ಕನಸಿನ ಹಗಲು ಕಾಟ

0

ಇರುಳು ನಿದ್ದೆಯಲ್ಲಿ ಬರಬೇಕಾದ ಕನಸು, ಹಗಲೆಲ್ಲಾ ಜತೆಯಲ್ಲೇ ಓಡಾಡಿಕೊಂಡಿದ್ದರೆ ತುಂಬಾ ಕಷ್ಟ. ಕೆಲವು ಕಡೆಗಳಿಗೆ ಅದನ್ನು ಕರಕೊಂಡು ಹೋಗಲು ನನಗೆ ಇಷ್ಟವಿಲ್ಲ. ಅದು ಕನಸಿಗೆ ಗೊತ್ತಾಗುವುದಿಲ್ಲ. ಹೇಳಿದರೆ ಕೇಳಲು ಅದಕ್ಕೆ ಕಿವಿಯಾಗಲೀ ಮತ್ತೊಂದಾಗಲೀ ಇಲ್ಲ.

ಈಗ ನೋಡಿ ಇಲ್ಲಿ ಬೆಳಿಗ್ಗೆ ಕೆಲಸದವರ ಜತೆ ಕಾಫಿ ಕುಡಿಯುವಾಗ ಪಕ್ಕದಲ್ಲೇ ಕೂತು ನಗತ್ತೆ. ಏನೆಂದು ಪರಿಚಯಿಸಲಿ? ಹುಚ್ಚ ಎಂದುಕೊಳ್ಳುವುದಿಲ್ಲವೆ? ಅಥವಾ ಅದು ಇಲ್ಲವೇ ಇಲ್ಲ ಎಂಬಂತೆ ನಟಿಸಲೇ? ನನಗೆ ಗೊತ್ತಿಲ್ಲ ಯಾರ ಕನಸೋ ಇದು ಎಂಬಂತೆ ಇರಬಹುದು. ಆದರೆ, ನನ್ನ ಮಗುವನ್ನೇ ನಾನು ನನ್ನದಲ್ಲ ಎಂದಂತಲ್ಲವೆ ಅದು?

ನಾಳೆ ನಾನು ಕಣ್ಣಿನ ಡಾಕ್ಟರ್‍ ಬಳಿ ಹೋಗಬೇಕು. ಆಗ ಇದು ನನ್ನ ಜತೆ ಬಂದರೆ ಏನು ಮಾಡುವುದು? ಹುಚ್ಚರ ಡಾಕ್ಟರ್‍ ಹತ್ತಿರ ಹೋಗುವ ಬದಲು ಇಲ್ಲಿ ಬಂದಿದ್ದೀಯ ಅಂತ ಅವರು ಕೇಳಿಬಿಟ್ಟರೆ? ನನಗಂತೂ ಕಪಾಳಕ್ಕೆ ಹೊಡೆಯುವಂಥ ಸಿಟ್ಟು ಬಂದೀತು. ಅಲ್ಲದೆ ಅದನ್ನು ನನ್ನ ಕೆಲಸಗಳ ನಡುವೆ, ಪರಿಚಯದವರ ನಡುವೆ ಸಂಭಾಳಿಸುವಷ್ಟರಲ್ಲಿ ಸಾಕು ಸಾಕಾಗುತ್ತದೆ. ನಿಜ ಹೇಳಬೇಕೆಂದರೆ, ಮಧ್ಯಾಹ್ನದ ಹೊತ್ತಿಗೇ ನಿದ್ದೆ ಬರುವಷ್ಟು ಸುಸ್ತಾಗುತ್ತೇನೆ.

ಈಗ ನಾನು ಕೇಳುತ್ತಿರುವುದು ಇಷ್ಟು. ಇಲ್ಲಿ ಉಳಿದವರಿಗೆ ಯಾರಿಗಾದರೂ ಈ ರೀತಿಯ ತೊಂದರೆ ಆಗಿದೆಯ? ಆಗ ಏನು ಮಾಡುತ್ತೀರಿ? ಕಾಟ ಕೊಡದ ಹಾಗೆ ಈ ಕನಸುಗಳನ್ನು ಎಲ್ಲಿಗಾದರೂ ಬಿಟ್ಟು ಬರಲು ಸಾಧ್ಯವ? ಮಕ್ಕಳನ್ನು ನೋಡಿಕೊಳ್ಳಲು ಇರುವಂತ ಯಾವುದಾದರೂ ಜಾಗ ಕನಸುಗಳನ್ನು ಬಿಡಲು ಇದೆಯೆ? ಮತ್ತೆ ಸಂಜೆ ಮನೆಗೆ ಹೋಗುವಾಗ ತಪ್ಪದೆ ಕರೆದೊಯ್ಯುತ್ತೇನೆ.

ಅವಿಲ್ಲದಿದ್ದರೆ ನನಗೆ ನಿದ್ದೆ ಬರುವುದಿಲ್ಲ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಅನಿವಾಸಿಯವರೇ,
ಒಳ್ಳೆಯ ಕಲ್ಪನೆ (ನಿಜ ಹೇಳಬೇಕೆಂದರೆ ವಾಸ್ತವ). ಈ ಸಮಸ್ಯೆ ನನಗೂ ಇದೆ ಬಿಡಿ. ಬಹುಶ: ಎಲ್ಲರಿಗೂ ಇದೆ.

ಅಲ್ಲದ ಸಮಯದಲ್ಲಿ ಬರುವ ಕನಸುಗಳು ಸಮಯ ಹಾಳು ಕೂಡ ಮಾಡಬಲ್ಲವು. ಕಲಾಂ ಹೇಳುತ್ತಾರೆ, ’Today is the tomorrow you were dreaming about yesterday'. ಮತ್ತೆ ಅದನ್ನು ನಾಳೆಯ ಬಗ್ಗೆ ಕನಸು ಕಟ್ಟಲು ಹಾಳುಮಾಡದೆ, ಕಟ್ಟಿದ ಕನಸನ್ನು ಸಾಕಾರಗೊಳಿಸಲು ಉಪಯೋಗಿಸುವುದು ಒಳ್ಳೆಯದು.

ಹೇಳುವುದು ಸುಲಭ, ಮಾಡುವುದು ಕಷ್ಟ :(

ಚೆನ್ನಾಗಿ ಬರೆದಿದ್ದೀರಿ.

ವಸಂತ್ ಕಜೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನಿವಾಸಿಯವರೆ,

ನಿದ್ರೆಯಲ್ಲಿ ಎರಡು ಭಾಗ. ಅಕ್ಷಿ ತೀವ್ರಚಲನಾನಿದ್ರೆ (ರಾಪಿಡ್ ಐ ಮೂವ್‍ಮೆಂಟ್ ಸ್ಲೀಪ್) ಹಾಗೂ ಅಕ್ಷಿ ತೀವ್ರಚಲನಾ ರಹಿತ ನಿದ್ರೆ (ನಾನ್-ರಾಪಿಡ್ ಐ ಮೂವ್‍ಮೆಂಟ್ ಸ್ಲೀಪ್). ಕನಸುಗಳು ಅಕ್ಷಿ ತೀವ್ರ ಚಲನಾನಿದ್ರೆಯಲ್ಲಿ ಮಾತ್ರ ಬೀಳುತ್ತವೆ. ಹಗಲಲ್ಲೂ ಇಂತಹ ವಿಭಜನೆ ನೀವೇ ಮಾಡಿಕೊಳ್ಳಿ. ಏಕಾಂತ ಮತ್ತು ಜನಾಂತ. ಏಕಾಂತದಲ್ಲಿ ಕನಸುಗಳಿಗೆ ಕಾಟ ಕೊಡಲು ಅನುಮತಿ ನೀಡಿ. ಜನಾಂತದಲ್ಲಿ ಬಾಯಿ ಮುಚ್ಚಿಕೊಂಡು ತೆಪ್ಪಗಿರಲು ಹೇಳಿ! (ಕೆಲವು ಸಲ ನನ್ನ ಆಣತಿಯನ್ನು ಮೀರಿ ಜನಾಂತದಲ್ಲೂ ಕಿರಿಕಿರಿ ಮಾಡುತ್ತವೆ ಈ ಕನಸುಗಳು!)
- ನಾಸೋ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"...ಕನಸುಗಳು ಅಕ್ಷಿ ತೀವ್ರ ಚಲನಾನಿದ್ರೆಯಲ್ಲಿ ಮಾತ್ರ ಬೀಳುತ್ತವೆ..."

ನಾವು ಕನ್ನಡದಲ್ಲಿ ಕನಸುಗಳನ್ನು 'ಬೀಳಿ'ಸಿಕೊಳ್ಳುತ್ತೇವೆ ಮತ್ತು ಕನಸನ್ನು 'ಕಾಣು'ತ್ತೇವೆ ಕೂಡ.

ಕಾಣುವ ಕನಸುಗಳಿಗೂ ಬೀಳುವ ಕನಸುಗಳಿಗೂ ಏನು ಬೇರೆತನ? ನಾವು ಒಮ್ಮೆ 'ಕನಸು ಬೀಳುವುದು' ಎನ್ನುತ್ತೇವೆ ಮತ್ತು ಕೆಲವೊಮ್ಮೆ 'ಕನಸು ಕಂಡೆ' ಎನ್ನುತ್ತೇವೆ. :)

ಕಾಣುವ ಕನಸುಗಳು ನಾವು ನಮ್ಮ ಬದುಕಿನಲ್ಲಿ ಯಾವುದಾದರೂ ಗುರಿ ಇಟ್ಟುಕೊಂಡು ಅದನ್ನು ಮುಟ್ಟಲು ಇಂತ ಕನಸುಗಳನ್ನು 'ಕಾಣು'ತ್ತಿರುತ್ತೇವೆ. ಆದರೆ ಆ 'ಬೀಳುವ' ಕನಸುಗಳು ಯಕಾಯಕಿ ಬೀಳುತ್ತಿರುತ್ತವೆ. :) ಯಾರದರೂ ನನಗೆ ಈ ದಿನ ಇಂತ ಕನಸು ಬೀಳುತ್ತದೆ ಎಂದರೆ ಅವರಿಗೆ ನಾನು ಅಡ್ಡಬೀಳುತ್ತೇನೆ. :) ಬೀಳುವ ಕನಸುಗಳಲ್ಲಿ 'ಊ' (randomness) ಹೆಚ್ಚು.

