ಹೇಗಿದ್ದ ಊರು ಹೇಗಾಯಿತು!

4.4

ಪ್ರತಿ ವರ್ಷದಂತೆ, ಕಳೆದ ಮಹಾಲಯ ಅಮಾವಾಸ್ಯೆಯ ಹಬ್ಬಕ್ಕೆ ಊರಿಗೆ ಹೋಗಿದ್ದೆವು. ನನಗೆ ಚಿಕ್ಕಂದಿನಿಂದಲೂ ಈ ಹಬ್ಬವೆಂದರೆ ಅದೇನೋ ಉತ್ಸಾಹ. ಕಾರಣ ನಮ್ಮೂರಲ್ಲಿ ಗಣೇಶ ವಿಸರ್ಜನೆ ಮಾಡುವುದು ಮಹಾಲಯ ಆಮಾವಾಸ್ಯೆಯ ಮರುದಿನದಂದು. ಹಳ್ಳಿಯ ಮಟ್ಟಿಗೆ ಬಹಳ ವಿಜೃಂಭಣೆಯಿಂದಲೇ ಎಲ್ಲರೂ ಕುಣಿದು ಕುಪ್ಪಳಿಸಿ ಊರಿನ ಹಿಂದಿದ್ದ ಕೆರೆಯಲ್ಲಿ ಗಣೇಶ ಮೂರ್ತಿಯನ್ನು ಮುಳುಗಿಸುತ್ತಿದ್ದರು. ನಗರವಾಸಿಗಳಾಗಿದ್ದ ನಮಗೆ ಇವೆಲ್ಲಾ ವಿಭಿನ್ನವಾಗಿ, ರೋಚಕವೆನಿಸುತ್ತಿದ್ದವು.
ಅದ್ಯಾಕೋ ಇತ್ತೀಚಿನ ವರ್ಷಗಳಲ್ಲಿ ನಮ್ಮೂರಿನ ಈ ಹಬ್ಬಗಳ ಮೆರುಗೇ ಕಮ್ಮಿಯಾದಂತಿದೆ. ಆಗೆಲ್ಲಾ ಹಬ್ಬಗಳಲ್ಲಿ ನಮ್ಮನೆಯ ತುಂಬಾ ಕಾಲು ಕಾಲಿಗೆ ಸಿಗುವಷ್ಟು ಜನರಿದ್ದರು. ಈಗ ಒಂದು ತೋರಣ ಕಟ್ಟಲಿಕ್ಕೂ, ತೋಟದಿಂದ ನಾಲ್ಕು ಬಾಳೆ ಎಲೆಗಳನ್ನು ಕೊಯ್ದು ತರಲಿಕ್ಕೂ ನಮ್ಮಜ್ಜಿ ಎಲ್ಲರನ್ನೂ ಹಲ್ಲುಗಿಂಜಿ ಬೇಡುತ್ತಿರುತ್ತಾರೆ. ಎಂಬತ್ತರ ಆಸುಪಾಸಲ್ಲಿರೋ ನಮ್ಮ ಅಜ್ಜನಿಗೆ ಹಬ್ಬದ ಬಗ್ಗೆ ಇರೋ ಹುಮ್ಮಸ್ಸಲ್ಲಿ ಅರ್ಧದಷ್ಟೂ ನಮ್ಮನೆಯ Youth iconsಗೆ ಇಲ್ಲ. ಏನೋ ಹಬ್ಬ ಮಾಡಬೇಕಲ್ಲ ಮಾಡಿದರಾಯಿತು ಅನ್ನುವಂತೆ ತಮ್ಮದೇ ಗುಂಗಿನಲ್ಲಿ ಓಡಾಡುತ್ತಿರುತ್ತಾರೆ..
ನಾನು ಊರಿಗೆ ಹೋದಾಗಲೆಲ್ಲಾ ನನ್ನ ಎಲ್ಲ ಬಂಧುಗಳ ಮನೆಗೆ ಹೋಗಿ ಮಾತಾಡಿ ಬರೋ ಅಭ್ಯಾಸ. ಹಾಗೆಯೇ ಊರ ಒಳಗೆ ಒಂದು ಸುತ್ತು ಬರೋಣವೆಂದು ಹೊರಟೆ. ಊರ ತುಂಬೆಲ್ಲ ನನಗೆ ಕಂಡು ಬಂದದ್ದು ಫೋನ್ ಹಿಡಿದು ಅಲ್ಲಲ್ಲಿ ಕುಳಿತಿರೋ ಯುವಕರ ಗುಂಪುಗಳು‌. ಅಯ್ಯೋ ಈ ಮೊಬೈಲ್ ಗ್ರಹಣ ನಮ್ಮ ಹಳ್ಳಿ ಹೈಕ್ಳಿಗೂ ಹಿಡಿಯಿತೇ ಎಂದು ಸಣ್ಣದಾಗಿ ನಗುತ್ತಾ ಹಾಗೆಯೇ ಮುನ್ನಡೆದೆ. ಇಡೀ ಊರು ನೀರವ ಮೌನ ತಾಳಿ ತಪಸ್ಸಿಗೆ ಕುಳಿತಂತಿತ್ತು. ಸಂಬಂಧಿಕರ ಮನೆಯೊಬ್ಬರ ಒಳಗೆ ಹೋದರೆ ಟಿ.ವಿ ಯೊಂದು ಮನೆ ಮಂದಿಯನ್ನೆಲ್ಲ ತನ್ನ ಹಿಡಿತದಲ್ಲಿಟ್ಟಿತ್ತು‌. ಅವರೆಲ್ಲ ನನ್ನನ್ನೊಮ್ಮೆ ನೋಡಿ, ಕುಳಿತುಕೊಳ್ಳುವಂತೆ ಸನ್ನೆ ಮಾಡಿ ಮತ್ತೆ ಟಿವಿಯೊಂದಿಗಿನ ಸಂವಾದ ಮುಂದುವರೆಸಿದಂತಿತ್ತು‌. ಹೇಗಿದ್ದ ಊರು ಹೇಗಾಯಿತು..
