ಸಹಿಸಿಕೊಳ್ಳುವುದಕ್ಕಿಂತ ತಿರುಗೇಟು ನೀಡುವುದೇ ಒಳ್ಳೇದು ಎಂದು ಅನಿಸಲ್ವಾ?

4.266665

ದಿನಪತ್ರಿಕೆ ತೆರೆದು ನೋಡಿದರೆ ಪ್ರತಿದಿನವೂ ಮಹಿಳೆಯ ಮೇಲೆ ದೌರ್ಜನ್ಯ ಎಂಬ ಒಂದು ಸುದ್ದಿ ಇದ್ದೇ ಇರುತ್ತದೆ. ಅತ್ತೆಯ ದೌರ್ಜನ್ಯ, ಪತಿಯ ದೌರ್ಜನ್ಯ, ಕಚೇರಿಯಲ್ಲಿ ದೌರ್ಜನ್ಯ ಅಬ್ಬಾ ಎಷ್ಟೊಂದು ವಿಧದ ದೌರ್ಜನ್ಯಗಳು!. ನಾವು ಮುಂದುವರಿದಿದ್ದೇವೆ, ಅಬಲೆಯಲ್ಲ ಸಬಲೆ ಎಂದು ನಾನೂ ಸೇರಿದಂತೆ ಮಹಿಳೆಯರೆಲ್ಲಾ ಗಟ್ಟಿಯಾಗಿ ಕೂಗಿ ಹೇಳುತ್ತಿದ್ದೇವೆ. ಹೆಣ್ಣು ಅಬಲೆಯಿಂದ ಸಬಲೆಯಾಗಿ ಬಡ್ತಿ ಪಡೆದಿದ್ದರೂ ದೌರ್ಜನ್ಯ , ಕಿರುಕುಳಗಳು ಮಾತ್ರ ಅವಳ ನೆರಳಂತೆ ಹಿಂಬಾಲಿಸುತ್ತಿವೆ. ಹಳ್ಳಿಯಲ್ಲಿದ್ದರೂ, ನಗರದಲ್ಲಿದ್ದರೂ ಮಹಿಳೆ ದೌರ್ಜನ್ಯಕ್ಕೊಳಗಾಗುವುದು ತಪ್ಪಿಲ್ಲ. ಅಲ್ಲಿ ಹಾಗಾಯ್ತು, ಇಲ್ಲಿ ಹೀಗಾಯ್ತು ಎಂದು ಎಂಬ ವರದಿಗಳನ್ನೋದಿದಾಗ ಅಯ್ಯೋ ಪಾಪ ಎಂದು ಎನಿಸುತ್ತದೆ. ಆದರೆ ಇದಕ್ಕೆ ಪರಿಹಾರ ಏನು? ಎಂಬುದರ ಬಗ್ಗೆ ಚಿಂತಿಸತೊಡಗಿದಾಗಲೇ ಸಮಸ್ಯೆಯ ಗಂಭೀರತೆ ಅರಿವಿಗೆ ಬರುವುದು. ಇತ್ತೀಚೆಗೆ ನಮ್ಮ ದೇಶದಲ್ಲಿ ಇಂಥಾ ದೌರ್ಜನ್ಯಗಳ ಸಂಖ್ಯೆ ಏರುತ್ತಲೇ ಹೋಗುತ್ತಿದೆ. ಅದರಲ್ಲೂ ಬೆಂಗಳೂರು ಸುರಕ್ಷಿತವಲ್ಲ ಎಂದು ಹೇಳಲಾಗುತ್ತದೆ. ಎನ್ ಸಿಆರ್ ಬಿ (ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ) ವರದಿ ಪ್ರಕಾರ 2011ರಲ್ಲಿ ಬೆಂಗಳೂರಲ್ಲಿ ಮಹಿಳೆಯ ಮೇಲೆ ನಡೆದ ದೌರ್ಜನ್ಯಗಳ ಬಗ್ಗೆ ದಾಖಲಾದ ಪ್ರಕರಣಗಳ ಸಂಖ್ಯೆ 1,890, ಇನ್ನು ದಾಖಲಾಗದೇ ಇರುವ ದೌರ್ಜನ್ಯಗಳ ಸಂಖ್ಯೆ ಎಷ್ಟಿರಬಹುದೇನೋ. ನವದೆಹಲಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 4,489. ಅಂದರೆ ದೆಹಲಿಯ ನಂತರ ಬೆಂಗಳೂರು ನಗರವೇ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬುದಕ್ಕೆ ಈ ಪ್ರಕರಣಗಳ ಸಂಖ್ಯೆಯೇ ಸಾಕ್ಷಿ.

ಎನ್ ಸಿಆರ್ ಬಿ ನೀಡಿರುವ ಅಂಕಿ ಅಂಶಗಳ ಪ್ರಕಾರ 2011ರಲ್ಲಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳ ಲೆಕ್ಕಾಚಾರ ಹೀಗಿದೆ.

ಪತಿಯಿಂದ ದೌರ್ಜನ್ಯ -458, ಕಿರುಕುಳ -250,ಅಪಹರಣ -206, ಅತ್ಯಾಚಾರ -97, ವರದಕ್ಷಿಣೆ ಕಿರುಕುಳದಿಂದ ಸಾವು -53,ಲೈಂಗಿಕ ದೌರ್ಜನ್ಯ -40. 2010ರಲ್ಲಿ ಈ ಎಲ್ಲ ಪ್ರಕರಣಗಳ ಸಂಖ್ಯೆ ಕಡಿಮೆ ಇತ್ತು. ಹಾಗಾದರೆ ವರ್ಷದಿಂದ ವರ್ಷಕ್ಕೆ ಇಂಥಾ ದೌರ್ಜನ್ಯಗಳು ಯಾಕೆ ಹೆಚ್ಚುತ್ತಾ ಹೋಗುತ್ತವೆ? ನಾವು ಮೊದಲಿನಂತಿಲ್ಲ, ಗಟ್ಟಿಗಿತ್ತಿಯರು, ವಿದ್ಯಾವಂತೆಯರು, ನಮ್ಮ ಕಾಲ ಮೇಲೆ ನಾವೇ ನಿಲ್ಲಲು ತಾಕತ್ತು ಇರುವ 'ಇಂದಿನ' ಮಹಿಳೆಯರು. ಹೀಗಿದ್ದರೂ, ದೌರ್ಜನ್ಯಗಳ ಸಂಖ್ಯೆಗೆ ಲಗಾಮು ಹಾಕಲು ಸಾಧ್ಯವಾಗದೇ ಇರುವುದು ಯಾಕೆ?

ಉದಾಹರಣೆಗೆ ಹೆಣ್ಣಿನ ಮೇಲೆ ದೌರ್ಜನ್ಯ ಎಂಬ ಸುದ್ದಿ ಪ್ರಕಟವಾಗಿದೆ. ನಾವು ಓದುತ್ತೇವೆ, ಆಮೇಲೆ ಹೀಗಾಗಬಾರದಿತ್ತು ಎಂದು ಹೇಳಿ ಸುಮ್ಮನಾಗುತ್ತೇವೆ. ಹೆಚ್ಚೆಂದರೆ ಸಾಮಾಜಿಕ ತಾಣದಲ್ಲಿ ಸುದ್ದಿ ಶೇರ್ ಮಾಡುತ್ತೇವೆ, ಲೈಕ್, ಕಾಮೆಂಟ್ ಮಾಡಿ ನಮ್ಮ ನಿಲುವು ತಿಳಿಸುತ್ತೇವೆ. ದೃಶ್ಯ ಮಾಧ್ಯಮದವರು ಕಿರುಕುಳಕ್ಕೊಳಗಾದ ಹೆಣ್ಮಗಳನ್ನು ಸ್ಟುಡಿಯೋಗೆ ಕರೆಸಿ ಏನಮ್ಮಾ ನಿನ್ ಪ್ರಾಬ್ಲಂ? ಅಂತಾ ಕೇಳ್ತಾರೆ. ಮಹಿಳಾವಾದಿಗಳು ಗಂಟೆಗಟ್ಟಲೆ ದೌರ್ಜನ್ಯದ ಬಗ್ಗೆ ಭಾಷಣ ಕೊರೆದು, ಗಂಡು ವರ್ಗವನ್ನು ಹಿಗ್ಗಾಮುಗ್ಗ ಬೈತಾರೆ, ಇನ್ನು ಕೆಲವರು ಅನಾದಿಕಾಲದಿಂದಲೂ ಹೆಣ್ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ, ಈಗಲೂ ನಡೆಯುತ್ತಿರುವುದು ದುರದೃಷ್ಟಕರ ಎಂದು ಪುಟಗಟ್ಟಲೆ ಬರೆಯುತ್ತಾರೆ. ಆದರೆ, ಈ ದೌರ್ಜನ್ಯವನ್ನು ತಡೆಗಟ್ಟಲು ನಾವೇನು ಮಾಡಬೇಕು ಎಂಬ ಪ್ರಶ್ನೆ ಕೇಳಿದರೆ ಮೊದಲು ಬರುವ ಉತ್ತರ ಪ್ರಕರಣ ದಾಖಲಿಸಬೇಕು. (ಅಲ್ಲಿಯೂ ನಮಗೆ ನ್ಯಾಯ ಸಿಗುತ್ತೆ ಎಂದು ಖಾತ್ರಿ ಇಲ್ಲ) ಅದೂ ಮಾಡಿದ್ದಾಯ್ತು! ಮುಂದೆ? ಯಾವುದೋ ಟಿವಿ ಚಾನೆಲ್ ಮುಂದೆ ಹೋಗಿ ನಡೆದದ್ದೆಲ್ಲಾ ವಿವರಿಸುವುದು! ನಂತರ? ಗೊತ್ತಿಲ್ಲ..ಯಾಕೆಂದರೆ  ಏನು ಮಾಡಬೇಕೆಂಬುದು ಯಾರೂ ಹೇಳಿಕೊಟ್ಟಿಲ್ಲವಲ್ಲಾ...

