ದೀಪದ ಹಬ್ಬಕ್ಕೆ ಅಕ್ಷರದ ಹಣತೆ

5
 
ನಾತಲೀಲೆಯ ಮೂಲಕ ಗಮನ ಸೆಳೆದ ಎಸ್. ಸುರೇಂದ್ರನಾಥ್ 
ಅವರ ಕಾದಂಬರಿ ಎನ್ನ ಭವದ ಕೇಡುಬಿಡುಗಡೆ ಆಗಿದೆ. ಕನ್ನಡ 
ಸಾಹಿತ್ಯದಲ್ಲಿ ಅಪರೂಪವಾದ ಫ್ಯಾಂಟಸಿ, ಮ್ಯಾಜಿಕ್ ರಿಯಾಲಿಸಂ 
ತಂತ್ರದ ೨೬೧ ಪುಟದ ಈ ಕಾದಂಬರಿ ಓ-ತ್ತಾ ಹೋದಂತೆ ಅದ್ಭುತ 
ಅನುಭವ ನೀಡತ್ತೆ.
ಈ ದೀಪಾವಳಿ ಸಂಭ್ರಮಕ್ಕೆ ಭವದ ಕೇಡಿನ ಕೆಲ ಸಾಲುಗಳ ಹಣತೆ...

...ನಮ್ಮ ಅಜ್ಜಿ ನಮ್ಮಪ್ಪನಂಗೆ ದೊಡ್ಡ ಡಾಕ್ಟ್ರು, ಅವರು ಒಂದು ಮಾತು 
ಹೇಳೋರು. ಪ್ರತಿಯೊಬ್ರೂ ಹುಟ್ಟೋವಾಗ ಎದೇಲಿ ಒಂದು ನಂದಾದೀಪ 
ಇಟ್ಕೊಂಡೇ ಹುಟ್ತಾರಂತೆ. ಈಗ ನಿನ್ನ ಎದೇಲೂ ಅಂಥಾ ಒಂದು ನಂದಾದೀಪ 
ಇದ್ದೇ ಇರುತ್ತೆ. ಆ ನಂದಾದೀಪನ್ನ ಹಚ್ಚೋಕೆ ಎಣ್ಣೆ ಬೇಕು. 
ಬೆಳಗೋಕೆ ಬೆಂಕಿ 
ಬೇಕು. ನಿನ್ನ ಎದೇಲಿರೋ ನಂದಾದೀಪನ್ನ ಬೆಳಗೋಕೆ ನಿನ್ಕೈಲಿ ಆಗಲ್ಲ. 
ನಿನ್ನ ಎದೇಲಿರೋ ದೀಪಕ್ಕೆ ಎಣ್ಣೆ ತುಂಬೋಕೆ. ದೀಪಾನ್ನ ಬೆಳಗೋಕೆ 
ಇನ್ಯಾರಾದ್ರೂ ಬೇಕು. ನಿನ್ನ ಮನೆ, ನಿನ್ನ ಅಪ್ಪ- ಅಮ್ಮ, ನಿನ್ನ ಜೊತೆ 
ಹುಟ್ದೋರು ನಿನ್ನ ದೀಪಕ್ಕೆ ಎಣ್ಣೆ ತುಂಬ್ತಾ ಹೋಗ್ತಾರೆ. ಅದ್ರೆ ಇವ್ರಿಗೂ 
ನಿನ್ನ ಎದೇಲಿರೋ ದೀಪ ಬೆಳಗೋಕೆ ಆಗಲ್ಲ. ಆಂದ್ರೆ ನಿನ್ನ ಎದೇಲಿರೋ 
ದೀಪಾನ್ನ ಬೆಳಗೋಕೆ ನೀನು ಪ್ರೀತಿ ಮಾಡಿದ ಯಾರಾದ್ರೂ ಒಬ್ರು ಬರಬೇಕು. 
ಅವರ ಪ್ರೀತಿಯಿಂದ ನಿನ್ನ ದೀಪ ಹತ್ತಬೇಕು. ಈ ಪ್ರೀತಿ 
ಯಾವುದ್ರಿಂದಾನಾದ್ರೂ ಬರಬಹುದು. ಒಂದು ಹಾಡು, ಒಂದು ಕತೆ, 
ಒಂದಿಷ್ಟು ಮಾತು, ಇಲ್ಲಾಂದ್ರೆ ನಿಂಗೆ ಬೇಕಾದ ಅಡುಗೆ, ನಿಂಗಿಷ್ಟ 
ಆಗೋ ಹಾಗೆ ನಗಬಹುದು, ನಿನ್ನ ಅಪ್ಕೆಬಹುದು, ನಿಂಗೆ ಒಂದು 
ಮುತ್ತು ಕೊಡಬಹುದು, ಏನಾದ್ರೂ ಆಗಬಹುದು. ಅವರ 
ಪ್ರೀತಿಯಿಂದ ನಿನ್ನ ದೀಪ ಬೆಳಗಬೇಕು. ಆ ದೀಪ ಹತ್ತಿದ 
ಕೂಡಲೇ ನಮ್ಮ ಮೈ ಬೆಚ್ಚಗಾಗತ್ತೆ. ನಮ್ಮ ಮೈಯಲ್ಲಿ 
ಬಿಸಿಯೇರತ್ತೆ. ವಿಪರೀತ ಸಂತೋಷ ಆಗತ್ತೆ. ಅಳಬೇಕೂ 
ಅನ್ಸತ್ತೆ. ನಮ್ಮ ಮುಖಕ್ಕೆ ಬೆಳಕು ಹಿಡಿದ ಹಾಗಾಗತ್ತೆ. 
ಮುಖಕ್ಕೆ ರಂಗು ಬರತ್ತೆ. ನೋಡು ಜಗತ್ತು ಬದಲಾದ 
ಹಾಗೆ ಕಾಣತ್ತೆ. ಜಗತ್ತಿಗೆ ಹೊಸ ಬಣ್ಣ ಬಂದ ಹಾಗಾಗತ್ತೆ. 
ಈ ದೀಪ ಮುಂದ್ಯಾವತ್ತೂ ಆರದ ಹಾಗೆ ನೋಡಿಕೊಳ್ಳೋದೇ 
ನಮ್ಮ ಜೀವನ. ನಿನ್ನ ನಂದಾದೀಪ ಬೆಳಗೋ ಪ್ರೀತಿ ಎಲ್ಲಿದೆ, 
ಅದು ಯಾರ ಹತ್ರ ಇದೆ ಅಂತ ಹುಡುಕೋದು ನಿನ್ನ ಜವಾಬ್ದಾರಿ. 
ಈ ದೀಪದಿಂದ ನಿನ್ನ ಆತ್ಮಕ್ಕೆ ಸಂತೋಷ ಸಿಗತ್ತೆ. ನಿನ್ನ ಸಂತೋಷಕ್ಕೆ 
ಈ ನಂದಾದೀಪ ಬೆಳಗಲೇಬೇಕು. ಒಂದ್ವೇಳೆ ಈ ದೀಪ ಹಚ್ಚೋರು 
ಯಾರೂ ಸಿಗಲಿಲ್ಲ ಅಂತಿಟ್ಕೋ, ನಿಧಾನವಾಗಿ ನಿನ್ನ ದೀಪದಲ್ಲಿರೋ 
ಎಣ್ಣೆ ತೀರ್‍ತಾ ಹೋಗತ್ತೆ. ಎಣ್ಣೆ ಪೂರಾ ಖಾಲಿಯಾದ ಮೇಲೆ 
ಆ ದೀಪ ಮತ್ಯಾವತ್ತೂ ಬೆಳಗೋದಿಲ್ಲ, ಯಾರಿಂದಲೂ ಬೆಳಗೋಲ್ಲ. 
..
...
ನಿನ್ನ ಎದೇಲಿರೋ ನಂದಾದೀಪ ಬೆಳಗುತ್ತಿದ್ದ ಹಂಗೇ ಅದನ್ನು 

