" ಸಿನೆಮಾ " ...ಎರಡನೇ ರೀಲಿನಲ್ಲಿ ! (ಕಥೆ)

3.25

                       
 

     ಕೆರೆಯ ಪಕ್ಕದ ಕೇದಿಗೆಯ ಬನದ ಪಕ್ಕದಲ್ಲಿ ಹಾದು ಕಾಡಿನ ದಾರಿ ಹಿಡಿದ. ಕೇದಿಗೆಯ ಬನದಿಂದ ಅರಳಿದ ಕೇದಿಗೆಯ ಹೊಡೆಯ ಕಂಪು ಮಾದೇವನ ಮೂಗು ಅರಳುವಂತೆ ಮಾಡಿತು. ಕೇದಿಗೆಯ ಹೊಡೆಯೊಂದನ್ನು ಕಿತ್ತು ತರಲೆ ಎಂದು ಯೋಚಿಸಿದ, ಧೈರ್ಯ ಸಾಲಲಿಲ್ಲ. ಆತ ಅನೇಕ ಸಾರಿ ತನ್ನ ಮಾವನ ಜೊತೆ ಆ ಹಾದಿಯಲ್ಲಿ ಹಾಯ್ದು ಹೋಗುವಾಗ ವಿಸ್ತಾರವಾಗಿ ದಟ್ಟವಾಗಿ ವ್ಯಾಪಿಸಿದ್ದ ಕೇದಿಗೆಯ ಮೆಳೆಗಳಲ್ಲಿ ಕಿರುಬೆರಳ ಗಾತ್ರದಿಂದ ಹಿಡಿದು ಹೆಬ್ಬೆರಳು ಗಾತ್ರದ ದಪ್ಪದ ಸುಮಾರು ಉದ್ದದ ಹಸುರು ಹಾವುಗಳನ್ನು, ಕೊಳಕು ಮಂಡಲ ಕೇರೆ ಮತ್ತು ನಾಗರ ಹಾವು ಗಳನ್ನು ನೋಡಿದ್ದ, ಅದಕ್ಕೆ ನಾಗರ ಬನವೆಂದು ಸಹ ಹೆಸರಿತ್ತು. ಆ ನಾಗರಬನ ದಾಟಿ ಅರ್ಧ ಫರ್ಲಾಂಗನಷ್ಟು ದೂರದ ದಾರಿ ಕ್ರಿಮಿಸಿ ಏರಿಯನ್ನು ಹತ್ತಿ ಹೋದರೆ ಸುಮಾರು ವಿಸ್ತಾರದ ಒಂದು ಹುಲ್ಲುಗಾವಲು ಪ್ರದೇಶವಿತ್ಯತು. ಅದರ ಮಧ್ಯಭಾಗದಲ್ಲಿ ನಾಲ್ಕು ಕಲ್ಲು ಕಂಬಗಳ ಮೇಲೆ ಕಲ್ಲು ಚಪ್ಪಡಿಗಳನ್ನು ಹಾಕಿ ಮುಚ್ಚಿಗೆ ಮಾಡಿದ ಕಾಡುಗಲ್ಲಿನಲ್ಲಿ ಮಾಡಿದ ಒಂದು ದೇವಿಯ ಮೂರ್ತಿಇತ್ತು. ಅದನ್ನು ಅಗಸ್ತ್ಯ ತಪೋವನವೆಂದು ಸಹ ಕರೆಯುತ್ತಿದ್ಚರು. ಇದರ ಕುರಿತು ಒಂದು ದಂತ ಕತೆ ಆಗ ಚಾಲ್ತಿಯಲ್ಲಿತ್ತು. ಹಿಂದೊಮ್ಮೆ ತ್ರೇತಾಯುಗದಲ್ಲಿ ಸಗಸ್ತ್ಯ ಮುನಿಗಳು ತಮ್ಮ ದಂಡಕಾರಣ್ಯದ ಸಂಚಾರ ಕಾಲದಲ್ಲಿ ಈ ಮಾರ್ಗವಾಗಿ ಬಂದಾಗ ಅಲ್ಲಿಯ ಪ್ರಕೃತಿ
ಸೌಂದರ್ಯಕ್ಕೆ ಮನಸೋತು ತಮ್ಮ ಶಿಷ್ಯರೊಂದಿಗೆ ಅಲ್ಲಿ ತಂಗಿದ್ದರಂತೆ,

     ಆಗ ಆ ಭೂ ಪ್ರದೇಶದ ಅಧಿಪತಿ ಬಂದು ಅಗಸ್ತ್ಯರನ್ನು ಕಂಡು ' ಮುನಿವರ್ಯ ನನ್ನ ರಾಜ್ಯದಲ್ಲಿ ದುರ್ಭಿಕ್ಷ ತಾಂಡವವಾಡುತ್ತಿದೆ, ಸರಿಯಾದ ಮಳೆ ಬೆಳೆಯಿಲ್ಲ, ಕೃಪೆಮಾಡಿ ಕಾರಣ ತಿಳಿಸಬೇಕು 'ಎಂದು ಕೇಳಿದನಂತೆ.  

