ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಬಿದಿಗೆ

0

ನೆನ್ನೆ ನವರಾತ್ರಿ ಆರಂಭವಾಯಿತು. ಹೆಣ್ಣುಮಕ್ಕಳಿರೋ ಮನೆಯಲ್ಲಿ ಗೊಂಬೆಗಳನ್ನ ಅಟ್ಟ, ಪೆಟ್ಟಿಗೆ - ಎಲ್ಲೆಲ್ಲಿ ಜೋಪಾನ ಮಾಡಿಟ್ಟಿದ್ರೋ, ಅಲ್ಲಿಂದ ತೆಗೆದು ಜೋಡಿಸೋ ಕೆಲಸ. ಬಹುಶ: ಗೊಂಬೆಗಳಿಗೂ ವರ್ಷ ಪೂರ್ತಿ ಒಳಗೇ ಕುಳಿತು ಜಡ್ಡುಗಟ್ಟಿರುತ್ತೋ ಏನೋ. ಆದಕ್ಕೆ ಹೊರಬಂದ ತಕ್ಷಣ ಗಾಳಿ ಕುಡಿದು ಕಳೆಕಳೆಯಾಗಿಬಿಡುತ್ತವೆ!

ನವರಾತ್ರಿ ಎಂದರೆ ಅಲ್ಲಲ್ಲಿ ಸಂಗೀತೋತ್ಸವಗಳು ನಡೆಯುವುದು ರೂಢಿ. ಅದೇ ಕಾರಣಕ್ಕೆ ಹೋದಬಾರಿಯಂತೆ ನಾನೂ ಸಂಗೀತದ ಬಗ್ಗೆಯೇ ಬರೆಯತೊಡಗಿದ್ದೇನೆ. ಇವತ್ತು ನನ್ನ ಮನಸ್ಸಿಗೆ ಬಂದ ಕೃತಿ ತ್ಯಾಗರಾಜರ ’ಗತಿ ನೀವನಿ’ ಎನ್ನುವ ತೋಡಿ ರಾಗದ ರಚನೆ.

ತ್ಯಾಗರಾಜರ ಘನರಾಗ ಪಂಚರತ್ನ ಕೃತಿಗಳು ಬಹಳ ಪ್ರಖ್ಯಾತ ರಚನೆಗಳು - ಅದರಲ್ಲೂ ಕೊನೆಯ ಪಂಚರತ್ನ ಕೃತಿಯಾದ ಎಂದರೋ ಮಹಾನುಭಾವುಲು ಎನ್ನುವುದಂತೂ ಸಂಗೀತವನ್ನು ಅಷ್ಟಾಗಿ ಕೇಳಿ ತಿಳಿಯದವರಿಗೂ ಗೊತ್ತಿರುವುದುಂಟು. ಆದರೆ, ಈ ಪಂಚರತ್ನ ಕೃತಿಗಳಲ್ಲದೇ, ಇನ್ನೂ ಕೆಲವು ಗುಂಪು-ರಚನೆಗಳನ್ನೂ ತ್ಯಾಗರಾಜರು ರಚಿಸಿದ್ದಾರೆ. ಆವುಗಳಲ್ಲಿ ಲಾಲ್ಗುಡಿ ಪಂಚರತ್ನ ಎಂಬ ಗುಂಪೂ ಒಂದು.

ಲಾಲ್ಗುಡಿ ತಮಿಳುನಾಡಿನಲ್ಲಿ ಕಾವೇರಿ ತೀರದಲ್ಲಿರುವ ಒಂದು ಊರು. ತ್ಯಾಗರಾಜರ ತಿರುವೈಯ್ಯಾರಿನಿಂದ ಪಶ್ಚಿಮಕ್ಕೆ ಒಂದು ಮೂವತ್ತು ಮೈಲಿ ದೂರವಿರಬಹುದು ಅಷ್ಟೇ. ಲಾಲ್ಗುಡಿಯ ರಾಮ ಅಯ್ಯರ್ ತ್ಯಾಗರಾಜರ ಶಿಷ್ಯರು. ಒಮ್ಮೆ ತಮ್ಮ ಗುರುಗಳನ್ನು ತಮ್ಮೂರಿಗೆ ಕರೆದು, ಸತ್ಕರಿಸಿ ಕೆಲವು ದಿನ ಉಪಚರಿಸಿ ಕಳಿಸಿದರು. ಲಾಲ್ಗುಡಿಯಲ್ಲಿ ಶಿವನ ದೇವಾಲಯವೊಂದಿದೆ. ಅಲ್ಲಿ ಶಿವನನ್ನು ಸಪ್ತಋಷೀಶ್ವರ ಎಂಬ ಹೆಸರಿನಲ್ಲಿ, ಮತ್ತೆ ಪಾರ್ವತಿಯನ್ನು ಶ್ರೀಮತಿ ಎಂಬ ಹೆಸರಿನಿಂದ ಆರಾಧಿಸುತ್ತಾರೆ. ಶಿಷ್ಯನ ಮನೆಯಲ್ಲಿ ಕೆಲದಿನಗಳು ನಿಂತ ತ್ಯಾಗರಾಜರು ಅಲ್ಲಿಯ ದೇವ-ದೇವಿಯರ ಬಗ್ಗೆ ಹಾಡಿದ್ದಲ್ಲಿ ಆಶ್ಚರ್ಯವೇನಿದೆ? ಹೀಗೆ ಇಲ್ಲಿ ಹಾಡಿದ ಐದು ರಚನೆಗಳನ್ನೇ ಲಾಲ್ಗುಡಿ ಪಂಚರತ್ನ ಎಂಬ ಹೆಸರಿನಿಂದ ಕರೆಯಲಾಗುತ್ತೆ.

