gvmt ರವರ ಬ್ಲಾಗ್

ದ್ವಿರುಕ್ತಿ ದ್ವಿರುಕ್ತಿ - ೫ : ಪುರಂದರದಾಸರ ಒಂದು ದಶಾವತಾರದ ಹಾಡು

[ ನನ್ನ ಬ್ಲಾಗಿನಿಂದ ಕದ್ದದ್ದು ]

ವೈಷ್ಣವ ಭಕ್ತಿ ಸಂಪ್ರದಾಯಗಳಲ್ಲಿ ವಿಷ್ಣುವಿನ ಅವತಾರಗಳನ್ನು ವಿಷ್ಣುವಿನಂತೆಯೇ ಪೂಜಿಸುವ ಪರಿಪಾಠವಿದೆಯಷ್ಟೆ. ಹರಿದಾಸ ಸಂಪ್ರದಾಯವು ಇದಕ್ಕೆ ಹೊರತಲ್ಲ. ದಾಸ ಸಾಹಿತ್ಯದಲ್ಲಿ ರಾಮ, ಕೃಷ್ಣ ಮುಂತಾದ ವಿಷ್ಣುವಿನ ಪ್ರಸಿದ್ಧ ಅವತಾರಗಳನ್ನು ಪ್ರತ್ಯೇಕವಾಗಿ ಕುರಿತಿರುವ ಕೃತಿಗಳು ಹೇರಳವಾಗಿ ಕಾಣಸಿಗುತ್ತವೆ. ಅವುಗಳೊಂದಿಗೆ ಪುರಾಣ ಪ್ರಸಿದ್ಧವಾದ ಹತ್ತು ಅವತಾರಗಳನ್ನು ಸಮಷ್ಟಿಯಾಗಿ ಹೊಗಳುವ ದಶಾವತಾರದ ಹಾಡುಗಳೂ ಅಲ್ಲಲ್ಲಿ ದೊರಕುತ್ತವೆ.  ಆರತಿಯ ಹಾಡಿನ ಚೌಕಟ್ಟಿನಲ್ಲಿ ಪುರಂದರ ದಾಸರು ಕಟ್ಟಿರುವ ಈ ಪದ್ಯವನ್ನು ಒಂದು ಉದಾಹರಣೆಯಾಗಿ ನೀಡಬಹುದು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಜಪಾನಿನ ಕಥೆಗಳು - ೧ : ಅವೊತೊ ಫುಜಿತ್ಸುನ

೧೯ನೆ ಶತಕದ ಅಂತ್ಯಭಾಗದಲ್ಲಿ ಬ್ರಿಟಿಷ್ ಮ್ಯೂಸಿಯಂನ ಪರವಾಗಿ ಜಪಾನಿನಲ್ಲಿ ಯಾತ್ರೆ ಕೈಗೊಂಡ ರಿಚರ್ಡ್ ಗಾರ್ಡನ್ ಸ್ಮಿತ್ ಎಂಬಾತನು ಅಲ್ಲಿ ಕೇಳಿ ಸಂಗ್ರಹಿಸಿದ ಕಥೆಗಳಲ್ಲಿ ಕೆಲವನ್ನು ಪುಸ್ತಕವಾಗಿ ೧೯೦೮ರಲ್ಲಿ ಪ್ರಕಟಿಸಿದನು. ಅವುಗಳಲ್ಲಿ ಕೆಲವನ್ನು ಆರಿಸಿ ಅನುವಾದಿಸಿ ಇಲ್ಲಿ ಕನ್ನಡದ ಓದುಗರಿಗೆ ಪರಿಚಯಿಸುತ್ತಿದ್ದೇನೆ. ಮೊದಲನೆಯ ಕಂತಾಗಿ ಅವೊತು ಫುಜಿತ್ಸುನ ಎಂಬ ಪ್ರಾಮಾಣಿಕನ ಕಥೆಯನ್ನು ಅನುವಾದಿದ್ದೇನೆ. ಈ ಕೊಂಡಿಯನ್ನು ಅನುಸರಿಸಿ ಇಡಿಯ ಕಥೆಯನ್ನು ಓದಬಹುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ದ್ವ್ರಿರುಕ್ತಿ ದ್ವಿರುಕ್ತಿ - ೪ : ಭೋಜರಾಜನ ಅಕ್ಷರಲಕ್ಷ

