ತಮಿಳುನಾಡಿನಿಂದ ಎಳನೀರು ಮಾರೋಕೆ ೫೦೦ ಜನ !!!!!

0

ನಮಸ್ಕಾರ ಸ್ನೇಹಿತರೆ,

ಮೊನ್ನೆ ತಾನೆ ಡಾ| ಶೋಭಾ ಕೊಪ್ಪದ್ ಅವರು ತಮಗಾದ ಅನುಭವದ ಬಗ್ಗೆ ಬರೆದಿದ್ದನ್ನು ಓದಿ ಮನಸ್ಸಿಗೆ ತುಂಬಾ ನೋವು ಅನ್ನಿಸಿತು. ಅವರು ಹೇಳಿದ ಮಾತುಗಳಲ್ಲಿ ನಿಜಾಂಶ ಇದೆ. ಶೋಭಾ ಅವರು ಕನ್ನಡಿಗರಲ್ಲಿ ಒಗ್ಗಟ್ಟಿಲ್ಲ ಅಂತ ಹೇಳಿರೋದು ಸರಿಯಾಗಿದೆ. ಕನ್ನಡ ಜನಾಂಗಕ್ಕಿರೋ ಹಲವು ಸಮಸ್ಯೆಗಳಲ್ಲಿ ಅದು ಒಂದು ಅನ್ನೋದು ನನ್ನ ಅನಿಸಿಕೆ. ಇನ್ನೊಂದು ಗಂಭೀರವೇ ಆದ ಸಮಸ್ಯೆ ಅಂದ್ರೆ ಕನ್ನಡಿಗರಲ್ಲಿ ಉದ್ಯಮಶೀಲತೆ ಇಲ್ಲದೇ ಇರೋದು.

ಕನ್ನಡಿಗರು ಯಾಕೆ ಹೆಚ್ಚು ಹೆಚ್ಚು ಉದ್ಯಮಗಳನ್ನ ಸ್ಥಾಪಿಸೋಕೆ ಆಗುತ್ತಿಲ್ಲ. ಕನ್ನಡಿಗರರಲ್ಲಿ ಉದ್ಯಮಗಳನ್ನು ಸ್ಥಾಪಿಸುವ ಉದ್ಯಮಶೀಲತೆ ಇಲ್ಲವೆ? ರಾಷ್ಟ್ರ ಮಟ್ಟದಲ್ಲಿ ನೋಡಿದ್ರೂ ನಮ್ಮ ನೆಲದಿಂದ ಹೋಗಿ ದೊಡ್ಡ ಮಟ್ಟದ ಸಾಧನೆ ಮಾಡಿರೋ ಉದ್ಯಮಿಗಳು ಎಲ್ಲೋ ಬೆರಳಣಿಕೆಯಷ್ಟೇ. ಹಾಗಿದ್ರೆ ನಮ್ಮ ಜನರಲ್ಲಿ ಉದ್ಯಮಗಳನ್ನು ಕಟ್ಟೋ ಶಕ್ತಿಯೇ ಇಲ್ಲವಾ? Don't we have what it takes to build corporates ? Don't we have what it takes to become big time entrepreneurs ? ಉದ್ಯಮಶೀಲತೆ ಅನ್ನೋದು ಕನ್ನಡ ಜನಾಂಗದ DNA ಯಲ್ಲೇ ಇಲ್ಲವಾ?

ನಿಮಗೆ ಒಂದು ಸಣ್ಣ ಉದಾಹರಣೆಯ ಮೂಲಕ ಇವತ್ತಿನ ಸ್ಥಿತಿಯನ್ನ ವಿವರಿಸುತ್ತೇನೆ. ನನ್ನ ಮನೆಯ ಹತ್ತಿರ ಒಂದು ದಿನಸಿ ಅಂಗಡಿ ಇದೆ. ನಮ್ಮ ಮನೆಗೆ ಎಲ್ಲಾ ಸಾಮಾನುಗಳನ್ನು ಅಲ್ಲಿಯೆ ತಗೆದುಕೊಳ್ಳುವುದು. ಅದರ ಮಾಲಿಕ ಒಬ್ಬ ಮಲೆಯಾಳಿ. ಮೊದಲಿಗೆ ಒಂದು ಸಣ್ಣ ಅಂಗಡಿಯಿಂದ ಶುರುಮಾಡಿದ ಅವನು ಇವತ್ತು ಒಂದು ಸೂಪರ್ ಮಾರ್ಕೆಟ್ ಶುರು ಮಾಡಿದ್ದಾನೆ. ಹಾಗೇ ಒಂದು ಸಾರಿ ಅವನ ಜೊತೆ ಮಾತನಾಡುತ್ತಿದ್ದೆ. " ಏನ್ರಿ, ಇಂದು ಯಾವುದೇ ಊರಿಗೆ ಹೋದ್ರು,, ನಿಮ್ಮ ಜನರೇ ಎಲ್ಲಾ ಕಡೆ ಇರ್ತಾರೆ, ಏನಿದರ ಗುಟ್ಟು" ಅಂತ ಕೇಳಿದೆ. ಅದಕ್ಕೆ ಅವನು " ಏನು ಇಲ್ಲಾ ಸರ್, ನಮ್ಮ ಕಡೆ ನಮಗೆ ಕೆಲಸ ಬಹಳ ಸಿಕ್ಕೋಲ್ಲ, ಹಾಗಾಗಿ ನಾವು ಇಲ್ಲಿಗೆ ಬರ್ತಿವಿ. ಇಲ್ಲಿ ನಮಗೆ ಯಾವುದೇ ಕೆಲಸ ಮಾಡೋಕು ಅವಕಾಶ ಇದೆ. ನಿಮ್ಮ ಜನಗಳು ವ್ಯಾಪಾರ ಮತ್ತೆ ವ್ಯವಹಾರ ಮಾಡೋದು ಕಡಿಮೆ ಅಲ್ವಾ" ಅಂತ ನಗುತ್ತಾ ಹೇಳಿದ. " ಸರಿ ಹಾಗಾದ್ರೆ ಇಲ್ಲೆ ನೀವು ನೆಲೆ ಊರೋಕೆ ಹೇಗೆ ಸಾಧ್ಯ, ನಿಮ್ಮ ಮನೆ, ಅಪ್ಪಾ, ಅಮ್ಮ, ಅಣ್ಣ, ತಮ್ಮ ಎಲ್ಲರನ್ನು ಬಿಟ್ಟು ಇರೋಕೆ ತೊಂದ್ರೆ ಆಗಲ್ವಾ" ಅಂತ ಕೇಳಿದ್ದಕ್ಕೆ. " ಹಂಗೇನು ಇಲ್ಲಾ ಸರ್, ನಮ್ಮ ಅಣ್ಣ ಒಬ್ಬ ಅಲ್ಲೆ ವ್ಯಾಪಾರ ಮಾಡ್ತಾ ಸೆಟ್ಲ್ ಆಗಿದಾನೆ. ಅದ್ರೆ ನನ್ನ ತಮ್ಮನಿಗೆ ಏನು ಕೆಲಸ ಇರಲಿಲ್ಲ. ಅದಕ್ಕೆ ಅವನನ್ನ ಇಲ್ಲಿ ಕರೆಸಿಕೊಂಡೆ. ಇವಾಗ ಅವನಿಗೆ ಅರ್.ಟಿ ನಗರದಲ್ಲಿ ಒಂದು ಅಂಗಡಿ ಮಾಡಿದಿನಿ, ಇನ್ನೊಬ್ಬ ಇಲ್ಲೆ ನನ್ನ ಜೊತೆ ಇದಾನೆ "ಅಂತ ಹೇಳಿದ. ಇದೆಲ್ಲಾ ಹೇಗೆ ಸಾಧ್ಯ ಅಂತ ಆಶ್ಚರ್ಯದಿಂದ ಕೇಳಿದ್ದಕ್ಕೆ,, "ನಮ್ಮದೇನು ಮಹಾ ಬಿಡಿ ಸಾರ್. ನೀವು ಎಳನೀರು ಕುಡಿತೀರಲ್ಲ ಎದುರುಗಡೆ, ಅವನ ನೆಟ್ವರ್ಕ್ ನೋಡಿದ್ರೆ ಗಾಬರಿ ಆಗಿಬಿಡ್ತೀರಾ. ಅವನ ಮಾಲಿಕ ಇಲ್ಲಿ ಸುಮಾರು ೫೦೦ ಜನ ಎಳನೀರು ಮಾರೋಕೆ ಅಂತಾನೇ ತಮಿಳುನಾಡಿನಿಂದ ಜನರನ್ನ ಕರೆಸಿಕೊಂಡಿದಾನೆ. ಅವರೆಲ್ರೂ ಒಬ್ಬ ಮಾಲೀಕನ ಕೈಯಲ್ಲೆ ಇರೋದು" ಅಂತ ಅಂದ. ಅದನ್ನ ಕೇಳಿ ನನಗೆ ಏನು ಹೇಳಬೇಕು ಅಂತಾನೆ ಗೊತ್ತಾಗಲಿಲ್ಲ.

