ನೆನಪುಗಳು, ನೆನಪಿನಂಗಳದ ಹೊರಗೆ

3

ಸಣ್ಣ ಮನೆ, ಆಗ. ಬೆಳಗಾದರಾಯ್ತು, ಅಪ್ಪ ಸ್ವಿಚ್ ಆನ್ ಮಾಡಿದ ರೇಡಿಯೋ ನಮ್ಮೆಲ್ಲರನ್ನೂ ಎಚ್ಚರಿಸಿಬಿಡುತ್ತಿತ್ತು. ಪಿಟೀಲು ಚೌಡಯ್ಯನವರ ವಯೋಲ ಟ್ಯೂನು ನಮಗೆಲ್ಲ ಸುಪ್ರಭಾತ. ನಂತರ ರೇಡಿಯೋ ವಂದೇ ಮಾತರಂ ಗುನುಗುತ್ತಿದ್ದರೆ ನಮಗೆಲ್ಲ ಮುಖ ತೊಳೆಯದೆಯೇ ಫ್ರೆಶ್ ಆದಂತೆ! (ಆದರೂ ಮುಖ ತೊಳೆಯದಿದ್ದರೆ ಕಾಫಿ ಸಿಗೋದಿಲ್ಲ ಅನ್ನೋ ಕಾರಣಕ್ಕೆ ಕಣ್ಣು ಮುಚ್ಚಿಕೊಂಡೇ ಹಲ್ಲುಜ್ಜಿ ಬರುತ್ತಿದ್ದೆ).
ಅದಾಗಿ ಅಡುಗೆ ಮನೆಯಲ್ಲಿ ಗೋಡೆಗೊರಗಿ, ಕಾಲು ಚಾಚಿ ನೆಲದ ಮೇಲೆ ಕುಳಿತು ನಾನು ನಮ್ಮಣ್ಣ ಅಮ್ಮನ ಜೊತೆ ಮೆಲ್ಲನೆ ಮಾತನಾಡುತ್ತಿರುವಂತೆ ಸರಿಯಾಗಿ ರೇಡಿಯೋಲಿ ಸಿನಿಮಾ ಹಾಡುಗಳು ಪ್ರಾರಂಭವಾಗಿಬಿಟ್ಟಿರುತ್ತಿದ್ದವು. ನಾವು ಅಮ್ಮನ ಹತ್ತಿರ ಹಠ ಮಾಡಿ ಕಾಫಿಗೆ ಸಿಕ್ಕಾಪಟ್ಟೆ ಸಕ್ಕರೆ ಹಾಕಿಸಿಕೊಂಡು ಮೆಲ್ಲನೆ ಸಿನಿಮಾ ಹಾಡುಗಳನ್ನು ಕೇಳುತ್ತ ಚಮ್ಮಚದಲ್ಲಿ ಕಾಫಿ ಕುಡಿಯುತ್ತಿರುವಂತೆ (ಅಥವ ತಿನ್ನುತ್ತಿರುವಂತೆ) ಅತ್ತ ಕಡೆ ಅಕ್ಕ ಇನ್ನು ಮುಸುಕು ಹೊದ್ದಿಕೊಂಡು ಮಲಗಿರುತ್ತಿದ್ದಳು!

