ಈ ಪತ್ರ ನಿನಗಾಗಿ

0

 

ಪ್ರೀತಿಯ ಗೆಳೆಯಾ,

ಇಂದೇಕೋ  ನಿನ್ನ ನೆನಪಾಗುತ್ತಿದೆ :-(  ಆದರೆ ನೀನೆಲ್ಲಿದ್ದಿ? ಹೇಗಿದ್ದೀ? ಇದ್ಯಾವುದರ ಬಗ್ಗೆಯೂ ನನಗೆ ತಿಳಿದಿಲ್ಲ.  ನೀನು ಯಾಕೆ ಹೀಗೆ ಮಾಡಿದೆ? ಇದಕ್ಕೂ ನನ್ನ ಬಳಿ ಉತ್ತರವಿಲ್ಲ.  ನಾನು ನಿನಗೆ ಬೇಕಾದಷ್ಟು ಸಲ ನೋವನ್ನುಂಟು ಮಾಡಿದ್ದೇನೆ.  ಬೇಸರ ಮಾಡಿದ್ದೇನೆ. ಕಿರಿಕಿರಿ ಮಾಡಿದ್ದೇನೆ.  ಇವೆಲ್ಲವುಗಳನ್ನೆಲ್ಲಾ ಕ್ಷಮಿಸುತ್ತಾ ಬಂದ ನೀನು, ನನ್ನ ಬಳಿ ಮಾತು ನಿಲ್ಲಿಸಿದ್ದಕ್ಕೆ ಕಾರಣವೇ ತಿಳಿಯಲಿಲ್ಲ.  ನಗುನಗುತ್ತಲೇ ‘ನಿನ್ನ ಮಾತುಗಳಲ್ಲಿ ಪ್ರೀತಿ, ಕಾಳಜಿ, ತುಂಟತನ ಎಲ್ಲವೂ ತುಂಬಿದೆ.  ನನಗೆ ನಿನ್ನೊಂದಿಗೆ ಮಾತಾಡುವುದೇ ಅತ್ಯಂತ ಮಧುರ ಕ್ಷಣ’ವೆಂದ ನೀನು ಆ ಮಧುರ ಕ್ಷಣಗಳನ್ನು ಮರೆತು ಹೋದದೆಲ್ಲಿಗೆ? ನಾನಾಗೇ ಕರೆ ನೀಡುವವರೆಗೆ ನೀನು ನನಗೆ ಕರೆ ನೀಡಬಾರದು ಎಂದಿದ್ದಾದರೂ ಏಕೆ?  ನಾ ನಿನಗೆ ಕೊಟ್ಟ ಮಾತಿನಂತೆ ಇದುವರೆಗೂ ನಿನಗೆ ಕರೆ ನೀಡಿಲ್ಲ, ನೀನೆಲ್ಲಿರುವೆ ಎಂಬುದು ತಿಳಿಯಲಿಲ್ಲ.  ಹೀಗೇಕೆ ಮಾಡಿದೆ?  ತಪ್ಪುಗಳನ್ನು ಮಾಡಿದಾಗಲೂ ನೀಡದಿದ್ದ ಶಿಕ್ಷೆಯನ್ನು ಈಗ ಕೊಡುವ ಅಗತ್ಯವಿತ್ತೇ?  ನನಗೆ ನೀನ್ಯಾರೆಂದು ಅರ್ಥವಾಗಿರದಿದ್ದರೂ, ನಿನಗೆ ನಾನ್ಯಾರೆಂದು ಅರ್ಥವಾಗಿದ್ದೆ ಅಲ್ಲವೇ?  ನೀ ಹತ್ತಿರವಿದ್ದರೆ ನನಗೆಂದಿಗೂ ಬುದ್ಧಿ ಬರುವುದಿಲ್ಲವೆಂದುಕೊಂಡೆಯಾ? ಎಲ್ಲವೂ ಕೊನೆಯಿರದ ಪ್ರಶ್ನೆಗಳು! ಉತ್ತರಿಸಲು ನೀನೆದುರಿಗೆ ಇಲ್ಲ.

