ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೬

5
  • ಈಗ ಇತಿಹಾಸಕ್ಕೆ ಸೇರಿದ ಊಟ ಬಡಿಸುವ ಒಂದು ಪದ್ದತಿ ಇತ್ತು. ಮಧ್ಯಾಹ್ನದಲ್ಲಿ ಎಲ್ಲರೂ ಮಡಿಯಲ್ಲಿರುವುದರಿಂದ ತಾಯಿಯಾದರೂ ಬಡಿಸಬಹುದು. ಹೆಂಡತಿಯಾದರೂ ಬಡಿಸಬಹುದು. ಆದರೆ ಸಾಯಂಕಾಲದ ಒಳಗೆ ಎಲ್ಲರೂ ಮೈಲಿಗೆ ಆಗುತ್ತಾರೆ. ಹೀಗಾಗಿ ಹೆಂಡತಿ ಬಡಿಸುವುದಿದ್ದರೆ ಅವಳು ಮಡಿಯನ್ನು ಉಟ್ಟ್ಟುಕೊಂಡು ಮಾತ್ರ ಬಡಿಸಬೇಕು. ತಾಯಿ ಬಡಿಸಿದರೆ ಅವಳಿಗೆ ಮಡಿಸೀರೆಯಿಂದ ವಿನಾಯತಿ ಇದೆ! ರಾತ್ರೆ ಊಟ ಬಡಿಸುವುದಕ್ಕಾಗಿಯೇ ಚಿಕ್ಕಿಮಡಿ ಎನ್ನುವ, ಮೈಮೇಲೆ ಚುಕ್ಕಿಗಳಿರುವ ಸೀರೆ ಇತುತ್ತಿತ್ತು. ತನ್ನ ಕೆಲಸ ಆದಮೇಲೆ ಆ ಮಡಿಯು, ಅಲ್ಲೇ ಮೇಲಿರುವ ಗಳದಮೇಲೆ ನಾಳೆ ರಾತ್ರಿಯವರೆಗೂ ವಿಕ್ರಮಾದಿತ್ಯನ ಬೇತಾಳದಂತೆ ನೇತಾಡುತ್ತಿರುತ್ತಿತ್ತು!! ಅದು ತೊಳೆಯದಿದ್ದರೂ ಮಡಿಯಾಗೇ ಇರುತ್ತದೆ!

  • ಗಂಡಸ್ಸರು ಊಟಕ್ಕೆ ಕುಳಿತುಕೊಳ್ಳುವುದಕ್ಕೂ ಹೆಂಗಸರು ಊಟಕ್ಕೆ ಕುಳಿತುಕೊಳ್ಳುವುದಕ್ಕೂ ಈ‌ ಹಿಂದೆ ಭಿನ್ನ ಭಿನ್ನ ಆಸನಗಳಿತ್ತು. ಹೆಂಗಸರು, ಗಂಡಸರಂತೆ ಸುಖಾಸನದಲ್ಲಿ ಕುಳಿತರೆ ಅವಳನ್ನು ಸಮಾಜ ಕೆಟ್ಟ ದ್ುಷ್ಟಿಯಲ್ಲಿ ನೋಡುತ್ತಿತ್ತು. ಹೆಂಗಸರ ಎಡಗಾಲು ಮಡಚಿಕೊಂಡೆ ಇರುತಿತ್ತು. ಆದರೆ ಬಲಗಾಲು ಮಡಚಿದ ನಂತರ ಮೊಳಕಾಲು ಸಂಧಿಯು ಮೇಲ್ಮುಖ ಲಂಬವಾಗಿದ್ದು ಪಾದಗಳು ಒಂದಕ್ಕೊಂದು ಹತ್ತಿರವಾಗಿ ಇರಬೇಕು

