ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?

0

ದಟ್ಸ ಕನ್ನಡದಲ್ಲಿ ಇವತ್ತು ಪ್ರಕಟವಾಗಿರುವ ವರದಿ ಒಂದರ ಕೊಂಡಿ ಕೆಳಗಿದೆ.

ಕುಂಭ ರಾಶಿ ಮೇಲೆ ಕೆಟ್ಟ ಪರಿಣಾಮ ಬೀರಲಿರುವ ಗ್ರಹಣ

http://thatskannada.oneindia.in/news/2008/08/18/lunar-eclipse-affect-on-12rashis-astrologer-sk-jain.html#cmntTop

ಎಸ್.ಕೆ. ಜೈನ್ ಅವರು ಏನಾದರೂ ಹೇಳಲಿ, ಅದು ಅವರ ಹಕ್ಕು, ಮತ್ತು ನಂಬಿಕೆ.ಆದರೆ,ವರದಿಗಾರರು ವಾರ್ತೆಯೊಂದನ್ನು ಪ್ರಕಟಿಸುವ ಮೊದಲು ಸ್ವಲ್ಪವಾದರೂ, ಅದು ಸರಿಯೇ ತಪ್ಪೇ ಅನ್ನುವುದನ್ನು ನೋಡಿ ತಿದ್ದಿ ಬರೆಯಬೇಡವೇ?

ಈ ಕೆಳಗಿನ ರೀತಿಯ  ತಪ್ಪು ತಪ್ಪಾದ ಸಾಲುಗಳ ಬಗ್ಗೆ ನನಗೆ ಬಹಳ ಸಿಟ್ಟು ಬರುತ್ತೆ.

ಸೂರ್ಯಗ್ರಹಣ ಹಾಗೂ ಚಂದ್ರಗ್ರಣ ಕೇವಲ 15 ದಿನಗಳ ಅಂತರದಲ್ಲಿ ಸಂಭವಿಸುವುದು ಬಹಳ ಅಪರೂಪದ ಘಟನೆ.

ಇದೆಷ್ಟು ಸರಿ ಎಂದು ತಿಳಿಯಲು, ಕಳೆದ ೫ ವರ್ಷಗಳಲ್ಲಿ ನಡೆದಿರೋ ಗ್ರಹಣಗಳ ಪಟ್ಟಿ ನೋಡೋಣವೇ?

೨೦೦೪:

ಏಪ್ರಿಲ್ ೧೯: ಸೂರ್ಯಗ್ರಹಣ; ಮೇ ೪: ಚಂದ್ರಗ್ರಹಣ

ಅಕ್ಟೋಬರ್ ೧೪: ಸೂರ್ಯಗ್ರಹಣ; ಅಕ್ಟೋಬರ್ ೨೮: ಚಂದ್ರಗ್ರಹಣ

೨೦೦೫

ಏಪ್ರಿಲ್ ೦೮: ಸೂರ್ಯಗ್ರಹಣ; ಏಪ್ರಿಲ್ ೨೪: ಚಂದ್ರ ಗ್ರಹಣ

ಅಕ್ಟೋಬರ್ ೩: ಸೂರ್ಯಗ್ರಹಣ ;ಅಕ್ಟೋಬರ್ ೧೭: ಚಂದ್ರಗ್ರಹಣ

೨೦೦೬:

ಮಾರ್ಚ್ ೧೪: ಚಂದ್ರಗ್ರಹಣ;ಮಾರ್ಚ್ ೨೯: ಸೂರ್ಯಗ್ರಹಣ

ಸೆಪ್ಟೆಂಬರ್ ೭: ಚಂದ್ರಗ್ರಹಣ; ಸೆಪ್ಟೆಂಬರ್ ೨೨: ಸೂರ್ಯಗ್ರಹಣ

೨೦೦೭:

ಮಾರ್ಚ್ ೩: ಚಂದ್ರಗ್ರಹಣ; ಮಾರ್ಚ್ ೧೯:ಸೂರ್ಯಗ್ರಹಣ

ಆಗಸ್ಟ್ ೨೮: ಚಂದ್ರಗ್ರಹಣ;ಸೆಪ್ಟೆಂಬರ್ ೧೧: ಸೂರ್ಯಗ್ರಹಣ

 ೨೦೦೮:

