ಶಿವಗಂಗೆ, ತುಮಕೂರು

3.75

ಎಷ್ಟೋ ದಿನಗಳ ನಂತರ ಲಭಿಸಿತ್ತು ಬಿಡುವಿನ ಭಾನುವಾರ. ಮುಂಜಾನೆ ಬೇಗನೆ ಎದ್ದು ಹೊರಟರೂ ತುಮಕೂರು ರೋಡಿನಲ್ಲಿ ಟ್ರಾಫಿಕ್ ಎಂದಿನಂತೆ. ಹೊಸತಾದ ಟೋಲ್ ರಸ್ತೆಯಲ್ಲಿ ಹೇಗಂದರೆ ಹಾಗೆ ವೇಗದಲ್ಲಿ ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಬಳುಕುತ್ತ ಸುಯ್ ಎಂದು ಹಾರುತ್ತಿದ್ದ ಟ್ರಕ್ಕು, ಲಾರಿ, ಬಸ್ಸುಗಳ ನಡುವೆ ಡ್ರೈವ್ ಮಾಡಿದ್ದುಸಿನಿಮಾ ಒಂದಕ್ಕೆ ಸ್ಟಂಟ್ ಪ್ರಾಕ್ಟೀಸ್ ಮಾಡಿಸಿದ ಹಾಗಿತ್ತು. ತುಮಕೂರು ರಸ್ತೆಯಲ್ಲಿ ದಾಬಸ್ ಪೇಟ್ ಬಳಿ ಎಡಕ್ಕೆ ತಿರುಗಿದ ಕೂಡಲೆ ಶಿವಗಂಗೆ ಬೆಟ್ಟ ಕಣ್ಣಿಗೆ ಬಿತ್ತು. ಅರ್ಧಾಂಗಿನಿಯವರು ರೆಡಿ ಮಾಡಿ ತಂದಿದ್ದ ಇಡ್ಲಿ ಚಟ್ನಿ ಹಣ ಕೊಟ್ಟು ಕಾಮತ್ ಹೋಟೆಲಿನ ನೊಣಗಳ ಜೊತೆ ತಿಂಡಿ ಹಂಚಿಕೊಳ್ಳುವ ಅದ್ಭುತ ಅವಕಾಶವನ್ನು ತಪ್ಪಿಸಿತ್ತು.

 

ಶಿವಗಂಗೆ ಸುಂದರ ಪ್ರವಾಸಿ ತಾಣ. ಒಳ ಬರುತ್ತಲೇ ಬಲ ಭಾಗದಲ್ಲಿ ಒಂದು ಪುಷ್ಕರಿಣಿ ಇದೆ. ದೇವಾಸ್ಥಾನದ ಮೆಟ್ಟಿಲು ಹತ್ತಿ ಹೊರಟರೆ ಕಾಣುವುದು 'ಎಮ್ಮೆ ಬಸವ'. ಮೊದಲು ಸಿಗುವ ದೇವಸ್ಥಾನದ ಸುತ್ತ ಚೆಂದದ ಕೆತ್ತನೆ ಇದೆ. ವಿಜಯನಗರ ಕಾಲದ ಶಿಲ್ಪದ ರೀತಿ ಕಾಣುತ್ತದೆ. ಆದರೆ ದೇವಸ್ಥಾನದ ಬದಿಯಿಂದ ಬೆಟ್ಟದೆಡೆ ಹಾದು ಹೋದರೆ ಕಾಣುವುದು ಕುಡಿದು ಬಿಸುಟಿರುವ ಖಾಲಿ ಮಾಝಾ, ಪೆಪ್ಸಿ ಪ್ಲಾಸ್ಟಿಕ್ ಬಾಟಲುಗಳು! ಅಲ್ಲಲ್ಲಿ ತಂಬಾಕು ಪ್ಯಾಕುಗಳು.