ಆರಿಸೋಕೂ ಜನ ಕಾಯ್ತಾ ಇರ್‍ತಾರೆ. ಅಂಥೋರಿಂದ ನಿನ್ನ ದೀಪಾನ್ನ 
ಜೋಪಾನವಾಗಿ ಇಟ್ಕೋಳೋದು ನಿನ್ನ ಜವಾಬ್ದಾರಿ. ಅಂಥೋರ 
ಉಸಿರು ನಿನ್ನ ಜೀವನಕ್ಕೆ ತಗುಲಿದ್ರೂ ನಿನ್ನ ದೀಪ ಮಂಕಾಗಿ 
ಬಿಡತ್ತೆ. ಮಂಕಾಗ್ತಾ ಮಂಕಾಗ್ತಾ ಆರೇ ಹೋಗಿ ಬಿಡತ್ತೆ. 
ಇಂಥೋರಿಂದ ದೂರ ಇರೋದೇ ಒಳ್ಳೇದು. ಇದು 
ನಿಂಗೂ ಗೊತ್ತಾಗಿರಬೇಕಲ್ಲಾ. 
...
...
ದೀಪದ ಎಣ್ಣೆ ತೀರಹೋಯ್ತು, ದೀಪ ಆರಿ ಹೋಯ್ತು ಅಂತ 

ಯೋಚನೆ ಮಾಡಬೇಕಿಲ್ಲ. ದೀಪಾನ್ನ ಮತ್ತೆ ಹಚ್ಚಬಹುದೂ 
ಅಂತ ನಿಂಗೆ ನಂಬಿಕೆ ಇರಬೇಕು. ಅಂದ್ರೆ ದೀಪ ಹಚ್ಚೋಕೆ 
ದಾರಿ ಸಿಗತ್ತೆ. ಕಳೆದು ಹೋದರೆ ಮತ್ತೆ ಸಿಗಲಾರದ 
ವಸ್ತು ಏನಲ್ಲಾ ಅದು. ಸಿಕ್ಕೇ ಸಿಗತ್ತೆ. ದೀಪ ಹಚ್ಚೋಕೆ 
ಯಾರಾದ್ರೂ ಸಿಕ್ಕೇ ಸಿಗ್ತಾರೆ ಅಂತ ನಂಬಿಕೆಯಿರಬೇಕು. 
ಸಿಕ್ಕೇ ಸಿಗ್ತಾರೆ... 
....

ನನ್ನ ಎದೇಲೂ ಒಂದು ದೀಪ ಇದೆ. ಎಣ್ಣೆ ಇದೇ ದೀಪ ಬೆಳಗೋಕೆ ಯಾರು 
ಬರ್‍ತಾರೆ ಅಂತ ಕಾಯ್ತಾ ಇದೀನಿ. ಯಾರಾದ್ರೂ ಬಂದೇ 
ಬರ್‍ತಾರೆ ಅನ್ನೋ ನಂಬಿಕೆ ನಂಗಿದೆ. ಏನಂತೀಯ...... 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಖಂಡಿತ...ನಿಮ್ಮ ಎದೆಯ ದೀಪ ಹಚ್ಚುವರು ಬೇಗನೇ ಬರಲಿ ಎಂದು ಹೃದಯ ಪೂರ್ವಕವಾಗಿ ಆಶಿಸುತ್ತೇನೆ.....
ಬಹಳ ಚೆನ್ನಾಗಿದೆ. ಬೆಂಕಿ ಶಬ್ದಕ್ಕಿಂತ ಬೆಳಕು ಸರಿ ಹೋಗುತ್ತಿತ್ತು ಅನಿಸುತ್ತದೆ. ಬೆಂಕಿ ಶಬ್ದವು ಭಯವನ್ನು ಹುಟ್ಟಿಸುತ್ತದೆಯಲ್ಲವೆ?

ಶೀಲಾ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.