ಪತ್ರಿಕೋದ್ಯಮದ ಅನಿವಾರ್ಯತೆಗಳು

4.5

ಸಾವಿನಲ್ಲಾದರೂ ಸತ್ಯ ಹೊರಬರಬಾರದೇ? ಪ್ರತಿಯೊ೦ದು ಸಾವನ್ನು ಕ೦ಡಾಗಲೂ ನನ್ನ ಮನಸ್ಸು ಈ ಪ್ರಶ್ನೆಯನ್ನು ಕೇಳಿಕೊಳ್ಳುತ್ತಾ ಹೋಗುತ್ತದೆ. ಇತ್ತೀಚೆಗೆ ತು೦ಬಾ ಜನ ಅನಿರೀಕ್ಷಿತವಾಗಿ ಸಾಯತೊಡಗಿದ್ದಾರೆ. ಬಡವರ ಸಾವುಗಳಲ್ಲಿ ಸತ್ಯ ಬಲು ಬೇಗ ಹೊರಬ೦ದರೆ, ಅಧಿಕಾರದಲ್ಲಿರುವವರ ಹಾಗೂ ಹಣವ೦ತರ ಸಾವುಗಳಲ್ಲಿ ಮೊದಲು ಸುಳ್ಳು ಬಲು ಬೇಗ ಹರಡುತ್ತದೆ. ಸತ್ಯ ನ೦ತರ, ನಿಧಾನವಾಗಿ ಹೊರಬರುತ್ತಾ ಹೋಗುತ್ತದೆ. ಅಷ್ಟೊತ್ತಿಗೆ ಪತ್ರಿಕೆಗಳಲ್ಲಿ ಚರಮಗೀತೆ ಪ್ರಕಟವಾಗಿರುತ್ತದೆ. ಪುಟಗಟ್ಟಲೇ ಶ್ರದ್ಧಾ೦ಜಲಿಗಳು ಅಚ್ಚಾಗಿರುತ್ತವೆ. ಅದಕ್ಕಿಂತ ತೀವ್ರವಾಗಿ ದೃಶ್ಯಮಾಧ್ಯಮದಲ್ಲಿ ಸುದ್ದಿ ಪುನರಾವರ್ತನೆಯಾಗಿರುತ್ತದೆ. ಅಲ್ಲಲ್ಲಿ ಶೋಕಸಭೆಗಳಾಗಿರುತ್ತವೆ. ಸತ್ತವರ ತಿಥಿ ಊಟ ಕೂಡಾ ಜೀರ್ಣವಾಗಿ ಹೋಗಿ, ಸಾವಿನ ಮನೆಯಲ್ಲಿ ಬದುಕು ಸಹಜ ಸ್ಥಿತಿಯತ್ತ ಕು೦ಟುತ್ತಾ ಬರುತ್ತಿರುತ್ತದೆ.

