ದಾಟುವ ಮುನ್ನ ಜಾರುವ ಮನ

0

ಬೆಳಗಿನ ಬೆಂಗಳೂರು ಟ್ರಾಫಿಕ್‌ ಅದು. ಅರ್ಜೆಂಟಿದ್ದರೆ ಭಯಾನಕ. ಅವಸರ ಹೆಚ್ಚಾದಷ್ಟೂ ನಿಧಾನ. ಪ್ರತಿ ಅರ್ಧ ನಿಮಿಷಕ್ಕೆ ಗಡಿಯಾರ ನೋಡುತ್ತ, ಕಿಟಕಿಯಾಚೆ ಇಣುಕುತ್ತ, ಯಾರನ್ನೋ ಶಪಿಸುತ್ತ ಕಾಯುವುದನ್ನು ಬಿಟ್ಟರೆ ಮಾಡುವಂಥದ್ದು ಬೇರೆ ಏನೂ ಇರುವುದಿಲ್ಲ.

ಎಫ್‌.ಎಂ. ಚಾನೆಲ್‌ಗಳು ಬಂದ ನಂತರ, ಕಾಯುವುದು ಒಂಚೂರಾದರೂ ಸಹನೀಯ. ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡಂತೆ ಸಹಜವಾಗಿ ರೇಡಿಯೋ ಆನ್‌ ಆಗುತ್ತದೆ. ಬೀಗರನ್ನು ಸ್ವಾಗತಿಸಿದಂತೆ, ಅತ್ಯಂತ ಔಪಚಾರಿಕವಾಗಿ ಕಾರ್ಯಕ್ರಮ ನಿರೂಪಿಸುವ ಸರ್ಕಾರಿ ಎಫ್‌.ಎಂ. ರೇನ್‌ಬೋ, ಅರಳು ಹುರಿದಂತೆ ಪಟಪಟ ಮಾತನಾಡುವ ಖಾಸಗಿ ಎಫ್‌.ಎಂ. ರೇಡಿಯೋ ಜಾಕಿಗಳು, ರೇಡಿಯೋದಲ್ಲಿ ಮಾತನಾಡಿದೆವೆಲ್ಲ ಎಂಬ ಸಂಭ್ರಮದಲ್ಲಿ ಬೀಗುವ ಪೆದ್ದು ಗೃಹಿಣಿಯರು, ಮೊದ್ದು ಗಂಡಸರು, ಒಂದು ಹಾಡಿಗಾಗಿ ಖಾಸಗಿ ಬದುಕಿನ ಸೂಕ್ಷ್ಮ ಸಂಗತಿಗಳನ್ನೆಲ್ಲ ಒದರುವ ಅವಿವೇಕಿ ಕೇಳುಗರು, ಇವುಗಳ ನಡುವೆ ಮೂಡಿ ಬರುವ ಸೊಗಸಾದ ಹಾಡುಗಳು, ಜೋಕ್‌ಗಳು-
ಕೇಳುತ್ತ ಕೇಳುತ್ತ ಮನಸ್ಸು ಎಲ್ಲೋ ಜಾರುತ್ತ ಹೋಗುತ್ತದೆ.

ಸಿಟಿ ಬಸ್‌ನಲ್ಲಿ ಸೀಟ್‌ ಸಿಕ್ಕಿದ್ದರೆ ಈ ಮಜಾ ಇನ್ನೂ ಹೆಚ್ಚು. ಇಯರ್‌ ಫೋನ್‌ ಕಿವಿಗೆ ಸಿಕ್ಕಿಸಿಕೊಂಡು, ಮಜವಾಗಿ ಹಾಡು ಕೇಳುತ್ತಿದ್ದಾಗ, ಅಲ್ಲೆಲ್ಲೂ ದೂರ ಸಿಗ್ನಲ್‌ ಹಸಿರಾಗುತ್ತದೆ. ಹಾಗಂತ ಬಸ್ಸೇನೂ ತಕ್ಷಣ ಚಲಿಸುವುದಿಲ್ಲ. ಭಯಂಕರವಾಗಿ ಆರ್ಭಟಿಸಿ ಹೊಗೆ ಉಗುಳುತ್ತ, ಜಗಳಕ್ಕೆ ಸಿದ್ಧವಾದ ಗೂಳಿಯಂತೆ ಗುಟುರು ಹಾಕುತ್ತ, ಅವಕಾಶ ಸಿಕ್ಕ ಕೂಡಲೇ ಮುಂದೆ ಹೋಗಲು ಸಿದ್ಧವಾಗುತ್ತದೆ.