 ನಾವು ಎಡವಿದ್ದು ಇಲ್ಲಿಯೇ. ಯಾವುದೇ ಹೆಣ್ಣು ಮಗಳು ದೌರ್ಜನ್ಯಕ್ಕೊಳಗಾದಾಗ ಅವಳಿಗೆ ಏನಾಯ್ತು? ಎಂದು ಕೇಳುತ್ತೇವೆಯೇ ವಿನಾ ಆಕೆ ಮುಂದೇನು ಮಾಡಬೇಕೆಂಬುದರ ಬಗ್ಗೆ ಯಾರೂ ಸಲಹೆ ಸೂಚನೆಯನ್ನು ಕೊಡುವುದಿಲ್ಲ. ಒಂದು ಪುಟ್ಟ ಉದಾಹರಣೆ ಕೊಟ್ಟು ವಿವರಿಸುವುದಾದರೆ, ಬಸ್ಸಿನಲ್ಲಿ ಪ್ರಯಾಣ ಮಾಡುವಾಗ  ಗಂಡಸು ಹಿಂದಿನಿಂದ ಅನುಚಿತವಾಗಿ ವರ್ತನೆ ಮಾಡುತ್ತಾನೆ. ಆತನ ಮುಂದೆ ನಿಂತಿದ್ದ ಹೆಣ್ಮಗಳು ಅಲ್ಲಿಂದ ದೂರ ಸರಿದು ನಿಲ್ಲುತ್ತಾಳೆಯೇ ಹೊರತು ಅವನ ವಿರುದ್ಧ ದನಿಯೆತ್ತಲು ಮುಂದಾಗುವುದಿಲ್ಲ. ಕಾರಣ, ದನಿಯೆತ್ತಿದರೆ ಏನಾಗುವುದೋ ಎಂಬ ಭಯ ಆಕೆಯನ್ನು ಆವರಿಸಿ ಬಿಟ್ಟಿರುತ್ತದೆ. ಆಕೆ ಈ ವಿಷಯವನ್ನು ಮನೆಯವರಲ್ಲಿ ಹೇಳುತ್ತಾಳೆ ಅಂತಿಟ್ಟುಕೊಳ್ಳಿ. ಅವರೂ ಕೂಡಾ ನೀನು ಜಗಳ ಮಾಡೋಕೆ ಹೋಗ್ಬೇಡಮ್ಮಾ...ಬಸ್್ನಲ್ಲಿ ತುಂಬಾ ಹಿಂದೆ ಹೋಗಿ ನಿಲ್ಬೇಡ...ಎಂಬ ಸಲಹೆಯನ್ನೇ ನೀಡುತ್ತಾರೆ. ಆದರೆ ಯಾರೊಬ್ಬರೂ, ಬಸ್ಸಿನಲ್ಲಿ ನಿನ್ನ ಜತೆ ಯಾರಾದರೂ ಅನುಚಿತವಾಗಿ ವರ್ತಿಸಿದರೆ ನೀನು ತೀವ್ರವಾಗಿ ಪ್ರತಿಕ್ರಿಯಿಸು ಎನ್ನಲ್ಲ, ಕಪಾಳಕ್ಕೆ ಬಾರಿಸು ಎಂದು ಹೇಳಲ್ಲ.

ಬಸ್ಸಿನಲ್ಲಿ ಕಿರುಕುಳಕ್ಕೊಳಗಾದರೆ ಹೆಣ್ಮಗಳು ಗಟ್ಟಿ ಪ್ರತಿಕ್ರಿಯೆ ನೀಡಲಿ ನೋಡೋಣ, ಜನರೆಲ್ಲಾ ಅವಳ ಬೆಂಬಲಕ್ಕೆ ನಿಲ್ಲುತ್ತಾರೆ. ಹೆಣ್ಮಕ್ಕಳಿಗೆ ಇದೊಂದು ಅಡ್ವಾಂಟೇಜ್. ಆದರೆ ಬಹುತೇಕ ಹೆಣ್ಮಕ್ಕಳು ಇದನ್ನು ಕಡೆಗಣಿಸಿ, ಮೌನದ ಮೊರೆ ಹೋಗುತ್ತಾರೆ. ಪರಿಣಾಮ, ಗಂಡಸರು ತಮ್ಮ ಚಾಳಿಯನ್ನು ಮುಂದುವರಿಸುತ್ತಾರೆ. ಹೀಗಿರುವಾಗ ಯಾರಾದರೊಬ್ಬ ಹೆಣ್ಮಗಳು ತೀವ್ರ ತಿರುಗೇಟು ನೀಡಲಿ ನೋಡೋಣ, ಆ ಪುಣ್ಯಾತ್ಮ ಮತ್ತೆ ಆ ಕೆಲಸಕ್ಕೆ ಕೈ ಹಾಕುವ ಧೈರ್ಯ ತೋರಲ್ಲ.

ಇನ್ನು, ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಅವರು ತೊಡುವ ಬಟ್ಟೆಗಳೇ ಕಾರಣ ಎಂಬ ವಾದವಿದೆ. ಆದರೆ ಮೊನ್ನೆ ಮದ್ದೂರಲ್ಲಿ ಗಾರ್ಮೆಂಟ್ ಕೆಲಸದಲ್ಲಿರುವ ಆಶಾ ಎಂಬ ಯುವತಿಯನ್ನು ಚುಡಾಯಿಸಿ, ರೈಲಿನಿಂದ ಹೊರದಬ್ಬಿದ ಘಟನೆಗೆ ಏನೆನ್ನಬೇಕು? ಆ ಹೆಣ್ಮಗಳು ಯಾವುದೇ ಪ್ರಚೋದನಾಕಾರಿ ಬಟ್ಟೆ ತೊಟ್ಟಿರಲಿಲ್ಲ. ಆದರೂ ಆಕೆ ಕಿರುಕುಳಕ್ಕೊಳಬೇಕಾಗಿ ಬಂತು. ಅಷ್ಟೇ ಯಾಕೆ ಎಳೆ ಮಕ್ಕಳನ್ನೂ, ಅಜ್ಜಿಯಂದಿರನ್ನೂ ಹಾಸಿಗೆಗೆಳೆಯುವ ಕಾಮುಕರು ನಮ್ಮ ಸಮಾಜದಲ್ಲಿರುವಾಗ ಅಲ್ಲಿ ಪ್ರಚೋದನಾಕಾರಿ ಬಟ್ಟೆಯ ವಿಷ್ಯ ಬರುವುದೇ ಇಲ್ವವಲ್ಲಾ? ಆದರೂ, ಜನರಲ್ ಕಂಪಾರ್ಟ್ ಮೆಂಟ್ ನಲ್ಲಿ ಪ್ರಯಾಣಿಸುತ್ತಿದ್ದ ಆಶಾಗೆ ಹುಡುಗರು ಕಿರುಕುಳ ನೀಡುತ್ತಿದ್ದಾಗ ಸಹ ಪ್ರಯಾಣಿಕರ್ಯಾರೂ ಸಹಾಯಕ್ಕೆ ಬಂದಿಲ್ಲವೇ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ.

ಇತ್ತೀಚೆಗೆ ಶಿವಾಜಿನಗದಿಂದ ನವರಂಗ್ ರೂಟ್ ನಲ್ಲಿ ರಾತ್ರಿ 8ರ ವೇಳೆಗೆ ಪ್ರಯಾಣಿಸುತ್ತಿದ್ದಾಗ, ನಡು ವಯಸ್ಸಿನ ವ್ಯಕ್ತಿಯೊಬ್ಬ ಹೆಂಗಸರ ಮಧ್ಯೆ ನಿಂತು ಮೈಮೇಲೆ ಬೀಳುತ್ತಿದ್ದ. ಮೊದಲಿಗೆ ನನ್ನ ಮುಂದೆ ನಿಂತಿದ್ದ ಹುಡುಗಿಯ ಪಕ್ಕ ನಿಂತು ವಾಲುತ್ತಿದ್ದ. ಆಕೆ ಅಲ್ಲಿಂದ ಜಾಗ ಬದಲಿಸಿದಾಗ ಆ ಭೂಪ ನನ್ನತ್ತ ವಾಲುತ್ತಿದ್ದ. ಆತ ಕುಡಿದಿದ್ದ. ಕೆಟ್ಟ ವಾಸನೆ ಬೇರೆ...ಸ್ವಲ್ಪ ಸರಿಯಾಗಿ ನಿಂತ್ಕೊಳ್ಳಿ ಅಂದೆ. ಅವ ಕೇಳಿಸದಂತೆ ನಟಿಸಿದ. ಆಫೀಸು ಮುಗಿಸಿ ಹೋಗುವ ವೇಳೆ ಸುಸ್ತಾಗಿದ್ದುದರಿಂದ ಸಿಟ್ಟೂ ಬಂದಿತ್ತು. ಗಟ್ಟಿಯಾಗಿ ಹೇಳಿದೆ ನಿಮ್ಗೇನು ಭಾಷೆ ಅರ್ಥ ಆಗಲ್ವ? ಹಿಂದೆ ಹೋಗಿ ನಿಂತ್ಕೊಳ್ರಿ...ಕುಡಿದು ಬಂದು ಮೈಮೇಲೆ ಬೀಳ್ತಾರೆ ಎಂದೆ. ಅವ ನಾನೇನು ಮಾಡಿದೆ? ನೀನೇ ಈ ಕಡೆ ವಾಲುತ್ತಿದ್ದಿ ಅಂದು ಬಿಟ್ಟ. ನನ್ನ ಪಕ್ಕ ನಿಂತಿದ್ದ ಹುಡುಗಿಯರೆಲ್ಲಾ ಮುಸಿ ಮುಸಿ ನಗತೊಡಗಿದರು. ಅದನ್ನು ನೋಡಿ ಕೋಪ ಇನ್ನಷ್ಟು ಬಂದ್ಬಿಟ್ಟಿತ್ತು. ಕಣ್ಣಲ್ಲಿ ನೀರು...

ಬಸ್ಸಿನಲ್ಲಿ ಕಂಡೆಕ್ಟರಾಗಲೀ, ಸಹ ಪ್ರಯಾಣಿಕರಾಗಲೀ ಏನೂ ಅನ್ನುತ್ತಿಲ್ಲ. ಆವಾಗಲೇ ದೂರದ ಸೀಟಿನಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಉರ್ದು ಮಿಶ್ರಿತ ಹಿಂದಿಯಲ್ಲಿ ಆತನಿಗೆ ಹಿಗ್ಗಾಮುಗ್ಗ ಬೈಯ್ಯತೊಡಗಿದರು. ಅವ ಅಲ್ಲಿಂದ ಮುಂದೆ ಹೋಗಿ ಬಾಗಿಲ ಬಳಿ ನಿಂತು 'ನಿನ್ನ ನೋಡಿ ಕೊಳ್ತೇನೆ' ಎಂದು ಬೆದರಿಕೆ ಹಾಕಿ ಇಳಿದು ಹೋದ. ಮೈ ನಡುಗುತ್ತಿತ್ತು, ಸಹ ಪ್ರಯಾಣಿಕರು ಎಲ್ಲರೂ ನಾನೇನೋ ತಪ್ಪು ಮಾಡಿರುವಂತೆ ನೋಡುತ್ತಿದ್ದರು. ಈಗ ಅತ್ತು ಬಿಡುತ್ತೇನೆ ಎಂಬ ಸ್ಥಿತಿಯಲ್ಲಿದ್ದೆ ಆದರೆ ಸಂಭಾಳಿಸಿಕೊಂಡೆ...ಹಾಸ್ಟೆಲ್ ತಲುಪಿದಾಗಲೂ ಹೆದರಿಕೊಂಡಿದ್ದೆ. ಈ ವ್ಯಕ್ತಿಯ ಬೆದರಿಕೆ, ಸಹ ಪ್ರಯಾಣಿಕರ ಮುಸಿ ಮುಸಿ ನಗು ಮನದಲ್ಲೇ ಸುಳಿಯುತ್ತಿತ್ತು...ಆಮೇಲೆ ಎಲ್ಲ ಸರಿಹೋಯ್ತು. ಇದು ನನ್ನ ಅನುಭವ. ಹೀಗೆ ಅದೆಷ್ಟೋ ಹೆಣ್ಮಕ್ಕಳಿಗೆ ಇದಕ್ಕಿಂತ ಕೆಟ್ಟ ಅನುಭವವೂ ಆಗಿರಬಹುದು.

