ಸಂಗೀತ ನವರಾತ್ರಿ - ವಿಜಯ ದಶಮಿ

0

ಇವತ್ತು ವಿಜಯ ದಶಮಿ.ನವರಾತ್ರಿಯ ಕಡೇ ದಿನ. ಮೈಸೂರಿನಲ್ಲಿ ಜಂಬೂಸವಾರಿಯಲ್ಲಿ  ದೇವಿ ಚಾಮುಂಡೇಶ್ವರಿಯ ಮೆರವಣಿಗೆ ಹೋಗುವ ಈ ದಿನ ಕೇಳಿಸಲು ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯರ ಬಿಲಹರಿ ರಾಗದ ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ ಎನ್ನುವ ರಚನೆ ಈ ವರ್ಷದ ಸರಣಿಗೆ ಸರಿಯಾದ ಮಂಗಳವೆಂದು ನನ್ನ ಅನಿಸಿಕೆ.

ಮೈಸೂರು ವಾಸುದೇವಾಚಾರ್ಯರು ಅವರ ಸಂಗೀತ ಪರಂಪರೆಯಂತೆ ಸಂಸ್ಕೃತ ಮತ್ತು ತೆಲುಗು ಭಾಷೆಗಳಲ್ಲೇ ಕೃತಿಗಳನ್ನು ರಚಿಸಿದವರು. ಈ ಬಿಲಹರಿ ರಾಗದ ಕೃತಿಯಂತೂ ಸೊಗಸಾದ ರಚನೆ. ವಾಸುದೇವಾಚಾರ್ಯರ ಅತೀ ಪ್ರಸಿದ್ಧ ರಚನೆಗಲ್ಲಿದೂ ಒಂದು ಎಂದು ಖಂಡಿತ ಹೇಳಬಹುದು. ಈ ಹಾಡಿನ ಸಾಹಿತ್ಯ ಹೀಗಿದೆ.

ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ ಕೃಪಾಕರಿ ಶಂಕರಿ
ಶೃತಜನಪಾಲಿನಿ ಮಹಾಬಲಾದ್ರಿವಾಸಿನಿ ಮಹಿಷಾಸುರ ಮರ್ದಿನಿ|| ಪಲ್ಲವಿ||

ವಾಚಾಮಗೋಚರ ಮಹಿಮ ವಿರಾಜಿತೇ ವರಗುಣ ಭರಿತೇ
ವಾಕ್ಪತಿಮುಖಸುರವಂದಿತೇ ವಾಸುದೇವ ಸಹಜಾತೇ ||ಶ್ರೀ ಚಾಮುಂಡೇಶ್ವರಿ ಪಾಲಯಮಾಂ||

ರಾಕಾ ನಿಶಾಕರ ಸನ್ನಿಭ ವದನೇ ರಾಜೀವಲೋಚನೇ
ರಮಣೀಯ ಕುಂದರದನೇ ರಕ್ಷಿತಭುವನೇ ಮಣಿಸದನೇ
ಮೂಕವಾಕ್ಪ್ರದಾನವಿಖ್ಯಾತೇ ಮುನಿಗಣನುತ ಸುಪ್ರೀತೇ
ಶ್ರೀಕರ ತಾರಕ ಮಂತ್ರ ತೋಷಿತೆ ಚಿತ್ತೇ ಸದಾ ನಮಸ್ತೇ ||ಶ್ರೀ ಚಾಮುಂಡೇಶ್ವರಿ ಪಾಲಯಮಾಂ||

ಈ ರಚನೆಯನ್ನ ನೀವು ಕೆಳಗಿನ ಕೊಂಡಿಯನ್ನ ಚಿಟುಕಿಸಿ ಕೇಳಬಹುದು:

ಶ್ರೀ ಚಾಮುಂಡೇಶ್ವರಿ ಪಾಲಯಮಾಂ - ಎಂ.ಎಸ್.ಸುಬ್ಬುಲಕ್ಷ್ಮಿ ಅವರ ದನಿಯಲ್ಲಿ

ಈ ಕೃತಿಯ ಬಗ್ಗೆ ಯೋಚಿಸುತ್ತಿದ್ದಾಗಲೇ ಡಾ.ರಾಜ್ ಅವರ ನೆನಪು ಬಂತು. ಕನ್ನಡ ಚಲನಚಿತ್ರರಂಗದ ಹಿನ್ನೆಲೆ ಗಾಯಕರಲ್ಲಿ ಅತಿ ಹೆಚ್ಚು ಶಾಸ್ತ್ರೀಯ ಶೈಲಿಯ ಹಾಡುಗಳನ್ನು ಬಹಳ ಸೊಗಸಾಗಿ ಹಾಡಿರುವುದು ಅವರು ಎಂದು ನನ್ನ ಅಭಿಪ್ರಾಯ. ಅವರ ನಾಟಕರಂಗದ ತರಪೇತಿಯೂ ಇದಕ್ಕೆ ಕಾರಣವಿರಬೇಕು. ಕೆಲವು ವರ್ಷಗಳ ಹಿಂದೆ ಡಾ.ರಾಜ್ ದಸರಾ ಹಬ್ಬದ ಉದ್ಘಾಟನೆಗೆ (ಅಥವಾ ಸುಮ್ಮನೇ ಹಬ್ಬದ ಸಡಗರವನ್ನು ನೋಡುವುದಕ್ಕೇನೋ, ನನಗೆ ಮರೆತಿದೆ) ಮೈಸೂರಿಗೆ ಬಂದಿದ್ದರು. ವಿಜಯದಶಮಿಯ ಮೆರವಣಿಗೆ ಹೊರಟಿತು. ತಾಯಿ ಚಾಮುಂಡಿಯ ಅಂಬಾರಿಯನ್ನು ಕಂಡ ರಾಜ್, ಕೂಡಲೆ ತಾವೇತಾವಾಗಿ, ಯಾರೂ ನಿರೀಕ್ಷಿಸಿರದಂತೆ ವಾಸುದೇವಾಚಾರ್ಯರ ಈ ಹಾಡನ್ನು ಹಾಡತೊಡಗಿದರು. ಯಾವುದೇ ವಾದ್ಯಗಳ ಹಿಮ್ಮೇಳವಿಲ್ಲದೆ, ಯಾವ ವೇದಿಕೆಯೂ ಇಲ್ಲದೆ ಮನಬಿಚ್ಚಿ ಅವರು ಹಾಡಿದ್ದು ಕೇಳಲು ಬಹಳ ಸೊಗಸಾಗಿತ್ತು. ಇದು ಟಿವಿಯಲ್ಲಿ ಪ್ರಸಾರವಾಗಿದ್ದನ್ನು ನಾನು ಕಂಡೆ.

ಮನೆಯ ಮುಂದೆ ಉತ್ಸವ ಬಂದಾಗ ಹಾಡಿಕೊಳ್ಳುವುದನ್ನೂ, ದೇವಾಲಯದಲ್ಲಿ ದೇವರ ಮುಂದೆ ತಮ್ಮಷ್ಟಕ್ಕೆ ತಾವೇ ಹಾಡಿಕೊಳ್ಳುವ ಜನರನ್ನು ನೋಡಿದ್ದೇವೆ. ಅವರು ಹಾಡುವುದು ಯಾರೂ ಕೇಳಲಿ ಎಂದಲ್ಲ. ಬದಲಿಗೆ ಅವರು ನಂಬಿರುವ ದೇವರಿಗೆ ಹತ್ತಿರವಾಗಲು ಅದೊಂದು ದಾರಿ ಎಂದು ಅವರೆಂದುಕೊಳ್ಳುತ್ತಾರೆ. ಆದರೆ ಈ ರೀತಿ ಹಲವು ಜನರ ಮುಂದೆ, ಯಾವುದೇ ವೇದಿಕೆಯಿಲ್ಲದಿದ್ದಾಗಲೂ ತಮ್ಮಷ್ಟಕ್ಕೆ ತಾವಾಗಿಯೇ ಹಾಡಿಕೊಳ್ಳುವ ಪ್ರಸಿದ್ಧ ಸಂಗೀತಗಾರರು, ತಾರೆಯರು, ಕಡಿಮೆಯೇ. ಈ ಸರಳತೆಯೇ ರಾಜ್ ಅವರ ಜನಪ್ರಿಯತೆಗೆ ಒಂದು ಕಾರಣ ಎನ್ನಿಸುತ್ತೆ.