ಶಾಲೆಯ ದಿನಗಳಲ್ಲಿ ಬೇಸಿಗೆ ರಜೆ ಬಂತೆಂದರೆ ಸಾಕು ನಮ್ಮೂರಿಗೆ ಓಡುತ್ತಿದ್ದೆವು. ಅಂದಿನ ದಿನಗಳಲ್ಲಿ ಇಡೀ ಊರಿಗೆ ಟಿ.ವಿ ಇದ್ದದ್ದು ನಮ್ಮೂರಿನ ಪಟೇಲರ ಮನೆಯಲಿ ಮಾತ್ರ.. ಅದೂ 15 ಇಂಚಿನ ಕಪ್ಪು ಬಿಳುಪು ಪರದೆಯ ಟಿವಿ. ವಿದ್ಯುತ್ ಪೂರೈಕೆಯಿದ್ದದ್ದು ಸಂಜೆ ಆರರ ಮೇಲೆಯೇ.. ಆಗ ಬರುತ್ತಿದ್ದ ಒಂದೆರಡು ಧಾರಾವಾಹಿಗಳನ್ನೋ , ರಸಮಂಜರಿ ಕಾರ್ಯಕ್ರಮವನ್ನೋ ನೋಡಲಿಕ್ಕೆ ಇಡೀ ಊರಿನ ಬಹುತೇಕ ಜನ ಆರು ಘಂಟೆಯಾಗುವುದರೊಳಗೆ ದನ ಕರುಗಳನ್ನು ದೊಡ್ಡಿಗೆ ಸೇರಿಸಿ, ಆತುರವಾಗಿಯೇ ಎಲ್ಲ ಕೆಲಸಗಳ ಮುಗಿಸಿ ಆ ಮನೆಯಲ್ಲಿ ಎಲ್ಲರೂ ಹಾಜರಾಗುತ್ತಿದ್ದರು. ಆ ಟಿವಿ ಯಜಮಾನನಿಗೋ ಒಂಥರಾ ಗರ್ವ. ನನ್ನ ಅಕ್ಕ ಅಣ್ಣಂದಿರೂ ಸಹ ಸಂಜೆಯಾಗುತ್ತಿದ್ದಂತೆಯೇ ಅಲ್ಲಿಗೆ ಓಡುತ್ತಿದ್ದರು, ಜೊತೆಗೆ ನಮ್ಮನ್ನೂ ಎಳೆದೊಯ್ಯುತ್ತಿದ್ದರು.‌ ಒಂದು ಮಿನಿ ಚಿತ್ರಮಂದಿರದಂತಿರುತ್ತಿತ್ತು ಆ ಮನೆ. ಊರಿನ ಜನರೆಲ್ಲ ಒಂದೆಡೆ ಸೇರಿ, ಅಜ್ಜಿಯಂದಿರು ಎಲೆ ಅಡಿಕೆ ಹಂಚಿಕೊಳ್ಳುತ್ತಾ, ಗಂಡಸರೆಲ್ಲ ಹೊಲದಲ್ಲಿ ಪಟ್ಟ ಕಷ್ಟಗಳನ್ನು ಹೇಳಿಕೊಳ್ಳುತ್ತಾ, ಚಿಕ್ಕ ಮಕ್ಕಳೆಲ್ಲ ಆಟವಾಡುತ್ತಾ ಟಿವಿ ಕಾರ್ಯಕ್ರಮಗಳ ಜೊತೆ ತಮ್ಮ ದಿನವನ್ನು ಕೊನೆಗೊಳಿಸುತ್ತಿದ್ದರು. ಎಲ್ಲರಲೂ ಇದ್ದ ಆ ಮುಗ್ದತೆ, ಆಪ್ತತೆ, ಸ್ನೇಹ ಸಂಬಂಧಗಳ ಧೃಡತೆಗಳು ನಮ್ಮ ನಗರ ಜೀವನದಲ್ಲಿ ನನಗೆ ಕಾಣಸಿಗದಿದ್ದ ಕಾರಣ ಈ ವಿಚಾರಗಳಿಗೆ ನಮ್ಮೂರು ನನಗೆ ಬಹಳ ಆಪ್ತವೆನಿಸ್ತಿತ್ತು..