ಚಿಕ್ಕವಯಸ್ಸಿನಲ್ಲಿ ಗೆಳೆತನದ ಅವಶ್ಯಕತೆ ನನಗೆಂದಿಗೂ ಇರಲಿಲ್ಲ.  ಅಂದರೆ ನನಗೆ ಯಾರೂ ಫೆಂಡ್ಸ್ ಇರಲೇ ಇಲ್ಲವೆಂದಲ್ಲ.  ಬೇಕಾದಷ್ಟು ಇದ್ದರು.  ಪ್ರತಿ ಬರ್ತ್ ಡೇ ಬಂದಾಗಲೂ ನನಗಿಷ್ಟು ಗ್ರೀಟಿಂಗ್ಸ್ ಬಂತು ಎಂದು ಹೇಳಿಕೊಳ್ಳೋದು ನನಗೊಂದು ಒಂದು ಹೆಮ್ಮೆಯ ವಿಷಯವಾಗಿತ್ತು. ಆದರೆ ಕ್ಯಾಂಟಿಟಿ ಇದ್ದರೂ ಅದ್ಯಾವುದರಲ್ಲೂ ಕ್ವಾಲಿಟೀ ಇರಲಿಲ್ಲ.  ಅಂದರೆ ನಿಜವಾದ ಗೆಳೆತನವೆಂದರೇನು ಅನ್ನೋದು ಗೊತ್ತಿರಲಿಲ್ಲ.  ಆದರೆ ನಿನ್ನ  ಜೊತೆಗೆ ಆದ ಗೆಳೆತನ, ಗೆಳೆತನ ಎಂದರೇನು ಅನ್ನುವುದನ್ನು ಕಲಿಸಿತು. ನಾನು ಬಹಳ ಸಂಕೋಚ ಹಾಗೂ ನಾನೇನಕ್ಕೂ ಪ್ರಯೋಜನವಿಲ್ಲ ಎಂಬ ಕೀಳರಿಮೆಯಿಂದ ಬಳಲುತ್ತಿದ್ದೆ.  ನನ್ನ ಅಮ್ಮನ ಬಳಿಯೂ ಮುಕ್ತವಾಗಿ ಮಾತನಾಡಲಾಗುತ್ತಿರಲಿಲ್ಲ. ಅಷ್ಟು ಸಂಕೋಚವಿದ್ದ ನನಗೆ,  ಅದೇನೋ ಗೊತ್ತಿಲ್ಲ! ನೀನು ಕೇಳುತ್ತಿದ್ದೇಯೋ ಇಲ್ಲವೋ? ನಾನಂತೂ ಪ್ರತಿಯೊಂದನ್ನೂ ಮುಜುಗರವಿಲ್ಲದೆ ನಿನ್ನ ಬಳಿ ಹೇಳಿಕೊಳ್ಳುತ್ತಿದ್ದೆ.  ನಾನೇನನ್ನೂ ಹೇಳಬಯಸಿದ್ದೇನೆ ಎನ್ನುವುದು ನನ್ನ ಕಣ್ಣುಗಳನ್ನು ನೋಡಿಯೇ ನೀನರ್ಥ ಮಾಡಿಕೊಳ್ಳುತ್ತಿದ್ದೆ. ಅಂತಹ ನನ್ನನ್ನು ಪೂರ್ತಿ ಅರ್ಥ ಮಾಡಿಕೊಳ್ತಿದ್ದ ನಿನ್ನಂಥ ಗೆಳೆಯನನ್ನು ದಿನದ ೨೪ ಗಂಟೆಗಳು ಜೊತೆ ಇರೋ ತರಹ ಮಾಡಿಕೊಂಡರೆ ಜೀವನ ಸೊಗಸು, ಗೆಳೆಯನೇ ಗಂಡನಾದರೆ ಸ್ವರ್ಗಕ್ಕೆ ಮೂರೇ ಗೇಣು ಎಂದು ತೀರಾ ಸಂಕುಚಿತವಾಗಿ ಯೋಚಿಸಿದೆ. ನಾನು ಪ್ರೊಪೋಸ್ ಮಾಡಿದರೆ, ನಿನಗೆ ಏನನ್ನಿಸಬಹುದು? ನೀನು ತಿರಸ್ಕರಿಸಿದರೆ ಒಂದು ಸುಂದರ ಗೆಳೆತನ ಹಾಳಾಗುತ್ತಲ್ವಾ? ಒಬ್ಬರ ಮುಖ ಮತ್ತೊಬ್ಬರು ನೋಡಲು ಸಾಧ್ಯವೇ?  