ಅನಂತಮೂರ್ತಿ- 2, 3

0

ಅನಂತಮೂರ್ತಿ- 2, 3

ಅನಂತಮೂರ್ತಿಯವರ ಬಗ್ಗೆ ಬರೆಯ ಹೊರಟಾಗಲೆಲ್ಲ ಅವರ ವಿಚಾರಗಳ ಜೊತೆಗೆ ಅವರ ವ್ಯಕ್ತಿತ್ವದ ಬಗೆಗೂ ಬರೆಯುವುದು ಅನಿವಾರ್ಯವಾಗುತ್ತದೆ. ಏಕೆಂದರೆ ಅವರು ಕನ್ನಡದ ಬಹು ಮುಖ್ಯ ಲೇಖಕ ಮಾತ್ರವಲ್ಲ, ಸಾರ್ವಜನಿಕ ಬುದ್ಧಿಜೀವಿ ಕೂಡಾ ಆಗಿದ್ದು, ಕನ್ನಡ ಬದುಕಿನ ಒಂದು ಸಾಂಸ್ಕೃತಿಕ ಮಾದರಿಯೂ ಆಗಿ ಪ್ರಸ್ತುತಗೊಂಡಿದ್ದಾರೆ. ಅಲ್ಲದೆ ಅನಂತಮೂರ್ತಿಯವರು, ನಮ್ಮ ನಾಗರಿಕ ಸಮಾಜವೆಂಬುದೇನಾದರೂ ಇದ್ದರೆ, ಅದರ ಸ್ವಯಂಪ್ರೇರಿತ ವಕ್ತಾರರೂ ಆಗಿದ್ದಾರೆ. (ಇದನ್ನು ಬರೆಯುತ್ತಿರುವಾಗ ಅವರು ಬಿ.ಜೆ.ಪಿ. - ಜೆ.ಡಿ.ಎಸ್. ಮರುಮೈತ್ರಿಯ ವಿರುದ್ಧ ತಮ್ಮ ಗೆಳೆಯರೊಂದಿಗೆ ರಾಜ್ಯಪಾಲರಿಗೆ ಮನವಿ ಸಲ್ಲಿಸುವ ನಿರ್ಧಾರ ಮಾಡಿದ್ದಾರೆ!) ಈಗ ತುಂಬಾ ವಯಸ್ಸಾದುದರಿಂದ, ತಮ್ಮದೇ ಸೌಮ್ಯ ಶೈಲಿಯಲ್ಲಿ ಸಾರ್ವಜನಿಕ ಮಹತ್ವದ ಮಾತುಗಳನ್ನಾಡುವುದನ್ನು ನಿಲ್ಲಿಸಿರುವ ಜಿ.ಎಸ್.ಶಿವರುದ್ರಪ್ಪನವರನ್ನು ಬಿಟ್ಟರೆ, ಅನಂತಮೂರ್ತಿಯವರೇ ಕನ್ನಡ ಸಾಹಿತ್ಯ - ಸಂಸ್ಕೃತಿ - ರಾಜಕಾರಣಗಳ ಬಗ್ಗೆ ಮಾತಾಡಬಲ್ಲ ಏಕೈಕ ಧೀಮಂತರಾಗಿ ನಮ್ಮ ಮುಂದಿದ್ದಾರೆ. ಲಂಕೇಶ್, ತೇಜಸ್ವಿ ಅವರ ಸ್ಥಾನವನ್ನು ಇವರೇ ತುಂಬಬೇಕಾಗಿದ್ದಾರೆ. ಹೀಗಾಗಿ ಅವರಿಗೆ ಸ್ವಾತಂತ್ರ್ಯವೂ ಹೆಚ್ಚಾಗಿದೆ, ಒತ್ತಡಗಳೂ ಹೆಚ್ಚಾಗಿವೆ!

ಸ್ವಾತಂತ್ರ್ಯ ಹೆಚ್ಚಾಗಿದೆ ಏಕೆಂದರೆ, ಲಂಕೇಶ್ - ತೇಜಸ್ವಿಯವರ ಸಾಮಾಜಿಕ - ಸಾಂಸ್ಕೃತಿಕ - ರಾಜಕೀಯ ಪ್ರತಿಕ್ರಿಯೆಗಳಿಗೂ ಅನಂತಮೂರ್ತಿಯವರ ಪ್ರತಿಕ್ರಿಯೆಗಳಿಗೂ ಕಾಲಾನುಕಾಲದಿಂದಲೂ ಘರ್ಷಣೆ ನಡೆದೇ ಇತ್ತು. ಲಂಕೇಶರ ಅಭಿಪ್ರಾಯ ಯಾವಾಗಲೂ ತತ್ಕಾಲೀನ ಸ್ಪಂದನದ ರೂಪದಲ್ಲಿರುತ್ತಿತ್ತು; ಹಾಗಾಗಿ ತೀವ್ರವಾಗಿರುತ್ತಿತ್ತು. ತೇಜಸ್ವಿ ತಾತ್ವಿಕ ಹಿನ್ನೆಲೆಯೊಂದಿಗೆ ಯಾವಾಗಲೂ ವಾಸ್ತವದ ವಿಪರ್ಯಾಸಗಳನ್ನು ಸೂಚಿಸುತ್ತಾ ಅರ್ಧ ಅನುಮಾನದಲ್ಲಿ ಮಾತನಾಡುತ್ತಿದ್ದರು. ಅನಂತಮೂರ್ತಿಯವರಾದರೋ ಈ ವಿಪರ್ಯಾಸಗಳನ್ನು ಬುದ್ಧಿವಂತಿಕೆಯಿಂದ ಸರಿದೂಗಿಸುತ್ತಾ, ವ್ಯಾವಹಾರಿಕ ವ್ಯವಧಾನದಲ್ಲಿ ಮಾತನಾಡುವವರು. ಇದರಿಂದಾಗಿ ಎಷ್ಟೋ ಬಾರಿ ಇವರು ಅತಿ ಜಾಣರಂತೆ ಕಂಡದ್ದೂ ಉಂಟು. ಈ ಜಾಣತನ ಅವರನ್ನು ಕೆಲವೊಮ್ಮೆ ತೀವ್ರ ವಿವಾದಗಳಿಗೆ ಸಿಲುಕಿಸಿದ್ದೂ ಉಂಟು. ಜಾತಿ ಸೃಜನಶೀಲ ಎಂಬ ಅವರ ಹೇಳಿಕೆ, ಗೋಕಾಕ್ ಚಳುವಳಿ ಕುರಿತ ಅವರ ಅಭಿಪ್ರಾಯ, ಮೀಸಲಾತಿ ಕುರಿತ ಅವರ ನಿಲುವು ಇತ್ಯಾದಿ. ಇವೆಲ್ಲವೂ ಎಂದೂ ಪ್ರತಿಗಾಮಿ ನಿಲುವುಗಳೆನ್ನಿಸದೆ, ಹೆಚ್ಚೆಂದರೆ ಗೊಂದಲ ಹಚ್ಚುವ ಅಥವಾ ಹೆಚ್ಚಿಸುವ ನಿಲುವುಗಳು ಎಂದೆನ್ನಿಸಿಕೊಂಡವು! ಹಾಗೇ ಚರ್ಚೆಗಳನ್ನು ಹುಟ್ಟುಹಾಕಿ ಹೊಸ ನೆಲೆಗಳ ವಿಚಾರಕ್ಕೆ ದಾರಿಯನ್ನೂ ಮಾಡಿಕೊಟ್ಟವು.

ಅನಂತಮೂರ್ತಿಯವರ ಸುತ್ತ ಸೃಷ್ಟಿಯಾಗಿರುವ ಇತ್ತೀಚಿನ ಇಂತಹ ಗೊಂದಲ - ಅಥವಾ ಅವರ ಟೀಕಾಕಾರರು ಹೇಳುವ ಗೊಂದಲ - ಎಂದರೆ, ಅವರು ತಮ್ಮ ಸೃಜನ ಕೃತಿಗಳು ಹಾಗೂ ವಿಚಾರಗಳಲ್ಲಿನ ಆಧುನಿಕತೆ ಕುರಿತ ಟೀಕೆಯ ಮೂಲಕ ಧಾರ್ಮಿಕ ಪುನರುತ್ಥಾನವಾದಿ ಆಗುತ್ತಿದ್ದಾರೆ ಎಂಬುದಾಗಿದೆ. ಅಂದರೆ ಕಾಲದಲ್ಲಿ ಹಿಂದಕ್ಕೆ ಪಯಣಿಸುತ್ತಾ ತಾವು ಯಾವುದನ್ನು ಈ ಹಿಂದೆ ಪ್ರತಿಗಾಮಿ, ಪ್ರಗತಿವಿರೋಧಿ, ಜನವಿರೋಧಿ ಎಂದು ಧಿಕ್ಕರಿಸಿ ಬಂದಿದ್ದರೋ ಆ 'ಸನಾತನತೆ'ಯನ್ನು ಸಮರ್ಥಿಸತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ. ಅನಂತಮೂರ್ತಿ ಹುಟ್ಟಿನಿಂದ ಬ್ರಾಹ್ಮಣರೂ ಆಗಿರುವುದರಿಂದ, ಅವರು ಬ್ರಾಹ್ಮಣ್ಯವನ್ನು ಬಿಟ್ಟರೂ ಬ್ರಾಹ್ಮಣ್ಯ ಅವರನ್ನು ಬಿಟ್ಟಿಲ್ಲ ಎಂಬುದು ಬಹು ಜನಪ್ರಿಯ ನಂಬಿಕೆಯ ಹಿನ್ನೆಲೆಯಲ್ಲಿ ಅವರ ಈ 'ಹಿಂಪಯಣ'ವನ್ನು ವೈದಿಕ - ಬ್ರಾಹ್ಮಣ ಮೌಲ್ಯಗಳ ಪುನರುಜ್ಜೀವನ ಎಂದು ವ್ಯಾಖ್ಯಾನಿಸುವವರೂ ಇದ್ದಾರೆ.

