'ಸುವರ್ಣ ಕರ್ನಾಟಕದ ಸುವರ್ಣ ಪುಟಗಳು': ಒಂದು ಹಿನ್ನೋಟ

0

'ಸುವರ್ಣ ಕರ್ನಾಟಕದ ಸುವರ್ಣ ಪುಟಗಳು': ಒಂದು ಹಿನ್ನೋಟ

'ವಿಕ್ರಾಂತ ಕರ್ನಾಟಕ'ದ ದೀಪಾವಳಿ ಸಂಚಿಕೆ ಕುರಿತಂತೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದೆ. ಡಾ|| ಯು.ಆರ್.ಅನಂತಮೂರ್ತಿಯವರಿಂದ ಹಿಡಿದು ಸಾಮಾನ್ಯ ಓದುಗನವರೆಗೆ, ಎಲ್ಲರಿಂದ ಮೆಚ್ಚುಗೆ ಹಾಗೂ ವಿಮರ್ಶೆಗಳೆರಡೂ ಬಂದಿವೆ. ಇದರಲ್ಲಿ ಹೆಚ್ಚಿನ ಪಾಲು ಸಂಪಾದಕರ ಬಳಿಗೆ ಬಂದಿದ್ದರೆ, ಒಂದಷ್ಟು ಪಾಲು 'ಸುವರ್ಣ ಕರ್ನಾಟಕದ ಸುವರ್ಣ ಪುಟಗಳು' ಲೇಖನ ಮಾಲಿಕೆಯ ಸಂಪಾದಕನಾದ ನನ್ನೆಡೆಗೂ ಹರಿದು ಬಂದಿದೆ. ಇಡೀ ಲೇಖನ ಮಾಲೆಯನ್ನು ಒಂದು ಪುಸ್ತಕವಾಗಿ ಪ್ರಕಟಿಸಿದರೆ ಕನ್ನಡ ಸಾಹಿತ್ಯ ಅಧ್ಯಯನಕ್ಕೆ ಒಂದು ಒಳ್ಳೆಯ ಆಕರ ಗ್ರಂಥವಾಗಬಲ್ಲುದೆಂದು ಕೆ.ಸತ್ಯನಾರಾಯಣ ಅವರು ಅಭಿಪ್ರಾಯ ಪಟ್ಟರೆ, 'ಆಧುನಿಕ ಕರ್ನಾಟಕ ಕಟ್ಟಿದ ಐವ್ವತ್ತು ಮಂದಿ ಮಹನೀಯರು' ಲೇಖನ ಒಂದೆರಡು ಸಣ್ಣ ತಿದ್ದುಪಡಿಗಳೊಂದಿಗೆ ಕರ್ನಾಟಕದಲ್ಲಿ ಶಾಲಾ ಶಿಕ್ಷಣಕ್ಕೆ ಒಂದು ಒಳ್ಳೆಯ ಪಠ್ಯವಾಗಬಲ್ಲುದು ಎಂದು ಅನಂತಮೂರ್ತಿಯವರು ಸೂಚಿಸುತ್ತಾರೆ. ಹೀಗೆ ಹಲವಾರು ಜನ ಓದುಗ ಗೆಳೆಯರು ದೂರವಾಣಿ ಮೂಲಕ ಹಾಗೂ ಕೆಲವರು ಒಂದೆರಡು ಸಾಲುಗಳ ಪತ್ರಗಳ ಮೂಲಕ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಸಂತೋಷದ ಸಂಗತಿಯೆಂದರೆ, ಈ ಪ್ರತಿಕ್ರಿಯೆಗಳಲ್ಲಿ ಟೀಕೆಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಅರ್ಧ ಪಾಲು ಮೆಚ್ಚುಗೆಯಾದರೆ, ಇನ್ನರ್ಧ ಪಾಲು ವಿಮರ್ಶೆಯ ರೂಪದ್ದು - ಚೆನ್ನಾಗಿದೆ; ಆದರೆ ಹೀಗಿದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂಬಂತಹ ಅಭಿಪ್ರಾಯಗಳು.

ಇದನ್ನೆಲ್ಲ ನಾನು ಇಲ್ಲಿ ಏಕೆ ಹೇಳುತ್ತಿದ್ದೇನೆಂದರೆ, ಒಂದು ಕಾಲಘಟ್ಟದ ಸಾಹಿತ್ಯವನ್ನು ಹತ್ತು ಅತ್ಯತ್ತುಮಗಳ ಆಯ್ಕೆ ಎಂಬ ತುಂಬ ಕಡಿಮೆ ಕಣ್ಣುಗಳುಳ್ಳ ಜಾಲರಿಯ ಮೂಲಕ ಶೋಧಿಸಿದ ಪ್ರಯತ್ನ ಹಾಗೂ ಅದರ ಫಲಿತಗಳು ಆಧುನಿಕ ಕನ್ನಡ ಸಾಹಿತ್ಯ ಕುರಿತಂತೆ ಒಂದು ಉನ್ನತ ಮಟ್ಟದ ಚರ್ಚೆಯನ್ನೇ ಆಹ್ವಾನಿಸುವಂತಹವು. ಈ ಆಯ್ಕೆ ಮಾಡಿದವರೆಲ್ಲರೂ ಸಮಕಾಲೀನ ಕನ್ನಡ ಸಾಹಿತ್ಯ - ಸಂಸ್ಕೃತಿ ಕ್ಷೇತ್ರಗಳಲ್ಲಿನ ಗಣನೀಯ ಹೆಸರುಗಳೇ ಆಗಿರುವುದರಿಂದ; ಇವರು ಮಾಡಿದ ಆಯ್ಕೆಗಳು ಪರೋಕ್ಷವಾಗಿಯಾದರೂ, ಸಮಕಾಲೀನ ಸಾಹಿತ್ಯ - ಸಂಸ್ಕೃತಿ ವಿಮರ್ಶೆಯ ಒಂದು ದೊಡ್ಡ ಪ್ರಯೋಗದಂತೆಯೇ ಪರಿಗಣಿತವಾಗಿ ಪರಿಶೀಲನೆಗೆ ಒಳಗಾಗಬೇಕಾದಂತಹವು. ಹಾಗಾಗಿ ಲೇಖನ ಮಾಲೆಯ ಸಂಪಾದಕನಾಗಿ ನಾನು ನನ್ನ ಕೆಲವು ಹಿನ್ನೋಟದ ಮಾತುಗಳನ್ನು ದಾಖಲಿಸುವ ಮೂಲಕ ನನ್ನ ಸಂಪಾದಕತ್ವದ ಜವಾಬ್ದಾರಿಯನ್ನು ಈ ಮೂಲಕ ಮುಕ್ತಾಯಗೊಳಿಸಿಕೊಂಡು, ಆಸಕ್ತಿ ಇದ್ದವರು ಈ ಬಗ್ಗೆ ಮಾಡಬಹುದಾದ ಚರ್ಚೆಗೆ ವೇದಿಕೆಯನ್ನು ಬಿಟ್ಟುಕೊಡಬೇಕಾಗಿದೆ.. ಏಕೆಂದರೆ ಲೇಖನ ಮಾಲೆ ಆರಂಭವಾಗುವ ಮುನ್ನ ನಾನು ಈ ಮಾಲೆಯ ಬಗ್ಗೆ ಕುತೂಹಲ ಹುಟ್ಟಿಸಲು ಆಡಿದ ಕೆಲವು ಪ್ರಾಸ್ತಾವಿಕ ಮಾತುಗಳ ಹೊರತಾಗಿ, ನಿರ್ದಿಷ್ಟವಾಗಿ ಯಾವುದೇ ಆಯ್ಕೆಯ ಬಗ್ಗೆ ಮಾತಾಡಿಲ್ಲ. ಮಾತಾಡುವುದೂ ಉಚಿತವೂ ಆಗಿರಲಿಲ್ಲ. ಅದೇನೇ ಇರಲಿ, ನನ್ನ ಕೋರಿಕೆಯನ್ನು ಮನ್ನಿಸಿ ಈ ಪ್ರಯೋಗದಲ್ಲಿ ಭಾಗವಹಿಸಿದ ನನ್ನೆಲ್ಲ ವಿಮರ್ಶಕ ಮಿತ್ರರಿಗೆ ಈ ಮೂಲಕ ನನ್ನ ವಂದನೆಗಳನ್ನು ತಿಳಿಸುತ್ತೇನೆ. ಹಾಗೂ ಈ ಬಗೆಗಿನ ಸಾಧ್ಯ ಚರ್ಚೆಯನ್ನು ಆಸಕ್ತಿಯಿಂದ ಗಮನಿಸುವಂತೆ ಕೋರುತ್ತೇನೆ.

