ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜ

0

ಇಂದು ಜನವರಿ ಆರು. ಸರಿಯಾಗಿ ನೂರರವತ್ತೊಂದು ವರ್ಷದ ಹಿಂದೆ, ನಾವು ಒಬ್ಬ ರಾಜನನ್ನು ಕಳೆದುಕೊಂಡೆವು. ಅಥವಾ ನಿಜ ಹೇಳಬೇಕೆಂದರೆ, ಅವತ್ತಿನಿಂದ ಆತ ಚಿರಂಜೀವಿಯಾಗಿಹೋದರು. ಈ ರಾಜ ಯಾವ ಯುದ್ಧವನ್ನೂ ಮಾಡಿ ಜಯಿಸಿಲಿಲ್ಲ. ಯಾವ ರಾಜ್ಯಕ್ಕೂ ರಾಜನಾಗಲಿಲ್ಲ. ಎಲ್ಲವನ್ನೂ ’ತ್ಯಾಗ’ ಮಾಡಿದರೂ, ಸಂಗೀತ ಪ್ರಪಂಚಕ್ಕೇ ರಾಜರಾಗಿ ಮೆರೆದರು.

ಹೌದು. ತ್ಯಾಗರಾಜರ ದೇಹಾಂತ್ಯ ಆದದ್ದು ೧೮೪೭ರ ಜನವರಿ ಆರರಂದು. ಆ ದಿನ ಪುಷ್ಯ ಬಹುಳ ಪಂಚಮಿ. ಪುರಂದರ ದಾಸರನ್ನು ಮನಸಲ್ಲೇ ಗುರುವಾಗಿ ನಿಲಿಸಿಕೊಂಡ ತ್ಯಾಗರಾಜರು ದಾಸರ ಆರಾಧನೆಯ ತಿಂಗಳಾದ ಪುಷ್ಯ ಮಾಸದಲ್ಲೇ ದೇಹತ್ಯಾಗ ಮಾಡಿದ್ದು ಕಾಕತಾಳೀಯವಿರಬಹುದು. ಆದರೆ, ಪುರಂದರ ದಾಸರ ರಚನೆಗಳಿಗೂ, ತ್ಯಾಗರಾಜರ ರಚನೆಗಳಲ್ಲೂ ಇರುವ ಹೋಲಿಕೆ ಕಾಕತಾಳೀಯವೇ? ಅಥವಾ, ದಾಸರ ಸಾಹಿತ್ಯ ತ್ಯಾಗರಾಜರ ಮೇಲೆ ಮಾಡಿದ ಪ್ರಭಾವದ ಪರಿಣಾಮವೇ? ಅಥವಾ ಮಹಾತ್ಮರ ಮನಗಳು ಒಂದೇ ತೆರದಲ್ಲಿ ಯೋಚಿಸುವುವೇ?

(ಚಿತ್ರ: http://www.karnatik.com/ ಕೃಪೆ)


ಈ ಪ್ರಶ್ನೆಗೆ ನನ್ನಲ್ಲಿ ಖಚಿತ ಉತ್ತರವಿಲ್ಲ. ಆದರೆ, ಪ್ರಹ್ಲಾದ ಭಕ್ತಿ ವಿಜಯದ ಮಂಗಳಶ್ಲೋಕದಲ್ಲಿ ತ್ಯಾಗರಾಜರು ಪುರಂದರ ದಾಸರನ್ನು ನೆನೆದಿರುವುದೂ, ಮತ್ತು ಹಲವಾರು ತ್ಯಾಗರಾಜರ ರಚನೆಗಳು ಪುರಂದರ ದಾಸರ ರಚನೆಗಳನ್ನು ಹೋಲುವುದೂ ನಿಜವಾದ ಸಂಗತಿ.

ಉದಾಹರಣೆಗೆ ಹೇಳುವುದಾದರೆ, ಪುರಂದರದಾಸರು "ಸಕಲಗ್ರಹಬಲನೀನೆ ಸರಸಿಜಾಕ್ಷ” ಎಂದರೆ, ತ್ಯಾಗರಾಜರು "ಗ್ರಹಬಲಮೇಮಿ? ರಾಮಾನುಗ್ರಹಮೇ ಬಲಮು" (ಗ್ರಹಬಲವೇನದು? ರಾಮನ ಅನುಗ್ರಹವೇ ಬಲ) ಅನ್ನುತ್ತಾರೆ. ಪುರಂದರ ದಾಸರು "ಕೇಳನೋ ಹರಿ ತಾಳನೋ, ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನ" ಎಂದು ಹಾಡಿದರೆ, ತ್ಯಾಗರಾಜರು "ಸಂಗೀತ ಜ್ಞಾನಮು ಭಕ್ತಿವಿನಾ ಸನ್ಮಾರ್ಗಮು ಗಲದೇ!" ಅನ್ನುತ್ತಾರೆ.

