ನವರಾತ್ರಿಯ ಮೂರನೆಯ ದಿನ

0

ಇವತ್ತು ನವರಾತ್ರಿಯ ಮೂರನೆಯ ದಿನ. ಮೈಸೂರು ಮತ್ತು ತಂಜಾವೂರು ಎರಡೂ ೧೮-೧೯ ನೆ ಶತಮಾನಗಳಲ್ಲಿ ದಕ್ಷಿಣ ಭಾರತದ ಪ್ರಮುಖ ಸಾಂಸ್ಕೃತಿಕ ನೆಲೆಗಳಾಗಿ ರೂಪುಗೊಂಡವು. ಹಾಗಾಗಿಯೇ ಇಂದಿಗೂ ನಾವು ವೀಣೆ, ಚಿತ್ರಕಲೆ ಮತ್ತು ಭರತನಾಟ್ಯ ಇವೆರಡರಲ್ಲೂ, ಮೈಸೂರು ಶೈಲಿ ಮತ್ತು ತಂಜಾವೂರು ಶೈಲಿ ಎಂದು ಎರಡು ಪ್ರಮುಖ ಶೈಲೆಗಳನ್ನು ನೋಡಬಹುದು. ಕರ್ನಾಟಕ ಸಂಗೀತ ತ್ರಿಮೂರ್ತಿಗಳೆಂದೇ ಹೆಸರಾದ  ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತ ಮತ್ತು ಶಾಮಾಶಾಸ್ತ್ರಿ ಅವರು ಬಾಳಿದ್ದು ತಂಜಾವೂರು ರಾಜ್ಯದಲ್ಲೇ. ಅದರಲ್ಲಿಯೂ ಶಾಮಾಶಾಸ್ತ್ರಿ ಅವರು ಇದ್ದದ್ದಂತೂ ತಂಜಾವೂರು ನಗರದಲ್ಲೇ.

ಶಾಮಾಶಾಸ್ತ್ರಿ ಅವರ ನಿಜವಾದ ಹೆಸರು ವೆಂಕಟಕೃಷ್ಣ. ಆದರೆ, ಹೆಚ್ಚಾಗಿ ಅವರು ಶಾಮಾಶಾಸ್ತ್ರಿ ಎನ್ನುವ ಹೆಸರಿನಿಂದಲೇ ಪ್ರಖ್ಯಾತರಾಗಿದ್ದಾರೆ.ತಮ್ಮ ರಚನೆಗಳಲ್ಲಿ ಶಾಮಕೃಷ್ಣ ಎಂಬ ಅಂಕಿತವಿಟ್ಟಿದ್ದಾರೆ. ಇವರು ತಮ್ಮ ರಚನೆಗಳಲ್ಲಿ ದೇವಿಯನ್ನು, ಸಾಧಾರಣವಾಗಿ ಶಾಮಕೃಷ್ಣಸೋದರಿ ಎಂದು ಕರೆಯುತ್ತಾರೆ.  ಇವರು ತಂಜಾವೂರಿನ ಬಂಗಾರು ಕಾಮಾಕ್ಷಿಯ ಅರ್ಚಕರಾಗಿದ್ದರು. ಹೆಚ್ಚಾಗಿ ಇವರ ರಚನೆಗಳು ಈ ಬಂಗಾರು ಕಾಮಾಕ್ಷಿಯ ಮೇಲೇ ರಚಿತವಾಗಿವೆ. ಸಂಗೀತ ತ್ರಿಮೂರ್ತಿಗಳಲ್ಲಿ, ಸಂಖ್ಯೆಯ ದೃಷ್ಟಿಯಿಂದ ನೋಡಿದರೆ, ಇವರು ಎಲ್ಲರಿಗಿಂತ ಕಡಿಮೆ ರಚನೆಗಳನ್ನು ಮಾಡಿದ್ದಾರೆ. ಆದರೆ, ಒಂದೂಂದೂ ಅನರ್ಘ್ಯ ರತ್ನವೆಂದು ಹೇಳಬಹುದು.