ಬಹುಶಃ 'ನವಿಲುಗಳು' ಕಥೆ ಬರೆದಾಗಿನಿಂದ ಅನಂತಮೂರ್ತಿಯವರ ಎರಡನೆಯ ಅವತಾರ ಅಥವಾ ಅನಂತಮೂರ್ತಿ - ಭಾಗ 2 ಕನ್ನಡದಲ್ಲಿ ಆರಂಭವಾಯಿತೆಂದು ಕಾಣುತ್ತದೆ. ನಂತರ ಬಂದ ಅವರ 'ಸೂರ್ಯನ ಕುದುರೆ', 'ಜರತ್ಕಾರು', 'ಅಕ್ಕಯ್ಯ' ಕಥೆಗಳು; ಅವುಗಳ ಆಸುಪಾಸಿನಲ್ಲೇ ಬರೆಯಲ್ಪಟ್ಟ 'ಭವ' ಹಾಗೂ 'ದಿವ್ಯ' ಕಾದಂಬರಿಗಳು 'ಅನಂತಮೂರ್ತಿ-2'ರ ಸೃಜನ ಮುಖವಾದರೆ, 'ಬೆತ್ತಲೆ ಪೂಜೆ ಏಕೆ ಕೂಡದು'ನಿಂದ ಇತ್ತೀಚಿನ 'ಮಾತು ಸೋತ ಭಾರತ'ದವರೆಗಿನ ವಿಚಾರ - ವಿಮರ್ಶೆಗಳು ಅದರ ಸೃಜನೇತರ ಮುಖ. ವಿಶೇಷವಾಗಿ 'ಬೆತ್ತಲೆ ಪೂಜೆ ಏಕೆ ಕೂಡದು?' ಪುಸ್ತಕ ಅವರ ಮೂಲ ವಿಚಾರಗಳಲ್ಲಿ ಆದ ಸ್ಥಿತ್ಯಂತರಕ್ಕೊಂದು ದೊಡ್ಡ ಸಾಕ್ಷಿಯಂತಿದೆ. ಇದು ಅವರ ಈಚಿನ ಕಥೆ - ಕಾದಂಬರಿಗಳನ್ನು ಅವರ ಈ ಹಿಂದಿನ ಕಥೆ - ಕಾದಂಬರಿಗಳ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಲು ಒಂದು ತಾತ್ವಿಕ ಮಾರ್ಗದರ್ಶಿಯಂತೆಯೂ ಇದೆ. 'ಪ್ರಗತಿಪರತೆ' ಅಥವಾ 'ಆಧುನಿಕತೆ' ಕುರಿತ ಅನಂತಮೂರ್ತಿ ವಿಚಾರಗಳು ಇಲ್ಲಿ ಹೊಸ ನೆಲೆ ತಲುಪಿ, ಆಧುನಿಕವಾದುದೆಲ್ಲವೂ ಪ್ರಗತಿಪರವಾಗಿರಬೇಕಿಲ್ಲ ಹಾಗೂ ಪ್ರಗತಿಪರವಾದುದೆಲ್ಲವೂ ಆಧುನಿಕವಾಗಿರಬೇಕಿಲ್ಲ ಎಂಬುದನ್ನು ಪ್ರತಿಪಾದಿಸುತ್ತವೆ. ವಿಶೇಷವಾಗಿ ಜನ ಸಂಸ್ಕೃತಿ, ಜನಪರಂಪರೆ ಅಥವಾ ನಮ್ಮ ಜನಪದ ಆಚರಣೆಗಳಲ್ಲಿನ ಸತ್ವ ಮತ್ತು ಸತ್ಯಗಳನ್ನು ಹೊಸ ಕಣ್ಣುಗಳಲ್ಲಿ ನೋಡುವ ಅಥವಾ ಆವರೆಗಿನ ಕುರುಡನ್ನು ಕಳೆದುಕೊಂಡು ಸಹಾನುಭೂತಿಯಿಂದ, ಆದರೆ ಚಿಕಿತ್ಸಕವಾಗಿ ನೋಡುವ ಈ ದೃಷ್ಟಿಕೋನ 'ಆಧುನಿಕತೆ' ಹಾಗೂ 'ಪ್ರಗತಿಪರತೆ' ಕುರಿತ ನಮ್ಮ ನಂಬಿಕೆಗಳನ್ನೇ ಪುರ್ನಮೌಲ್ಯೀಕರಣಕ್ಕೆ ಒಳಪಡಿಸುವಂತಹುದು.

ಇದು ಗಾಂಧಿ ಯಾವುದನ್ನು ಸಾಮಾನ್ಯ ಪರಿಜ್ಞಾನದೊಂದಿಗೆ ಭಾರತೀಯ ಸಂದರ್ಭದಲ್ಲಿ ಮಾಡಿದರೋ, ಅದನ್ನು ಇವರು ಕನ್ನಡದ ಸಂದರ್ಭದಲ್ಲಿ ಬೌದ್ಧಿಕ ಪರಿಕರಗಳೊಂದಿಗೆ ಮಾಡತೊಡಗಿದ ಕೆಲಸವೇ ಆಗಿತ್ತು. ಗೊರೂರರು ಇದನ್ನು ಸ್ವಲ್ಪ ಆದರ್ಶಮಯತೆಯ ನೆಲೆಯಲ್ಲಿ ಸ್ವಲ್ಪ ಸ್ಥೂಲವಾಗಿ, ಸ್ವಲ್ಪ ಸಗಟು - ಸಗಟಾಗಿ ಮಾಡಿದ್ದರು. ಕುವೆಂಪು, ಶಿಷ್ಟ ಪರಂಪರೆ ಕುರಿತಂತೆ ಇಂತಹ ಸಹಾನುಭೂತಿಯ, ಚಿಕಿತ್ಸಕ ನೋಟದ ಮೀಮಾಂಸೆ ಹಾಗೂ ಕೃತಿ ಮಂಡನೆ ಮಾಡಿದ್ದರು. ತೇಜಸ್ವಿ ತಮ್ಮ ಅನುಭವ ಜನ್ಯ ನೋಟಗಳ ಮೂಲಕ ಸೃಜನ - ಸೃಜನೇತರ ಅಥವಾ ಶಿಷ್ಟ - ಜಾನಪದ ಎಂಬ ಬೇಧ ಭಾವಗಳನ್ನೇ ಅಳಿಸಿದ ನೆಲೆಯಲ್ಲಿ ಇದೇ ಕೆಲಸ ಮಾಡತೊಡಗಿದ್ದರು. ಆದರೆ ಇವರ್ಯಾರೂ 'ಹಿಂಪಯಣ' ಬೆಳೆಸಿದಂತೆ ಕಾಣುತ್ತಿರಲಿಲ್ಲ. ಇವರೆಲ್ಲ 'ಆಧುನಿಕತೆ'ಯನ್ನು ಬಿಟ್ಟುಕೊಡದೆ ವಾಸ್ತವದೊಂದಿಗೆ ಅನುಸಂಧಾನದಲ್ಲಿ ತೊಡಗಿದ್ದವರು. ಆದರೆ ಅನಂತಮೂರ್ತಿ ಹೆಚ್ಚು ಬೌದ್ಧಿಕರಾದುದರಿಂದ; ಹಾಗಾಗಿ ಯಾವಾಗಲೂ ಪರಿಕಲ್ಪನಾತ್ಮಕವಾಗಿ ಯೋಚಿಸಿ ಬರೆಯುವವರಾದ್ದರಿಂದ 'ಆಧುನಿಕತೆ'ಯನ್ನು ಒಂದು ಬೌದ್ಧಿಕ ಪರಿಕಲ್ಪನೆಯಾಗಿ ಎದುರಿಸುವುದು ಅವರಲ್ಲಿ ಕೆಲವು ತೊಡಕುಗಳನ್ನುಂಟು ಮಾಡಿದವು. ಈ ತೊಡಕುಗಳನ್ನು ನಾವು ಅವರ ಈ ಮೇಲೆ ಹೆಸರಿಸಿದ ಎಲ್ಲ ಕೃತಿಗಳು ಕಟ್ಟಿಕೊಡುವ ತಾತ್ವಿಕ ದರ್ಶನದಲ್ಲಿ ನೋಡಬಹುದು. ಇವುಗಳಲ್ಲಿ ಅವರು 'ಆಧುನಿಕತೆ'ಯೊಂದಿಗೆ ನಡೆಸಿದ ಬೌದ್ಧಿಕ ಸೆಣೆಸಾಟವೇ ಅವರನ್ನು ಅನೇಕ ಟೀಕೆಗಳಿಗೆ, ಅನುಮಾನಗಳಿಗೆ, ವಿವಾದಗಳಿಗೆ ಗುರಿ ಮಾಡಿರುವುದು.