ನನಗೆ ಹಿಡಿಸಿರುವ ಪುರಂದರ ದಾಸರ ಒಂದು ಉಗಾಭೋಗ ಹೀಗಿದೆ:

ನಿನ್ನಂಥ ಸ್ವಾಮಿ ನನಗುಂಟು ನಿನಗಿಲ್ಲ
ನಿನ್ನಂಥ ದೊರೆಯು ಎನಗುಂಟು ನಿನಗಿಲ್ಲ
ನಿನ್ನಂಥ ತಂದೆ ಎನಗುಂಟು ನಿನಗಿಲ್ಲ
ನಾನೇ ಸ್ವದೇಶಿ ನೀನೇ ಪರದೇಶಿ
ನಿನ್ನರಸಿ ಲಕುಮಿ ಎನ್ನ ತಾಯಿ
ನಿನ್ನ ತಾಯ ತೋರೋ ಪುರಂದರ ವಿಠಲ!

ತ್ಯಾಗರಾಜರು ತಮ್ಮ ಜಿಂಗಲ ರಾಜದ ಕೃತಿಯೊಂದರಲ್ಲಿ ಹೀಗೆ ಹಾಡುತ್ತಾರೆ.

ಪಲ್ಲವಿ:

ಅನಾಥುಡನು ಗಾನು ರಾಮ ನೇ ||ನನಾಥುಡನುಗಾನು ||

ಅನುಪಲ್ಲವಿ:

ಅನಾಥುಡವು ನೀವನೆ ನಿಗಮಜ್ಞುಲ ಸನಾತನುಲ ಮಾಟವಿನ್ನಾವು ನೇ ||ನನಾಥುಡನುಗಾನು||

ಚರಣ:

ನಿರಾದರವು ಜೂಚಿ ಈ ಕಲಿ ನರಾಧಮುಲನೆದರು

ಪುರಾಣಪುರುಷ ಪುರರಿಪುನುತ ನಾಗರಾಜ ಶಯನ ತ್ಯಾಗರಾಜನುತ ನೇ|| ನನಾಥುಡನು ಗಾನು ||

 

ಇದನ್ನೇ ಕನ್ನಡದಲ್ಲಿ ಓದುವ ಹಂಬಲ ನನಗೆ - ಅದಕ್ಕೆಂದು ಇದನ್ನು ಹೀಗೆ ಕನ್ನಡಿಸಿದ್ದೇನೆ.

ಪಲ್ಲವಿ:

ಅನಾಥನಾಗಿಲ್ಲ! ರಾಮ ನಾ ||ನನಾಥನಾಗಿಲ್ಲ ||

ಅನುಪಲ್ಲವಿ:

ಅನಾಥ ನೀನೆಂದು ನಿಗಮಗಳನರಿತ
ಸನಾತನರು ಪೇಳ್ವುದ ಕೇಳಿಹೆ! ನಾ ||ನನಾಥನಾಗಿಲ್ಲ||

ಚರಣ:

ಆದರಿಪರು ಎನಗಿರದೆ ಮನುಜರು ಕಲಿಕಾ-
ಲದಿ ಅನಾಥ ನೀಯೆಂಬರು! ಅ-
ನಾದಿಪುರುಷ ತ್ರಿಪುರಾರಿನುತನ
ಸದಾ ಈ ತ್ಯಾಗರಾಜ ಮಣಿದಿರೆ, ನಾ ||ನನಾಥನಾಗಿಲ್ಲ||

ಇಲ್ಲಿ ಪುರಂದರರು, ಮತ್ತು ತ್ಯಾಗರಾಜರ ಭಾವನೆಗಳ ಹೋಲಿಕೆಗಳು ಎಷ್ಟು ಚೆನ್ನಾಗೆ ಎದ್ದು ತೋರುತ್ತಿವೆ. ಅಲ್ಲವೇ? ಇನ್ನೂ ತ್ಯಾಗರಾಜರ ಬಗ್ಗೆ ಮಂಥನ ಮಾಡುವಂತಹದ್ದು ಬೇಕಾದಷ್ಟಿದೆ. ಸ್ವಲ್ಪವನ್ನಾದರೂ ಪುಷ್ಯ ಬಹುಳ ಪಂಚಮಿಯ ತ್ಯಾಗರಾಜ ಆರಾಧನೆಯ ದಿವಸಕ್ಕೆ ಬಾಕಿ ಇರಿಸಿಕೊಳ್ಳುತ್ತೇನೆ :) ಅಷ್ಟು ದಿನ ಕಾಯಲು ಇಷ್ಟವಿಲಲ್ವೆ? ಇಂಗ್ಲಿಷ್ ನಲ್ಲಿರುವ ಈ ಬರಹವನ್ನು ಓದುತ್ತಿರಿ! ನಿಮಗೆ ಹಿಡಿಸಲೂಬಹುದು!

