ಮಾಮರವೂ ಇಲ್ಲ, ಕೋಗಿಲೆಯೂ ಇಲ್ಲ

4.714285

ಹಣ್ಣುಗಳ ರಾಜ ಮತ್ತೆ ಬಂದಿದ್ದಾನೆ. ಬೆಂಗಳೂರಿನ ಬೀದಿಬೀದಿಗಳಲ್ಲಿ ಮಾವಿನಹಣ್ಣಿನದೇ ಪರಿಮಳ.

ಹಣ್ಣಿನ ಅಂಗಡಿಯ ಮುಂದೆ ನಿಂತರೆ ಕೊಪ್ಪಳ ಜಿಲ್ಲೆ ಅಳವಂಡಿಯ ನಮ್ಮ ಹೊಲದ ನೆನಪಾಗುತ್ತದೆ. ಇಪ್ಪತ್ತೈದು ವರ್ಷಗಳ ಹಿಂದೆ ನಮ್ಮ ಹೊಲದಲ್ಲಿ ಮೂರು ಭರ್ಜರಿ ಮಾವಿನ ಮರಗಳಿದ್ದವು. ಒಂದು ತುಂಬ ಹಳೆಯದು, ಒಂದು ಮಧ್ಯಮ ಹಾಗೂ ಇನ್ನೊಂದು ಸಣ್ಣ ವಯಸ್ಸಿನ ಮರ.

ದೊಡ್ಡ ಮರದಲ್ಲಿ ವರ್ಷಕ್ಕೆ ಹನ್ನೆರಡು ಸಾವಿರಕ್ಕಿಂತ ಹೆಚ್ಚು ಕಾಯಿಗಳು ಬರುತ್ತಿದ್ದವು. ಮಧ್ಯಮ ವಯಸ್ಸಿನ ಮರದಲ್ಲಿ ಏಳೆಂಟು ಸಾವಿರ ಹಾಗೂ ಚಿಕ್ಕ ಮರದಲ್ಲಿ ನಾಲ್ಕೈದು ಸಾವಿರ.

ಬೇಸಿಗೆ ರಜೆ ಬರುತ್ತಲೇ ಮನೆಯಲ್ಲಿ ಹೇಳದಿದ್ದರೂ ಮಾವಿನ ಮರದ ಹೊಲಗಳತ್ತ ಪೇರಿ ಕೀಳುತ್ತಿದ್ದೆವು. ನಮ್ಮದೇ ಹೊಲ, ನಮ್ಮವೇ ಮರ, ಎಷ್ಟು ಬೇಕಾದರೂ ಹಣ್ಣು ತಿನ್ನಬಹುದು. ಒಂದೇ ನಿರ್ಬಂಧನೆ ಎಂದರೆ, ಮರಗಳತ್ತ ಕಲ್ಲು ಬೀರಬಾರದು.

ಮರ ಕಾಯಲು ನೇಮಿಸಿರುತ್ತಿದ್ದ ವೃದ್ಧ ಜೊತೆಗೆ ತನ್ನ ಮಗನನ್ನೂ ಕರೆತರುತ್ತಿದ್ದ. ಮುದುಕ ನೆರಳಲ್ಲಿ ಎಲೆಯಡಿಕೆ ಹಾಕಿಕೊಂಡು ಕೂತರೆ, ಮಗ ಮರ ಏರಿ ಗಿಣಿ ಕಚ್ಚಿದ ಹಣ್ಣುಗಳನ್ನು ಹುಡುಕುತ್ತಿದ್ದ. ನಾವು ಮರದ ಕೆಳಗೆ ತಲೆ ಎತ್ತಿಕೊಂಡು ಓಡಾಡುತ್ತ, ಆತ ಕೊಂಬೆಯಿಂದ ಕೊಂಬೆಗೆ ಸಾಗುವುದನ್ನೇ ನೋಡುತ್ತಿದ್ದೆವು. ’ಅಗೋ ಅಲ್ಲೊಂದಿದೆ, ಕೆಂಪಾಗಿದೆ, ಅದನ್ನು ಕಿತ್ತುಕೊಡೋ’ ಎಂದು ಗೋಗರೆಯುತ್ತ ಮಧ್ಯಾಹ್ನದವರೆಗೆ ಹೊಲದಲ್ಲೇ ಕಳೆಯುತ್ತಿದ್ದೆವು.