ಮೊದಲಿಗೆ ಇಂತಹ ಆಯ್ಕೆಯ ಬಗ್ಗೆಯೇ ಕೇಳಿ ಬಂದ ಕೆಲವು ಆಕ್ಷೇಪಣೆಗಳನ್ನು ಗಮನಿಸುವುದು ಒಳಿತು. ಲೇಖನ ಮಾಲೆ ವಾಸ್ತವವಾಗಿ ಆರಂಭವಾಗುವ ಮುನ್ನವೇ ವ್ಯಕ್ತವಾದ ಕೆಲವು ಆಕ್ಷೇಪಣೆಗಳಿಗೆ ಈ ಲೇಖನ ಮಾಲೆ ಆರಂಭವಾದ ಸಂಚಿಕೆಯ ನನ್ನ ಈ ಅಂಕಣದಲ್ಲೇ ('ವಿಕ್ರಾಂತ ಕರ್ನಾಟಕ': ಅಕ್ಟೋ.5, 2007) ಉತ್ತರಿಸುವ ಪ್ರಯತ್ನ ಮಾಡಿದ್ದೇನೆ. ಆದರೂ ಕೆಲ ಗೆಳೆಯರು ಇನ್ನೂ, ಇಂತಹ ಆಯ್ಕೆಯೇ ಅಸಂಬದ್ಧ ಎನ್ನುತ್ತಿದ್ದಾರೆ. ಅವರಿಗೆ ನನ್ನ ಒಂದೇ ಪ್ರಶ್ನೆ: ನಿಮ್ಮ ದೇಹದ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳುವ ಕೆಲಸಗಳ ಹೊರತಾಗಿ, ನಿಮ್ಮ ಇನ್ನಾವುದಾದರೂ ಕೆಲಸ, ನಿಮ್ಮ ಈ ಮಾನದಂಡದ ಪ್ರಕಾರ ನಿಜವಾಗಿಯೂ ಸಂಬದ್ಧ ಅನ್ನಿಸಿಕೊಳ್ಳುತ್ತದೆಯೆ? ಆದರೂ, ಮನುಷ್ಯನ ಬೌದ್ಧಿಕ ಬೆಳವಣಿಗೆಗೆ ಇಂತಹ ಪ್ರಚೋದನೆಗಳು - ಅವನ್ನು ಕಸರತ್ತುಗಳು ಎಂದು ಬೇಕಾದರೂ ಕರೆಯಿರಿ - ಅಗತ್ಯವೆಂದು ನಾನಾದರೂ ನಂಬಿದ್ದೇನೆ. ಹಾಗೇ ಬಹುಶಃ ಬಹಳ ಜನ ಕೂಡಾ!