     ಆಗ ಅಗಸ್ತ್ಯ ಮುನಿಗಳು ಕಣ್ಮುಚ್ಚಿ ಧ್ಯಾನಿಸಿ ' ಇದು ಗಾಯಿತ್ರಿ ದೇವಿಯ ಆವಾಸಸ್ಥಾನ ನೀವು ಆಕೆಯನ್ನು ಉಪೇಕ್ಷಿಸಿದ್ದೀರಿ, ಹೀಗಾಗಿ ಈ ಎಲ್ಲ ಕ್ಷೊಬೆಗಳಿಂದ ನಿನ್ನ ರಾಜ್ಯ ತ್ತರಿಸುತ್ತಿದೆ. ನೀನು ಆದೇವಿಗೆ ನೆಲೆ ಯೊದಗಿಸಿಕೊಟ್ಟು ಕೋಟಿ ಗಾಯಿತ್ರಿ ಜಪ ಯಜ್ಞ ಮಾಡಿಸಿದರೆ ನಿನ್ನ ರಾಜ್ಯ ಉನ್ನತಿ ಹೊಂದುತ್ತದೆಂದು ಹೇಳಿದರಂತೆ.

     ಆಗ ರಾಜ ' ಮಹಾ ಮುನಿವರ್ಯ ಆ ಗಾಯಿತ್ರಿ ದೇವಿಯ ಆವಾಸ ಸ್ಥಾನ ನನಗೆ ಗೊತ್ತಿಲ್ಲ, ತಾವು ಅದನ್ನು ತೊರಿಸಿ ಕೊಡುವ ಕೃಪೆ ಮಾಡಬೇಕು ಜೊತೆಗೆ ಆಕೆಯ ಕೋಟಿ ಯಜ್ಞ ಜಪದ ನೇತೃತ್ವವನ್ನು ತಾವು ವಹಿಸಿ ನೆರವೇರಿಸಿ ನಮ್ಮ ರಾಜ್ಯಕ್ಕೆ ಬಂದ ಕಷ್ಟ ಪರಿಹಿರಿಸಬೇಕು ' ಎಂದು ಕೇಳಿ ಕೊಂಡನಂತೆ.

     ಆಗ ಅಗಸ್ತ್ಯ ಮುನಿಗಳು ಬಯಲಲ್ಲಿ ಇದ್ದ ಈ ಗಾಯಿತ್ರಿ ದೇವಿಯ ಮೂರ್ತಿಯನ್ನು ತೋರಿಸಿ ಈಕೆಗೆ ಒಂದು ದೇವಸ್ತಾನವನ್ನು ನಿರ್ಮಿಸಿ ಎಂದು ಅಪ್ಪಣೆ ಕೊಡಿಸಿದರಂತೆ. ಅವರ ಸಲಹೆಯನ್ನು ಒಪ್ಪಿದ ರಾಜ ಆ ಕಾರ್ಯ ನೆರವೇರಿಸಿದನಂತೆ. ನಂತರ  ಅಗಸ್ತ್ಯರ ಪೌರೋಹಿತ್ಯದಲ್ಲಿ ' ಗಾಯಿತ್ರಿ ದೇವಿಯ ಕೋಟಿ ಜಪಯಜ್ಞ' ನಡೆಸಿಕೊಟ್ಟು  ರಾಜನ ಕೋರಿಕೆಯಂತೆ ಅಗಸ್ತ್ಯರು ತಮ್ಮೊಬ್ಬ ಶಿಷ್ಯನನ್ನು ಆಶಿರ್ವದಿಸಿ ಗಾಯಿತ್ರಿ ದೇವಿಯ ಉಪಾಸನೆಗೆ ಬಿಟ್ಟು ತೆರಳಿದರೆಂದೂ, ಮುಂದೆ ರಾಜ ಆ ದೇವಸ್ತಾನಕ್ಕೆ ಕೆಲವು ಉಂಬಳಿ ಪ್ರದೇಶವನ್ನು ಬಿಟ್ಟು ಅದರ ಅಭಿವೃದ್ಧಿಗೆ ಕಾರಣವಾದನೆಂದೂ,  ಅದು ಗಾಯಿತ್ರಿ ದೇವಿಯ ಜಾಗೃತ ಸ್ಥಳವೆಂದು ಪ್ರತೀತಿ ಪಡೆದು ಪ್ರಖ್ಯಾತವಾಯಿತೆಂದು, ಕಾಲಕ್ರಮೇಣ ಅ ಪ್ರದೇಶ ಅಗಸ್ತ್ಯ ಅಗ್ರಹಾರವೆಂದು ಹೆಸರು ಪಡೆಯಿತೆಂಬ ಕಥೆಯನ್ನು ಮಾದೇವ ಕೇಳಿದ್ದ. ಇದು ಆ ಪ್ರದೇಶದ ಸ್ಥಳ ಪುರಾಣ, ಅದು ನಿಜವೂ ಇರಬಹುದು ಇಲ್ಲ ಕಟ್ಚ ಕಥೆಯೂ ಇರಬಹುದು, ಆದರೆ ಆ ಪ್ರದೇಶ ಇಂದಿಗೂ ರೆವಿನ್ಯೂ ದಾಖಲೆಯಲ್ಲಿ ಅಗಸ್ತ್ಯ ಅಗ್ರಹಾರವೆಂದು ನಮೂದು ಇರುವುದು ಮಾತ್ರ ನಿಜ.