ಎಲ್ಲೆಲ್ಲೂ ಬಣ್ಣ ಹೊಡೆಸಿರುವುದು, ಅಲ್ಲಲ್ಲಿ ಟೈಲ್ಸ್ ಹಾಕಿಸಿರುವುದು ಹಿಂದಿನ ಕಾಲದ ದೇವಸ್ಥಾನಗಳ 'antique' lookಅನ್ನು ಹಾಳು ಮಾಡಿರುವಂತಿದೆ.

ಮೆಟ್ಟಲು ಹತ್ತಿ ಮೇಲೆ ಹೋಗುತ್ತಿದ್ದಂತೆ ಬಲ ಭಾಗದಲ್ಲಿ "ಒಳಕಲ್ಲು ತೀರ್ಥ" ಸಿಗುತ್ತದೆ. ಇಲ್ಲಿ ಕೂಡ ಪ್ಲಾಸ್ಟಿಕ್ ಕವರುಗಳು, ಬಾಟಲುಗಳ ಕಾರುಬಾರು ಜೋರು.

 

ಇನ್ನು ಮುಂದಕ್ಕೆ ಕಲ್ಲಿನಲ್ಲಿ ಮೆಟ್ಟಿಲುಗಳನ್ನು ಕೆತ್ತಿದ್ದಾರೆ. ಹತ್ತಲು ಕೆಲವರಿಗೆ ಸ್ವಲ್ಪ ಕಷ್ಟವಾಗಬಹುದು. ಹತ್ತಲು ನೆರವಾಗಲು ಕಂಬಿಗಳನ್ನು ಕೂರಿಸಿದ್ದಾರೆ. ಶಿಖರ ತಲುಪಿದ ನಂತರ ಸಿಗುವ ಬಸವಣ್ಣನ ಬಳಿ ನಿಂತು ನೋಡಿದರೆ ಸಿಗುವುದು ಕಲ್ಲು ಗುಡ್ಡಗಳ ವಿಹಂಗಮ ನೋಟ. ಮುಂದೆ ನಡೆದರೆ 'ಶಾಂತಲಾ ಡ್ರಾಪ್' ಹಾಗು ಮತ್ತೊಂದು ದೇವಸ್ಥಾನ. ದೇವಸ್ಥಾನದ ಬಳಿ ಇರುವ ಕಲ್ಲಿನ ಮೇಲೆ ಕುಳಿತುಕೊಂಡು ವೀಕ್ಷಿಸಿದರೆ ಸುತ್ತಲಿನ ಪ್ರದೇಶವೆಲ್ಲ ಬಣ್ಣ ಬಣ್ಣದ ಕಲಾಕೃತಿಯಲ್ಲಿ ಪುಟ್ಟದಾಗಿ ಚಿತ್ರಿಸಿದಂತೆ ಕಾಣುವುದು. ಇಲ್ಲಿ ಬೀಸುವ ಗಾಳಿಯ ರಭಸ ಹೇಳತೀರದು. ಅಲ್ಲೇ ದೀಪಸ್ಥಂಭದ ಬಳಿ ಕಲ್ಲಿನ ಮೇಲೆ ಕುಳಿತುಕೊಂಡು ಬೆಟ್ಟ ಹತ್ತಿದ್ದರ ಆಯಾಸ ನಿವಾರಿಸಿಕೊಳ್ಳುವುದು ಚೆಂದ. 

 

ಮುಂಚೆ ಟ್ರೆಕ್ ಮಾಡಿ ಅಭ್ಯಾಸವಿಲ್ಲದಿದ್ದರೆ ಶಿವಗಂಗೆ ಹತ್ತಿ ಇಳಿಯುವುದು ಕಷ್ಟ. ನೀರು ಜೊತೆಗೆ ತೆಗೆದುಕೊಂಡು ಹೋಗದಿದ್ದರೆ ಆಯಾಸದಿಂದ ಕೈ ಕಾಲು ಹಿಡಿದುಕೊಳ್ಳುವುದು ಖರೆ. ಸಾಧ್ಯವಾದಷ್ಟೂ ಸೈಕಲಿಂಗ್ ಮಾಡುವುದರಿಂದ ಸ್ವತಃ ನನಗೆ ಬೆಟ್ಟ್ ಹತ್ತಿ ಇಳಿದದ್ದು ಹೆಚ್ಚು ಪ್ರಯಾಸ ಎನಿಸಲಿಲ್ಲ. ಬಿಸಿಲು ನೆತ್ತಿಯ ಮೇಲೆ ಏರುವುದರೊಳಗೆ ನಾವು ಬೆಟ್ಟ ಹತ್ತಿ ಇಳಿದಿದ್ದೆವು.