ಉಹೂ, ಇದ್ಯಾವುದನ್ನೂ ನಾನು ಯೋಚಿಸಲೇ ಇಲ್ಲ. ನನ್ನ ಜೊತೆಗಿದ್ದ ಇನ್ನಿತರ ಗೆಳತಿಯರ ಒತ್ತಾಯವೂ ನನ್ನಲ್ಲಿದ್ದ ಒಂದಷ್ಟು ಅಳುಕನ್ನು ದೂರ ಮಾಡಿತು.  ಅವನು ತಿರಸ್ಕರಿಸಲು ಸಾಧ್ಯವೇ ಇಲ್ಲಾ ಅನ್ನೋ ಅಹಂ ನನ್ನ ತಲೆಗೇರಿತ್ತು.  ಒಪ್ಪಿಕೊಂಡೇ ಒಪ್ಪಿಕೊಳ್ತಾನೆ ಅನ್ನೋದು ನನ್ನ ಬಲವಾದ ನಂಬಿಕೆಯಾಗಿತ್ತು. ಪ್ರೊಪೋಸ್ ಮಾಡಿಬಿಟ್ಟೆ.  ಆದರೆ ನೀನು ಒಪ್ಪಲಿಲ್ಲ.  ರಿಜೆಕ್ಟ್ ಮಾಡಿಬಿಟ್ಟೆ. ರಿಜೆಕ್ಟ್ ಮಾಡಿ ದೂರವಾಗಿದ್ದರೆ, ಬಹುಶಃ ನನಗೆ ನಿನ್ನ ಹಾಗೂ ನಿನ್ನ ಗೆಳೆತನದ ವ್ಯಾಲ್ಯೂ ಅರ್ಥವಾಗ್ತಾ ಇರಲಿಲ್ಲ.  ಆದರೆ ಅಲ್ಲೂ ನೀನು ಗೆಳೆತನಕ್ಕೆ ಎಷ್ಟು ಬೆಲೆ ಕೊಟ್ಟೆ ಅಂದರೆ, ದಿನದ ೨೪ ಗಂಟೆಗಳು ಜೊತೆಯಲ್ಲಿ ಇಲ್ಲದಿದ್ದರೂ, ಅವಶ್ಯಕತೆ ಇದ್ದಾಗ ನಾನು ನಿನ್ನ ಹಿಂದೆ ಇದ್ದೇ ಇರ್ತೀನಿ ಅನ್ನೋದನ್ನು ತೋರಿಸಿಬಿಟ್ಟೆ. ನನ್ನ ಯಾವ ಸಂತೋಷದಲ್ಲೂ ಡೈರೆಕ್ಟಾಗಿ ಪಾಲ್ಗೊಳ್ಳದಿದ್ದರೂ, ನನ್ನ ದುಃಖದಲ್ಲಿ ಮಾತ್ರ ೧೦೦% ಭಾಗವಹಿಸಿದೆ. ನನ್ನ ಜೀವನದ ಪ್ರತಿ ಗಳಿಗೆಯಲ್ಲೂ ದೈಹಿಕವಾಗಿ ನನ್ನ ಜೊತೆ ಇಲ್ಲದಿದ್ದರೂ, ಮಾನಸಿಕವಾಗಿ ಹೆಜ್ಜೆ, ಹೆಜ್ಜೆಗೂ ನನ್ನ ಜೊತೆಗೆ ನೀನಿದ್ದಿ.  ಇವತ್ತಿಗೂ ನನ್ನ ಪ್ರತಿಯೊಂದು ಸಂಕಟದ ಗಳಿಗೆಯಲ್ಲೂ ನೀನು ಹೇಳಿದ ಮಾತುಗಳು ಕಿವಿಯಲ್ಲಿ ಅನುರಣಿಸುತ್ತವೆ.  