ಶರಭೋಜಿ (ಕ್ರಿ.ಶ.1777-1832) ತಂಜಾವೂರಿನ ರಾಜನಾಗಿದ್ದಾಗ, ಬೊಬ್ಬಿಲಿ ಕೇಶವಯ್ಯ ಎಂಬ ಸಂಗೀತಗಾರರು ಅವನ ಆಸ್ಥಾನಕ್ಕೆ ಬಂದರಂತೆ. ಎಲ್ಲಿ ಹೋದರೂ, ಅಲ್ಲಿ ಸಂಗೀತಗಾರರನ್ನು ತನ್ನ ಸಂಗೀತಚತುರತೆಯಿಂದ, ಸವಾಲು ಹಾಕಿ ಸೋಲಿಸುತ್ತಿದ್ದರಂತೆ. ಹಾಗಾಗೆ ಆತನು ತಂಜಾವೂರಿನ ರಾಜಾಸ್ತಾನಕ್ಕೆ ಬಂದಾಗ, ಅವನ ಸವಾಲನ್ನು ಎದುರಿಸಲು ಯಾರೂ ತಯಾರಿರಲಿಲ್ಲವಂತೆ. ಆಗ, ರಾಜ ಶರಭೋಜಿ ಶಾಮಾಶಾಸ್ತ್ರಿಗಳನ್ನು ತನ್ನ ರಾಜ್ಯದ ಮಾನ ಉಳಿಸಲು ಕೇಳಿಕೊಂಡನಂತೆ. ಈ ಸವಾಲುಗಳು ಹೇಗೆ ನಡೆಯುತ್ತಿದ್ದವೆಂದರೆ, ಒಬ್ಬ ಸಂಗೀತಗಾರ ಮೊದಲಿಗೆ ಒಂದು ರಾಗದಲ್ಲಿ, ಕ್ಲಿಷ್ಟವಾದ ತಾಳಪ್ರಸ್ತಾರದಲ್ಲಿ ಪಲ್ಲವಿಯೊಂದನ್ನು ಹಾಡಬೇಕು. ಎದುರಾಳಿ, ಅದನ್ನು ಆ ಕ್ಷಣದಲ್ಲೇ ಗ್ರಹಿಸಿ ಅದನ್ನು ಮತ್ತೆ ಹಾಡಬೇಕು. ಅದು ಆಗದಿದ್ದರೆ, ಅವನು ಸೋತಂತೆ.

ಬೊಬ್ಬಿಲಿ ಕೇಶವಯ್ಯ ಶಾಮಾಶಾಸ್ತ್ರಿಯರ ಮುಖಾಮುಖಿಯಾದದ್ದೂ ಹೀಗೆಯೇ. ಕೇಶವಯ್ಯ ಸಿಂಹನಂದನ ತಾಳದಲ್ಲಿ ಕ್ಲಿಷ್ಟವಾದ ಪಲ್ಲವಿಯನ್ನು ಹಾಡಿದ್ದಾಯಿತು. ಅದನ್ನು ಶಾಮಾಸಾಸ್ತ್ರಿ  ಮರಳಿ ಹಾಡಿದ್ದೂ ಆಯಿತು. ಮರುದಿನ ಶಾಮಾಶಾಸ್ತ್ರಿಗಳ ಸರದಿ. ಅಂದು ರಾತ್ರಿ, ತಮಗೆ ಸ್ಪರ್ಧೆಯಲ್ಲಿ ಜಯ ಲಭಿಸಲಿ, ರಾಜ್ಯದ ಮಾನ ಉಳಿಯಲಿ ಎಂದು ಯೋಚಿಸುತ್ತಾ ದೇವಿಯನ್ನು ಪೂಜಿಸುವಾಗ ಹೊಸತೊಂದೇ ರಾಗದ ಸೃಷ್ಟಿ ಆಯಿತಂತೆ. ಇಂತಹ ಕಷ್ಟಕಾಲದಲ್ಲಿ ಆ ದೇವಿಯೇ ತಮ್ಮನ್ನು ಕಾಯಬೇಕು, ತನ್ನ ವ್ಯಥೆಯನ್ನು ಹೋಗಿಸಿ ಕಾಪಾಡಬೇಕೆಂದು ಮೊರೆಯಿಡುತ್ತಾ ಹಾಡಿದ್ದು ಹೊಸ ಕೃತಿಯಾಗಿ ಹೊರಹೊಮ್ಮಿತಂತೆ. ಅದೇ ಚಿಂತಾಮಣಿ ರಾಗ, ಆದಿತಾಳದಲ್ಲಿರುವ ದೇವೀ ಬ್ರೋವ ಸಮಯಮಿದೇ.