ರಾಜ್ ಅವರ ನೆನಪು ಬಂದಾಗ ಶ್ರೀ ಕೃಷ್ಣದೇವರಾಯ ಚಿತ್ರದ ಶ್ರೀ ಚಾಮುಂಡೇಶ್ವರೀ ಗೀತೆಯೂ ನೆನಪಾಯಿತು. ಅದು ಕೂಡ ಶಾಸ್ತ್ರೀಯ ನೆಲೆಗಟ್ಟಿನಲ್ಲೇ- (ಮಿಶ್ರ)ತಿಲಂಗ್ ರಾಗದಲ್ಲಿ ಸಂಯೋಜಿತವಾಗಿರುವ ಹಾಡು. ಅದನ್ನೂ ಒಮ್ಮೆ ನೋಡಹುದಲ್ಲ ಎನ್ನಿಸಿತು. ಈ ಹಾಡನ್ನು ಹಾಡಿರುವುವು ಪಿ.ಲೀಲಾ.


ಹತ್ತು ದಿವಸಗಳ ದೊಡ್ಡ ಹಬ್ಬಸಾಲಿನ ಕೊನೆಯ ದಿನಕ್ಕೆ ಬಂದಿದ್ದೇವೆ. ಇನ್ನು ಕೆಲವೇ ಘಂಟೆಗಳಲ್ಲಿ ತಾಯಿ ಚಾಮುಂಡಿಯ ಉತ್ಸವ ಮೈಸೂರಿನಲ್ಲಿ ಜರುಗುತ್ತೆ. ಹೋದವರ್ಷ ಯಾವುದೇ ಮುಂದಾಲೋಚನೆ ಇಲ್ಲದೇ ನಾನು "ನವರಾತ್ರಿಯ ದಿನಗಳು" ಸರಣಿಯನ್ನು ಬರೆದಿದ್ದೆ. ಈ ಬಾರಿ ಮತ್ತೆ ಅದೇ ರೀತಿ ಹತ್ತು ದಿನ ಬರೆಯಲು ಆಗುವುದೋ ಇಲ್ಲವೋ ಎಂಬ ಅನುಮಾನದಿಂದ ಅದರ ಯೋಚನೆಯನ್ನೂ ಮಾಡಿರಲಿಲ್ಲ. ಆದರೆ ಕೆಲವು ಸಂಪದಿಗರು ಈ ರೀತಿಯ ಬರಹಗಳನ್ನು ಎದಿರುನೋಡುತ್ತಿರುವುದನ್ನು ಕಂಡಮೇಲೆ ಈ ಸಲದ ’ಸಂಗೀತ ನವರಾತ್ರಿ’ಯನ್ನು ಬರೆದೆ.ಇದನ್ನು ಓದಿ, ಹಾಡುಗಳನ್ನು ಕೇಳಿ ಸಂತಸ ಪಟ್ಟ, ಟಿಪ್ಪಣಿ ಹಾಕಿದ ಎಲ್ಲರಿಗೂ ನನ್ನ ಧನ್ಯವಾದಗಳು ಸಲ್ಲುತ್ತವೆ.

ದೇವೀ ನವರಾತ್ರಿಯ ಸಮಯದಲ್ಲಿ, ಈ ಸಾಲುಬರಹವನ್ನು ಬರೆಯಲು ಸಾಧ್ಯವಾದದ್ದು ನನ್ನ ಸುದೈವವೆಂದೇ ಎಣಿಸಿದ್ದೇನೆ. ಶ್ರೀ ಚಾಮುಂಡೇಶ್ವರಿ ದೇವಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ, ಎಲ್ಲೆಡೆ ಶಾಂತಿ ನೆಲೆಸಲಿ ಎಂದು ಕೇಳಿಕೊಳ್ಳುತ್ತಾ ಈ "ಸಂಗೀತ ನವರಾತ್ರಿ" ಮಾಲಿಕೆಯನ್ನು ಮುಗಿಸುತ್ತಿದ್ದೇನೆ.

ಎಲ್ಲರಿಗೂ ನಮಸ್ಕಾರ.

