ಬೆರಳ್ಹಿಡಿದು ಜಗವ ತೋರಿಸಿದಾತ...ಅಪ್ಪ!

5

ಆತ ನಮ್ಮ ಬಾಲ್ಯದ ಹೀರೊ. ಅಮ್ಮನ ಮಡಿಲಿನಿಂದ ಕೆಳಗಿಳಿದು ನಡೆಯಲು ಕಲಿತಾಗಿನಿಂದ ಆತ ನಮ್ಮ ಪಾಲಿನ ದೊಡ್ಡ ಭರವಸೆ. ಸಹಪಾಠಿಗಳೊಂದಿಗೆ ಜಗಳವಾದಾಗ, ನಾವು ದೂರು ಹೇಳಿದ್ದು ಆತನಿಗೆ. ಮೊದಲ ಮಿಠಾಯಿ ಕೊಡಿಸಿದ್ದು ಆತನೇ. ಬೆದರಿದಾಗ ಎತ್ತಿಕೊಂಡು ಸಂತೈಸಿದ, ಭರವಸೆ ತುಂಬಿದ ಮೊದಲ ವ್ಯಕ್ತಿ ಆತ. ಬಾಲ್ಯದ ನೂರೆಂಟು ನೆನಪುಗಳನ್ನು ಸಮೃದ್ಧವಾಗಿಸಿದ ಆತ ನಮ್ಮ ಅಪ್ಪ. ಆತ ಎಲ್ಲ ಕಡೆ ಸಿಗುತ್ತಾನೆ. ಪಾರ್ಕ್‌‌ಗಳಲ್ಲಿ, ಬಸ್‌ಸ್ಟಾಪ್‌ಗಳಲ್ಲಿ, ಶಾಲೆಯ ಗೇಟಿನ ಹೊರಗೆ, ಅಂಗಡಿ ಎದುರು- ಎಲ್ಲೆಲ್ಲಿ ಮಕ್ಕಳು ಕಾಣುತ್ತಾರೋ ಅಲ್ಲೆಲ್ಲ ಆತನೂ ಇರುತ್ತಾನೆ. ಕಂಡದ್ದನ್ನೆಲ್ಲ ಕೊಡಿಸು ಎಂದು ಕೈಚಾಚುವ ಮಕ್ಕಳಿಗೆ ಪ್ರೀತಿಯಿಂದ ತಿಳಿ ಹೇಳುತ್ತ, ಚೆನ್ನಾಗಿವೆ ಅನಿಸಿದ್ದನ್ನು ಕೊಡಿಸುತ್ತ, ಮಕ್ಕಳು ಖುಷಿಯಿಂದ ಕೇಕೆ ಹಾಕುವಾಗ ಸದ್ದಿಲ್ಲದೇ ತೃಪ್ತಿಯಿಂದ ನಗುತ್ತಾನೆ.