                                                                  ***

     ಅವನ್ನೆಲ್ಲ ನೋಡುತ್ತ ಸಾಗಿದ ಮಾದೇವ ದಾರಿಯಲ್ಲಿ ಅಲ್ಲಲ್ಲಿ ಬೀಟೆ ಹೊನ್ನೆ ಮರಗಳ ಮಧ್ಯ ಪರಗಿ ಮತ್ತು ಸುಣಬುರಲಿ ಹಣ್ಣುಗಳ ಪೊದೆಗಳಿದ್ದು ಮನಸೊ ಇಚ್ಛಿ ತಿನ್ನುತ್ತ ಸಾಗಿದ. ಆತನಿಗೆ ತಾನು ಯಾವ ದಾರಿಗುಂಟ ಸಾಗಿ ಬಂದೆ ಎಷ್ಟು ದೂರ ಬಂದೆ ಎನ್ನುವುದರ ಪರಿವೆಯಿರಲಿಲ್ಲ. ಸ್ವಲ್ಪ ದೂರ ಸಾಗಿದ ಆತ ಒಂದು ದಟ್ಟ ಕಾಡಿನ ಜಿಗ್ಗಿನ ಹತ್ತಿರ ಬಂದು ನಿಂತಿದ್ದ. ಆ ಜಿಗ್ಗಿಗೆ ಇಳಿಯಲು ಆತನಿಗೆ ಧೈರ್ಯ ಸಾಲಲಿಲ್ಲ. ಹಾಗೆಯೆ ದೃಷ್ಟಿ ಹರಿಸಿ ನೋಡಿದ. ಮಂದವಾಗಿ ಸೂರ್ಯನ ಬೆಳಕು ಅಲ್ಲೆಲ್ಲ ಹರಿಡಿತ್ತು. ಸಡು ಮಧ್ಯಾನ್ಹ ವಾಗಿದ್ದರೂ ಅಲ್ಲಿ ಗಾಳಿ ತಣ್ಣಗೆ ಬೀಸುತ್ತಿತ್ತು. ದೂರ ನಡೆದು ಬಂದಿದ್ದ ಆತ ಒಂದು ಹೊನ್ನೆ ಮರದ ಬುಡಕ್ಕೆ ಒರಗಿ ನಿಂತು ಹರಿದು ಹೋಗಿದ್ದ ತೊರೆಯೊಂದನ್ನು  ನೋಡುತ್ತ ನಿಂತ, ತೊರೆಯ ದಂಡೆಯ ಮರದ ಬಿಳಿಲುಗಳಿಗೆ ಜೋತು ಬೀಳುತ್ತ ಚಿನ್ನಾಟದಲ್ಲಿ ತೊಡಗಿದ್ದ ದೊಡ್ಡ ಬಾವುಗ ಗಳ ಗಾತ್ರದ ಮೂರು ಮರಿಗಳನ್ನು ನೋಡಿದ ನೋಡುತ್ತಲೆ ನಿಂತ. ಊರಲ್ಲಿ ಬೆಕ್ಕುಗಳಿಗೆ ಬೂದು ಇಲ್ಲವೆ ಬಿಳಿ ಬಣ್ಣದ ಜೊತಗೆ ಕಪ್ಪು ಪಟ್ಟಿಗಳಿರುತ್ತವೆ, ಆದರೆ ಕಾಡಿನ ಈ ಬೆಕ್ಕಿನ ಮರಿಗಳಿಗೇಕೆ ಹಳದಿ ಬಣ್ಣದಲ್ಲಿ ಕರಿಯ ಪಟ್ಟಿಗಳಿವೆ ಎಂದು ಯೋಚನಾ ಮಗ್ನನಾದ. ಕಾಡಿನೊಳಗಿಂದ ಕಟ್ಟಿಗೆಯ ಹೊರೆ ಹೊತ್ತುಕೊಂಡು ಲಂಬಾಣಿ ಹೆಣ್ಣುಮಕ್ಕಳು ತಮ್ಮ ತಾಂಡಾದೆಡೆಗೆ ಸಾಗಿದ್ದರು.