[ ನನ್ನ ಬ್ಲಾಗಿನಿಂದ ಮರುಪ್ರಕಟನೆ - ವೆಂ. ]

ಭೋಜರಾಜ ಚಾರಿತ್ರಿಕ ವ್ಯಕ್ತಿ, ಸುಮಾರು ೧೧ನೆಯ ಶತಮಾನದವನು. ಆದರೂ ೫-೬ನೆಯ ಶತಮಾನದ ಕಾಳಿದಾಸನ ಹೆಸರಿನೊಂದಿಗೆ ಭೋಜನ ಹೆಸರು ಜೋತುಬಿದ್ದಿದೆ. ಚಾರಿತ್ರಿಕ ಭೋಜನಂತೆಯೆ ಕಾಳಿದಾಸನ ಭೋಜನೂ ಕವಿತಾಪಕ್ಷಪಾತಿ. ಆಗಾಗ ಕವಿಗಳನ್ನು ತನ್ನಲ್ಲಿಗೆ ಕರೆಸಿಕೊಂಡು ಗೋಷ್ಟಿಗಳನ್ನು ನಡೆಸಿ ಬಹುಮಾನಮಾಡಿ ಕಳಿಸುತ್ತಿದ್ದನು. ಆಗಾಗ ಕವಿತೆ ಕಟ್ಟುವ ಯಾರಿಗೂ ತನ್ನ ಆಸ್ಥಾನದ ಬಾಗಿಲುಗಳನ್ನು ತೆರೆದು ಅಕ್ಷರಲಕ್ಷವನ್ನು ನಡೆಸುತ್ತಿದ್ದನು. ಅಕ್ಷರಲಕ್ಷವೆಂದರೆ ಕವಿತೆಯ ಅಕ್ಷರವೊಂದಕ್ಕೆ ಲಕ್ಷ ಹೊನ್ನುಗಳಷ್ಟು ಬಹುಮಾನಿಸುವುದು. ಯಾರು ಬೇಕಾದರು ಆಸ್ಥಾನಕ್ಕೆ ಬಂದು ತಾವೆ ಕಟ್ಟಿದೆ ಕವಿತೆಯನು ಹಾಡಿ ಬಹುಮಾನ ಪಡೆಯಬಹುದಾಗಿತ್ತು. ಇಂತಹ ರಾಜನಿದ್ದಾಗ ಕಾಳಿದಾಸಾದಿಗಳಿಗೆ ಯಾವ ಕೊರತೆಯೂ ಇದ್ದಿರಲಾರದು. "ತ್ವಯಿ ದಾತರಿ ರಾಜೇಂದ್ರ ಸುದ್ರುಮಾಂ ನಾಶ್ರಯಾಮಹೇ" (ನೀನಿದ್ದಾಗ ಕಲ್ಪತರು ಬೇರೆ ಬೇಕೆ?) ಎಂದು ಅಷ್ಟಲ್ಲದೆ ಹೊಗಳಿದರೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಭಾರತಕ್ಕೆಂದೆ ಪ್ರತ್ಯೇಕವಾದ ಜಿ.ಪಿ.ಎಸ್ ವ್ಯವಸ್ಥೆ - ಬೇಕೆ, ಬೇಡವೆ?

ನಿಮ್ಮಲ್ಲಿ ಹಲವರಿಗೆ ಇದು ಹಳಸಲು ಸುದ್ದಿಯೇನೊ ಆದರೆ ನನಗೆ ಇತ್ತೀಚಿಗೆ ತಿಳಿಯಿತು, ಇಸ್ರೋದವರು ಭಾರತಕ್ಕೆಂದೆ ಪ್ರತ್ಯೇಕವಾದ, ೮ ಉಪಗ್ರಹಗಳುಳ್ಳ ಜಿ.ಪಿ.ಎಸ್ ವ್ಯವಸ್ಥೆಯನ್ನು ನಿರ್ಮಿಸುವ ಯೋಜನೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ; ಅಂದಾಜು ವೆಚ್ಚ ೨೦೦೦ ಕೋಟಿ ರೂ.