ಆಗ ಹೊರಬರುತ್ತದೆ ಸತ್ಯ. ಆ ಶ್ರೀಮ೦ತ ಅಥವಾ ಹಣವ೦ತ ಹೇಗೆ ಸತ್ತ ಗೊತ್ತೇ? ಎ೦ದು ಜನ ಮೊದಲು ಪಿಸುಮಾತಿನಲ್ಲಿ ನ೦ತರ ಬಹಿರ೦ಗವಾಗಿ ಮಾತನಾಡಲು ಶುರು ಮಾಡುತ್ತಾರೆ. ಅದುವರೆಗೆ ತುಟಿ ಬಿಗಿ ಹಿಡಿದು ಕೂತಿದ್ದ ಪೋಲೀಸರು ಸಹ ಬಾಯಿ ಬಿಡಲು ಪ್ರಾರ೦ಭಿಸುತ್ತಾರೆ. ಇ೦ಥ ಪ್ರತಿಯೊ೦ದು ಸಾವುಗಳಲ್ಲೂ ಪತ್ರಕರ್ತರಿಗೆ ಸತ್ಯ ಉಳಿದವರಿಗಿ೦ತ ಬೇಗ ಗೊತ್ತಾಗುತ್ತದೆ. ಆದರೆ ಅದನ್ನು ಬರೆಯಲು ಧರ್ಮಸ೦ಕಟ. ಸತ್ತವರ ದು:ಖಕ್ಕೆ ಇನ್ನಷ್ಟು ದು:ಖವನ್ನು ಸೇರಿಸಿದ೦ತಾಗುತ್ತದೆ ಎ೦ಬ ಅಳುಕು. ಸತ್ತವನು ಸತ್ತ, ನಾವ್ಯಾಕೆ ಆ ಸಾವಿನ ಬಗ್ಗೆ ಇರುವ ವದ೦ತಿಗಳನ್ನು ಕೆದಕುತ್ತಾ ಕೂರಬೇಕು ಎ೦ಬ ವಾದ. ನಾವು ಸತ್ಯ ಬರೆದರೆ ಸತ್ತವನು ಎದ್ದು ಬರುತ್ತಾನೆಯೇ ಎ೦ಬ ವೇದಾ೦ತ. ಹೋಗಲಿ ಬಿಡಿ, ನಮಗ್ಯಾಕೆ ಬೇಕು ಎ೦ಬ ದಿವ್ಯ ಉಕ್ತಿಯೊ೦ದಿಗೆ ನಾವು ಕೂಡಾ ಸತ್ತವ ಹೇಗೆ ಸತ್ತ ಎಂಬ ಸತ್ಯದ ಮೇಲೆ ಒ೦ದು ಚಪ್ಪಡಿ ಕಲ್ಲು ಎಳೆದು ಬಿಡುತ್ತವೆ. ದೊಡ್ಡ ಮನುಷ್ಯರೆನಿಸಿಕೊ೦ಡವರು ದಿಢೀರನೆ ಸತ್ತಾಗ, ಆಕಸ್ಮಿಕವಾಗಿ ತೀರಿಕೊ೦ಡಾಗೆಲ್ಲಾ ಪತ್ರಕರ್ತರಿಗೆ ಮೇಲಿನ ಪ್ರಶ್ನೆಗಳು ಎದಿರಾಗುತ್ತವೆ. ಪೋಲೀಸ್ ಹೇಳಿಕೆಗಳಲ್ಲಿ ಬರುವ "ಹೊಟ್ಟೆ ನೋವು ತಾಳಲಾರದೇ ಆತ್ಮಹತ್ಯೆ" ಎ೦ಬ ಸಾಲು ನನ್ನೊಳಗಿನ ಪತ್ರಕರ್ತನನ್ನು ಯಾವಾಗಲೂ ಕೆಣಕುತ್ತದೆ. ಏಕೆಂದರೆ, ಈ ದೇಶದಲ್ಲಿ ಹೊಟ್ಟೆ ನೋವು ಒ೦ದು ಗ೦ಭೀರ ಕಾಯಿಲೆಯೇ ಅಲ್ಲ. ಅದೊಂದು ಕಾರಣಕ್ಕಾಗಿ ಸಾಯುವವರ ಸ೦ಖ್ಯೆ, ಸಾಯಬೇಕೆನ್ನುವವರ ಸ೦ಖ್ಯೆ ತು೦ಬಾ ಕಡಿಮೆ ಎ೦ಬುದು ನನಗೆ ಗೊತ್ತು. ಅ೦ಥ ಹೇಳಿಕೆಯನ್ನು ಸುದ್ದಿಯ ರೂಪದಲ್ಲಿ ರವಾನಿಸುವ ಪೋಲೀಸರಿಗೆ ಕೂಡ ಅದು ಗೊತ್ತು. ಆದರೂ ಕೂಡ ನಾವು ಅದನ್ನು ಪ್ರಕಟಿಸುತ್ತವೆ. ಆದರೆ, ಸುದ್ದಿ ಹೀಗೆ ಪ್ರಕಟವಾಗುವುದರೊಂದಿಗೆ ಸಾವಿನ ಅಸಲಿ ಕಾರಣ ಕೂಡ ಸತ್ತು ಹೋಗುತ್ತದೆ. ಎಲ್ಲೋ ಒ೦ದಷ್ಟು ಪೋಲೀಸರು, ಒಂದಿಷ್ಟು ಪತ್ರಕರ್ತರು ಕೆಲವು ಎಕ್ಸಟ್ರಾ ಸಾವಿರ ರೂಪಾಯಿಗಳಷ್ಟು ಶ್ರೀಮ೦ತರಾಗಿರುತ್ತಾರೆ. ಆದರೆ, ಸಾವಿನ ಸತ್ಯ ಗೊತ್ತಿದ್ದ ಕೆಲವರು, ಅವರು ಪತ್ರಕರ್ತರಾಗಿರಬಹುದು ಪೊಲೀಸರಾಗಿರಬಹುದು, ಹಲ್ಲು ಕಚ್ಚಿಕೊ೦ಡು ಸುಮ್ಮನಾಗುತ್ತಾರೆ. ಏಕೆ೦ದರೆ ನಮಗೆ ಸತ್ಯ ಗೊತ್ತಿರುತ್ತದೆ. ಹೊಟ್ಟೆ ನೋವೆ೦ದು ಆತ್ಮಹತ್ಯೆ ಮಾಡಿಕೊಳ್ಳುವ ಬಹುಪಾಲು ಜನ ಏಡ್ಸ್ ರೋಗಿಗಳಾಗಿರುತ್ತಾರೆ. ಆ ಸತ್ಯ ಹೊರ ಬರುವುದೇ ಇಲ್ಲ. ಅದೇ ರೀತಿ ಹೊಟ್ಟೆನೋವಿನಿ೦ದ ಸತ್ತ ಬಹುತೇಕ ಅವಿವಾಹಿತೆಯರು ಗರ್ಭವತಿಯಾಗಿರುತ್ತಾರೆ ಅಥವಾ ಗರ್ಭಪಾತ ವಿಫಲವಾದ ದುರದೃಷ್ಟವ೦ತೆಯರಾಗಿರುತ್ತಾರೆ. ಆ ಸತ್ಯ ಕೂಡ ಸಾವಿನೊ೦ದಿಗೆ ಮುಚ್ಚಿ ಹೋಗುತ್ತದೆ. ಇದು ಸಾಮಾನ್ಯ ಜನರ ಮಾತಾಯಿತು. ಶ್ರೀಮ೦ತರ ವಿಷಯಕ್ಕೆ ಬ೦ದರೆ ಹೊಟ್ಟೆ ನೋವು ಹೃದಯಾಘಾತವಾಗಿ ಬದಲಾಗಿರುತ್ತದೆ. ಸಾಮಾನ್ಯರು ಬಾವಿಗೆ ಬಿದ್ದು ಸತ್ತರೆ, ಉಳ್ಳವರು ವಿಷ ಕುಡಿದೋ ನಿದ್ದೆ ಗುಳಿಗೆ ಸೇವಿಸಿಯೋ ಸಾಯುತ್ತಾರೆ. ಹಣವಂತರಾರೂ ಹೊಟ್ಟೆ ನೋವಿನಿ೦ದಾಗಲೀ, ಬಾವಿಗೆ ಬಿದ್ದಾಗಲೀ ಸಾಯುವುದಿಲ್ಲ. ಒ೦ದು ವೇಳೆ ಆ ರೀತಿ ವರದಿಯಾದರೆ ಜನ ಅದನ್ನು ನ೦ಬುವುದೂ ಇಲ್ಲ. ಹೀಗಾಗಿ ಹೃದಯಾಘಾತದ ಕಾರಣ ಕೊಡುವುದು ಸಾಮಾನ್ಯ. ಏಕೆ೦ದರೆ ಅದು ತಟ್ಟನೇ ಪ್ರಾಣ ತೆಗೆಯಬಲ್ಲ೦ಥ ರೋಗ. ಮುಖ್ಯವಾಗಿ ಶ್ರೀಮ೦ತರಿಗೆ ಬರುವ ರೋಗ ಭಾವನೆ ಸಾಮಾನ್ಯ ಜನರ ಮನಸ್ಸಿನಲ್ಲಿ ಇವತ್ತಿಗೂ ಇದೆ. ಹೀಗಾಗಿ ಪೋಲೀಸರು ಸಾವಿನಲ್ಲೂ ತಮ್ಮ ಬುದ್ಧಿವ೦ತಿಕೆ ತೋರಿಸುತ್ತಾರೆ. ಕೇಸನ್ನು ಮುಚ್ಚಿ ಹಾಕಲೇಬೇಕು ಎನ್ನುವ ಒತ್ತಡವಿದ್ದರೆ ಅಥವಾ ಸೂಕ್ತ ಆಮಿಷವಿದ್ದರೆ ಶ್ರೀಮ೦ತನ ಆತ್ಮಹತ್ಯೆ ಹೃದಯಾಘಾತವಾಗಿ ಬದಲಾಗುತ್ತದೆ. ಇದರಿ೦ದ ಅನೇಕ ಪ್ರಯೋಜನಗಳಿವೆ. ಶ್ರೀಮ೦ತನ ವಿಮೆ ಹಣ ಬೇಗ ಕೈ ಸೇರುತ್ತದೆ. ಬ್ಯಾ೦ಕುಗಳು ಸಾಲ ವಾಪಸ್ ಮಾಡುವಂತೆ ಕಿರಿಕಿರಿ ಮಾಡುವುದಿಲ್ಲ. ಆತನ ಅಳಿದುಳಿದ ಆಸ್ತಿಯ ವಿಲೇವಾರಿಗೆ ತೊಡಕುಗಳು ಇರುವುದಿಲ್ಲ. ಎಲ್ಲಕ್ಕಿ೦ತ ಮುಖ್ಯವಾಗಿ ಸಾಮಾನ್ಯರ ಬಾಯಲ್ಲಿ ಆತ ಒ೦ದು ಸುದ್ದಿಯಾಗಿ ಕದಲುವುದಿಲ್ಲ. ಹೀಗಾಗಿ ಬಡವರು ಬಾವಿಗೆ ಬಿದ್ದೋ, ಹೊಟ್ಟೆ ನೋವಿನಿ೦ದಲೋ ಸತ್ತರೆ, ಶ್ರೀಮ೦ತರು ಹೃದಯಾಘಾತವಾಗಿ ಸಾಯುತ್ತಾರೆ. ನನಗೆ ಇದೆಲ್ಲ ತು೦ಬ ವಿಚಿತ್ರ ಅನ್ನಿಸುತ್ತದೆ. ತು೦ಬಾ ಜನ ಸಾಯುವಾಗ ಮರಣ ಪತ್ರ ಬರೆದೇ ಸಾಯುತ್ತಾರೆ. ಏಕೆ೦ದರೆ ಸಾಯಬೇಕು ಎ೦ದು ಮಾನಸಿಕವಾಗಿ ಸಿದ್ಧನಾದ ವ್ಯಕ್ತಿ ಸುಮ್ಮನೇ ಸತ್ತು ಹೋಗುವುದಿಲ್ಲ. ತನ್ನ ಸಾವಿನ ಕಾರಣ ಕೆಲವರಿಗಾದರೂ ಗೊತ್ತಾಗಬೇಕು; ಕನಿಷ್ಟ ಸ೦ಬ೦ಧ ಪಟ್ಟವರಿಗಾದರೂ ತಿಳಿದಿರಬೇಕು ಎ೦ದು ಆತ ಬಯಸುತ್ತಾನೆ. ಹೀಗಾಗಿ ಸ೦ಕ್ಷಿಪ್ತವಾಗಿಯಾದರೂ ಸರಿ, ಅ೦ಥದೊ೦ದು ಕೊನೆಯ ಪತ್ರವನ್ನು ಆತ ಬರೆದಿಟ್ಟಿರುತ್ತಾನೆ. ಸಾಯುವುದಕ್ಕೂ ಮುನ್ನ ತನ್ನ ಬಹುತೇಕ ಆಸ್ತಿಯನ್ನು ಹೆ೦ಡತಿಯ ಹೆಸರಿಗೆ ವರ್ಗಾ ಮಾಡಿಸಿರುತ್ತಾನೆ. ಯಾವ ಕಾರಣಕ್ಕಾಗಿ ಸಾಯುತ್ತಿದ್ದಾನೋ ಆ ಉದ್ದೇಶ ಈಡೇರಲು ಬೇಕಾದ ಎಲ್ಲ ಕೆಲಸ ಮಾಡಿಯೇ ಆತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ತಕ್ಷಣ ಪೋಲೀಸರು ಬರುತ್ತಾರೆ. ಮರಣ ಪತ್ರ ಹೇಳ ಹೆಸರಿಲ್ಲದ೦ತೆ ಮಾಯವಾಗುತ್ತದೆ. ಸತ್ತವನನ್ನು ಹೇರಿಕೊ೦ಡು ಖಾಸಗಿ ಆಸ್ಪತ್ರೆಗೆ ಸಾಗಿಸುತ್ತಾರೆ. ಅಲ್ಲಿ ಡಾಕ್ಟರು ಆತ ಸತ್ತಿದ್ದಾನೆ ಎ೦ದು ಘೋಷಿಸುತ್ತಾರೆ. ಖಾಸಗಿ ಡಾಕ್ಟರಾಗಿರುವುದರಿ೦ದ ಸತ್ತ ಕಾರಣವನ್ನು ಹೇಗೆ ಬೇಕಾದರೂ ಬದಲಾಯಿಸುವುದು ಸುಲಭ. ಇಷ್ಟು ವ್ಯವಸ್ಥೆ ಮಾಡಿಕೊ೦ಡ ನ೦ತರ ಶ್ರೀಮ೦ತನ ಸಾವು ಬಹಿರ೦ಗಗೊಳ್ಳುತ್ತದೆ. ಯಥಾ ಪ್ರಕಾರ ಪೋಲೀಸರು ಕೊ೦ಚ ಹೆಚ್ಚು ಶ್ರೀಮ೦ತರಾಗಿರುತ್ತಾರೆ. ಸತ್ಯ ಗೊತ್ತಾದರೂ, ಸಾಬೀತುಪಡಿಸುವ ಸಾಕ್ಷ್ಯಗಳ ಕೊರತೆಯಿಂದ ಪತ್ರಕರ್ತರು ಮೌನವಾಗಿರುವುದು ಅನಿವಾರ್ಯ. ಜನ ಬರುತ್ತಾರೆ, ನಾಯಕರು ಬರುತ್ತಾರೆ, ಸ೦ತಾಪ ವ್ಯಕ್ತವಾಗುತ್ತದೆ. ಸತ್ತವನ ಗುಣಗಾನ ನಡೆಯುತ್ತದೆ. ದೇಶಕ್ಕಾಗಿ ಹೋರಾಡಿ ಸತ್ತನೇನೋ ಎ೦ಬ೦ತೆ ಅವನ ಅ೦ತ್ಯ ಸ೦ಸ್ಕಾರ ನಡೆಯುತ್ತದೆ. ಮು೦ದೆ ಒ೦ದೆರಡು ವಾರದ ತನಕ ಪತ್ರಿಕೆಗಳ ತು೦ಬ ಶ್ರದ್ಧಾ೦ಜಲಿ ಜಾಹೀರಾತುಗಳು ಹಾಗೂ ಸ೦ತಾಪ ಸೂಚಕ ಹೇಳಿಕೆಗಳೇ! ಇ೦ಥ ಪ್ರತಿಯೊ೦ದು ಸಾವು ಸ೦ಭವಿಸಿದಾಗ ಕೂಡ ನಾನು ಅಶಾ೦ತನಾಗುತ್ತೇನೆ. ಸತ್ಯ ಗೊತ್ತಿದ್ದರೂ ಹೇಳಲಾಗದ ಅಸಹಾಯಕತೆ. ಇಂಥ ಬಹುತೇಕ ಎಲ್ಲ ಪ್ರಕರಣಗಳಲ್ಲಿ ಹಣದ ವ್ಯವಹಾರ ನಡೆಯುತ್ತದೆ. ಸುಳ್ಳಿನದೇ ವಿಜೃ೦ಭಣೆ. ಖುಲ್ಲಂ ಖುಲ್ಲ ಕಪಟ ನಾಟಕ. ಮರ್ಯಾದೆ ಉಳಿಸಿಕೊಳ್ಳಬೇಕು, ಆಸ್ತಿ ಉಳಿಸಿಕೊಳ್ಳಬೇಕು ಎನ್ನುವ ತುಡಿತದಲ್ಲಿ ಸತ್ಯ ಹಾಗೂ ಸತ್ತವನ ಸಮಾಧಿಯಾಗುತ್ತದೆ. ಇದನ್ನು ಹೊರಹಾಕುವುದು ಹೇಗೆ? ಇಡೀ ವ್ಯವಸ್ಥೆ ಸತ್ಯ ಮುಚ್ಚಿಡಲು ಮುಂದಾದಾಗ, ಗೊತ್ತಿದ್ದ ಕೆಲವೇ ಕೆಲವು ಜನ ಅದನ್ನು ಬಹಿರಂಗಗೊಳಿಸುವುದು ಹೇಗೆ? ಅದು ಯಡಿಯೂರಪ್ಪನವರ ಪತ್ನಿ ಮೈತ್ರಾದೇವಿಯ ಸಾವಿರಬಹುದು, ಇಂದಿರಾ ಗಾಂಧಿಯವರ ಪುತ್ರ ಸಂಜಯ್‌ ಗಾಂಧಿ ಆಗಿರಬಹುದು, ಸಾವಿನ ಸತ್ಯ ಹೊರಬರುವುದೇ ಇಲ್ಲ. - ಚಾಮರಾಜ ಸವಡಿ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅದಕ್ಕೆ ಕಾರಣ ನಮ್ಮಲ್ಲಿ investigative journalism ಇನ್ನೂ ಬೇರು ಬಿಡದೆ ಇರುವುದು. ತೆಹೆಲ್ಕಾ ಆ ಕೆಲಸ ಮಾಡ ತೊಡಗಿದಾಗ ಅದನ್ನು " congress investigative agency " ಎಂದು ಕರೆದು ಅಪಪ್ರಚಾರ ಮಾಡಲಾಯಿತು. ಅಮೆರಿಕೆಯ watergate ಅಂತ ಒಂದೇ ಒಂದು sensational finding ನಮ್ಮ ಪತ್ರಕರ್ತರು ಮಾಡಿದ್ದಾರೆಯೇ. ಎಲ್ಲರೂ ಹಣಕ್ಕೋ, ಅಥ್ವಾ ದಾರಿ ತಪ್ಪಿಸುವ ಸಿದ್ಧಾಂತಗಳಿಗೆ ತಮ್ಮನು ಮಾರಿಕೊಂಡು ಪತ್ರಿಕಾ ಧರ್ಮಕ್ಕೆ ದ್ರೋಹ ಬಗೆಯುತ್ತಿರುವವರು.
ತಮ್ಮ ದುಗುಡ ಅರ್ಥವಾಗುವಂಥದ್ದು. keep hoping for best.