ಜಗಳ ತಂದಾಗ ಬಗೆಹರಿಸಿದ್ದಾನೆ ಅಪ್ಪ. ತಪ್ಪು ಮಾಡಿದಾಗ ತಿಳಿ ಹೇಳಿದ್ದಾನೆ. ಪಕ್ಕ ಕೂತು ಪಾಠ ಮಾಡಿದ್ದಾನೆ. ಹೋಂ ವರ್ಕ್‌ ಮಾಡಿಸಿದ್ದಾನೆ. ನಮ್ಮ ಹ್ಯಾಪಿ ಬರ್ತ್‌‌ಡೇಗಳಿಗೆ ಹೊಸ ಬಟ್ಟೆ ತಂದಿದ್ದಾನೆ. ಅಚ್ಚರಿಯ ಗಿಫ್ಟ್‌ಗಳನ್ನು ನೀಡಿದ್ದಾನೆ. ನಮ್ಮ ಬಾಲ್ಯಕ್ಕೆ ಸಾವಿರಾರು ನೆನಪುಗಳನ್ನು ತುಂಬಿದ್ದಾನೆ. ಅಪ್ಪನ ಹೆಗಲೇ ನಮ್ಮ ಮೊದಲ ವಾಹನ. ಅಲ್ಲಿಂದ ಇಣುಕಿದಾಗ ಕಂಡ ಜಗತ್ತು ಅದ್ಭುತ. ಆತನ ಬೆರಳ್ಹಿಡಿದೇ ನಾವು ಮನೆಯಿಂದ ಹೊರಗೆ ಕಾಲಿಟ್ಟಿದ್ದು. ಸಂತೆಗೆ ಹೋಗಿದ್ದು, ಜಾತ್ರೆಯಲ್ಲಿ ಸುತ್ತಾಡಿದ್ದು, ಮೃಗಾಲಯಗಳಿಗೆ ಭೇಟಿ ಕೊಟ್ಟಿದ್ದು. ಅಪ್ಪ ನಮ್ಮ ಪಾಲಿಗೆ ಹೀರೋ, ಗೈಡ್‌, ಫ್ರೆಂಡ್‌ ಎಲ್ಲಾ. ದೊಡ್ಡವರಾದಂತೆ ಅಪ್ಪ ನಮಗೆ ಪಾಕೆಟ್‌ ಮನಿ ಕೊಡುವ ಕ್ಯಾಷಿಯರ್‌. ಪ್ರೊಗ್ರೆಸ್‌ ಕಾರ್ಡ್‌‌ಗೆ ಸಹಿ ಹಾಕುವ ಮ್ಯಾನೇಜರ್‌. ತಪ್ಪು ಮಾಡಿದಾಗ ಶಿಕ್ಷಿಸುವ ಪೊಲೀಸ್‌. ಏನು ಮಾಡಬೇಕೆಂದು ಆಜ್ಞೆ ಮಾಡುವ ಜಡ್ಜ್‌. ನಮ್ಮ ಆಟಗಳಿಗೆ ಆತನೇ ಕೋಚ್‌, ಅಂಪೈರ್‌ ಮತ್ತು ರೆಫ್ರೀ. ಬಿದ್ದು ಗಾಯ ಮಾಡಿಕೊಂಡಾಗ ಆತನೇ ಡಾಕ್ಟರ್‌. ಮುಂದೆ ಪ್ರಾಯ ಬಂದಿತು. ಮೈಯೊಳಗೆ ಮಾಯೆ ತುಂಬಿತು. ಒಂದಿಷ್ಟು ತಂತ್ರಜ್ಞಾನ, ಫ್ಯಾಶನ್‌ ಕಲಿತ ನಮಗೆ ಅಪ್ಪ ಯಾವುದೋ ಕಾಲದ ವ್ಯಕ್ತಿಯಂತೆ ಕಾಣತೊಡಗುತ್ತಾನೆ. ಅಲ್ಲಿಯವರೆಗೆ, ಅಮ್ಮನಿಗೆ ಏನೂ ಗೊತ್ತಾಗಲ್ಲ ಅನ್ನುತ್ತಿದ್ದ ನಾವು ಅಪ್ಪನನ್ನೂ ಆ ಸಾಲಿಗೆ ಸೇರಿಸತೊಡಗುತ್ತೇವೆ. ಎಲ್ಲವನ್ನೂ ಕಲಿಸಿದ್ದ ಅಪ್ಪನನ್ನೇ, ನಿನಗೇನೂ ಗೊತ್ತಿಲ್ಲ ಅನ್ನತೊಡಗುತ್ತೇವೆ. ಅಪ್ಪನ ಅಭ್ಯಾಸಗಳು ಅಸಹನೀಯ ಅನಿಸತೊಡಗುತ್ತವೆ. ಎಲ್ಲ ಸುಖವನ್ನೂ ನಮಗಾಗಿ ಕಟ್ಟಿಕೊಟ್ಟ ಅಪ್ಪನೇ, ನಮ್ಮ ಸುಖಕ್ಕೆ ಅಡ್ಡಿ ಎಂದು ಅನ್ನಿಸತೊಡಗುತ್ತಾನೆ. ಆದರೆ, ಮದುವೆಯಾಗಿ ಮಕ್ಕಳಾದ ಮೇಲೆ ಗೊತ್ತಾಗುತ್ತದೆ: ಅಪ್ಪನಿಗೆ ಎಷ್ಟೊಂದು ವಿಷಯಗಳು ಗೊತ್ತಿದ್ದವು ಅಂತ. ಅಪ್ಪ ಇಂಥವನ್ನೆಲ್ಲ ನಿಭಾಯಿಸಿದ್ದಾದರೂ ಹೇಗೆ ಎಂದು ಅಚ್ಚರಿಯಾಗುತ್ತದೆ. ಈಗ ಅಪ್ಪ ಜೊತೆಗಿರಬೇಕಿತ್ತು ಎಂಬ ಹಳಹಳಿ ಶುರುವಾಗುತ್ತದೆ. ಕೆಲಸದ ಹಂಗಿನಲ್ಲಿ ದೂರ ಹೋದ ನಮ್ಮಂಥವರಿಗೆ ಅಪ್ಪ ನೆನಪುಗಳ ಕಣಜ. ಒಂದು ಶಾಶ್ವತ ಅಚ್ಚರಿ. - ಚಾಮರಾಜ ಸವಡಿ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಚಾಮರಾಜ ಅವರೆ,