ಇನ್ನು ಲೇಖನ ಮಾಲೆ ಆರಂಭವಾದ ಮೇಲೆ ಆಯ್ಕೆ ವಿಧಾನದ ಬಗ್ಗೆ ಕೆಲವರು ವ್ಯಕ್ತಪಡಿಸಿರುವ ಭಿನ್ನಾಭಿಪ್ರಾಯಗಳನ್ನು ಗಮನಿಸೋಣ. ನಿರ್ದಿಷ್ಟವಾಗಿ ಹತ್ತು ಎಂದು ಸೀಮಿತಗೊಳಿಸಿದ್ದರಿಂದ ಅನೇಕ ಉತ್ತಮ ಕೃತಿಗಳು ಕೈಬಿಟ್ಟು ಹೋಗಿವೆ ಎಂಬುದು ಕೆಲವರ ಅಭಿಪ್ರಾಯ. ನಾವು ಹತ್ತು ಅತ್ಯುತ್ತಮಗಳನ್ನಷ್ಟೇ ಆಯ್ಕೆ ಮಾಡುವ ಉದ್ದೇಶ ಹೊಂದಿದ್ದರಿಂದ, ನಮ್ಮ ಮಟ್ಟಿಗೆ ಉತ್ತಮ ಕೃತಿಗಳು ಬಿಟ್ಟು ಹೋಗುವ ಪ್ರಶ್ನೆಯೇ ಏಳುವುದಿಲ್ಲ. ಹತ್ತು ಕಡಿಮೆಯಾಗುವುದಿದ್ದರೆ, ಇನ್ನು ಎಷ್ಟು ಅತ್ಯುತ್ತಮಗಳಿಗೆ ಈ ಪಟ್ಟಿಯನ್ನು ವಿಸ್ತರಿಸಬಹುದಿತ್ತು? ಹದಿನೈದು? ಇಪ್ಪತ್ತು? ಇಪ್ಪತ್ತೈದು? ಐವ್ವತ್ತು? ನೂರು? ಇವುಗಳಲ್ಲಿ ಯಾವುದೇ ಸಂಖ್ಯೆಗೂ ನಮ್ಮ ಪಟ್ಟಿ ವಿಸ್ತರಿಸಿದ್ದರೂ, ಕೆಲವರ ಪ್ರಕಾರ ಕೆಲವು ಉತ್ತಮ ಕೃತಿಗಳು ಬಿಟ್ಟು ಹೋಗುವ ಮತ್ತು ನಮ್ಮ ಪ್ರಕಾರ ಈ ಇಡೀ ಆಯ್ಕೆ ಪ್ರಕ್ರಿಯೆಯೇ ಒಂದು ಸಡಿಲ ಹಾಗೂ ಸ್ಥೂಲ ಸಮೀಕ್ಷೆಯಾಗಿ ಕೊನೆಗೊಳ್ಳುವ ಸಂಭವವಿತ್ತು. ಈಗಾಗಲೇ ಇಂತಹ ಹತ್ತಾರು ಸಮೀಕ್ಷೆಗಳು ಅಲ್ಲಲ್ಲಿ ನಡೆದು ಹೋಗಿವೆ. ಆದರೆ ನಾವು ಆಯ್ಕೆಯನ್ನು ಹತ್ತಕ್ಕೆ ಸೀಮಿತಗೊಳಿಸಿಕೊಂಡಿದ್ದರಿಂದ ವಿಮರ್ಶೆಯ ಮಾನದಂಡಗಳು ಹೆಚ್ಚು ಮೊನಚಾಗಿ, ನಿರ್ದಿಷ್ಟವಾಗಿ, ನಿಷ್ಠುರವಾಗಿ; ಆದುದರಿಂದ ಹೆಚ್ಚು ವಿಶ್ವಾಸಾರ್ಹವಾಗಿ ಮತ್ತು ಒಳ್ಳೆಯ ಸಾಹಿತ್ಯ ಎಂದರೇನು ಹಾಗೂ ಯಾವುದು ಎಂಬುದನ್ನು ಸ್ಪಷ್ಟವಾಗಿ, ಸೋದಾಹರಣವಾಗಿ, ಅಸಂದಿಗ್ಧವಾಗಿ ಸೂಚಿಸುವ ಪ್ರಯತ್ನವೊಂದು ಇಲ್ಲಿ ಆಗಿದೆ ಎಂದು ನಾನು ನಂಬಿದ್ದೇನೆ.

ಇನ್ನು, ಒಬ್ಬರಿಗಿಂತ, ಇಬ್ಬರೋ ಮೂವ್ವರೋ ಒಟ್ಟಗೆ ಕೂತು ಆಯ್ಕೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂಬುದು ಕೆಲವರ ಅಭಿಪ್ರಾಯ. ಆದರೆ, ಈ ಇಬ್ಬರು ಮುವ್ವರು ಎಂಬುದು, ಹೆಚ್ಚೆಚ್ಚು ನ್ಯಾಯಯುತವಾದ ತೀರ್ಪಿನ ಹಂಬಲದಲ್ಲಿ ಐವ್ವರು, ಏಳು ಜನ ಅಥವಾ ಸರ್ವೋಚ್ಛ ನ್ಯಾಯಾಲಯದ ಪೂರ್ಣ ಪೀಠದಂತೆ ಹನ್ನೊಂದು ಜನದವರೆಗೂ ಹಬ್ಬಬಹುದಾಗಿದೆ. ಇದು ಯಾಕಾಗಬಾರದು? ಆದರೆ ಇದು ಅವ್ಯಾವಹಾರಿಕವಷ್ಟೇ ಅಲ್ಲ, ತೀರ್ಪಿನಲ್ಲಿ ಹಲವು ರಾಜಿಗಳಿಗೂ ಕಾರಣವಾಗಬಹುದು. ಅದು ನಮ್ಮ ಪ್ರಯತ್ನದ ಮೂಲ ಭಾವನೆಗೇ ವಿರುದ್ಧವಾದದ್ದು. ನಂಬಿದರೆ ಒಬ್ಬರನ್ನು ನಂಬೋಣ ಎಂಬುದು ನನ್ನ ಅಭಿಮತ. ಹಾಗೆ ನೋಡಿದರೆ, ಒಬ್ಬರ ಮೇಲಿನ ಅಪನಂಬಿಕೆ ಎಷ್ಟು ಜನರ ಮೇಲಿನ ಅಪನಂಬಿಕೆಯಾಗಾದರೂವಿಸ್ತರಿಸಬಹುದಲ್ಲವೇ? ಆ ಅಪಾಯ ಬೇಡವೆಂದು, ಸಾಹಿತ್ಯ ವಲಯದಲ್ಲಿ ಈಗಾಗಲೇ ವಿಶ್ವಾಸಾರ್ಹತೆ ಗಳಿಸಿಕೊಂಡ ಒಬ್ಬೊಬ್ಬರನ್ನೇ ಆಯ್ದು ಈ ಅಪಾಯಕ್ಕೆ ಈಡು ಮಾಡಲಾಗಿದೆ!