ಮೈಕೊಡವಿಕೊಂಡು ಮೇಲೆಳಲು ಪ್ರೇರೇಪಿಸುತ್ತವೆ. ಆದರೆ ಇಂತಹ ಒಂದು ಗೆಳೆತನವನ್ನು ನಾನು ಅಪಾರ್ಥ ಮಾಡಿಕೊಂಡೆ ಅನ್ನೋ ಗಿಲ್ಟ್ ನನ್ನನ್ನು ಸಿಕ್ಕಾಪಟ್ಟೆ ನಿನ್ನಿಂದ ದೂರ ಓಡಿಸಿಬಿಟ್ಟಿತು. ನೀನು ನನ್ನ ಜೀವದ ಗೆಳೆಯನಾಗಿದ್ದೆ.  ನನ್ನೆಲ್ಲಾ ಕಷ್ಟಗಳನ್ನೂ ನಿನ್ನ ಬಳಿ ಹೇಳಿಕೊಂಡು ಆ ಗೆಳೆತನದ ಪ್ರಯೋಜನವನ್ನೇನೋ ಪಡೆದುಕೊಂಡೆ. ನನ್ನ ಅನುಭವದ ಗಾತ್ರವನ್ನು ಹಿಗ್ಗಿಸಿಕೊಂಡೆ. ಆದರೆ ದುರಂತವೆಂದರೆ, ನಾನು ಯಾವಾಗಲೂ ಈ ಗೆಳೆತನದ ರಿಸೀವರ್ ಮಾತ್ರ ಆಗಿಬಿಟ್ಟೆ. ನಾನೆಂದಿಗೂ ನಿನ್ನ ಗೆಳತಿಯಾಗಲಿಲ್ಲ. ನೀನೆಂದಿಗೂ ನಿನ್ನ ಕಷ್ಟಗಳೇನು? ನೋವೇನು? ಇದ್ಯಾವುದನ್ನೂ ನನ್ನ ಬಳಿ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ.  ಈ ವಿಷಯದಲ್ಲಿ ನನ್ನನ್ನು ದೂರವಿಟ್ಟುಬಿಟ್ಟೆ.  

ನೀನು ದೂರವಾದ ಬಳಿಕ ಗೆಳೆತನವೆಂದರೇನು ಎನ್ನುವುದು ಅರ್ಥವಾಗುತ್ತಿದೆ. ಗೆಳೆತನವೆಂದರೆ ಬರೇಯ ಟೈಮ್ ಪಾಸ್ ಅಲ್ಲ.  ಅಪ್ಪನ ರಕ್ಷಣೆ, ಅಮ್ಮನ ವಾತ್ಸಲ್ಯ, ಅಣ್ಣನ ಕೀಟಲೆ,  ತಮ್ಮನ ತುಂಟತನ, ಅಕ್ಕ, ತಂಗಿಯರ ಕಾಳಜಿ, ಗಂಡನ ಪ್ರೀತಿ, ಮಕ್ಕಳ ಮುಗ್ದತೆ ಎಲ್ಲವೂ ಒಂದಿಡೀ ಗೆಳೆತನದಲ್ಲಿಯೇ ಸಿಕ್ಕಿಬಿಡುವುದು.  ಅದನ್ನು ನಾನು ಗಂಡನೆಂಬ ಬಂಧನದಲ್ಲಿ ಸಿಲುಕಿಸಿಬಿಡಲು ಯೋಚಿಸಿದ್ದಾದರೂ ಹೇಗೆ? ನನಗೆ ಈ ಗಿಲ್ಟ್ ನಿಂದ ಹೊರಬರಲು ಸಾಧ್ಯವಾಗಲೇ ಇಲ್ಲ.  ಇಂದು ನಿನ್ನ ಹುಟ್ಟಿದ ಹಬ್ಬ.  ಯಾರು ಮರೆತರೂ, ನಾನು ಮರೆಯಲಾರೆನೆಂದು ನಿನಗೂ ಕೂಡ ಗೊತ್ತಿರುತ್ತದೆ.  ಇಂದಾದರೂ ನೀನು ಕರೆ ಮಾಡುವೆಯೆಂದು ನಂಬಿದ್ದೇನೆ.  ನಿನ್ನ ಕರೆಗಾಗಿ ಕಾಯುತ್ತಿರುವ .................