     ಅವರ ಪೈಕಿ ಮಾದೇವನ ಮನೆಗೆ ಸೌದೆ ಹಾಕುತ್ತಿದ್ದ ಪಾರೋತಿ ಆತನನ್ನು ಗುರುತಿಸಿ ' ಮಾದೇವಣ್ಣ ಇಲ್ಲ್ಯಾಕ ಅದೀರಿ, ಆ ಜಿಗ್ಗನ್ಯಾಗ ಏನ್ ನೋಡಾಕ ಹತ್ತೀರಿ ' ಎಂದು ಪ್ರಶ್ನಿಸಿದಳು.

     ಜಿಗ್ಗಿನೆಡೆಗಿನ ತನ್ನ ದೃಷ್ಟಿಯನ್ನು ತೆಗೆಯದೆ ' ತಾನು ಕಾಡು ಬೆಕ್ಕುಗಳ ಚಿನ್ನಾಟ ನೋಡುತ್ತಿರುವುದಾಗಿ ' ಉತ್ತರಿಸಿದ.

     ಕುತೂಹಲಗೊಂಡ ಪಾರೋತಿ ಮಾದೇವನ ಹತ್ತಿರಕ್ಕೆ ಬಂದು ನೋಡಿದವಳೆ ' ತಮ್ಮ ಅವು ಕಾಡು ಬೆಕ್ಕಿನ ಮರಿ ಗಳಲ್ಲ, ಅವು ಹುಲಿ ಮರಿ ಆ ಮರಿಗೋಳ ತಾಯಿ ಹುಲಿ ಇಲ್ಲೆ ಎಲ್ಲೋ ಇರಬೇಕು ಓಡಿ ಬಾ ' ಎಂದು ಕಟ್ಟಿಗೆಯ ಹೊರೆಯನ್ನು ಅಲ್ಲಿಯೆ ಎಸೆದು ಓಡಲು ಪ್ರಾರಂಭಿಸಿದಳು.