ಈ ಆಯ್ಕೆಯಲ್ಲಿ ಭಾಗವಹಿಸಿದ ಒಂದಿಬ್ಬರು ವಿಮರ್ಶಕರಂತೂ, ನಮ್ಮನ್ನು ನೀವು ಸಮಕಾಲೀನ ಸಾಹಿತ್ಯ ವಲಯದ ಖಳನಾಯಕರನ್ನಾಗಿ ಮಾಡ ಹೊರಟಿದ್ದೀರಿ ಎಂದು ದೂರಿದ್ದೂ ಉಂಟು. ಇಂತಹ ಭಯವಿರುವವರು ನಿಜವಾಗಿ ವಿಮರ್ಶಕರೇ ಅಲ್ಲ ಎಂದು ಹೇಳಿ ಅವರ ಬಾಯಿ ಮುಚ್ಚಿಸುವ ದುಂಡಾವರ್ತಿಯನ್ನೂ ಮಾಡಿದ್ದೇನೆ ಎಂದು ಹೇಳಿಕೊಳ್ಳಲು ನನಗೇನೂ ಸಂಕೋಚವಿಲ್ಲ! ಸಾಹಿತ್ಯ ವಿಮರ್ಶೆ ಮನುಷ್ಯ ಸಂಬಂಧಗಳನ್ನು ಹದಗೆಡಿಸುತ್ತದೆನ್ನುವುದಾರೆ, ಅದನ್ನು ಬರೆದವರಿಗೇ ಅದರ ಘನತೆಯಲ್ಲ್ಲಿ ನಂಬಿಕೆಯಿಲ್ಲ ಎಂದಾಗುತ್ತದೆ ಹಾಗೂ ಅಂತಹ ವಿಮರ್ಶೆಯಿಂದ ಯಾರೊಂದಿಗೆ ಸಂಬಂಧ ಹದಗೆಡುವುದೆಂದು ಆತಂಕ ಪಡಲಾಗುತ್ತದೋ, ಅಂತಹವರ ಸಾಹಿತ್ಯಕ ವ್ಯಕ್ತಿತ್ವವೇ ಅನುಮಾನಾಸ್ಪದವೆನಿಸಿಕೊಳ್ಳುತ್ತದೆ ಅಲ್ಲವೇ? ವಿಮರ್ಶೆ ಬೇಡುವುದು ಧೈರ್ಯವನ್ನಲ್ಲ; ಆತ್ಮ ವಿಶ್ವಾಸವನ್ನು. ಆ ಆತ್ಮ ವಿಶ್ವಾಸಕ್ಕೆ ಸುಭದ್ರ ತಳಹದಿಯಿಲ್ಲ ಎಂದು ಗೊತ್ತಾದೊಡನೆ ಅದನ್ನು ಒಪ್ಪಿಕೊಂಡು ಕಲಿಯಲೂ ಸಿದ್ಧವಿರಬೇಕೆಂಬುದು ಬೇರೆ ವಿಷಯ.

ಆಯ್ಕೆಗಳು ಇತ್ತೀಚಿನ ಸಾಹಿತ್ಯಕ್ಕಷ್ಟೇ ಸೀಮಿತಗೊಳ್ಳಬೇಕಿತ್ತು. ಹಾಗಿದ್ದಲ್ಲಿ ಪದೇ ಪದೇ ಪ್ರಸ್ತಾಪವಾಗುವ ಹೆಸರುಗಳ ಬದಲಾಗಿ ಒಂದಿಷ್ಟು ಹೊಸ ಹೆಸರುಗಳು ಮೇಲೆ ಬರುವ ಅವಕಾಶವಿತ್ತು ಎಂಬುದು ಇನ್ನೊಂದು ಅಭಿಪ್ರಾಯ. ನಾವು ಕರ್ನಾಟಕದ ಬಂಗಾರದ ಹಬ್ಬದ ಸಂದರ್ಭಕ್ಕಾಗಿ ಈ ಲೇಖನ ಮಾಲೆಯನ್ನು ಆಯೋಜಿಸಿದ್ದು. ಹಾಗಾಗಿ ಆಧುನಿಕ ಕರ್ನಾಟಕವನ್ನು ಕಟ್ಟುವ ಕಾರ್ಯದ ಭಾಗವಾಗಿಯೇ ಸೃಷ್ಟಿಯಾದ ಎಲ್ಲ ಕನ್ನಡ ಸಾಹಿತ್ಯವನ್ನೂ ನಮ್ಮ ಆಯ್ಕೆಗಳಲ್ಲಿ ಒಳಗೊಳ್ಳಬೇಕಾಯಿತು. ಅಲ್ಲದೆ, ಯಾರ ಹೆಸರನ್ನಾದರೂ ಮೇಲೆ ತರುವ ಘನ ಉದ್ದೇಶವೂ ನಮ್ಮದಾಗಿರಲಿಲ್ಲ! ಇರಲಿ, ಇತ್ತೀಚಿನ ಸಾಹಿತ್ಯ ಎಂದರೆ ಎಲ್ಲಿಂದ ಆರಂಭಿಸಬೇಕು? ನವೋದಯದ ನಂತರ? ನವ್ಯದ ನಂತರ? ಎಂಭತ್ತರ ದಶಕದ ನಂತರ? ತೊಂಭತ್ತರ ದಶಕದ ನಂತರ? ಹಾಗೆ ಯಾವುದೇ ಸಾಹಿತ್ಯಿಕ ಗಡಿ ಸ್ಪಷ್ಟವಾಗಿ ಕಾಣುತ್ತಿಲ್ಲ. ಅಲ್ಲದೆ ಸಾಹಿತ್ಯವು ಚಳುವಳಿಯ ಅಥವಾ ದಶಕದ ಲೆಕ್ಕದಲ್ಲಿ ಮೌಲ್ಯಮಾಪನಕ್ಕೆ ಸಿಗುವಂತಹುದಲ್ಲ. ಒಳ್ಳೆಯದೆನ್ನುವುದು ಆಂದೋಲನಾತೀತವಾದದ್ದು, ಸಾರ್ವಕಾಲಿಕವಾದದ್ದು. ಆದರೆ ಒಂದು ಮೌಲಿಕ ಸಮೀಕ್ಷೆಗೆಂದೋ, ಆಯ್ಕೆಗೆಂದೋ ಗಡಿ ಗುರುತಿಸುವಾಗ ಆ ಕಾಲದ ಬಹುಜನರ ಕಣ್ಮುಂದೆ ಇರುವ ಸಾಹಿತ್ಯವನ್ನೆಲ್ಲಾ ಪರಿಗಣಿಸಬೇಕಾಗುತ್ತದೆ ಎಂಬುದೂ ನಿಜ. ಹಾಗಾಗಿ ಒಟ್ಟಾರೆ ಆಧುನಿಕ ಅಥವಾ ಹೊಸಗನ್ನಡವೆಂದು ಕರೆಯಲಾಗುವ ಸಾಹಿತ್ಯವನ್ನು ನಮ್ಮ ಆಯ್ಕೆಗಾಗಿ ಪರಿಗಣಿಸಲಾಗಿತ್ತು.