  • ಒಂದು ದಿನ ಮಧ್ಯಾನ್ಹ ಮೂರುಗಂಟೆಗೆ ನಮ್ಮ ಮನೆಯಲ್ಲಿ ನಾನೂ ಸೇರಿದ್ದಂತೆ, ನಾಲ್ವರು ಊಟಕ್ಕೆ ಕುಳಿತಿದ್ದೆವು. ಎಲ್ಲರಿಗೂ ಭಯಂಕರ ಹಸಿವು ಆಗಿತ್ತು. ಬಾಳೆ ಎಲೆಯಲ್ಲಿ ಜಾಗ ಇಲ್ಲವೆಂದು ಬೇರೆ ಪ್ಲೇಟಿನಲ್ಲಿ ಸ್ವೀಟನ್ನು ನಮ್ಮ ಅತ್ತಿಗೆಯವರು ಬಡಿಸಿದ್ದರು. ನಾವೆಲ್ಲರೂ ಅನ್ನವನ್ನು ಊಟಮಾಡುತ್ತಾ ಸ್ವೀಟನ್ನೂ ಖಾಲಿಮಾಡಿದೆವು. ಒಬ್ಬನು ಮಾತ್ರ ಸ್ವೀಟನ್ನು ತಿನ್ನುತ್ತಿರಲೇ ಇಲ್ಲ. ಅನ್ನ ಬಡಿಸಿ ಎಂದೇ ಹೇಳುತ್ತಿದ್ದ. ಸ್ವೀಟು ತಿಂದು ಅನ್ನವನ್ನು ಹಾಕಿಕೊಳ್ಳಿ ಎಂದು ನಮ್ಮ ಅತ್ತಿಗೆಯ ವರಾತ. ಅವನದು ಅನ್ನ ಬಡಸಿ ಎಂಬ ವರಾತ. ಅವನ ಸ್ವೀಟಿನ  ಪಾಲು ನಮ್ಮ ಮನೆಯ ಆಕಳಿಗೇ ಹೋಗುತ್ತದೆ. ಎಂದು ನಾವೆಲ್ಲರೂ ಲೆಕ್ಕ ಹಾಕಿದ್ದೆವು. ಹಸಿದಾತ, ಹೊಟ್ಟೆತುಂಬ ಅನ್ನ ಉಂಡಮೇಲೆ. ಅದಷ್ಟೂ ಸ್ವೀಟನ್ನು ಸಾವಕಾಶವಾಗಿ ತಿಂದು ಮುಗಿಸಿದಾಗ ನಮಗೆ ಸಮಾಧಾನ ಹಾಗೂ ಆಶ್ಚರ್ಯ. ಅವನು ಮುಸಲ್ಮಾನರವನಾಗಿದ್ದ. ಉಳಿದಿಬ್ಬರೂ ಮುಸಲ್ಮಾನರಾಗಿದ್ದರೂ ಪಂಕ್ತಿನೋಡಿ (ನನ್ನನ್ನು ನೋಡಿ)ಉಂಡರು.

  • ಊಟಕ್ಕೆ ಸಾಧಾರಣವಾಗಿ ಎಲ್ಲಕಡೆಗೂ ಈಗೀಗ ಸ್ಟೀಲ್ ತಟ್ಟೆ ಇರುತ್ತದೆ. ಈ ಹಿಂದೆ ಸಾಧಾರಣವಾಗಿ ಬಾಳೇ ಎಲೆ ಅಥವಾ ಮುತ್ತುಗದ ಎಲೆಯಿಂದ ಮಾಡಿದ ಪತ್ರಾವಳಿ ಇರುತ್ತಿತ್ತು. ನಾನು ಧರ್ಮಸ್ಥಳದಲ್ಲಿ ಒಮ್ಮೆಗೆ ಅಡಿಕೆ ಮರದ ಹಾಳೆಯಲ್ಲಿ ಊಟಮಾಡಿದ್ದೇನೆ. (ಈಗ ಹಾಳೆಯಿಂದ ಮಾಡಿದ ತಟ್ಟೆಗಳು ಎಲ್ಲಕಡೆಗೆ ಕಾಣಸಿಗುತ್ತವೆ.). ಅತ್ಯಂತ ವಿಚಿತ್ರ ಎನ್ನಿಸಿದ್ದು, ತಿಪಟೂರು ತಾಲೂಕಿನಲ್ಲಿ ಬಾಳೆಯ ರೆಂಬೆಯಲ್ಲಿ ಊಟಮಾಡಿದಾಗ .(ಬಾಳೇಗಿಡಕ್ಕೆ ರೆಂಬೆ ಇರುತ್ತದೆಯೇ? ಹಾಗೇನೂ ಇಲ್ಲ. ಬಾಳೆಗಿಡದ ಸಿಪ್ಪೆಗೆ ಬಾಳೆ ರಂಬೆ / ರೆಂಬೆ ಎನ್ನುತ್ತಾರೆ.)