ಸಾಕಷ್ಟು ಹಣ್ಣುಗಳನ್ನು ತಿಂದು, ಮನೆಗೆಂದು ಸ್ವಲ್ಪ ಎತ್ತಿಟ್ಟುಕೊಂಡು ಊಟದ ಹೊತ್ತಿಗೆ ಊರು ಸೇರುತ್ತಿದ್ದೆವು. ಹುಳಿ-ಸಿಹಿ ಹಣ್ಣುಗಳ ಭೋಜನ ಸವಿದವರಿಗೆ ಮನೆಯ ಊಟ ಹಿಡಿಸುವುದಾದರೂ ಹೇಗೆ?

ಈಗ ಬೆಂಗಳೂರಿನ ಹಣ್ಣಿನ ಅಂಗಡಿಗಳ ಮುಂದೆ ನಿಂತರೆ, ಮಾವಿನ ವಾಸನೆ ಊರನ್ನು ನೆನಪಿಸುತ್ತದೆ. ಮಾವಿನ ಹಣ್ಣಿನ ಸೀಸನ್‌ನಲ್ಲಿ ನೂರಾರು ಹಣ್ಣುಗಳನ್ನು ಒಬ್ಬನೇ ತಿನ್ನುತ್ತಿದ್ದ ನನಗೆ ಕೆಜಿ ಲೆಕ್ಕದಲ್ಲಿ ಹಣ್ಣು ತರುವಾಗ ಮನಸ್ಸಿಗೆ ಎಂಥದೋ ಹಳಹಳಿ. ಆಗ ಊರು ನೆನಪಾಗುತ್ತದೆ. ಹೊಲ ನೆನಪಾಗುತ್ತದೆ. ಮಾವಿನ ಮರಗಳು ನೆನಪಾಗುತ್ತವೆ. ಘೋರ ಬಿಸಿಲಿನ ಮಧ್ಯೆಯೂ ಮರದ ಕೆಳಗೆ ತಂಪಿರುತ್ತಿತ್ತು. ಕೋಗಿಲೆಗಳು ಕೂಗುತ್ತಿದ್ದವು. ಮರದ ಕೊಂಬೆಗಳಲ್ಲಿ ಅದೃಶ್ಯನಾಗಿರುತ್ತಿದ್ದ ಆಳು ಎಸೆಯುತ್ತಿದ್ದ ಹಣ್ಣುಗಳು ಅಂತರಿಕ್ಷದಿಂದ ದೇವತೆಗಳು ಪ್ರಸಾದಿಸಿದ ಅಮೂಲ್ಯ ಫಲದಂತೆ ಭಾಸವಾಗುತ್ತಿದ್ದ ನೆನಪು ಒತ್ತರಿಸುತ್ತದೆ.

ನಮ್ಮ ಓದಿಗೆಂದು ಅಪ್ಪ ಮರಗಳನ್ನು ಮಾರಿಬಿಟ್ಟ. ಕೊಂಡವರು ಅವನ್ನು ಕಡಿದು ಸಾ ಮಿಲ್‌ಗಳಿಗೆ ಹೇರಿಕೊಂಡು ಹೋದರು. ನಾವು ನೌಕರಿ ಹುಡುಕಿಕೊಂಡು ಊರು ಬಿಟ್ಟೆವು. ಬದುಕು ಎಲ್ಲೆಲ್ಲಿಗೋ ಕರೆದುಕೊಂಡು ಬಂದಿತು.

ಈಗ ಮಾವಿನ ಹಣ್ಣುಗಳು ಇವೆ. ಆದರೆ, ಮರವಿಲ್ಲ, ಕೋಗಿಲೆಯಿಲ್ಲ. ಉಳಿದಿರುವುದು ಸುಂದರ ನೆನಪುಗಳು ಮಾತ್ರ.