 

ಶಿವಗಂಗೆಯಲ್ಲಿ ಪಾರ್ಕಿಂಗ್ ಫೀಸ್ ಇದೆ. ಪಾರ್ಕಿಂಗ್ ಮಾಡಲು ಜಾಗ ಮಾತ್ರ ತುಂಬ ಕಡಿಮೆ. ಬೆಳಿಗ್ಗಿನ ಹೊತ್ತಿನಲ್ಲೇ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡಿದ್ದರು. ಮುಂಜಾನೆ ನಿದ್ರೆಗೆಟ್ಟು ಹೊರಟಿದ್ದುದರ ಫಲ ಬೆಳಿಗ್ಗೆ ವಾಹನ ನಿಲ್ಲಿಸಲು ಸುಲಭದಲ್ಲಿ ಜಾಗ ಸಿಕ್ಕಿತು! ಮದ್ಯಾಹ್ನ ಹೊರಗೆ ತೆಗೆಯುವಾಗ ಮಾತ್ರ ಹರಸಾಹಸ. 

 

ಬೆಟ್ಟ ಹತ್ತುವಾಗ ಕೋತಿಗಳು ಕೆಲವರ ಮೈ ಮೇಲೆ ಹತ್ತಿ ನೇರ "ಜೇಬಿಗೇ ಕೈ" ಹಾಕಿದ್ದುಂಟಂತೆ. ನನ್ನ ಬಳಿ ಇದ್ದ ಕ್ಯಾಮೆರಾ ನೋಡಿ ಬೆಟ್ಟ ಇಳಿಯುತ್ತಿದ್ದವರಲ್ಲಿ ಹಲವರು "ಸರ್, ಹುಷಾರು. ಕೋತಿಗಳು ಬ್ಯಾಗು ಕಸಿದುಕೊಂಡು ಹೋಗಿಬಿಡುತ್ತವೆ" ಎಂದು ವಾರ್ನಿಂಗ್ ಕೊಟ್ಟದ್ದು ಉಪಯೋಗಕ್ಕೆ ಬಂತು. ಅಥವ ಭಾರದ ಕ್ಯಾಮೆರಾ ಹಿಡಿದು ನಡೆದಾಡುತ್ತಿದ್ದ ತೆಳ್ಳಗಿನ ಮನುಷ್ಯನನ್ನು ನೋಡಿ ಅವುಗಳಿಗೇ ಭಯವಾಯಿತೋ ಅಥವ ಮರುಕ ಹುಟ್ಟಿತೋ ತಿಳಿಯಲಿಲ್ಲ. ಕೋತಿಗಳು ಮಾತ್ರ ಹತ್ತಿರ ಸುಳಿಯಲಿಲ್ಲ. ಆದರೆ ಎದುರಿಗೆ ಬರುತ್ತಿದ್ದ ಹೆಂಗಸಿನ ಸೀರೆ ಹಿಡಿದುಕೊಂಡು ಬ್ಯಾಗಿನಲ್ಲಿ ತಿನಿಸುಗಳನ್ನೇನಾದರೂ ಇಟ್ಟುಕೊಂಡಿದ್ದಾರೇನೋ ಎಂದು ಇನ್ವೆಸ್ಟಿಗೇಟ್ ಮಾಡುತ್ತಿದ್ದ ಕೋತಿಯ ದೃಶ್ಯ ಶಾಕ್ ಕೊಟ್ಟಿತು. ಒಂದು ಕೈಯಲ್ಲಿ ಕಂಬಿಹಿಡಿದು ಮತ್ತೆಲ್ಲಿಗೂ ಹೋಗಲಾಗದೆ ಅವರು ಕಿರುಚುತ್ತಿದ್ದರೂ ಹಿಂದಕ್ಕೆ ಸರಿಯದ ಮಂಗನ fearless attitude ದಂಗುಬಡಿಸಿತು. ಕೆಲವರು ಜೇಬಿನಲ್ಲಿಟ್ಟಿದ್ದ ದುಡ್ಡು ಕಳೆದುಕೊಂಡರಂತೆ. ಕೆಲವರ ಬ್ಯಾಗುಗಳನ್ನೇ ಕಿತ್ತುಕೊಂಡು ಹೋದವಂತೆ.