 ಅದರಲ್ಲೂ ಸದ್ಯಕ್ಕೆ ಹೆಚ್ಚಾಗಿ ಸುದ್ದಿ ಮಾಡುತ್ತಿರುವ ದೌರ್ಜನ್ಯ ಎಂದರೆ ಲೈಂಗಿಕ ದೌರ್ಜನ್ಯ. ಬಾಸ್ ಹೀಗೆ ಮಾಡಿದ, ಸ್ವಾಮಿ ಹೀಗೆ ಮಾಡಿದ ಎಂದು ದೃಶ್ಯ ಮಾಧ್ಯಮದ ಮುಂದೆ ಅತ್ತು ಕರೆಯುವ ಸಾಕಷ್ಟು ಮಹಿಳೆಯರನ್ನು ನಾವು ನೋಡಿರುತ್ತೇವೆ. ಇವರೆಲ್ಲಾ ಹೇಳುವ ಒಂದೇ ಒಂದು ದೂರು ಅವ ನನ್ನನ್ನು ಬಳಸಿಕೊಂಡ!. ನನ್ನ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಮಾಡಿದ!  ಹಾಗಾದರೆ ಇವರ್ಯಾಕೆ ಆತನಿಗೆ ಬಳಕೆ ವಸ್ತುವಾಗಿ ಬಿಟ್ಟರು? ಆತ ಪದೇ ಪದೇ ಲೈಂಗಿಕ ದೌರ್ಜನ್ಯವೆಸಗುವಾಗ ಸುಮ್ಮನಿದ್ದರು? ಒಂದು ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದರೆ, ಓಕೆ...ಆವಾಗ ಅವಳಿಗೆ ಏನು ಮಾಡಬೇಕೆಂಬುದು ಗೊತ್ತಾಗಲಿಲ್ಲ ಅಂತಿಟ್ಟುಕೊಳ್ಳೋಣ, ಆದರೆ ಎರಡನೇ ಬಾರಿ ಆತ ಮಂಚಕ್ಕೆ ಕರೆಯುವಾಗ ಪ್ರತಿಭಟಿಸದೇ ಇರುವುದು ತಪ್ಪಲ್ಲವೇ? ಲೈಂಗಿಕ ದೌರ್ಜನ್ಯಕ್ಕೀಡುಮಾಡಿದ ನಂತರ ಕೊಂದು ಬಿಡ್ತೀನಿ ಅಂತಾ ಆತ ಬೆದರಿಕೆ ಹಾಕ್ತಾನೆ ಎಂದಾದರೆ, ಕೊಂದು ಬಿಡು.. ಪದೇ ಪದೇ ನಿನ್ನೊಂದಿಗೆ ದೇಹ ಹಂಚಿ ಸುಮ್ಮನಿರುವುದಕ್ಕಿಂತ ಸಾಯುವುದೇ ಒಳ್ಳೇದು ಎಂದು ಉತ್ತರಿಸಿದ್ದರೆ ಆತನಿಗದು ತಿರುಗೇಟು ಆಗುತ್ತಿತ್ತು. ಆದರೆ ಇದ್ಯಾವುದನ್ನೂ ಮಾಡದೆ ಸುಮ್ಮನಿದ್ದು, ಕೊನೆಗೆ ಕಣ್ಣೀರು ಹಾಕಿದರೆ ಏನು ಪ್ರಯೋಜನ?

ಕಣ್ಣೀರು ಅಸ್ತ್ರವಾಗಿ ಬಳಸಬಹುದು ಆದರೆ ಅದೊಂದು ಅವಧಿಯವರೆಗೆ ಮಾತ್ರ. ಜೀವನ ಪರ್ಯಂತ ಕಣ್ಣೀರು ಹಾಕಿದರೆ ಏನೂ ದಕ್ಕಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಅದರ ಬದಲಿಗೆ ಒಂದು ಚಿಕ್ಕ ಅನುಭವವೇ ಆಗಿರಲಿ, ಅದರಿಂದ ಕಲಿಬೇಕು, ಆ ಬಗ್ಗೆ ಎಚ್ಚರ ವಹಿಸಬೇಕು, ಸಾಧ್ಯವಾದರೆ ಪ್ರತಿಭಟಿಸಬೇಕು. ಆದರೆ ಅದನ್ನು ಕಡೆಗಣಿಸಿ ಸುಮ್ಮನಾಗುವುದು ಸರಿಯಲ್ಲ. ಯಾಕೆಂದರೆ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರವಿರುತ್ತದೆ. ಪರಿಹಾರ ಹುಡುಕುತ್ತಾ ಹೋದಂತೆ ಹೊಸ ಅನುಭವ ಸಿಗುತ್ತೆ. ಈ ಅನುಭವ ನಮ್ಮನ್ನು ಇನ್ನಷ್ಟು ಗಟ್ಟಿಯಾಗಿ ಮಾಡುತ್ತೆ. ನಾವು ಪ್ರತಿಭಟಿಸುತ್ತೇವೆ ಎಂದಾಕ್ಷಣ ನಮ್ಮ ಬಗ್ಗೆ ಅಪವಾದಗಳು ಹರಡಬಹುದು, ಕೆಲವೊಮ್ಮೆ ಜೀವಕ್ಕೇ ಸಂಚಕಾರ ಬರಬಹುದು. ಆದರೆ ಎಲ್ಲವನ್ನು ಸಹಿಸಿ ಹೀಗೇ ಮುಂದುವರಿದರೆ ಮುಂದೆ ಇದಕ್ಕಿಂತ ದೊಡ್ಡ ದೌರ್ಜನ್ಯಗಳಿಗೆ ನಾವು ಬಲಿಯಾಗಬೇಕಾಗಿ ಬರಬಹುದು. ಆವಾಗ ನಾವು ಹೇಳುವ ಕಣ್ಣೀರ ಕಥೆ ಮಾಧ್ಯಮಗಳ ಟಿಆರ್ ಪಿ ಹೆಚ್ಚಿಸಬಹುದೇ ವಿನಾ ಕಳೆದು ಹೋದ ಕಾಲವನ್ನು ಮರಳಿ ತರಲಾರದು. ಏನಂತೀರಾ?

 

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (15 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸೌಮ್ಯ ಅವರೆ, ತಿರುಗೇಟು ನೀಡುವ ನಿಮ್ಮ ಸಲಹೆಯೇನೋ ಉಚಿತವೇ, ಆದರೆ ಹಾಗೆ ಮಾಡಿದಾಗ ಅವಮಾನಗೊಂಡ ವ್ಯಕ್ತಿ ಬೇರೆ ರೀತಿಯಲ್ಲಿ ಸೇಡು ತೀರಿಸಿಕೊಳ್ಳುತ್ತಾನೆನ್ನುವ ಭಯವಿದ್ದೇ ಇರುತ್ತದೆ. ಆದ್ದರಿಂದ ಬಹುತೇಕ ಹೆಂಗಸರು ಹಾಗೆ ಮಾಡಲು ಹಿಂಜರಿಯುತ್ತಾರೆ ಎಂದುಕೊಳ್ಳುತ್ತೇನೆ. ಇನ್ನು ಲೈಂಗಿಕವಾಗಿ ಶೋಷಣೆ ಮಾಡುವ ಬಾಸುಗಳ ಹೆಂಗಸರ ದೌರ್ಬಲ್ಯಗಳನ್ನು ನೋಡಿಕೊಂಡೇ ಹಾಗೆ ಮಾಡುತ್ತಾರೆ. ಇವರಿಗೂ ಕೂಡಾ ಇರುವ ಕೆಲಸ ಕಳೆದುಕೊಂಡರೆ ಸಂಸಾರ ನಿಭಾಯಿಸುವ ಕಷ್ಟಗಳೂ ಕೂಡಾ ಇರಬಹುದಲ್ಲವೇ; ಆದ್ದರಿಂದ ಅದು ಮಿತಿಮೀರಿದಾಗ ಇನ್ನು ಸಹಿಸುಕೊಳ್ಳುವುದು ಅಶಕ್ಯವೆನಿಸಿದಾಗ ಪ್ರತಿಭಟನೆ ಮಾಡುತ್ತಾರೆ. ಇಂಥಹವರಿಗೆ ರಕ್ಷಣೆಯ ಭರವಸೆ ಸಮಾಜದಿಂದ ಸಿಕ್ಕರೆ ಖಂಡಿತ ಇವರೆಲ್ಲಾ ತಕ್ಷಣವೇ ಪ್ರತಿಭಟಿಸಬಹುದೆನಿಸುತ್ತದೆ. ಈ ನಿಟ್ಟಿನಲ್ಲಿ ಮಹಿಳಾ ಸಂಘಟನೆಗಳು ಪ್ರಬಲವಾಗಬೇಕು ಮತ್ತು ಸ್ತ್ರೀಯರು ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಿದರೆ ಇಂತಹ ಸಮಸ್ಯೆಗಳನ್ನು ಸಾಕಷ್ಟು ಮಟ್ಟಿಗೆ ತಡೆಗಟ್ಟ ಬಹುದೆಂದು ಕೊಳ್ಳುತ್ತೇನೆ. ಪ್ರಚಲಿತ ಸಮಸ್ಯೆಯನ್ನು ವಿವಿಧ‌ ಕೋನಗಳಿಂದ ಚರ್ಚಿಸಿರುವ ನಿಮ್ಮ ಲೇಖನಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರಹ ಚೆನ್ನಾಗಿದೆ. ಓದಿ ನೆನಪಿಗೆ ಬಂದದ್ದು : ಸೂಪರ್ ಕಾಪ್ ಕೆಪಿಎಸ್ ಗಿಲ್ ಅನ್ನು ಮಣಿಸಿದ ರೂಪೇನ್ ಬಜಾಜ್. ಹಾಗೆಯೇ ನೆನಪಾದದ್ದು ಸೌದಿ ಅರೇಬಿಯಾದಲ್ಲಿ ಮಹಿಳೆಯರು ಮನೆಹೊರಗೆ ಹೋಗುವಾಗ ಇರುವ ರಕ್ಷಣೆ ‍‍‍ -- ‍‍ ಗಂಡ ಅಥವಾ ಸೋದರರ ಜೊತೆ ಇಲ್ಲದೆ ಹೊರಗೆ ಕಾಲಿರಿಸುವ ಹಾಗಿಲ್ಲ !