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ವಿಜಯದಶಮಿಯ ಸರಣಿ ಬರಹಕ್ಕಾಗಿ ನಿಮಗೆ ಅಭಿನಂದನೆಗಳು.
*ಅಶೋಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸಾನಂದಿಯವರೇ,

ಸಂಗೀತ ನವರಾತ್ರಿ ಸರಣಿ ಅದ್ಭುತವಾಗಿ ಬಂದಿದೆ...
ಸಂಗೀತದ ಹಬ್ಬದೂಟಗಳನ್ನು ಉಣಿಸಿದ ನಿಮಗೆ ಅನಂತ ಧನ್ಯವಾದಗಳು...

--ಶ್ರೀ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸಾನಂದಿಯವರೇ,
ಸಂಗೀತ ನವರಾತ್ರಿಯ ಹತ್ತು ಕಂತುಗಳು ಚೆನ್ನಾಗಿ ಬಂದವು.

ಸಂಗೀತದ ರಸದೌತಣವನ್ನು ನೀಡಿದ ನಿಮಗೆ ಧನ್ಯವಾದಗಳು...

ಅನಿಲ್ ರಮೇಶ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಶೃತಜನಪಾಲಿನಿ .. . . . .. . . .. ."

ಇದು ಶ್ರಿತಜನಪಾಲಿನಿ ಆಗಬೇಕಿತ್ತು ಅಲ್ವಾ? ಹಾಡಿನಲ್ಲೂ ಎಂ.ಎಸ್. ಅವರೂ ಶ್ರಿತಜನಪಾಲಿನಿ ಅಂತಲೇ ಹಾಡಿದಹಾಗಿದೆ.

"ಏರಿದವನು ಚಿಕ್ಕವನಿರಬೇಕು"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ರಮೇಶರೆ. ನೀವು ಹೇಳುವುದು ಸರಿ - ನನ್ನ ಕಾಗುಣಿತ ತಪ್ಪಿತ್ತು.

ಶ್ರಿತಜನಪಾಲಿನಿ -> ಮೊರೆಹೊಕ್ಕವರನ್ನು ಕಾಪಾಡುವವಳೇ

ಮಹೇಶರೆ, ಇನ್ನು ಶೃತ ಎಂದರೆ ಕೇಳುವುದು ಎನ್ನುವ ಅರ್ಥ ಬರುವುದಿಲ್ಲ ಅಲ್ಲವೇ? ಆ ಅರ್ಥಕ್ಕೆ ಅದು ಶ್ರುತ ಆಗಬೇಕು.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸಾನಂದಿಯವರೆ,

ನಮಗೆ ನಿರಾಶೆ ಮಾಡದೆ ಎಂದಿನಂತೆ ಭರ್ಜರಿ ಔತಣವನ್ನೇ ಬಡಿಸಿದ್ದೀರ, ಧನ್ಯವಾದಗಳು.

ಸಂಪ್ರದಾಯ ಬಿಡುವುದು ಬೇಡ ಅಂತ weekday ಆದ ಕಾರಣ ಸ್ವಲ್ಪ ಕಷ್ಟ ಆದರೂ ಸರಸ್ವತಿ ಹಬ್ಬದ ದಿನದಿಂದ ನಾವೂ ಬೊಂಬೆಗಳನ್ನು ಕೂಡಿಸಿ ನವರಾತ್ರಿ ಹಬ್ಬ ಆಚರಿಸ್ತಾ ಇದೀವಿ. ಮಕ್ಕಳಿಗೂ ಇದರಿಂದ ಖುಷಿ ಆಯಿತು. ದಿನಾ ಸಾಯಂಕಾಲ ನಿಮ್ಮ ಕೊಂಡಿಗಳಿಂದ ದೇವರಿಗೆ ಸಂಗೀತ ಸೇವೆಯೂ ಆಯಿತು.