ಅನಂತಮೂರ್ತಿಯವರ ಇತ್ತೀಚಿನ ಕೃತಿ 'ಮಾತು ಸೋತ ಭಾರತ' ಈ ಟೀಕೆ, ಅನುಮಾನ ಹಾಗೂ ವಿವಾದಗಳಿಗೆ ಅನೇಕ ಬಗೆಯ ಸಮಜಾಯಿಷಿಗಳನ್ನೂ, ಸ್ಪಷ್ಟೀಕರಣಗಳನ್ನೂ, ಉತ್ತರಗಳನ್ನೂ ಒದಗಿಸುವ ಪ್ರಯತ್ನ ಮಾಡುತ್ತವೆ. ನೇರವಾಗಲ್ಲ. ಅದರಲ್ಲಿನ ಲೇಖನಗಳಲ್ಲಿನ ಕೆಲವು ಮಾಹಿತಿ, ಪ್ರಸ್ತಾಪ, ವಿಷದೀಕರಣಗಳ ಮೂಲಕ. ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ('ವಿಕ್ರಾಂತ ಕರ್ನಾಟಕ': 9.11.07) ತಾವು ಇತ್ತೀಚೆಗೆ ಬರೆಯುತ್ತಿರುವುದೆಲ್ಲವೂ ಆತ್ಮಕಥನಾತ್ಮಕವಾಗಿಯೇ ಇರುವುದರಿಂದ ತಮ್ಮ ಆತ್ಮಕಥೆ ರಚನೆಯನ್ನು ಸ್ವಲ್ಪ ಕಾಲ ಮುಂದೂಡಿರುವುದಾಗಿ ಹೇಳಿದ್ದಾರೆ. ಹೀಗಾಗಿ ಅವರ ಇತ್ತೀಚಿನ ಬರವಣಿಗೆ - 'ಮಾತು ಸೋತ ಭಾರತ' ಹಾಗೂ ಇದರ ಒಂದು ತಿಂಗಳ ಹಿಂದೆಯಷ್ಟೇ ಪ್ರಕಟವಾದ 'ರುಜುವಾತು' ಸೇರಿದಂತೆ - ಆತ್ಮನಿವೇದನೆಯೇ ಆಗಿದ್ದು; ಅನಂತಮೂರ್ತಿ-2 ಮತ್ತು ಅನಂತಮೂರ್ತಿ-1ನ್ನು ಜೋಡಿಸುವ ಪ್ರಯತ್ನ ಮಾಡುತ್ತಾ, ಆ ಮೂಲಕ ಅನಂತಮೂರ್ತಿ-2ರ ಅನಿವಾರ್ಯತೆಯನ್ನು ಸಮರ್ಥಿಸುತ್ತಾ ಕುತೂಹಲ ಹುಟ್ಟಿಸುತ್ತದೆ.

ಅನಂತಮೂರ್ತಿ ಮುಖ್ಯವಾಗಿ ಈ ಎರಡು ಕೃತಿಗಳಲ್ಲಿ ಜಾಗತೀಕರಣದ ಪ್ರಭಾವದ ಹಿನ್ನೆಲೆಯಲ್ಲಿ ಗಾಂಧಿಯನ್ನು ಪುನರನ್ವೇಷಿಸುವ ಪ್ರಯತ್ನ ಮಾಡುತ್ತಾರೆ. ಲೋಹಿಯಾ ವಿಚಾರಗಳನ್ನು ಹೊಸ ಸಂದರ್ಭದಲ್ಲಿ ಅವುಗಳ ಅರ್ಥಪೂರ್ಣತೆಯನ್ನು ಪುನರ್ನಮನನ ಮಾಡಿಕೊಳ್ಳುವ, ಮಾಡಿಕೊಡುವ ಪ್ರಯತ್ನ ಮಾಡುತ್ತಾರೆ. ಆ ಮೂಲಕ ಪಶ್ಚಿಮದಿಂದ ಬಂದ 'ಆಧುನಿಕತೆ'ಯನ್ನು ಪುರ್ನಮೌಲ್ಯಮಾಪನ ಮಾಡುವ ಪ್ರಯತ್ನವಾಗಿ 'ಬೆತ್ತಲೆ ಪೂಜೆ ಏಕೆ ಕೂಡದು?'ನಲ್ಲಿ ಆರಂಭವಾದ ಅವರ ವಿಚಾರದ ಹೊಸ ಮಜಲು ಈ ಪುಸ್ತಕಗಳಲ್ಲಿ ನಿರ್ಣಾಯಕ ಹಂತ ತಲುಪುತ್ತಿದೆ. 'ಮಾತು ಸೋತ ಭಾರತ'ದಲ್ಲಿ ಒಂದು ಕಡೆ ಅವರೇ ಹೇಳಿಕೊಂಡಂತೆ, ತಮಗೆ ಸದಾ ಸುದ್ದಿಯಲ್ಲಿರುವ ಚಟ ಎಂದು ತಮ್ಮ ಹೆಂಡತಿಗೇ ಅನುಮಾನ ಹುಟ್ಟುವ ಮಟ್ಟಿಗೆ ಅವರು ಕೆಲವರ ಕಣ್ಣಲ್ಲಿ ಸುದ್ದಿಜೀವಿಯೂ ಆಗಿಬಿಟ್ಟಿದ್ದುದರಿಂದ, ಈ ಸುದ್ದಿಲೋಕದಲ್ಲಿ ಹುಟ್ಟಿಕೊಂಡ ಅನೇಕ ಆಕ್ಷೇಪ, ವಿವಾದಗಳಿಗೆ ಉತ್ತರ ಕೊಡುವ ರೀತಿಯಲ್ಲಿ ಇಲ್ಲಿನ ಲೇಖನಗಳಲ್ಲಿ ಅವರು ವಿಷಯ ವಿವರಣೆ ಹಾಗೂ ವಿಷದೀಕರಣಗಳಲ್ಲಿ ತೊಡಗಿದ್ದಾರೆ. ಅಲ್ಲದೆ, ಇನ್ನೊಂದು ತಿಂಗಳಲ್ಲಿ ಇವರ ಇನ್ನೂ ಒಂದು ಪುಸ್ತಕ ಹೊರಬರುವ ವದಂತಿ ಇದೆ! ಹೀಗಾಗಿ ಅನಂತಮೂರ್ತಿ ತಮ್ಮನ್ನು ತಾವು ಸಾರ್ವಜನಿಕವಾಗಿ ದಿಟ್ಟವಾಗಿ ಬಿಚ್ಚಿಕೊಳ್ಳುವ ಆತುರ, ಅವಸರದಲ್ಲಿದ್ದಂತೆ ತೋರುತ್ತದೆ. ಈ ಎಲ್ಲ ಆತುರ ಅವಸರಗಳು ಅವರ ಈ 75ನೇ ವಯಸ್ಸಿನಲ್ಲಿ ಸ್ವಲ್ಪ ಆತಂಕವನ್ನೂ ಉಂಟು ಮಾಡುವಂತಿವೆ. ಅನಂತಮೂರ್ತಿಯವರು ನಮ್ಮೊಂದಿಗೆ ಇನ್ನೂ ಹೆಚ್ಚು ಕಾಲ ಬದುಕಿ ಬಾಳಲಿ; ಕನ್ನಡದ ಇನ್ನಷ್ಟು ಚರ್ಚೆಗೆ ಅವಕಾಶ ಮಾಡಿಕೊಡಲಿ ಎಂಬ ಆಶಯದೊಂದಿಗೇ ಈ ಮುಂದಿನ ಮಾತುಗಳನ್ನು ಬರೆಯುತ್ತಿದ್ದೇನೆ.

ಅನಂತಮೂರ್ತಿ ಈಚಿನ ವರ್ಷಗಳಲ್ಲಿ, ಬಹುಶಃ ಕೆಲವು ಪದ್ಯಗಳನ್ನು (ಅವು ಬಹಳ ಒಳ್ಳೆಯ ಪದ್ಯಗಳೇ ಹೌದು) ಬರೆದುದನ್ನು ಬಿಟ್ಟರೆ, ಸಾಮಾನ್ಯವಾಗಿ ಸೃಜನವೆಂದು ಕರೆಯಲಾಗುವ ಯಾವುದನ್ನೂ ಬರೆದಿಲ್ಲ. ಬರೆದದ್ದೆಲ್ಲವೂ ಅಂಕಣಗಳು ಅಥವಾ ವಿವಿಧೆಡೆ ಮಾಡಿದ ಭಾಷಣಗಳು. ಇತ್ತೀಚಿನ ಎರಡು ಪುಸ್ತಕಗಳಲ್ಲಿ ಇರುವುದೂ ಇವುಗಳೇ. ಹಿಂದೆ ಹೇಳಿದ ಹಾಗೆ 'ಆಧುನಿಕತೆ' ಕುರಿತ ಅವರ ಪ್ರಶ್ನೆಗಳು, ಅನುಮಾನಗಳು, ತಲ್ಲಣಗಳು, ಎಚ್ಚರಿಕೆಗಳು ಹಾಗೂ ದ್ವಂದ್ವಗಳ ನಿವೇದನೆಯೇ ಈ ಪುಸ್ತಕಗಳ ಮುಖ್ಯ ಉದ್ದೇಶದಂತಿದೆ. ನಿವೇದನೆ ಎಂದೆ. ಏಕೆಂದರೆ, ತಾವು ಯಾವುದನ್ನು ಇಂದು ವಿರೋಧಿಸುತ್ತಿರುವರೋ ಅದನ್ನು ನಿನ್ನೆ ಒಪ್ಪಿಕೊಂಡಿದ್ದರ ಹಿನ್ನೆಲೆಯನ್ನು ವಿವರಿಸುವ ಆತ್ಮನಿರೀಕ್ಷಣೆಯ ಮಾತುಗಳ ಧಾಟಿಯಲ್ಲೇ ಈ ಸಂಕಥನಗಳು ಇವೆ. 'ಪೂರ್ವಕ್ಕೆ ಮುಖ; ಪಶ್ಚಿಮಕ್ಕೆ ಪಯಣ' ಎಂಬುದು ಇವರು ತಮ್ಮ ಮತ್ತು ನಮ್ಮ ಇಂದಿನ ಸ್ಥಿತಿಗೆ ಕೊಡುವ ರೂಪಕ. ಈ ರೂಪಕವನ್ನು ಸೃಷ್ಟಿಸಿ ಕೊಟ್ಟವರು ಗೆಳೆಯ ಜೆ.ಎಚ್.ಪಟೇಲರಂತೆ. ಅವರಲ್ಲದೇ ಮತ್ತಿನ್ಯಾರು ಇವರೊಂದಿಗೆ ಇಂತಹ ಅಭಾಸಕರ ಆದರೆ ಅರ್ಥಪೂರ್ಣವಾದ ಆತ್ಮ ನಿವೇದನೆ ಮಾಡಿಕೊಂಡಾರು?