ಅದ್ಯಾಕೋ ವರ್ಷಗಳು ಕಳೆದಂತೆ, ಅಪ್ಪ ನಲವತ್ತರ ಬೌಂಡರಿ ದಾಟಿದಂತೆ ಚೌಡಯ್ಯನವರ ಟ್ಯೂನು ಹಾಗು ಸಿನಿಮಾ ಹಾಡುಗಳು ಹೋಗಿ ನಿಜವಾದ ಸುಪ್ರಭಾತ ಹಾಗೂ ಭಕ್ತಿ ಗೀತೆಗಳು ಶುರುವಾದವು (ಅಷ್ಟರಲ್ಲಿ ನಮ್ಮ ಮನೆಯಲ್ಲೊಂದು ಟೇಪ್ ರೆಕಾರ್ಡರ್ರು, ಜೊತೆಗೆ ನೂರಾರು ಕ್ಯಾಸೆಟ್ಟುಗಳು ಬಂದುಬಿಟ್ಟಿದ್ದವು. ರೇಡಿಯೋ ಕಡಿಮೆಯಾಗಿತ್ತು). ಆಗಲೂ ನಮಗೆ ಸಿನಿಮಾ ಹಾಡುಗಳು ಕೇಳಲು ಸಿಗುತ್ತಿದ್ದವು. ನಮ್ಮ ತಂದೆಯವರು ಇನ್ನೂ 'ತರುಣ'ರಿದ್ದಾಗ ಕೊಂಡಿದ್ದ ಕ್ಯಾಸೆಟ್ಟುಗಳು ಒಂದು ಡಬ್ಬದಲ್ಲಿ ಇನ್ನೂ ಇದ್ದವು. ಅವುಗಳಲ್ಲಿ ಸಿನಿಮಾ ಹಾಡುಗಳಿರುತ್ತಿದ್ದವು. ಉಳಿದಂತೆ ಭಕ್ತಿ ಗೀತೆಗಳೆ. ರೆಕಾರ್ಡರ್ರು ಕೈಗೆ ಸಿಕ್ಕಾಗಲೆಲ್ಲ ಆ ಕ್ಯಾಸೆಟ್ಟುಗಳನ್ನು ಹಾಕಿ ಕೇಳೋದೇ ಮಜ. ಕೆಲವು ಹಳೇ ಕ್ಯಾಸೆಟ್ಟುಗಳು ಸರಿಯಾಗಿ ಪ್ಲೇ ಆಗದೆ ಮೆಲ್ಲ ಮೆಲ್ಲನೆ ಅಪಸ್ವರ ಹಾಡುತ್ತಿದ್ದವು. ಅದನ್ನು ಕೇಳಿ ಹೋ ಅನ್ನೋದು. ಆಗೀಗ ಒಂದೊಂದು ಬಹಳ ಹಳೆಯ ಹಾಡುಗಳು ನಾವು ಹಾಕಿದ ಕ್ಯಾಸೆಟ್ಟಿನಿಂದ ಶುರುವಾದಾಗ ಅಮ್ಮ ಕೂಡ ಅಡುಗೆ ಮನೆಯಿಂದ ಆಚೆ ಬಂದು ಒಂದೆರಡು ಕ್ಷಣ ಕೇಳಿಸಿಕೊಂಡು "ಇದು ಕಲ್ಪನಾ ಮಾಡಿರೋ ಚಿತ್ರದ್ದು", "ಇದು ಘಂಟಸಾಲಾ ಹಾಡಿರೋದು", ಇದು ಆ ಚಿತ್ರದ್ದು, ಇದು ಈ ಚಿತ್ರದ್ದು ಅಂತೆಲ್ಲ ನೆನಪಿಸಿಕೊಂಡು ಮರುಕ್ಷಣ ಕೆಲಸವಿದೆಯೆಂದು ಹೇಳಿ ಒಳಗೆ ಹೋಗಿಬಿಡುತ್ತಿದ್ದರು ("ಈ ಹಾಡುಗಳು ಎಷ್ಟೊಂದು ಇಷ್ಟ ಅಮ್ಮನಿಗೆ - ಅಡುಗೆ ಆಮೇಲೆ ಮಾಡಿಕೊಳ್ಳಬಹುದು, ಅಡುಗೆ ಬಿಟ್ಟು ಬಂದು ಕೇಳಬಾರದ?" ಅಂತ ಆಗ ನನಗನ್ನಿಸುತ್ತಿತ್ತು. ಈಗ ಅದರ ಹಿಂದಿದ್ದ ತುಡಿತ ಚೆನ್ನಾಗಿ ಅರ್ಥವಾಗುತ್ತೆ)