ಇಷ್ಟೆಲ್ಲಾ ಆದರೂ ಇವತ್ತಿನ 'ಶ್ರೀ ಚಾಮುಂಡಾಂಬಿಕೆ' ಹಾಡಿನಲ್ಲಿ 'ಒಡೆಯರ ಪಾಲಿಸು ಪರಮೇಶ್ವರಿ' ಎಂದು ಕೇಳಿದಾಗ ನನಗೆ ಅಳು ತಡೆಯಲು ಆಗಲೇ ಇಲ್ಲ. ಆ ಸಾಲುಗಳಲ್ಲಿ ಆಳುವವರು ಬಗ್ಗೆ ಎಷ್ಟು ಭಕ್ತಿ ವಿಶ್ವಾಸ ಕಂಡುಬರುತ್ತೆ. ಈಗಿನ ನಾಯಕರು ಒಬ್ಬರಾದರೂ ಇಲ್ಲವಲ್ಲ ಈ ರೀತಿಯ ಪ್ರೇಮಾದರಕ್ಕೆ ಪಾತ್ರರಾಗುವಂತೆ ನಡೆದುಕೊಳ್ಳುವವರು. ಹೇಗಿದ್ದ ದೇಶ ಹೇಗಾಗುತ್ತಿದೆ ಈಗ!

ನಿಮಗೂ ಎಲ್ಲರಿಗೂ ಖಿನ್ನತೆ ಉಂಟುಮಾಡುವ ಉದ್ದೇಶ ನನ್ನದಲ್ಲ, ಆದ್ರೂ ನನ್ನ ಅನುಭವ ಹೇಳಬೇಕೆನ್ನಿಸಿತು. ಬೇಸರವಾಗಿದ್ದರೆ ಕ್ಷಮಿಸಿ.

ಶಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಶ್ಯಾಮಲಾ ಅವರೆ ನನಗೂ ಈ "ಒಡೆಯರ ಪಾಲಿಸು ಪರಮೇಶ್ವರೀ" ಎಂದು ಕೇಳಿದಾಗ ಒಂತರಾ ಮನಸ್ಸನ್ನು ಯಾರೋ ಅಲ್ಲಾಡಿಸಿದಂತಾಯಿತು. ಇದೇ ಸಾಲನ್ನು ಎರಡು ಮೂರು ಸಾರಿ ಕೇಳಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮಾತು ನಿಜ ಶಾಮಲಾ ಅವರೆ. ಹಳೆಯದರ ಬಗ್ಗೆ ನಾಸ್ಟಾಲ್ಜಿಕ್ ಆಗಿರಬಾರದು ಎನ್ನುವುದು ಕೆಲವರ ಮಾತು - ಆದರೂ ಕೆಲವು ಬಾರಿ ಅಂತಹ ವಿಷಯಗಳನ್ನು ನೆನೆಯದೇ ಇರಲಾಗುವುದೇ ಇಲ್ಲವಲ್ಲ!

ಇವತ್ತು ಶಾಂತಲೆಯ ಬಗ್ಗೆ ಒಂದು ಶಾಸನ ಪದ್ಯವನ್ನು ಓದಿದಾಗ ನನಗೆ ಅದರ ಬಗ್ಗೆ ನಾಕು ಸಾಲು ಬರೆಯಬೇಕೆನಿಸಿತು. ಅದನ್ನೇ ಕೆಳಗಿರುವ ಕೊಂಡಿಯಲ್ಲಿ ಹಾಕಿದ್ದೇನೆ:

ಶಾಂತಲೆಯದೊಂದು ನೆನಪು:
http://neelanjana.wordpress.com/2008/10/10/%E0%B2%B6%E0%B2%BE%E0%B2%82%E...

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸಾನಂದಿಯವರೆ,

ಧನ್ಯವಾದಗಳು. ನನ್ನ ನೆಚ್ಚಿನ ರಾಣಿ ಶಾಂತಲೆಯ ಬಗೆಗಿನ ಶಾಸನ ಬಹಳ ಅರ್ಥಗರ್ಭಿತವಾಗಿದೆ. ಕೆ.ವಿ.ಅಯ್ಯರ್ ಅವರ 'ಶಾಂತಲಾ' ನೆನಪಿಗೆ ಬಂದಿತು. ಅದನ್ನು ಓದಿದಾಗಲೆಲ್ಲ ನನಗೆ ಯಥಾಪ್ರಕಾರ ತುಂಬಾ ಅಳು ಬರತ್ತೆ,

ಹೊಯ್ಸಳ ಶಿಲ್ಪಕಲೆಯಲ್ಲಿ ಅಭಿರುಚಿ ಇರುವವ ಸಂಪದಿಗರಿಗೆ ಇಲ್ಲೊಂದು ಹಿತಾನುಭವ:
http://www.halebidu.com/Halebidu%20-%20Hoysala%20Sculpture%20of%20India.swf

(ಶ್ರೀಯುತ ಶರತ್ ವಲ್ಲೂರಿಯವರ ಕ್ಯಾಮೆರ ಹಾಗೂ ತಂತ್ರಜ್ಞಾನ ಕುಶಲತೆಗೊಂದು ನಿದರ್ಶನ.)