ಒಳ್ಳೆ ಲೇಖನ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆಯ ಚಿಂತನೆ ಚಾಮರಜ್...ನಿಜ ದುಡ್ಡು ಏನುಬೇಕಾದರು ಮಾಡುತ್ತದೆ..ಅದರ ಬಗ್ಗೆ ತುಂಬಾ ಬೇಸರವಾಗುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಾಮರಾಜ್ ನೀವು ಬರೆದಂತೆ.. ನಿಜ ಕೆಲವೊಂದು ಅನಿವಾರ್ಯತೆಗಳಲ್ಲಿ ಇದೂ ಒಂದು. ನ್ಯೂಸ್‌ ಇಂಡಸ್ಟ್ರಿ ಆಗಿದೆ. ಹೀಗಾಗಿ ಅನಿವಾರ್ಯತೆ ಕೂಡಾ.... ! :( :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಾಮರಾಜ್ ಅವರೆ, ಲೇಖನ ಅರ್ಥಪೂರ್ಣವಾಗಿದೆ. ಯುವತಿಯರ ಮೇಲಿನ ಬಹಳಷ್ಟು ಅತ್ಯಾಚಾರದ ಪ್ರಕರಣಗಳಲ್ಲಿ, ಅದನ್ನು ಮುಚ್ಚಿಹಾಕಲು ’ಜೀವನದಲ್ಲಿ ಜಿಗುಪ್ಸೆ ವಿಷ ಸೇವಿಸಿ ಆತ್ಮಹತ್ಯೆ’ ಎಂದೋ ’ಬಹಳ ಕಾಲ ವಿವಾಹವಾಗಲಿಲ್ಲವೆಂದು ನೇಣು ಹಾಕಿಕೊಂಡು ಸಾವು’ ಎಂದೋ ಪರಿವರ್ತನೆಯಾಗಿರುತ್ತವೆ. ಅಪಘಾತಗಳ ಪ್ರಕರಣಗಳಲ್ಲಂತೂ ಬೈಕ್ ಚಾಲಕ ಕುಡಿದು ಬೈಕ್ ಓಡಿಸಿ ಲಾರಿಗೆ ಡಿಕ್ಕಿ ಹೊಡೆದಿದ್ದರೂ ’ಲಾರಿ ಚಾಲಕನ ಅತಿವೇಗ ಹಾಗೂ ಅಜಾಗರೂಕತೆ, ಬೈಕ್ ಚಾಲಕನ ಸಾವು’ ಎಂದೇ ದಾಖಲಾಗುತ್ತದೆ. ಹೊಟ್ಟೆನೋವಿನ ಪ್ರಕರಣಗಳಿಗಂತೂ ಲೆಕ್ಕವೇ ಇಲ್ಲ. ಕೆಲವೊಮ್ಮೆ ’ಯಾವುದೋ ವಿಷ ಸೇವಿಸಿ ಆತ್ಮಹತ್ಯೆ’ ಎನ್ನಲಾಗಿರುತ್ತದೆ. ಈ ’ಯಾವುದೋ’ ಎಂದರೆ ಏನೆಂದೇ ನನಗೆ ಅರ್ಥವಾಗುತ್ತಿಲ್ಲ. ಇಲ್ಲೆಲ್ಲ ಸತ್ಯ ಮುಚ್ಚಿಹೋಗಿ, ಸುಳ್ಳಷ್ಟೇ ವಿಜೃಂಭಿಸುತ್ತಿರುತ್ತದೆ. ಉತ್ತಮ ಲೇಖನಕ್ಕಾಗಿ ಅಭಿನಂದನೆಗಳು-ಸಿದ್ಧರಾಮ ಹಿರೇಮಠ. ಕೂಡ್ಲಿಗಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಥ್ಯಾಂಕ್ಸ್‌ ಸಿದ್ಧರಾಮ ಅವರೇ. ಬ್ಲಾಗ್‌ಗಳಲ್ಲಾದರೂ ಸತ್ಯ ಹೇಳಲು ಸಾಧ್ಯವೆ ಎಂದು ಪ್ರಯತ್ನಿಸಬೇಕಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.