ಸುಮ್ಮನೆ ಬರುವುದಿಲ್ಲ ಇಲ್ಲಿ ಸಂಜೆ..!

0

ಸಂಜೆಯಾಯಿತು.

ಬೆಂಗಳೂರಿನಲ್ಲಿ ಸಂಜೆ ಎನ್ನುವುದು ಸುಮ್ಮನೇ ಬರುವುದಿಲ್ಲ. ಸೂರ್ಯ ಇದಕ್ಕಿದ್ದಂತೆ ತನ್ನ ಉರಿ ಕಳೆದುಕೊಂಡು, ಅನಗತ್ಯವಾಗಿ ಕೆಂಪೇರಿ, ಏನೋ ಅರ್ಜೆಂಟ್ ಕೆಲಸವಿದ್ದವನಂತೆ ದುಂಡಗಾಗಿ ಪಶ್ಚಿಮದೆಡೆಗೆ ಹೊರಡುವಾಗ, ಸಂಜೆಯಾಗುತ್ತದೆ.

ಮೆಜೆಸ್ಟಿಕ್ ಬಸ್ ನಿಲ್ದಾಣದ ಸುತ್ತಮುತ್ತಲ ಪ್ರದೇಶಗಳಲ್ಲಿ ಇನ್ನೂ ಉಳಿದಿರುವ ಮರಗಳಲ್ಲಿ ಸಾವಿರಾರು ಹಕ್ಕಿಗಳ ಸಂಜೆ ಸಂಭ್ರಮದ ಗೀತೆ ವಾಹನಗಳ ಕರ್ಕಶ ಸದ್ದಿನಲ್ಲಿ ಅಡಗಿ ಹೋಗುತ್ತಿರುವಾಗ, ಸಂಜೆಯಾಗುತ್ತದೆ.

ಅದೇ ಮೆಜೆಸ್ಟಿಕ್‌ನ ಸಿಟಿ ಬಸ್ ನಿಲ್ದಾಣದಲ್ಲಿ, ತಮ್ಮ ಕಾಂಕ್ರೀಟ್ ಗೂಡು ಸೇರುವ ಕಾತರದಲ್ಲಿ ನಿಂತ ಲಕ್ಷಾಂತರ ಜನ, ‘ಈ ಹಾಳಾದ ಬಸ್ ಇನ್ನೂ ಬರಲಿಲ್ಲವಲ್ಲ’ ಎಂದು ಮನಸ್ಸಿನೊಳಗೇ ಶಪಿಸುತ್ತಿರುವಾಗ, ಸಂಜೆಯಾಗುತ್ತದೆ. ಮುಖ್ಯ ರಸ್ತೆಗಳಲ್ಲಿ, ಜನರಿಗೆ ನಡೆದಾಡಲೂ ಜಾಗವಿಲ್ಲದಂತೆ ತುಂಬಿಕೊಂಡ ವಾಹನಗಳು, ಮುಂದಕ್ಕೆ ಹೋಗಲಾಗದೇ ಹೊಗೆಯುಗುಳುತ್ತ ಅಸಹನೆಯಿಂದ ಕಿರಿಚಿಕೊಳ್ಳುವಾಗ, ಸಂಜೆಯಾಗುತ್ತದೆ. ಒಳ ಭಾಗದಲ್ಲಿರುವ ಸಣ್ಣ ರಸ್ತೆಗಳನ್ನೇ ತಾತ್ಕಾಲಿಕ ಆಟದ ಮೈದಾನವನ್ನಾಗಿ ಮಾಡಿಕೊಂಡ ಮಕ್ಕಳು ಆಟ ಆಡುತ್ತ ಕೇಕೆ ಹಾಕುತ್ತಿರುವಾಗ, ಸಂಜೆಯಾಗುತ್ತದೆ.

ದಿನವಿಡೀ ಅಡಗಿ ಕುಳಿತಂತಿದ್ದ ಭೇಲ್ ಪೂರಿ, ಪಾನಿ ಪೂರಿ ಅಂಗಡಿಯವರು ಕೂಡು ರಸ್ತೆಗಳ ಪಕ್ಕದಲ್ಲಿ ತಳ್ಳುಗಾಡಿ ನಿಲ್ಲಿಸಿ ಸ್ಟೌವ್‌ಗೆ ಗಾಳಿ ಹೊಡೆಯುವಾಗ, ಸಂಜೆಯಾಗುತ್ತದೆ. ಅದೇ ರಸ್ತೆಯ ಪಕ್ಕ, ಅಂಥದೇ ಗಾಡಿಯಲ್ಲಿ ಕಬಾಬ್, ಬೋಂಡ, ಮೀನುಗಳು ಸುಡುವ ಎಣ್ಣೆಯಲ್ಲಿ ಈಜಿಗಿಳಿದಾಗ, ಸಂಜೆಯಾಗುತ್ತದೆ.