ಸದ್ಯಕ್ಕೆ ತ್ಯಾಗರಾಜರ ನುಡಿಮುತ್ತಿನೊಂದಿಗೆ ಈ ಬರಹಕ್ಕೆ ಮಂಗಳ ಹಾಡುವೆ - "ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು".

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಉಗಾಭೋಗ ಅನ್ನುವ ಪದ ಯಾವುದಕ್ಕೆ ಅನ್ವಯಿಸುತ್ತದೆ? ಕೃತಿಯ ಸ್ವರೂಪಕ್ಕೋ ಅಥವಾ ಅದರ ತಿರುಳಿಗೋ? ದಯಮಾಡಿ ತಿಳಿಸಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸಾನಂದಿ ಅವರೆ,
ಚನ್ನಾಗಿದೆ ನಿಮ್ಮ ನುಡಿನಮನ. ಪುರಂದರದಾಸರು ಮತ್ತು ತ್ಯಾಗರಾಜರ ಕೃತಿಗಳ ಉದಾಹರಣೆಗಳು ಎಸ್.ಕೆ.ರಾಮಚಂದ್ರ ಅವರು ಬರೆದ 'ದಾಸಸಾಹಿತ್ಯ ಮತ್ತು ಸಂಸ್ಕೃತಿ' ಎನ್ನುವ ಪುಸ್ತಕವನ್ನು ನೆನಪಿಸಿತು.

ಅನಿಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನಿಲ ಜೋಷಿ,

ಮೆಚ್ಚುಗೆಗೆ ಧನ್ಯವಾದಗಳು. ಎಸ್.ಕೆ.ಆರ್ ಅವರ ಈ ಪುಸ್ತಕವನ್ನು ನಾನೂ ಓದಿದ್ದೇನೆ. ವಿ.ಎಸ್.ಸಂಪತ್ಕುಮಾರಾಚಾರ್ಯರ ಪುಸ್ತಕ ( ತ್ಯಾಗರಾಜ-ಜೀವನ-ಸಾಧನೆ ಎಂದೇನೋ ಹೆಸರು ಎಂದು ನೆನಪು) ಸಿಕ್ಕರೆ ಓದಿ. ಚೆನ್ನಾಗಿದೆ.

ರಮೇಶರೆ,

ಉಗಾಭೋಗ ಎನ್ನುವುದು ಹರಿದಾಸರು ಮಾಡಿರುವ ರಚನೆಗಳಲ್ಲಿ ಒಂದು ಬಗೆ. ಪದ ಮತ್ತು ಸುಳಾದಿಗಳು ಇತರ ಬಗೆಗಳು.

ಪದ, ಸುಳಾದಿಗಳಲ್ಲಿ ಪಲ್ಲವಿ-ಅನುಪಲ್ಲವಿ-ಚರಣ ಎಂಬ ಭಾಗಗಳಿರುತ್ತವೆ. ಪದಗಳಲ್ಲಿ ಕಡೇ ಪಕ್ಷ ಒಂದು ಚರಣ ಇರುತ್ತದೆ. ೨೦-೩೦ ಚರಣಗಳಿರುವ ಪದಗಊ ಇವೆ. ಸುಳಾದಿಗಳಿಗೆ ತಾಳದ ರಚನೆ ಹೀಗೇ ಇರಬೇಕು ಎನ್ನುವ ಕಟ್ಟುಪಾಡಿದೆ,ಮತ್ತಲ್ಲದೆ ಚರಣಗಳು ೪-೫-೬-೭ ಸಂಖ್ಯೆಯಲ್ಲೇ ಇರಬೇಕು. ಮತ್ತೆ ಈ ಎರಡೂ ಪ್ರಕಾರಗಳಿಗೂ, ಕವಿತೆಗಳಿಗೆ ಇರಬೇಕಾದ ಪ್ರಾಸ-ಯತಿ ಮೊದಲಾದ ಛಂದಸ್ಸಿನ ಬಂಧವೂ ಇದೆ.