ನಮ್ಮ ಅಪ್ಪನಿಗೆ ರಾಜ್ಕುಮಾರ್ ಅಂದ್ರೆ ಬಹಳ ಇಷ್ಟ - ಅವರ ಎಲ್ಲ ಸಿನಿಮಾ ಹಾಡುಗಳು ಕೊಳ್ಳಲಾಗದೆ ಆಯ್ದ ಕೆಲವನ್ನು ಎಲ್ಲೋ ಒಂದು ಕಡೆ ಆಗ ಕೆಲವು ವರ್ಷಗಳ ಹಿಂದೆ ನಾಲ್ಕು ರೂಪಾಯಿ ಕೊಟ್ಟು ರೆಕಾರ್ಡ್ ಮಾಡಿಸಿ ತಂದು ಇಟ್ಟಿದ್ದರು ("ಹೃದಯದಲ್ಲಿ ಇದೇನಿದು...", "ಗಂಗಾ... ಯಮುನಾ ಸಂಗಮ..." "ನಾ ನಿನ್ನ ಮರೆಯಲಾರೆ..." ಇತ್ಯಾದಿ. ತದನಂತರ ರಾಜ್ಕುಮಾರ್ ಹಾಡಿದ ಭಕ್ತಿ ಗೀತೆಗಳೂ ಹೀಗೆಯೇ ಮನೆಯ ಕ್ಯಾಸೆಟ್ ಕಲೆಕ್ಷನ್ನಿಗೆ ಬಂದು ಸೇರಿದವು (ಅದರಲ್ಲಿ "ಹಾಲಲ್ಲಾದರು ಹಾಕು - ನೀರಲ್ಲಾದರು ಹಾಕು" ಅನ್ನುವ ಹಾಡು ಚೆನ್ನಾಗಿ ನೆನಪಿದೆ - ಇದ್ಯಾಕೆ ನೀರಲ್ಲಿ ಹಾಕು ಅಂತ ಕೇಳಿಕೊಳ್ಳುತ್ತಾರೆ ಈ ಹಾಡಿನಲ್ಲಿ ಎಂದು ಪ್ರಶ್ನೆ ಹಾಕಿಕೊಂಡು ತಲೆಕೆಡಿಸಿಕೊಳ್ಳುತ್ತಿದ್ದೆ).

ಆದರೆ ನನಗೆ ಈಗಲೂ ಬಹಳ ನೆನಪಾಗೋದು ಆಗ ಕೇಳೋಕೆ ಬಹಳ ಇಷ್ಟವಾಗುತ್ತಿದ್ದ ಬಾಲಸುಬ್ರಮಣ್ಯಂ - ಎಸ್ ಜಾನಕಿ ಜೊತೆಗೂಡಿ ಹಾಡಿದ ಹಾಡುಗಳು. ಎಲ್ಲಕ್ಕಿಂತ ಇಷ್ಟವಾಗುತ್ತಿದ್ದುದು 'ಬೆಂಕಿಯ ಬಲೆ' ಸಿನಿಮಾದ ಈ ಹಾಡು:

ಮೊನ್ನೆ ಯೂ ಟ್ಯೂಬಿನಲ್ಲಿ ಎಂದಿನಂತೆ ಮತ್ತೇನೋ ಹುಡುಕುತ್ತಿದ್ದಾಗ ಇದು ಸಿಕ್ತು.

ಹಾಡಿನ ಬಗ್ಗೆ ಹೇಳಲೇ ಬೇಕಿಲ್ಲ. ಆದರೆ ಈ ಹಾಡಿನ ವೀಡಿಯೋ ಗಮನಿಸಿ. ಇಲ್ಲಿ luxury ಕಾರ್ ಇಲ್ಲ. ಪ್ರಮುಖ ಪಾತ್ರಗಳು ಸೈಕಲ್ ಮೇಲೆ. ಹಾಡಿನಲ್ಲಿ ಕುಣಿತ ಇಲ್ಲ. ಮೊದಲೊಂದು ಹಾಡಿನ contextಗೆ ಹೊಂದುವಂತೆ ಗಂಡ ಹೆಂಡತಿ ಇಬ್ಬರೂ ಮಾತನಾಡಿಕೊಳ್ಳುವ ಬಹಳ ಸಹಜವಾದ ಮನಮುಟ್ಟುವ ದೃಶ್ಯ ಇದೆ. ನಾಯಕಿ ಪಾತ್ರದಲ್ಲಿರುವ ಲಕ್ಷ್ಮಿ ಕನ್ನಡದವರಲ್ಲ, ಆದರೆ ಅವರು ಮಾತನಾಡಿರುವ ಸರಾಗವಾದ ಕನ್ನಡ ದೃಶ್ಯಕ್ಕೆ ಮತ್ತಷ್ಟು ಜೀವ ತುಂಬಿದೆ. 'ಬಯಲು ದಾರಿ'ಯ ಅನಂತ ನಾಗ್ ಗೂ ಇಲ್ಲಿರುವ ಅನಂತ ನಾಗ್ ಗೂ ಸಾಕಷ್ಟು ವ್ಯತ್ಯಾಸ, ಆದರೆ ಈ ಪಾತ್ರ ಎಷ್ಟು ಚೆನ್ನಾಗಿ ಮೂಡಿದೆ; ಲಕ್ಷ್ಮಿ ಸೀರೆ ಉಟ್ಟಿಕೊಂಡಿದ್ದಾರೆ. ಪಾತ್ರಗಳದ್ದು ಸಹಜವಾದ ನಡವಳಿಕೆ. ದೃಶ್ಯ ಹಳ್ಳಿಯ ರೋಡಿನಂತೆ ಕಾಣುವ ಜಾಗವೊಂದರಲ್ಲಿ.

ಈಗ ಇದನ್ನು ಇತ್ತೀಚಿನ ಒಂದು ಹಾಡಿಗೆ ಹೋಲಿಸಿ ನೋಡಿ (ಬಾಲಿವುಡ್ ಹಾಡಿಗೆ ಹೋಲಿಸಿದರೆ ಇನ್ನೂ ಉತ್ತಮ - ಇತ್ತೀಚೆಗೆ ಬಂದ 'Race' ಹಾಗೂ (ಬರುತ್ತಿರುವ?) 'Tashan' ಹಾಡುಗಳು, for instance). ಕೋಟಿಗಟ್ಟಲೆ ಖರ್ಚು ಮಾಡಿ ತೆಗೆದ ಹೈಟೆಕ್ ಕಾರುಗಳನ್ನು ನುಜ್ಜುಗುಜ್ಜಾಗಿಸುವ ಸ್ಪೋಟ ಹಿನ್ನೆಲೆಯಲ್ಲಿ, ಮಿಲಿಯನ್ನುಗಟ್ಟಲೆ ಬೆಲೆ ಬಾಳುವ ಕಾರು - ಅದರಲ್ಲಿ ಡಿಸೈನರ್ ಬಟ್ಟೆ ಹಾಕಿಕೊಂಡು ಮಾಡೆಲ್ ನಂತೆ ಓಡಾಡುವ ನಾಯಕಿಯ ಪಾತ್ರ; ಬುರ್ರ್ ಬುರ್ರ್ ಎನ್ನಿಸಿಕೊಂಡು ಗಾಡಿ ಓಡಿಸುತ್ತ ಲೈನು ಹೊಡೆಯುವ ನಾಯಕನ ಪಾತ್ರ; ಸ್ವಚ್ಛವಾಗಿ ಹೊಳೆಯುವ ಪಶ್ಚಿಮ ದೇಶಗಳ ಊರಡ್ಡಗಲ ರೋಡು ಅಥವ ಒಂದೇ ಬಣ್ಣ ಹೂವುಗಳ ಬನ - ಇವು ಯಾವೂ ಮೇಲಿನ ಹಾಡು ಕೊಟ್ಟಷ್ಟು ಖುಷಿ ಕೊಡುವುದಿಲ್ಲ. ಒಂದು ಸಾಧಾರಣ ದೃಶ್ಯದಲ್ಲಿ ಅಳವಡಿಸಿರುವ subtle ವಿಷಯಗಳು ತರುವ ಮನರಂಜನೆ ಕೋಟಿ ಖರ್ಚು ಮಾಡಿದರೂ ಬರುವುದಿಲ್ಲ.