ಫೆಬ್ರವರಿ ೭: ಸೂರ್ಯಗ್ರಹಣ; ಫೆಬ್ರವರಿ ೨೧:  ಚಂದ್ರಗ್ರಹಣ

ಆಗಸ್ಟ್ ೧: ಸೂರ್ಯಗ್ರಹಣ; ಅಗಸ್ಟ್ ೧೬:  ಚಂದ್ರಗ್ರಹಣ

ಈ ಪಟ್ಟಿಯನ್ನು ನೋಡಿದರೆ ಏನು ಅರ್ಥವಾಗುತ್ತೆ?

೧. ಪ್ರತಿ ಗ್ರಹಣವೂ ಇನ್ನೊಂದು ಗ್ರಹಣವಾದ  ಹದಿನಾಕು/ಹದಿನೈದು ದಿನಗಳಿಗೇ ಆಗುತ್ತೆ

೨. ೧೦ ಗ್ರಹಣ ಜೋಡಿಗಳಲ್ಲಿ, ಆರು ಸಲ ಸೂರ್ಯಗ್ರಹಣವಾಗಿ ಹದಿನೈದು ದಿನದ ನಂತರ ಚಂದ್ರಗ್ರಹಣ ಬಂದಿದೆ. ಇನ್ನು ನಾಕು ಸಲ ಮೊದಲು ಚಂದ್ರಗ್ರಹಣವಾಗಿ, ಮತ್ತೆ ಒಂದು ಪಕ್ಷವಾದ ನಂತರ ಸೂರ್ಯ ಗ್ರಹಣ ಬಂದಿದೆ.

ಹಾಗಾದರೆ, ಈ ಬಾರಿಯ ಗ್ರಹಣ ಅದು ಯಾವ ಮೂಲೆಯಿಂದ "ಅಪರೂಪದ ಘಟನೆ"?

ಇದು ನಿಜವಾದರೆ, ಹತ್ತು ದಿನಗಳಲ್ಲಿ ಆರು ದಿನ ನಮ್ಮ ಮನೆಗೆ ಬರುವರಿಗೆ ನಾವು ಇನ್ನು ಮೇಲೆ "ಅಪರೂಪದ ಅತಿಥಿಗಳು" ಅನ್ನಬೇಕು ಅನ್ನಿಸುತ್ತೆ!!

-ಹಂಸಾನಂದಿ

ಸೂ: ಸಂಪದದಲ್ಲಿ  ಬರೆಯುವ/ಓದುವ ಬಳಗದಲ್ಲಿ ಹಲವಾರು ಪತ್ರಕರ್ತರು - ವರದಿಗಾರರು ಇದ್ದಾರೆ ಅಂತ ನನ್ನೆಣಿಕೆ. ಈ ಬರಹ ಮೊನಚಾಗಿದೆ ಎಂದೆನಿಸಿದರೂ ನನಗೇನೂ ಬೇಸರವಿಲ್ಲ. ದಯವಿಟ್ಟು ನಾನು ಏಕೆ ಹೀಗೆ ಹೇಳುತ್ತಿದ್ದೀನೆಂಬುದರ ಬಗ್ಗೆ ಗಮನ ಕೊಡಿ. ದಟ್ಸ್ ಕನ್ನಡದಲ್ಲೇ ನನ್ನ ಅಭಿಪ್ರಾಯ ಪ್ರಕಟಿಸಲು ನೋಡಿದೆ. ಆದರೆ, ಅದೇನೋ ಅಲ್ಲಿ ಹಾಕಲು ಆಗುತ್ತಿಲ್ಲ! ಅದಕ್ಕೆಂದು ಇಲ್ಲಿ ಬರೆದೆ.ಅಂದಹಾಗೆ, ದಟ್ಸ್ ಕನ್ನಡದಲ್ಲಿ ಈ ರೀತಿ ವರದಿಗಳು ಪ್ರಕಟವಾಗುತ್ತಿರುವುದೇನೂ ಮೊದಲ ಸರತಿ ಅಲ್ಲ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

> ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?