ಒಟ್ಟಿನಲ್ಲಿ ಕಾಣುವ ಕನಸೋ ಬೀಳುವ ಕನಸೋ ನಮಗೆ ಎರಡೂ ಬೇಕು. ಇದರಿಂದ ನಾವು ನಮ್ಮ ಬದುಕಿನ ಎಡರು-ತೊಡರುಗಳನ್ನು ಮರೆಯುತ್ತೇವೆ. ( ಅತ್ವ ಮರೆತೆವು ಅನ್ನೋ ಬ್ರಮೆಯಲ್ಲಾದರೂ ಇರುತ್ತೇವೆ)

ಇನ್ನು ಬೇಂದ್ರೆಯವರು 'ಕಣಸು' (ವಿಶನ್) ಬದುಕಿಗೆ ಬೇಕು ಎನ್ನುತ್ತಾರೆ.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮ ಬಗ್ಗೆ ನಾವು ಮಾತನಾಡುವಾಗ ನಾವು ಕನಸನ್ನು `ಕಾಣುತ್ತೇವೆ`. ಇನ್ನೂಬ್ಬರ ಬಗ್ಗೆ ಮಾತನಾಡುವಾಗ ಅವರಿಗೆ ಕನಸು `ಬೀಳುತ್ತದೆ`. ಉದಾ: ರಾತ್ರಿ ಯಾಕೋ ಅಷ್ಟು ಜೋರಾಗಿ ಕಿರುಚಿಕೊಂಡೆ? ಕೆಟ್ಟಾ ಕನಸು-ಗಿನಸು ಏನಾದ್ರು ಬಿತ್ತಾ? :-)

- ನಾಸೋ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದು ಹಾಗಲ್ಲ ;

"ನಿನ್ನೆ ರಾತ್ರಿ ನನಗೆ ಕೆಟ್ಟ ಕನಸು ಬಿದ್ದಿತು ; ಅವನು ಸಿನೆಮಾ ಸ್ಟಾರ್ ಆಗುವ ಕನಸು ಕಾಣ್ತಿದ್ದಾನೆ ."

’ಕನಸು ಕಾಣುವದು’ ಪ್ರಜ್ನಾಪೂರ್ವಕ ಕ್ರಿಯೆ ; ನಾವು ಮುಂದೊಂದು ದಿನ ಏನೋ ಸಾಧಿಸುವ ಬಗ್ಗೆ ಒಳ್ಳೆಯ ಕನಸು ಕಾಣುತ್ತೇವೆ . ಕೆಟ್ಟ ಕನಸನ್ನು ಯಾರೂ ಕಾಣೋದಿಲ್ಲ ;

ಕನಸು ಬೀಳುವದು ನಮ್ಮ ಕೈಲಿಲ್ಲ ; ಹಾಗಾಗಿ ಒಳ್ಳೇ ಕನಸು ಕೆಟ್ಟ ಕನಸು ’ಬೀಳುತ್ತವೆ’

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಿಶ್ರಿಕೋಟಿ ಸಾರ್,
ನೀವು ಹೇಳುವುದು ನನಗೆ ಹೆಚ್ಚು ಸರಿ ಅನ್ನಿಸುತ್ತಿದೆ. ಇದನ್ನೆ ನಾನು ಹೇಳಿರುವುದು.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೀಳುವುದು, ಕಾಣುವುದು ಎಲ್ಲ ನುಡಿಯ semantics ಅನ್ಸತ್ತೆ. ನನಗೆ ಅವುಗಳು ಇವೆ ಅಷ್ಟೆ :) ಬೇಡದ ಕಡೆ, ಬೇಡದ ಹೊತ್ತಿನಲ್ಲೂ...
ಕಜೆ, ಡಾಕ್ಟರು, ಮಹೇಶ ಎಲ್ಲ ಪರಿಹಾರದತ್ತ ಬೆಟ್ಟು ತೋರಿಸಿದ್ದಾರೆ, ಆದರೆ "ಹೇಳಿದರೆ ಕೇಳಲು ಅದಕ್ಕೆ ಕಿವಿಯಾಗಲೀ ಮತ್ತೊಂದಾಗಲೀ ಇಲ್ಲ" :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.