ತಿರುಗಿ ಮನೆಗೆ ಬರ್ತಾ ಯೋಚನೆ ಮಾಡ್ತಾ ಇದ್ದೆ. ಒಂದು ಎಳನೀರು ಮಾರೋಕು ಅಲ್ಲೆಲ್ಲೆಂದಲೋ ಜನ ಬರಬೇಕಾ? ಇವತ್ತು ಒಂದು ಎಳನೀರಿಗೆ ಸುಮಾರು ೧೦ರೂ ಅಂತ ಲೆಕ್ಕ ಹಾಕಿದ್ರು ಒಬ್ಬ ಮನುಷ್ಯ ದಿನಕ್ಕೆ ೬೦-೧೦೦ ಎಳನೀರು ಮಾರಿದರು ದಿನಕ್ಕೆ ಆಗುವ ವ್ಯಾಪಾರ, ೬೦೦-೧೦೦೦ರೂಗಳು. ಅಂದ್ರೆ ೫೦೦ ಜನ ತಗೊಂಡ್ರೆ ೩,೦೦,೦೦೦ - ೫,೦೦,೦೦೦ ರೂಪಾಯಿಗಳು. ಈ ಲೆಕ್ಕ ನೋಡಿ ನನ್ನ ತಲೆ ತಿರುಗಿ ಹೋಯಿತು. ಎಳನೀರು ಮಾರಿ ದೊಡ್ಡ ಸಂಪಾದನೆ ಮಾಡೋ ಬುದ್ಧಿ ನಮ್ಮ ಕನ್ನಡದ ಯಾವ ಹೈಕಳಿಗೂ ಬಂದೇ ಇಲ್ವಾ? ನಮ್ಮ ಜನರಿಗೆ ವ್ಯಾಪಾರ ಮಾಡುವ ಬುಧ್ಧಿನೇ ಇಲ್ವಾ? ಅಥವಾ ವ್ಯಾಪಾರ, ವ್ಯವಹಾರ ಎಲ್ಲ ಮಾರ್ವಾಡಿ, ತಮಿಳು, ತೆಲುಗು ಜನರದ್ದು, ಅದೆಲ್ಲ ನಮಗ್ಯಾಕೆ ಅನ್ನೋ ಉದಾಸೀನಭಾವವೋ ? ಈ ಎಳನೀರು ವ್ಯಾಪಾರವನ್ನೆ ತಗೆದುಕೊಳ್ಳಿ. ೫೦೦ ಜನ ಕನ್ನಡಿಗರನ್ನ ಇಟ್ಟಕೊಂಡು ಎಳನೀರು ಮಾರಿ ದುಡ್ಡು ಮಾಡೋ ಬುದ್ಧಿ ಒಬ್ಬೇ ಒಬ್ಬ ಕನ್ನಡಿಗನಿಗೆ ಬಂದಿಲ್ವಲ್ಲ. ಇಂತಹ ಸಣ್ಣ ಸಣ್ಣ ವ್ಯಾಪಾರಗಳನ್ನು ಸಹ ನಮ್ಮ ಕನ್ನಡಿಗರು ಉಪಯೋಗಿಸೋ ಜಾಣತನವನ್ನು ಹೊಂದಿಲ್ಲವೆ? ಇದು ಕೇವಲ ಒಂದು ಸಣ್ಣ ಉದಾಹರಣೆ.