ಸದ್ಯಕ್ಕಂತೂ ಕಾಣೆ...! :)
ಈಗೇನಿದ್ದರೂ...
ಸತ್ಯಕ್ಕಿಂತಾ ಮಸಾಲ ಸುದ್ದಿ ಮುಖ್ಯ --> ಮಸಾಲ ಹೆಚ್ಚು ಇದ್ದಷ್ಟು ಜನ ಹೆಚ್ಚು ನೋಡುತ್ತಾರೆ-->
ಹೆಚ್ಚು ನೋಡಿದರೆ ಹೆಚ್ಚು ಜಾಹಿರಾತು --> ಹೆಚ್ಚು ಜಾಹಿರಾತಿನಿಂದ ಹೆಚ್ಚು ಹಣ...!
ಯಾರೋ ಪತ್ರಿಕೆ/ನ್ಯೂಸ್ ಚಾನಲ್ ಹುಟ್ಟು ಹಾಕಿದವರು ಚೆನ್ನಾಗಿ ಹಣ ಮಾಡುತ್ತಾರೆ...

ಹಣವನ್ನು ತರದ ಕಾರ್ಯಕ್ರಮಗಳು ಹಿಂದೆ ಸರಿಯುತ್ತಿವೆ... ಸುಳ್ಳು ಹೆಚ್ಚು ನಲಿಯುತ್ತಿದೆ...
ಎಲ್ಲ 'ರಿಯಾಲಿಟಿ ಷೋ' ಗಳ ಕಥೆ ಇಷ್ಟೇ ಅಲ್ಲವೇ?
ಜನರ ಮುಂದೆ ಬಯ್ದಾಡುವ ಜಡ್ಜ್ ಗಳ ದೃಶ್ಯ ಎಲ್ಲೆಡೆ ರಾರಾಜಿಸುತ್ತದೆ...
ಜಡ್ಜ್ ಸ್ಥಾನಕ್ಕೆ ಅಪಮಾನ ಮಾಡಿದಂತೆ...ಅಲ್ಲವೇ?
ಇದೆಲ್ಲ ಮಕ್ಕಳಿಗೆ ಹೇಗೆ ಪ್ರಭಾವ ಬೀರುವುದೋ !

ಮಾಧ್ಯಮಕ್ಕೆ/ಪತ್ರಿಕೆಗಳಿಗೆ ಫ್ರಾನ್ಸ್ ನ ಪ್ರಧಾನಿಯ ಹೆಂಡತಿಯ ಚಿತ್ರಗಳು ಮುಖ್ಯವೇ ಹೊರತು ನಮ್ಮಲ್ಲಿರುವ ರೈತರ ಸಮಸ್ಯೆಗಳಲ್ಲ...

ಇಂಡಿಯಾ ಟೈಮ್ಸ್.ಕಾಂ ಒಮ್ಮೆ ತೆಗೆದು ನೋಡಿ - ಇಂಡಿಯ ಸುದ್ದಿ ಮಸೂರದಿಂದ ಹುಡುಕಬೇಕಷ್ಟೆ ಇತ್ತೀಚೆಗೆ! ಹೆಸರಿಗೆ ಮಾತ್ರ ಇಂಡಿಯ ಟೈಮ್ಸ್!

ನೀವು ಹೇಳಿದ ಗ್ರಹಣದ ವಿಚಾರವಾದರೂ ಪರವಾಗಿಲ್ಲ...
ಆರುಷಿ ಪ್ರಕರಣದಲ್ಲಂತೂ ತಂದೆ-ಮಗಳ ಸಂಬಂಧವನ್ನೇ ಹಿಂದೆ ಮುಂದೆ ನೋಡದೆ ಕೆಡಿಸಿದರು!
ಹಲವಾರು ದಿನಗಳು ಇದರ ಬಗ್ಗೆ ಚರ್ಚೆ ಬೇರೆ!