ಬೆಂಗಳೂರಿನ ಸಂಜೆಗೆ ತನ್ನದೇ ಆದ ಮಾದಕತೆಯಿದೆ.

ತಾವು ಮಲಗಿದ್ದಾಗ ಏನೇನಾಯಿತು? ಎಂದು ಕೇಳುತ್ತ ಬೀದಿ ದೀಪಗಳು ಕಣ್ಣರಳಿಸುತ್ತವೆ. ದೇವರಿಗೆ ಬಿಟ್ಟ ಬಸವನಂತೆ ಚಲಿಸುವ ವಾಹನಗಳು ಛಕ್ಕಂತ ದೀಪ ಹಾಕಿಕೊಳ್ಳುತ್ತವೆ. ಮರಗಿಡಗಳು ನಿಧಾನಕ್ಕೆ ಕಪ್ಪಗಾದರೆ, ಎತ್ತರದ ಕಟ್ಟಡಗಳು ಲಕ್ಷ ದೀಪೋತ್ಸವದ ಗೋಪುರಗಳಂತೆ ಮಿಂಚತೊಡಗುತ್ತವೆ. ಗಲ್ಲಿಗೆರಡರಂತಿರುವ ದೇವಸ್ಥಾನಗಳಲ್ಲಿ ದೇವರು ಕೂಡ ಫ್ರೆಶ್‌ ಆಗಿ ಭಕ್ತರ ದರ್ಶನಕ್ಕೆ ಸಿದ್ಧನಾಗುತ್ತಾನೆ.

ಒಲಿದವಳು ಜೊತೆಗಿರುವಾಗ ಬ್ರಿಗೇಡ್, ಎಂ.ಜಿ. ರಸ್ತೆಗಳ ತಂಪು ಗಾಳಿಯ ಮಧ್ಯೆ, ಐಸ್‌ಕ್ರೀಮೂ ಬಿಸಿ ಹುಟ್ಟಿಸುತ್ತದೆ. ಮೊಬೈಲ್‌ಗಳ ಮೂಲಕ ಸಾವಿರಾರು ಸಾಂಕೇತಿಕ ಸಂದೇಶಗಳು, ಲಕ್ಷಾಂತರ ಪಿಸು ಧ್ವನಿಗಳು ಹರಿದಾಡುತ್ತವೆ. ಬಾನ ಹಕ್ಕಿಗಳು ಗೂಡು ಸೇರುವ ಹೊತ್ತಿನಲ್ಲಿ ಮಾನವ ಹಕ್ಕಿಗಳು ರಸ್ತೆಗಿಳಿಯುತ್ತವೆ. ಒಂದರೆಕ್ಷಣ ಸಂಚಾರಿ ಪೊಲೀಸನೂ ಮೈಮರೆಯುತ್ತಾನೆ.

ಪಬ್‌ಗಳಲ್ಲಿ ಬೀರು ನೊರೆಯುಕ್ಕಿಸುತ್ತದೆ. ಗ್ಲಾಸ್‌ಗಳು ಕಿಣಿಕಿಣಿಗುಟ್ಟುತ್ತವೆ. ಮುಚ್ಚಿದ ಬಾಗಿಲನ್ನು ಇಷ್ಟೇ ತೆರೆದು, ಸಮವಸ್ತ್ರಧಾರಿ ಗಾರ್ಡ್ ‘ಗುಡ್ ಇವನಿಂಗ್ ಸರ್’ ಎಂದು ಸ್ವಾಗತಿಸುತ್ತಾನೆ. ಹೋಟೆಲಿನ ರೂಮಿನಲ್ಲಿ ಆಫೀಸ್ ಬಾಯ್, ‘ಸಂಜೆಗೆ ಏನು ಆರ್ಡರ್ ಸರ್?’ ಎಂದು ವಿನೀತನಾಗಿ ವಿಚಾರಿಸುತ್ತಾನೆ. ದರ್ಶಿನಿಗಳಲ್ಲಿ ಅನ್ನ ಉಗಿಯಾಡುತ್ತದೆ. ಚಪಾತಿ ಮೈ ಕಾಯಿಸಿಕೊಳ್ಳುತ್ತದೆ. ಪಲ್ಯ, ಸಾಂಬಾರ್, ರಸಮ್‌ಗಳು ಪರಿಮಳ ಸೂಸುತ್ತ ಕುದಿಯುತ್ತವೆ. ಹೆಂಡತಿ ಗಂಡನ ದಾರಿ ಕಾಯುವಂತೆ ಬಾಳೆ ಎಲೆಗಳು ಭೋಜನಾರ್ಥಿಗಳ ದಾರಿ ನೋಡುತ್ತವೆ.