ಮೊನ್ನೆ ಚೆನ್ನೈನಲ್ಲಿ "ಪ್ರವಾಸಿ ಭಾರತೀಯ ದಿವಸ" ಸಮ್ಮೇಳನ ಆಯೋಜಿಸಲಾಗಿತ್ತು. ಅಲ್ಲಿ ದೇಶದ ವಿವಿಧ ರಾಜ್ಯಗಳ ಮುಖ್ಯ ಮಂತ್ರಿಗಳು ಮತ್ತು ಇತರೆ ಮಂತ್ರಿಗಳು ತಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವುದರಿಂದ ಆಗುವ ಲಾಭಗಳ ಬಗ್ಗೆ ಮತ್ತು ಅನಿವಾಸಿ ಭಾರತಿಯರಿಗೆ ಭಾರತದಲ್ಲಿ ಬಂಡವಾಳ ಹೂಡಲು ಹೇಳುತ್ತಿದ್ದರು. ಆದರೆ ಅಲ್ಲಿ ಬಂದಿದ್ದ ಬಹುತೇಕ ಬಂಡವಾಳ ಹೂಡಿಕೆದಾರರು ಆರಿಸಿದ್ದು ಗುಜರಾತ್ ರಾಜ್ಯವನ್ನು. ಎರಡನೆಯ ರಾಜ್ಯವಾಗಿ ಆಯ್ಕೆಯಾಗಿದ್ದು ಮಹಾರಾಷ್ಟ್ರ. ನಮ್ಮ ರಾಜ್ಯ ಎಂಟನೆಯ ಸ್ಥಾನದಲ್ಲಿದೆ. ಎಲ್ಲಾ ನೈಸರ್ಗಿಕ, ಔದ್ಯೋಗಿಕ, ಮಾನವ ಸಂಪನ್ಮೂಲಗಳು ಮತ್ತು ಎಲ್ಲಾ ಸೌಲಭ್ಯಗಳಿರುವ ರಾಜ್ಯ ನಮ್ಮದು. ಅದ್ರೆ ಯಾಕೆ ಉದ್ಯಮ, ಉದ್ದಿಮೆಗಾರಿಕೆಯ ವಿಷಯದಲ್ಲಿ ಹಿಂದಿದೆ? ಸ್ವಲ್ಪ ಮಟ್ಟಿಗೆ ಐ.ಟಿ/ಬಿ.ಟಿ ಅಂತೆಲ್ಲ ಪ್ರಗತಿ ಆಗಿದ್ರೂ, ಅದರಲ್ಲೂ ನಮ್ಮ ರಾಜ್ಯದ ಉದ್ಯಮಿಗಳ ಪಾಲು ಇಲ್ವೇ ಇಲ್ಲ ಅನ್ನುವಷ್ಟು ಕಮ್ಮಿ.

ಹಾಗಿದ್ರೆ, ಕನ್ನಡಿಗರ ಉದ್ಯಮಶೀಲತೆ ಬೆಳೆಸೋ ನಿಟ್ಟಿನಲ್ಲಿ ಸರ್ಕಾರ, ನಾಡಿನ ಚಿಂತಕರು ಹೀಗೆ ಯಾರೂ ಚಿಂತನೆನೇ ನಡೆಸಿಲ್ವಾ? ಕನ್ನಡಿಗರಲ್ಲಿ ಉದ್ದಿಮೆ, ಉದ್ಯಮಶೀಲತೆ ಬೆಳೆಸೋಕೆ ಸರ್ಕಾರ, ಶಿಕ್ಷಣ ವ್ಯವಸ್ಥೆ, ಉದ್ಯಮಿಗಳು, ನಾಡ ಪರ ಚಿಂತಕರು ಎಲ್ಲ ಸೇರಿ ತುರ್ತು ಕ್ರಮ ತೆಗೆದುಕೊಳ್ಳಬೇಕು. ಅದಿಲ್ಲ ಅಂದ್ರೆ, ಕರ್ನಾಟಕದ ಎಲ್ಲ ಸಂಪನ್ಮೂಲವನ್ನು ಕನ್ನಡಿಗರಲ್ಲದೇ ಇನ್ಯಾರೋ ಸೂರೆ ಹೊಡೆದು, ನಾವು ಅವರ ಅಡಿಯಾಳಾಗೇ ಜೀವನ ಪೂರ್ತಿ ಕೆಲಸ ಮಾಡಿಕೊಂಡು, ಕೊಡುವ ಪುಡಿಗಾಸಿನ ಸಂಬಳಕ್ಕೆ ತೃಪ್ತಿ ಪಟ್ಟುಕೊಂಡು ಇರೋದಾಗುತ್ತೆ. ಏನಂತೀರಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಮ್ಮ ವಿಶ್ಲೇಷಣೆ ಸರಿಯಾಗಿದೆ ಚೇತನ್.
ನಾನು ನೋಡಿದ ಹಾಗೆ,, ಸಾಕಷ್ಟು ಮೆಡಿಕಲ್ ಶಾಪ್ ಗಳು ಮಾರ್ವಾಡಿಗಳ ಕೈಲಿವೆ. ಬಟ್ಟೆ ಅಂಗಡಿ, ಗಿರವಿ ಅಂಗಡಿ, ಆಭರಣದ ಅಂಗಡಿ, ಪಾತ್ರೆ ಅಂಗಡಿ, ಎಲೆಕ್ಟ್ರಾನಿಕ್ ವಸ್ತುಗಳ ಅಂಗಡಿ,, ಇವೆಲ್ಲ ಇರೋದು ಮಾರ್ವಾಡಿಗಳ ಕೈಯಲ್ಲಿ. ನಮ್ಮ ಜನಕ್ಕೆ ಈ ತರಹದ ವಿಷಯಗಳಲ್ಲೆಲ್ಲ ಕೈ ಹಾಕಿ,, ದುಡ್ಡು ಮಾಡಬೇಕು ಅಂತಾ ಅನ್ನಿಸಿಯೇ ಇಲ್ಲ ಅನ್ನೋದು ಆಶ್ಚರ್ಯ !

ಶೋಭಾ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ..
ನಾನು ನನ್ನ relatives ಹಾಗೂ ಸ್ನೇಹಿತರಲ್ಲಿ ನೋಡಿದ್ದೀನಿ, ಯಾರೂ ರಿಸ್ಕ್ ತಗೊಳ್ಳೋಕೆ ರೆಡಿ ಇರಲ್ಲ.. ಇದಕ್ಕೆ ಕಾರಣ ನಮ್ಮಲ್ಲಿ ಉದ್ಯಮಶೀಲತೆಯ ಕೊರತೆಯೇ ಕಾರಣ ಅನ್ಸುತ್ತೆ, ನಿಮ್ಮ ಲೇಖನ ಓದಿದ ಮೇಲೆ..
ನಮಗೆ ಸಂಬಳ ಬರುವ ಯಾವುದಾದ್ರು ಉದ್ಯೋಗ ಆಯ್ತು ನಾವು ಅದರಲ್ಲೇ ತೃಪ್ತರಾಗಿ(?!!!) ಇದ್ದುಬಿಡ್ತೀವಿ..