ಇಡೀ ಪತ್ರಿಕಾ ಮಾಧ್ಯಮವೇ ಕುಲಗೆಟ್ಟಿದೆ...
ಬೆನ್ನಟ್ ಮತ್ತು ಕೋಲ್ಮನ್ ಕಂ. ಬೆನ್ನಿಗೆ ಕೋಲಿನಿಂದ ಬಾರಿಸಬೇಕು, ನನಗಿಸುವಂತೆ ಇವರೇ ಇತ್ತೀಚಿನ ಕಳಪೆ ಸ್ಥಿತಿಗೆ ಒಂದು ಮುಖ್ಯ ಕಾರಣ...ಕೊಚ್ಚೆ ಗುಂಡಿಗೆ ದಾರಿದೀಪವಾಗಿ ನಿಂತಿದ್ದಾರೆ...
ಇದೆ ಜಾಡು ಹಿಡಿದಿದೆ ಕನ್ನಡ ಪತ್ರಿಕೆಗಳು...
ಇದರ ಬಗ್ಗೆ ಎಷ್ಟು ಚರ್ಚಿಸಿದರೂ ಸಾಲದು :(

--ಶ್ರೀ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚುನಾವಣೆಗೆ ಮುಂಚೆ..ನರೇಂದ್ರ ನಾಯಕ್ ಅನ್ನುವವರು ಜ್ಯೋತಿಷಿಗಳಿಗೆ ಪಂಥಾಹ್ವಾನ ಮಾಡಿದ್ದರು..ಯಾರಾದರು ಸರಿಯಾಗಿ ಭವಿಷ್ಯ ಹೇಳಿದರೆ ಬಹುಮಾನ ಕೊಡುವುದಾಗಿ..ಇದನ್ನು ದಟ್ಸ್ ಕನ್ನಡ ಕೂಡ ದೊಡ್ಡದಾಗಿ ಹಾಕಿತ್ತು. ಆದ್ರೆ ಆಮೇಲೆ ಯೇನಾಯಿತು..ಯಾರಾದರು ಬಹುಮಾನ ಪಡೆದ್ರ ಇಲ್ವ ಅಂತ ಸುದ್ದಿನೇ ಇಲ್ಲ. ಇವರಿಗೆ ಪರಿಸ್ತಿಯ ಲಾಭ ಬಾಚೊದಸ್ಟೆ ಮುಖ್ಯ...ನಮ್ಮ ದೇಶದ ಹಲವು ಹಗರಣಗಳ ಹಾಗೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Well researched ಹಾಗೂ ತಾರ್ಕಿಕ ಬರೆಹ. ಶ್ರೀಯರು ಹೇಳಿದಂತೆ ಸತ್ಯಕ್ಕಿಂತ ’ಸುದ್ದಿ ಮಾಡುವುದು’ ಮುಖ್ಯ ಈಗ ಮಾಧ್ಯಮಗಳಿಗೆ. ಮೊದಲು ಸುದ್ದಿ ಎಬ್ಬಿಸಿಬಿಡೋಣ, ಬಹಳಷ್ಟು ಜನ ನಂಬಿದರೆ ಆ ಸುದ್ದಿಯೇ ಸತ್ಯವಾಗುತ್ತದೆ ಎನ್ನುವು ಧೋರಣೆಯೇನೋ! ಅಥವಾ ಬರೆ ನಿರ್ಲಕ್ಷ್ಯವೋ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸಾನಂದಿಯವರೇ ನೀವು ಪಟ್ಟಿ ನೀಡಲು ತೆಗೆದುಕೊಂಡ ಶ್ರಮಕ್ಕಾಗಿ ಮತ್ತು ಮೊನಚು ಬರಹಕ್ಕೂ ಧನ್ಯವಾದಗಳು. ನನ್ನ ಕೆಲಮಿತ್ರರಿಗೆ ಇದನ್ನು ಮಿಂಚಂಚೆ ಮೂಲಕ ಕಳುಹಿಸುತ್ತೇನೆ.
*ಅಶೋಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಸ್.ಕೆ.ಜೈನರು ಯಾಕೆ ಹೀಗೆ ಹೇಳಿದರೋ ಗೊತ್ತಿಲ್ಲ. ಆದರೆ ಅವರು ಜ್ಯೋತಿಷ್ಯವನ್ನು ಬಹಳ ವೈಜ್ಞಾನಿಕ ರೀತಿಯಲ್ಲೇ ನಿರೂಪಿಸುತ್ತಾರೆ. ಬಹಳಷ್ಟು ನಿದರ್ಶನಗಳನ್ನೂ ನೀಡುತ್ತಾರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜ್ಯೋತಿಷ್ಯವನ್ನು ಬಹಳ ವೈಜ್ಞಾನಿಕ ರೀತಿಯಲ್ಲೇ ನಿರೂಪಿಸುತ್ತಾರೆ
(ಜೈನ್ ಬಗ್ಗೆ ನಾನು ಹೇಳ್ತಿಲ್ಲ.) ಆದರೆ ಹೆಚ್ಚಿನ ಕಡೆ ವೈಜ್ಞಾನಿಕ ರೀತಿಯಲ್ಲಿ ಹೇಳುತ್ತಿರುವ ಭ್ರಮೆ ಹುಟ್ಟಿಸುವುದೇ ಹೆಚ್ಚು.
*ಅಶೋಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವರದಿಗಾರರ ಬಗ್ಗೆ ನೀವು ಬರೆದಿದ್ದರಲ್ಲಿ ತಪ್ಪಿಲ್ಲ ಹಂಸನಂದಿಯವರೇ. ತುಂಬ ಜನ ಹಾಗೇ ಇದ್ದಾರೆ. ಕಾಗುಣಿತ ದೋಷಗಳಷ್ಟೇ ಅಲ್ಲ, ಬರವಣಿಗೆಯ ಹದ, ಸತ್ಯಾಸತ್ಯತೆ ಕೂಡ ಕೆಟ್ಟಿರುತ್ತದೆ. ಆದರೆ, ಜಂಭಕ್ಕೆ ಮಾತ್ರ ಕೊರತೆಯಿಲ್ಲ.