ಸಕಲ ಸವಲತ್ತಿರುವ ಬೆಂಗಳೂರಲ್ಲಿ, ಸಾಧಾರಣವಾಗಿ "ಮುಂಚೆಗಿಂತ ಪರವಾಗಿಲ್ಲ" ಅನ್ನೋ ಅಷ್ಟು ದೊಡ್ಡದೇ ಇರುವ ಮನೆಯಲ್ಲಿ ಆರಾಮದ ಸೋಫ ಮೇಲೆ ಕುಳಿತು ಕಾಫಿ ಕುಡಿಯುತ್ತ ಅಮ್ಮನ ಜೊತೆ ಆತ್ಮೀಯವಾಗಿ ಮಾತನಾಡಿದ್ದರೂ ಅದು ನೆನಪಿಗೆ ಬರುವುದಿಲ್ಲ, ಈಗ ಇಡಿಯ ಸಕ್ಕರೆ ಡಬ್ಬ ಪಕ್ಕದಲ್ಲಿಟ್ಟುಕೊಳ್ಳಬಹುದು, ಆದರೆ ಕಾಫಿಯಲ್ಲಿ ಹೆಚ್ಚಿನ ಸಕ್ಕರೆ ರುಚಿಸುವುದಿಲ್ಲ, ಏ ಸಿ ಇದ್ದರೂ ಸರಿಹೋಗೋದಿಲ್ಲ. ಮೆತ್ತನೆಯ ಕರ್ಲ್-ಆನ್ ಹಾಸಿಗೆಯೂ ಹತ್ತಿಯ ಹಾಸಿಗೆ ಕೊಡುತ್ತಿದ್ದಷ್ಟು ನಿದ್ರೆ ಕೊಡೋದಿಲ್ಲ. ಕಾರಿನಲ್ಲಿ ಕುಳಿತು ಓಡಾಡುವುದರಲ್ಲಿ ಏನೂ ಮಜವಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (6 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹರಿ,

ಬರಹ ಬಹಳ ಚೆನ್ನಾಗಿದೆ !

ನಿಮ್ಮ ನೆನಪುಗಳ ಸರಮಾಲೆ ನನ್ನ ನೆನಪುಗಳನ್ನೂ ಹರಿಯಬಿಟ್ಟಿತು. ಅದು ಹೇಗೋ ಗೊತ್ತಿಲ್ಲ, ನನಗೂ ಇಂತಹದ್ದೇ ಹಳೆಯ ನೆನಪುಗಳು ಯಾಗಾಗಲೂ ಬರುತ್ತಿರುತ್ತವೆ. ನೆನಪುಗಳು ಕಾಡುತ್ತವೆ ಎನ್ನಲಾರೆ, ಏಕೆಂದರೆ, ಹೆಚ್ಚಿನಪಾಲು ಅವು ಸಂತೋಷವನ್ನೇ ತರುತ್ತವಲ್ಲ! ಮೊದಲು ನನಗೆ ಯಾರೋ ಕೊಟ್ಟ ಹತ್ತು ರೂಪಾಯಲ್ಲಿ ತಂದ ಪೇಸ್ಟಲ್ ಕಲರ್ ಬಾಕ್ಸ್ ಆಗಲಿ, ಅಥವಾ ನನಗೇ ಬಂದ ಬಹುಮಾನದ ದುಡ್ಡಿನಲ್ಲಿ ಕೈಯಾರೇ ನನ್ನದೇ ದುಡ್ಡು ಅಂತ ಹೇಳಿ ತಂದ ಕ್ಯಾಸೆಟ್ ಗಳಾಗಲಿ, ಅಥವಾ ತಂದ ಸಂತೋಷ, ಕಾರು ಮನೆ ಖರೀದಿಸಿದಾಗ ಖಂಡಿತ ಆಗಲಿಲ್ಲ. ಒಂದೊಂದು ಕ್ಯಾಸೆಟ್ ಗಳನ್ನೂ ಪ್ರೀತಿಯಿಂದ ಸಂಗ್ರಹಿಸಿ ಈಗ, ಅವುಗಳನ್ನು ಕೇಳುವ ಸಮಯವೇ ಕಡಿಮೆಯಾಗಿದೆಯಲ್ಲ :( ಹಾಗೆಂದೇ, ಸುಮಾರು ವರ್ಷಗಳಿಂದ ನಾನು ಕ್ಯಾಸೆಟ್ ಅಂಗಡಿಯ ಕಡೆಗೆ ತಲೆಯಿಟ್ಟು ಮಲಗುವುದನ್ನೂ ನಿಲ್ಲಿಸಿಬಿಟ್ಟಿದ್ದೇನೆ. ಕೆಲವು ಕ್ಯಾಸೆಟ್ ಗಳು ನಾನು ಆರನೇ ತರಗತಿ ಎಂಟನೇ ತರಗತಿಯಲ್ಲಿದ್ದಾಗ ಇಂತಹದ್ದೇ ದಿನ ಕೊಂಡದ್ದೆಂದು ನೆನಪಿರುವಾಗ, ಇಂತಹದ್ದೇ ದಿನ ಎರಡು ರೇಖೆಗಳು ಅಥವಾ ಹಾಲು ಜೇನು ಸಿನೆಮಾ ನೋಡಿದ್ದೆ ಎನ್ನುವುದು ನೆನಪಿರುವಾಗ, ಮೂರು ವಾರಗಳ ಹಿಂದೆ ಆಡಿದ್ದ ಮಾತುಗಳು, ನೋಡಿದ್ದ ನೋಟಗಳೂ ಮರೆಯುವುದೊಂದು ವಿಪರ್ಯಾಸ ಎನ್ನಲೇ?

-ಹಂಸಾನಂದಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರಹ ಬಹಳ ಚೆನ್ನಾಗಿದೆ !

ಧನ್ಯವಾದ :-)

ಕ್ಯಾಸೆಟ್ ಸಂಗ್ರಹಕ್ಕೆ ವಾಪಸ್ ಭೇಟಿ ಕೊಡೋದೂ ಕಷ್ಟ! ಹಾಗೊಮ್ಮೆ ಅಟ್ಟದ ಮೇಲಿನ ಡಬ್ಬ ತೆಗೆದು ಕ್ಯಾಸೆಟ್ಟುಗಳಿಗೆ ಭೇಟಿ ಕೊಟ್ಟರೆ - ಇಷ್ಟೊಂದು ಒಳ್ಳೆಯ ಹಾಡುಗಳು ಮತ್ತೆ ಕೇಳೋಕೆ ಆಗೋಲ್ವಲ್ಲ ಅನ್ನೋ ಆಲೋಚನೆ ಕಾಡಲು ಪ್ರಾರಂಭಿಸಿಬಿಡುತ್ತದೆ. ಕೆಲವೊಮ್ಮೆ ಇದರಿಂದಾಗಿಯೇ ಕ್ಯಾಸೆಟ್ಟುಗಳನ್ನು ಪ್ಲೇ ಮಾಡಿ ಕಂಪ್ಯೂಟರಿಗೆ ಲೈನ್ ಇನ್ ಪೋರ್ಟ್ ಮೂಲಕ ರೆಕಾರ್ಡ್ ಮಾಡಿಟ್ಟುಕೊಂಡಿದ್ದುಂಟು. ಆದರೆ ಅದು ತೆಗೆದುಕೊಳ್ಳುವ ಸಮಯ, ನಂತರ noise, clicks ತೆಗೆಯೋಕೆ ಬೇಕಾಗೋ ಶ್ರಮ ಈ ಸಾಹಸವನ್ನು ಮಿತಗೊಳಿಸಿತು.
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಲರೆ ಹರಿ. ಅದ್ಭುತವಾಗಿ ಬರೆದಿದ್ದೀರಿ. ಈ ಬರಹ ನನ್ನದೇ ಬಾಲ್ಯವನ್ನೂ ನೆನಪಿಸುವಂತಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ :-)
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರಿಪ್ರಸಾದ್, ನಿಮ್ಮ ಬರಹ ಬಹಳ ಸೊಗಸಾಗಿದೆ.
ಕ್ಯಾಸೆಟ್ಟು, ಟೇಪ್ ರೆಕಾರ್ಡರ್ರು ಬಗೆಗಿನ ನನ್ನ ನೆನಪು ಕೊಂಚ ಭಿನ್ನವಾಗಿವೆ. ಕ್ಯಾಸೆಟ್ ಎಂದೊಡನೆ ಚಿಕ್ಕಂದಿನಲ್ಲಿ ನಮ್ಮ ಮನೆಯ ಸಾಕಷ್ಟು ಮುದಿಯಾಗಿದ್ದ ಟೇಪ್ ರೆಕಾರ್ಡರ್ರಿನಲ್ಲಿ ಆಗಾಗ ಅದು ಸಿಕ್ಕಿಹಾಕಿಕೊಳ್ಳುತ್ತಿದ್ದುದು ನೆನಪಾಗುತ್ತದೆ. ಸರಿಯಾಗಿ ಉಲಿಯುತ್ತಿದ್ದ ಕ್ಯಾಸೆಟ್ ಇದ್ದಕ್ಕಿದ್ದಂತೆ ನಾನಾ ಶಬ್ದ ವಿನ್ಯಾಸ ಹೊರಡಿಸಿ ಬಂದಾಗುತ್ತಿದ್ದಂತೆ ನಾನು, ನನ್ನ ತಮ್ಮ ಸಸಂಭ್ರಮದಿಂದ " ಕ್ಯಾಸೆಟ್ ಸಿಕ್ಕಾಕಂಡಿದೆ!" ಎಂದು ಘೋಷಿಸುತ್ತಿದ್ದೆವು. ಮನೆಯ ಹಿರಿಯರು ಯಾರಾದರು ಕ್ಯಾಸೆಟ್ ಬಿಡಿಸಲು ಟೇಪ್ ರೆಕಾರ್ಡರ್ ಬಿಚ್ಚಿದಾಗ ಅದರ ಅಂತರಂಗ ಅನಾವರಣಗೊಂಡು ಒಳಗಿನ ಗಿಯರು, ಚಕ್ರ , ಅವುಗಳ ಹಲ್ಲು ಒಂದನ್ನೊಂದು ಮಸೆದು ತಿರುಗುವ ಪರಿಯನ್ನ ನೋಡಬಹುದು ಎಂಬುದು ನಮ್ಮ ಖುಷಿಗೆ ಕಾರಣ . ಇನ್ನು ಕ್ಯಾಸೆಟ್ ತೀರಾ ಗಾನ್ ಕೇಸಾಗಿದ್ದರೆ ಅದು ನಮ್ಮ ಸುಪರ್ದಿಗೆ ಬರುತ್ತಿತ್ತು. ಆಮೇಲೆ ಅದನ್ನು ಉದ್ದಕ್ಕೆ ಬಿಚ್ಚಿ ಮಾಡಬಹುದಾಗಿದ್ದ ಮಂಗಾಟದ ಮಜವೆ ಬೇರೆ!
ತೊಂಬತ್ತರ ದಶಕದ ಮಧ್ಯ ಭಾಗದಲ್ಲಿ ಆಧುನಿಕತೆ ಮಲೆನಾಡಿನ ಹಳ್ಳಿ ಹಳ್ಳಿಗೂ ಕಾಲಿಟ್ಟು ವಿಸಿಪಿಯಲ್ಲಿ ಸಿನೆಮಾ ಹಾಕಿದರೆ ಮಾತ್ರ ಅಡಿಕೆ ಸುಲಿಯಲು ಜನ ಬರುತ್ತಾರೆಂದಾದಾಗ ಮನೆಯ ಮಕ್ಕಳಿಗೆ ಅಡಿಕೆ ಕೊಯ್ಲಿನ ಸಮಯದಲ್ಲಿ ಶಾಲೆಯಿಂದ ಬರುವಾಗ ವಿಡಿಯೋ ಕ್ಯಾಸೆಟ್ ಬಾಡಿಗೆಗೆ ತರುವ ಹೊಸ ಕೆಲಸ. ನಾನೊಮ್ಮೆ "ತರ್ಲೆ ನನ್ಮಗ " ಕ್ಯಾಸೆಟ್ ತಂದು ಮಹಾ ಪೋಲಿ ಎಂಬ ಬಿರುದು ಸಂಪಾದಿಸಿದ್ದೆ!ಇಲ್ಲಿ ನನ್ನ ತಪ್ಪೇನು ಇರಲಿಲ್ಲ. ನಮ್ಮ ಮನೆಗೆ ಅಡಿಕೆ ಸುಲಿಯಲು ಬರುವವರು ಕಡೆಗಟ್ಲಿನ ಪ್ರಯುಕ್ತ ಯಾವುದಾದರು ಸ್ಪೆಶಲ್ ಪಿಚ್ಚರ್ ತರಲು ಹೇಳಿದ್ದರು. ಅಂಗಡಿಯವನಿಗೆ ಯಾವುದಾದರು ಫೇಮಸ್ ಪಿಚ್ಚರ್ ಕೊಡಲು ಹೇಳಿದರೆ ಅವ ಈ ಕ್ಯಾಸೆಟ್ ಕೊಟ್ಟಿದ್ದ ಅಷ್ಟೆ.
ಈಗ ನೋಡಿದರೆ ಆ ವಿಸಿಪಿ ಕೊಳ್ಳಲೂ ಯಾರು ಗಿರಾಕಿಗಳಿಲ್ಲದೆ ಅನಾಥವಾಗಿ ಅಟ್ಟದ ಮೇಲಿದೆ, ಮನೆಯ ಮಾಡಿನ ಮೇಲೆ ಡಿಶ್ ಟಿವಿಯ ಕೊಡೆ ರಾರಾಜಿಸುತ್ತಿದೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮತ್ತೊಂದು ನೆನಪಿನ ಎಳೆಯಿಂದ ಕಟ್ಟಿಬಿಟ್ಟಿದ್ದೀರಲ್ಲ ಹರಿ!

