ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...

0

ಬೆಂಗಳೂರು ವಿನಾ ಕಾರಣ ಇಷ್ಟವಾಗುತ್ತದೆ. ಒಮ್ಮೊಮ್ಮೆ ವಿನಾಕಾರಣ ಬೇಸರವನ್ನೂ ಹುಟ್ಟಿಸುತ್ತದೆ.

ದೂರದ ಊರಿನಿಂದ ರಾತ್ರಿ ಬಸ್ಸಿಗೆ ಬಂದು, ಬೆಳಿಗ್ಗೆ ಬಸ್ ನಿಲ್ದಾಣದಲ್ಲಿ ಇಳಿದಾಗ ಕಾಣುವ ಬೆಂಗಳೂರು ಮೊದಲು ಹುಟ್ಟಿಸುವುದು ದಿಗಿಲನ್ನು. ಸಿಟಿ ಬಸ್ ಹುಡುಕುವುದರೊಳಗೆ ಬಿಟ್ಟು ಬಂದ ಊರು ನೆನಪಾಗುತ್ತಿರುತ್ತದೆ. ಗೆಳೆಯನ ರೂಮು ಸೇರಿ, ತಾತ್ಕಾಲಿಕ ವಸತಿ ಕಂಡುಕೊಂಡು, ದರ್ಶಿನಿಯಲ್ಲಿ ಪಲಾವ್ ತಿನ್ನುವಾಗ ಅಮ್ಮ ನೆನಪಾಗುತ್ತಾಳೆ. ಆಕೆಯ ಕಮ್ಮನೆಯ ಅಡುಗೆ ನೆನಪಾಗುತ್ತದೆ.

ಮುಂದೆ ಕೆಲಸದ ಬೇಟೆ ಶುರು. ಹೆಜ್ಜೆ ಹೆಜ್ಜೆಗೂ ಬೆಂಗಳೂರು ತನ್ನ ಬಿಗು, ಬಿನ್ನಾಣ, ಕುರೂಪ ಮತ್ತು ಸೊಗಸನ್ನು ತೋರುತ್ತಲೇ ಸಾಗುತ್ತದೆ. ನಾಲ್ಕೈದು ಕಡೆ ’ಕೆಲಸ ಇಲ್ಲ’ ಅನ್ನಿಸಿಕೊಂಡು, ರೂಮು ಸೇರಿ, ಊಟ ಮಾಡದೇ ಅಂಗಾತವಾದಾಗ ನಿರಾಶೆ ಹುಟ್ಟಿಸುವ ನೂರೆಂಟು ನೆನಪುಗಳು. ಈಗಲೇ ಚೀಲ ತುಂಬಿಕೊಂಡು ವಾಪಸ್ ಊರಿಗೆ ಹೋಗಿಬಿಡಲೇ ಎಂಬ ಭಾವನೆ ಎದೆ ತುಂಬಿದರೂ, ಅಲ್ಲಿ ನಿರೀಕ್ಷೆಯಿಟ್ಟುಕೊಂಡು ಕಾಯುತ್ತಿರುವ ಅಪ್ಪ, ಅಮ್ಮ, ತಂಗಿ, ತಮ್ಮ ನೆನಪಾದಾಗ ಮನಸ್ಸು ನಿಡುಸುಯ್ಯುತ್ತದೆ.

ಆದರೆ ಬೆಂಗಳೂರು ಬಲು ಬೇಗ ಪರಿಚಯದ ಹುಡುಗಿಯಂತಾಗಿಬಿಡುತ್ತದೆ. ವಾರದೊಳಗೆ ಸಿಟಿ ಬಸ್‌ಗಳ ನಂಬರುಗಳು ಬಾಯಿಪಾಠವಾಗುತ್ತವೆ. ಹತ್ತು ದಿನದೊಳಗೆ ಮೊದಲ ಕೆಲಸ ಸಿಕ್ಕುಬಿಡುತ್ತದೆ. ಸಂಜೆ ಸಂಭ್ರಮದಿಂದ ಫೋನ್ ಮಾಡಿದಾಗ ಅತ್ತ ಅಪ್ಪ ಹರ್ಷ ಪಡುತ್ತಾನೆ. ಅಮ್ಮ ಸಂತಸದಿಂದ ಕಣ್ಣೀರಿಡುತ್ತಾಳೆ. ತಮ್ಮ, ತಂಗಿಯರು ಯಥಾಪ್ರಕಾರ ’ಯಾವಾಗ ಬರುತ್ತಿ? ಏನು ತರುತ್ತಿ?’ ಎಂದು ಕೇಳುತ್ತಾರೆ. ಮೊದಲ ಬಾರಿ ಬೆಂಗಳೂರು ಅಪಾರ ಭರವಸೆ ಹುಟ್ಟಿಸತೊಡಗುತ್ತದೆ.