ದಟ್ಸ್‌ ಕನ್ನಡ ಒಂದೇ ಅಲ್ಲ, ಬಹಳಷ್ಟು ಅಂತರ್ಜಾಲ ತಾಣಗಳು ಬುರ್ಖಾತಾಣಗಳಾಗಿವೆ. ಅಲ್ಲಿ ನೇರವಾಗಿ ನಿಮ್ಮ ಪ್ರತಿಕ್ರಿಯೆ ಹಾಕಲು ಬಿಡುವುದಿಲ್ಲ. ಉಗಿಯುತ್ತಾರೆ ಎಂಬ ಭಯ. ಹಿಂದೆ ನಾನು ಕೂಡ ಹಲವಾರು ತಾಣಗಳಿಗೆ ಪ್ರತಿಕ್ರಿಯೆ ಬರೆದಿದ್ದೆ. ಆದರೆ, ಪ್ರಕಟವಾಗಲಿಲ್ಲ. ಕಾರಣ ತಿಳಿದ ನಂತರ, ಪ್ರತಿಕ್ರಿಯೆ ಹಾಕುವುದನ್ನೇ ಬಿಟ್ಟೆ. ಪ್ರತಿಕ್ರಿಯೆಗಳನ್ನು ಇಷ್ಟೊಂದು ಶೋಧಿಸುವವ ಬುದ್ಧಿ ಇರುವವರು, ಪ್ರಕಟವಾಗುವ ಮುನ್ನ ಕೆಟ್ಟ ಬರಹಗಳು ಹಾಗೂ ವರದಿಗಳನ್ನು ಏಕೆ ಶೋಧಿಸುವುದಿಲ್ಲವೋ.

- ಚಾಮರಾಜ ಸವಡಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇವಕ್ಕೆ ಪೂರಕವಾಗಿ ಕೆಲ ದಿನಗಳ ಹಿಂದೆ ನಾನು ಬರೆದ ಬರಹ...