ಡಾ. ರಾಮನಾಥನ್ ಅವರು ಹಾಡಿರುವ ದೇವೀ ಬ್ರೋವ ಸಮಯಮಿದೇ - ರಾಗ ಚಿಂತಾಮಣಿ. (ಸಂಗೀತಪ್ರಿಯ.ಆರ್ಗ್ ನಿಂದ)

ಮರುದಿನ, ಶಾಮಾಶಾಸ್ತ್ರಿ ಶರಭನಂದನವೆಂಬ ತಾಳದಲ್ಲಿ ಹಾಡಿದ ಪಲ್ಲವಿಯನ್ನು, ಕೇಶವಯ್ಯ ಮತ್ತೆ ಹಾಡಲಾರದೆ, ಸೋಲೊಪ್ಪಿ, ತನಗೆ ಸಿಕ್ಕಿದ್ದ ಮರ್ಯಾದೆಗಳನ್ನೆಲ್ಲ ಶಾಮಾಶಾಸ್ತ್ರಿಗಳಿಗೇ ಕೊಟ್ಟು ಹೋದನೆಂಬುದು ಐತಿಹ್ಯ. ಇದು ಬರೀ ದಂತಕತೆಯೇ ಆಗಿರಬಹುದು - ಆದರೂ, ಈ ರಾಗದಲ್ಲಿ ಮೊದಲು ಕೃತಿ ರಚನೆ ಮಾಡಿದ್ದಂತೂ ಶಾಮಾಶಾಸ್ತ್ರಿಗಳೇ ಅನ್ನುವುದಂತೂ ನಿಜ. ಮತ್ತೆ ಬಹಳ ವಾಗ್ಗೇಯಕಾರರೂ ಈ ರಾಗದಲ್ಲಿ ಹೆಚ್ಚಾಗಿ ರಚನೆಗಳನ್ನು ಮಾಡಿಲ್ಲ. 

ದಸರಾ ಹಬ್ಬದ ಮೂರನೆಯ ದಿನ ತಿರುವನಂತಪುರದ ನವರಾತ್ರಿ ಮಂಡಪದಲ್ಲಿ ಹಾಡುವ ಕೃತಿ ಸ್ವಾತಿ ತಿರುನಾಳ್ ಮಹಾರಾಜ ಸಾವೇರಿ ರಾಗದಲ್ಲಿ ರಚಿಸಿರುವ  ದೇವಿ ಪಾವನಿ ಎನ್ನುವುದು. ಅದನ್ನು, ಬಾಂಬೆ ಸಹೋದರಿಯರ ಕಂಠದಲ್ಲಿ ನೀವು ಇಲ್ಲಿ ಕೇಳಬಹುದು.

-ಹಂಸಾನಂದಿ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

"ನವರಾತ್ರಿಯ ದಿನಗಳು" ಓದಿಸಿಕೊಂಡು ಹೋಗುತ್ತಿವೆ, ಬಹಳ ಚೆನ್ನಾಗಿ ಬರೆಯುತ್ತಿದ್ದೀರಿ. :)

ಸಂಗೀತ್ರಪ್ರಿಯ ಸೈಟಿನಲ್ಲಿ ಒಂದೆರಡು mp3ಗಳನ್ನ ಡೌನ್ಲೋಡ್ ಮಾಡಿಕೊಂಡು ಕೇಳಿದೆ - ಅವುಗಳಲ್ಲಿ ಹಿನ್ನೆಲೆಯ ಸದ್ದು ಎಲ್ಲ ರೆಕಾರ್ಡ್ ಮಾಡಿರುವುದರಲ್ಲಿ ಬಂದುಬಿಟ್ಟಿದೆ. :P
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಡಿಗರೆ,

ನಿಮಗೆ ಹಿಡಿಸಿದ್ದು ಬಹಳ ಸಂತೋಷ.