ಈ ಸಾಹಿತ್ಯದಲ್ಲಿ ಹಳಬ - ಹೊಸಬರೆಂಬ ಭೇದವಿರಲಾರದು. ಅವರೆಲ್ಲ ಒಬ್ಬರನ್ನೊಬ್ಬರು ಪರಸ್ಪರ ನೋಡಿಕೊಳ್ಳುತ್ತಲೇ - ಅವರಲ್ಲಿ ಕೆಲವರು ದಿವಂಗತರಾಗಿರುವರಾದರೂ - ಬರೆದವರು, ಬರೆಯುತ್ತಿರುವವರು. ಹಾಗಾಗಿ, ವೆಂಕಟೇಶ ಮೂರ್ತಿಯವರನ್ನು ಕುವೆಂಪು ಜೊತೆಗಿಟ್ಟೇ, ಕಂಬಾರರನ್ನು ಬೇಂದ್ರೆಯವರ ಜೊತೆಗಿಟ್ಟೇ, ನುಗಡೋಣಿಯವರನ್ನು ಲಂಕೇಶರ ಜೊತೆಗಿಟ್ಟೇ, ಎಚ್.ಎಸ್.ರಾಘವೇಂದ್ರ ರಾವ್ ಅವರನ್ನು ಅನಂತಮೂರ್ತಿಯವರ ಜೊತೆಗಿಟ್ಟೇ, ಸಿದ್ಧಲಿಂಗಯ್ಯನವರನ್ನು ಶಿವರುದ್ರಪ್ಪನವರ ಜೊತೆಗಿಟ್ಟೇ, ಕಲ್ಗುಡಿಯವರನ್ನು ಆರ್.ನರಸಿಂಹಾಚಾರ್ಯರ ಜೊತೆಗಿಟ್ಟೇ ನೋಡಬೇಕಾಗುತ್ತದೆ. ಇಲ್ಲದೇ ಹೋದರೆ, ಮೌಲ್ಯಮಾಪನದ ಮಾನದಂಡಗಳೇ ಸ್ಪಷ್ಟವಾಗಿ ಮತ್ತು ಪೂರ್ಣವಾಗಿ ಮೂಡುವುದಿಲ್ಲ. ಇನ್ನೂ ಮುಖ್ಯವಾಗಿ, ಪರಂಪರೆಯ ಪರಿಕಲ್ಪನೆಯೇ ಅಸ್ತವ್ಯಸ್ತವಾಗುತ್ತದೆ.

ಇನ್ನು ನಮ್ಮ ವಿಮರ್ಶಕರ ಆಯ್ಕೆಗಳ ಬಗ್ಗೆಯೇ ಅನೇಕ ಭಿನ್ನಾಭಿಪ್ರಾಯಗಳಿವೆ. ಅದು ಸಹಜ ಕೂಡ. ಅತ್ಯಂತ ಹೆಚ್ಚು ಭಿನ್ನಾಭಿಪ್ರಾಯಗಳಿರುವುದು ಕಾವ್ಯ ಹಾಗೂ ಕಥೆಗಳ ಬಗ್ಗೆ. ಅದು ಕೂಡಾ ಸಹಜವೇ. ರಾಜೇಂದ್ರ ಚೆನ್ನಿ ಹತ್ತರ ಅವಕಾಶವನ್ನೂ ಸಂಕುಚಿತಗೊಳಿಸಿಕೊಂಡು ಇಬ್ಬರು ಕವಿಗಳ ತಲಾ ಎರಡು ಕವನಗಳನ್ನು ಆಯ್ಕೆ ಮಾಡಿರುವ ಬಗ್ಗೆ ಕೆಲವರು ಅಸಂತೋಷ ವ್ಯಕ್ತಪಡಿಸಿದ್ದಾರೆ. ಆದರೆ, ನೀವು ಚೆನ್ನಿ ತಮ್ಮ ಆಯ್ಕೆಯೊಂದಿಗೆ ಮಂಡಿಸಿರುವ ಅವರ ಕಾವ್ಯ ಮೀಮಾಂಸೆಯನ್ನು ಒಪ್ಪುವಿರಾದರೆ, ಅವರ ಆಯ್ಕೆಯನ್ನೂ ಒಪ್ಪಬೇಕಾಗುತ್ತದೆ! ಆದರೂ, ಚೆನ್ನಿ ತಮ್ಮ ಕಾವ್ಯ ಮೀಮಾಂಸೆಯ ಚೌಕಟ್ಟಿನಲ್ಲೇ ಆದರೂ, ಅಷ್ಟು ಕಟ್ಟುನಿಟ್ಟಾಗಿರುವ ಅಗತ್ಯವಿರಲಿಲ್ಲ; ಅದರಿಂದಾಗಿ ರಾಮಚಂದ್ರ ಶರ್ಮ ಅಥವಾ ಮೊಕಾಶಿಯವರ ಪದ್ಯವೂ ಕನ್ನಡದ ಹತ್ತು ಅತ್ಯುತ್ತಮ ಪದ್ಯಗಳ ಪಟ್ಟಿಗೆ ಸೇರುವಂತಾಗಿದೆ ಹಾಗೂ ಕುವೆಂಪು, ಪುತಿನ, ಕೆಎಸ್‌ನ ಅಥವಾ ತಿರುಮಲೇಶ್, ರಾಮಾನುಜನ್, ಸಿದ್ಧಲಿಂಗಯ್ಯನವರ ಪದ್ಯಗಳು ಬಿಟ್ಟುಹೋಗುವಂತಾಗಿದೆ ಎಂದು ಯಾರಾದರೂ ಹೇಳಿದರೆ, ಅವರಿಗೆ ನನ್ನ ಸಹಾನುಭೂತಿ ಇದೆ!