ಈ 'ಪೂರ್ವಕ್ಕೆ ಮುಖ; ಪಶ್ಚಿಮಕ್ಕೆ ಪಯಣ'ವೆಂಬ ವಿರೋಧಾಭಾಸದ ವಿದ್ಯಮಾನಕ್ಕೆ ವಿವರಣೆಯನ್ನು ಈ ಹಿಂದಿನ ಪುಸ್ತಕ 'ವಾಲ್ಮೀಕಿಯ ನೆವದಲ್ಲಿ'ಯೇ ಅನಂತಮೂರ್ತಿ ಆರಂಭಿಸಿದ್ದರು. 'ಗಾಂಧಿ ಮತ್ತು ನೆಹರೂ ನಡುವಿನ ಸೈದ್ಧಾಂತಿಕ ತಿಕ್ಕಾಟದಲ್ಲಿ ಯಾವ ದ್ವಂದ್ವಗಳೂ ಇಲ್ಲದ ನಿಲುವನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದು ಸ್ಪಷ್ಟವಾಗುತ್ತಿಲ್ಲ' ಎಂಬ ಅಸ್ಪಷ್ಟತೆಯನ್ನು ನಿವೇದಿಸುತ್ತಲೇ ತಮ್ಮ ಕಷ್ಟವನ್ನು ತೋಡಿಕೊಂಡಿದ್ದರು. ಬಹುಶಃ ಸ್ವಾತಂತ್ರ್ಯೋತ್ತರದಲ್ಲಿ ಭಾರತ ಎದುರಿಸಿದ ಬಹು ದೊಡ್ಡ ದ್ವಂದ್ವ, ಅಸ್ಪಷ್ಟತೆ ಹಾಗೂ ಕಷ್ಟವಿದು. ಆದರೆ, ಇಂತಹ ದ್ವಂದ್ವ, ಅಸ್ಪಷ್ಟತೆ ಹಾಗೂ ಕಷ್ಟಗಳನ್ನು ಪರಿಹರಿಸಬೇಕಾದ ಅನಂತಮೂರ್ತಿಯವರಂತಹ ಬುದ್ಧಿಜೀವಿಗಳೇ ಹೀಗೆ ಇಷ್ಟು ಕಾಲದವರೆಗೂ - ಸ್ವತಂತ್ರ ಭಾರತ ತನ್ನ 60ನೇ ವರ್ಷವನ್ನು ಆಚರಿಸಿಕೊಳ್ಳುತ್ತಿರುವವರೆಗೂ - ಕೈ ಚೆಲ್ಲಿ ಕೂತರೆ; ಮುಖ್ಯವಾಹಿನಿ ಎಳೆದುಕೊಂಡು ಹೋದ ಕಡೆ ಹೋಗಿ ಹಲುಬುತ್ತಾ ನಿಂತರೆ, ಅವರನ್ನು ಬುದ್ಧಿಜೀವಿಗಳೆಂದಾದರೂ ಏಕೆ ಮಾನ್ಯ ಮಾಡಬೇಕು? ಬೌದ್ಧಿಕವಾಗಿ ಹಲುಬುವುದಷ್ಟೇ ಬುದ್ಧಿಜೀವತ್ವವಾದರೆ, ವ್ಯಾವಹಾರಿಕರಾದ ಬುದ್ಧಿವಂತರಿಗೂ ಚಿಂತನಶೀಲರಾದ ಬುದ್ಧಿಜೀವಿಗಳಿಗೂ ವ್ಯತ್ಯಾಸವಾದರೂ ಏನು?

ಬುದ್ಧಿಜೀವಿಗೆ ಒಂದು ದತ್ತ ಸನ್ನಿವೇಶದಲ್ಲಿ ಒಂದು ಚಿಂತನೆಯ ಬಗ್ಗೆ ಒಂದು ಸ್ಪಷ್ಟ ನಿಲುವು - ಅದೆಷ್ಟೇ ತಾತ್ಕಾಲೀನವಾದುದ್ದಾದರೂ - ಸಾಧ್ಯವಾಗಬೇಕು. ಆ ಮೂಲಕವೇ ತತ್ವಾನ್ವೇಷಣೆ ಅಥವಾ ಸತ್ಯಾನ್ವೇಷಣೆ ಆರಂಭವಾಗುವುದು. ದ್ವಂದ್ವದಲ್ಲಿ ಚಿಂತಿಸುತ್ತಾ ಕೂತೇ ಇರುವುದರಿಂದಲ್ಲ. ಅಲ್ಲದೆ, ನಿರ್ಣಾಯಕ ಸಂದರ್ಭದಲ್ಲಿ, ಬೌದ್ಧಿಕ ಪ್ರತಿರೋಧ ಹಾಗೂ ಅದಕ್ಕೆ ಪೂರಕವಾದ ರಾಜಕೀಯ ಪ್ರತಿರೋಧದಲ್ಲಿ ತನ್ನದೇ ರೀತಿಯ ಭಾಗವಹಿಸುವಿಕೆಯೂ ಸಾಧ್ಯವಾಗಬೇಕು. ಅಂದರೆ, ಬದುಕುವ ರೀತಿ ನೀತಿಗಳಲ್ಲಿನ, ಸಹವಾಸದಲ್ಲಿನ, ಮೆಚ್ಚುವಿಕೆಯಲ್ಲಿನ ಬೇಕು ಬೇಡಗಳ ಬಗ್ಗೆ ಖಚಿತ ಕಲ್ಪನೆ ಇರಬೇಕು. ಬೌದ್ಧಿಕವಾಗಿ ಮತ್ತು ಕ್ರಿಯಾತ್ಮಕವಾಗಿ ಈ ಬೇಕು ಬೇಡಗಳ ಬಗೆಗೆ ನಿರಂತರ ಎಚ್ಚರವಿರುವ ಬದುಕು ನಡೆಸುವ ಸಂಕಲ್ಪ ಶಕ್ತಿ ಬೇಕು. ಆಗ 'ಬುದ್ಧಿಜೀವತ್ವ'ಕ್ಕೊಂದು ಪ್ರಭೆ, ವಿಶ್ವಾಸಾರ್ಹತೆ ಹಾಗೂ ಅನಂತಮೂರ್ತಿಯವರಿಗೆ ಇತ್ತೀಚೆಗೆ ಬಹು ಪ್ರಿಯವಾದ ಶಬ್ದವನ್ನು ಬಳಸಿ ಹೇಳುವುದಾದರೆ, ಒಂದು 'ದಿವ್ಯತೆ' ಒದಗುತ್ತದೆ. ಇವು ಪ್ರಭುತ್ವ ಮತ್ತು ಜನತೆ ನಡುವೆ ಬುದ್ಧಿಜೀವಿ ಸಜೀವ ಸೇತುವಾಗಬಲ್ಲ ಶಕ್ತಿಯನ್ನೊದಗಿಸುತ್ತವೆ.

ಇತ್ತೀಚೆಗೆ ಅನಂತಮೂರ್ತಿಯವರ ಹತ್ತಿರ ಮಾತನಾಡುತ್ತ್ವಾ ಅವರು ಸರ್ಕಾರಕ್ಕೆ ನೀಡಿದ ಬರಹಗಳ ರೂಪದ ಇತ್ತೀಚಿನ ಕೆಲವು ಸಲಹೆಗಳ (ಉದಾ: ಶ್ರವಣಬೆಳಗೊಳಕ್ಕೆ ರೋಪ್ ವೇ ಬೇಡ; ರಾಜಕುಮಾರರ ಹಾಡುಗಳನ್ನು ಬಳಸಿಕೊಳ್ಳುವ ಅಕ್ಷರ ಆಂದೋಲನ) ಹಿನ್ನೆಲೆಯಲ್ಲಿ, ನನ್ನದೊಂದು ಆಶ್ಚರ್ಯವನ್ನು ವ್ಯಕ್ತಪಡಿಸಿದೆ. ಈ ಹಿಂದೆ ಕುವೆಂಪು ಅಥವಾ ಕಾರಂತರಂಥವರು ಆಡಿದ ಮಾತುಗಳನ್ನು ಪ್ರಭುತ್ವ ಎಚ್ಚರಿಕೆಯಿಂದ ಕೇಳುತ್ತಿತ್ತು; ಪ್ರತಿಕ್ರಿಯಿಸುತ್ತಿತ್ತು. ಆದರೆ ಈಗ ಅದು ಯಾರ ಮಾತನ್ನೂ ಕೇಳದಾಗಿದೆ. ಪ್ರತಿಕ್ರಿಯಿಸದಾಗಿದೆ. ಏಕೆ? ಬಹುಶಃ, ಇದಕ್ಕೆ ಪ್ರಜಾಪ್ರಭುತ್ವದ ಗುಣಮಟ್ಟ ಕೆಟ್ಟಿದೆ ಎಂಬುದು ಸರಳ ಉತ್ತರ. ಆದರೆ ಪ್ರಜಾಪ್ರಭುತ್ವವೊಂದರಲ್ಲಿ ಪ್ರಭುತ್ವ ಕೆಟ್ಟಿದೆಯೆಂದರೆ, ಪ್ರಜೆಗಳೂ, ಆ ಪ್ರಜಾವರ್ಗದ ಕೆನೆ ಪದರವೆನಿಸಿರುವ ಬುದ್ಧಿಜೀವಿಗಳೂ ಕೆಟ್ಟಿದ್ದಾರೆ ಎಂದೇ ಅರ್ಥ. ಬುದ್ಧಿಜೀವಿಗಳು ಕೆಡುವುದೆಂದರೆ ಅವರ ಬುದ್ಧಿಯು ಸಡಿಲವಾಗಿ ಭೋಳೆಯಾಗುವುದು ಎಂದರ್ಥ.