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಕರ್. ಇವತ್ತು ಶುಕ್ರವಾರ, ಇಲ್ಲಿ ರಜೆ. ಸೋಮಾರಿತನದಿಂದ ಹೊರಗೆ ಕಾಲಿಡದೆ ಮನೆಯಲ್ಲೇ ಕೂತಿದ್ದೇನೆ. ಉಪವಾಸ ವ್ರತ ಮುರಿಯುವ ಸಮಯಕ್ಕೆ ಮನೆಯಲ್ಲಿ ಫ್ರೂಟ್, ಯೋಗರ್ಟ್ ಇಲ್ಲ ಎಂದು ಮಡದಿ ಒಬ್ಬಳೇ ಹೋಗಿದ್ದಾಳೆ ಸೂಪರ್ ಮಾರ್ಕೆಟ್ ಗೆ. ಸೌದಿಯಲ್ಲಿ ಹೆಣ್ಣು ಮಕ್ಕಳು ಒಬ್ಬರೇ ಹೋಗಬಹುದು. ತೊಂದರೆಯಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ಅಬ್ದುಲ್ ಭಾಯ್, ಸೌದಿಯಲ್ಲೂ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದಾಯಿತು. ಒಳ್ಳೆಯದೋ, ಕೆಟ್ಟದ್ದೋ ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@Shreekar, ಲೇಖನ ಮೆಚ್ಚಿದ್ದಕ್ಕೆ ನನ್ನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ ಶ್ರೀಧರ್ ಬಂಡ್ರಿ ಸಾಕ್ಷಾತ್ ದುರ್ಗೆಯ ಆವೇಶದಲ್ಲಿ ಬರೆದ ರಶ್ಮಿ ಪೈ ಯವರನ್ನು " ಸೌಮ್ಯ" ಎಂದು ಸಂಬೋಧಿಸಿದ್ದೀರಲ್ಲ ! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@Shreekar ಸಾಕ್ಷಾತ್ ದುರ್ಗೆಯ ಆವೇಶ! :) ಅಷ್ಟೊಂದು ಇಲ್ಲಪ್ಪಾ...ನನಗೆ ತೋಚಿದ್ದು ಬರೆದಿದ್ದೇನೆ ಅಷ್ಟೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರ್ ಬಂಡ್ರಿ ಅವರಿಗೆ ನಮಸ್ಕಾರ, ನನ್ನ ಹೆಸರು ರಶ್ಮಿ, ಸೌಮ್ಯ ಅಲ್ಲ :) ನೀವು ಹೇಳಿದ ವಿಷಯ ಒಪ್ಪುವಂತದ್ದೇ. ಆದರೆ ಕೆಲವೊಮ್ಮೆ ಮಹಿಳೆಯರಿಗೆ ಮಹಿಳೆಯರೇ ಸಹಾಯ ಮಾಡದೇ ಇರುವ ಸಂದರ್ಭವೂ ಇರುತ್ತದೆ. ಯಾವುದೇ ಮಹಿಳೆಗೆ ಇಂಥಾ ಕಷ್ಟ ಒದಗಿದಾಗ ಅವಳಿಗೆ ಹಾಗೇ ಆಗ್ಬೇಕು ಎಂದು ಬಯಸುವ ಮಹಿಳೆಯರು, ಕಷ್ಟದಲ್ಲಿರುವ ಮಹಿಳೆಗೆ ತಮಗೊದಗಿರುವ ಕಷ್ಟವನ್ನು ಇನ್ನೊಬ್ಬ ವ್ಯಕ್ತಿಯಲ್ಲಿ ಹೇಳಿಕೊಂಡರೆ ಅವರೇನಂತಾರೆ? ಎಂಬ ಭಯ ಎಲ್ಲವೂ ಇಲ್ಲಿರುತ್ತದೆ. ಆದ್ದರಿಂದ ಮಹಿಳೆಯರು ತಮ್ಮಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಆತ್ಮವಿಶ್ವಾಸ ಬೆಳೆಸಲು ಮನೆಯವರು ಆಕೆಗೆ ಸಹಾಯ ಮಾಡಬೇಕು. ವಿಶೇಷವಾಗಿ ಅಮ್ಮ..ಅಮ್ಮ ಗಟ್ಟಿಗಿತ್ತಿಯಾಗಿದ್ದರೆ ಮಗಳಿಗೂ ಹೆಚ್ಚಿನ ಆತ್ಮವಿಶ್ವಾಸ ಬಂದಿರುತ್ತದೆ ಎಂಬುದು ನನ್ನ ಅಭಿಪ್ರಾಯ. ಲೇಖನ ಮೆಚ್ಚಿದ್ದಕ್ಕೆ ನನ್ನಿ. -ರಶ್ಮಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮಿ ಮೇಡಂ, ನಿಮ್ಮ ಲೇಖನ ಓದಿದವರೆಲ್ಲ ಮುಂದಾದರೂ ಇಂತಹ ದೌರ್ಜನ್ಯಗಳ ವಿರುದ್ದ ಹೋರಾಡಬೇಕೆಂಬ ಛಲ ಬರುತ್ತದೆ.. ಬಹಳ ಉತ್ತಮವಾಗಿದೆ... ಉದಾಹರಣೆಗೆ ಹೆಣ್ಣಿನ ಮೇಲೆ ದೌರ್ಜನ್ಯ ಎಂಬ ಸುದ್ದಿ ಪ್ರಕಟವಾಗಿದೆ. ನಾವು ಓದುತ್ತೇವೆ, ಆಮೇಲೆ ಹೀಗಾಗಬಾರದಿತ್ತು ಎಂದು ಹೇಳಿ ಸುಮ್ಮನಾಗುತ್ತೇವೆ. ಹೆಚ್ಚೆಂದರೆ ಸಾಮಾಜಿಕ ತಾಣದಲ್ಲಿ ಸುದ್ದಿ ಶೇರ್ ಮಾಡುತ್ತೇವೆ, ಲೈಕ್, ಕಾಮೆಂಟ್ ಮಾಡಿ ನಮ್ಮ ನಿಲುವು ತಿಳಿಸುತ್ತೇವೆ. ನೀವು ಹೇಳಿರುವುದು ಅಕ್ಷ್ಹರ ಶ: ಸತ್ಯ.. ಆದರೆ ಇದು ಕೇವಲ ಕಾಮೆಂಟ್ ಎಂದು ಭಾವಿಸಬೇಡಿ ಮೇಡಂ... ನಿಮ್ಮ ಲೇಖನ ನನ್ನ ಮನಸ್ಸನ್ನು ತಲುಪಿದೆ.. ದೌರ್ಜನ್ಯಗಳ ವಿರುದ್ದ ಹೋರಾಡುವ ಮನಸಾಗಿದೆ... ನಿಮ್ಮ ಲೇಖನಕ್ಕಾಗಿ ಧನ್ಯವಾದಗಳು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮಿ ಮೇಡಂ, ನಿಮ್ಮ ಲೇಖನ ಓದಿದವರೆಲ್ಲ ಮುಂದಾದರೂ ಇಂತಹ ದೌರ್ಜನ್ಯಗಳ ವಿರುದ್ದ ಹೋರಾಡಬೇಕೆಂಬ ಛಲ ಬರುತ್ತದೆ.. ಬಹಳ ಉತ್ತಮವಾಗಿದೆ... ಉದಾಹರಣೆಗೆ ಹೆಣ್ಣಿನ ಮೇಲೆ ದೌರ್ಜನ್ಯ ಎಂಬ ಸುದ್ದಿ ಪ್ರಕಟವಾಗಿದೆ. ನಾವು ಓದುತ್ತೇವೆ, ಆಮೇಲೆ ಹೀಗಾಗಬಾರದಿತ್ತು ಎಂದು ಹೇಳಿ ಸುಮ್ಮನಾಗುತ್ತೇವೆ. ಹೆಚ್ಚೆಂದರೆ ಸಾಮಾಜಿಕ ತಾಣದಲ್ಲಿ ಸುದ್ದಿ ಶೇರ್ ಮಾಡುತ್ತೇವೆ, ಲೈಕ್, ಕಾಮೆಂಟ್ ಮಾಡಿ ನಮ್ಮ ನಿಲುವು ತಿಳಿಸುತ್ತೇವೆ. ನೀವು ಹೇಳಿರುವುದು ಅಕ್ಷ್ಹರ ಶ: ಸತ್ಯ.. ಆದರೆ ಇದು ಕೇವಲ ಕಾಮೆಂಟ್ ಎಂದು ಭಾವಿಸಬೇಡಿ ಮೇಡಂ... ನಿಮ್ಮ ಲೇಖನ ನನ್ನ ಮನಸ್ಸನ್ನು ತಲುಪಿದೆ.. ದೌರ್ಜನ್ಯಗಳ ವಿರುದ್ದ ಹೋರಾಡುವ ಮನಸಾಗಿದೆ... ನಿಮ್ಮ ಲೇಖನಕ್ಕಾಗಿ ಧನ್ಯವಾದಗಳು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ಪದ್ಮಿನಿ ಯು.ಕೆ.ಆರ್. ಲೇಖನ ಮನಸ್ಸನ್ನು ತಲುಪಿದೆ ಎಂದು ಹೇಳಿದ್ದೀರಿ. ಅಷ್ಟು ಸಾಕು...ಸಂತೋಷವಾಯ್ತು. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಲೇಖನ ಓದುವಾಗ ದುತ್ತನೆ ನೆನಪಾದುದ್ದು ನೀವೆ ಹೇಳಿರುವ ನಿನ್ನೆ ಮೊನ್ನೆಯ ಸುದ್ದಿ, ಮೈಸೂರು ರೈಲಿನಲ್ಲಿ ಹುಡುಗಿಯೊಬ್ಬಳನ್ನು ನಾಲ್ವರು ಚುಡಾಯಿಸುತ್ತ ಗೋಳಾಡಿಸುವಾಗ ಆಕೆ ಕಂಪಾರ್ಟ್ ಮೆಂಟ್ ಬದಲಿಸುತ್ತ ಹೋದರು, ಆಕೆಯ ಹಿಂದೆ ಬಿದ್ದಿದ್ದರು ಅವರು. ಕಡೆಗೆ ಆಕೆ ರೈಲಿನಿಂದ ಹೊರಗೆ ನೂಕಲ್ಪಟ್ಟು ಈಗ ಆಸ್ಪತ್ರೆಯಲ್ಲಿರುವ ಸುದ್ದಿ. ಎಲ್ಲ ಘಟನೆ ನಡೆದಾಗ ರೈಲಿನಲ್ಲಿ ಬರ್ತಿ ಜನರಿದ್ದೆ ಇದ್ದರು. ಹೆಂಗಸರು ಗಂಡಸರು ಎಲ್ಲ. ಇದು ನಮ್ಮ ಸಮಾಜದ ಪರಿಸ್ಥಿಥಿ. ನನ್ನ ಒಂದು ಅನಿಸಿಕೆ ಇವಕ್ಕೆ ಒಂದು ಕಾರಣ ನಮ್ಮ ಸಿನಿಮಾ ಹಾಗು ನಮ್ಮ ಟೀವಿ ಮಾದ್ಯಮಗಳು . ಅವುಗಳ ಪ್ರಭಾವವು ಸಾಕಷ್ಟು ಇದೆ. ಮತ್ತೆ ಕಾನೂನಿನ ಭಯ ತಪ್ಪಿ ಹೋಗಿರುವುದು ಮತ್ತೊಂದು ಕಾರಣ. ಕೆಲವರು ಒಪ್ಪುವದಿಲ್ಲ ಅಂತ ಗೊತ್ತು, ಕಡೆಯ ಕಾರಣ ಜನರಲ್ಲಿ ಧಾರ್ಮಿಕ ಸ್ವಭಾವ ಹಾಗು ಪಾಪ ಭೀತಿ ಹೊರಟು ಹೋದವು, ಅವುಗಳು ಸಮಾಜವನ್ನು ತನ್ನದೆ ಆದ ರೀತಿಯಲ್ಲಿ ಕಾಪಾಡಿ ಸರಿದಾರಿಯಲ್ಲಿ ನಡೆಯಲು ಪ್ರೇರೇಪಿಸುತ್ತಿದ್ದವು. ಅದು ಸರಿಯೊ ತಪ್ಪೊ ಬೇರೆ ಆದರೆ ಆ ಭಾವನೆಗಳಿಂದ ಸಮಾಜಕ್ಕೆ ಅನುಕೂಲಗಳಿದ್ದವು. ಆದರೆ ಸಮಾಜದಲ್ಲಿ ಬುದ್ದಿವಂತರು ಅದನ್ನೆಲ್ಲ ತಪ್ಪು , ಮೂಡನಂಭಿಕೆ ಎಂದು ಬಿಂಬಿಸಲು ಹೊರಟರು. ಉದಾ: ಒಂದು ಮರಕ್ಕೆ ದೇವರ ಮರ ಅಂತ ಹೆಸರಿಡಿ ಸಾಕು, ಯಾವ ಅರಣ್ಯ ಪಾಲಕರ ಕಾವಲು ಪೋಲಿಸರ ಕಾವಲು ಬೇಡ, ಸಂವಿದಾನದ ಕಾನೂನು ಬೇಡ , ಆ ಮರ ಅ ದೈವಿಕ ಭಾವನೆಯ ಹಿನ್ನಲೆಯಲ್ಲಿ ಸುರಕ್ಷಿತ. ಹಾಗೆ ಹೆಣ್ಣನ್ನು ಗೌರವಿಸುತ್ತಿದ್ದ ಕಾಲವೀಗ ಬದಲಾಗಿದೆ, ಹೊಣೆ ಹೊರಲು ಮಾತ್ರ ಯಾರು ಸಿದ್ದವಿಲ್ಲ ಅವರ ಕೈ ಇತ್ತ ಇವರ ಕೈ ಅತ್ತ ತೋರಿಸುತ್ತಿದೆ. ಅಸುರಕ್ಷಿತ ಜನರೀಗ ಗೋಳಾಡುತ್ತಿದ್ದಾರೆ. ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿಯವರೇ, ನೀವು ಹೇಳಿದಂತೆ ಸಿನಿಮಾ ಹಾಗು ದೃಶ್ಯ ಮಾಧ್ಯಮಗಳು ಇದಕ್ಕೆ ಕಾರಣ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಇಂಥಾ ಕಿರುಕುಳಗಳಿಗೆ ಒಳಗಾದಾಗ ನಾವೇನು ಮಾಡಬೇಕು ಎಂಬುದರ ಅರಿವು ನಮಗೆ ಇರಲೇಬೇಕು. ಯಾಕೆಂದರೆ ಎಲ್ಲಿಯವರೆಗೆ ನಾವು ಅದನ್ನು ಧೈರ್ಯದಿಂದ ಎದುರಿಸುವುದಿಲ್ಲವೋ ಅಲ್ಲಿಯ ವರೆಗೆ ಇಂಥಾ ಸಮಸ್ಯೆಗಳು ನಮ್ಮನ್ನು ಹಿಂಬಾಲಿಸುತ್ತಿರುತ್ತವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ರಶ್ಮಿಯವರೆ ನಮ್ಮ ಮೇಲೆ ಹಲ್ಲೆಯಾದಗ, ಅಥವ ಕಿರುಕುಳವಾದಾಗ, ದೈರ್ಯಗೆಡದೆ , ಯಾವುದೆ ರೀತಿ ಅದನ್ನು ಎದುರಿಸಿದರು ಅದು ಸರಿಯೆ ! ಅದನ್ನು ಎಲ್ಲರು ಒಪ್ಪಲೆ ಬೇಕು. ಹೆಣ್ಣು ಆ ಸಮಯದಲ್ಲಿ ತೆಗೆದುಕೊಳ್ಳುವ ಯಾವುದೆ ಕ್ರಮಕ್ಕು (ಆಕ್ರಮಣ ಸೇರಿ) ಕಾನೂನಿನ‌ ರಕ್ಷಣೆಯು ಇರಬೇಕು. ‍ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮಿಯವರೆ ಪ್ರಸ್ತುತ ಮಹಿಳೆಯರ ಪರಿಸ್ಧಿತಿಯನ್ನು ನಿಮ್ಮ ಲೇಖನದಲ್ಲಿ ಮೂಡಿಸಿದ್ದೀರಿ ಧನ್ಯವಾದಗಳು. ಆದರೆ ಕೆಲವೊಮ್ಮೆ ಯಾರೋ ಅನುಚಿತವಾಗಿ ವರ್ತಿಸಿದರೆಂದು ನಾವು ಅವರಿಗೆ ನಕಾರಾತ್ಮಕವಾಗೇ ಪ್ರತಿಕ್ರಿಯಿಸಿದರೂ ಅದರಿಂದ ಅವರು ಪ್ರಚೋದನೆಗೊಂಡು ತೊಂದರೆ ಕೊಡುವುದೇ ಹೆಚ್ಚು. ಸಾರ್ವಜನಿಕ ಸ್ಥಳಗಳಲ್ಲೇ ಹಗಲೇ ಎಷ್ಟೊಂದು ಅಮಾನವೀಯ ಕೃತ್ಯಗಳು ನೆಡೆಯುತ್ತಿರುವಾಗ ಬೇರೆಯವರಿಂದ ಸಹಾಯ ಸಿಗಬಹುದೆಂದು ಅಪಾಯ ತಂದುಕೊಳ್ಳುವುದು ಒಳ್ಳೆಯದಲ್ಲ ಎಂಬುದು ನನ್ನ ಅನಿಸಿಕೆ. ಹಾಗೆಂದು ಏನೇ ಮಾಡಿದರೂ ಸಹಿಸಿ ಕೊಂಡಿರ ಬೇಕೆಂದಲ್ಲ ಬುದ್ದಿವಂತಿಕೆಯಿಂದ ಅಲ್ಲಿಂದ ಪಾರಾದರೆ ಒಳ್ಳೆಯದು. ಶುಭವಾಗಲಿ, >ಸೌಮ್ಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೌಮ್ಯ ಅವರೇ, ಲೇಖನ ಮೆಚ್ಚಿದ್ದಕ್ಕೆ ನನ್ನಿ. ನೀವು ಹೇಳಿದ್ದು ಸರಿ. ಯಾಕೆಂದರೆ ಕೆಲವೊಂದು ಸಂದರ್ಭಗಳಲ್ಲ್ಲಿ ನಮ್ಮ ಧೈರ್ಯ, ಸಾಹಸಗಳು ನಮಗೆ ಮಾರಕವಾಗಬಹುದು. ಆವಾಗ ಶಕ್ತಿಯ ಬದಲು ಯುಕ್ತಿ ಮೂಲಕ ಕೆಲಸ ಮಾಡಬೇಕು. ಕೆಲವೊಂದು ಸಂದರ್ಭಗಳಲ್ಲಿ ಮಹಿಳೆಯರೇ ಮಹಿಳೆಯರ ಸಹಾಯಕ್ಕೆ ಬರುವುದಿಲ್ಲ. ಇದು ತುಂಬಾ ಬೇಸರದ ವಿಷಯ. ಅದಕ್ಕೇ ಶಾಲೆಯಲ್ಲಿ ಹೆಣ್ಮಕ್ಕಳಿಗೆ ಸ್ವಯಂರಕ್ಷಣಾ ಕಲೆಯನ್ನು ಹೇಳಿಕೊಡಬೇಕು. ಕೊನೇಪಕ್ಷ ಅವರಲ್ಲಿ ಸ್ವಲ್ಪ ಧೈರ್ಯ ತುಂಬಲು ಇದರಿಂದ ಸಾಧ್ಯವಾಗಬಹುದಲ್ವಾ ಎಂಬುದು ನನ್ನ ಅಭಿಪ್ರಾಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮಿ ನಿಮ್ಮ ಸಾಮಾಜಿಕ ಕಳಕಳಿಯ ಲೇಖನ ಚೆನ್ನಾಗಿ ಮೂಡಿ ಬಂದಿದೆ. ಈ ತರಹದ ಸಮಸ್ಯೆಗೆ ನಿಮ್ಮ ಪ್ರತಿಕ್ರಿಯೆ ನೂರಕ್ಕೆ ನೂರರಷ್ಟು ಸರಿ. ಅವನು ಹೆದರಿಸಿದ - ಹೆದರಬೇಕಾಗಿಲ್ಲ, ಯಾಕೆ ಹೆದರುವುದು, ಇತ್ತೀಚೆಗೆ ಪೋಲೀಸ್ ವೃತ್ತಿಯಲ್ಲಿರುವವರು ಕೂಡ ಪ್ರಾಮಾಣಿಕರಾಗುತ್ತಿದ್ದಾರೆ. ಅವರ ಸಹಾಯ ಪಡೆಯಬಹುದು. ಪರಿಚಯದ ಪೋಲೀಸ್ರಿದ್ದರೆ ಅವರ ಸಹಾಯ ಪಡೆಯಬಹುದು. ಇನ್ನು ಈ ತರಹದ ವಿಷಯಗಳಿಗೆ ಸಂಬಂಧಪಟ್ಟಂತೆ "ಕಾನೂನು ಶಿಕ್ಷೆ"ಯ ಬಗ್ಗೆ ಕಾನೂನು ಪುಸ್ತಕಗಳ ಮೂಲಕ ತಿಳಿದುಕೋಡು, ಅದನ್ನು ಪ್ರಸಂಗಗಳಿಗೆ ಅನುಸಾರವಾಗಿ ಮಾತನಾಡುವ ಕಲೆಯನ್ನು ರೂಢಿಸಿಕೊಳ್ಳಿ. ಅದರಲ್ಲಿ ಪ್ರತ್ಯಕ್ಷದಶರ್ಿಗಳು ಸುಮ್ಮನಿದ್ದರೆ ಅವರಿಗೆ ಉಂಟಾಗುವ ಸಮಸ್ಯೆಗಳ ಅರಿವು ಮಾಡಿಕೊಡಿ, ಇವೆಲ್ಲಾ ಸ್ವಲ್ಪ ಕಷ್ಟ ಆದರೆ ಅಸಾಧ್ಯವಲ್ಲ. ಅಂದರೆ ಅವನು