     ಅವು ಹುಲಿ ಮರಿಗಳು ಎಂದು ಪಾರೋತಿ ಹೇಳಿದ್ದನ್ನು ಕೇಳಿ ಮತ್ತು ಆಕೆ ಓಡುತ್ತಿರುವುದನ್ನು ಕಂಡು ತಾನೂ ಅವಳ ಹಿಂದೆಯೆ ಓಡಲು ಪ್ರಾರಂಭಿಸಿದ. ಪಾರೋತಿಯ ಹಿಂದೆ ಬರುತ್ತಿದ್ದ ಲಂಬಾಣಿ ಹೆಣ್ಣು ಮಕ್ಕಳು ಸಹ ಕಟ್ಟಿಗೆಯ ಹೊರೆಗಳನ್ನು ಅಲ್ಲಲ್ಲಿಯೆ ಎಸೆದು ಕೂಗುತ್ತ ಪಾರೋತಿಯನ್ನನುಸರಿಸಿ ಓಡಲು ಪ್ರಾರಂಭಿಸಿದರು. ಇನ್ನೂ ದಟ್ಟ ಕಾಡಿನಿಂದ ಹೊರ ಬಂದಿರಲಿಲ್ಲ ಆಗಲೆ ಹುಲಿಯ ಗರ್ಜನೆ ಕಾಡಿನಲ್ಲಿ ಮಾರ್ದನಿ ಗೊಂಡಿತು. ಭಯಭೀತರಾದ ಅವರೆಲ್ಲ ಮತ್ತಷ್ಟು ಗಾಬರಿಗೊಂಡು ವೇಗವಾಗಿ ಓಡಿಬಂದು ಅಗಸ್ತೇಶ್ವರ ಗುಡಿಯ ಹತ್ತಿರ ಬಂದು ಒಟ್ಟಾಗಿ ನಿಂತರು. ಮಾದೇವ ಸಹ ಅವರಿಗೆ ಅನತಿ ದೂರದಲ್ಲಿ ನಿಂತು ಕೊಂಡ. ಅವರಿಗೆ ಕಾಡಿನೊಳಗೆ ಹೋಗಲು ಧೈರ್ಯ ಸಾಲದೆ ಗಂಡಸರನ್ನು ಕರೆತರಲು ತಮ್ಮ ತಾಂಡಾಕ್ಕೆ ತೆರಳಿದರು. ಮಾದೇವನಿಗೆ ಪೀಕಲಾಟಕ್ಕಿಟ್ಟುಕೊಂಡಿತು. ಸುಮಾರು ಫರ್ಲಾಂಗು ದೂರದಲ್ಲಿ ಬಾವಿಯ ದಂಡೆಯ ಮೇಲೆ ಒಣಗ ಹಾಕಿದ ತನ್ನ ಬಟ್ಟೆಗಳನ್ನು ಒಟ್ಟುಮಾಡಿ ತರಲು ಆತನಿಗೆ ಧೈರ್ಯ ಸಾಲಲಿಲ್ಲ. ಹೀಗೆಯೆ ಮನೆಗೆ ಹೋಗುವಂತಿಲ್ಲ, ಹೋದರೆ ಬೈಗುಳ ಗ್ಯಾರಂಟಿ. ರಾಮಚಂದ್ರನನ್ನು ಜೊತೆಗೆ ಕರೆತರದೆ ತಾನು ತಪ್ಪು ಮಾಡಿದೆ ಎನಿಸಿತು ಅವನಿಗೆ. ಅವನ ಹಸಿವು ಇಮ್ಮಡಿಸಿತ್ತು. ಆಗಾಗ ಕೇಳಿ ಬರುತ್ತಿದ್ದ ಹುಲಿಯ ಗರ್ಜನೆ ಕ್ರಮೇಣ ಇಲ್ಲವಾಯಿತು. ಸ್ವಲ್ಪ ಸಮಯದ ನಂತರ ದನಗಾಯಿಗಳು ಕಾಡಿನೊಳ ಗಿನಿಂದ ತಮ್ಮ ತಮ್ಮ ದನಗಳ ಮಂದೆಗಳನ್ನು ಹೊಡೆದುಕೊಂಡು ಊರ ಕಡೆಗೆ ಹೊರಟಿದ್ದರು. ಮಾದೇವನೂ ಧೈರ್ಯಮಾಡಿ ಬಾವಿಯ ಹತ್ತಿರ ಹೋಗಿ ನೋಡಿದ, ಎಲ್ಲ ಬಟ್ಟೆಗಳು ಓಣಗಿ ಅಲ್ಲಲ್ಲಿ ಚೆದುರಿ ಬಿದ್ದದ್ದವು. ಅವನ್ನೆಲ್ಲ ಒಟ್ಟು ಮಾಡಿಕೊಂಡು ಅಲ್ಲಿಂದ ಓಟಕಿತ್ತ. ಕಾಡು ವಿರಳವಾಗುತ್ತ ಬಂದಂತೆ ಒಂದು ತರಹದ ನಿರಾಳ ಭಾವ ಆತನನ್ನು ಆವರಿಸಿತು. ಹೆದರಿಕೆಯ ಅವಸರದಲ್ಲಿ ಚುರುಮರಿಯ ಪೊಟ್ಟಣವನ್ನು ಅಲ್ಲಿಯೆ ಬಿಟ್ಟು ಬಂದಿದ್ದ. ಈ ವಿಷಯದ ಜೊತೆಗೆ ತಾನು ಒಬ್ಬನೆ ಹೋಗಿದ್ದು ಗೊತ್ತಾದರೆ ಮನೆಯಲ್ಲಿ ಬಯ್ಯುತ್ತಾರೆ ಎಂಬ ಭಯ ಆತನನ್ನು ಕಾಡ ತೊಡಗಿತು. ನೇರವಾಗಿ ಮನೆಗೆ ಹೋಗದೆ ರಾಮಚಂದ್ರನ ಮನೆಗೆ ಸಾಗಿದ. ಮನೆಯ ಮುಂದೆ ಮರದ ನೆರಳಿನಲ್ಲಿ ಅರಾಮವಾಗಿ ನಿಂತಿದ್ದ ಆತನನ್ನು ಕಂಡು ಮಾದೇವನಿಗೆ ಒಂದು ಕ್ಷಣ ಸಿಟ್ಟು ಬಂತು. ಅದನ್ನು ತೋರಗೊಡದೆ

     ' ರಾಮಚಂದ್ರ ನೀ ಬರ್ತೀದಿ ಅಂತ ನಾ ಕಾದು ಸುಸ್ತಾಗಿ ನೀ ಸ್ವಲ್ಪ ತಡ ಆಗಿ ಬರಬಹುದು ಅಂತ ತಿಳದು ನಾ ಒಬ್ಬನ ಕಾಡಿಗೆ ಬಟ್ಟಿ ಒಗ್ಯಾಕ ಹೋಗಿದ್ದೆ, ಆದರ ನೀ ಬರಲೆ ಇಲ್ಲ ' ಎಂದು ನವಿರಾಗಿ ಆಕ್ಷೇಪಣೆ ಮಾಡಿದ.

     ಅದಕ್ಕೆ ರಾಮಚಂದ್ರ ' ಮನಿಗೆ ಬೀಗರು  ಬಂದಾರ ಈಗ ಹೋಗೊದು ಬ್ಯಾಡ ಅಂದ್ರು ಅದಕ ಬರಲಿಲ್ಲ ' ಎಂದ.