  • ಈಗೀಗ ಕೆಲವು ಹೋಟೆಲ್ ಗಳಲ್ಲಿ ಚಪಾತಿ ಬಡಿಸಲೂ ಚಮಚ ಚಿಮಟಗಳನ್ನು ಉಪಯೋಗಿಸುತ್ತಾರೆ. ಕೈಗೆ ಗವಸು ಹಾಕಿಕೊಂಡಿರುತ್ತಾರೆ. ನಮ್ಮ ಬಾಲ್ಯದಲ್ಲಿ ಅನ್ನವನ್ನು ಅಡಿಕೆಯ ಹಾಳೆಯಲ್ಲಿ ತುಂಬಿಕೊಂಡು ಕೈಯಲ್ಲೇ ಬಡಿಸುತ್ತಿದ್ದರು. ಚಮಚ ಸೊಟ್ಟುಗಗಳು ಕಟ್ಟಿಗೆಯದು ತೆಂಗಿನ ಚಿಪ್ಪಿನದು ಅಥವಾ ಪೋಸ್ಟಕಾರ್ಡ್ ಸೈಜಿನಲ್ಲಿ ಕತ್ತರಿಸಿಕೊಂಡ .ಹಾಳೇ ಕಡಿ ಯಾಗಿರುತ್ತಿತ್ತು

  • "ವಡೆ ಪಾಯಸದ್ದ ಊಟ" ಎಂದರೆ ಎಲ್ಲರೂ ಅದನ್ನು ಶ್ರಾದ್ಧದ ಊಟ ಎಂತಲೇ ಅರ್ಥೈಸುತ್ತಾರೆ. ಹಾಗೇನೂ ಇಲ್ಲ. ಹಬ್ಬದ ದಿನಗಳಲ್ಲೂ ವಡೆ ಪಾಯಸ ಮಾಡುವುದಿದೆ. ಹಾಲಿ ಒಂದು ದೇವಾಲಯದ ಬ್ರಹ್ಮೋತ್ಸವದಲ್ಲಿ ವಡೆಪಾಯಸ ಮಾಡಿದ್ದರು. ಈ‌ ಕಾರ್ಯಕ್ರುಮಕ್ಕೆ ವಡೆ ಪಾಯಸ ಕಂಪಲ್ಸರಿ ಐಟೆಮ್.

  • ಒಂದನೇ ಪಂಕ್ತಿಯಲ್ಲಿ ಜನ ಉಂಡು ಎದ್ದಮೇಲೆ, ಸೆಗಣಿ ಹಾಕಿ ನೆಲ ಸಾರಿಸದೇ ಯಾರೂ ಮುಂದಿನ ಪಂಕ್ತಿಯಲ್ಲಿ , ಊಟಕ್ಕೆ ಕೂಡ್ರುತ್ತಿರಲಿಲ್ಲ. ಬಹುಷಃ ಈಗ ಸೆಗಣಿ ಸಾರಿಸಿದರೆ ಯಾರೂ ಊಟಕ್ಕೆ ಬರುವುದಿಲ್ಲ.