 

ಮತ್ತಷ್ಟು:

  • ಬೆಂಗಳೂರಿಂದ ಹೊರಟು ತುಮಕೂರಿನ ರಸ್ತೆಯುದ್ದಕ್ಕೂ ಇರುವ ಪೆಟ್ರೋಲ್ ಬಂಕುಗಳ್ಯಾವುದರಲ್ಲೂ ಟೈರುಗಳಿಗೆ ಗಾಳಿ ತುಂಬಿಸಲಾಗದು. ಬೆಂಗಳೂರಿನಲ್ಲೇ ಇದೆಲ್ಲದಕ್ಕೂ ವ್ಯವಸ್ಥೆ ಮಾಡಿಕೊಂಡು ಹೋದಲ್ಲಿ ಉತ್ತಮ. 
  • ಶಿವಗಂಗೆಯ ಬೆಟ್ಟ ಹತ್ತಿ ಹೊರಟಾಗ ಒಂದು ಕೋಲು ಹಿಡಿದು ಹೋಗುವುದು ಒಳ್ಳೆಯದು.

 

ಚಿತ್ರಗಳು: ಹರಿ ಪ್ರಸಾದ್ ನಾಡಿಗ್. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಶಿವಗಂಗೆಗೆ ನಾನು ಸುಮಾರು 25 ವರ್ಷಗಳ ಹಿಂದೆ ಹೋಗಿದ್ದೆ, ಆಗ ಜನರೂ ಕಡಿಮೆ ಮತ್ತು ಕೋತಿಗಳು ಸಹ, ಅವು ಈಗಿನಷ್ಟು ಆಕ್ರಮಣಕಾರಿಯಾಗಿರಲಿಲ್ಲ, ದೇವರಾಯನದುರ್ಗದ ಮೇಲಿನ ಬೆಟ್ಟದ ಕೋತಿಗಳ ಹತ್ತಿರವು ಅಷ್ಟೆ ಸ್ವಲ್ಪ ಹುಷಾರಾಗಿರಬೇಕು. ಕೋಲು ಮುಂತಾದವು ಇದ್ದಲ್ಲಿ ಮತ್ತಷ್ಟು ಅಪಾಯಕ್ಕೆ ಅಹ್ವಾನವೆಂದೆ ಅನ್ನಿಸುತ್ತೆ. ಬದಲಿಗೆ ಅವುಗಳಿಗೆ ಮುಂದಾಗಿಯೆ ತಿನ್ನಲು ಏನಾದರು ತೆಗೆದುಕೊಂಡು ಹೋಗಿ ಕೊಟ್ಟುಬಂದರೆ ನಮ್ಮ ಮನಸಿಗು ಏನೊ ಸಮಾದನ. ಮತ್ತೆ ಮೇಲಿನ ಎರಡು ಛಾಯಚಿತ್ರಗಳಂತು ಅದ್ಬುತವಾಗಿ ಮೂಡಿದೆ , ಕೋತಿಗಳ ಪಕ್ಕದಲ್ಲಿ ಕುಳಿತು ನಾವು ನಿದ್ದೆ ಮಾಡಬಹುದೆ ಎನ್ನುವಷ್ಟೆ !! :-) ನಮಸ್ಕಾರಗಳು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