     ಹುಲಿಮರಿಗಳ ಆವಾಂತರ ಅವನಿಗೆ ತಿಳಿಸದೆ ' ಮನ್ಯಾಗ ನಾ ಒಬ್ನ ಹೋಗಿದ್ದೆ ಅಂದರ ಬೈತಾರ್ ಅದಕ ಅಕಸ್ಮಾತ ನಮ್ಮ ಮನ್ಯಾಗೇನರ ಕೇಳಿದ್ರ ನೀನೂ ಬಂದಿದ್ದೆ ಅಂತ ಹೇಳು ' ಎಂದ. ಅದಕ್ಕೆ ರಾಮಚಂದ್ರ ಹ್ಞೂಗುಟ್ಟಿದ. ಒಂದು ತರಹದ ನಿರಾಳತೆಯಿಂದ ಮನೆ ಸೇರಿದ. ಕೆಲವು ದಿನ ಮಾದೇವನನ್ನು ಕಾಡಿನಲ್ಲಿ ತಾನು ಕಂಡ ಹುಲಿಮರಿಗಳ ವಿಷಯ ಆತನನ್ನು ಕಾಡ ತೊಡಗಿತು. ಪಾರೋತಿ ಒಮ್ಮೆ ಮನೆಗೆ ಬಂದು ಹೋಗುವ ವರೆಗೂ ಆತನನ್ನು ಆತಂಕ ಕಾಡ ತೊಡಗಿತು. ಮುಂದೆ ಹದಿನೈದು ದಿನಗಳ ನಂತರ ಸೌದೆ ಹಾಕಲು ಬಂದವಳು ಎಲ್ಲ ವಿಷಯ ಮತನಾಡಿದಳು. ಕಾಡಿನಲ್ಲಿ ತಾನು ಜಿಗ್ಗಿನ ಹತ್ತಿರ ಹೋಗಿದ್ದ ವಿಷಯ ಆಕೆ ಹೇಳಿದರೆ ಎಂಬ ಆತಂಕ ಅತನನ್ನು ಕಾಡುತ್ತಿತ್ತು. ಆದರೆ ಪಾರೋತಿ ಆ ವಿಷಯ ಹೇಳಲಿಲ್ಲ. ಮಾದೇವನ ಚಿಂತೆ ದೂರವಾಯಿತು.

     ಗತಕಾಲದ ನೆನಪಿಗೆ ಜಾರಿದ್ದ ಮಾದೇವನನ್ನು ವರ್ತನೆ ಹಾಲಿನವನ ಕರೆ ಈ ಲೋಕಕ್ಕೆ ಕರೆ ತಂದಿತು. ಹಾಲು ಬಂದ ವಿಷಯವನ್ನು ಒಳಗೆ ಕೂಗಿ ಹೇಳಿ ಮೇಜಿನ ಮೇಲಿದ್ದ ದಿನಪತ್ರಿಕೆಯನ್ನು ಬಿಡಿಸಿ ಓದಲು ಕುಳಿತ. ಮುಂದೆ ನಾಲ್ಕೈದು ದಿನಗಳ ನಂತರ ದೂರ್ವಾಪುರದ ಕನ್ನಡ ಸಂಘದಿಂದ ಒಂದು ವರ್ಣರಂಜಿತ ಆಕರ್ಷಕ ವಿನ್ಯಾಸದ ಆಮಂತ್ರಣ ಪತ್ರಿಕೆ ಬಂದಿತು. ಕುತೂಹಲದಿಂದ ಮಾದೇವ ಅದನ್ನು ಬಿಡಿಸಿ ನೊಡಿದ, ಭುವನೇಶ್ವರಿ ದೇವಿಯ ಮೆರವಣಿಗೆ, ನೂತನ ಕನ್ನಡ ಧ್ವಜ ಸ್ತಂಭದ ಉದ್ಘಾಟನೆ, ಮಠಾಧೀಶರು, ಮಂತ್ರಿಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ತಾಲೂಕು ಮತ್ತು ಗ್ರಾಮ ಮಟ್ಟದ ಜನಪ್ರತಿನಿಧಿಗಳ ಉಪಸ್ಥಿತಿ, ಕನ್ನಡ ನಾಡು ನುಡಿ ಕುರಿತು ಭಾಷಣ, ಮಧ್ಯಾನ್ಹದ ನಂತರ ಗ್ರಾಮೀಣ ಪರಿಸರದ ಯುವಕ ಯುವತಿಯರ ಕವಿ ಗೋಷ್ಟಿ. ಕವಿ ಗೋಷ್ಟಿಯ ಕುರಿತು ಆಶಯ ಭಾಷಣ ಮಾದೇವ ರವರಿಂದ ಎಂದಿತ್ತು. ಅದನ್ನು ಓದಿಕೊಂಡ ಮಾದೇವನ ತುಟಿಯಂಚಿನಲ್ಲಿ ಕಿರುನಗುವೊಂದು ಕಾಣಿಸಿ ಕೊಂಡಿತು. ಸ್ವಂತ ಆಸಕ್ತಿಗಾಗಿ ಬರವಣಿಗೆಯಲ್ಲಿ ತೊಡಗಿಕೊಂಡು ಒಂದೆರಡು ಕವನ ಸಂಕಲನಗಳನ್ನು ಹೊರತಂದ ತನ್ನನ್ನು ಸಾಹಿತಿಯ ಪಟ್ಟಕ್ಕೇರಿಸಿದ್ಚರು. ಅಂತೂ ಸದಾಶಿವನ ಪ್ರಯತ್ನ ಫಲಕಂಡು ತನ್ನ ದೂರ್ವಾಪುರದ ಪ್ರವಾಸ ನಿಕ್ಕಿ ಎಂದಾಯಿತು. ಈ ಯೋಚನೆಯಲ್ಲಿ ಮಾದೇವ ಇದ್ದಾಗಲೆ ಆತನ ಮೊಬೈಲ್ ರಿಂಗುಣಿಸಿತು. ಸ್ವಿಚ್ ಆನ್ ಮಾಡಿ ನೋಡಿದ. ಅದು ಸದಾಶಿವನ ಫೊನ್ ಎಂಬುದು ಖಾತ್ರಿಯಾಗಿ ಹಲೋ ಎಂದ.  
 