-ವರುಣ್ ಭಟ್
http://varunbhat.name

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ್

ನಾವು ಕನ್ನಡಿಗರಲ್ಲವೋ ವಿಶಾ..........................................ಲ ಹೃದಯದವರು, ಬೇರೆಯವರು ಬಂದು ಆಕ್ರಮಿಸೋವರೆಗೆ ನಾವೆಲ್ಲಾ ಎಂದು ಹೀಗೆ ಸಿರಿಗನ್ನಡಂ ಗೆಲ್ಗೆ ಅಂತಿರ್ತೀವಿ, ಸಿರಿಗನ್ನಡಂ ಬಾಳ್ಗೆ ಅಂತಿರ್ತೀವಿ, ಅದು ನಮ್ಮ ಕನ್ನಡಿಗರಿಗಲ್ಲ, ಬೇರೆ ಭಾಷೆಯ ಜನ ಬಂದು ಸಿರಿಗನ್ನಡದಲ್ಲಿ ಗೆಲ್ಲಲಿ ಸಿರಿಗನ್ನಡದಲ್ಲಿ ಬಾಳಲಿ ಎಂಬಂತಾಗಿದೆ.

ಅಲ್ವಾ !!!!!!!!!!

ಯಾರು ಏನೆ ಹೇಳಿದರೂ ನಿನ್ನ ಮನಸ್ಸಿನಂತೆ ನಡೆ
ಅರವಿಂದ್
http://aravindnimmava.wordpress.com
http://abhimanihuduga.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಅದೆಲ್ಲ ನಮಗ್ಯಾಕೆ ಅನ್ನೋ ಉದಾಸೀನಭಾವವೋ ?
ಹೋಟೆಲ್ ಉದ್ಯಮದಲ್ಲಿ ಕರ್ನಾಟಕ ಕರಾವಳಿಯವರದ್ದು ಎತ್ತಿದ ಕೈ. ಬೆಂಗಳೂರಿನಲ್ಲೂ ಅವರೇ ಹೆಚ್ಚು.

ಬೆಂಗಳೂರಿಗೆ ಹೆಚ್ಚಾಗಿ ಕೊಳ್ಳೇಗಾಲ ಮತ್ತು ಮದ್ದೂರಿನಿಂದ ಎಳನೀರು ಸರಬರಾಜು ಆಗುತ್ತದೆ ಎಂದು ಕೇಳಿದ್ದೇನೆ. ಅಲ್ಲಿನ ಎಳನೀರು ತುಂಬಾ ರುಚಿಯಾಗಿರುತ್ತದೆ.

-- ನಂದಕುಮಾರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಅನಿಸಿಕೆ ಅರ್ಥವಾಗುವನ್ಥಾದ್ದೆ.
ನಿಮಗೆ ಗೊತ್ತಿಲ್ಲದೆ ಇರಬಹುದು, ಮಂಡ್ಯ ಸುತ್ತ ಮುತ್ತ ಬೆಳೆಯುವ ಅತ್ಯುತ್ತಮ ಎಳನೀರು ಮುಂಬಯಿಗೆ ಸರಬರಾಜು ಆಗುತ್ತೆ. ಯಾಕೆ ಅಂದ್ರೆ, ಅಲ್ಲಿ ಜನರು ಹೆಚ್ಚು ಕಾಸು ಕೊಡುತ್ತಾರೆ ಒಂದು ಎಳನೀರಿಗೆ.
ಮುಂಬೈ ಸೆಖೆಯಲ್ಲಿ, ಖರ್ಚಾಗುವ ಎಳನೀರು ಕೂಡ ಜಾಸ್ತಿ.
ಸರಬರಾಜು ಮತ್ತು ವ್ಯಾಪಾರ ಕನ್ನಡಿಗರದ್ದು. ಈಗ ಹೇಳಿ, ಬುದ್ಧಿವಂತ ಉದ್ದಿಮೆದಾರರು ಯಾರು?

ಕನ್ನಡಿಗರು ರಿಸ್ಕ್ ತಗೋಳಲ್ಲ ಅಂತ ಹೇಳುವವರು, ಇದನ್ನು ಗಮನಿಸಿ.
ಯಾರೂ ಕಾಣದ ಅಪಾರ್ಚುನಿಟಿ ಕಂಡು ಭಾರತದ ಅತ್ಯುತ್ತಮ ಉದ್ದಿಮೆ ಶುರು ಮಾಡಿದಾರೆ ಕನ್ನಡಿಗರು.
೧. ಇನ್ಫೋಸಿಸ್ - ನಾರಾಯಣ ಮೂರ್ತಿ
೨. ಕೆಫೆ ಕಾಫೀ ಡೇ - ಸಿದ್ಧಾರ್ಥ
೩. ಡೆಕ್ಕನ್ ಏರ್ - ಕ್ಯಾಪ್ಟನ್ ಗೋಪಿನಾಥ್
೪. ಎಂ ಟಿ ಆರ್ ಗ್ರೂಪ್
೫. ಏನ್ ಆರ್ ಗ್ರೂಪ್ - ಅಗರಬತ್ತಿ ಮತ್ತು ಮೆಡಿಕಲ್ ಟೆಕ್ನಾಲಜಿ
೬. ಯು ಬಿ ಗ್ರೂಪ್ - ಬ್ರೆವೆರಿ ಮತ್ತು ಏರ್ ಇಂಡಸ್ಟ್ರಿ
೭. ಕೆನರಾ, ಕಾರ್ಪೋರೇಶನ್, ಸಿಂಡಿಕೇಟ್, ಕರ್ನಾಟಕ ಬ್ಯಾಂಕ್ ಗಳು.
೮. ಮಣಿಪಾಲ್ ಗ್ರೂಪ್
ಹೀಗೆ ಇನ್ನೂ ಹತ್ತು ಹಲವು ಉದ್ದಿಮೆಗಳು ಇವೆ. ಈ ಎಲ್ಲಾ ಉದ್ದಿಮೆಗಳು, ಜಗತ್ತು ಬದಲಿಸುವಂಥಾ ಉದ್ದಿಮೆಗಳು.
ಕನ್ನಡಿಗರಲ್ಲಿ ಉದ್ದಿಮೆತನ ಇಲ್ಲದಿದ್ದರೆ, ನಮ್ಮಲ್ಲಿ ಈ ಮಟ್ಟದ ಉದ್ದಿಮೆಗಳು ಹೇಗೆ ಬರಲು ಸಾಧ್ಯ?
ಕನ್ನಡಿಗರು ಹೊಸತನಕ್ಕೆ ಬಹಳ ಬೇಗ ಹೊಂದಿಕೊಳ್ಳುತ್ತಾರೆ. ಹೊಸತನದಲ್ಲಿ ಮೇಲೆ ಬರಲು ಅವರಿಂದ ಮಾತ್ರ ಸಾಧ್ಯ.
ಮೆಡಿಕಲ್ ಶಾಪ್, ಆಭರಣ ಅಂಗಡಿ, ಸೀರೆ ಅಂಗಡಿ ಇಟ್ಟು ಬಿಡುಗಾಸು ಮಾಡುವ ಅಲ್ಪ ಬುದ್ಧಿಯ ಮನುಷ್ಯರಿಂದ ಇಂಥಹ ಜಗತ್ತು ಬದಲಿಸುವ ಕೆಲಸ ಮಾಡಲು ಸಾಧ್ಯವಾ? ನೀವೇ ಯೋಚಿಸಿ.
Kannadigas are meant for bigger things.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ಪ್ರಿಯಾಂಕ್,
ನಿಮ್ಮ ಕಾಳಜಿಗೆ ನನ್ನ ಅಭಿನಂದನೆಗಳು. ಮಂಡ್ಯದ ಎಳನೀರು ಮುಂಬಯಿಗೆ ಸರಬರಾಜಗುತ್ತೆ ಅನ್ನೋದು ಖುಷಿಯ ವಿಚಾರ. ಆದ್ರೆ ನಮ್ಮ ಬೆಂಗಳೂರಿನಲ್ಲೇ ಕಡಿಮೆ ಕರ್ಚಿನಲ್ಲಿ ಹೆಚ್ಚಿಗೆ ಲಾಭ ಮಾಡಿಕೊಳ್ಳ ಬಹುದಾಗಿತ್ತು ಅಂತ ಅನ್ನಿಸಲ್ವಾ? ಇಲ್ಲಿ ಲಾಭ ಮಾಡಿಕೊಂಡು ಅಲ್ಲಿಗೆ ಸರಬರಾಜು ಮಾಡಿದ್ರೆ ಇನ್ನು ಚೆನ್ನಾಗಿರುತ್ತಿತ್ತು.