ಕೆಲಸದ ಮೊದಲ ದಿನದ ಸಡಗರ ಏನು ಹೇಳುವುದು! ಗೆಳೆಯ ತನ್ನ ಅತ್ಯುತ್ತಮ ಅಂಗಿಯನ್ನು ಕೊಡುತ್ತಾನೆ. ಕನ್ನಡಿ ಎರಡು ನಿಮಿಷ ಹೆಚ್ಚು ಕೇಳುತ್ತದೆ. ಮೂಲೆಯ ತಿರುವಿನಲ್ಲಿ ಕೂತ ಹುಡುಗ ಎರಡೇ ರೂಪಾಯಿಗಳಿಗೆ ಪಳಪಳ ಹೊಳೆಯುವಂತೆ ಷೂಗಳನ್ನು ಉಜ್ಜಿಕೊಡುತ್ತಾನೆ. ಅವತ್ತು ಸಿಟಿ ಬಸ್‌ನ ಸಂದಣಿ ಬೇಸರ ತರುವುದಿಲ್ಲ. ಕಂಡಕ್ಟರ್ ಟಿಕೆಟ್ ಹಿಂದೆ ಬರೆದುಕೊಟ್ಟ ಚಿಲ್ಲರೆ ಕೇಳುವುದು ನೆನಪಾಗುವುದಿಲ್ಲ. ಆಫೀಸ್ ಹತ್ತಿರ ಇಳಿದವನ ಮನಸ್ಸಿನಲ್ಲಿ ಇಡೀ ಬೆಂಗಳೂರನ್ನೇ ಗೆದ್ದ ಉತ್ಸಾಹವಿರುತ್ತದೆ.

ಹೊಸ ಆಫೀಸ್. ಹೊಸ ವಾತಾವರಣ. ಗೇಟಿನಲ್ಲಿ ನಿಂತ ಸೆಕ್ಯುರಿಟಿಯವನು ಸಂದರ್ಶನಕ್ಕೆ ಬಂದಾಗ ಇದ್ದಷ್ಟು ಒರಟಾಗಿರದೇ ಮುಗುಳ್ನಗುತ್ತಾನೆ. ನೇಮಕಾತಿ ಪತ್ರವನ್ನು ಗಮನವಿಟ್ಟು ನೋಡಿದ ರಿಸೆಪ್ಷನಿಸ್ಟ್ ತುಟಿಯನ್ನು ಚೂರೇ ಚೂರು ಅರಳಿಸಿ ಬಾಸ್ ಹತ್ತಿರ ಕಳಿಸುತ್ತಾಳೆ. ಕ್ಷಣಕ್ಷಣಕ್ಕೂ ಧನ್ಯತೆ, ಅಳುಕು ಅನುಭವಿಸುತ್ತಲೇ ಕೆಲಸದ ಮೊದಲ ದಿನ ಮುಗಿಯುತ್ತದೆ. ರಾತ್ರಿ ಗೆಳೆಯನ ಮುಂದೆ ಹೊಸ ಆಫೀಸಿನ ವರ್ಣನೆ. ಅಲ್ಲಿಯ ಜನಗಳ ಬಗ್ಗೆ ವಿವರಣೆ. ಮರುದಿನ ಬೇಗ ಹೋಗಬೇಕೆನ್ನುವ ಉತ್ಸಾಹ. ರಾತ್ರಿ ನಿದ್ದೆ ಕೂಡ ಸರಿಯಾಗಿ ಬರುವುದಿಲ್ಲ. ಎಂಥದೋ ಧನ್ಯತೆ ಮನಸ್ಸನ್ನು ಎಚ್ಚರವಾಗಿಡುತ್ತದೆ.