ಮಾಧ್ಯಮಗಳು ನಿದ್ದೆ ಮಾಡುವುದೇಕೆ?
http://www.sampada.net/blog/srinivasps/19/05/2008/8833

ಮಾಧ್ಯಮಗಳು ಇತ್ತೀಚೆಗೆ ಸಕಾರಾತ್ಮಕ ಕೆಲಸ ಮಾಡುತ್ತಿಲ್ಲ ಎಂದು ನನ್ನ ಅನಿಸಿಕೆ ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲ ರೀ - ಕಾಮೆಂಟ್ ಏನೂ ಮಾಸ್ಕ್ ಮಾಡಿರ್ಲಿಲ್ಲ. - ಅದೇನೋ ತೊಂದರೆ ಇತ್ತು ಅನ್ಸತ್ತೆ. ಆಮೇಲೆ ಅಲ್ಲೇ ಕಮೆಂಟ್ ಹಾಕೋದಕ್ಕೆ ಆಯ್ತು..

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬ್ಲಾಗರ್ ನಲ್ಲಿ ನನ್ನ ಬರಹವನ್ನು ಓದಿದ ಹರೀಶರು ಹೀಗಂದರು:

[quote] ನೀವು ಪ್ರಸ್ತಾಪಿಸಿರುವ ಗ್ರಹಣಗಳು ಒಂದೇ ಕಡೆ ಕಂಡ ಗ್ರಹಣಗಳೋ ಅಥವಾ ವಿಶ್ವದಾದ್ಯಂತ ಕಂಡ ಗ್ರಹಣಗಳೋ?

ತಾರ್ಕಿಕವಾಗಿ, ಪ್ರತಿ ಹುಣ್ಣಿಮೆಗೂ ಚಂದ್ರಗ್ರಹಣ ಹಾಗೂ ಪ್ರತಿ ಅಮಾವಾಸ್ಯೆಗೂ ಸೂರ್ಯಗ್ರಹಣ ಆಗಬೇಕಾಗಿತ್ತು. ಆದರೆ ಭೂಮಿಯ ಪಥದ ಸಮತಳದಲ್ಲಿ ಚಂದ್ರ ಇರದಿರುವುದರಿಂದ ಹಾಗಾಗುವುದಿಲ್ಲ. ಅದೂ ಅಲ್ಲದೆ ಯಾವ ಗ್ರಹಣವೂ ವಿಶ್ವದೆಲ್ಲೆಡೆ ಕಂಡುಬರುವುದಿಲ್ಲ. ಹಾಗಾಗಿ ಗ್ರಹಣಗಳು ಪದೇ ಪದೇ ಬರುತ್ತವಾದರೂ ಅವು ಯಾವುದೇ ಒಂದು ಪ್ರದೇಶದಲ್ಲಿ ಯಾವಾಗಲೂ ಕಂಡು ಬರುವುದಿಲ್ಲ.

ಮೊನ್ನೆ ಆದ ಎರಡೂ ಗ್ರಹಣಗಳು ಕೆಲವು ಸ್ಥಳಗಳಿಂದ ಕಂಡವು (ಮೋಡ ಮುಸುಕಿದ್ದು ಬೇರೆ ವಿಷಯ). ಇಂಥ ಘಟನೆ ನನಗೆ ತಿಳಿದಂತೆ ಅಪರೂಪವೇ. ಅದನ್ನೇ ಆ ಪತ್ರಕರ್ತ ಹೇಳಲು ಹೋಗಿ ಅಪಾರ್ಥವಗಿರಬಹುದು ಎಂಬುದು ನನ್ನ ಅನಿಸಿಕೆ. [/quote]

ಅಲ್ಲಿ ಈ ವಿಷಯಕ್ಕೆ ಟಿಪ್ಪಣಿ ಹಾಕಿದ ಮೇಲೆ, ಇಲ್ಲಿಯೂ ಅದನ್ನೇ ಹಾಕಿದರೆ ಒಳ್ಳೇದು ಎನ್ನಿಸಿತು.

ನಾನು ನನ್ನ ಬರಹದಲ್ಲಿ ಹೇಳಿದ್ದು ಒಟ್ಟಿನಲ್ಲಿ ಭೂಮಿಯ ಮೇಲೆ ಕಂಡ ಗ್ರಹಣಗಳು. ಒಂದೇ ಕಡೆ ಕಂಡವು ಅಲ್ಲ. ಆದರೂ, ಒಂದೇ ಕಡೆಯಲ್ಲಿ ಕಾಣುವ ಗ್ರಹಣಗಳಲ್ಲಿಯೂ ಹದಿನೈದು ದಿನದ ಅಂತರದಲ್ಲಿ ಕಾಣುವ ಗ್ರಹಣಗಳು ಅಂತಹ ಅಪರೂಪದ್ದೇನಲ್ಲ.