ಕಾರ್ಖಾನೆಗಳಲ್ಲಿ ಪಾಳಿ ಬದಲಾಗುತ್ತದೆ. ವಾತಾವರಣದಲ್ಲಿ ಗಾಳಿ ತಂಪಾಗುತ್ತದೆ. ಆದರೆ, ಸಿಗ್ನಲ್ ದೀಪಗಳು ಮಾತ್ರ ಬೇಗ ಬದಲಾಗುವುದೇ ಇಲ್ಲ. ತುಂಬು ಬಸುರಿಯಂತಾಗಿರುವ ಸಿಟಿ ಬಸ್‌ಗಳೊಳಗೆ ಸಿಕ್ಕಿಕೊಂಡ ದೂರ ಪ್ರದೇಶದ ಪ್ರಯಾಣಿಕ ಕಿಟಕಿಯತ್ತ ಬಗ್ಗಿ ರಸ್ತೆಯಂಚಿನ ಸಂಭ್ರಮ ನೋಡುತ್ತ ಬೆವರೊರೆಸಿಕೊಳ್ಳುತ್ತಾನೆ. ಕಬ್ಬನ್ ಪಾರ್ಕ್‌ನ ಅಸಂಖ್ಯಾತ ಗಿಡಮರಗಳ ಕೆಳಗೆ ನಿತ್ಯ ಸುಮಂಗಲಿಯರ ಕಣ್ಸನ್ನೆ ಬಾಯ್ಸನ್ನೆಗಳು, ಆ ಕತ್ತಲ್ಲಲೂ, ಕಾಣಬೇಕಾದವರ ಕಣ್ಣು ತಲುಪುತ್ತವೆ.

ಸಂಜೆಯಾದರೆ ಇಲ್ಲಿ ಕೆಲವರು ಸಿಗುವುದೇ ಇಲ್ಲ. ಇನ್ನು ಕೆಲವರು ಸಿಗುವುದು ಸಂಜೆ ಮಾತ್ರ. ಇಡೀ ಊರಿನ ಮುಕ್ಕಾಲು ಪಟ್ಟು ಜನ ಆ ಹೊತ್ತು ರಸ್ತೆಯಲ್ಲಿರುತ್ತಾರೆ. ಪಾರ್ಕ್‌ಗಳು ಭರ್ತಿ. ಸಿನಿಮಾ ಮಂದಿರಗಳು ಫುಲ್. ಹೋಟೆಲ್‌ಗಳು ರಷ್. ಬಸ್‌ಗಳು... ಉಶ್‌...!

ಮಕ್ಕಳಿಗೆ ಹೋಂ ವರ್ಕ್ ಮಾಡಿಸಿ ಟಿವಿ ಧಾರಾವಾಹಿ ನೋಡಲು ಮನೆಯಲ್ಲಿರುವ ತಾಯಂದಿರಿಗೆ ಆತುರ. ಸರ್ಕಾರಿ ಕಚೇರಿಗಳ ಸಿಬ್ಬಂದಿಗೆ ‘ಬೇಕಾದ’ ಫೈಲ್‌ಗಳನ್ನು ವಿಲೇವಾರಿ ಮಾಡಿ ಜೇಬು ತುಂಬಿಸಿಕೊಳ್ಳುವ ಕಾತರ. ಸಿಟಿ ಮಾರ್ಕೆಟ್‌ನ ಸಣ್ಣ ವ್ಯಾಪಾರಿಗಳಿಗೆ ಇದ್ದಬಿದ್ದ ಮಾಲನ್ನೆಲ್ಲ ಖಾಲಿ ಮಾಡುವ ಅವಸರ. ಜೇಬುಗಳ್ಳರಿಗೆ ವೃತ್ತಿ ಚಳಕ ಮೆರೆಯುವ ಸಡಗರ.