ಹೆದರಿಸಿದ ಎಂದು ನಾವು ಅಧೈರ್ಯಗೊಳ್ಳಬಾರದು. ಈ ರೀತಿಯಾಗಿ ಪ್ರತಿಕ್ರಿಯಿಸಿದರೆ ಅವರೇ ಹೆದರುತ್ತಾರೆ. ಇದೆಲ್ಲಾ ಪ್ರಯಾಣಿಸುವಾಗ ಅಥವಾ ಅಪರಿಚಿತರ ಜೊತೆ-ಇನ್ನು ದಿವಸವೂ ಮುಖ ನೋಡುವ ಬಾಸ್-ಸಹದ್ಯೋಗಿಗಳ ಸಮಸ್ಯೆ ---70%ರಷ್ಟು ಅವರ ತಪ್ಪಿದ್ದರೆ 30%ರಷ್ಟು ನಮ್ಮದಿರುತ್ತೆ. ಪ್ರಚೋದಿಸುವ ತರಹ ನಮ್ಮ ನಡವಳಿಕೆ ಇರಲಾರದು-ಇರಲೂಬಾರದು. ಆದರೆ ಹೆದರಿ ಸುಮ್ಮನಿರುವುದು ದೊಡ್ಡ ತಪ್ಪು. ನಾವು ಆರಂಭದಲ್ಲಿಯೇ ವಿರೋಧಿಸಬೇಕು. ಅಪ್ಪ-ಅಣ್ಣ-ತಮ್ಮ-ಪತಿ ಇವರ ಸಹಾಯದಿಂದ ನೇರವಾಗಿ ಎಚ್ಚರಿಸಬೇಕು. ಸಹದ್ಯೋಗಿಗಳು ಹೆದರಿ ಸುಮ್ಮನಾಗುತ್ತಾರೆ. ಬಾಸ್ಗೆ ತನ್ನ ದುರಭ್ಯಾಸಕ್ಕಿಂತ ತನ್ನ ಕಂಪನಿಯ ಕೆಲಸ ಮುಖ್ಯವಾಗಿರುತ್ತದೆ. ಆ ಕೆಲಸದ ವೈಶಿಷ್ಟತೆಯನ್ನು ನಾವು ನಮ್ಮ ಕೆಲಸದಲ್ಲಿ ಅನ್ವಯಿಸಿಕೊಳ್ಳಬೇಕು ಮತ್ತು ಉಳಿಸಿಕೊಳ್ಳಬೇಕು. ಆಗ ನಾವು ನೆಮ್ಮದಿಯಿಂದಿರಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮಿ, ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಬೇಕೆಂದರೆ,ಶಿಕ್ಷಕರ-ಪಾಲಕರ-ಗೆಳೆಯರ ಪಾತ್ರ ವಿಶಾಲವಾಗಬೇಕು. ಮನೆಯಲ್ಲಿಯೇ ಒಳ್ಳೆಯ ವಾತಾವರಣ ಸೃಷ್ಟಿಯಾಗಬೇಕು. ಅದರಲ್ಲೂ ತಾಯಿಯ ಪಾತ್ರ ಮಕ್ಕಳ ಜೀವನದಲ್ಲಿ ಪ್ರಮುಖವಾಗಿದೆ. ತಾಯಿ ಮತ್ತು ಗುರು ಇಬ್ಬರೂ ಮಕ್ಕಳಿಗೆ ಪ್ರತಿ ಹೆಜ್ಜೆಯಲ್ಲಿಯೂ ಜೊತೆಯಲ್ಲಿರಬೇಕು. ಹೆಜ್ಜೆ ಎಂದರೆ ಯೋಚನಾ ಲಹರಿ---ಮಕ್ಕಳ ಯೋಚನೆ ಯಾವ ದಿಕ್ಕಿನಲ್ಲಿದೆ? ಅದನ್ನು ಪ್ರೀತಿಯಿಂದಲೇ ತಿಳಿದು ಪ್ರೀತಿಯಿಂದಲೇ ತಿದ್ದಬೇಕು, ಇದು ಸುಲಭದ ಕೆಲಸವೇನಲ್ಲ ಆದರೆ ಅಸಾಧ್ಯವಾದುದೇನಲ್ಲ. ಮಕ್ಕಳು ಎಷ್ಟೇ ಧೈರ್ಯಸ್ಥರಾಗಿದ್ದರೂ, ಅಸಹಜ/ಕೆಟ್ಟ ಯೋಚನೆಗಳ ಧಾಟಿಯ ಮಕ್ಕಳು, ಗಮನವಿಟ್ಟರೆ ಸಿಕ್ಕಿ ಬೀಳುತ್ತಾರೆ, ಅವರ ಯೋಚನಾ ಲಹರಿಯನ್ನು ತಿದ್ದಬೇಕು. ಅವರನ್ನು ನಾವು ಎಷ್ಟರ ಮಟ್ಟಿಗೆ ತಯಾರು ಮಾಡಬೇಕೆಂದರೆ ಅವರಿಗೆ ಸ್ವತ: ತನ್ನ ತಪ್ಪಿನ ಅರಿವಾಗಬೇಕು, ತನಗೆ ತಾನು ಹೆದರುವ ನಿಲುವನ್ನು ಕಲಿಸಬೇಕು, ಇಂತಹ ಮಕ್ಕಳು ಒಳ್ಳೆಯ ಮಕ್ಕಳಾಗುತ್ತಾರೆ, ಒಳ್ಳೆಯ ನಾಗರಿಕರಾಗುತ್ತಾರೆ. ಗಂಡುಮಕ್ಕಳನ್ನು ಹೀಗೆ ಬೆಳೆಸಿದರೆ, ಹೆಣ್ಣು ಮಕ್ಕಳಿಗೆ ಧೈರ್ಯ-ಸ್ಥೈರ್ಯ, ನೇರನುಡಿಯ ನಡೆ, ಸೌಮ್ಯತೆ, ಮೇಲ್ಬುದ್ಧಿಯ ಬಳಕೆಯ ಕಲೆ -ಕಲಿಸಿದರೆ ಸಮಾಜದಲ್ಲಿ ಒಳ್ಳೆಯ ವಾತಾವರಣ ಸೃಷ್ಟಿಯಾಗುತ್ತದೆ. ಸಮಾಜವೇ ಒಳ್ಳೆಯದಾದರೆ ಸಮಸ್ಯೆಗಳಿಗೆ ಸ್ಥಳವೆಲ್ಲಿರುತ್ತದೆ?............................................ಆದರೆ ಇದು ನಾವು ಈಗಿನಿಂದ ಅಳವಡಿಸಿದರೆ ನಮ್ಮ 3ನೇ ಪೀಳಿಗೆಗೆ ಒಳ್ಳೆ ಫಲಿತಾಂಶ ಸಿಗುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಮಾ, ನಿಮ್ಮ ಪ್ರತಿಕ್ರಿಯೆಗೆ ನನ್ನಿ. ನಿಮ್ಮ ಪ್ರತಿಕ್ರಿಯೆ ನೋಡಿ ತುಂಬಾ ಖುಷಿಯಾಯ್ತು. ಕಡೇಪಕ್ಷ ನನ್ನಂತೆ ಯೋಚನೆ ಮಾಡುವ ಹೆಣ್ಮಗಳೊಬ್ಬಳು ಇಲ್ಲಿದ್ದಾರೆ ಅಂತಾ:) ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಆದರೆ ಆಕೆ ಮನಸ್ಸು ಮಾಡಬೇಕು ಅಷ್ಟೇ. ಡೋಂಗಿ ಬಾಬಾಗಳ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅಲ್ಲಿಗೆ ಬರುವ ಮಹಿಳೆಯರು ಮಾನಸಿಕವಾಗಿ ನೊಂದಿರುತ್ತಾರೆ. ಆ ವೇಳೆ ಅವರಿಗೆ ಸಾಂತ್ವನ ಬೇಕಾಗಿರುತ್ತದೆ. 'ಬಾಬಾ' 'ಸ್ವಾಮಿ' ಅಂಥಾ ಯಾವುದೋ ಕಪಟ ಸನ್ಯಾಸಿ ಬಳಿ ಹೋಗ್ತಾರೆ. ಅವ ಇವರ ಸಮಸ್ಯೆಗಳನ್ನು ಆಲಿಸುತ್ತಾನೆ. ನೊಂದಿರುವ ಮಹಿಳೆಗೆ ತನ್ನ ದುಃಖವನ್ನು ಹಂಚಿಕೊಳ್ಳಲು ಅಥವಾ ಆಲಿಸಲು ಒಂದು ಕಿವಿ ಬೇಕಿತ್ತು ಅಷ್ಟೇ. ಅವಳು ತನ್ನ ಮನಸ್ಸಿನ ಭಾರವನ್ನು ಕೆಳಗಿಳಿಸಿ, ಸ್ಥಿರತೆ ಹೊಂದಿದಾಗ ಅದೆಲ್ಲಾ ಬಾಬಾನ ಮಾಯೆಯಿಂದಲೇ ನಡೆದದ್ದು ಎಂಬ ಭ್ರಮೆಗೊಳಗಾಗುತ್ತಾಳೆ. ನಿಜವಾಗಿಯೂ ಹೇಳಬೇಕೆಂದರೆ ಒಬ್ಬ ಉತ್ತಮ ಗೆಳೆಯ/ ಗೆಳತಿ ಇಲ್ಲವೇ ಮಕ್ಕಳ ಸಮಸ್ಯೆಗಳನ್ನು ಆಲಿಸಿ ಸಲಹೆ ನೀಡುವ ಹೆತ್ತವರು ಇದ್ದರೆ ಈ ಡೋಂಗಿ ಬಾಬಾಗಳಿಗೆ ಸಮಾಜದಲ್ಲಿ ಸ್ಥಾನ ಇರುತ್ತಿರಲಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮಿ ಅವರೇ, ಲೇಖನ ಹೇಗಿದೆ ಅಂತ ಎಲ್ಲರು ಈಗಾಗಲೇ ಮೇಲಿನ ಪ್ರತಿಕ್ರಿಯೆಗಳಲ್ಲಿ ಎಲ್ಲರು ವಿವರಿಸಿದ್ದಾರೆ. ಆದರು ನನ್ನ ಅನಿಸಿಕೆ ಹೀಗಿದೆ - ಇತ್ತಿಚ್ಚಿಗೆ ನಡೆದ ಅಸ್ಸಾಮಿನ ಮತ್ತು ಟ್ರೈನ್ ನ ಘಟನೆಗಳು ಮಹಿಳೆಯರಲ್ಲಿ ಭಯ ಮೂಡಿಸುತ್ತಿದೆ ಆದರೆ ಇದರಿಂದ ಸಮಾಜ ಕಲಿಯಲು ಬಹಳಷ್ಟಿದೆ. ನಿಮ್ಮ ಮಾತು ಅಕ್ಷರ ಸಹ ಸತ್ಯ. ಎಲ್ಲರು ಸಹಿಸಿಕೊಳ್ಳುತಾರೆ ವಿನಃ ತಿರುಗೇಟು ಕೊಡಲು ಹಿಂಜಾರಿಯುತ್ತಾರೆ. ಕಾಲ ಎಷ್ಟೇ ಬದಲಾಗುತ್ತಿದ್ದರು, ಈ ವಿಷಯದಲ್ಲಿ ಇನ್ನು ಸ್ವಲ್ಪ ಹಿಂದೆ ಇದ್ದಿವಿ. ಈ ವಿಷಯದಲ್ಲಿ ಹೆಂಗಸರಲ್ಲಿ ಒಗ್ಗಟ್ಟು ಮತ್ತು ಧೈರ್ಯದ ಅಗತ್ಯ ಇದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾನಸ ಅವರೇ, ನೀವು ಹೇಳಿದ್ದು ಸರಿ. ಹೆಣ್ಮಕ್ಕಳಿಗೆ ಧೈರ್ಯ ನೀಡುವಲ್ಲಿ ಹೆತ್ತವರ ಪಾತ್ರ ಹಿರಿದು, ಆದ್ದರಿಂದ ಮನೆಯಲ್ಲಿಯೇ ಹೆಣ್ಮಕ್ಕಳನ್ನು ಧೈರ್ಯಶಾಲಿಗಳಾಗಿಸುವ ಕಾರ್ಯ ನಡೆಯಬೇಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ನಾವು ಎಡವಿದ್ದು ಇಲ್ಲಿಯೇ. ಯಾವುದೇ ಹೆಣ್ಣು ಮಗಳು ದೌರ್ಜನ್ಯಕ್ಕೊಳಗಾದಾಗ ಅವಳಿಗೆ ಏನಾಯ್ತು? ಎಂದು ಕೇಳುತ್ತೇವೆಯೇ ವಿನಾ ಆಕೆ ಮುಂದೇನು ಮಾಡಬೇಕೆಂಬುದರ ಬಗ್ಗೆ ಯಾರೂ ಸಲಹೆ ಸೂಚನೆಯನ್ನು ಕೊಡುವುದಿಲ್ಲ. ಒಂದು ಪುಟ್ಟ ಉದಾಹರಣೆ ಕೊಟ್ಟು ವಿವರಿಸುವುದಾದರೆ, ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಗಂಡಸು ಹಿಂದಿನಿಂದ ಅನುಚಿತವಾಗಿ ವರ್ತನೆ ಮಾಡುತ್ತಾನೆ. ಆತನ ಮುಂದೆ ನಿಂತಿದ್ದ ಹೆಣ್ಮಗಳು ಅಲ್ಲಿಂದ ದೂರ ಸರಿದು ನಿಲ್ಲುತ್ತಾಳೆಯೇ ಹೊರತು ಅವನ ವಿರುದ್ಧ ದನಿಯೆತ್ತಲು ಮುಂದಾಗುವುದಿಲ್ಲ. ಕಾರಣ, ದನಿಯೆತ್ತಿದರೆ ಏನಾಗುವುದೋ ಎಂಬ ಭಯ ಆಕೆಯನ್ನು ಆವರಿಸಿ ಬಿಟ್ಟಿರುತ್ತದೆ. ಆಕೆ ಈ ವಿಷಯವನ್ನು ಮನೆಯವರಲ್ಲಿ ಹೇಳುತ್ತಾಳೆ ಅಂತಿಟ್ಟುಕೊಳ್ಳಿ. ಅವರೂ ಕೂಡಾ ನೀನು ಜಗಳ ಮಾಡೋಕೆ ಹೋಗ್ಬೇಡಮ್ಮಾ...ಬಸ್್ನಲ್ಲಿ ತುಂಬಾ ಹಿಂದೆ ಹೋಗಿ ನಿಲ್ಬೇಡ...ಎಂಬ ಸಲಹೆಯನ್ನೇ ನೀಡುತ್ತಾರೆ. ಆದರೆ ಯಾರೊಬ್ಬರೂ, ಬಸ್ಸಿನಲ್ಲಿ ನಿನ್ನ ಜತೆ ಯಾರಾದರೂ ಅನುಚಿತವಾಗಿ ವರ್ತಿಸಿದರೆ ನೀನು ತೀವ್ರವಾಗಿ ಪ್ರತಿಕ್ರಿಯಿಸು ಎನ್ನಲ್ಲ, ಕಪಾಳಕ್ಕೆ ಬಾರಿಸು ಎಂದು ಹೇಳಲ್ಲ. ಬಸ್ಸಿನಲ್ಲಿ ಕಿರುಕುಳಕ್ಕೊಳಗಾದರೆ ಹೆಣ್ಮಗಳು ಗಟ್ಟಿ ಪ್ರತಿಕ್ರಿಯೆ ನೀಡಲಿ ನೋಡೋಣ, ಜನರೆಲ್ಲಾ ಅವಳ ಬೆಂಬಲಕ್ಕೆ ನಿಲ್ಲುತ್ತಾರೆ. ಹೆಣ್ಮಕ್ಕಳಿಗೆ ಇದೊಂದು ಅಡ್ವಾಂಟೇಜ್. ಆದರೆ ಬಹುತೇಕ ಹೆಣ್ಮಕ್ಕಳು ಇದನ್ನು ಕಡೆಗಣಿಸಿ, ಮೌನದ ಮೊರೆ ಹೋಗುತ್ತಾರೆ. ಪರಿಣಾಮ, ಗಂಡಸರು ತಮ್ಮ ಚಾಳಿಯನ್ನು ಮುಂದುವರಿಸುತ್ತಾರೆ. ಹೀಗಿರುವಾಗ ಯಾರಾದರೊಬ್ಬ ಹೆಣ್ಮಗಳು ತೀವ್ರ ತಿರುಗೇಟು ನೀಡಲಿ ನೋಡೋಣ, ಆ ಪುಣ್ಯಾತ್ಮ ಮತ್ತೆ ಆ ಕೆಲಸಕ್ಕೆ ಕೈ ಹಾಕುವ ಧೈರ್ಯ ತೋರಲ್ಲ. " ರಶ್ಮಿ ಅವ್ರೆ ಸಕಾಲಿಕ ಸಾರ್ವಜನಿಕ ಕಳಕಳಿಯ ಲೇಖನ.. ನೀವ್ ಬರಹದಲ್ಲಿ ಹೇಳಿದ ಬಹುಪಾಲು ಸಂದರ್ಭಗಳನ್ನು ಘಟನೆಗಳನ್ನು ನಾ ನೋಡಿರುವೆ.. ಮನೆಯಿಂದ ಆಫೀಸಿಗೆ ಮತ್ತು ಆಫೀಸಿಂದ ಮನೆಗೆ ಹೋಗುವ ನನಗೆ ಸದಾ ಸೀಟು (ಸದಾನಂದ ಗೌಡ ಅವರದಲ್ಲ) ಸಿಗುವದು ಕಾರಣ ಕೊನೆಯ ಸ್ಟಾಫ್ ನಂದು..!! ಆದರೂ ಬಸ್ಸಿನಲ್ಲಿ ಆಗಾಗ ಕುಡುಕ ಪ್ರಯಾಣಿಕರು , ಹೆಣ್ ಪೀಡಕರು ಹೆಣ್ಣುಮಕ್ಕಳಿಗೆ ಕೊಡುವ ಹಿಂಸೆ ನೋಡಿರುವೆ......... ಹೆಣ್ಣಿಗೆ ಮಹತ್ವ ಕೊಟ್ಟು ಭೂಮಿಗೆ ಭೂತಾಯಿ ಅಂತ ಕರೆದು , ಜಗನ್ಮಾತೆ ಎಂದು ಪೂಜಿಸುವ ಸ್ತ್ರೀಯರಿಗೆ ಗೌರವಾದಾರಗಳು ಸಿಗಬೇಕು ಎಂದೆಲ್ಲ ಹೇಳಿ ಮಕಳನ್ನು ಬೆಳೆಸುವ ಮಾತಪಿತರನ್ನು ಕಂಡಿರುವೆ... ಆದರೆ ಅದೆಲ್ಲದರ ಹೊರತಾಗಿಯೂ ನೀವ್ ಬರಹದಲ್ಲಿ ಪ್ರಸ್ತಾಪಿಸಿದ ತರಹದ ಘಟನೆಗಳು (ಈಗೀಗ ಕೆಲವೇ ದಿನಗಳ ಅಂತರದಲ್ಲಿ ಹಲವು ಕೆಟ್ಟ ಘಟನೆಗಳು ನಡೆದವು)ನಡೆಯುತಿವೆ... ಅಂದ್ರೆ ಎಲ್ಲಿಯೋ ಏನೋ ತಪ್ಪಾಗುತ್ತಿದೆ.. ಅದು ಏನು ಅಂತಲೂ ಗೊತ್ತಿದೆ.. ಕೆಲವೊಂದು ಸಂದರ್ಭಗಳಲ್ಲಿ ಇದು ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ತರಹದ್ದು.. ಒಟ್ಟಿನಲ್ಲಿ ಹೆಣ್ಣು ಜನನ - ಮರಣ ವರೆಗೆ ಹಲವು ತೊಂದರೆಗಳಿಗೆ ಈಡಾಗುವಳು .... ಹೆಣ್ಣಿಗೆ ಎಲ್ಲ ಕಾಲ ಘಟ್ಟದಲ್ಲಿಯೂ ಹತ್ತು ಹಲವು ವಿಘ್ನಗಳು-ಅಡ್ಡಿ ಆತಂಕಗಳು......... ಪ್ರಕರಣ ದಾಖಲು-ಕೋರ್ಟು ಕಚೇರಿ -ತೀರ್ಪು ಕಾನೂನು ಶಿಕ್ಷೆ ಬಲು ದೂರದ ಹಾದಿ.. ನ್ಯಾಯ ಸಿಕ್ಕೀತಿ ಸಿಗಬಹುದು ಎಂಬ ಖಾತರಿ ಇಲ್ಲ... ನಾವೆಲ್ಲಾ ಸಮಾಜದ ಒಂದು ಭಾಗವೇ ಆಗಿರುವಿದರಿಂದ ಎಲ್ಲಿ ಏನು ತಪ್ಪಿದೆ, ಸುಧಾರಿಸುವ ಬಗೆ ಎಂತು ಎಂದು ಪುನರವಲೋಕನ ಮಾಡುವ ಸಂದರ್ಭ ಬಂದಿದೆ... ತ್ವರಿತವಾಗಿ ಕೇಸು ವಿಚಾರಣೆ ನಡೆಸಿ - ಅಪರಾಧಿಗಳಿಗೆ ಶಿಕ್ಷೆ ಆಗುವ ಹಾಗೆ ಮಾಡಬೇಕಿದೆ.. ಮಹಿಳೆಯರು ದೂರು ದಾಖಲಿಸುವಂತ ಅದ್ಕೆ ಪ್ರೆರೆಪಿಸುವಂತ ವಾತಾವರಣ ಸೃಷ್ಟಿಸಬೇಕಿದೆ. ದೂರೂ ನೀಡಿದ ಮಹಿಳೆ ವಿವರ ಗೌಪ್ಯತೆ ಕಾಪಾಡಬೇಕಿದೆ.... ಕೊನೆಗ್ ನ್ಯಾಯವೂ ದೊರಕಬೇಕಿದೆ... >>> ಮಹಿಳೆಯರು ಧರಿಸುವ ವಸ್ತ್ರಗಳು ಈ ತರಹದ ಘಟನೆಗಳಿಗೆ ಒಂದು ಕಾರಣವಾಗಿರಬಹುದು ಆದರೆ ಅದೇ ಒಂದು ಕಾರಣ‌ ಅಲ್ಲ(ಏಕ ಮಾತ್ರ)... +೧ ಶುಭವಾಗಲಿ.. \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ಸಪ್ತಗಿರಿವಾಸಿ ಪ್ರತಿಕ್ರಿಯೆಗೆ ನನ್ನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಿರುಗೇಟು ನೀಡಿದಾಗ ಅವಮಾನಗೊಂಡ ವ್ಯಕ್ತಿ ಪ್ರಚೋದನೆಗೊಂಡು ಕೆರಳಿ ಮತ್ತಷ್ಟು ತೊಂದರೆ ಕೊಡುವುದೇ ಜಾಸ್ತಿ. ಹಾಗಾಗಿ ಹೆಚ್ಚಾಗಿ ತಿರುಗೇಟು ನೀಡಲು ಯಾರೂ ಮುಂದಾಗುವುದಿಲ್ಲ. ಪ್ರತಿಭಟಿಸಬೇಕು.