ಈಗ ಕೆಳಗೆ ಭಾರತದಿಂದ ಕಂಡ ಗ್ರಹಣಗಳನ್ನು ಮಾತ್ರ ಪಟ್ಟಿ ಮಾಡುವೆ:

೨೦೦೪:
ಮೇ ೪: ಚಂದ್ರಗ್ರಹಣ
ಅಕ್ಟೋಬರ್ ೨೮: ಚಂದ್ರಗ್ರಹಣ

೨೦೦೫:
ಅಕ್ಟೋಬರ್ ೩: ಸೂರ್ಯಗ್ರಹಣ ;ಅಕ್ಟೋಬರ್ ೧೭: ಚಂದ್ರಗ್ರಹಣ

೨೦೦೬:
ಮಾರ್ಚ್ ೧೪: ಚಂದ್ರಗ್ರಹಣ;ಮಾರ್ಚ್ ೨೯: ಸೂರ್ಯಗ್ರಹಣ
ಸೆಪ್ಟೆಂಬರ್ ೭: ಚಂದ್ರಗ್ರಹಣ;
** ೨೦೦೬ ರ ಎರಡೂ ಗ್ರಹಣಗಳು ಪೆನಮ್ಬ್ರಲ್ - ಅಂದರೆ ಚಂದ್ರನ ಬಹುಪಾಲು ಕಡುವಾದ ನೆರಳಲ್ಲಿ ಹೋಗಿಲ್ಲ

೨೦೦೭:
ಮಾರ್ಚ್ ೩: ಚಂದ್ರಗ್ರಹಣ; ಮಾರ್ಚ್ ೧೯:ಸೂರ್ಯಗ್ರಹಣ
ಆಗಸ್ಟ್ ೨೮: ಚಂದ್ರಗ್ರಹಣ;

೨೦೦೮:
ಫೆಬ್ರವರಿ ೨೧: ಚಂದ್ರಗ್ರಹಣ
ಆಗಸ್ಟ್ ೧: ಸೂರ್ಯಗ್ರಹಣ; ಅಗಸ್ಟ್ ೧೬: ಚಂದ್ರಗ್ರಹಣ

ಈಗ ಈ ಹೆಚ್ಚುವರಿ ಮಾಹಿತಿಯ ಜೊತೆಗೆ ನೋಡಿದರೂ ೨೦೦೪ ರಿಂದ ೨೦೦೮ರ ವರೆಗೆ ಐದು ವರ್ಷಗಳಲ್ಲಿ ನಡೆದ ೨೦ ಗ್ರಹಣಗಳಲ್ಲಿ, ಭಾರತದಿಂದ ೧೩ ಗ್ರಹಣಗಳು ಕಂಡಿವೆ. ಇವುಗಳಲ್ಲಿ ೮ ಗ್ರಹಣಗಳು ೪ ಜೋಡಿಗ್ರಹಣಗಳಾಗಿಯೇ ಬಂದಿವೆ. ಅಂದರೆ ಸುಮಾರು ಶೇಕಡಾ ೬೦% ರಷ್ಟು ಗ್ರಹಣಗಳು ಜೋಡಿಗ್ರಹಣಗಳಲ್ಲಿ ಒಂದಾಗಿ ಕಾಣಿಸಿಕೊಂಡಿವೆ. ಅಂದರೆ, ೫ ವರ್ಷಗಳ ಅವಧಿಯಲ್ಲ, ೪ ವರ್ಷಗಳಲ್ಲಿ ಪ್ರತೀ ವರ್ಷ ೧೫ ದಿನದ ಅಂತರವಿರುವ ಜೋಡಿ ಗ್ರಹಣಗಳು ಭಾರತದಿಂದ ಕಂಡಿವೆ!

ಈಗ ನೋಡಿದರೂ ಇವು ಅಪರೂಪ ಅಲ್ಲ. ಅಲ್ಲವೇ?