ಇನ್ನು ಉದ್ದಿಮೆದಾರರ ವಿಷಯಕ್ಕೆ ಬರೋದಾದ್ರೆ ನೀವು ಉದಾಹರಿಸಿದ ಎಲ್ಲಾರು ಸೈ ಅನ್ನುವಂತಹ ಕೆಲಸ ಮಾಡಿದ್ದಾರೆ. ಹಾಗಂತ ನಮಗೆ ಒಬ್ಬ ನಾರಾಯಣ ಮೂರ್ತಿ, ಒಬ್ಬ ವಿಜಯ್ ಮಲ್ಯ, ಒಬ್ಬ ಕ್ಯಾಪ್ಟನ್ ಗೋಪಿನಾಥ್ ಸಾಕಾ? ೫.೫ ಕೋಟಿ ಕನ್ನಡಿಗರಿಗೆ ಇಷ್ಟು ಸಾಕಾ, ಅವರ ತಾಕತ್ತಿಗೆ ಇನ್ನು ಹೆಚ್ಚಿಗೆ ಮಾಡಿ ತೋರಿಸಬಹುದು ಅಂತ ಅನ್ನಿಸಲ್ವಾ ನಿಮಗೆ?
<ಮೆಡಿಕಲ್ ಶಾಪ್, ಆಭರಣ ಅಂಗಡಿ, ಸೀರೆ ಅಂಗಡಿ ಇಟ್ಟು ಬಿಡುಗಾಸು ಮಾಡುವ ಅಲ್ಪ ಬುದ್ಧಿಯ ಮನುಷ್ಯರಿಂದ ಇಂಥಹ ಜಗತ್ತು ಬದಲಿಸುವ ಕೆಲಸ ಮಾಡಲು ಸಾಧ್ಯವಾ? ನೀವೇ ಯೋಚಿಸಿ.
Kannadigas are meant for bigger things.>

ಅಲ್ಲಾ ಸರ್ ವ್ಯಾಪಾರದ ಮೂಲ ನಿಯಮವನ್ನೇ ಮರೆತಿದ್ದಿರಲ್ಲ ನೀವು? ಯಾವುದೇ ವ್ಯಕ್ತಿ ಆಗ್ಲಿ ಒಂದೇ ಸಾರಿ ಸಾವಿರಾರು ಕೋಟಿ ಸುರಿದು ವ್ಯಾಪಾರ ಶುರು ಮಾಡಲ್ಲ. ಇದೆ ಇನ್ಫೋಸಿಸ್ ಶುರುವಾದಾಗ ಅದರ ಮೂಲ ಬಂಡವಾಳ ೪೦ ಸಾವಿರ ರೂಪಾಯಿ. ವಿಜಯ ಸಂಕೇಶ್ವರ್ ಹತ್ರ ಇದ್ದಿದ್ದು ಒಂದು ಪ್ರಿಂಟಿಂಗ್ ಪ್ರೆಸ್. ಹಾಗಂತ ನಮ್ಮ ಹತ್ರ ಕೋಟ್ಯಾಂತರ ದುಡ್ಡು ಇಲ್ಲಾ ಅಂತ ಅವರು ಉದ್ಯಮ ಶೀಲತೆ ತೋರಿಸದೇ ಹೋಗಿದ್ರೆ ಯಾರು ಸಿಗ್ತಿರ್ಲಿಲ್ಲ. ಕೆನರಾ ಬ್ಯಾಂಕ್ ಕೂಡ ಇದಕ್ಕೆ ಹೊರತಾಗಿಲ್ಲ. ಇಂತ ಸಣ್ಣ ವಿಷಯಗಲ್ಲ ಉಪಯೋಗಿಸಿ ಕೊಳ್ಳೋಕೆ ತಿಳಿಯದೆ ಹೋದ್ರೆ ಅವನು ಎಂತಹ ಉದ್ಯಮಿ ಹೇಳಿ????

