ಪ್ರಕೃತಿ

0

ನಾ ಬೇಡಿದೆ
ಜೀವನದಾ ಬಳ್ಳಿಯು ಸೊರಗುತಿರುವಾಗ
ನೀರಿಲ್ಲದೆ ತಾ ಒಣಗುತಿರುವಾಗ
ಆಸೆಗಳ ಕಾಮನ ಬಿಲ್ಲನ್ನು ಕಟ್ಟಿ
ಚಿಗುರುವ ಚೈತನ್ಯ ತುಂಬುವ
ಸುಧೆಯಾಗು ನೀನು, ಮಳೆಯಾಗು ನೀನು ……

ನಿರಾಸೆಯ ಗವಿಯ ನಾ ಹೊಕ್ಕಿರುವಾಗ
ಕತ್ತಲ ಭೀತಿಯಿಂದ ತತ್ತರಿಸಿರುವಾಗ
ಭಯಾನಕ ಕಗ್ಗತ್ತಲ ಕೊಂದು
ಬಾಳ ದಾರಿಯ ತೋರುವ
ಆಶಾಕಿರಣವಾಗು ನೀನು, ಬೆಳಕಾಗು ನೀನು…….

ಕಷ್ಟಗಳ ಚಳಿಯಲ್ಲಿ ನಾ ನಡುಗಿರುವಾಗ
ದುಷ್ಟರ ಅಟ್ಟಹಾಸದೆದುರು ಕಂಗೆಟ್ಟಿರುವಾಗ
ಚಳಿಯ ಮಾರುತಗಳ ಎದುರಿಸಿ
ದುಷ್ಟರ ಹಾದಿಯನು ದುರ್ಗಮಗೊಳಿಸುವ
ತಡೆಯಾಗು ನೀನು, ಹೆಬ್ಬಂಡೆಯಾಗು ನೀನು…….

ಭವದ ಬೇಗೆಯಲಿ ನಾನು ಬೇಯುತಿರುವಾಗ
ನೋವುಗಳ ತಾಪದಿ ಪರಿತಪಿಸಿರುವಾಗ
ಬಿಸಿಲ ಬೇಗೆಯ ತಣಿಸಿ ಜೀವಕ್ಕೆ ತಂಪನ್ನೀಯುವ
ವರವಾಗು ನೀನು, ತಂಗಾಳಿಯಾಗು ನೀನು……

ಮನದ ಮೂಲೆಯಲ್ಲೊಂದು ಧ್ವನಿ ನುಡಿಯಿತು....

ಹೀಗೇಕೆ ಬೇಡುತಿರುವೆ ನೀ ನನನ್ನು
ಗುರುತಿಸಿಲ್ಲವೇ ನೀನು ನಿನ್ನ ಶಕ್ತಿಯನ್ನು?
ನಿನಗಿರುವ ಗುರಿ ನಿನ್ನಾಕಾಂಕ್ಷೆಯ ಕಾಮನಬಿಲ್ಲು
ನಿನ್ನ ಶ್ರಮವೇ ಅದಕೆ ನೀರೆರೆವ ಮಳೆ
ನಿನ್ನ ಛಲವೇ ನಿನಗೆ ದಾರಿ ತೋರುವ ಬೆಳಕು
ನಿನ್ನ ಧೈರ್ಯವೇ ಹೆಬ್ಬಂಡೆ ನಿನ್ನ
ಜೀವನದಲ್ಲಿರುವ ಪ್ರೀತಿ ವಿಶ್ವಾಸಗಳೇ ತಂಗಾಳಿ

ಈ ಶಕ್ತಿಗಳಿದ್ದು ಈ ದೈನ್ಯತೆ ನಿನಗೇಕೆ?
ನೀ ಸಮರ್ಥನಾಗಿರುವಾಗ ನನ್ನ ಹಂಗೇಕೆ?
ಇವೆಲ್ಲವುಗಳ ಸದ್ವಿನಿಯೋಗ ನೀ ಮಾಡು
ಸಿಗುವುದು ಕೀರ್ತಿ- ಯಶಸ್ಸು ನೀ ನೋಡು

ನಾನು 2 ಪಿ.ಯು.ಸಿಯಲ್ಲಿದ್ದಾಗ ಬರೆದ ಏಕೈಕ ಕವನ ಇದು....ವಾರ್ಷಿಕ ಪರೀಕ್ಷೆಗಳು ಮುಗಿದು ಸಿ.ಇ.ಟಿ.ಗೆ ಓದುವಾಗ ಬರೆದದ್ದು.... ನಾವೇನೇನನ್ನು ಬಯಸುತ್ತೇವೋ ಅದೆಲ್ಲ ನಮ್ಮಲ್ಲೇ ಇದೆ…..ಒಳ್ಳೆಯದಾಗಿರಲಿ ಅಥವಾ ಕೆಟ್ಟದ್ದಾಗಿರಲಿ ಅದು ನಮ್ಮಿಂದಲೇ ಆಗಿರುತ್ತೆ.ಹಾಗಾಗಿ ನಾವು ಈಗ ಇರೋ ಪರಿಸ್ಥಿತಿಗೆ ನಾವೇ ಜವಾಬ್ದಾರರು…. ನಮ್ಮ ಜೀವನವನ್ನು ಬೇರೆ ಯಾರೋ ಬಂದು ಸುಧಾರಿಸಲಿ ಅನ್ನೋದು ಮೂರ್ಖತನ ಅಲ್ವ……

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.