> ಬದಲಿಗೆ ಅವುಗಳಿಗೆ ಮುಂದಾಗಿಯೆ ತಿನ್ನಲು ಏನಾದರು ತೆಗೆದುಕೊಂಡು ಹೋಗಿ ಕೊಟ್ಟುಬಂದರೆ ಈಗ ಅಲ್ಲಿ ತುಂಬ ಕೋತಿಗಳಿವೆ. ಎಷ್ಟು ಆಹಾರ ಇದ್ದರೂ ಹೆಚ್ಚಿನ ಸಂಖ್ಯೆಯಲ್ಲಿರುವ ಅಲ್ಲಿನ ಕೋತಿಗಳಿಗೆ ಅದು ಎಲ್ಲಿಗೂ ಸಾಲದು. ಬೆಟ್ಟ ಹತ್ತಿದ ಮೇಲೆ ನಾವೂ ಒಂದಷ್ಟು ಸೌತೇಕಾಯಿ ಕೊಂಡು ಕೋತಿಗಳಿಗೆ ಕೊಟ್ಟೆವು. ಕಿತ್ತಾಡಿ ತಿಂದವು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದೇವರಾಯನ ದುರ್ಗ ಶಿವಗಂಗೆಗೆ ಹತ್ತಿರವೇ ಅಲ್ವ? ರಾಮನಗರ ಕೂಡ ಹತ್ತಿರವೇ. ಇಲ್ಲೆಲ್ಲ ಕೋತಿಗಳು ಹೆಚ್ಚಿನ ಸಂಖ್ಯೆಯಲ್ಲಿದೆ. ಬಹುಶಃ ಶಿವಗಂಗೆಯಲ್ಲಿ ಅವುಗಳಿಗೆ ಮುಂಚೆ ಸಿಗುತ್ತಿದ್ದಂತೆ ಆಹಾರ ಸಿಗುತ್ತಿಲ್ಲದಿರಬಹುದು. ತೀರ ಆಕ್ರಮಣಕ್ಕೆ ಇಳಿಯುತ್ತವೆ ಎಂದರೆ ಇಲ್ಲವೇ ಕೋತಿಗಳ ಸಂಖ್ಯೆಯೇ ತೀರ ಹೆಚ್ಚಾಗಿದೆ ಅಥವ ಆಹಾರ ಕ್ಷೀಣಿಸಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲೇಖನ ಓದಿ ಶಿವಗಂಗೆಗೇ ಹೋಗಿ ಬಂದಂತಾಯ್ತು. ಎಲ್ಲಾ ಚಿತ್ರಗಳೂ ಬಹು ಸುಂದರವಾಗಿವೆ. ಕೋತಿಗಳ ಚಿತ್ರವಂತೂ ಮನಮೋಹಕ.ಎಷ್ಟು ಚೆನ್ನಾಗಿ ನಿದ್ದೆ ಮಾಡುತ್ತಿವೆ. ಪ್ರಕೃತಿಯ ಮಡಿಲು ಎಂಥೆಂಥಾ ರಸಮಯ ದೃಶ್ಯಗಳನ್ನೊಳಗೊಂಡಿದೆ.ಅತ್ತ್ಯುತ್ತಮ ಫೋಟೋಗ್ರಫಿ. ಇದನ್ನು ನೋಡಿ ಆಯನೂರಿನ ಹತ್ತಿರ ಇರುವ ಸಿಂಹಧಾಮದ ನೆನಪಾಯ್ತು. ಅಲ್ಲೂ ಸಿಂಹಕ್ಕಿಂತ ಜಾಸ್ತಿ ಕೋತಿಗಳೇ.ನಾವು ಹೋದಾಗ ನನ್ನ ಮಗನ ಕೈಯಿಂದ ಚಕ್ಕುಲಿ ಕಸಿದುಕೊಂಡು ಓಡಿತೊಂದು ಕೋತಿ.ನಮ್ಮ ಬಾಲವಿಹಾರದ ಮಕ್ಕಳಿಗೆ ಸಿಂಹಗಳನ್ನು ತೋರಿಸಲು ಕರೆದೊಯ್ದರೆ ಆ ಮಕ್ಕಳು ಸಿಂಹಕ್ಕಿಂತಾ ಜಾಸ್ತಿ ಕೋತಿಗಳನ್ನೇ ನೋಡಿ ಆನಂದಿಸಿದವು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಾವರೆಕೊಪ್ಪ ಸಿಂಹಧಾಮ ಕೇಳಿದ್ದೆ. ಶಿವಮೊಗ್ಗ ಜಿಲ್ಲೆಯಲ್ಲಿ ಆಯನೂರು ಹತ್ತಿರ ಮತ್ತೊಂದು ಸಿಂಹಧಾಮ ಇರುವುದೋ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ತಾವೆಂದಂತೆ ಶಿವಮೊಗ್ಗ ಹಾಗೂ ಆಯನೂರುಗಳ ನಡುವೆ ಬರುವ ತಾವರೆಕೊಪ್ಪ ಸಿಂಹಧಾಮವನ್ನು ಕುರಿತೇ ನಾನು