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪಟ್ಟಿಯಂತೆ:
೧. ಇನ್ಫೋಸಿಸ್ - ನಾರಾಯಣ ಮೂರ್ತಿ
೨. ಕೆಫೆ ಕಾಫೀ ಡೇ - ಸಿದ್ಧಾರ್ಥ
೩. ಡೆಕ್ಕನ್ ಏರ್ - ಕ್ಯಾಪ್ಟನ್ ಗೋಪಿನಾಥ್
೪. ಎಂ ಟಿ ಆರ್ ಗ್ರೂಪ್
೫. ಏನ್ ಆರ್ ಗ್ರೂಪ್ - ಅಗರಬತ್ತಿ ಮತ್ತು ಮೆಡಿಕಲ್ ಟೆಕ್ನಾಲಜಿ
೬. ಯು ಬಿ ಗ್ರೂಪ್ - ಬ್ರೆವೆರಿ ಮತ್ತು ಏರ್ ಇಂಡಸ್ಟ್ರಿ
೭. ಕೆನರಾ, ಕಾರ್ಪೋರೇಶನ್, ಸಿಂಡಿಕೇಟ್, ಕರ್ನಾಟಕ ಬ್ಯಾಂಕ್ ಗಳು.
೮. ಮಣಿಪಾಲ್ ಗ್ರೂಪ್

ಆದ್ರೆ ಇವ್ರಲ್ಲಿ ಕನ್ನಡದ ಜನರಿಗೆ ಮಾತ್ರ ಕೆಲ್ಸ ಕೊಟ್ಟಿರೋದು ಬಹುಶಃ ಎಂ ಟಿ ಆರ್ ಗ್ರೂಪ್ ಮಾತ್ರ ಅನ್ಸತ್ತೆ... ಮಿಕ್ಕೆಲ್ಲರೂ ಕರ್ನಾಟಕ್ಕಾಗಿ ವಿಷೇಶವಾಗಿ ಏನೂ ಮಾಡಿಲ್ಲ. ಕೆಫೆ ಕಾಫೀ ಡೇ ಯಲ್ಲಿ ಕನ್ನಡ ಸಿಕ್ಕೋದು ಬರಿ ಬೆಂಗ್ಳೂರಾಚೆ ಮಾತ್ರ. ಕೆನರಾ, ಕಾರ್ಪೋರೇಶನ್, ಸಿಂಡಿಕೇಟ್ ಇವೆಲ್ಲ ಹಿಂದಿಮಯವಾಗಿವೆ. ಎಂ ಟಿ ಆರ್ ಕನ್ನಡದವರೇ ಆದ್ರೂ, ಅವರ ಪ್ಯಾಕೆಟ್ ಗಳ ಮೇಲೆ ಇರೊ ಹೆಸ್ರುಗಳನ್ನ ಓದುದ್ರೆ ಇದು ತಮಿಳ್ ನಾಡುದೂ ಅಂತ ಅನ್ಸತ್ತೆ...
ನನ್ನ ಪ್ರಕಾರ, ಇಷ್ಟು ಬೆಳ್ದಿರೊ ಈ ಸಂಸ್ಥೆಗಳು ಕರ್ನಾಟಕದೊಂದಿಗೆ ತಮ್ಮನ್ನ ತಾವು ಗುರ್ತಿಸ್ಕೊಂಡಾಗ ಮಾತ್ರ ಇಲ್ಲಿನ ಜನಕ್ಕೆ ಉಪ್ಯೋಗ ಆಗತ್ತೆ ...........

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನ್ನಡಿಗರು ಎಚ್ಚೆತ್ತುಕೊಂಡರೆ ಅವರಿಗೆ ಎಲ್ಲವು ಸುಲಭ, ಕನ್ನಡಿಗರು ಎಚ್ಹ್ಚೆತುಕೊಳ್ಳುವಲ್ಲಿ ತುಂಬ ನಿಧಾನ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote]ನಿಮಗೆ ಒಂದು ಸಣ್ಣ ಉದಾಹರಣೆಯ ಮೂಲಕ ಇವತ್ತಿನ ಸ್ಥಿತಿಯನ್ನ ವಿವರಿಸುತ್ತೇನೆ. ನನ್ನ ಮನೆಯ ಹತ್ತಿರ ಒಂದು ದಿನಸಿ ಅಂಗಡಿ ಇದೆ. ನಮ್ಮ ಮನೆಗೆ ಎಲ್ಲಾ ಸಾಮಾನುಗಳನ್ನು ಅಲ್ಲಿಯೆ ತಗೆದುಕೊಳ್ಳುವುದು. ಅದರ ಮಾಲಿಕ ಒಬ್ಬ ಮಲೆಯಾಳಿ. ಮೊದಲಿಗೆ ಒಂದು ಸಣ್ಣ ಅಂಗಡಿಯಿಂದ ಶುರುಮಾಡಿದ ಅವನು ಇವತ್ತು ಒಂದು ಸೂಪರ್ ಮಾರ್ಕೆಟ್ ಶುರು ಮಾಡಿದ್ದಾನೆ.[/quote]