ನಾಸ್ಟಾಲ್ಜಿಯ ಕೂಡ ಮನುಷ್ಯನ ಜೀವನದ ಅವಿಭಾಜ್ಯ ಅಂಗ ಅಂತ ನನ್ನೆಣಸಿಕೆ (collectively becomes the primordial memory of mankind). ನಾಸ್ಟಾಲ್ಜಿಯವೆಂದರೆ ಸಾಮಾನ್ಯವಾಗಿ ಒಳ್ಳೆಯ ಅನುಭವಗಳ ಮರುಕಳಿಕೆಗಳಲ್ಲವೇ? ನಮಗೆ ಬಾಲ್ಯದಲ್ಲಿದ್ದಾಗ ಯಾವಾಗ ಬೆಳೆದು ದೊಡ್ದವರಾಗುತ್ತೇವೋ ಅಂತ ಹಲವಾರು ಬಾರಿ ಅನಿಸಿದ್ದಿರಬಹುದು ಆದರೆ ಅದೇ ಬಾಲ್ಯದ ಘಟನೆಗಳನ್ನು ಈಗ ಸವಿ ಅನುಭವಗಳೆಂದು ಮೆಲುಕು ಹಾಕುತ್ತೇವಲ್ಲ, ಹಳೆಯದೆಂದು ಬಾಲ್ಯವನ್ನು ನಾವು ಮರೆಯೋದಿಲ್ಲ. ಕಾಲ ಅನುಭವಕ್ಕೆ ರಂಗು ತೊಡೆಯುತ್ತದೆಯೇನೋ ಅನ್ನಿಸತ್ತೆ.

ಶಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸಾನಂದಿ ಅವರಿಗೆ,

ನವರಾತ್ರಿಯ ಸಂದರ್ಭದಲ್ಲಿ ಮೂಡಿಬಂದ ತಮ್ಮ ಸಂಗೀತ ನವರಾತ್ರಿ ಲೇಖನ ನಮ್ಮ ದಸರ ಹಬ್ಬಕ್ಕೆ ಮೈಸೂರು ಪಾಕ್ ಸವಿ, ಮೈಸೂರು ಮಲ್ಲಿಗೆ ಕಂಪು, ಮೈಸೂರು ವೀಳೆದೆಲೆ ರುಚಿ, ಮೈಸೂರು ಸಂಗೀತ ಅಬ್ಬ ಅದ್ಭುತ, ಅಮೋಘ. ನಿಜ ಅರ್ಥದಲ್ಲಿ ಸಂಗೀತಮಯ ದಸರ ಹಬ್ಬದೌತಣ ನೀಡಿದಿರಿ. ನಿಮಗೆ ಶತ ಶತ ನಮನಗಳು.

ಇದೇ ಸಂದರ್ಭದಲ್ಲಿ ಸಂಪದದ ಎಲ್ಲಾ ಸ್ನೇಹಿತರಿಗೂ " ನಾಡಹಬ್ಬ ದಸರದ ಹಾರ್ದಿಕ ಶುಭಾಶಯಗಳು".

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸಾನಂದಿಗಳೆ,
ನಿಜಕ್ಕೂ ನಿಮ್ಮ ನವರಾತ್ರಿ ಸರಣಿ ತುಂಬ ಚೆನ್ನಾಗಿತ್ತು. ನೀವು ಹೀಗೆ ರಾಗಾಧಾರಿತ ಚಿತ್ರಗೀತೆಗಳ ಪರಿಚಯ ಮಾಡಿಸುವುದಂತು ನನಗೆ ಬಹಳ ಇಷ್ಟ. ದಯವಿಟ್ಟು ಹೀಗೆ ಬರೆಯುತ್ತ ಇರಿ.
~ಕಲ್ಪನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.