ಅನಂತಮೂರ್ತಿ ಇತ್ತೀಚೆಗೆ ಈ ಬಗ್ಗೆ ಎಚ್ಚರಗೊಂಡಂತೆ ಬರೆಯುತ್ತಿದ್ದಾರೆ, ದಿಟ್ಟವಾಗಿ ಮಾತನ್ನಾಡುತ್ತಿದ್ದಾರೆ ಎಂಬುದು ನಿಜವಾಗಿಯೂ ಸಂತೋಷದ ವಿಷಯ. ಇದು ಇತ್ತೀಚಿನ ಅವರ ಎರಡೂ ಪುಸ್ತಕಗಳಲ್ಲಿ - ವಿಶೇಷವಾಗಿ 'ಮಾತು ಸೋತ ಭಾರತ'ದ ಹಲವು ಲೇಖನಗಳಲ್ಲಿ - ಪ್ರತಿಬಿಂಬಿತವಾಗತೊಡಗಿದೆ. ಆದರೆ ಹಳೆಯ ವಾಸನೆಗಳಿನ್ನೂ ಹೋಗಿಲ್ಲದಿರುವುದರ ಸೂಚನೆಗಳೂ ಇಲ್ಲಿ ದೊರೆಯುತ್ತವೆ. ಇತ್ತೀಚಿನ ಅವರ ಅತ್ಯುತ್ತಮ ಲೇಖನವೆಂದು ಕರೆಯಬಹುದಾದ - 'ಅನಂತಮೂರ್ತಿ-2'ರ ಬೀಜ ಲೇಖನವೆಂದೂ ಕರೆಯಬಹುದಾದ - 'ಮಾತು ಸೋತ ಭಾರತ' ಬಹು ಸಾರ್ವತ್ರಿಕವಾಗಿದ್ದರೂ, ನನಗೆ ಅವರದೇ ಆದ - ಬಹುಕಾಲ ಹೊಟ್ಟೆಯಲ್ಲಿಟ್ಟುಕೊಂಡೇ ನವೆದ - ಆತ್ಮನಿವೇದನೆಯ ಮಾತುಗಳಂತೆ ಕೇಳಿಸಿವೆ. ಭಾರತ ಇಂದು ಎದುರಿಸುತ್ತಿರುವ ನಿಜವಾದ ಅಸ್ತಿತ್ವವಾದಿ ಬಿಕ್ಕಟ್ಟಿಗೆ ಕಾರಣವನ್ನು ಹುಡುಕುವ ಈ ಲೇಖನ, ಅನಂತಮೂರ್ತಿಯವರೂ ಇದರಲ್ಲಿ ತಮ್ಮಂತಹವರ ಮಾತಿನ ಸೋಲಿನ ಕಾರಣವನ್ನೂ ವಿಷಾದ ಹಾಗೂ ದಿಗ್ಭ್ರಮೆಗಳಲ್ಲಿ ಹುಡುಕುತ್ತಿದ್ದಾರೆ ಎನ್ನಿಸುವಷ್ಟು ಆಳದ ತೀವ್ರತೆ ಪಡೆದಿದೆ:

ಕಡುಬಡವರು ರೊಚ್ಚಿಗೆದ್ದು ತಮ್ಮ ತಲೆಗೂದಲನ್ನು ಕೀಳುವಂತೆ ಜಗ್ಗಿಕೊಳ್ಳುತ್ತ ಬಗೆ ಬಗೆಯಲ್ಲಿ ತಮಗೆ ಅನ್ಯಾಯ ಮಾಡಿದವರನ್ನು ಶಪಿಸುವುದನ್ನು ನೋಡಿದಾಗ ತಮ್ಮ ಪರಮ ನಿಸ್ಸಾಯಕತೆಯಲ್ಲೂ ಅವರು ಮಾತಿಗೆ ಶಾಪಾನುಗ್ರಹ ಶಕ್ತಿಯನ್ನು ತರಬಲ್ಲ ದೀಕ್ಷಿತರಂತೆ ನಮಗೆ ಭಾಸವಾಗುತ್ತಾರೆ. ತಮ್ಮ ಮೌನದ ಅನುಗ್ರಹದಿಂದ ಬಲಿಷ್ಠರಾಗಿ ಈಗ ತಮಗೇ ಮೃತ್ಯುಪ್ರಾಯರಾದವರನ್ನು ಅವರು ಮೌನ ಮುರಿದು ಶಪಿಸುತ್ತಿದ್ದಾರೆ. ಹೀಗೆ ಶಾಪ ಹಾಕಿದಾಗಲೂ ಎದುರಾಳಿಗೆ ಏನೂ ಆಗದಿದ್ದಾಗ ಸಂಬಂಧಗಳೆಲ್ಲವೂ ಮುರಿದು ಬಿದ್ದುವೆಂದು ಅರ್ಥ. ಮಾತು ತನ್ನ ಅತಿಶಯದ ಕ್ರೌರ್ಯದ ಸ್ಥಿತಿಯಲ್ಲೂ ಶಾಪವಾಗುವ ಮಾಂತ್ರಿಕತೆಯನ್ನು ಕಳೆದುಕೊಂಡಂತೆ ಅನ್ನಿಸಿದಾಗ ಮಾನವ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ರೈತರ ಆತ್ಮಹತ್ಯೆ ಈ ಬಗೆಯವು.

ರೈತರಷ್ಟೇ ಅಲ್ಲ, ಮರ್ಯಾದೆಯಿಂದ ಬಾಳುವೆ ಮಾಡಲಿಚ್ಛಿಸುವ ಬಹಳಷ್ಟು ಜನ ಆತ್ಮಹತ್ಯೆಯ ವಿವಿಧ ಹಂತಗಳಲ್ಲಿದ್ದಾರೆ. ಇಷ್ಟು ಭಾವತೀವ್ರತೆಯೊಂದಿಗೆ ಇಂದಿನ ಭಾರತದ ದುರಂತವನ್ನು ಚಿತ್ರಿಸುವ ಅನಂತಮೂರ್ತಿ, ಕೊನೆಗೆ ತಮ್ಮ ಹಳೆಯ ಚಟ ಬಿಡಲಾಗದೆ, ಅದಕ್ಕೊಂದು ಆಧುನಿಕ ಪುರಾಣ ರೂಪ ಕೊಡಲು ಹೋಗಿ ನೀತಿ ಪಾಠದ ಮಟ್ಟಕ್ಕೆ ಇಳಿಸಿಬಿಡುತ್ತ್ತಾರೆ:

.... ಈಗ ಎಲ್ಲವೂ ಜಾಹೀರಾತು; ಪ್ರಜಾತಂತ್ರ ರಾಜಕಾರಣವೂ ಜಾಹೀರಾತು. ನಮ್ಮ ಎಲ್ಲ ಮಾತಿನ ಹಿಂದಿರುವ ಸಂರಚನೆ ಜಾಹೀರಾತಿನ ಸಂರಚನೆ. ಕಾಫಿಯ ಚಟ ನನ್ನ ಅಜ್ಜನ ಶಾಪಾನುಗ್ರಹ ಶಕ್ತಿಯನ್ನು ಕುಂದಿಸಿದ್ದರೆ, ಸರಕು ಸಂಸ್ಕೃತಿಯ ಮಾರುಕಟ್ಟೆ ನಮ್ಮ ಕಣ್ಣು ಕಿವಿ ನಾಲಗೆಗಳನ್ನು ಆಕ್ರಮಿಸಿ ಆಳಲೆಂದೇ ಎಲುಬಿಲ್ಲದ ನಾಲಗೆಯ ಮಾತನ್ನು ತನ್ನ ಗುಲಾಮನ್ನಾಗಿ ಮಾಡಿಕೊಂಡಿದೆ.

ಇದರ ಒಳಗಿರುವವರು ಭಯಗ್ರಸ್ತ ಭೋಗಿಗಳು; ಹೊರಗಿರುವವರು ಭಯೋತ್ಪಾದಕ ಕ್ರೂರಿಗಳು.

ಈ ಎರಡೂ ಅಲ್ಲದವರು ..... ಇಷ್ಟಾದರೂ ಸದ್ಯದಲ್ಲಿ ಆಚರಿಸುವ ಅಗತ್ಯವಿದೆ:

1. ಪ್ರಚೋದಕವಾದ ಆವೇಶದ ಹಿಂಸಾತ್ಮಕ ಮಾತನ್ನು ನಾವು ನಂಬುವುದಿಲ್ಲ.

2. ನನಗೇ ಅನುಭವಕ್ಕೆ ಬಂದುದನ್ನು ಕೂಡ ಪೂರ್ವಾಪರ ವಿಮರ್ಶಿಸಿ ನೋಡಿ ಅರ್ಥ ಮಾಡಿಕೊಳ್ಳದೆ ಇತರರಿಗೆ ಇದು ಕೊನೆಯ ಸತ್ಯವೆಂಬಂತೆ ಸಾರುವುದಿಲ್ಲ.