ಇದರಲ್ಲೆ ನೀವು ಹೇಳಿದ ಸಮಸ್ಯೆಗೆ ಮತ್ತು ನಾವೇಕೆ ಹೀಗೆ ಎಂಬುದಕ್ಕೆ ಉತ್ತರವಿದೆ. ತಪ್ಪು ನಮ್ಮಲ್ಲೆ ಇಟ್ಕೊಂಡು ಅವರಿವರನ್ನ ನಿಂದಿಸಿ ಅಥವ ಕರುಬಿ ಪ್ರಯೋಜನ ಇಲ್ಲ. ಆ ಮಲೆಯಾಳಿಯ ಬಳಿ ನೀವು ವ್ಯಾಪಾರ ನಡೆಸುವುದನ್ನು ನಿಲ್ಲಿಸಿದ್ದರೆ ಅವನು ಬೆಳೆಯಲು ಅವಕಾಶವಾಗುತ್ತಿರಲಿಲ್ಲ. ನಿಮಗೆ ಇದು ಹಿಪಾಕ್ರಸಿ ಅನ್ನಿಸಬಹುದು. ಆದರೂ ಪ್ರಯತ್ನ ಮಾಡಿದರೆ ಖಂಡಿತ ಸಫಲರಾಗ್ತೀವಿ. ಕೆಲವೊಮ್ಮೆ ಇದರಿಂದ ನಮ್ಗೆ ನಷ್ಟವೂ ಇದೆ ಲಾಭವೂ ಇದೆ. ಕೇವಲ ಸಣ್ಣ ಉಳಿತಾಯಕ್ಕೆ ಕನ್ನಡಿಗನ ಅಂಗಡಿಯಿಂದ ಖರೀದಿಸುವುದನು ಬಿಟ್ಟು ಮಲೆಯಾಳಿ ಮತ್ತು ಮಾರ್ವಾಡಿಗಳನ್ನು ಆಶ್ರಯಿಸುತ್ತೇವೆ. ಮರಳುಗೊಳಿಸುವ ಮಲೆಯಾಳಿಗಳ ಸೂಪರ್ ಬಜಾರ್ಗಳನ್ನು ಬಿಟ್ಟು ಕನ್ನಡಿಗರ ಅಂಗಡಿಯಲ್ಲೆ ಖರೀದಿಸಿ ಸ್ವಲ್ಪ ದೂರವಾದರೂ, ತುಟ್ಟಿ ಎನಿಸಿದರೂ ಪರವಾಗಿಲ್ಲ. ನಿಮಗೆಲ್ಲ ಈಗಾಗಲೆ ಮನಸ್ಸಿಗೆ ಬಂದಿರಬಹುದು ಇದೆಲ್ಲ ಹೇಳಲಿಕ್ಕಷ್ಟೆ ಸರಿ ಎಂದು, ಆದರೆ ನಾನಿದನ್ನು ಪ್ರತಿ ದಿನವೂ ಆಚರಿಸುತ್ತೇನೆ. ಕನ್ನಡಿಗರು ಇಲ್ಲದೆ ಇರುವ ಸಂಧರ್ಭಗಳಲ್ಲಷ್ಟೆ ಬೇರೆಯವರ ಬಳಿ ವಿಧಿಯೇ ಇಲ್ಲದೆ ಹೋಗಬೇಕಾದ ಪ್ರಸಂಗದಲ್ಲಿ ಮಾತ್ರ ಹೋಗುತ್ತೇನೆ. ನನ್ನ ಒಂದು ಅನುಭವ ಹೀಗಿದೆ ೨೦೦೩ ರಲ್ಲಿ S.P ರಸ್ತೆಯಲ್ಲಿ ಒಂದು ವಿದ್ಯುತ್ ಮೋಟಾರ್ ಖರೀದಿಸಬೇಕಿತ್ತು. ಮೊದಲು ಹುಡುಕಿದ್ದು ಕನ್ನಡಿಗರೆ ಮುಖ್ಯಸ್ಥರಾಗಿರುವ ಸಂಸ್ಥೆ ಸಿಗಲಿಲ್ಲ. ಕೊನೆಗೆ ಗುಣಮಟ್ಟವಿರುವ ಕಿರ್ಲೋಸ್ಕರ್ ತೆಗೆದುಕೊಳ್ಳಲು ನಿರ್ಧರಿಸಿದೆ. ೪-೫ ಅಂಗಡಿಗಳನ್ನು ಸುತ್ತಿದಾಗ ನನ್ನ ಗಮನಕೆ ಬಂದದ್ದು ಎಲ್ಲ ಅಂಗಡಿ ಮಾಲೀಕರು ಕನ್ನಡೇತರರು. ಬಸವೇಶ್ವರ ಎಲೆಕ್ಟ್ರಿಕಲ್ಸ್ ಎಂದಿದ್ದ ಅಂಗಡಿಗೆ ನುಗ್ಗಿದೆ. ಹೆಸರಿನಲ್ಲೆ ಕನ್ನಡ ಇದೆಯಲ್ಲ. ಅಲ್ಲಿ ವಿಚಾರಿಸಿದಾಗ ತಿಳಿದದ್ದು ಅವರೆ ಇಡಿ ಪ್ರದೇಶಕ್ಕೆ ಸಗಟು ಮಾರಾಟಗಾರರು ಮತ್ತು ಕನ್ನಡಿಗರು. ಅವರೊಡನೆ ನೇರವಾಗಿ ವಿಷಯ ಪ್ರಸ್ತಾಪಿಸಿದೆ. ನಾನು ಕನ್ನಡಿಗರ ಬಳಿಯೇ ಖರೀದಿಸುವ ನನ್ನ ನಿಯಮವನ್ನು ಹೇಳಿದಾಕ್ಷಣ ಆತ ಅತ್ಯಂತ ಸಂತೋಷದಿಂದ ಬೇರೆಲ್ಲ ಅಂಗಡಿಗಿಂತ (ಚೌಕಾಸಿ ಮಾಡಿದ ನಂತರದ ಬೆಲೆಗಿಂತ) ಸುಮಾರು ೩೦೦ ರೂ ಕಡಿಮೆಯಿತ್ತರು. ಈ ತೆರನಾದ ಅನುಭವಗಳು ನನ್ನ ಬಳಿ ಸಾಕಷ್ಟಿವೆ. ೪ ತಿಂಗಳ ಹಿಂದೆ ಶಿರಸ್ತ್ರಾಣ ಖರೀದಿಸುವಾಗಲಂತೂ ಅಂಗಡಿಯ ಮಾಲೀಕ ನೀವೆಷ್ಟಾದರು ಕೊಡಿ ಸಾರ್ ಎಂದು ಬಿಟ್ಟ. ಬರ್ಮ ಬಜಾರ್ ಹಾಂಗ್ಕಾಂಗ್ ಬಜಾರ್ಗಳು ಕೂಡ ಇದಕ್ಕೆ ಹೊರತಾಗಿಲ್ಲ. ಇದನ್ನು ನನ್ನ ಸಾಧನೆಯೆಂದು ಬಣ್ಣಿಸುತ್ತಿಲ್ಲ. ಮನಸ್ಸಿದ್ದರೆ ಮಾರ್ಗ. ನಮಗೆ ಸಂಕಲ್ಪವಿಲ್ಲ. ಬರಿ ಮಾತಿನಲ್ಲಿ ಮನೆ ಕಟ್ಟುತ್ತೇವೆ. ಕಾರ್ಯರೂಪಕ್ಕಿಳಿಸಲು ಸಾಧ್ಯವಿಲ್ಲ ಎಂದು ಮೊದಲೆ ನಿರ್ಧರಿಸಿಬಿಡುತ್ತೇವೆ. ಕನ್ನಡಿಗರೆ ನನ್ನನ್ನು ಹುಚ್ಚನಂತೆ ಕಂಡದ್ದಿದ್ದೆ. ನನ್ನ ಮಾರ್ಗ ಮತ್ತು ಮಾಡುತ್ತಿರುವ ಕೆಲಸ ಸರಿಯಾಗಿದೆಯೆಂದರೆ ಬೇರೆಯವರು ಏನಾದರು ತಿಳಿದುಕೊಳ್ಳಲಿ ಎಂದು ಕಾರ್ಯರೂಪಕ್ಕೆ ತಂದು ನೋಡಿ. ನನಗೆ ಸ್ಪೂರ್ತಿಯಾದವರು ಖರ್ಚು ಹೆಚ್ಚಾದರೂ ಪರವಾಗಿಲ್ಲವೆಂದೆಣಿಸಿ ಕನ್ನಡಿಗ ಕೂಲಿಯಾಳುಗಳು ಕನ್ನಡಿಗ ಮರಗೆಲಸದವ ಎಲ್ಲವೂ ಕನ್ನಡಿಗರಿಗಷ್ಟೆ (ಕೆಲವೊಮ್ಮೆ ನಷ್ಟವಾದರೂ ಕೂಡ) ಎಂಬ ಒಂದೆ ಧ್ಯೇಯದಿಂದ ಮನೆಕಟ್ಟಿಸಿದ ನನ್ನ ಸ್ನೇಹಿತ. ಇದಕ್ಕಾಗಿ ಆತ ಕನಿಷ್ಠ ೧.೫ ಲಕ್ಷ ಹೆಚ್ಚುವರಿ ಭರಿಸಬೇಕಾಯಿತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಕನ್ನಡ ಪ್ರೀತಿಗೆ ನನ್ನ ಅನಂತ ವಂದನೆಗಳು,
ನೀವು ಹೇಳೋದು ನಿಜ ಸರ್. ನಾನ್ನಿರುವ ಪ್ರದೇಶದಲ್ಲಿ ಕನ್ನಡೆತರರೆ ಹೆಚ್ಚು, ಹಾಗಾಗಿ ಅಲ್ಲಿ ಇರುವ ಅಂಗಡಿಗಳೆಲ್ಲ ಕನ್ನಡ ಬಳಸೋದು ಕಡಿಮೆ. ಹುಡುಕುತ್ತಾ ಹೊರಟರೆ ಒಂದು ಕನ್ನಡಿಗರ ಮಾಲಿಕತ್ವದ ಅಂಗಡಿಗಳು ಸಿಗುವುದಿಲ್ಲ. ನಾನು ಆ ವ್ಯಕ್ತಿಯ ಅಂಗಡಿಗೆ ಹೋಗುವುದಕ್ಕೆ ಕಾರಣ ಅವನು ಕನ್ನಡದಲ್ಲಿ ವ್ಯವಹರಿಸುತ್ತಾನೆ ಅನ್ನೋದಕ್ಕೆ.

