಲ್ಲಿದ್ದಾಗ ನೆನೆಸಿದಾಗ, ಅಮ್ಮನ ಕೈಯಲ್ಲಿ ಮಾಡಿಸಿಕೊಂಡು ತಿನ್ನಬಹುದಾಗಿತ್ತು. ಆದರೆ ಮನೆಯಿಂದ ಹೊರಗಿರುವಾಗ, ಬೋಂಡದಂಥ ಸಣ್ಣ ವಸ್ತುಗಳೂ ಬಹಳ ದೊಡ್ಡದಾಗಿ ಕಾಣುತ್ತದೆ. ಸದ್ಯಕ್ಕೆ ನನ್ನದೂ ಅದೇ ಪರಿಸ್ಥಿತಿ. ಅದಕ್ಕಾಗಿ ಹಾಗೆ ಹೇಳಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಬೋಂಡಾ ಬೇಕಾದಾಗ ಮಾಡ್ತೀನ್ರಿ.....ಆದ್ರು ನೀವು ಹೇಳಿದ್ದು ನಿಜ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.