ಇನ್ನು ಕಥೆಗಳ ಆಯ್ಕೆ. ಗಿರಡ್ಡಿಯವರ ಆಯ್ಕೆಯನ್ನು ಗೌರವಿಸುತ್ತಲೇ ಅದರ ಸಮರ್ಥನೆಯನ್ನು ಅವರು ಇನ್ನಷ್ಟು ಸುಸಂಗತವಾಗಿ ಸಮರ್ಥವಾಗಿ ಮಾಡಿಕೊಳ್ಳಬೇಕಿತ್ತು ಎಂಬುದು ಕೆಲವರ ಅಭಿಪ್ರಾಯ. ಇನ್ನು ಕೆಲವರಿಗೆ ಅವರ ಕೆಲವು ಆಯ್ಕೆಗಳ ಬಗೆಗೇ ಭಿನ್ನಮತವಿದೆ. ಆನಂದ, ವಿವೇಕ ಶಾನುಭಾಗರ ಕಥೆಗಳು ಪಟ್ಟಿಯಲ್ಲಿದ್ದಾಗ; ಕೆ.ಸದಾಶಿವ, ಖಾಸನೀಸ, ವೀಣಾ, ಜಯಂತರ ಕಥೆಗಳು ಹೇಗೆ ಬಿಟ್ಟು ಹೋಗಲು ಸಾಧ್ಯ ಎಂದು ಇವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹಾಗೇ ಒಂದಿಬ್ಬರು ಇದರಲ್ಲಿ ಸೇರಬೇಕಾದ ತೇಜಸ್ವಿ ಕಥೆ 'ವೆಂಕ್ಟನ ಪುಂಗಿ'ಯಲ್ಲ, 'ಅವನತಿ'ಯೋ 'ಕುಬಿ ಮತ್ತು ಇಯಾಲ'ವೋ ಆಗಿರಬೇಕಿತ್ತು ಎನ್ನುತ್ತಾರೆ. ಈ ಕೆಲವು ಅಭಿಪ್ರಾಯಗಳೊಂದಿಗೆ ನನ್ನ ಸಹಮತ ಇದೆಯಾದರೂ, ಗಿರಡ್ಡಿಯವರ ಆಯ್ಕೆಯ ಒರೆಗಲ್ಲನ್ನೂ, ಅದರ ಹಿಂದಿನ ಶ್ರದ್ಧೆಯನ್ನೂ ನಾನು ಪ್ರಶ್ನಿಸಲಾರೆ.

ಕಾದಂಬರಿಗಳ ಆಯ್ಕೆ ಬಗ್ಗೆ ಹೆಚ್ಚಿನ ಭಿನ್ನಾಭಿಪ್ರಾಯವಿಲ್ಲ. ಹತ್ತು ಅತ್ಯುತ್ತಮಗಳ ಪಟ್ಟಿಯಲ್ಲಿ ತ್ರಿವೇಣಿಯವರು ಸೇರಿರುವ ಬಗ್ಗೆ ಕೆಲವರು ಆಶ್ಚರ್ಯವನ್ನೂ, ಕೆಲವರು ಮೆಚ್ಚುಗೆಯನ್ನೂ ವ್ಯಕ್ತಪಡಿಸಿರುವವರಾದರೂ; ಯಾರೂ ಅಂತಹ ವಿರೋಧ ವ್ಯಕ್ತಪಡಿಸಿಲ್ಲ ಎನ್ನುವುದು ಕುತೂಹಲಕರ. ಎಚ್.ನಾಗವೇಣಿಯವರ 'ಗಾಂಧಿ ಬಂದ' ಕೃತಿಯನ್ನು ಕೆ.ಸತ್ಯನಾರಾಯಣ ಆಯ್ಕೆಯ ಸಮಯದಲ್ಲಿ ಗಮನಿಸಿದೇ ಹೋಗಿರಬಹುದೇ ಎನ್ನುವುದು ನನ್ನ ವೈಯುಕ್ತಿಕ ಸಂದೇಹ. ಅಲ್ಲದೆ, ಆಲನಹಳ್ಳಿಯವರ 'ಕಾಡು' ಅವರ 'ಭುಜಂಗಯ್ಯನ ದಶಾವತಾರಗಳು'ಗಿಂತ ಒಳ್ಳೆಯ ಕಾದಂಬರಿಯಲ್ಲವೇ? ತೇಜಸ್ವಿಯವರ 'ಕರ್ವಾಲೋ' ಅವರ 'ಮಾಯಾಲೋಕ'ಕ್ಕಿಂತ ಒಳ್ಳೆಯ ಕಾದಂಬರಿಯಲ್ಲವೇ? ಎಂಬುದು ಕೆಲವರ ಪ್ರಶ್ನೆ. ಹಾಗೇ ಭೈರಪ್ಪನವರ ಹೆಸರಿಲ್ಲದಿರುವುದರ ಬಗ್ಗೆಯೂ ಹಲವರದು ಸಖೇದಾಶ್ಚರ್ಯ. ಇದೆಲ್ಲದಕ್ಕೂ ಸತ್ಯನಾರಾಯಣ ತಮ್ಮ ಟಿಪ್ಪಣಿಗಳಲ್ಲಿ ವಿವರಣೆ ನೀಡಿರುವುದರಿಂದ, ಸಂಪಾದಕನಾಗಿ ನಾನು ಸೇರಿಸುವಂತಹುದೇನೂ ಇಲ್ಲವೆಂದು ಹೇಳಬಹುದು. ಬಹುಶಃ ಒಂದು ಮಾತಿನ ಹೊರತಾಗಿ: ಭೈರಪ್ಪನವರನ್ನು ಸೇರಿಸಲಾಗದಿರುವ ಬಗ್ಗೆ ಇನ್ನಷ್ಟು ವಿಸ್ತೃತ ವಿವರಣೆ ಅಗತ್ಯವಿತ್ತೇನೋ!