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನನಗೆ ನೆನಪಾಗುವವರಿಗೆಲ್ಲಾ ನಾನೂ ನೆನಪಾಗಬೇಕೇಕೆ? ನಾನು ನೆನೆವವರೆಲ್ಲಾ ನನ್ನನ್ನೂ ನೆನೆಯಬೇಕೆಂಬಾಸೆ ಏಕೆ? :) -ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

" ಸವಿ ನೆನಪುಗಳು ಬೇಕು ಸವಿಯಲಿ ಬದುಕು... :) " ಬದುಕು ಸವಿಯಲು ಹಾಗು ಬದುಕು ಸವೆಯಲು ಸವಿ ನೆನಪುಗಳು ಅತ್ಯವಶ್ಯಕ . ಜೀವನದಲ್ಲಿ ಯಾವುದೂ ಬೇಕೆಂದು ಆಗುವಂಥದಲ್ಲ..ಆಗಿ ಹೋಗುತ್ತವೆ ಅಷ್ಟೇ. ಪ್ರತಿಷ್ಠೆಯನ್ನು ಬದಿಗಿಟ್ಟು ಕ್ಷಮೆಯ ಮೂಲಕ ಸಂಬಂಧಗಳನ್ನು ಉಳಿಸಿಕೊಳ್ಳಲು ಸಾಧ್ಯವಾ ????...ಒಮ್ಮೆ ಪ್ರಯತ್ನಿಸಿ ನೋಡಿ.. ಕಳಚಿದ ಗೆಳೆತನದ ಕೊಂಡಿ ಮತ್ತೆ ಬೆಸೆಯಲೆಂದು ತುಂಬು ಹೃದಯದಿಂದ ಪ್ರಾಮಾಣಿಕವಾಗಿ ಹಾರೈಸುತ್ತೇನೆ. ಸವಿಯೊದಗೆಗಳೊಂದಿಗೆ, ಪುಟ್ಟಕೊಳ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಷ್ಠೆ ಎನ್ನುವುದು ನಮ್ಮಿಬ್ಬರ ಮಧ್ಯೆ ಇರಲಿಲ್ಲ. ಆದರೆ ಈ ಮೌನ ಮಾತ್ರ ಏಕಾಗಿ ಎಂಬುದನ್ನು ಅರಿಯದೇ ಹೋದೆನು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಚರ, ಭಾವನೆಗಳೇ ಹೀಗೆ ..ವ್ಯಕ್ತ ಪಡಿಸೋದೆ ಕಷ್ಟ..ಒಂದ್ವೇಳೆ ಒಮ್ಮೆ ಹೇಳಹೊರಟರೆ ಮತ್ತೆ ಮುಗಿಯದು ಅವು..ನೆನಪುಗಳು, ದೂರಾದ ಮೇಲೆಯೇ ಜಾಸ್ತಿ ಕಾಡುವುದು..ಅದೇನೇ ಇರಲಿ .ಕಾದಿರುವ ನಿಮ್ಮ ನಿರೀಕ್ಷೆ ಬೇಗ ಕೈಗೂಡಲಿ :) ವಂದನೆಗಳೊಂದಿಗೆ ವಾಣಿ ಶೆಟ್ಟಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.