ಇದು ನೀತಿ ಪಾಠವಾಗುವುದು ಈ ನಿರೂಪಣೆಯ ಹಿಂದಿನ ತರ್ಕದಲ್ಲೇ ತಪ್ಪಿರುವುದರಿಂದ. ಈ ತರ್ಕ ತಪ್ಪಿರುವುದೂ ಮತ್ತೆ ಜನಪ್ರಿಯ ಪರಿಭಾಷೆಯಲ್ಲಿ ಮಾತನಾಡುವ ಚಟದಿಂದ: ನಿರೂಪಣೆಯನ್ನು ಆಕರ್ಷಕಗೊಳಿಸಲು, ಅಧ್ಯಾತ್ಮಿಕಗೊಳಿಸಲು ಮಾಡಲಾಗಿರುವ ಪ್ರಯತ್ನದಿಂದಾಗಿ ಹುಟ್ಟಿರುವ ಮಾತಿನ ಗೊಂದಲದಿಂದ. ಈ ತರ್ಕವನ್ನು ಕಟ್ಟಿರುವ, ಮಾತಿಗೆ ಶಾಪಾನುಗ್ರಹ ಶಕ್ತಿ ಇದೆ ಎಂಬ ನಂಬಿಕೆಯೇ ಸ್ವಲ್ಪ ಅತಿಶಯವಾದುದು. ಅದನ್ನು ಒಪ್ಪಿ ಮುಂದುವರೆದರೂ, ಅವರ ಅಜ್ಜನ ಶಾಪಾನುಗ್ರಹ ಶಕ್ತಿ ಕುಂದಿದುದು ಕಾಫಿಯ ಚಟದಿಂದಾಗಿ ಎಂಬುದನ್ನು ಒಪ್ಪಲಾಗದು. ಇದನ್ನು ಇದರ ಮೆಲೋಡ್ರಾಮಾದಿಂದ ಬಿಡಿಸಿ ಇನ್ನೂ ಆಳಕ್ಕೆ ಹೋಗಿ ನೋಡಬೇಕು. ಕುಂದಿಗೆ ಕಾರಣ, ಆತ್ಮವನ್ನು ಕೊರೆಯುತ್ತಿರುವ ಅವರ ತಪ್ಪಿತಸ್ಥ ಭಾವನೆ; ಅದರ ಹಿಂದಿನ ಅರಿವಿನ, ಆತ್ಮ ವಿಶ್ವಾಸದ ಕೊರತೆ - ಕಾಫಿ ಕುಡಿದರೂ ನಾನು ನಾನಾಗಿರಬಲ್ಲೆ ಎಂಬ ಸ್ವಯಂಪ್ರಭೆಯನ್ನು ಪಡೆಯಲಾಗದ ಹಾಗೂ ಅನ್ಯರ ಕಣ್ಣಲ್ಲಿಯೇ ತನ್ನನ್ನು ತಾನು ನೋಡಿಕೊಳ್ಳುವ ದೌರ್ಬಲ್ಯವೇ ಹೊರತು, ಕಾಫಿ ಚಟವಲ್ಲ. ಇದು ಶೀಲದ ಗಟ್ಟಿತನದ ಪ್ರಶ್ನೆ. ತನ್ನನ್ನು ತನ್ನಲ್ಲಿಯೇ ಸ್ಥಾಪಿಸಿಕೊಳ್ಳುವ ಪ್ರಶ್ನೆಯೂ ಹೌದು. ಅನಂತಮೂರ್ತಿಯವರ ನಾಯಕ ಲೋಹಿಯಾ ಹೇಳಿದ ಹಾಗೆ, ಶೀಲ ಎಂದರೆ ಅವಿಚಲಿತವಾದ ಸ್ವಪ್ರಜ್ಞೆ. ಇದು ಕಷ್ಟದ ಹಾದಿ. ಆದರೆ ಸುಲಭದ ಹಾದಿಯಲ್ಲ್ಯಾರೂ ಬುದ್ಧಿಜೀವಿಗಳಾಗಲಾರರು. ಹೀಗಾಗಿ ಇವರು ಹೇಳುವ ನೀತಿಪಾಠವೂ, ಅದನ್ನು ಆಚರಿಸಬೇಕಾದ ಜನವರ್ಗವೊಂದು ಇದೆಯೆಂಬ ಇವರ ಭಾವನೆಯೂ ಭೋಳೆಯೆನಿಸಿಕೊಂಡುಬಿಡುತ್ತದೆ. ಜೊತೆಯಲ್ಲೇ, 'ಆಧುನಿಕತೆ'ಯನ್ನು ಕುರಿತ ಇವರ ಸಂಕಥನವೂ ಕಳೆ ಕಳೆದುಕೊಳ್ಳುತ್ತದೆ... ಇದು ಆತ್ಮ ನಿವೇದನೆಯಲ್ಲೂ ಪೂರ್ಣ ಶ್ರದ್ಧೆಯಿಲ್ಲದೆ, ಎಚ್ಚರ ತಪ್ಪಿದ್ದರಿಂದಾಗಿ ಸಂಭವಿಸುವ ದುರಂತ.

ಅನಂತಮೂರ್ತಿ ಇಂತಹ ದುರಂತಗಳನ್ನು ಹೊಟ್ಟೆಯಲ್ಲಿಟ್ಟುಕೊಂಡ ಸುಲಭ ಸಂಕೀರ್ಣತೆಯ, ಅಂದರೆ, ದೃಷ್ಟಿ ಕೇಂದ್ರವಿಲ್ಲದ; ಹಾಗಾಗಿ, ಅವರ ಮಾತುಗಳಲ್ಲೇ ಹೇಳುವುದಾದರೆ, ಗಟ್ಟಿಯಾಗಿ ಕಾಲು ಊರಲಾಗದ ಕೆಸರಿನಂತಹ ಬೌದ್ಧಿಕತೆಯ ಹಾದಿ ಹಿಡಿದಿದ್ದರೆ ಹಾಗೂ ಅದರಿಂದಾಗಿ ಈಗ ಅವರು ತಮ್ಮ ಇತೀಚಿನ ಬರಹಗಳಲ್ಲಿ ಕಾಣುವ ಕಾಲದ ವಿಷಾದದಲ್ಲೋ, ದಿಗ್ಭ್ರಮೆಯಲ್ಲೋ ಇದ್ದರೆ; ಅದಕ್ಕೆ ಕಾರಣ, ಅವರೇ ವಿಷದವಾಗಿ ವಿವರಿಸುವ 'ಬ್ಯಾಡ್ ಫೈತ್'ನಲ್ಲಿ ಹುಟ್ಟುವ ಬುದ್ಧಿವಿಲಾಸದ ಚಟ - ಅವರಜ್ಜನ ಕಾಫಿ ಚಟದಂತೆ. ಅವರ ಈ ಮಾತನ್ನೊಮ್ಮೆ ಓದಿ ಗ್ರಹಿಸಲು ಪ್ರಯತ್ನಿಸಿ: 'ಹಾಗೆ ಹೇಳುವ ಒಂದು ಪದ್ಯಕ್ಕಾಗಿ, ವಾಚ್ಯದ ಮುಜುಗರಗಳನ್ನೂ, ತಾರ್ಕಿಕ ನಿಯತಿಗಳನ್ನೂ ಎಂಥ ಜಾಣರೂ ಮೀರಬಲ್ಲ ಬೆರಗಿನ ಅರಿವಿನ ಅದರ ಧ್ವನ್ಯರ್ಥಕ್ಕಾಗಿ, ನಾನು ಕಾದಿರಬಹುದೇನೋ!' ಈ ಚಟಕ್ಕೆ ಒಂದು ಕಾರಣವಾಗಿರುವುದು, ಬಹುಶಃ ಅವರನ್ನು ಒಂದು ರೀತಿಯ ಬೌದ್ಧಿಕ ಅಂತರ್ಪಿಶಾಚಿಯನ್ನಾಗಿಸಿರುವ ಅವರ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಪರ್ಕಗಳು. ಅವರ ಇತ್ತೀಚಿನ ಪುಸ್ತಕಗಳಲ್ಲಿ - ವಿಶೇಷವಾಗಿ 'ರುಜುವಾತು'ವಿನಲ್ಲಿ - ನಮಗೆ ಕಾಣುವುದು, ದೇಶ ಸುತ್ತಿ ಕೋಶ ಓದಿ ಗಟ್ಟಿಯಾಗಿರುವ ಅಲ್ಲ; ಶಬ್ದಾತಿಕಾಮುಕತೆಯಿಂದ ಸಡಿಲವಾಗಿ ಮೆತ್ತಗಾಗಿರುವ ಅನಂತಮೂರ್ತಿ. ಏಕೆಂದರೆ, ಶ್ರವಣಬೆಳಗೊಳಕ್ಕೆ ರೋಪ್ ವೇ ಬೇಡ; ದಿವ್ಯ ಸನ್ನಿಧಾನಕ್ಕೆ ಶ್ರದ್ಧಾಪೂರಿತ ಶ್ರಮದಾಯಕ ನಡಿಗೆಯೇ ಬೇಕು ಎನ್ನುವ ಅನಂತಮೂರ್ತಿ, ತಮ್ಮ ಬದುಕಿನ ಎರಡನೇ ಹಂತದಲ್ಲಿ ದೇಶ ಸುತ್ತಿ ಕೋಶ ಓದಿದ್ದು ಮಾತ್ರ ರೋಪ್ ವೇ ಶೈಲಿಯಲ್ಲೇ. ನಮ್ಮ ಕಾರಂತ, ಡಿವಿಜಿ, ಗೊರೂರಂತೆ ಕಾಲ್ನಡಿಗೆಯ ಮಾರ್ಗದಲ್ಲಲ್ಲ.