ನಿಮ್ಮ ಮಾತು ನಿಜ ಸರ್, ನೀವು ಹೇಳಿದ ಹಾಗೆ ಕನ್ನಡೇತರರ ಅಂಗಡಿಗಳ ಬಳಕೆ ಕಡಿಮೆ ಆದಾಗ ಅವರ ಲಾಭ ಕಡಿಮೆ ಆಗುವುದು ಖಂಡಿತ. ಆದ್ರೆ ಅಲ್ಲಿರುವ ಅವಕಾಶಗಳನ್ನ ಬಳಸಿಕೊಳ್ಳುವ ಗುಣ ನಮ್ಮ ಕನ್ನಡಿಗರಲ್ಲಿ ಬರಬೇಕು ಅನ್ನೋದೇ ಈ ಲೇಖನದ ಉದ್ದೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನ್ನಡ ಮಾಲೀಕರ ಅಂಗಡಿಗಳ ಡೈರೆಕ್ಟರಿಯೇನಾದರೂ ಇದೆಯೆ? ಹೀಗೊಂದು ವೆಬ್ಸೈಟ್ ಅಥವ ಪ್ರಿಂಟ್ ಮಾಡಿರುವ ಡೈರೆಕ್ಟರಿ ಮಾಡಿದರೆ ಕನ್ನಡಿಗರು ಕನ್ನಡಿಗರ ಬಳಿ ಮಾತ್ರ ವ್ಯವಹರಿಸೋದಕ್ಕೆ ಸುಲಭವಾಗುತ್ತೆ. ಕ.ರ.ವೆ.ದವರಿಗೆ ಹೇಳಿದರೆ ಚೆನ್ನ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಂದು ಉತ್ತಮ ಬರಹ. ಖಂಡಿತ ಇದರಿಂದ ಕನ್ನಡಿಗರು ಬಹಳಷ್ಟು ಕಲಿಯೋದ್ ಇದೆ. ಅವರಲ್ಲಿ ಇರೋ ಒಗಟ್ಟು ನಮಗಿನ್ನು ಬಂದಿಲ್ಲ. ಅದು ಯಾವತ್ತು ಬರುತ್ತೋ ಅಂದು ಕನ್ನಡಿಗರು ಎಚ್ಚೆತ್ತು ಕೊಂಡಿದ್ದಾರೆ ಎಂದರ್ಥ..ಬರದಿದ್ದರೆ??

ನಿಮ್ಮ ಸುನಿಲ್ ಮಲ್ಲೇನಹಳ್ಳಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದೇ ರೀತಿ ಮೈಸೂರಿನಲ್ಲಿ ಕೈಯಂತ್ರ ಬಳಸಿ ಮೂಸಂಬಿ ಜ್ಯೂಸ್ ಮಾಡುವವರ ಜಾಲ ಕೂಡ ಬೆಳೆದಿದೆ. ಅವರ್ಯಾರೂ ಕನ್ನಡಿಗರು ಅಲ್ಲ.

ನಿಮ್ಮವನೇ,
ಅರವಿಂದ | Aravinda
http://aravindavk.in

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<ಹಾಗಿದ್ರೆ, ಕನ್ನಡಿಗರ ಉದ್ಯಮಶೀಲತೆ ಬೆಳೆಸೋ ನಿಟ್ಟಿನಲ್ಲಿ ಸರ್ಕಾರ, ನಾಡಿನ ಚಿಂತಕರು ಹೀಗೆ ಯಾರೂ ಚಿಂತನೆನೇ ನಡೆಸಿಲ್ವಾ?>

ನಾಡಿನ ಚಿ೦ತಕರೆಲ್ಲ ಒಟ್ಟುಗೂಡಿ ಕೆಲಸ ಮಾಡೋ ಸಮಯ ಈಗ ಒದಗಿ ಬ೦ದಿದೆ. ವೇದಿಕೆ ಆಯೋಜಿಸಿರುವ ಸಮಾವೇಷದಲ್ಲಿ ಇವೆಲ್ಲದರ ಬಗ್ಗೆ ಚರ್ಚೆ ಆಗುವುದು ಖ೦ಡಿತ.

ನನ್ನಿಯೊ೦ದಿಗೆ,
ಕಿಶೋರ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.