ಅಪ್ಪನ ಬಗ್ಗೆ ತಮ್ಮ ಲೇಖನ ಸೊಗಸಾಗಿದೆ. ಈ ಅಪ್ಪನ ದಿನದಿಂದೆ ಅಪ್ಪನನ್ನು ಕಳಕೊಂಡ ನತದೃಷ್ಟೆ ನಾ. ಅವರು ಇದ್ದಾಗ ಕೇಳಿದ್ದನ್ನು ತಕ್ಷಣ ತಂದು ಕೊಂಡುತ್ತಿದ್ದರು. ಈಗ ನಮ್ಮ ಮೇಲೆ ಮನೆಯ ಜವಾಬ್ದಾರಿ ಬಂದ ಮೇಲೆ ಅಬ್ಬಾ ತಂದೆ ಹೇಗೆ ಈ ಖರ್ಚುಗಳನ್ನು ನಿಭಾಯಿಸುತ್ತಿದ್ದರು ಎನಿಸುತ್ತದೆ. ದೈಹಿಕವಾಗಿ ನಮ್ಮೊಡನೆ ಇಲ್ಲದಿದ್ದರು ಕ್ಷಣ ಕ್ಷಣಕ್ಕೂ ನೆನಪಾಗಿ ದಾರಿ ತೋರುತ್ತಿದ್ದರೆ ಎಂದು ಕೊಳ್ಳುತ್ತೇವೆ. ತಾವು ಹೇಳಿದಂತೆ "ಅಪ್ಪ ನೆನಪುಗಳ ಕಣಜವೇ" ಹೌದು.

ಧನ್ಯವಾದಗಳು
ಮೌನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಾಮರಾಜ್ ಅವರೆ, ಅಪ್ಪನ ಕುರಿತು ತುಂಬಾ ಚೆನ್ನಾಗಿ ಬರೆದಿದ್ದೀರಿ. ಬಾಲ್ಯದಲ್ಲಿ ಅಪ್ಪ ಸರ್ವಶಕ್ತ ಅನ್ನಿಸುತ್ತಾನೆ, ಬೆಳೆದ ನಂತರ ಅಪ್ಪ ಎಲ್ಲರಂತೆ ಸಾಮಾನ್ಯರಲ್ಲಿ ಸಾಮಾನ್ಯ ಎನ್ನಿಸುತ್ತಾನೆ. ಆತನನ್ನು ಕಳೆದುಕೊಂಡ ನಂತರ ಅಪ್ಪ ನಮಗೆ ಎಷ್ಟೊಂದು ಅವಶ್ಯ, ಆತನ ಅನುಭವಗಳು ನಮಗೆ ಎಷ್ಟೊಂದು ಅಗತ್ಯ ಎಂಬ ಹಳಹಳಿ ಶುರುವಾಗುತ್ತದೆ. ಅಪ್ಪನನ್ನು ಕಳೆದುಕೊಂಡ ನತದೃಷ್ಟರಲ್ಲಿ ನಾನೂ ಒಬ್ಬ. -ಸಿದ್ಧರಾಮ ಹಿರೇಮಠ. ಕೂಡ್ಲಿಗಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಮನದಲ್ಲಿದ್ದುದು ತಮಗೆ ಹೇಗೆ ತಿಳಿಯೆತು.

ಉತ್ತಮ ಬರಹ

ಧನ್ಯವಾದಗಳು

ಶಿವರಾಂ ಕಲ್ಮಾಡಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಪ್ಪ...ಎಂಬ ಆ ಒಂದು ಪದವೇ ಏನೋ ಒಂದು ಅರ್ಥವಾಗದ ಒಗಟು... ಅಂದು ನಾವು ಮಗುವಾಗಿದ್ದಾಗ ಅರ್ಥವಾಗದ ಅಪ್ಪ....ಇಂದು ನಾನು ಅಪ್ಪನಾದಾಗ ಅರ್ಥವಾಗುತ್ತಿದ್ದಾನೆ... ಆ ಅಪ್ಪನಿಗೆ ಇದೋ ಒಂದು ವಂದನೆ....ಅಪ್ಪಾ ಈಗ ನಾನು ನಿನ್ನ ಅರ್ಥ ಮಾಡಿಕೊಂಡೆ...ಆದರೇನು ಪ್ರಯೋಜನ...ನನ್ನ ಮುಂದೆ ನೀನಿಲ್ಲ...ನಿನ್ನ ಮುಂದೆ ಮಗುವಾಗಿ ನಾನಿಲ್ಲ..!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೆಲವೊಂದು ಭಾವನೆಗಳೇ ಹಾಗೆ. ಇದ್ದಾಗ ಅರ್ಥವಾಗುವುದಿಲ್ಲ, ಅರ್ಥವಾದಾಗ ಅದೇ ಇರುವುದಿಲ್ಲ. ಎರಡೂ ಒಟ್ಟಿಗೇ ಇರುವುದು ಅಪರೂಪ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.