Our sweetest songs are those, which tell our saddest songs ಎಂಬ ಕವಿಮಾತಿದೆ. ಬಹುಶಃ ಪಿ.ಬಿ. ಷೆಲ್ಲಿ ಬರೆದಿರಬೇಕು. ಎಷ್ಟು ನಿಜ ಅಲ್ವಾ?

ನಾವೆಲ್ಲ ಚಿಕ್ಕವರಿದ್ದಾಗ, ಬೇಗ ಬೇಗ ದೊಡ್ಡವರಾಗಬೇಕು ಎಂದು ಹಂಬಲಿಸುತ್ತೇವೆ. ಅವ್ವ, ಅಪ್ಪನ ಕಟ್ಟಳೆ ಇಲ್ಲದೇ ಸ್ವತಂತ್ರವಾಗಿ ಇರಬೇಕು ಎಂದು ಹಾತೊರೆಯುತ್ತೇವೆ. ದೊಡ್ಡವರಾಗಿ, ಹಾಸ್ಟೆಲ್‌ನಲ್ಲಿ ಬದುಕುವ ದಿನಗಳು ಬಂದಾಗ ಏಕೋ ಮನೆ, ಅವ್ವ, ಅಪ್ಪ ನೆನಪಾಗತೊಡಗುತ್ತಾರೆ. ಮುಂದೆ ನೌಕರಿಗೆ ಸೇರಿ ಗಾಣಕ್ಕೆ ಸಿಲುಕಿಕೊಂಡಾಗ ಬಾಲ್ಯ ನೆನಪಾಗತೊಡಗುತ್ತದೆ.

ಏಕೆ ಹೀಗೆ?

ಭೂತಕಾಲದಲ್ಲೇ ಬದುಕುವುದು ನಮ್ಮ ವರ್ತಮಾನವಾ? ಇದರಿಂದಲೇ ನಮ್ಮ ಕನಸಿನ ಭವಿಷ್ಯತ್ತು ಹುಟ್ಟುತ್ತದಾ?

ಆದರೂ, ಹಳೆಯ ಕೌದಿಯಲ್ಲಿ, ಬಾಲ್ಯದ ಪುಟ್ಟ ಲಂಗದ ಬಟ್ಟೆ ಹುಡುಕುವಂತೆ ಮನಸ್ಸು ಆಳದ ನೆನಪುಗಳಿಗೇ ಜಾರುತ್ತದೆ.

ಎಲ್ಲ ನೆನಪಿಸಿದ್ದಕ್ಕೆ ಥ್ಯಾಂಕ್ಸ್‌.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.