ತಂತ್ರಙಾನದ ಹಾವಳಿ ನಗರಗಳ ಗಡಿ ದಾಟಿ ಹಳ್ಳಿಗಳಿಗೂ ಕಾಲಿಟ್ಟ ಮೇಲೆ ಕ್ರಮೇಣ ಅಲ್ಲಿನ ಜನತೆ, ಜೀವನ ಶೈಲಿಯೂ ಬದಲಾಗಿಹೋಗಿದೆ. ಅಲ್ಲಿ ಮನೆಗೊಂದು ಟಿ.ವಿ ಇದೆ ಆದರೆ ಮನಬಿಚ್ಚಿ ಮಾತನಾಡುವವರೇ ಇಲ್ಲ. ಮೊಬೈಲ್ ಫೋನ್ ವಿಚಾರ ವಿನಿಮಯಕ್ಕಿಂತ ಹೆಚ್ಚಾಗಿಯೇ ಬಳಕೆಯಾಗ್ತಿದೆ. ಬದಲಾವಣೆಯೇನೋ ಜಗದ ನಿಯಮವೇ.. ಹಳ್ಳಿಗಳ ಅಭಿವೃದ್ಧಿಯ ದೃಷ್ಟಿಯಲ್ಲಿ ಅದು ಒಳ್ಳೆಯದೇ.. ಆದರೆ ಬದಲಾವಣೆ ಜೀವನಶೈಲಿಗಳಿಗಷ್ಟೇ ಸೀಮಿತವಾಗದೇ ಸಂಬಂಧಗಳ ಮೌಲ್ಯದ ತೂಕದಲ್ಲಿ ಅಸಮತೋಲನ ಉಂಟಾಗಿರುವುದಂತೂ ನಿಜವೇ ಸರಿ. ಒಂಟಿಯಾಗಿದ್ದಾಗ ಬೇಸರ ಕಳೆಯಲು ಫೋನ್ ಬಳಸಲು ಶುರು ಮಾಡಿ ಕೊನೆಗೆ ಫೋನ್ ನಿಂದಲೇ ಮನುಷ್ಯ ಸಂಬಂಧಗಳಿಂದ ದೂರಾಗಿ ಒಂಟಿಯಾಗುತ್ತಿದ್ದಾನೆ ಅಲ್ವೇ? ನಗರಗಳಲ್ಲಿ ಈ ಮಾನವೀಯ ಮೌಲ್ಯಗಳಿಗೆ ಬೆಲೆಯೇ ಇಲ್ಲ ಬಿಡಿ.. ಆದರೆ ಹಳ್ಳಿಗಳಲ್ಲೂ ಇದೇ ರೀತಿಯಾದರೆ ಪಟ್ಟಣ-ಗ್ರಾಮಗಳ ನಡುವಿನ ಆ ವೈಚಾರಿಕ ಗೆರೆ ಅಳಿಸಿ ಹೋದಂತೆಯೇ‌.
ತಂತ್ರಙಾನಗಳ ಸರಿಯಾದ ಬಳಕೆಯನ್ನು ಅರಿತು, ಮತ್ತದೇ ಮುಗ್ದತೆ ಮರುಕಳಿಸಿದ ದಿನ ನಮ್ಮೂರಿನ ಹಬ್ಬಗಳಿಗೆ ಮತ್ತದೇ ಮೆರುಗು ಬರಬಹುದೋ ಏನೋ.. ಕಾದು ನೋಡಬೇಕು..

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.4 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಬಾಲ್ಯದ ದಿನಗಳನ್ನು ಮೆಲಕುಹಾಕುತ್ತ, ಅಂದಿಗೂ ಹಾಗೂ ಇಂದಿಗೂ ಇರುವ ವ್ಯತ್ಯಾಸವನ್ನು ಚುಟುಕಾಗಿ ಬಹಳ ಅಚ್ಚುಕಟ್ಟಾಗಿ ಬರೆದಿದ್ದೀರಿ.....ಶುಭವಾಗಲಿ ಸರ್..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಗರಗಳ‌ ರೀತಿಯೇ ಒಂದು, ಹಳ್ಳಿಗಳ‌ ರೀತಿಯೇ ಒಂದು ಥರಹ‌. ಆದರೆ ಇಂದು ಹಳ್ಳಿಗ‌ ಳು ಬದಲಾಗುತ್ತಿರುವ‌ ರೀತಿಯನ್ನು ನೋಡಿದ್ರೆ ಆಶ್ಚರ್ಯ‌ ವಾಗುತ್ತದೆ. ನಗರೀಕರಣಗೊಂಡ‌ ಹಳ್ಳಿಗಿಂತಾ ಪಟ್ಟಣವೇ ವಾಸಿ ಎನಿಸುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.