                                                                                                     ( ಮುಂದುವರಿದುದು )

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪಾಟೀಲರೇ ಕಥೆ ಬರೆಯುವ‌ ರೀತಿ ತು0ಬಾ ಇಷ್ಟವಾಯ್ತು
ತಾನೇ ಓದಿಸಿಕೊ0ಡು ಹೋಗುತ್ತಿದೆ
ಮು0ದಿನ‌ ಭಾಗದ‌ ನಿರೀಕ್ಷೆಯಲ್ಲಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1, ಹೌದು ಗೋಪಿನಾಥರಾಯರೆ , ಹುಲಿಮರಿ ನೋಡಿ ಹುಲಿ ಬರುತ್ತೆ ಅಂತ ಓಡಿದ್ದು, ಚೆನ್ನಾಗಿತ್ತು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹುಲಿ ಮರಿಗಳ ಆಟವನ್ನು ಬೆಕ್ಕಿನ ಮರಿಗಳ ಆಟ ಎಂದು ನೋಡಿಕೊಂಡು ಕುಳಿತು ವಾಸ್ತವದ ಅರಿವಾದಾಗ ಪೇಚಿಗೆ ಸಿಲುಕಿದ್ದನ್ನು ಓದಿ ನಗುಬಂತು. ಚೆನ್ನಾಗಿ ಮೂಡಿಬಂದಿದೆ ಕಥೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೇಡಂ ವಂದನೆಗಳು
ಈ ಕಥಾನಕ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ, ಕಥಾ ನಾಯಕನ ಬಾಲ್ಯದ ಅನುಭವವೆ ಅಂತಹದ್ದು, ಅದು ಮುಗ್ಧ ಬಾಲ್ಯ
ಆ ಕಾಲದ ಭಾವನೆಗಳು ಮಾಡುವ ಸಾಹಸಗಳನ್ನು ಈಗ ನೆನೆದರೆ ಯಾರಿಗೂ ನಗುಬರುವುದು ಸಹಜವೆ. ಮೆಚ್ಚುಗೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಸಾರಥಿ ಯವರಿಗೆ ವಂದನೆಗಳು ಕಥಾನಕದ ಮೆಚ್ಚುಗೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಿನಾಥ ರವರಿಗೆ ವಂದನೆಗಳು ತಮ್ಮ ಪ್ರತಿಕ್ರಿಯೆ ಓದಿದೆ ಮೆಚ್ಚುಗೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿರಿಯರೇ ಚಿಕ್ಕವಿದ್ದಾಗ ಹುಲಿ ಮತ್ತು ಬೆಕ್ಕಿನ ಮರಿಗಳನ್ನ ವರ್ಗೀಕರಿಸಿ ಥಟ್ಟನೆ ಹೇಳಲು ಆಗೋಲ್ಲ. ಆ ಅನುಭವ ನನಗೂ ಆಗಿದೆ...
ಆ ಪ್ರಸಂಗ ಕಲ್ಪಿಸಿಕೊಂಡು ಓದಿದೆ ಬಿದ್ದು ಬಿದ್ದು ನಕ್ಕೆ....