ಕೆಲಸದ ಮೊದಲ ದಿನಗಳು ಹೀಗೇ ಕಳೆಯುತ್ತವೆ. ಕ್ರಮೇಣ ಗೆಳೆಯನ ರೂಮು ಆಫೀಸಿನಿಂದ ತುಂಬ ದೂರ ಇದೆ ಅನ್ನಿಸತೊಡಗುತ್ತದೆ. ’ಇಲ್ಲೇ ಹತ್ತಿರದಲ್ಲಿ ಒಂದು ಫಸ್ಟ್‌ಕ್ಲಾಸ್ ರೂಮಿದೆ ಸಾರ್. ಟ್ವೆಂಟಿ ಫೋರ್ ಅವರ್ಸೂ ನೀರು ಬರುತ್ತದೆ. ಓನರ್ ಕಿರಿಕಿರಿಯಿಲ್ಲ. ಬಾಡಿಗೆಯೂ ಕಡಿಮೆ...’ ಎಂದು ಆಫೀಸ್ ಹುಡುಗ ಆಮಿಷ ಹುಟ್ಟಿಸುತ್ತಾನೆ. ಮೊದಲ ಸಂಬಳ ಕೈಗೆ ಬರುವ ಹೊತ್ತಿಗೆ ಸ್ವಂತ ರೂಮು ಮಾಡಿಕೊಳ್ಳುವ ತವಕ.

ಬೆಂಗಳೂರು ಕನಸು ಹುಟ್ಟಿಸುವುದೇ ಹೀಗೆ. ಕೆಲಸವಾಯಿತು. ಸ್ವಂತ ರೂಮಾಯಿತು. ಬೆಳಿಗ್ಗೆ ರೂಮಿನಲ್ಲೇ ಬಿಸಿ ಬಿಸಿ ಕಾಫಿ ಮಾಡಿಕೊಂಡು ಪತ್ರಿಕೆ ಓದುತ್ತ ಕಾಫಿ ಕುಡಿಯುವಾಗ ಜೀವನದ ಧನ್ಯತೆ ಬೆಚ್ಚನೆಯ ಹನಿಗಳಾಗಿ ಮೈ ಮನಸ್ಸುಗಳನ್ನು ಅರಳಿಸುತ್ತದೆ. ಸ್ನಾನ ಮಾಡಿ ತಯಾರಾಗಿ, ಬಾಗಿಲಿಗೆ ಬೀಗ ಹಾಕಿಕೊಂಡು ಆಫೀಸಿಗೆ ಹೋಗುವಾಗ. ’ನಾನೂ ಏನಾದರೂ ಮಾಡಬಲ್ಲೆ’ ಎಂಬ ಆತ್ಮವಿಶ್ವಾಸ ಹಾಕುವ ಪ್ರತಿಯೊಂದು ಹೆಜ್ಜೆಯಲ್ಲೂ ಎದ್ದು ಕಾಣುತ್ತದೆ.

ದಿನಗಳೆದಂತೆ ನಾವು ಬೆಂಗಳೂರಿನ ತಾಪತ್ರಯಗಳನ್ನು ಸಹಿಸಿಕೊಳ್ಳುತ್ತ, ಅದು ನೀಡುವ ಅವಕಾಶಗಳಿಗೆ ಮುಖ ಒಡ್ಡುತ್ತ, ರಜೆಗೊಮ್ಮೆ ಮಾತ್ರ ಊರಿಗೆ ಹೋಗುತ್ತ, ಕಾಫಿ ತಡವಾದರೆ ರೇಗುತ್ತ, ನೀರು ಬಾರದಿದ್ದರೆ ಶಪಿಸುತ್ತ, ಕೇಬಲ್‌ನವನು ಏಕಾಏಕಿ ರೇಟ್ ಹೆಚ್ಚಿಸಿದಾಗ ಪ್ರತಿಭಟಿಸದೇ ಕಾಸು ಕೊಡುತ್ತ, ತಳ್ಳು ಗಾಡಿಯಲ್ಲಿ ತರಕಾರಿ ಮಾರುವವನ ಹತ್ತಿರ ಸೊಪ್ಪಿಗಾಗಿ ಚೌಕಾಸಿ ಮಾಡತೊಡಗುತ್ತೇವೆ.