ಸಂಜೆ ಹೊತ್ತಿಗೆ ಇಡೀ ಬೆಂಗಳೂರು ಬೀದಿಯಲ್ಲಿರುತ್ತದೆ. ಕೂಗುತ್ತ, ರೇಗುತ್ತ, ಪುಳಕಗೊಳ್ಳುತ್ತ, ಅಲ್ಲಿಂದಿಲ್ಲಿಗೆ ಸರಭರ ಹರಿದಾಡುತ್ತ ತನ್ನೆಲ್ಲ ಕನಸು, ಸೊಗಸು ಮತ್ತು ಕಲ್ಮಶಗಳನ್ನು ಹರಿಬಿಡುತ್ತ ಅರಳುತ್ತದೆ, ಕೆರಳುತ್ತದೆ-

ಮತ್ತು ಎಂಥದೋ ಸುಖದ ನಿರೀಕ್ಷೆಯಲ್ಲಿ ಹೊರಳುತ್ತದೆ.

- ಚಾಮರಾಜ ಸವಡಿ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿದೆ. ಈಗಿನ ಬೆಂಗಳೂರಿನ ಸಂಜೆ ಎಷ್ಟು ಬದಲಾಗಿದೆಯೆಂದರೆ, ನಾನು ಮತ್ತೆ ಅದರ ಜೊತೆಗೂಡಲು ಅಮೇರಿಕದಿಂದ ಹೋದಾಗಲೆಲ್ಲ, ಅದರ ರಭಸದ ಓಟಕ್ಕೆ ನನ್ನ ಹಳೆಯ ಮಂದಗತಿಯ ನಡಿಗೆ ಏನೇನೂ ಹೊಂದಿಕೆಯಾಗದೆ, ನಾನು ತೆಪ್ಪಗೆ ಮನೆಯಲ್ಲಿ ಕುಳಿತು ವಾಪಸ್ಸು ಬಂದಿದ್ದೇನೆ :-)

~ಕಲ್ಪನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಥ್ಯಾಂಕ್ಸ್‌ ಕಲ್ಪನಾ. ನಿಮ್ಮದು ಬೆಂಗಳೂರೇ ಇರಬೇಕು. ಆದರೂ, ಬದಲಾದ ಅದರ ಓಟಕ್ಕೆ ಹೊಂದಿಕೊಳ್ಳುವುದು ನಿಮಗಷ್ಟೇ ಅಲ್ಲ, ಇತ್ತೀಚೆಗೆ ಇತ್ತ ಬಂದ ನಮ್ಮಂಥವರಿಗೂ ಕಷ್ಟವೇ. ಆದರೆ, ಓಡದೇ ವಿಧಿಯಿಲ್ಲ. ಎಲ್ಲ ಉದ್ಯಮಗಳು ಇಲ್ಲಿಯೇ ಕೇಂದ್ರೀಕೃತವಾದಾಗ ಊರು ಬೆಳೆಯದೇ ಇದ್ದೀತೆ? ಇದೊಂದು ಅನಿವಾರ್ಯ ಪೀಡೆ.

ಬೆಂಗಳೂರಿನ ನಾನಾ ಮುಖಗಳಲ್ಲಿ ನಾನು ಬರೆದಿದ್ದು ಒಂದು ಸಣ್ಣ ಮುಖ ಮಾತ್ರ.