ವರದಿಗಾರರು ಅಪರೂಪ ಅಂತ ಎಸ್.ಕೆ.ಜೈನರು ಹೇಳಿದ್ದು ಕೇಳಿದರೆ, ಯಾಕೆ ಏನು ಅಂತ ವಿಚಾರಿಸಿ ಬರೆಯಬಹುದಿತ್ತಲ್ಲ ಅದು ಯಾವ ವಿಚಾರದಲ್ಲಿ ಹೆಚ್ಚುಗಾರಿಕೆ ಅಂತ ಅದು ಬಿಟ್ಟು ಹದಿನೈದು ದಿನಗಳಲ್ಲಿ ಎರಡು ಗ್ರಹಣಗಳು ಕಾಣುವುದೇ ಅಪರೂಪ ಅನ್ನುವುದು ಯಾಕೆ?

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮತ್ತೆ ದಟ್ಸ್ ಕನ್ನಡ ಲೇಖನವನ್ನು ಓದುವಾಗ ಅಲ್ಲಿದ್ದ ಇನ್ನೆರಡು ಮಾತುಗಳು ಗಮನಸೆಳೆದವು

[quote] ಇತ್ತೀಚೆಗಷ್ಟೇ ಸಂಭವಿಸಿದ ಸೂರ್ಯಗ್ರಹಣ ನಂತರ ಅಮರನಾಥ ಭೂ ವಿವಾದ ಭುಗಿಲೆದ್ದದ್ದು ಹಾಗೂ ಈ ಹಿಂದೆ ರಾಜಕುಮಾರಿ ಡಯಾನ ಕಾರು ಅಪಘಾತದಲ್ಲಿ ಮೃತಪಟ್ಟಿದ್ದು,ಸುನಾಮಿ ಸಂಭವಿಸಿದ್ದು ಎಲ್ಲಾ ಚಂದ್ರಗ್ರಹಣ ಆದ ನಂತರವೇ ಎಂದು ಅವರು ಉದಾಹರಿಸಿದರು. [/quote]

ಆಮೇಲೆ, ಇವುಗಳು ಎಷ್ಟು ಸರಿ ಎಂದು ಒಮ್ಮೆ ನೋಡಿದೆ

೨೦೦೪ ರ ಸುನಾಮಿ ಬಂದದ್ದು - ಡಿಸೆಂಬರ್ ೨೬, ೨೦೦೪ ರಂದು ; ಆ ವರ್ಷ ದ ಕಡೆಯ ಚಂದ್ರಗ್ರಹಣ ಆದದ್ದು ಅಕ್ಟೋಬರ್ ಇಪ್ಪತ್ತೆಂಟಕ್ಕೆ! ಅಂದರೆ ಸುಮಾರು ೨ ತಿಂಗಳ ನಂತರ :)

ಡಯಾನ ಸತ್ತದ್ದು ಆಗಸ್ಟ್ ೩೧, ೧೯೯೭ರಂದು. ಆ ವರ್ಷ ಸೆಪ್ಟೆಂಬರ್ ೨ ಕ್ಕೆ ಸೂರ್ಯ ಗ್ರಹಣವೂ, ಸೆಪ್ಟೆಂಬರ್ ೧೬ಕ್ಕೆ ಚಂದ್ರಗ್ರಹಣವೂ ಆಗಿವೆ. ಅಂದರೆ, ಮುಂದೆ ಹದಿನೈದು ದಿನ ನಂತರ ನಡೆಯಲಿರುವ ಗ್ರಹಣದಿಂದ ಡಯಾನಾ ಸತ್ತಿದ್ದು! ಅಬ್ಬ!

ಈ ಎರಡು ಘಟನೆಗಳೂ ಅದಕ್ಕೆ ಮುಂಚೆ ನಡೆದಿರುವ ಯಾವುದಾದರೂ ಚಂದ್ರಗ್ರಹಣದ ನಂತರ ನಡೆದ ಘಟನೆಗಳು ಅಂತ ಧಾರಾಳವಾಗಿ ಹೇಳಬಹುದಷ್ಟೇ!!!!

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.