ಕ್ರಮೇಣ ಬೆಂಗಳೂರಿನವರೇ ಆಗಿಬಿಡುತ್ತೇವೆ.

- ಚಾಮರಾಜ ಸವಡಿ
(ಬೆಂಗಳೂರಿನಲ್ಲಿ ಮೊದಲ ಬಾರಿ ಕೆಲಸ ಗಿಟ್ಟಿಸಿದಾಗಿನ ಬರವಣಿಗೆ. ಪ್ರಜಾವಾಣಿಯಲ್ಲಿ ಅಚ್ಚಾಗಿತ್ತು.)

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಚಾಮರಾಜ್,
ಎಷ್ಟು ಚೆನ್ನಾಗಿ ಬರೀತೀರಿ! ವಾಹ್!
ನಿಜವಾದ ಅನುಭವ ಕಥನ. ಈಗ್ಗೆ ಮೂರು ನಾಲ್ಕು ದಶಕಗಳ ಮುಂಚೆ ಕೆಲಸ ಇಲ್ಲದೆ ನಾನು ಬೆಂಗಳೂರಿನಲ್ಲಿ ಅಲೆಯುತ್ತಿದ್ದಾಗಒಂದು ದಿನ ನನ್ನ ಅಣ್ಣನಿಗೆ ರೇಶ್ಮೆ ಇಲಾಖೆಯಲ್ಲಿ ಬಹುಮಹಡಿಕಟ್ಟಡದಲ್ಲಿ ಸಂದರ್ಶನ ನಡೆದಿತ್ತು. ಸೆಲೆಕ್ಟ್ ಆಗಲಿಲ್ಲವೆಂದು ಅಲ್ಲೇ ತಿಳಿದಾಗ ಒಂದು ಕ್ಷಣ ನಾನು ಯೋಚಿಸಿದ್ದುಂಟು" ಇದೀಗಲೇ ಆ ಕಟ್ಟಡದ ದೊಡ್ಡ ಕಿಟಕಿಯಿಂದ [ನಾಲ್ಕನೇ ಅಂತಸ್ತಿನಿಂದ]ಕೆಳಗೆ ಹಾರಿಬಿಡಲೇ ಎಂದು!! ಕೆಲಸಪಡೆಯದೆ ದಾರಿಯೇ ಇರಲಿಲ್ಲ. ಅಂತಹ ಕಿತ್ತುತಿನ್ನುವ ಬಡತನ!! ಅಂದು ಅಂತ ಕೆಟ್ಟ ನಿರ್ಧಾರ ಮಾಡಿಬಿಟ್ಟಿದ್ದರೆ ನಮ್ಮ ಅಪ್ಪ ಅಮ್ಮನ ದೊಡ್ಡಕುಟುಂಬ ಬೀದಿಪಾಲಾಗುತ್ತಿತ್ತು!
ನಿಮ್ಮ ಬೆಂಗಳೂರು ಜೀವನ ನನ್ನನ್ನು ಮೂರು ನಾಲ್ಕು ದಶಕಗಳ ಹಿಂದಕ್ಕೆ ಕರೆದುಕೊಂಡು ಹೋಗಿಬಿಟ್ಟಿತು
ನಿಜವಾಗಲೂ ಜೀವನದ ಅನುಭವಕ್ಕಿಂತ ದೊಡ್ಡಪಾಠ ಬೇರೊಂದಿಲ್ಲ. ಅಲ್ವಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಸಾರ್‌. ಬೆಂಗಳೂರು ಮೊದಲು ನಿರಾಶೆ, ನಂತರ ಭರವಸೆ ಕೊಡುವುದೇ ಹೆಚ್ಚು. ನನಗಂತೂ ಇವೆರಡೂ ಸಮಸಮ ಆಗಿವೆ. ಪ್ರತಿ ಬಾರಿ ಅರೆಮನಸ್ಸಿನಿಂದಲೇ ಇಲ್ಲಿ ಬರುತ್ತೇನೆ. ಮೊದಲ ಅವಕಾಶ ಸಿಕ್ಕ ಕೂಡಲೇ ಇಲ್ಲಿಂದ ಓಡುತ್ತೇನೆ. ಆದರೆ, ಮತ್ತೆ ಮತ್ತೆ ಇಲ್ಲಿಗೆ ಬರುವಂತೆ ಮಾಡಿದೆ ಬೆಂಗಳೂರು. ಬಿಟ್ಟೆನೆಂದರೂ ಬಿಡದೀ ಬೆಂಗಳೂರು.