ಸಂತೋಷದ ಸಂಗತಿಯೆಂದರೆ, ನಾಟಕಗಳ ಬಗ್ಗೆ ಭಿನ್ನಮತವೆಂಬುದೇ ಇಲ್ಲ! ಅಷ್ಟು ಸಮರ್ಪಕ ಹಾಗೂ ಸಮರ್ಥನೀಯವಾಗಿದೆ ಮರುಳಸಿದ್ಧಪ್ಪನವರ ಆಯ್ಕೆ ಎಂದು ಹೇಳಬಹುದು. ಆದರೂ ನನ್ನದೊಂದು ಅನುಮಾನ: ಲಂಕೇಶರ 'ಸಂಕ್ರಾಂತಿ' ನಿಜವಾಗಿಯೂ ಕನ್ನಡದ ಹತ್ತು ಅತ್ಯುತ್ತಮ ನಾಟಕಗಳಲ್ಲಿ ಒಂದೇ? ಅವರ 'ಗಿಳಿಯು ಪಂಜರದೊಳಿಲ್ಲ' ಇನ್ನೂ ಒಳ್ಳೆಯ ನಾಟಕವಲ್ಲವೇ? ಚಂಪಾರ 'ಅಪ್ಪ'? ಇನ್ನು ವಿಮರ್ಶೆ - ಸಂಶೋಧನೆ ಕುರಿತಂತೆ ಹೆಚ್ಚಿನ ಪ್ರತಿಕ್ರಿಯೆಗಳಿಲ್ಲ - ಬಹುಶಃ ಅವು ಅಷ್ಟು ಜನಪ್ರಿಯವಲ್ಲದ, ಸೃಜನೇತರ ಪ್ರಕಾರವಾದವುಗಳಾದುದರಿಂದ. ವಿಮರ್ಶೆ ಆಯ್ಕೆ ಕುರಿತಂತೆ ನನ್ನ ವೈಯುಕ್ತಿಕ ಅಭಿಪ್ರಾಯವೆಂದರೆ, 'ಕರ್ನಾಟಕ ಸಂಸ್ಕೃತಿ ವಿಶ್ಲೇಷಣೆ' ಎಂಬ ತೇಜಸ್ವಿಯವರ ಲೇಖನವಿಲ್ಲದೆ ಕನ್ನಡ ಸಾಹಿತ್ಯ - ಸಂಸ್ಕೃತಿ ವಿಮರ್ಶೆ ಪೂರ್ಣವೆನಿಸಿಕೊಳ್ಳಲಾರದು. ಅವರು ತಾವು ಮರಣ ಹೊಂದುವ ಸ್ವಲ್ಪ ಮುನ್ನ ನಂಗಲಿಯವರಿಗೆ ಬರೆದ ಪತ್ರ ರೂಪದ ವಿಮರ್ಶಾ ಮೀಮಾಂಸೆಯಾದರೂ ಏನು ಕಡಿಮೆ ಬೆಲೆಯದ್ದಾ, ಇಂದಿನ ಕನ್ನಡ ಸಾಹಿತ್ಯ ವಿಮರ್ಶೆಯ ದೃಷ್ಟಿಯಿಂದ? ಆಶಾದೇವಿಯವರ ಆಯ್ಕೆಯನ್ನು ಗೌರವಿಸುತ್ತಲೇ ಈ ಮಾತುಗಳನ್ನು ಹೇಳುತ್ತಿದ್ದೇನೆ.

ಕಲ್ಗುಡಿಯವರ ಆಯ್ಕೆಯ ಬಗ್ಗೆ ನನ್ನದು ಒಂದೇ ಪ್ರಶ್ನೆ. ಅದೂ, ಸಂಶೋಧನಾ ಕ್ಷೇತ್ರದ ಅಪರಿಚಿತತೆಯ ಆತಂಕದಿಂದಲೇ ಕೇಳುವ ಪ್ರಶ್ನೆ: ನಿಮ್ಮ ಪಟ್ಟಿಯಲ್ಲಿ ಎಂ.ಎಂ.ಕಲಬುರ್ಗಿ ಏಕಿಲ್ಲ? ಹತ್ತರಲ್ಲಿ ಅವರು ಬರಲಾರರು ಎಂಬುದು ಕಲ್ಗುಡಿಯವರ ಉತ್ತರವಾಗಿರಬಹುದು. ಆದರೆ ಕಾವ್ಯದಿಂದ ಕುವೆಂಪು ಬಿಟ್ಟು ಹೋದಾಗ, ಕಥೆಗಳಿಂದ ಖಾಸನೀಸ ಬಿಟ್ಟು ಹೋದಾಗ, ಕಾದಂಬರಿಗಳಿಂದ ಭೈರಪ್ಪ ಬಿಟ್ಟುಹೋದಾಗ ಅದನ್ನು ನಿರ್ದಿಷ್ಟವಾಗಿ ವಿವರಿಸುವುದೂ ಆಯ್ಕೆಯ ಒಂದು ಭಾಗವಾಗಿರುತ್ತದೆ ಎಂದು ನಾನು ತಿಳಿದಿರುತ್ತೇನೆ. ಹಾಗಾಗಿ, ಈ ಬಗ್ಗೆ ಕಲ್ಗುಡಿ ವಿವರಿಸಿದ್ದರೆ ಚೆನ್ನಿತ್ತೇನೋ!

ಇನ್ನು 'ಆಧುನಿಕ ಕರ್ನಾಟಕ ಕಟ್ಟಿದ ಐವ್ವತ್ತು ಮಂದಿ ಮಹನೀಯರು' ಆಯ್ಕೆ ನನ್ನದೇ ಆದುದರಿಂದ ಮತ್ತು 'ಹತ್ತು ಅತ್ಯುತ್ತಮ ಭಾವಗೀತೆಗಳು' ನನ್ನ ಪತ್ನಿಯ ಆಯ್ಕೆಯಾಗಿರುವುದರಿಂದ, ಈ ಬಗ್ಗೆ ಬಂದಿರುವ ಮೆಚ್ಚುಗೆ ಅಥವಾ ಟೀಕೆಗಳ ಬಗ್ಗೆ ನಾನು ಯಾವುದೇ ಮಾತುಗಳನ್ನಾಡುವುದು ಉಚಿತವಾಗಲಾರದು. ಆದರೆ ಗೆಳೆಯ ರವೀಂದ್ರ ರೇಷ್ಮೆಯವರು ಮಾಡಿರುವ ಹತ್ತು ಅತ್ಯುತ್ತಮ ರಾಜಕಾರಣಿಗಳ ಆಯ್ಕೆ ನಮ್ಮ ರಾಜ್ಯದ ರಾಜಕಾರಣ ಮುಟ್ಟಿರುವ ಅಧೋಗತಿಯನ್ನು ಸೂಚಿಸುವಂತೆಯೇ ಇದೆ ಎಂದು ಹೇಳಲೇಬೇಕು. ಐವ್ವತ್ತು ವರ್ಷಗಳ ರಾಜಕಾರಣದ ಹತ್ತು ಅತ್ಯುತ್ತಮರಲ್ಲಿ ಸಿದ್ಧರಾಮಯ್ಯ ಹಾಗೂ ರಮೇಶ್ ಕುಮಾರ್‌ರನ್ನೂ ಸೇರಿಸಬೇಕಾದ ಪ್ರಮೇಯ ಉಂಟಾಗಿದೆ ಎಂದರೆ! ರೇಷ್ಮೆಯವರು ಕಡಿದಾಳು ಮಂಜಪ್ಪ, ಎಸ್.ಶಿವಪ್ಪ ಹಾಗೂ ವೀರೇಂದ್ರ ಪಾಟೀಲರನ್ನು ಪರಿಗಣಿಸಿಯೂ ಈ ಇಬ್ಬರು ಇತ್ತೀಚಿನ ರಾಜಕಾರಣಿಗಳನ್ನು ಆಯ್ಕೆ ಮಾಡಿಕೊಂಡರೇ ಎಂಬುದು ನನ್ನ ಬೆರಗಿನ ಪ್ರಶ್ನೆ.