ಹೀಗಾಗಿ ಅನಂತಮೂರ್ತಿ ದೇಶ ಸುತ್ತಿ ಕೋಶ ಓದಿ, ಆನಂದಿಸಿದ್ದಕ್ಕಿಂತ ಹೆಚ್ಚಾಗಿ 'ಸುಖಿ'ಸಿದಂತೆ ಕಾಣುತ್ತದೆ - ಇದು ಈ ಸಂಬಂಧದ ಬರಹಗಳಲ್ಲಿ ಪದೇ ಪದೇ ಕಾಣಿಸುವ ಅವರದೇ ಮಾತು. ಹೀಗೆ ಸುಲಭವಾಗಿ ಸುಖಿಸುವ ಸಾಧ್ಯತೆಗಳನ್ನು ತೆರೆದ; ಈ ಎರಡೂ ಪುಸ್ತಕಗಳಲ್ಲಿ ಉಲ್ಲೇಖಿತವಾಗಿರುವ, ಪ್ರಸ್ತಾಪಕ್ಕೆ ಬರುವ ಅವರ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸ, ಭೇಟಿ, ಸ್ಥಳ, ವ್ಯಕ್ತಿ, ವಿಚಾರಗಳ ಬಾಹುಳ್ಯ, ವೈವಿಧ್ಯ ಮತ್ತು ಅವುಗಳ ನಡುವೆ ಸೃಷ್ಟಿಯಾಗುವ ಅಂರ್ತಸಂಬಂಧಗಳು ಎಷ್ಟು ಸಂಕೀರ್ಣ ಹಾಗೂ ದೊಡ್ಡದೆಂದರೆ, ಅದನ್ನು ಪ್ರವೇಶಿಸುವ ಓದುಗನಷ್ಟೇ ಅಲ್ಲ, ಸ್ವತಃ ಅನಂತಮೂರ್ತಿಯವರೇ - ಅವರ ವಿಚಾರಗಳ ಜೊತೆಗೇ - ಆ ಚಕ್ರವ್ಯೂಹದಲ್ಲಿ ಕಳೆದು ಹೋಗುತ್ತಾರೆ! ಹೀಗಾಗಿ, ಜಗತ್ತೆನ್ನೆಲ್ಲ ಹೀಗೆ ಬೌದ್ಧಿಕ 'ಸುಖ'ದಲ್ಲಿ ಸುತ್ತಾಡಿದರೂ ಅವರಿಗೆ ಗಟ್ಟಿಯಾಗಿ ಕಾಲೂರಲು ಜಾಗವೇ ಇಲ್ಲದಾಗಿದೆ... ಮತ್ತೆ ಅವರ ಮಾತನ್ನೇ ಬಳಸುವುದಾದರೆ, ದಾಕ್ಷಿಣ್ಯಕ್ಕೆ ಬಸುರಾಗಿ ಹೆರಲು ಜಾಗವಿಲ್ಲದ ಪರಿಸ್ಥಿತಿ ಇದು!

ಆದರೂ ಕನ್ನಡಿಗರು ಅನಂತಮೂರ್ತಿಯವರಿಗೆ ಹೆರಲು ಜಾಗ ಮಾಡಿಕೊಟ್ಟಿದ್ದರೆ, ಅದು ಕೇವಲ ಔದಾರ್ಯದಿಂದಲ್ಲ. ನಿರೀಕ್ಷೆಯಿಂದ, ಮಹಾತ್ವಾಕಾಂಕ್ಷೆಯಿಂದ. ಏಕೆಂದರೆ ಅವರ ಬುದ್ಧಿ ವಿಲಾಸ ಕೇವಲ ಚಮತ್ಕಾರದ್ದಲ್ಲ. ಕೆಲವು ಕುರುಡುಗಳ ಮಧ್ಯೆಯೂ ಅವರ ಬರಹಗಳಲ್ಲಿ ಮಿಂಚಿನ ಸಂಚಾರ ಮಾಡಿಸ ಬಲ್ಲ ಅಪೂರ್ವ ಒಳನೋಟಗಳಿವೆ. ಉದಾ: ಶ್ಮಶಾನ ಕುರುಕ್ಷೇತ್ರದ ಬಗ್ಗೆ ಬರೆವಾಗ, ಬಿ.ಎಂ.ಶ್ರೀ. ಬಗ್ಗೆ ಬರೆವಾಗ, ಲಂಕೇಶರ ಅಕ್ಷರ ಹೊಸ ಕಾವ್ಯದ ಬಗ್ಗೆ ಬರೆವಾಗ, ಬೇಗೂರಿನ ಚೆಲುವೆಯ ಕಥೆ ಬರೆವಾಗ, ಸಿಮೋನ್ ವೇಲ್ ಬಗ್ಗೆ ಬರೆವಾಗ, ಪಾಕಿಸ್ತಾನ ಒಡೆದ ಇನ್ನೊಂದು ಕಥನದ ಬಗ್ಗೆ ಬರೆವಾಗ, 'ಅನುವಾದ'ದ ಬಗ್ಗೆ ಬರೆವಾಗ, 'ಇಂದೂ ಇರುವ ಗಾಂಧಿ' ಬಗ್ಗೆ ಬರೆವಾಗ, ಉ.ಕೊರಿಯಾದ ರಾಗಿ ಸಂಬಂಧದ ಬಗ್ಗೆ ಬರೆವಾಗ. ಇಲ್ಲೆಲ್ಲ ಅನಂತಮೂರ್ತಿ ತಾವು ಗಾಂಧಿ - ಲೋಹಿಯಾ - ಟ್ಯಾಗೋರರಿಂದ ಪಡೆದದ್ದನ್ನೆಲ್ಲ ತಮ್ಮ ಅನುಭವಗಳಿಗೆ ಧಾರೆಯೆರೆದು ಬರೆಯುತ್ತಾರೆ. ಆದರೆ ಈ ಮಿಂಚುಗಳ ಜೊತೆಗೆ, 'ನನಗೆ ಬುದ್ಧ, ಕ್ರಿಸ್ತ, ಪೈಗಂಬರ, ಶಂಕರ, ಆನಂದತೀರ್ಥ,ರಾಮಾನುಜ, ರಮಣ, ಪರಮಹಂಸ - ಎಲ್ಲರೂ ಬೇಕು. ಅವರ ವಿರೋಧಿಗಳಾದ ಮೆಟೀರಿಯಲಿಸ್ಟರಿಂದಲೂ ಮುಕ್ತರಾಗಿರಬೇಕು; ಅವರ ಕಪಟ ಭಕ್ತರಿಂದಲೂ ಮುಕ್ತರಾಗಿರಬೇಕು.ಅವರೇ ಆಗಿರಬೇಕು; ಅವರ ಕಾಲದವರೂ ಆಗಿರಬೇಕು; ನಮ್ಮ ಕಾಲಕ್ಕೆ ಸಲ್ಲುವವರೂ ಆಗಿರಬೇಕು.' ಎಂಬ ಗುಡುಗುಗಳೂ ಸೇರಿಕೊಂಡು ನಮ್ಮನ್ನು ಭಯಭೀತರನ್ನಾಗಿ ಮಾಡುತ್ತವೆ! ಇಷ್ಟೊಂದು ಜನವನ್ನು ಇಂತಹ ಬೌದ್ಧಿಕ ಸರ್ಕಸ್ನಲ್ಲಿ ತೊಡಗಿಸಿಕೊಂಡವನಿಗೆ ಸಂಸಾರಸ್ಥರು ಯಾರೂ ಜಾಗ ಕೊಡಲಾರರು. ಆದರೂ ಅನಂತಮೂರ್ತಿ ಸಂಸಾರಸ್ಥನ ಕಷ್ಟಗಳ ನೆಲೆಯಲ್ಲೇ ತಮ್ಮ ವಿಚಾರಗಳಿಗೆ ಸಿಂಧುತ್ವವನ್ನು ಪಡೆದುಕೊಳ್ಳಲು ಯತ್ನಿಸುತ್ತಾರೆ - ಸಂಸಾರಸ್ಥನ ಆಯ್ಕೆಗಳು ಕಷ್ಟವಾದವು ಎಂದು ತಮ್ಮ ದ್ವಂದ್ವಗಳನ್ನು ಸಮರ್ಥಿಸಿಕೊಳ್ಳುತ್ತಾ! ಆದರೆ, ಸಂಸಾರಸ್ಥ ಮರ್ಯಾದಸ್ಥನಾಗಿಯೂ ಬಾಳ್ವೆ ಮಾಡಬೇಕಾದರೆ ಆಯ್ಕೆ ಎಷ್ಟು ಕಷ್ಟವಾದರೂ ಅದನ್ನು ಮಾಡಿಕೊಳ್ಳಲೇ ಬೇಕಲ್ಲವೇ?

ಈ ಆಯ್ಕೆಯ ಕಷ್ಟ ಅನಂತಮೂರ್ತಿಯವರಿಗೆ ಅನುಭವಕ್ಕೆ ಬಂದುದು, ಅವರ ಸಂಸಾರ ದೊಡ್ಡದಾದಂತೆ - ಅವರು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಓಡಾಡಲಾರಂಭಿಸಿದ ಮೇಲೆ! ಇದಕ್ಕೆ ಮೊದಲು ಅವರು ಸರಳವಾಗಿ, ಖಚಿತವಾಗಿ, ಕೆಲವೊಮ್ಮೆ ಮುಗ್ಧವಾಗಿಯೂ ಮಾತನಾಡುತ್ತಿದ್ದರೆಂಬುದಕ್ಕೆ 'ಮಾತು ಸೋತ ಭಾರತ'ದಲ್ಲಿಯೂ - ಇಲ್ಲಿ ಪ್ರಕಟವಾಗಿರುವ ಅವರ ಹಳೆಯ ಅಪ್ರಕಟಿತ ಟಿಪ್ಪಣಿಗಳಲ್ಲಿ - ಸೂಚನೆಗಳು ಸಿಗುತ್ತವೆ. ಲಂಕೇಶರು 'ಅಕ್ಷರ ಹೊಸ ಕಾವ್ಯದ ಮುನ್ನುಡಿಯ ಮೂಲಕ ಪೋಷಿಸಿದ ಕೆಲವು ಕವಿಗಳನ್ನು ಕುರಿತ ಟೀಕೆ, 'ಸಂಸ್ಕಾರ'ದ ಬಗ್ಗೆ ಬಂದ ಆಕ್ಷೇಪಗಳಿಗೇ ನೀಡಿದ ಉತ್ತರ ಹಾಗೂ ಶೂದ್ರ ಬ್ರಾಹಣನನ್ನು ಕುರಿತ ಟಿಪ್ಪಣಿ ಎಷ್ಟು ಖಚಿತವಾಗಿವೆ, ದಿಟ್ಟವಾಗಿವೆ, ಸ್ಪಷ್ಟವಾಗಿವೆ ಎಂದರೆ, ಅನಂತಮೂರ್ತಿ ಇದೆಲ್ಲವನ್ನೂ ಕಳೆದುಕೊಂಡದ್ದು ಯಾತರಿಂದ ಎಂಬುದು ಸ್ಪಷ್ಟವಾಗಿ ಗೊತ್ತಾಗುವಷ್ಟು! ಹಾಗೆ ನೋಡಿದರೆ, ಅನಂತಮೂರ್ತಿಯವರ ವೈಚಾರಿಕ ವ್ಯಕ್ತಿತ್ವವನ್ನು ಮೂರು ಮಜಲುಗಳಲ್ಲಿ ಗುರುತಿಸಬಹುದೆಂದು ಕಾಣುತ್ತದೆ.