ನಿಮ್ಮ ಅನುಭವವನ್ನೂ ಬರೆಯಿರಿ ಸರ್‌. ನಾಲ್ಕು ದಶಕಗಳ ಹಿಂದೆ ಬೆಂಗಳೂರು ಹೇಗಿತ್ತು ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದೆ.

- ಚಾಮರಾಜ ಸವಡಿ
http://chamarajsavadi.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬ ಚೆನ್ನಾಗಿದೆ ಬರಹ.... ನಾನು ಕೆಲಸ ಹುಡುಕಿದ ದಿನಗಳ ನೆನಪಾಯಿತು...

ಇಂತೀ ನಿಮ್ಮ
ರಾಜ
http://nekkarguru.blogspot.com/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಳೆಯ ಬರಹ ಅನ್ನಿಸುವುದೇ ಇಲ್ಲ!
*ಅಶೋಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

”ಹಾಡು ಹಳೆಯದಾದರೇನು, ಭಾವ ನವನವೀನ...’ :)

- ಚಾಮರಾಜ ಸವಡಿ
http://chamarajsavadi.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರೆದು ಮರೆತಿಟ್ಟಿದ್ದ ಬರಹ ಇದು ನೇಕಾರ್‌ ಅವರೇ. ಇಂದು ಹುಡುಕುತ್ತಿದ್ದಾಗ ಸಿಕ್ಕಿತು.

ಮತ್ತೆ ಹಳೆಯ ದಿನಗಳು ನೆನಪಾದವು.

- ಚಾಮರಾಜ ಸವಡಿ
http://chamarajsavadi.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆ ದಿನಗಳು.

ಇಂತಿ ನಿಮ್ಮ,
ಅನಿಲ್ ರಮೇಶ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)

- ಚಾಮರಾಜ ಸವಡಿ
http://chamarajsavadi.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

'ಆ ದಿನಗಳ' ನೆನಪುಗಳು...'ಈ ದಿನಗಳಲ್ಲಿ'! ಲೇಖನ ಚೆನ್ನಾಗಿದೆ.
-ಸವಿತ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುಂದಿನ ದಿನಗಳವರೆಗೆ... :)

- ಚಾಮರಾಜ ಸವಡಿ
http://chamarajsavadi.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜವಾಗಿಯೂ ತುಂಬಾ ಚೆನ್ನಾಗಿದೆ ಬರಹ..
ಹೊಟ್ಟೆ ಪಾಡಿಗೆ ಜೀವನ ನಡೆಸಲು ಬೆಂಗಳೂರು ಎಂಬ ಮಾಯಾನಗರಿಗೆ ಕೆಲಸ ಹುಡುಕಿಕೊಂಡು ಬರುವ, ನಮ್ಮಂತಹ ಅನೇಕ ಜನರ ಭಾವನೆಗಲ್ಲನು ಕಣ್ಣಿಗೆ ಕಟ್ಟುವ ಲೇಖನ ಚೆನ್ನಾಗಿದೆ

ನಿಮ್ಮ ಪ್ರೀತಿಯ
ಬಾಬಾ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೆಂಗಳೂರು ಹುಟ್ಟಿಸುವ ಮೊದಲ ಅನುಭವಗಳು ಹೀಗೇ ಅಲ್ಲವೆ ಬಾಬಾ ಅವರೇ? ಇದನ್ನು ನಿರಾಕರಿಸುತ್ತಲೇ ಒಪ್ಪಿಕೊಂಡವರು ನಾವು. ಇಲ್ಲಿಂದ ಹೋಗಿಬಿಡಬೇಕು ಅಂದುಕೊಳ್ಳುತ್ತ ಇಲ್ಲೇ ಉಳಿದವರು.