ಹೇಳಿದ್ದು. ತಾವರೆಕೊಪ್ಪ ಎನ್ನುವ ಹೆಸರು ಆಕ್ಷಣಕ್ಕೆ ನೆನಪಿಗೆ ಬರಲಿಲ್ಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>ತಾವರೆಕೊಪ್ಪ ಸಿಂಹಧಾಮ ಕೇಳಿದ್ದೆ. -ತಾವರೆಕೊಪ್ಪ ಸಿಂಹವನ್ನು ಭೇಟಿಮಾಡಿ ಅದರ ಸಂದರ್ಶನ ಮಾಡಿದ್ದೆ http://sampada.net/b... ಈಗ ಶಿವಗಂಗೆ ಲೇಖನ ನೋಡಿದ ಮೇಲೆ ಕೋತಿಗಳನ್ನು ಒಮ್ಮೆ ಮಾತನಾಡಿಸಿ ಬರಲಾ ಎಂದು ಆಲೋಚಿಸುತ್ತಿದ್ದೇನೆ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಂದು ಸಾರಿ ಭೇಟಿ ಕೊಟ್ಟು ಮಾತನಾಡಿಸಿ ಬರಬಹುದು ಅನ್ಸತ್ತೆ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಡಿಗರೇ ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ವಿವರಣೆಯೂ ಹೇಳಿದ್ದರೆ ನಾವೆಲ್ಲಾ ಬರ್ತಿದ್ದೆವಲ್ಲ ಒಂದು ಸಂಪದ ಕೂಟವು ಆಗ್ತಾ ಇತ್ತು ಮತ್ತೆ ಎಲ್ಲರ ಮನೆಯ ಊಟ ತಿಂಡಿಯ ಸವಿಯೂ ಸಿಗ್ತಾ ಇತ್ತಲ್ಲಾ . ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುಂದಿನ ಸಾರಿ ಜೊತೆಗೇ ಹೋಗೋಣಂತೆ. ಈ ಬಾರಿ ಕೊನೆಯ ಘಳಿಗೆಗೆ ಪ್ಲಾನು ಮಾಡಿದ್ದು. ಭಾನುವಾರ ನಿಜವಾಗಲೂ ಬಿಡುವಾಗುತ್ತದೆ ಎಂದು ಎಣಿಸಿರಲಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತಮ ಚಿತ್ರಗಳು. ಚೊಕ್ಕ ಟಿಪ್ಪಣಿಗಳು ರಂಜನೀಯವಾಗಿವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಥ್ಯಾಂಕ್ಸ್, ಅನನ್ಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರಗಳು ಕಣ್ಣಿಗೆ ಹಿತ ತಂದಿತು ... ಲೇಖನ ಮನಕೆ ಮುದ ನೀಡಿತು .... ಎಲ್ಲೆಂದರಲ್ಲಿ ಕಸ ಎಂದು ಓದಿ ಹಿಂಸೆಯಾಯಿತು ಜೊತೆಗೆ ನಾವು 'ಯಾಣ'ಕ್ಕೆ ಹೋದಾಗಿನ ದಿನಗಳು ನೆನಪಾಯ್ತು ... ಎಲ್ಲೆಲ್ಲೂ ಕಸ :-(( ಕೋತಿಗಳ attitude ಓದಿ, ಪರದೇಶದಿಂದ ನಮ್ಮೂರಿನ ಏರ್-ಪೋರ್ಟ್'ಗೆ ಬಂದಾಗ ನಮ್ಮ ಕೈಯಲ್ಲಿನ ಲಗ್ಗೇಜ್ ಕಿತ್ತುಕೊಳ್ಳುವ ಕೂಲಿಯವರ ನೆನಪಾಯ್ತು :(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