ಅಮೇರಿಕೆಯ ಜಿ.ಪಿ.ಎಸ್ ವ್ಯವಸ್ಥೆ ಭದ್ರವಾಗಿ ತಳವೂರಿದೆ; ಒಂದು ಕಾಲದಲ್ಲಿ ಅಮೇರಿಕೆಯ ಸೇನೆಯವರಿಗೆ ಮಾತ್ರ ಕೊಡಲಾಗುತ್ತಿದ್ದ ಕರಾರುವಾಕ್ಕಾದ ಮಾಹಿತಿಯನ್ನು ಎಲ್ಲರಿಗೂ ಕೊಡುವಂತೆ ಕ್ಲಿಂಟನ್ ಸರ್ಕಾರದವರು ಏರ್ಪಡಿಸಿಯಾಗಿದೆ. ರಷ್ಯಾದ ಗ್ಲೋನಾಸ್ ವ್ಯವಸ್ಥೆಯ ಉಪಗ್ರಹಗಳನ್ನು ಭಾರತದಿಂದ ಉಡಾವಣೆ ಮಾಡುವಂತೆಯೂ, ಭಾರತದಲ್ಲಿ ಸೇನೆಯವರೂ ಸಾರ್ವಜನಿಕರೂ ಆ ವ್ಯವಸ್ಥೆಯನ್ನು ಬಳಸಲಾಗುವಂತೆಯೂ ಒಪ್ಪಂದವೇರ್ಪಟ್ಟಿದೆ. ಸಾಲದ್ದಕ್ಕೆ ಯೂರೋಪಿನ ಇ.ಎಸ್.ಎ ಸಂಸ್ಥೆಯವರ ಗೆಲಿಲೆಯೋ ವ್ಯವಸ್ಥೆಯಲ್ಲೂ ಭಾರತ ಪಾಲ್ಗೊಳ್ಳುವಂತೆ ಒಪ್ಪಂದವಾಗಿದೆ. ಇಷ್ಟಿದ್ದೂ ಮತ್ತೊಂದು ವ್ಯವಸ್ಥೆ ಬೇಕೆ? ಇದರಿಂದ ಯಾವ ಹೊಸ ಪ್ರಯೋಜನವಾದೀತು? ಎಲ್ಲ ತಿಳಿದೂ ಯೋಜನೆ ತಯಾರಿಸಿದ ಇಸ್ರೋದವರ ಉದ್ದೇಶವಾದರೂ ಏನಿರಬಹುದು?

ಒಂದು ವೇಳೆ ಸರ್ಕಾರದವರು ಮಂಜೂರು ಮಾಡಿದರೆ ಹೊಸ ವ್ಯವಸ್ಥೆಗೊಂದು ಹೆಸರು ಬೇಕಲ್ಲ? ನಕ್ಷತ್ರ ಚೆನ್ನಾಗಿ ಒಪ್ಪುತ್ತೆ, ಏನಂತೀರಿ?

[ ನ್ಯಾಯವಾಗಿ ಜಿ.ಪಿ.ಎಸ್ ಅಮೇರಿಕೆಯ ವ್ಯವಸ್ಥೆಯ ಹೆಸರು ಮಾತ್ರ; ಉಳಿದವನ್ನು ಆ ಹೆಸರಿನಿಂದ ಕರೆಯಲು ಬಾರದು; ಆದರೆ "ಉಪಗ್ರಹಾಧಾರಿತ ಯಾನವ್ಯವಸ್ಥೆ" ಎನ್ನುವುದರ ಬದಲಾಗಿ ಜಿ.ಪಿ.ಎಸ್ ಎನ್ನುವುದು ಸುಲಭ. ಇದರಿಂದ ಯಾರಾದರೂ ನೊಂದಿದ್ದರೆ ದಯವಿಟ್ಟು ಕ್ಷಮಿಸಿ. ]