ಎದುರಾ ಬದುರಾ ಇರುವ ಟ್ರಾಫಿ‌ಕ್‌ ಹೋಗಲೋ ಬೇಡವೋ ಎಂಬಂತೆ ನಿಧಾನವಾಗಿ ಚಲಿಸಲು ಪ್ರಾರಂಭಿಸುತ್ತದೆ. ಎರಡನೇ ಗೇರ್‌ ಹಾಕಬೇಕೆನ್ನುವಷ್ಟರಲ್ಲಿ ಮತ್ತೆ ಟ್ರಾಫಿಕ್‌ ಜಾಮ್‌! ನಮ್ಮ ಬಸ್‌ ಹತ್ತು ಹೆಜ್ಜೆ ಮುಂದೆ ಹೋಗಿರುತ್ತದೆ. ಎದುರುಗಡೆಯಿಂದ ಒಂದು ಬಸ್‌ ಹತ್ತು ಹೆಜ್ಜೆ ನಮ್ಮತ್ತ ಬಂದಿರುತ್ತದೆ. ಕಿಟಕಿಗಳ ಪಕ್ಕ ಕಿಟಕಿಗಳು. ನಡುವೆ ಇದೆಯೋ ಇಲ್ಲವೋ ಎಂಬಂಥ ರಸ್ತೆ ವಿಭಜಕ. ಕೈ ಚಾಚಿದರೆ ಆ ಕಡೆಯ ಕಿಟಕಿಯನ್ನು ಸುಲಭವಾಗಿ ತಲುಪಬಹುದು.

ಆಗ ಶುರುವಾಗುತ್ತದೆ ನೂರಾರು ಭಾವನೆಗಳ ತಾಕಲಾಟ.

ಕಿಟಕಿಯ ಪಕ್ಕ ಕೂತವರಿಗೆ ಇತ್ತ ನೋಡಲು ಮುಜುಗರ. ಅಲ್ಲೆಲ್ಲೋ ಮಧ್ಯವಯಸ್ಕ ಪೋತಲನೊಬ್ಬ ನಮ್ಮ ಬಸ್‌ನಲ್ಲಿ ಕೂತಿದ್ದ ಹುಡುಗಿಯನ್ನು ನುಂಗುವಂತೆ ನೋಡುತ್ತಿರುತ್ತಾನೆ. ಆಂಟಿಗೆ ಜೀನ್ಸ್‌ ಹುಡುಗನ ಮೇಲೆ ಕಣ್ಣು. ಅದುವರೆಗೆ ಕಿಟಕಿಯಾಚೆಗೇ ಕಣ್ಣು ನೆಟ್ಟು ಕೂತಿದ್ದ ಹುಡುಗಿಯರು ಇದ್ದಕ್ಕಿದ್ದಂತೆ ಪ್ರಜ್ವಾವಂತೆಯರಾಗಿದ್ದಾರೆ. ಮೊಬೈಲ್‌ನತ್ತ, ಇಲ್ಲವೇ ಟಿವಿ ಪರದೆ ದಿಟ್ಟಿಸುತ್ತಿದ್ದಾರೋ ಎನ್ನುವಂತೆ ಬಿಟ್ಟ ಕಣ್ಣುಗಳಿಂದ ಎದುರು ಸೀಟ್‌ ನೋಡುವುದರಲ್ಲಿ ನಿರತರಾಗಿದ್ದಾರೆ.