- ಚಾಮರಾಜ ಸವಡಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (7 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಆದರೆ ಒಂದು ಮಾತು. ಆ ಮರಗಳಿ೦ದ ಬಿದ್ದ ಹಣ್ಣುಗಳನ್ನು ಹೆಕ್ಕಿ ತ್ತಿಂದಾಗ ಸಿಕ್ಕ ರುಚಿ, ಹಣ್ಣಿನಂಗಡಿಯಿಂದ ಕೆ.ಜಿ. ಲೆಕ್ಕದಲ್ಲಿ ತಂದ ಹಣ್ಣುಗಳಿಗೆ ಎಲ್ಲಿಂದ ಬರಬೇಕು ? ಆ ಮಜವೇ ಬೇರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕರೆಕ್ಟ್ :). ನಮ್ಮೂರಲ್ಲಿ ಈಗಲೂ ಸುಮಾರು ಮರಗಳಿವೆ. ರತ್ನಗಿರಿ ಮಾವು ಸಕ್ಕತ್ ರುಚಿ ಆದರೆ ತುಂಬಾ ಕಾಸ್ಲಿ. ಕರಾವಳಿಯಲ್ಲಿ ಫೆಬ್ರವರಿಯಲ್ಲಿ ಮಾವು ಬಂದಿತ್ತು. ತುಂಬಾ ರುಚಿಯಾಗಿತ್ತು. ನೀರು ದೋಸೆ ಜೊತೆ ಮಾವಿನ ರಸಾಯನ ಮಾಡಿದ್ದರು ಅಮ್ಮ. ಆಹಾ ಸಕ್ಕತ್ ರುಚಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗೆ ಮಾವಿನ ರಸಾಯನಕ್ಕಿಂತ ಮಾವೇ ರುಚಿ!
ಬರಹಕ್ಕೆ ನೀಡಿದ ರೇಟಿಂಗ್: *****

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗೆ ಎರಡೂ :). ಊರಿನಲ್ಲಿ ಬಿಟ್ಟಿ ಮಾವಿನಹಣ್ಣು ಸಿಗುತ್ತದೆ. ಅದಿಕ್ಕೆ ಅಮ್ಮ ರಸಾಯನ ಆಗಾಗ ಮಾಡುತ್ತಾರೆ. ತೆಂಗಿನಕಾಯಿ ಹಾಲು, ಬೆಲ್ಲ ಹಾಕಿದರೇನೆ ಚೆನ್ನ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೇ ನೆನಪನ್ನು ಹಂಚಿಕೊಂಡಿದ್ದೀರಿ ಚಾಮರಾಜರೇ..

ಗಾಂಧಿ ಬಜಾರ್ ಫುಟ್ ಪಾತಲ್ಲಿ ನೆಡ್ಕೊಂಡ್ ಹೋದ್ರೆ ಇವುಗಳದ್ದೇ ಗಮ
ನಮ್ಮ ಮನೆ ಬಳಿ ಕೂಡ ಒಂದೊಳ್ಳೆ ಮಾವಿನ ಮರ ಇತ್ತು, ಮನೆ ಪಂಚಾಗ ಹಾಳಾಗ್ತಾ ಇದೆ ಅಂತ ೨ ವರ್ಷದ ಹಿಂದೆ ಕಡಿದು ಹಾಕಿದ್ರು :(
ನಾವು ತಿಂದು ಕೇರಿ ಮನೆಯವರು ತಿಂದು, ಅಳಿಲು, ಕಾಗೆಗಳೂ ತಿಂದ್ರೂ ಮಿಕ್ಕಿ ಉಳಿಯುವಷ್ಟು ಹಣ್ಣುಗಳಾಗ್ತಾ ಇದ್ವು. ನನಗೂ ಪೇಟೆಯಿಂದ ಹಣ್ಣು ತಂದು ಹೆಚ್ಚಿ ಹೋಳನ್ನ ಪಾಲು ಮಾಡಿ ತಿನ್ನೋದು ಅಂದ್ರೆ ತೃಪ್ತಿ ಇಲ್ಲ.

ಮಾವಿನ ಹಣ್ಣು ಹಾಗೆ ಹೆಚ್ಚದೆ ತಿನ್ಬೇಕು, ಅದೂ ಗೊರಟನ್ನು ಚೀಪ್ತ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಮಾವಿನ ಹಣ್ಣು ಹಾಗೆ ಹೆಚ್ಚದೆ ತಿನ್ಬೇಕು, ಅದೂ ಗೊರಟನ್ನು ಚೀಪ್ತ.
ಆಹಾ! ಸಕ್ಕತ್ ಆಗಿರುತ್ತೆ.

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೆನಪುಗಳೇ ಹಾಗೆ ಪಾಲಚಂದ್ರ. ಹುಳಿ ಮಾವಿನ ಕಾಯಿಗೆ ಉಪ್ಪು ಸವರಿ ಕಚ್ಚಿದಂತೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.