- ಚಾಮರಾಜ ಸವಡಿ
http://chamarajsavadi.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರಹ, ಶೀರ್ಷಿಕೆ ಎರಡೂ ಸೊಗಸಾಗಿದೆ..
--
PaLa

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)

- ಚಾಮರಾಜ ಸವಡಿ
http://chamarajsavadi.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ’ಹಿಂದಿನ’ ಬರಹ ನನ್ನ ’ಇಂದಿನ’ ಬದುಕಾಗಿದೆ. ಬೆಂಗ್ಳೂರಿಗೆ ಬರುವ ಎಲ್ಲರಿಗೂ ಪ್ರಾರಂಬದಲ್ಲಿ ಇಂತಹ ಅನುಭವಗಳಾಗಿ... ಕ್ರಮೇಣ ಅಭ್ಯಾಸವಾಗಿಬಿಡುತ್ತದೆ. ಆದರೆ ನನ್ನ ಪಾಲಿಗೆ ಈಗಲೂ ಇದೇ daily releasing cinema. ಬಂದು ಎಂಟು ವರ್ಷವಾದರು ತಿಂಗಳಲ್ಲಿ ೧೦ ದಿವಸ ಗೆಲ್ಲುವ ಉತ್ಸಾಹ ನೀಡಿದರೆ, ೨೦ ದಿವಸ ಮೆಜೆಸ್ಟಿಕ್ ನಲ್ಲಿರೊ ಹಳ್ಳಿಯ ಬಸ್ ಕಡೆ ’ಓಡು’ ಎನ್ನುತ್ತದೆ. ಓಡಿದ್ರು ಎರೆಡೇ ದಿನಕ್ಕೆ ವಾಪಸ್ಸು ಕರೆಸಿಕೊಳ್ಳುತ್ತದೆ ಈ ಬೆಂಗಳೂರು...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿಂದಿನ ಬರಹವಾದೂ, ನನ್ನ ಇಂದಿನ ಬದುಕೂ ಅದೇ. ಬೆಂಗಳೂರಿನ ಸಹವಾಸವೇ ಬೇಡ ಎಂದು ಮೂರು ಸಾರಿ ವಾಪಸ್‌ ಹೋಗಿದ್ದೆ. ಆದರೆ, ಮಾಯಾವಿ ಬಿಡಲಿಲ್ಲ. ಮತ್ತೆ ಹಿಂತಿರುಗಿದ್ದೇನೆ. ಮತ್ತೆ ಯಾವಾಗ ಓಡಿ ಹೋಗುತ್ತೇನೋ ಗೊತ್ತಿಲ್ಲ.

- ಚಾಮರಾಜ ಸವಡಿ
http://chamarajsavadi.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕ್ಕತ್ತಾಗಿದೆ. ಓದ್ತಾ-ಓದ್ತಾ, ಒಂದೊಂದಾಗಿ ನೆನಪುಗಳು...
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote] ಸಕ್ಕತ್ತಾಗಿದೆ. ಓದ್ತಾ-ಓದ್ತಾ, ಒಂದೊಂದಾಗಿ ನೆನಪುಗಳು...

ಉಕ್ಕಿದವೆ? ಬರೀರಿ ಮತ್ತೆ. ನಾವೂ ಒಂದಿಷ್ಟು ಓದಿ, ನಮ್ಮ ನೆನಪುಗಳನ್ನೂ ಕೆದಕಿಕೊಳ್ಳೋಣ.

- ಚಾಮರಾಜ ಸವಡಿ
http://chamarajsavadi.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರಹ ಚೆನ್ನಾಗಿದೆ - ಬೆಂಗಳೂರೊಂದೇ ಅಲ್ಲ, ಬೇರೆ ಎಲ್ಲಿಗೆ ಕೆಲಸದ ಮೇಲೆ ಹೋಗಿ ನೆಲೆನಿಂತವರ ಕಥೆಯೂ ಇದೇನೇ!
ಎಲ್ಲರೂ ಅಲ್ಲಿದೆ ನಮ್ಮ ಮನೆ - ಇಲ್ಲಿರುವುದು ಸುಮ್ಮನೆ ಅಂತ ಹಾಡ್ತಿರೋರೇ ಹೆಚ್ಚು :)