'ಯಾಣ' ಜನಪ್ರಿಯವಾದಂತೆ ಅಲ್ಲಿ ಕಸ ಜಾಸ್ತಿಯಾಯ್ತು ಎಂಬ ವಿಷಯ ಕೇಳಿದ್ದೆ. ಈಗಂತೂ ಕರ್ನಾಟಕದಲ್ಲೇ ಪ್ರವಾಸೀ ತಾಣವೆಂದು ಎಲ್ಲಿ ಹೋದರೂ ಕಸ. ಈ‌ ನಿಟ್ಟಿನಲ್ಲಿ ದುರ್ಗದ ಕೋಟೆ ಈಗ ಎಷ್ಟೋ ಉತ್ತಮ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಿವಗಂಗೆಯಲ್ಲಿ ಲಿಂಗದ ಮೇಲೆ ತುಪ್ಪ ಸವರಿದಂತೆ ಅದು ಬೆಣ್ಣೆಯಾಗುತ್ತದೆ... ಯಾಕೆ ಅಂತ ಯಾರಿಗಾದ್ರೂ‌ ಗೊತ್ತಾ??
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲಿ೦ಗವನ್ನು ತಯಾರಿಸಿದ ಶಿಲೆಯು ಅತ್ಯಧಿಕ ಪರಿಮಾಣದಲ್ಲಿ ತ೦ಪನ್ನು ತಡೆದಿಟ್ಟುಕೊಳ್ಳುವ ಶಕ್ತಿಯನ್ನು ಹೊ೦ದಿದೆಯೇನೋ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸು೦ದರ ಚಿತ್ರಗಳೊಡನೆ ಚೊಕ್ಕದಾದ ಲೇಖನ ಮುದ ನೀಡಿತು. ಶಿವಗ೦ಗೆಯಲ್ಲಿ ಕೋತಿಗಳ ಕಾಟದ ಘಟನೆ ಓದಿ, ಮೊನ್ನೆ ೧೭ರ೦ದು, ಮು೦ಬೈನ "ಎಲಿಫೆ೦ಟಾ ಗುಹೆ"ಗಳನ್ನು ನೋಡಲು ಹೋಗಿದ್ದಾಗ ಅಲ್ಲಿನ ಕೋತಿಗಳು ಪ್ರವಾಸಿಗರಿಗೆ ಕೊಡುತ್ತಿದ್ದ ಕಾಟ ನೆನಪಾಯಿತು. ಅಲ್ಲಿನ ಭದ್ರತಾ ರಕ್ಷಕರು ನಾಯಿಗಳನ್ನು ಸಾಕಿಕೊ೦ಡಿದ್ದಾರೆ, ಯಾರಾದರೂ ಪ್ರವಾಸಿಗರಿಗೆ ಕೋತಿಗಳು ಉಪಟಳ ಕೊಟ್ಟಲ್ಲಿ ನಾಯಿಗಳನ್ನು ಛೂ ಬಿಡುತ್ತಾರೆ. ಕೆಲವು ಗಡವ ಕೋತಿಗಳು ನಾಯಿಗಳಿಗೂ ಕಚ್ಚಿ ಗಾಯಗೊಳಿಸಿವೆಯ೦ತೆ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.