ಸಂಗೀತಪ್ರಿಯ ದಲ್ಲಿ ಇರುವ ಎಷ್ಟೋ ಕಾರ್ಯಕ್ರಮಗಳು ’ಹವ್ಯಾಸಿ’ ರೆಕಾರ್ಡಿಂಗ್ ಗಳು :) ಹಾಗಾಗಿ, ಆ ರೀತಿ ಇದ್ದರೆ ಆಶ್ಚರ್ಯವಿಲ್ಲ! ಎಶ್ಟೋ ಜನ, ತಮ್ಮಲ್ಲಿದ್ದ ಅಮೂಲ್ಯ ನಿಧಿಯನ್ನು ಹೀಗೆ ಹಂಚಿಕೊಳ್ಳುತ್ತಿರುವುದು ನಿಜವಾಗಲು ಹೊಗಳಬೇಕಾದ ಸಂಗತಿ.

-ಹಂಸಾನಂದಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೊಗಳಬೇಕಾದ ಸಂಗತಿಯೆಂಬೋದು ಖರೆ. ಸ್ವತಃ ಒಂದಷ್ಟು ರೆಕಾರ್ಡಿಂಗ್ ಮಾಡಿರುವ ಅನುಭವದಿಂದ ನಾಯ್ಸ್ ದೂರ ಇಡೋದು ಎಷ್ಟು ಕಷ್ಟ ಅನ್ನೋದು ನನಗೆ ಗೊತ್ತುಂಟು. ಆದರೆ ತುಂಬಾ ನಾಯ್ಸ್ ಇದೆ ಮಾರಾಯ್ರೆ. ಮಾತು ಕೇಳಬಹುದು, ಸಂಗೀತ ಕೇಳುವಾಗ ನಾಯ್ಸ್ ಇದ್ರೆ ಕಿರಿಕಿರಿ.
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜವಾಗಿಯೂ ಸರ್. ಅಂತಹ ಹವ್ಯಾಸಿ ರೆಕಾರ್ಡರ್ಗಳಿಂದಾಗಿ ಇಂದು ನಮಗೆ ಅನೇಕ ಸಂಗೀತಗಾರರ ಕಚೇರಿಯನ್ನು ಕೇಳಲು ಸಾಧ್ಯವಾಗಿದೆ.

ನಾದ-ಚಿಂತಾಮಣಿ ರಾಗದಲ್ಲಿ ತ್ಯಾಗರಾಜರು, ತರಂಗಿಣಿ ರಾಗದಲ್ಲಿ ದೀಕ್ಷಿತರು, ಚಿಂತಾಮಣಿ ರಾಗದಲ್ಲಿ ಶ್ಯಾಮಶಾಸ್ತ್ರಿಗಳು ಹೊರತುಪಡಿಸಿ ಬೇರಾರು ಹಾಡುಗಳನ್ನು ರಚಿಸಿಲ್ಲ ಎಂದು ಕೇಳಿದ್ದೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ನಾದ-ಚಿಂತಾಮಣಿ ರಾಗದಲ್ಲಿ ತ್ಯಾಗರಾಜರು, ತರಂಗಿಣಿ ರಾಗದಲ್ಲಿ ದೀಕ್ಷಿತರು, ಚಿಂತಾಮಣಿ ರಾಗದಲ್ಲಿ ಶ್ಯಾಮಶಾಸ್ತ್ರಿಗಳು ಹೊರತುಪಡಿಸಿ ಬೇರಾರು >>ಹಾಡುಗಳನ್ನು ರಚಿಸಿಲ್ಲ ಎಂದು ಕೇಳಿದ್ದೇನೆ.

ಸುಮಾರು ಈ ರಾಗಗಳಲ್ಲೆಲ್ಲ ನಂತರದ ವಾಗ್ಗೇಯಕಾರರು ರಚನೆಗಳನ್ನು ಮಾಡಿದ್ದಾರೆ/ಮಾಡುತ್ತಲಿದ್ದಾರೆ. ಆದರೆ, ಕೆಲವು ರಾಗಗಳಿಗೆ ಸ್ವರೂಪದ ಕೊರತೆ, ಮತ್ತೆ ಕೆಲವಕ್ಕೆ ಹೆಚ್ಚಿನ ಲಕ್ಷ್ಯದ ಕೊರತೆ - ಆಗಿ, ಅವು ಹೆಚ್ಚಾಗಿ ಬೆಳಕಿಗೆ ಬಂದಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.