ಏತಕವತಾರವನೆತ್ತಿದೆಯೋ?

0

ಇವತ್ತು ಒಂದು ಒಳ್ಳೇ ಸಂಗೀತ ಕಚೇರಿಗೆ ಹೋಗಿದ್ದೆ. ಟಿ.ಎಮ್.ಕೃಷ್ಣ ಅವರ ಹಾಡುಗಾರಿಕೆ.ಪಕ್ಕವಾದ್ಯದಲ್ಲಿ ನಾಗೈ ಶ್ರೀರಾಮ್ ಮತ್ತು ಪ್ರೊ.ತಿರುಚಿ ಶಂಕರನ್. ಅಂದ್ಮೇಲೆ ಹೇಳಬೇಕಾದ್ದೇ ಇಲ್ಲ.

ವಿಸ್ತರಿಸಲು ಕೃಷ್ಣ ಮುಖಾರಿ ರಾಗವನ್ನು ತೆಗೆದುಕೊಂಡಿದ್ದರು. ಎಷ್ಟೋ ಜನ ಸ್ವಲ್ಪ ಸಂಗೀತದ ತಿಳಿವು ಇರುವವರೂ  ಮುಖಾರಿ ರಾಗ ಶೋಕರಸದ ರಾಗ ಅಂದುಕೊಂಡಿರ್ತಾರೆ. ಆದ್ರೆ ಅದು ಅಷ್ಟು ಸರಿ ಇಲ್ಲ. ಕೆಲವು ಸಂಚಾರಗಳಲ್ಲಿ ಶೋಕವನ್ನು ವ್ಯಕ್ತ ಪಡಿಸಬಹುದಾದರೂ, ಈ ರಾಗದ ಮುಖ್ಯ ರಸ ಅದ್ಭುತ ಅಥವಾ ಅಚ್ಚರಿ ಅನ್ನುವುದು ಸರಿ. 

ತ್ಯಾಗರಾಜರ ಮುಖಾರಿ ರಾಗದ ಹಲವು ರಚನೆಗಳನ್ನು ಗಮನಿಸಿದಾಗ, ಈ ವಿಷಯ ಸ್ಪಷ್ಟವಾಗುತ್ತೆ. ಉದಾಹರಣೆಗೆ ಇವತ್ತು ಕೃಷ್ಣ ಅವರು ಹಾಡಿದ ಏಲಾವತಾರಮೆತ್ತಿತಿವೋ? ಎನ್ನುವ ರಚನೆ. ಅದರಲ್ಲಿ ರಾಮಭಕ್ತ ತ್ಯಾಗರಾಜರು ಈ ರಾಮ ಎಂಬುವನು ಭೂಮಿಯ ಮೇಲೆ ಏಕೆ ಅವತಾರ ಎತ್ತಿರಬಹುದು ಅನ್ನುವ ಪ್ರಶ್ನೆಗೆ ತಮ್ಮ ಉತ್ತರವನ್ನು ಕಂಡುಕೊಳ್ಳಲು ಒಂದಷ್ಟು ಪ್ರಶ್ನೆಗಳನ್ನು ತಮಗೇ ಹಾಕಿಕೊಳ್ಳುತ್ತಾರೆ. 

ಅದೇ ಗುಂಗಿನಲ್ಲಿ ಮನೆಗೆ ಬಂದಮೇಲೆ, ಆ ರಚನೆಯನ್ನು ಕನ್ನಡಿಸಬೇಕೆನಿಸಿ, ಹೀಗೆ ಅನುವಾದಿಸಿದೆ:

ಏತಕವತಾರವನೆತ್ತಿದೆಯೋ?
ಏನದು ಕಾರಣವೋ? ರಾಮನೆಂ||ದೇತಕವತಾರವನೆತ್ತಿದೆಯೋ?||

ಕಾಳಗವನು ಮಾಡಲಿಕೋ?  ಅಯೋಧ್ಯಾ
ಪಾಲನವ ಮಾಡಲಿಕೋ? ರಾಘವ ನೀ || ನೇತಕವತಾರವನೆತ್ತಿದೆಯೋ?||

ಯೋಗಿಗಳಿಗೆ ಕಾಣಿಸಲಿಕೋ? ಭವ
ರೋಗಗಳ ದೂಡಲಿಕೋ? ಶತ
ರಾಗ ರತ್ನ ಮಾಲಿಕೆಯ ರಚಿಸಿದ ತ್ಯಾಗ
ರಾಜನಿಗೆ ವರವೀಯಲಿಕೋ ನೀ || ನೇತಕವತಾರವನೆತ್ತಿದೆಯೋ?||

ತ್ಯಾಗರಾಜರ ಮೂಲ ರಚನೆ ಹೀಗಿದೆ:

ಪ. ಏಲಾವತಾರಮೆತ್ತುಕೊಂಟಿವಿ
ಏಮಿ ಕಾರಣಮು ರಾಮುಡೈ

ಅ. ಆಲಮು ಸೇಯುಟಕಾ ಅಯೋಧ್ಯ
ಪಾಲನ ಸೇಯುಟಕಾ ಓ ರಾಘವ (ಏ)

ಚ. ಯೋಗುಲು ಜೂಚುಟಂದುಕಾ ಭವ
ರೋಗುಲ ಬ್ರೋಚುಟಂದುಕಾ ಶತ
ರಾಗ ರತ್ನ ಮಾಲಿಕಲು ರಚಿಂಚಿನ ತ್ಯಾಗ-
ರಾಜುಕು ವರಮೊಸಗುಟಂದುಕಾ (ಏ)

 

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಮುಖಾರಿ ರಾಗದಲ್ಲಿ ಶೆಮ್ಮನ್ಗುಡಿಯವರು ’ಕ್ಷೀನಮೈ.." ಹಾಡನ್ನು ಅದ್ಭುತವಾಗಿ ಹಾಡಿದ್ದಾರೆ. ನಿಮ್ಮ ಅನುವಾದಕ್ಕೆ ಧನ್ಯವಾದಗಳು.

>>ಶತರಾಗ ರತ್ನ ಮಾಲಿಕೆಯ ರಚಿಸಿದ ತ್ಯಾಗರಾಜನಿಗೆ
ದೀಕ್ಷಿತರ ಬಾಲಗೋಪಾಲ ಕೀರ್ತನೆಯಲ್ಲೂ "ವೈಣಿಕ ಗಾಯಕ ಗುರುಗುಹನುತ" ಅಂತ ಇದೆ.

>>ಮುಖಾರಿ ರಾಗ ಶೋಕರಸದ ರಾಗ ಅಂದುಕೊಂಡಿರ್ತಾರೆ
ಭಕ್ತಿಪೂರ್ಣವಾದ ರಾಗ, ಭೈರವಿಗೆ ಸ್ವಲ್ಪ ಹತ್ತಿರದ ರಾಗ ಅಲ್ಲವೇ?

ವಿಸ್ತಾರವಾದ ವರದಿ ಇಲ್ಲವೇ ಸರ್. ಕೋಟೆ ಮೈದಾನದಲ್ಲಿ ವಾರದ ದಿನಗಳಲ್ಲಿ ಒಳ್ಳೆ ಕಚೇರಿಗಳಿವೆ. ನಮಗೆ ನಿಮ್ಮಲ್ಲಿ ಇರುವಂತೆ ಸಿಟಿ ರೈಲು ಇದ್ದಿದ್ದರೆ ಹೋಗಬಹುದಿತ್ತು. ಆದರೆ ಇಲ್ಲವಲ್ಲ. ಹೋಗಲಾಗುವುದಿಲ್ಲ :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಚೇರಿಯ ಬಗ್ಗೆ ಹೆಚ್ಚಿನ ಮಾತುಕತೆ ಇಲ್ಲಿ ನೋಡಿ:

http://rasikas.org/forum/topic9136-t-m-krishna-stanford-bay-area.html

>>ಶತರಾಗ ರತ್ನ ಮಾಲಿಕೆಯ ರಚಿಸಿದ ತ್ಯಾಗರಾಜನಿಗೆ
--ದೀಕ್ಷಿತರ ಬಾಲಗೋಪಾಲ ಕೀರ್ತನೆಯಲ್ಲೂ "ವೈಣಿಕ ಗಾಯಕ ಗುರುಗುಹನುತ" ಅಂತ ಇದೆ.

ಹೌದು - ಆದರೆ ತ್ಯಾಗರಾಜರು ತಮ್ಮ ರಚನೆಗಳನ್ನು ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಂಡಷ್ಟು ಆಪ್ತತೆ ದೀಕ್ಷಿತರ ರಚನೆಗಳಲ್ಲಿಲ್ಲ (ಅನ್ನುವುದು ನನ್ನ ಅಭಿಪ್ರಾಯ). ತ್ಯಾಗರಾಜರ ರಚನೆಗಳು ಒಂದು ಮುದ್ದಾದ ಮಗುವಿನ ತರಹ - ಅಳುವ, ನಗುವ, ಕೇಕೆ ಹಾಕಿ ಕುಣಿವ, ರಚ್ಚೆ ಹಿಡಿದು ಅಳುವ - ಇಂತಹ ಮಗುವನ್ನ ಅಪ್ಪಿ ಮುದ್ದಾಡಬೇಕೆನಿಸುವಂತಹ ಆತ್ಮೀಯ ರಚನೆಗಳು ಅವು. ದೀಕ್ಷಿತರ ರಚನೆಗಳೋ ಅಂಬಾರಿ ಹೊತ್ತು ಹೋಗುವ ಆನೆಯಂತೆ - ಬಹಳ ಸುಂದರ - ಮುಟ್ಟಿ ಆನಂದ ಪಡಬಹುದೇ ಹೊರತು, ಅದನ್ನು ವಶಪಡಿಸಿಕೊಳ್ಳುವುದು ಕಷ್ಟಸಾಧ್ಯ .