- ಚಾಮರಾಜ ಸವಡಿ
http://chamarajsavadi.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉದಯ ಇಟಗಿ
ಅದೆಷ್ಟು ಚೆಂದ ಸರ್ ನಿಮ್ಮ ಬರವಣಿಗೆ! ದೂರದ ಲಿಬಿಯಾದಲ್ಲಿ ಕುಳಿತುಕೊಂಡು ಬೆಂಗಳೂರಿನ ಬಗ್ಗೆ ಓದುತ್ತಿದ್ದರೆ ಬೆಂಗಳೂರು ಒಂದು ಸಾರಿ ಹಾಗೆ ಕಣ್ಣ ಮುಂದೆ ಹಾದು ಹೋಯಿತು. ನಿಜ ಹೇಳಲೇ ನಾನು ಬೆಂಗಳೂರು ಬಿಟ್ಟು ಎರಡು ವರ್ಷ ಆಯಿತು. ಆದರೆ ನನಗೇಕೋ ಈ ಲಿಬಿಯಾನೇ ಇಷ್ಟವಾಗುತ್ತಿದೆ. ಏಕೆಂದರೆ ಇಲ್ಲಿ ಗಿಜಿಗುಡುವ ಜನಜಂಗುಳಿಯಿಲ್ಲ, ಕಲುಷಿತ ಗಾಳಿಯಿಲ್ಲ, ಹೆವಿ ಟ್ರಾಫಿಕ್ ಇಲ್ಲ, ನಿತ್ಯ ಸುಮಂಗಲಿಯರ ಸನ್ನೆಗಳಿಲ್ಲ, ಬಾಂಬ್ ಇಡುವ ಭಯೋತ್ಪಾದಕರಿಲ್ಲ. ಇದು ಉತ್ಪ್ರೇಕ್ಷೆಯಲ್ಲ. ಇಲ್ಲಿರುವದೇ ಹಾಗೆ. ಆದರೆ ಬಾಯಲ್ಲಿ ನೀರೂರಿಸುವ ಪಾನಿ ಪೂರಿ ನೆನಪಾದಾಗೆಲ್ಲ ದೂರದ ಬೆಂಗಳೂರು ನೆನಪಾಗುತ್ತದೆ. ಈ ಫೆಬ್ರುವರಿಗೆ ಬರುತ್ತಿದ್ದೇನೆ ಬೆಂಗಳೂರಿಗೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಥ್ಯಾಂಕ್ಸ್‌ ಉದಯ್‌ ಅವರೇ. ಬೆಂಗಳೂರು ದಟ್ಟ ಅರಣ್ಯದ ಹಾಗೆ. ಲಿಬಿಯಾ ಪಾರ್ಕ್‌ ಇದ್ದಂತೆ. ಪಾರ್ಕಿನಲ್ಲಿ ಎಲ್ಲವೂ ಯೋಜಿತ ರೀತಿಯಲ್ಲಿರುತ್ತವೆ. ಆದರೆ, ಅರಣ್ಯ ಹಾಗಲ್ಲ ನೋಡಿ. ಬೆಂಗಳೂರಿಗೆ ಅದರದೇ ಆದ ಸೊಗಸು. ಒಲ್ಲಿ ಒಂದು ಕಡೆ ಏಟು ಬಿದ್ದರೆ, ಇನ್ನೊಂದು ಭಾಗ ಸಂತೈಸುತ್ತದೆ. ಏಟನ್ನು ಜೀರ್ಣಿಸಿಕೊಂಡು ಪುಟಿದೇಳುವಂತೆ ಮಾಡುತ್ತದೆ. ನನಗನಿಸಿದಂತೆ ಲಿಬಿಯಾದಲ್ಲಿ ಹಾಗಾಗದು.

ಇರಲಿ, ಯೋಜಿತ ನಗರಗಳ ಬದುಕುವ ರೀತಿಯೇ ಹಾಗೆ. ಬೆಂಗಳೂರು ತನ್ನದೇ ರೀತಿಯಿಂದ ಬದುಕುತ್ತಿದೆ, ಬೆಳೆಯುತ್ತಿದೆ. ಅದು ಕಳೆಗುಂದದಂತೆ, ಕೆಟ್ಟುಹೋಗದಂತೆ, ನಮ್ಮ ನಮ್ಮ ಮಿತಿಯಲ್ಲಿ ಕೆಲಸ ಮಾಡಬೇಕಿದೆ. ಇದು ನಾವು ಬದುಕುತ್ತಿರುವ ಮನೆ. ಅದನ್ನು ಚೆನ್ನಾಗಿಟ್ಟುಕೊಳ್ಳಬೇಕು ಎಂಬ ವಿವೇಕ ಮೂಡಬೇಕಿದೆ.

ಥ್ಯಾಂಕ್ಸ್‌ ಸರ್‌.