ವೆಂ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ದ್ವಿರುಕ್ತಿ ದ್ವಿರುಕ್ತಿ - ೩ : ಚಾತಕ

[ ನನ್ನ ಸೈಟಿನಿಂದ ಬರಹವನ್ನು ಆಗಾಗ ತೆಗೆದು ಸಂಪದಕ್ಕೆ ಹಾಕುವ (ದುರ್)ಅಭ್ಯಾಸ ಬೆಳೆದುಬಿಟ್ಟಿದೆ. ಇದೂ ಸೇರಿ ಮೂರನೆಯ ಬಾರಿ ಹಾಗೆ ಹಾಕುತ್ತಿರುವುದು. ಅಂತಲೆ, ಇದು ದ್ವಿರುಕ್ತಿ; ಮುಂದೂ ಮಾಡಬಹುದಾದ್ದರಿಂದ ಇದು ಒಂದು ಮಾಲಿಕೆ; ಸದ್ಯದ್ದು ಮೂರನೆಯದು ]

ಕಾತರಿಸಿ ಕಾಯುವವರನ್ನು ಚಾತಕನಿಗೆ ಹೋಲಿಸುವುದು ಕವಿಸಮಯ. ಚಾತಕ ಪಕ್ಷಿಯು ನೆಲದ ಮೇಲೆ ಬಿದ್ದ ನೀರನ್ನು ಕುಡಿಯುವುದಿಲ್ಲವಂತೆ. ಮಳೆಯ ಹನಿ ನೇರವಾಗಿ ಗಂಟಲೊಳಗೆ ಇಳಿದರೆ ನೀರುಂಟು, ಇಲ್ಲವಾದರಿಲ್ಲ. ಅಂತಲೆ, ಚಾತಕವು ಮಳೆಯ ಮೋಡವನ್ನು ಕಾಯುತ್ತ, ಮೋಡ ಕಂಡೊಡನೆಯೆ ದೀನಸ್ವರದಲ್ಲಿ ಹಾಡುವುದಂತೆ. ಹಾಗೊಂದು ಚಾತಕನಿಗೆ ಭರ್ತೃಹರಿಯ ಕೆಳೆತನದ ಕಿವಿಮಾತು ಇದು:

रॆ रॆ चातक सावधानमनसा मित्र क्शणं श्रूयतां ।
अंभॊदाः बहवॊ वसंति गगने सर्वॆऽपि नैकादृशाः ।
कॆचिद्वृष्टिभिरार्द्रयंति वसुधां गर्जंति कॆचिद्वृथा ।
यं यं पश्यसि तस्य तस्य पुरतः मा ब्रूहि दीनं वचः ॥

ಎಲೆಲೆ ಗೆಳೆಯ ಚಾತಕನೆ, ಕೆಳೆಯ ನುಡಿಯ ಕೇಳು
ಬಾನಿನಲ್ಲಿ ತೇಲುವವು ಮೋಡಗಳು ಹಲವು
ಹನಿಸಿ ನೀರು ನೆಲವ ತೊಯ್ಸಿ ಸಾರುವವು ಕೆಲವು
ಧ್ವನಿಸಿ ಸುಳ್ಳೆ ಹುಸಿಯ ಆಶೆ ತೋರುವವು ಕೆಲವು
ನಿನ್ನ ದೈನ್ಯ ಎಲ್ಲರಲ್ಲಿ ಫಲಿತಕ್ಕೆ ಬಾರದು

[ ಕವಿ अंभॊदाः ಎಂದಿರುವುದನ್ನು ಗಮನಿಸಿರಿ: ಸುಳ್ಳೆ ಗುಡುಗಿದ ಮೋಡದಲ್ಲಿ ನೀರಿಲ್ಲವೆಂದಲ್ಲ, ಕೊಡುವ ಮನಸ್ಸಿಲ್ಲ ಅಷ್ಟೆ ]

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - gvmt ರವರ ಬ್ಲಾಗ್