’ಗತಿ ನೀವನಿ’ ಕೃತಿಯಲ್ಲಿ ತ್ಯಾಗರಾಜರು ದೇವಿಯಾದ ಶ್ರೀಮತಿಯನ್ನು, "ಓ ಶ್ರೀಮತಿ,ಮತಿಯ ವ್ಯಥೆಗಳನ್ನೆಲ್ಲ ತೀರಿಸಲು ನೀನೇ ನನಗೆ ಗತಿಯೆಂದು ನಿನ್ನಲ್ಲಿ ಕೋರಿಕೆ ಸಲ್ಲಿಸಬಂದಿರುವೆ. ಕಡೆಗಣ್ಣಿಂದ ಕಾಣದೇ, ನನ್ನನ್ನು ಸಲಹು ಎಂದು ಕೇಳಿಕೊಂಡಿದ್ದಾರೆ. ಈ ಹಾಡಿನ ಸಾಹಿತ್ಯ ತೆಲುಗುಭಾಷೆಯಲ್ಲಿದೆ.

ಈ ಹಾಡನ್ನು ಈ ಕೆಳಗೆ ಕೇಳಿ. ಇದನ್ನು ಹಾಡುತ್ತಿರುವುದು ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಲಾಲ್ಗುಡಿ ಜಿ. ಜಯರಾಮನ್ ಮತ್ತು ಅವರ ಮಗಳು ಲಾಲ್ಗುಡಿ ವಿಜಯಲಕ್ಷ್ಮಿ. ಮತ್ತೆ ಇದನ್ನು ಹಾಡುತ್ತಿರುವ ಸ್ಥಳ ಲಾಲ್ಗುಡಿಯ ಸಪ್ತರ್ಷೀಶ್ವರ-ಶ್ರೀಮತಿಯ ಗುಡಿಯಲ್ಲೇ! ಅಂದಹಾಗೆ, ಯಾವ ರಾಮ ಅಯ್ಯರ್ ಅವರ ಮನೆಗೆ ಹೋದಾಗ ತ್ಯಾಗರಾಜರು ಈ ಕೃತಿಯನ್ನು ರಚಿಸಿದರೋ, ಅವರು ಲಾಲ್ಗುಡಿ ಜಯರಾಮನ್ ಅವರ ಮುತ್ತಜ್ಜ  ಅನ್ನುವುದು ಇನ್ನೊಂದು ವಿಶೇಷ!

 

ಈ ಹಾಡು ಇರುವ ತೋಡಿ ರಾಗ ಕರ್ನಾಟಕ ಸಂಗೀತದ ಒಂದು ವಿಶಿಷ್ಟ ರಾಗ - ಹಿಂದೂಸ್ತಾನಿ ಸಂಗೀತದಲ್ಲಿ ಇದಕ್ಕೆ ಸಮಾಂತರವಾದ ಯಾವ ರಾಗವೂ ಕಂಡು ಬರುವುದಿಲ್ಲ. ಅಂದ ಹಾಗೆ ಹಳೆಯದೊಂದು ಕನ್ನಡ ಚಿತ್ರದಲ್ಲಿ ದೇವಿಯ ಮೇಲೇ ಇರುವ ಒಂದು ಸೊಗಸಾದ ಹಾಡು ತೋಡಿ ರಾಗದಲ್ಲಿದೆ. "ಶ್ರೀದೇವಿ ವಾಗ್ದೇವಿ ಜಯಗೌರಿ" ಎನ್ನುವ ಆ ಹಾಡಿನ ಕೊಂಡಿ ಯಾರ ಬಳಿಯಾದರೂ ಇದ್ದರೆ ಹಂಚಿಕೊಳ್ಳುತ್ತೀರಾ?

-ಹಂಸಾನಂದಿ

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹಂಸಾನಂದಿಯವರೆ,

ನಿಮ್ಮ ಲೇಖನ ಹಾಗೂ ಲಾಲ್ಗುಡಿಯವರ ಹಾಡುಗಾರಿಕೆಯೇನೋ ಚೆನ್ನಾಗಿದೆ ಆದರೆ ಭಾರತದಲ್ಲಿ ಈಗಿನ ಪರಿಸ್ಥಿತಿ ನೋಡಿದರೆ ಮನಸ್ಸಿಗೆ ಯಾವುದರಿಂದಲೂ ನೆಮ್ಮದಿಯಾಗಲೀ, ಸಾಂತ್ವನವಾಗಲೀ, ಭರವಸೆಯಾಗಲೀ ಸಿಗುತ್ತಾ ಇಲ್ಲ. ಎಷ್ಟು ಅನಿರ್ದಿಷ್ಟವಾಗಿ ಬಿಟ್ಟಿದೆಯಲ್ಲ ಅಲ್ಲಿ ಜನ ಸಾಮಾನ್ಯರ ಜೀವನ. :(

ಶಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.