ಉಗಾಭೋಗಗಳಿಗೆ ತಾಳದ ಕಟ್ಟು, ಛಂದಸ್ಸಿನ ಹಂಗು ಎರಡೂ ಇಲ್ಲ. ಕೆಲವುಕಡೆ ದ್ವಿತೀಯಾಕ್ಷರ ಪ್ರಾಸ ಕಂಡುಬರುವುದಾದರೂ (ಉದಾಹರಣೆಗೆ, ನಾನು ಮೇಲಿನ ಬರಹದಲ್ಲಿ ಕೊಟ್ಟಿರುವ ನಿನ್ನಂಥ ಸ್ವಾಮಿ ಎನಗುಂಟು ಎನ್ನುವ ಉಗಾಭೋಗ), ಎಲ್ಲ ಉಗಾಭೋಗಗಳಲ್ಲೂ ಅದು ಕಾಣದು. ಹಾಗಾಗಿ, ಅದರ ಅಗತ್ಯ ಇದ್ದೇ ಇದೆ ಎಂಬ ಕಟ್ಟುಪಾಡಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಉಗಾಭೋಗಗಳಲ್ಲಿ ಪಲ್ಲವಿ-ಅನುಪಲ್ಲವಿ ಮೊದಲಾದ ಕೃತಿ ವಿಭಾಗಗಳಿಲ್ಲ. ಇದನ್ನು ಹಾಡುವಾಗಲೂ, ತಾಳವಿಲ್ಲದೇ (ಗಮಕ ವಾಚನ/ಕಾವ್ವ್ಯ ವಾಚನದಂತೆ) ವಿಸ್ತಾರ ಮಾಡಿ ಹಾಡುವುದು ಪದ್ಧತಿ. ಅಲ್ಲದೆ, ಹಾಡುವಾದ, ಉಗಾಭೋಗವೊಂದನ್ನು ಹಾಡಿ, ನಂತರ ಅದರ ಅರ್ಥಕ್ಕೆ- ಮೂಲ ಯೋಚನೆಗೆ ಹೊಂದುವಂತಹ, ದೇವರನಾಮ(ಪದ್) ವೊಂದನ್ನು ಹಾಡುವುದು ರೂಢಿ. ಬರೀ ಉಗಾಭೋಗವೊಂದನ್ನು stand-alone ಹಾಡುವುದನ್ನು ನಾನು ಕೇಳಿಲ್ಲ. ಆದರೆ, ಅದು ಪರಂಪರಾಗತವಾಗಿ ಬಂದದ್ದೇ ಅಲ್ಲವೇ ಎನ್ನುವುದಕ್ಕೆ ನನ್ನಲ್ಲಿ ಉತ್ತರವಿಲ್ಲ.

ಉಗಾಭೋಗಗಳಿಗೆ ಅತಿ ಹತ್ತಿರದ ಸಂಬಂಧಿ ಎಂದರೆ ಶಿವ ಶರಣರ ವಚನಗಳು. ಆದರೆ, ನನಗೆ ತಿಳಿದ ಮಟ್ಟಿಗೆ ವಚನಗಳು ಹೇಳುವಂತಹವು (ವಚನ -> ಮಾತು). ಆದರೆ, ಉಗಾಭೋಗಗಳು ಹಾಡುವಂತಹವು (ಹರಿದಾಸ ಪರಂಪರೆಯ ಎಲ್ಲ ರಚನೆಗಳಂತೆ).

-ಹಂಸಾನಂದಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶತಾವಧಾನಿ ಗಣೇಶ್ ಮತ್ತು ವಿದ್ವಾನ್ ಶ೦ಕರ್ ರವರು - ಗೋಖಲೆ ಸ೦ಸ್ಥೆಯಲ್ಲಿ ಪ್ರವಚನ ಮಾಡುತ್ತಿದ್ದಾರೆ, ವಿಷಯ -
ತ್ಯಾಗರಾಜ ಸ೦ಗೀತದಲ್ಲಿ ಆಧ್ಯಾತ್ಮ.
ತು೦ಬಾ ಚೆನ್ನಾಗಿತ್ತು .. ನೀವು ಬರೆದಿರೋದನ್ನೇ ಅವರು ಹೇಳಿದ್ದೂ..:)
ಎ೦ದರೋ ಮಹಾನುಭಾವುಲು...
ಮುರಳಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಹಂಸಾನಂದಿಯವರೆ,
ಬಹಳ ಚೆನ್ನಾಗಿ ವಿವರಣಾತ್ಮಕ ಉತ್ತರ ನೀಡಿದ್ದೀರಿ. ಉಪಕಾರ ಸ್ಮರಿಸುತ್ತೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.