  • ನಮ್ಮ ಸಂಸ್ಥೆಯ ಕೆಲವು ಸಿಬ್ಬಂದಿಗಳಿಗೆ ಒಂದು ದಿನ ಒಬ್ಬಾತ ಜಿಂಕೆ ಮಾಂಸವನ್ನು ಮಾರಿದೆ.. ಅದು ಕಳ್ಳ ವ್ಯಾಪಾರ. ಖುಷಿಯಲ್ಲಿ ಅಡಿಗೆ ಮಾಡಿ ಊಟಮಾಡಿದರು. ಮರುದಿನ, ದಡ್ಡತನ ಬುದ್ಧಿತನ ಎರಡೂ ಒಟ್ಟಿಗೆ ಇರುವ ಒಬ್ಬ ಸಿಬ್ಬಂದಿಗೆ, ಇನ್ನೊಬ್ಬ ಸಿಬ್ಬಂದಿ ಗುಟ್ಟಿನಲ್ಲಿ ಹೇಳಿದ. "ಕೆಲಸ ಕೆಟ್ಟೋತು. ಅದು ಜಿಂಕೆ ಮಾಂಸ ಅಲ್ಲಾಗಿತ್ತು! ಅದು ಕತ್ತೆಮಾಂಸ ಆಗಿತ್ತು!!” ಜಿಂಕೆಮಾಂಸ ತಿಂದೆ ಎಂತಲೇ ಇಂದಿನವರೆಗೂ ಬಾಯಿ ಚಪ್ಪರಿಸುತ್ತಿದ್ದ ಆತನಿಗೆ ವಿದ್ಯುತ ಶಾಕ್ ಕೊಟ್ಟಂತಾಯಿತು. ಸಂಕಟ ಪಟ್ಟ .ಗೋಳಾಡಿದ. ಜಾಪಾಳಮಾತ್ರೆ ನುಂಗಿ ಹತ್ತಿಪ್ಪತ್ತುಸಾರೆ ಹೊಟ್ಟೆಯನ್ನು ಕ್ಲೀನಾಗಿ ಪ್ಲಷ್ ಮಾಡಿಕೊಂಡ ಆದರೂ ಮನಸ್ಸಿಗೆ ಸಮಾಧಾನ ಇಲ್ಲ. ತಳಮಳ ಕಳವಳ ತಲ್ಲಣ ಎಲ್ಲವೂ ಏಕಕಾಲಕ್ಕೆ ಸುರುವಾಯಿತು. ಅನಂತರ ಆತನೇ ಒಂದು ಉಪಾಯವನ್ನು ಕಂಡುಕೊಂಡ. ದಕ್ಷಿಣಕನ್ನಡದ ಪ್ರಸಿದ್ಧ ದೇವರಿಗೆ ಇಪ್ಪತ್ತೈದು ರೂಪಾಯಿ ಮನಿಯಾರ್ಡರ್ ಮಾಡಿ --------- " ತಂದೆಯೇ, ಹೊಟ್ಟೆಯಲ್ಲಿ ಹಾಕಿಕೋ!!” ಎಂದು ಆರ್ಥನಾಗಿ ಪ್ರಾರ್ಥಿಸಿ ನಿರಾಳಗೊಂಡ. ಆ ವೆಜಿಟೇರಿಯನ್ ದೇವರು ಏನನ್ನು ಹೊಟ್ಟೆಗೆ ಹಾಕಿಕೊಂಡನೋ ಗೊತ್ತಿಲ್ಲ.!!!!!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ತುಂಬಾ ಚೆನ್ನಾಗಿದೆ. <<ಆ ವೆಜಿಟೇರಿಯನ್ ದೇವರು ಏನನ್ನು ಹೊಟ್ಟೆಗೆ ಹಾಕಿಕೊಂಡನೋ ಗೊತ್ತಿಲ್ಲ.!!!!!! :):)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.