ಕೇದಗೆ ಸುವಾಸನೆಗೆ (ಅದನ್ನು ನಮ್ಮ ಕಡೆಯ ಯುವತಿಯರು ಜಡೆಯಲ್ಲಿ ಉದ್ದಗೆ ಮುಡಿವರು ನೋಡಲು ಚೆನ್ನ.!!) ಅದರತ್ತ ಆಕರ್ಷಿತ ಆಗಿದ್ದೆ ಆದರೆ ಆದರಲ್ಲಿ ಬೇಜಾನ್ ಹಾವುಗಳು ಇರುತೆ ಅನ್ನೋದನ್ನ ಕೇಳಿ (ನಾ ಅಂತೂ ಹಾವೂ ನೋಡಿಲ್ಲ ಅಲ್ಲಿ)ಭಯ ಪಟ್ಟು ದೂರದಿಂದಲೇ ನೋಡಿ ಸುಮ್ನಾಗಿದ್ದೆ.
ಮೊದಲ ಭಾಗ ಸಖತ್ತಾಗಿದೆ ಎರಡನೆಯ ಭಾಗಕ್ಕೆ ಕಾಯ್ತಿರುವೆ.

ಶುಭವಾಗಲಿ..

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೆಂಕಟ ರವರಿಗೆ ವಂದನೆಗಳು
ಈ ಕಥಾನಕದ ಎರಡನೆ ಭಾಗಕ್ಕೆ ತಾವು ಪ್ರತಿಕ್ರಿಯೆಯನ್ನು ಬರೆದಿದ್ದೀರಿ. ಮೊದಲನೆ ಭಾಗ ಈಗಾಗಲೆ ಸಂಪದದಲ್ಲಿ ಅದಕ್ಕೂ ಮೊದಲು ' ಆ ಸಿನೆಮಾ ಕಥಾನಕದ ಟ್ರೈಲರ್ ಎಂಬ ಪೀಠಿಕಾ ಬರಹ ಸಹ ಬಂದಿದೆ, ತಾವು ಗಮನಿಸಿಲ್ಲವೆಂದು ಕಾಣುತ್ತದೆ. ಕೇದಗೆ ಬನದಲ್ಲಿ ನಾನು ದಾಖಲಿಸಿದ ಎಲ್ಲ ಜಾತಿಯ ಹಾವುಗಳನ್ನು ಸಹ ನೋಡಿದ ಅನುಭವವಿದೆ, ಹೀಗಾಗಿ ಹಿರಿಯರು ನಮ್ಮನ್ನು ಕೇದಿಗೆ ಬನದೊಳಕ್ಕೆ ಹೋಗಲು ಬಿಡುತ್ತಿರಲಿಲ್ಲ, ನಮ್ಮಲ್ಲೂ ಹೆಂಗಳೆಯರು ಕೇದಿಗೆಯನ್ನು ಮುಡಿಯುತ್ತಾರೆ ವಿಶೇಷವಾಗಿ ಹೇದಿಗೆಯ ಹೆರಳು ಎಂದು ಹಾಕಿ ಕೊಳ್ಳುವ ಪದ್ಧತಿ ಆಗ ಇತ್ತು. ಇನ್ನು ಮುಂದೆ ಬರುವುದು ಮೂರನೆ ಭಾಗ. ಈ ಕಥಾನಕವನ್ನು ಮೆಚ್ಚಿದ್ದೀರಿ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಟೀಲರೆ ನಮಸ್ಕಾರಗಳು.
ತಮ್ಮ ಕತೆ 'ಸಿನೆಮಾ' ಎರಡನೇ ರೀಲಿನಲ್ಲಿ ಮಾದೇವನು ಮಾಡಿದ ಕಾಡಿನ ಟ್ರೆಕ್ಕಿಂಗ್ ತುಂಬಾ ಸೊಗಸಾಗಿತ್ತು. ಬರೆದರೆ ಪ್ರತಿಯೊಬ್ಬರ ಜೀವನದಲ್ಲೂ ನಡೆದ ಇಂಥಹ ಘಟನೆಗಳನ್ನು ಉದಹರಿಸಬಹುದು.
ವಂದನೆಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಮೇಶ ಕಾಮತರಿಗೆ ವಂದನೆಗಳು
ಈ ಕಥೆಯ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ. ಮಾದೇವನ ಟ್ರೆಕ್ಕಿಂಗನ್ನು ಮೆಚ್ಚಿದ್ದೀರಿ, ನಿಮ್ಮಂತಹ ಸಂಪದದ ಓದುಗರ ಮೆಚ್ಚುಗೆಯೆ ನಮಗೆ ಸ್ಪೂರ್ತಿ. ಮೆಚ್ಚುಗೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿರಿಯರೇ ಅದಾ ವಿಷ್ಯ? ನನಗೆ ಗೊತ್ತಿರಲಿಲ್ಲ...
ಹಿಂದಿನ ಬರಹಗಳ ಲಿಂಕ್ ನೋಡುವೆ..

ಶುಭವಾಗಲಿ....!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.