>>ನಿಮ್ಮಲ್ಲಿ ಇರುವಂತೆ ಸಿಟಿ ರೈಲು ಇದ್ದಿದ್ದರೆ ಹೋಗಬಹುದಿತ್ತು. ಆದರೆ ಇಲ್ಲವಲ್ಲ.

ನಮ್ಮಲ್ಲೂ ಸಿಟಿರೈಲೇ ಆಗಲಿ, ಇನ್ಯಾವ ಒಳ್ಳೇ ಪಬ್ಲಿಕ್ ಟ್ರಾನ್ಸ್ಪೋರ್ಟ್ ಆಗಲಿ ಇಲ್ಲ ಅಂತ ಕೇಳಿದ್ಮೇಲೆ ಸ್ವಲ್ಪ ಸಮಾಧಾನವಾಗಬಹುದು ನಿಮಗೆ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು :)

ನೀವು ಹೇಳಿದಂತೆ ದೀಕ್ಷಿತರ ಕೀರ್ತನೆಗಳಲ್ಲಿ ಭಾವಕ್ಕಿಂತ ವ್ಯಾಕರಣ ಪ್ರಯೋಗ ಹೆಚ್ಚು ಎಂಬುದು ನನ್ನ ಅನಿಸಿಕೆ.

ತಿರುಚ್ಚಿ ಶಂಕರನ್ ಬಂದಿದ್ದರೆ. ಬಹಳ ಅದ್ಭುತವಾಗಿ ನುಡಿಸುತ್ತಾರೆ.

>>ಶರವಣ ಭವ ಗುಹನೆ ಶಣ್ಮುಗನೆ
ಇದೇ ಪಲ್ಲವಿಯನ್ನು ಕುನ್ನಕುಡಿಯವರು ಶಂಕರಾಭರಣದಲ್ಲಿ ನುಡಿಸಿದ್ದರು

>>ನಮ್ಮಲ್ಲೂ ಸಿಟಿರೈಲೇ ಆಗಲಿ, ಇನ್ಯಾವ ಒಳ್ಳೇ ಪಬ್ಲಿಕ್ ಟ್ರಾನ್ಸ್ಪೋರ್ಟ್ ಆಗಲಿ ಇಲ್ಲ ಅಂತ ಕೇಳಿದ್ಮೇಲೆ ಸ್ವಲ್ಪ ಸಮಾಧಾನವಾಗಬಹುದು ನಿಮಗೆ
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದಾಸರಾಗಲೀ ಶರಣರಾಗಲೀ ’ಏನಕೆ/ಏನಕ್ಕೆ’ ಎಂದು ಬೞಸುವುದಿಲ್ಲ. ದಯವಿಟ್ಟು ಅದಱ ಬದಲು ಏತಕೆ/ಏತಕ್ಕೆ/ಏತರ್ಕೆ ಬೞಸಿ. ಇದು ಸರಿಯೆನಿಸಿದರೆ ಒಪ್ಪಿಕೊಳ್ಳಿ.
ಸರಿಯಾದ ರೂಪ:
ಏತಕವತಾರವನೆತ್ತಿದೆಯೋ?
ಏನದು ಕಾರಣವೋ? ರಾಮನೆಂ||ದೇತಕವತಾರವನೆತ್ತಿದೆಯೋ?||

ಕಾಳಗವನು ಮಾಡಲಿಕೋ? ಅಯೋಧ್ಯಾ
ಪಾಲನವ ಮಾಡಲಿಕೋ? ರಾಘವ ನೀ || ನೇತಕವತಾರವನೆತ್ತಿದೆಯೋ?||

ಯೋಗಿಗಳಿಗೆ ಕಾಣಿಸಲಿಕೋ? ಭವ
ರೋಗಗಳ ದೂಡಲಿಕೋ? ಶತ
ರಾಗ ರತ್ನ ಮಾಲಿಕೆಯ ರಚಿಸಿದ ತ್ಯಾಗ
ರಾಜನಿಗೆ ವರವೀಯಲಿಕೋ ನೀ || ನೇತಕವತಾರವನೆತ್ತಿದೆಯೋ?||

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಅನಂತಕೃಷ್ಣರೇ. ನಿಮ್ಮ ಸಲಹೆಯಂತೇ ಬದಲಿಸಿರುವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.