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಿಯಾದ ಸಮಯಕ್ಕೆ ನಿಮ್ಮ ಲೇಖನ ಓದಲು ಸಿಕ್ಕಿತು. ಪರ ದೇಶದಲ್ಲಿ ಕೆಲಸ ಹುಡುಕುವ ಪರಿಯ ಬಣ್ಣಿಸಲಾರೆ. ಬೆಳಿಗ್ಗೆಯಿಂದ ಸತ್ತು ಹೋಗಬೇಕು ಎನ್ನಿಸುತ್ತಿತ್ತು.
ನಿಮ್ಮ ಲೇಖನ ದಿಂದ ಪ್ರಪಂಚದಲ್ಲಿ ನನ್ನಂತೆ ಎಲ್ಲರೂ ಕೆಲಸ ಹುಡುಕುವಾಗ ಕಷ್ಟಪಡುತ್ತಾರೆ ಎಂದು ಗೊತ್ತಾಯಿತು.

ಬೆಂಗಳೂರಿಗೆ ಬರಲೂ ಆಗುವುದಿಲ್ಲ, ಇಲ್ಲಿಯೇ ಇದ್ದು ಜಯಿಸಲೇಬೇಕು, ಸಾಯುವ ಹಾಗಿಲ್ಲ. ಯಾಕೆಂದರೆ ನಾನೊಬ್ಬ ಅಮ್ಮ.

ಚಾರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಚಾರು ಅವರೇ, ಎಲ್ಲರ ಕಷ್ಟಗಳ ಪರಿ ಒಂದೇ. ಬಣ್ಣನೆ ಮಾತ್ರ ಬೇರೆ ಬೇರೆ.

- ಚಾಮರಾಜ ಸವಡಿ
http://chamarajsavadi.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಹಂಸಾನಂದಿಯವರೇ,

ನಾನು ಓಡಾಡಿದ್ದು ನೆನಪಿಸಿಕೊಂಡರೆ, ದಾಸರು ಹೇಳಿದ ’ಹೊತ್ತ ಒಜ್ಜೆಗಳೇನು, ಹಿಡಿದ ಗಿಂಡಿಗಳೇನು, ಹೆಜ್ಜೆ ಸಾಲಿನ ಪಯಣ, ನಾರಾಯಣ’ ಎಂಬುದು ವಾಸ್ತವ ಅನಿಸುತ್ತದೆ. ಎಷ್ಟೋ ಸಾರಿ, ಎಲ್ಲ ಬಿಟ್ಟು ಒಂದೆಡೆ ಇಷ್ಟ ಬಂದ ಕೆಲಸ ಮಾಡುತ್ತ ಇದ್ದುಬಿಡಬೇಕು ಅನ್ನಿಸಿದೆ.

- ಚಾಮರಾಜ ಸವಡಿ
http://chamarajsavadi.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಬೆಂಗಳೂರಿಗೆ ವರ್ಗವಾಗಿ ಮೇಜೆಸ್ಟಿಕ್ ಬಸ್ ನಿಲ್ದಾಣದಲ್ಲಿನ ಸೇತುವೆ ಮೇಲೆ ದಾಟುವಾಗ ಸುತ್ತಲ ಜನಜಂಗುಳಿ ನೋಡಿ "ಎಷ್ಟೊಂದ್ ಜನ ಇಲ್ಲಿ ಯಾರು ನಮ್ಮೋರೂ ? ಎಷ್ಟೊಂದ್ ಮನೆ , ಎಲ್ಲಿ ಎಲ್ಲಿ ನಮ್ಮನೆ ? ಎಲ್ಲಿ ? ಎಲ್ಲಿ ? ಎಲ್ಲಿ ನಮ್ಮನೆ? " ಅನ್ಸಿತ್ತು !

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಶ್ರೀಕಾಂತ್‌ ಅವರೇ, ಮೆಜೆಸ್ಟಿಕ್‌ ಬಸ್‌ ನಿಲ್ದಾಣ ನಮ್ಮೆಲ್ಲರ ಮೊದಲ ತಳಮಳವೂ ಹೌದು, ನಂತರದ ಭರವಸೆಯೂ ಹೌದು.

- ಚಾಮರಾಜ ಸವಡಿ
http://chamarajsavadi.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.