ಅನಂತಮೂರ್ತಿ-1: ಆರಂಭ ಘಟ್ಟ - ಚರ್ಚಾಸ್ಪದವಾದರೂ, ಚರ್ಚೆಗೆ ಸಿಗುವಷ್ಟು ಖಚಿತ, ಸ್ಪಷ್ಟ ಹಾಗೂ ಪ್ರಚೋದನಾತ್ಮಕವಾಗಿರುತ್ತಿದ್ದ ಘಟ್ಟ. (ಕೊಟ್ಟಾಯಂಗೆ ಕುಲಪತಿಯಾಗಿ ಹೋಗುವವರೆಗೆ) ಅನಂತಮೂರ್ತಿ-2: ರಾಷ್ಟ್ರೀಯ - ಅಂತಾರಾಷ್ಟ್ರೀಯ ಪ್ರವಾಸಗಳ ನಡುವೆ ಸನ್ನಿವೇಶವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವ ವ್ಯವಧಾನವನ್ನೂ, ದಿಟ್ಟತನವನ್ನೂ ಕಳೆದುಕೊಂಡು, ಅಕ್ಕ ಪಕ್ಕ ನೋಡಿ ಸಂಕೀರ್ಣವಾಗಿ ಮಾತಾಡಿ ಅಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸುವ ಆಮಿಷಕ್ಕೊಳಗಾದ ಘಟ್ಟ ('ವಾಲ್ಮೀಕಿಯ ನೆವದಲ್ಲಿ'ವರೆಗೆ). ಅನಂತಮೂರ್ತಿ-3: ಬೌದ್ಧಿಕ ಆಟಗಳಿಂದ ಆಯಾಸವಾದಂತೆ ವಿಶ್ರಾಂತಿಯಲ್ಲಿ ಆರಂಭಿಸಿರುವ ಬರವಣಿಗೆಯ ಘಟ್ಟ ('ಮಾತು ಸೋತ ಭಾರತ'ದೊಂದಿಗೆ) ಈ ಮೂರೂ ಘಟ್ಟಗಳೂ ಖಚಿತ ವಿಭಾಗಕ್ಕೊಳಪಟ್ಟ ಘಟ್ಟಗಳೇನಲ್ಲ. ಈ ಮೂರರಲ್ಲೂ ಅನಂತಮೂರ್ತಿ ಇರುವುದರಿಂದ ಮೂರರಲ್ಲೂ ಮೂರೂ ಘಟ್ಟಗಳು ಮಿಂಚಿ ಮಾಯವಾಗುತ್ತವೆ!

ಹಾಗಾಗಿಯೇ ಅತಿ ಇತ್ತೀಚಿನ ಬರಹಗಳಲ್ಲೂ / ಭಾಷಣಗಳಲ್ಲೂ ಅನಂತಮೂರ್ತಿ 'ಭಾರತೀಯತೆ'ಯ ವೇದಿಕೆಯ ಮೇಲೆ ನಿಂತು ಕರ್ನಾಟಕಕ್ಕೆ ಪ್ರಾದೇಶಿಕ ಪಕ್ಷ ಬೇಡವೆಂಬ ಸಾರಾ ಸಗಟು ಹೇಳಿಕೆ ನೀಡಬಲ್ಲವರಾಗಿದ್ದಾರೆ. ಹಿಂದಿ ಅವರಿಗೆ ಹಲವು ಭಾಷೆಗಳನ್ನು ಉದಾರವಾಗಿ ಒಪ್ಪಿಕೊಳ್ಳುವ ಭಾಷೆಯಾಗಿ ಕಾಣುತ್ತದೆ. ಕರ್ನಾಟಕಕ್ಕೆ ಭಾರತದಲ್ಲಿ ಸ್ಥಾನ ಸಿಗಬೇಕಾದರೆ, ದೆಹಲಿ ಕೇಂದ್ರವಾಗಬೇಕು ಎನ್ನುತ್ತಾರೆ ಅವರು! ಮತ್ತೆ ಇದು ಈ ಲೇಖನದ ಆರಂಭದಲ್ಲಿ ಪ್ರಸ್ತಾಪಿಸಿದ ಅನಂತಮೂರ್ತಿಯವರು ಕೆಲವು ವಲಯಗಳಿಂದ ಎದುರಿಸುತ್ತಿರುವ ವೈದಿಕತೆಯ ಪುನರುಜ್ಜೀವನದ - 'ಹಿಂಪಯಣ'ದ - ಆಪಾದನೆಗೆ ಪುಷ್ಠಿ ಕೊಟ್ಟರೆ ಆಶ್ಚರ್ಯವಿಲ್ಲ. ಏಕೆಂದರೆ ಈಗ ಭಾರತವನ್ನು 'ಎಲ್ಲ ಧರ್ಮಗಳ ಪವಿತ್ರ ಕ್ಷೇತ್ರ'ವನ್ನಾಗಿ ನೊಡಬಲ್ಲವರಾಗಿರುವ ಅವರಲ್ಲೇ ಈ ಆತಂಕವಿದೆ: 'ಆಪತ್ತಿನ ಸಮಯದಲ್ಲಿ ಲಿಬರಲ್ ಮನೋಧರ್ಮದವನು ಜಾರಬಲ್ಲಂತೆಯೇ ರಿಲಿಜಿಯಸ್ ಆದ ಒಳ ಪ್ರೇರಣೆಯಿಂದ ತುಡಿಯುವ ಮನಸ್ಸೂ ಜಾರಬಲ್ಲುದು'

ಅದೇನೇ ಇರಲಿ, ಅನಂತಮೂರ್ತಿಯವರ ಅಂತಾರಾಷ್ಟ್ರೀಯತೆಯ ಹುಚ್ಚು ಈಗ ರಾಷ್ಟ್ರೀಯ ಮಟ್ಟಕ್ಕೆ ಇಳಿದಂತಿದೆ. ಅದು ಕರ್ನಾಟಕದ ಮಟ್ಟಕ್ಕೆ ಇಳಿಯುವುದನ್ನು ಕಾದು ನೋಡೋಣ. ಆಗಲಾದರೂ, ಮೂರು ದಶಕಗಳ ಹಿಂದೆ ಅನಂತಮೂರ್ತಿಯವರ ಸಾಹಿತ್ಯ - ಸಂಸ್ಕೃತಿ ಚಿಂತನೆಯನ್ನೇ ವೈದಿಕ ಪರಂಪರೆಗೆ ಪ್ರಾತಿನಿಧಿಕವಾಗಿಟ್ಟುಕೊಂಡು ತೇಜಸ್ವಿ ಬರೆದಿದ್ದ 'ಕರ್ನಾಟಕ ಸಂಸ್ಕೃತಿ ಸಮೀಕ್ಷೆ' ಎಂಬ ಸಂಸ್ಕೃತಿ ಮೀಮಾಂಸೆಯ ಲೇಖನಕ್ಕೆ ಅನಂತಮೂರ್ತಿಯವರು ಸಮಗ್ರವಾಗಿ ಪ್ರತಿಕ್ರಿಯಿಸಿಯಾರೇನೋ ಎಂಬ ನಿರೀಕ್ಷೆ ನನ್ನದು! ಏಕೆಂದರೆ, ಅದಕ್ಕೆ ಗಂಭೀರವಾಗಿ ಅನಂತಮೂರ್ತಿ ಪ್ರತಿಕ್ರಿಯಿಸುವವರೆಗೂ ಕನ್ನಡದಲ್ಲಿ ಅನಂತಮೂರ್ತಿ ಸಂಕಥನ ಪೂರ್ಣವಾಗುವುದಿಲ್ಲ! ಹಾಗೇ, ಆಧುನಿಕ ಕನ್ನಡ ಸಂಸ್ಕೃತಿಯನ್ನು ಕುರಿತ ಅರ್ಥಪೂರ್ಣ ಆದರೆ ಅಪೂರ್ಣವಾಗಿ ಉಳಿದಿರುವ ಅಧ್ಯಾಯವೊಂದು ಪೂರ್ಣವಾಗುವುದಿಲ್ಲ. ಅಷ್ಟೇ ಅಲ್ಲ, ಅನಂತಮೂರ್ತಿಯವರ 'ಆಧುನಿಕತೆ'ಯನ್ನು ಕುರಿತ ಚರ್ಚೆಯೂ ಪೂರ್ಣಗೊಳ್ಳುವುದಿಲ್ಲ. ಏಕೆಂದರೆ, ತೇಜಸ್ವಿ ಅಲ್ಲಿ ಎತ್ತಿರುವುದು ಆಧುನಿಕತೆಯನ್ನು ಮೂಲಭೂತ ನೆಲೆಯಲ್ಲಿ ಎದುರಾಗಬಲ್ಲ ಸ್ಥಳೀಯ ಹಾಗೂ ಕುಲ ಸಂಸ್ಕೃತಿಗಳ ಪ್ರಶ್ನೆಗಳನ್ನು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.