ಸ್ಟಾನ್‍ಫರ್ಡ್‍ನಲ್ಲಿ ಕೇಳಿ ಬಂದ ಕುಮಾರವ್ಯಾಸನ ಕಹಳೆ!

0

ನನಗೆ ತಿಳಿದ ಮಟ್ಟಿಗೆ ಕಾವ್ಯವಾಚನ ಕರ್ನಾಟಕದ ಒಂದು ವಿಶಿಷ್ಟ ಕಲೆ. ಇದಕ್ಕೆ ಗಮಕ ವಾಚನ, ಭಾರತ ವಾಚನ ಎಂದೂ ಕರೆಯುವ ರೂಢಿ ಇದೆ. ವಾಲ್ಮೀಕಿ ರಾಮಾಯಣದ ಉತ್ತರಕಾಂಡದಲ್ಲೇ,ಲವಕುಶರು ರಾಮಾಯಣವನ್ನು ವೀಣೆ ನುಡಿಸುತ್ತಾ ಅದರೊಂದಿಗೆ ಹಾಡಿದರು ಎಂಬ ಉಲ್ಲೇಖವಿದೆ. ಹಾಗಾಗಿ, ಕಾವ್ಯಗಳನ್ನು ಹಾಡುತ್ತಾ ಹೇಳುವ/ಓದುವ ಸಂಪ್ರದಾಯ ಸಾವಿರಾರು ವರ್ಷಗಳಷ್ಟು ಹಳೆಯದು ಎನ್ನುವುದರಲ್ಲೇನೂ ಅನುಮಾನವಿಲ್ಲ.

ಈಗ ಮಾತ್ರ, ಈ ಕಲೆ ಕರ್ನಾಟಕದಲ್ಲಿ ಮಾತ್ರ (ನನಗೆ ತಿಳಿದಂತೆ) ಜೀವಂತವಾಗಿದೆ. ಗಮಕಿಯು ಕಾವ್ಯವನ್ನು ಸೂಕ್ತ ರಾಗಭಾವದೊಂದಿಗೆ ಹಾಡುವುದನ್ನೂ, ಅದಕ್ಕೆ ವ್ಯಾಖ್ಯಾನಕಾರರು ತಮ್ಮ ವಿವರಗಳೊಂದಿಗೆ ಜೀವತುಂಬುವುದನ್ನೂ ಕೇಳುವುದು ಬಹಳ ಸೊಗಸು.

ಸ್ಟಾನ್‍ಫರ್ಡ್ ರೇಡಿಯೋ ದಲ್ಲಿ ವಾರಕ್ಕೊಮ್ಮೆ ಮೂರು ಘಂಟೆ ಕಾಲ ಭಾರತೀಯ ಸಾಂಸ್ಕೃತಿಕ ಕಾರ್ಯಕ್ರಮಗಳು ಬರುತ್ತವೆ. "ಇಟ್ಸ್ ಡಿಫೆರೆಂಟ್" (It's Different - www.itsdiff.com) ಎನ್ನುವ ತಲೆಬರಹದಲ್ಲಿ ಪ್ರತೀ ಬುಧವಾರ ಬೆಳಗ್ಗೆ ಆರರಿಂದ ಒಂಬತ್ತ್ತರವರೆಗೆ ಪ್ರಸಾರವಾಗುವ ಈ ಕಾರ್ಯಕ್ರಮದ ರೂವಾರಿ ಶ್ರೀಕಾಂತ್ ಶ್ರೀನಿವಾಸ. ಪ್ರತಿ ವಾರ, ಒಂದಲ್ಲ ಒಂದು ಹೊಸ ರೀತಿಯ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುವ ಶ್ರೀ, ಈ ಕಾರ್ಯಕ್ರಮದ ಹೆಸರನ್ನು ಸಾರ್ಥಕಗೊಳಿಸಿದ್ದಾರೆ.

ನವೆಂಬರ್ ಏಳರಂದಿನ ಕಾರ್ಯಕ್ರಮ ಕನ್ನಡ ರಾಜ್ಯೋತ್ಸವ ವಿಶೇಷ. ಇದರಲ್ಲಿ ಕನ್ನಡಿಗರ ಹೆಮ್ಮೆಯ ಕವಿ ಕುಮಾರವ್ಯಾಸನ ಗದುಗಿನ ಭಾರತದಿಂದಾಯ್ದ ಸುಭದ್ರಾ ಪರಿಣಯ ಎಂಬ ಪ್ರಕರಣ ಕಾವ್ಯ ವಾಚನ-ವ್ಯಾಖ್ಯಾನ ಮೂಡಿ ಬಂತು. ಇದರ ಒಂದೆರಡು ಕಿರುನೋಟಗಳು ಈ ಕೆಳಗಿನ ಯುಟ್ಯೂಬ್ ಕೊಂಡಿಗಳಲ್ಲಿ ನಿಮಗೆ ಸಿಗುತ್ತದೆ.

ಗಮಕಿ - ವಿದುಷಿ ಶ್ರೀಮತಿ ವಸಂತಲಕ್ಷ್ಮಿ ವ್ಯಾಖ್ಯಾನ - ವಿದ್ವಾನ್ ರಾಮಚಂದ್ರ ಶರ್ಮ ತ್ಯಾಗಲಿ

ಇನ್ನೊಂದು ಕೊಂಡಿ- ಅದೇ ಕಾರ್ಯಕ್ರಮದಿಂದ

ಇಟ್ಸ್ ಡಿಫೆರೆಂಟ್ ನಲ್ಲಿ ಈ ಮೊದಲು ಹಲವು ಬಾರಿ ಕನ್ನಡ ಕಾರ್ಯಕ್ರಮಗಳು ಪ್ರಸಾರವಾಗಿವೆ. ಕಾವ್ಯವಾಚನ ಪ್ರಸಾರವಾಗಿರುವುದು ಇದೇ ಮೊದಲು. ನೀವು ಹಿಂದಿನ ಕಾರ್ಯಕ್ರಮಗಳನ್ನು ಇಲ್ಲಿ ಕೇಳಬಹುದು. ಈ ವಾರದ ಕಾವ್ಯವಾಚನ-ವ್ಯಾಖ್ಯಾನದ ಧ್ವನಿ ಮುದ್ರಿಕೆಯೂ ಇದೇ ಸ್ಥಳದಲ್ಲಿ, ಇನ್ನು ಕೆಲವು ದಿನಗಳನಂತರ ನಿಮಗೆ ದೊರೆಯಲಿದೆ.

ಇಟ್ಸ್ ಡಿಫರೆಂಟ್ ನ ಶ್ರೀಕಾಂತ್ (’ಶ್ರೀ) ಅವರನ್ನು ನೀವು itsdiff@gmail.com ಇಲ್ಲಿ ತಲುಪಬಹುದು.

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.