ಹಸಿರು ಕಾಣದು

0

ಬೆಳಗಾಗಿ ಸೂರ್ಯನ ಹೊಂಗಿರಣ ಕಿಡಕಿಯ ಪರದೆಗೆ ತಾಗಿಕೊಂಡು ರೂಮು ಪ್ರವೇಶಿಸಿ ಬೆಳಗಾದದ್ದರ ಸೂಚನೆ ನೀಡುತ್ತಿತ್ತು. ಗುಬ್ಬಿಗಳ ಚಿಲಿಪಿಲಿ ಮುಂಜಾನೆಯ ಚಳಿಯಲ್ಲೂ ನಿದ್ರೆಯನ್ನು ಕೋಮಲವಾಗಿ ಹೋಗಲಾಡಿಸುತ್ತಿತ್ತು. ಎದುರಿದ್ದ ಪಾರ್ಕಿನ ಗಿಡ ಮರಗಳ ಮೇಲೆ ಬಿದ್ದ ಇಬ್ಬನಿ ಹಸಿರನ್ನು ಹಚ್ಚಾಗಿಸಿ ಕೆಲವು ಘಳಿಗೆ ಬೇರೆಯದೇ ಲೋಕವೊಂದನ್ನು ಸೃಷ್ಟಿಮಾಡುತ್ತಿತ್ತು. ಇವೆಲ್ಲವನ್ನೂ ಹೊರಹೋಗಿ ಚಳಿಮಳೆಯನ್ನು ಲೆಕ್ಕಿಸದೆ ಮೌನವಾಗಿ ವೀಕ್ಷಿಸುವುದೇ ಒಂದು ನಿತ್ಯದ ಹವ್ಯಾಸವಾಗಿತ್ತು. ಇದು ಹಿಂದೆ ನಾನಿದ್ದ ಒಂದು ಊರಿನಲ್ಲಿ.

ಈಗ:
ಬೆಳಗಾಗಿ ಪಕ್ಕದ ಮನೆಯವರ ವರಾಂಡಾ ಲೈಟು ಕಿಟಕಿ ಮೂಲಕ ಕಣ್ಣಿಗೆ ಹೊಡೆದು ಬೆಳಗಾಗಿದೆಯೋ ಏನೋ ಎಂಬಂತಹ ಆತಂಕ ಹುಟ್ಟಿಸುತ್ತದೆ. ಕೆಲವೊಮ್ಮೆ ರಾತ್ರೋರಾತ್ರಿ ಅವರ ಮನೆಗೆ ಅತಿಥಿಗಳೋ, ಅಥವ ಲೇಟಾಗಿ ಮನೆಯವರೇ ಬಂದರೋ ಲೈಟು ಹಾಕಿ ಬಿಟ್ಟುಬಿಟ್ಟಿರುತ್ತಾರೆ. ಆಗ ಸರಿಯಾಗಿ ನಿದ್ರೆಯಾಗಿಲ್ಲದ ಮನಸ್ಸು ಬೆಳಗಾಯಿತೇನೋ ಎಂದುಕೊಂಡು ಏನೇನೋ ಆಲೋಚಿಸಿ ನಿದ್ರೆಗೆ ಭಂಗ ತಂದುಕೊಂಡುಬಿಟ್ಟಿರುತ್ತದೆ.

ದೂರದ ಮರವೊಂದರ ಮೇಲೆ, ರೋಡಿನ ಕೊನೆಯ ಕಸದ ರಾಶಿ ಸೇರುವಲ್ಲಿ ಕಾಗೆಗಳ "ಕಾ ಕಾ" ಬೆಳಗಾದದ್ದರ ನಿಜವಾದ ಸೂಚನೆ ಕೊಡುತ್ತದೆ*. ಈ ಕರ್ಕಶ ಸೂಚನೆಗೆ ಈಗ ಎಚ್ಚರವಾಗುವುದೂ ಅಷ್ಟರಲ್ಲೇ.