- ಚಾಮರಾಜ ಸವಡಿ
http://chamarajsavadi.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

http://www.hariharapurasridhar.blogspot.com

ನಿಮಗೆ ಕಷ್ಟವಾದರೂ ಸಹಿಸಿಕೊಂಡು ನಿದ್ರೆ ಒಂದು ಗಂಟೆ ಕಮ್ಮಿಮಾಡಿಯಾದರೂ ಇಂತಹ ಲೇಖನ ಬರೆಯಿರಿ ಚಾಮರಾಜ್.
ನಿಮ್ಮ ಹಿಂದಿನ ಬರಹದ ಹಸುವಿನ ಮೃತದೇಹವನ್ನು ನೋಡಿದ ಮೇಲೆ ನಾಡಹಸುವಿನೊಡನೆ ಒಂದು ಗಂಟೆ ಕಾಲ ಕಳೆದು ಸಮಾಧಾನಿಸಿಕೊಂಡೆ. ಚಿತ್ರಪುಟದಲ್ಲಿ ಆ ಚಿತ್ರ ಇದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಥ್ಯಾಂಕ್ಸ್‌ ಶ್ರೀಧರ್‍ ಸರ್‌, ನಿದ್ದೆ ಮೊದಲಿನಿಂದಲೂ ಕಡಿಮೆಯೇ. ನೀವು ಮೆಚ್ಚಿದಿರಲ್ಲ, ಬರೆದಿದ್ದು ಸಾರ್ಥಕವಾಯ್ತು ಬಿಡಿ.

- ಚಾಮರಾಜ ಸವಡಿ
http://chamarajsavadi.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಥ್ಯಾಂಕ್ಸ್‌ ಹರ್ಷ.

- ಚಾಮರಾಜ ಸವಡಿ
http://chamarajsavadi.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಾಮರಾಜ್,

ಸೂಪರ್‍.
ಇಷ್ಟು ಸೊಗಸಾಗಿ ಹೇಗೆ ಬರೆಯುತ್ತೀರಿ?

-ಅನಿಲ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೀ ಬೋರ್ಡ್‌ ಮೇಲೆ ಕುಟ್ಟುವುದರ ಮೂಲಕ ಅನಿಲ್‌ :)

- ಚಾಮರಾಜ ಸವಡಿ
http://chamarajsavadi.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

;)

- ಚಾಮರಾಜ ಸವಡಿ
http://chamarajsavadi.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೆಲವ್ ನಿಶಾಚರ ಪ್ರಾಣಿಗಳು ರಾತ್ರಿ ನಿದ್ದೆ ಮಾಡೊದಿಲ್ವ೦ತೆ...
ಅ೦ತಾ ಪ್ರಾಣಿಗಳು ಬೆ೦ಗಳೂರಲ್ಲಿ ಜಾಸ್ತಿ .. ಸ್ವಲ್ಪ
ಬೆ೦ಗಳೂರ ರಾತ್ರಿಯ ಬಗ್ಗೆ ಬರೆಯಿರಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಮುರಳಿ. ಪತ್ರಕರ್ತ ಕೂಡ ಅಂತಹ ನಿಶಾಚರಿ. ಖಂಡಿತ ಬರಿತೀನಿ.

- ಚಾಮರಾಜ ಸವಡಿ
http://chamarajsavadi.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

http://www.hariharapurasridhar.blogspot.com

ಪತ್ರಕರ್ತ ನಿದ್ರೆಗೆಡೋದು, ಸಾಹಿತಿಯೊಬ್ಬ ನಿದ್ರೆಗೆಟ್ಟು ಕಂಪ್ಯೂಟರ್ ಮುಮ್ದೆ ಕೂರೋದು, ಇವೆಲ್ಲಾ ಅಲ್ಲಾ, ಅದುಬಿಟ್ಟು ಬೆಂಗಳೂರಿನ ರಾತ್ರಿಯಲ್ಲಿ ಕಣ್ಣಾಮುಚ್ಚಾಲೆಯ ಬಗ್ಗೆ ಮುರುಳಿ ಕೇಳಿದಾರೆ ಅಂತಾ ಕಾಣುತ್ತೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುರಳಿ ಕೇಳಿದ್ದು ನನಗೆ ಅರ್ಥವಾಗಿದೆ ಶ್ರೀಧರ್‌ ಸರ್‌. ನಾನೂ ನಿಶಾಚರಿಯಾಗಿದ್ದರಿಂದ, ಅವರು ಕೇಳಿದ ಸಂಗತಿಗಳ ಬಗ್ಗೆ ಗೊತ್ತಿದೆ ಎಂಬುದಷ್ಟೇ ನನ್ನ ಪ್ರತಿಕ್ರಿಯೆಯ ಉದ್ದೇಶವಾಗಿತ್ತು.

- ಚಾಮರಾಜ ಸವಡಿ
http://chamarajsavadi.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.