ಅಂದಹಾಗೆ: ರೇಷ್ಮೆಯವರ ಈ ಪಟ್ಟಿಯಲ್ಲಿ ದೇವೇಗೌಡರೇಕಿಲ್ಲ ಎಂಬುದನ್ನು ಸ್ವತಃ ದೇವೇಗೌಡರೇ ಇತ್ತೀಚಿನ ತಮ್ಮ ರಾಜಕೀಯ ಲಾಘವಗಳ ಮೂಲಕ ವಿವರಿಸಿಕೊಂಡುಬಿಟ್ಟಿದ್ದಾರೆ. ಸಮಕಾಲೀನ ರಾಜಕಾರಣದ ಎಲ್ಲ ಆಳ - ಅಗಲಗಳನ್ನು ಮೀರಿ ನಿಂತಿರುವ ಜೆಡಿಎಸ್‌ನ ಈ ಪಿತಾಮಹ ಈ ಎರಡು ವರ್ಷಗಳಲ್ಲಿ ಎರಡನೇ ಬಾರಿಗೆ, ತಮ್ಮ ತತ್ವದ್ರೋಹಿ ರಾಜಕಾರಣವನ್ನು ಪಕ್ಷ ಉಳಿಸಿಕೊಳ್ಳುವ ಕಾರಣದ ಮೇಲೆ ಸಮರ್ಥಿಸಿಕೊಂಡಿದ್ದಾರೆ! ಅವರು ಇಪ್ಪತ್ತು ತಿಂಗಳುಗಳ ಹಿಂದೆ ಕಾಂಗ್ರೆಸ್ ಮೈತ್ರಿ ಒಡೆದುಕೊಂಡು ಬಿಜೆಪಿ ಜೊತೆಗೆ ಸೇರಿಕೊಂಡಿದ್ದನ್ನು ಸಮರ್ಥಿಸಿಕೊಂಡಿದ್ದೂ ಇದೇ ಕಾರಣದ ಮೇಲೆ. ಈಗ ತಮ್ಮ ಮಗನ ಮುಖ್ಯಮಂತ್ರಿತ್ವದ ಅವಧಿ ಮುಗಿದೊಡನೆ ಜಾತ್ಯತೀತತೆಯ ಬಗ್ಗೆ ಆದ ಜ್ಞಾನೋದಯವನ್ನು ಹತ್ತಿಕ್ಕಿ, ಮತ್ತೆ ಬಿಜೆಪಿಯೊಂದಿಗೆ ಮರು ಮೈತ್ರಿಗೆ ಒಪ್ಪಿಗೆ ನೀಡಿರುವುದೂ ಇದೇ ಕಾರಣದ ಮೇಲೆ. ಹಾಗಾದರೆ ದೇವೇಗೌಡರು 24 ಘಂಟೆ ರಾಜಕೀಯ ಮಾಡಿ ಕಟ್ಟಿರುವುದಾದರೂ ಏನನ್ನು? ಒಂದು ನಿಜವಾದ ಅರ್ಥದ ರಾಜಕೀಯ ಪಕ್ಷವನ್ನೋ ಅಥವಾ ಅಧಿಕಾರದ ದಂಧೆಕೋರರ ಒಂದು ಅವಕಾಶವಾದಿ ಗುಂಪನ್ನೋ? ನಾವು ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣವೆಂಬಂತೆ, ಅಧಿಕಾರವಿಲ್ಲದೆ ಕಾಂಗ್ರೆಸ್ಸಿಗರು ಒಂದು ಕ್ಷಣವೂ ಇರಲಾರರು ಎಂದು, ಎಲ್ಲ ಗೊಂದಲಗಳಿಗೂ ಅವರನ್ನು ದೂರುತ್ತೇವೆ. ಆದರೆ ಇಂದು ಕರ್ನಾಟಕದ ರಾಜಕಾರಣದಲ್ಲಿ ಅಧಿಕಾರವಿಲ್ಲದೆ ಒಂದು ಕ್ಷಣವೂ ಬದುಕುಳಿಯಲಾಗದ ಪಕ್ಷ ನಿಜವಾಗಿಯೂ ಯಾವುದು? ಸ್ವತಃ ದೇವೇಗೌಡರೇ ಹೇಳಬೇಕು.

ಹಾಗೆ ನೋಡಿದರೆ, ದೇವೇಗೌಡರು ತಮ್ಮ ಜಾತ್ಯತೀತ ಜನತಾ ದಳವನ್ನು ಹುಟ್ಟು ಹಾಕಿಕೊಂಡದ್ದಾದರೂ ಹೇಗೆ? 1999ರ ಸಾರ್ವತ್ರಿಕ ಚುನಾವಣೆಗಳಲ್ಲಿ ಜಾರ್ಜ್ ಫ‌ರ್ನಾಂಡೀಸರ ಕುಮ್ಮಕ್ಕಿನಿಂದಾಗಿ, ಆಗಿನ ಜನತಾ ದಳ ಜೆ.ಎಚ್.ಪಟೇಲರ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ನಿರ್ಧರಿಸಿದಾಗ; ಜಾತ್ಯತೀತತೆಯನ್ನೇ ವೀರ ಘೋಷಣೆ ಮಾಡಿಕೊಂಡು ಪಕ್ಷವನ್ನು ಒಡೆದ ದೇವೇಗೌಡರು ತಮ್ಮ ಈ 'ಜಾತ್ಯಾತೀತ' ಪಕ್ಷವನ್ನು ಕಟ್ಟಿಕೊಂಡರು. ಈಗ ಅವರ ಈ 'ಜಾತ್ಯತೀತ' ಪಕ್ಷವೇ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅದೇ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗಲು ಅನುವು ಮಾಡಿಕೊಡುತ್ತಿದೆ! ಇದು ದೇವೇಗೌಡರ ಧೋಕಾ ರಾಜಕಾರಣದ ನಿಜ ಸ್ವರೂಪ. ಭಾರತದ ರಾಜಕಾರಣದ ಇತಿಹಾಸದಲ್ಲಿ ದೇವೇಗೌಡರ ಹೆಸರೇನಾದರೂ ದಾಖಲಾಗುವುದಾದರೆ, ಅದು ಈ ಕಾರಣಕ್ಕಾಗಿಯೇ ಎಂಬುದು ಅವರ ಸುದೀರ್ಘ ರಾಜಕೀಯ ಬದುಕಿನ ಹಿನ್ನೆಲೆಯಲ್ಲಿ ನಿಜವಾದ ದುರಂತ!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.