ಇದಪ್ಪ ಸೀನ್‌ ಎಂದರೆ! ಪಕ್ಕದ ಬಸ್‌ನ ಕಿಟಕಿಯತ್ತ ಮನಸ್ಸು ಸೆಳೆಯುತ್ತಿದ್ದರೂ ಕಣ್ಣು ಹೊರಳಿಸಲು ಏನೋ ಸಂಕೋಚ. ಎಂಥದೋ ಬಿಗುಮಾನ. ಇದ್ದಕ್ಕಿದ್ದಂತೆ ಪಕ್ಕದ ಬಸ್‌ನಲ್ಲಿ ಗುಮ್ಮ ಬಂದಿದೆಯೇನೋ ಎಂಬಂತೆ ಎಲ್ಲ ಮುಗುಮ್ಮಾಗಿದ್ದಾರೆ. ಅಂಥದೇ ಸಂದಿಗ್ಧ ನಮ್ಮ ಬಸ್‌ನಲ್ಲಿ ಕೂತವರಲ್ಲೂ. ನೋಡಲೂ ಆಗದ, ನೋಡದೇ ಇರಲೂ ಆಗದ ಮನಃಸ್ಥಿತಿ. ಆದರೂ ಆಸೆಬುರುಕ ಮನಸ್ಸು ಕಣ್ಣು ಹೊರಳಿಸುತ್ತದೆ.

ಅಲ್ಲೇನಿದೆ?

ಮೊಬೈಲ್‌ ಕೈಲಿ ಹಿಡಿದವರು, ಕಾಣದ ಪರದೆ ನೋಡುತ್ತ ಕೂತವರು, ಕೆಕ್ಕರಿಸುವ ಆಂಟಿಯರು, ಶಪಿಸುವ ಅಜ್ಜಿಯರು, ಹೆಣ್ಣೇ ಕಾಣದ ಅಂಕಲ್‌ ಗಾವಿಲರು- ದೇವರೇ, ಬೇಗ ಬಸ್‌ ಚಲಿಸಲಪ್ಪಾ ಎಂದು ಮನಸ್ಸು ಹಾರೈಸುವಾಗ ರೇಡಿಯೋದಲ್ಲಿ ಹಾಡು: ’ಜಿಂಕೆ ಮರೀನಾ, ಜಿಂಕೆ ಮರೀನಾ...’

ಅದನ್ನು ತಾನೂ ಕೇಳಿಸಿಕೊಂಡಿತೇನೋ ಎಂಬಂತೆ ಬಸ್‌ ಜಿಂಕೆ ಮರಿಯಂತೆ ನಡೆಯದಿದ್ದರೂ ಗಜ ಗಮನೆಯಾಗಿ ಚಲಿಸಲು ಪ್ರಾರಂಭಿಸುತ್ತದೆ. ಪಕ್ಕದ ಬಸ್‌ನ ಸಕಲ ಸೌಂದರ್ಯ, ಕುರೂಪ, ವಿಕ್ಷಿಪ್ತಗಳೆಲ್ಲ ನಿಧಾನವಾಗಿ, ಮನದಾಚೆಗೇನೋ ಎಂಬಂತೆ ಸರಿದು ಹೋಗುತ್ತವೆ. ಮತ್ತೆ ಮುಂದಿನ ಸಿಗ್ನಲ್‌ನಲ್ಲಿ ಇಂಥದೇ ಮತ್ತೊಂದು ಸೀನ್‌. ಅಲ್ಲೇನು ’ಜಿಂಕೆ ಮರಿ’ ಸಿಗುತ್ತದೋ, ’ಜಲಜಲ ಜಲಜಾಕ್ಷಿ’ ಸಿಗುತ್ತಾಳೋ, ’ಮಿನ ಮಿನ ಮೀನಾಕ್ಷಿ’ ಕಾಣಿಸುತ್ತಾಳೋ- ಅದು ಟ್ರಾಫಿಕ್‌ ಮಹಾತ್ಮೆಯ ಮರ್ಜಿ.

ಆದರೆ, ಬದುಕು ಮಾತ್ರ ಸಿಗ್ನಲ್‌ನಿಂದ ಸಿಗ್ನಲ್‌ಗೆ ಕೆಂಪಾಗುತ್ತ ಹಸಿರಾಗುತ್ತ, ಯಾವುದೋ ಕನಸನ್ನು ಧೇನಿಸುತ್ತ, ಅದು ನನಸಾಗಲಿ ಎಂದು ಹಾರೈಸುತ್ತ ಹೋಗುತ್ತದೆ. ಪ್ರಯಾಣದ ಚಿಕ್ಕ ಅವಧಿಯನ್ನು ಸ್ಮರಣೀಯವಾಗಿಸುತ್ತದೆ.

- ಚಾಮರಾಜ ಸವಡಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.