ಆದರೆ ಬೆಳಗಾಯಿತೆಂದು ತಲೆ ಸಿಡಿಯುವಷ್ಟು ಕರ್ಕಶವಾಗಿ ಬಡಿದೇಳಿಸುವುದು ಇಟ್ಟುಕೊಳ್ಳಲೇಬೇಕಾದ ಅಲಾರ್ಮ್ ಅಲ್ಲ, ಮೊಬೈಲ್ ಫೋನು ಕೂಡ ಅಲ್ಲ -  ರಸ್ತೆಯಲ್ಲಿರುವವರೆಲ್ಲರೂ ಬೆಳಗಾಗೆದ್ದು ಹೊರತೆಗೆಯುವ ಕಾರುಗಳ ರಿವರ್ಸ್ ಗೇರಿನ ಪ್ರಾಣಘಾತಕ ಟ್ಯೂನುಗಳು! ಹೊರ ಹೋದರೆ ಬರೇ ಮೋಟಾರು ಗಾಡಿಗಳ ದರ್ಶನ. ಹೊರಹೊರಟ ಗಾಡಿಗಳ ಪೆಟ್ರೋಲ್ ಹೊಗೆ, ಬಸ್ಸು ಲಾರಿಗಳ ಡೀಸೆಲ್ ಹೊಗೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರ ಗಾಡಿಯ ದುರ್ಗಂಧ ಹಾಗೂ "ಕಸ ಎಲ್ಲಂದರಲ್ಲಿ ಹಾಕಬೇಡಿ" ಎಂದು ಇಲ್ಲಿನ ನಾಗರಿಕೋತ್ತಮರಿಗೆ ಪಾಠ ಹೇಳಲು ಬಳಸಲಾಗುವ ಲೌಡ್ ಸ್ಪೀಕರ್ ಸದ್ದು. ಇವೆಲ್ಲದರ ಜೊತೆಗೆ ಅಲ್ಲಲ್ಲಿ ಕಿವಿ ಚುಚ್ಚುವಷ್ಟು ಜೋರಾಗಿ ಹೊಡೆದುಕೊಳ್ಳುವ ಮೋಟಾರು ಗಾಡಿಗಳ ಹಾರ್ನುಗಳು.

ಎತ್ತ ಕಣ್ಣು ಹಾಯಿಸಿದರೂ ಹಸಿರು ಕಾಣದು.

* - ಬಸವನಗುಡಿಯ ಸುತ್ತಮುತ್ತ ಇರುವವರು ಹಾಗೆ ನೋಡಿದರೆ ಸ್ವಲ್ಪ ಪುಣ್ಯವಂತರು. ಬೆಳಗಾಗಿ ಗುಬ್ಬಚ್ಚಿಗಳು ಚೀಂವ್ ಗುಟ್ಟದಿದ್ದರೂ ಗಿಳಿಗಳ ಸ್ವರ ಕೇಳಿಬರುತ್ತದೆ (ಹಸಿರು ಬಣ್ಣದ ಗಿಳಿಗಳು ಒಟ್ಟಾಗಿ sync ಇಟ್ಟುಕೊಂಡು ಹಾರುವುದು ನೋಡಿ ಸೋಜಿಗವಾಗುತ್ತದೆ). ಅಲ್ಲಲ್ಲಿ ಮತ್ತಷ್ಟು ಪಕ್ಷಿಗಳೂ ಕಾಣಸಿಗುತ್ತವೆ. ಇದು ಎಷ್ಟು ದಿನಗಳು ಅಲ್ಲೂ ಇರುವುದೋ ಕಾದು ನೋಡಬೇಕು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಕಾಡಿನಿಂದ ನಾಡಿಗೆ ಹೋದ ಹಾಗಿದೆಯಲ್ಲರೀ ನಿಮ್ಮ ಅನುಭವ... :)
ಬೆಂಗಳೂರಿಗೆ ಬಂದಾಗ ಬೆಳಗಿನ ಜಾವ ನನಗೂ ಇಂಥದೇ ಅನುಭವ... ಅರೆ ನಿದ್ದೆಯಲ್ಲಿ ಏನೇನೋ ಕನಸಿನಂಥ ಯೋಚನೆಗಳು, ಯೋಚನೆಗಳಂಥ ಕನಸು...
ಇದರ ಬಗ್ಗೆ ದೂರಿದರೆ "ಮಹಾ ಇವನು" ಅಂತ ಬೈದಾರು ಎಂದು ಯಾರಿಗೂ ಹೇಳದೆ ಸುಮ್ಮನೆ ಇರುತ್ತೇನೆ.
ಕಳಕೊಂಡದ್ದು ಬೇಸರವೆನಿಸಿದರೂ, ಕೆಲವೇ ದಿನಗಳಲ್ಲಿ ಹೊಂದಿಕೊಂಡು ಬಿಡತೀರಿ ಬಿಡಿ.
ನಿಮ್ಮ ಅನುಭವ ಚೆನ್ನಾಗಿ ಮೂಡಿ ಬಂದಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗೆ ಎಲ್ಲಕ್ಕಿಂತ ಚಿಂತೆ ಎಂದರೆ ನಮ್ಮ ಮಕ್ಕಳದು. Atleast ನಾವು ಸ್ವಲ್ಪ ವರ್ಷವಾದರೂ ಶುದ್ಧ ವಾತಾವರಣ, ಸುಂದರ ಪ್ರಕೃತಿ ಇವನ್ನೆಲ್ಲಾ ಅನುಭವಿಸಿದ್ದೀವಿ. ಆದರೆ ಮುಂದಿನ ಪೀಳಿಗೆ ಇವನ್ನೆಲ್ಲಾ ತಪ್ಪಿಸ್ಕೊಳ್ಳುತ್ತೆ :-(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.