ಅವರಿಗೆ ಸುತ್ತಮುತ್ತಲಿನವರ ಬೆಂಬಲ ಸಿಗಬೇಕು .ಆಗ ಬಲ ಬರುತ್ತದೆ. ಸುಮ್ಮನಿರುವವರೇ ಹೆಚ್ಚು.ಜನರ ಮನೋಭಾವ ಬದಲಾಗಬೇಕು.ಅದಕ್ಕೆ ಇದರ ಬಗ್ಗೆ ಮಾತುಕತೆ, ಚರ್ಚೆ ನಡೆಯಬೇಕು.ಪ್ರತಿಭಟಿಸಿದವರಿಗೆ ಸಮಾಜದಿಂದ ರಕ್ಷಣೆ ದೊರೆಯಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ನೀವು ಹೇಳಿದಂತೆ ಹೆಣ್ಮಕ್ಕಳಿಗೆ ಸ್ವಯಂ ರಕ್ಷಣಾ ಕಲೆಯನ್ನು ಶಾಲೆಗಳಲ್ಲಿ ಕಲಿಸಬೇಕು.ಧೈರ್ಯ ,ಆತ್ಮವಿಶ್ವಾಸವನ್ನು ಹೆತ್ತವರು ತುಂಬಬೇಕು.ಬುದ್ದಿವಂತಿಕೆ ಯುಕ್ತಿ ಉಪಯೋಗಿಬೇಕು. ನಮ್ಮ ಜಮಾನದಲ್ಲಿ ಬಸ್ಸಿನಲ್ಲಿ ಕುಡಿದೊ ಕುಡಿಯದೆಯೋ ವಾಲುವವರಿಗೆ ಚುಚ್ಚಲು ನಮ್ಮಲ್ಲಿ ಕೊಡೆ, ಕಂಪಾಸ್ ಪೆಟ್ಟಿಗೆಯ ಕೈವಾರ,ಅಥವಾ ಸೇಫ್ಟಿ ಪಿನ್ ರೆಡಿ ಇರುತ್ತಿತ್ತು. ಕೂಡಲೇ ದೂರ ಸರಿಯುತ್ತಿದ್ದರು. ರಶ್ಮಿಯವರೆ , ಯೋಚಿಸುವಂತೆ ಮಾಡಿದೆ ನಿಮ್ಮಲೇಖನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಣ್ಣಿನ ಮೇಲಿನ ದೌರ್ಜನ್ಯ ಹಿಂದೂ ಇತ್ತು; ಇಂದೂ ಇದೆ. ಸೀತೆಯನ್ನು ಅಗ್ನಿಪರೀಕ್ಷೆಗೆ ನೂಕಿದಾಗ ಸುಮ್ಮನಿದ್ದಳು. ಗರ್ಭಿಣಿಯಾಗಿದ್ದಾಗ ಕಾಡಿಗೆ ತಳ್ಳಿದಾಗ ಗೊಳೋ ಎಂದು ಅತ್ತಳು. ಕೊನೆಗೆ ಭೂದೇವಿಯೇ ಕರೆದುಕೊಂಡಳಂತೆ. ಆದರ್ಶ ಪುರುಷ ರಾಮನನ್ನು ಮದುವೆಯಾಗಿ ಅವಳು ಕಣ್ಣೀರು ಸುರಿಸುತ್ತಾ ಸುಖಕ್ಕೆ ಕಾಯುತ್ತಾ ಕುಳಿತಿದ್ದಳು. ಶಕುಂತಲೆಯ ಕತೆಯೂ ಇಷ್ಟೇ! ದ್ರೌಪದಿಯನ್ನು commodity ತರಹ ಬಳಸಿ ಧರ್ಮರಾಯ ಜೂಜಿಗೆ ಪಣವೊಡ್ಡಿ ಸೋತ. ಅಂದಿನ ಕಾಲಧರ್ಮವೇ ಹಾಗಿದ್ದದರಿಂದ ಸುಮ್ಮನಿದ್ದಳು.ಅವಳನ್ನು ಗೆದ್ದ ದುರ್ಯೋಧನನು ಎಲ್ಲರೂ ನೆರೆದಿದ್ದ ಸಭೆಯಲ್ಲಿ ಮಾನಭಂಗಕ್ಕೆ ಪ್ರಯತ್ನಿಸಿದಾಗ ಸೆಟೆದು ನಿಂತು ಎಲ್ಲರನ್ನೂ ಮೂದಲಿಸಿ, ಪ್ರತೀಕಾರದ ಪ್ರತಿಜ್ಞೆಯನ್ನು ಘೋಷಿಸಿದಳು. ಬಳಿಕ ಅದನ್ನು ಸಾಧಿಸಿದಳು. ಕೀಚಕನ ಕಾಟವನ್ನು ತಡೆದುಕೊಳ್ಳಲಾಗದೆ, ತನ್ನ ಗಂಡಂದಿರನ್ನು ಮೂದಲಿಸಿ ಪುಸಲಾಯಿಸಿ ಭೀಮನಿಂದ ಅವನನ್ನು ಸದೆಬಡಿಸಿದಳು. ಇಡೀ ಜಗತ್ತಿನಲ್ಲಿ ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಸೆಟೆದು ನಿಂತ ಪ್ರಪ್ರಥಮ ಮಹಿಳೆ ದ್ರೌಪದಿ. ಸೀತೆ ಮತ್ತು ದ್ರೌಪದಿ ಇಬ್ಬರೂ ನಮ್ಮವರೇ! ಅವರ ಜೀವನ ಚರಿತ್ರೆ ನಿಜವೋ ಸುಳ್ಳೋ, ಮಾರ್ಗದರ್ಶನವಂತೂ ಇದ್ದೇ ಇದೆ. ರಶ್ಮಿಯವರು ಕುಡಿದು ತನ್ನ ಮೇಲೆ ನಿಯಂತ್ರಣದಲ್ಲಿಲ್ಲದ ಆ ಮನುಷ್ಯ ಒಳ್ಳೇ ಮಾತಲ್ಲಿ ಹೇಳಿದಾಗ ಕೇಳದಿದ್ದಾಗ ಚಪ್ಪಲಿ ತೆಗೆದು ಎರಡು ಬಾರಿಸಿ, ಬಲವಾಗಿ ಅವನನ್ನು ತಳ್ಳಬಹುದಿತ್ತು. ಸಾಧ್ಯವಿಲ್ಲವೇ? ಪರ್ಸಲ್ಲೊಂದು ಜ್ಯಾಮೆಟ್ರಿ ಬಾಕ್ಸಿನ ಡಿವೈಡರನ್ನಿಟ್ಟುಕೊಳ್ಳಿ. ಮಾತಾಡದೆ ತೆಗೆದು ಅನಿರೀಕ್ಷಿತವಾಗಿ ಅವನಂಥವರನ್ನು ಚುಚ್ಚಬಹುದು. ಪೆಪ್ಪರ್ ಸ್ಪ್ರೇ, ಡಿಯೋ ಸ್ಪ್ರೇ, ಇತ್ಯಾದಿಯನ್ನೂ ಬಳಸ ಬಹುದು. ಇಂಥ ಸಂದರ್ಭಗಳಲ್ಲಿ ದೊಡ್ಡ ಸ್ವರದಲ್ಲಿ ದಬಾಯಿಸಿ. ಕೆಟ್ಟಮಾತು ಬಳಸದೇ ಬಯ್ದು ಹೆದರಿಸಿ. ಬಸ್ಸಿಳಿದಾಗ ನೋಡ್ಕೋತೀನಿ ಎಂದು ಬೆದರಿಸಿದರೆ, ನೀವೂ ಹೆದರಿಸಿ : ನಮ್ಮಣ್ಣ/ನನ್ನ ಮನೆಯವರು/ಇತ್ಯಾದಿ ಎಸ್ಪೀನೋ, ಡಿ ಐ ಜೀ ನೋ ಎಂದು. ಈ ರೀತಿಯ ಜನರು ಹೆಣ್ಣುಮಕ್ಕಳು ಸುಲಭವಾಗಿ ಹೆದರುವದನ್ನೇ ಬಂಡವಾಳವನ್ನಾಗಿಟ್ಟುಕೊಂಡು ಭಂಡತನದಲ್ಲಿರುತ್ತಾರೆ. ನಿಮ್ಮ appearanceನಲ್ಲಿ ಧೈರ್ಯ ಎದ್ದು ತೋರುವದು ಅವಶ್ಯ. ಏನೇ ಆದರೂ ಎಚ್ಚರಿಕೆಯಿಂದಿದ್ದು, ಇಂಥ ಸಂದರ್ಭಗಳಿಗೆ ಆಸ್ಪದವೀಯದಂತಿರುವದು ಕ್ಷೇಮ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ಐನಂಡ ಪ್ರಭುಕುಮಾರ್ ಅಯ್ಯೋ ದೇವರೇ...ಆ ವ್ಯಕ್ತಿಗೆ ಏಟು ಕೊಡುವಷ್ಟು ನನ್ನಲ್ಲಿ ಶಕ್ತಿಯೂ ಇರಲಿಲ್ಲ, ಇನ್ನು ತಳ್ಳುವುದು...ಉಫ್ ..ಅವನ ಕೆಟ್ಟ ವಾಸನೆಯಿಂದಲೇ ನನಗೆ ತಲೆ ಸುತ್ತು ಬಂದಂತಾಗಿತ್ತು. ಜತೆಗೆ ನನ್ನ ಬೊಬ್ಬೆ ಹಾಕಿ ಮಾತನಾಡಿದರೂ ಯಾರೊಬ್ಬ ಹೆಣ್ಮಗಳೂ ತುಟಿ ಪಿಟಿಕ್ ಎನ್ನದೇ ಇದ್ದುದನ್ನು ನೋಡಿ ನಾನು ಕುಗ್ಗಿ ಹೋಗಿದ್ದೆ. ಆ ಹೊತ್ತಲ್ಲಿ ನನಗೇನು ಮಾಡಬೇಕೆಂಬುದೇ ತೋಚಿಲ್ಲ ಎಂಬುದು ಸತ್ಯ. ಇನ್ನು, ಎದುರಾಳಿ ನಮಗಿಂತ ಪ್ರಬಲನಾಗಿದ್ದರೆ ಅಲ್ಲಿ ಹೋರಾಟ ಮಾಡುವಾಗ ಹೆಚ್ಚು ಜಾಗರೂಕತೆ ವಹಿಸಬೇಕು. ಆದ್ದರಿಂದ ನಾನು ಬರೀ ಮಾತಲ್ಲೇ ಮುಗಿಸಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮಿ ಅವರೇ, ತುಂಬ ಉತ್ತಮವಾದ ಬರಹ ಇದು,ಹಾಗೆಯೆ ಪಾರ್ಥಸಾರಥಿ ಅವರು ಹೇಳಿದ ಹಾಗೆ ಮಾದ್ಯಮಗಳ ಇಂದ ತುಂಬಾನೆ ಪ್ರಚೋದನೆ ಆಗುತಿದೆ(ಇದರ ಬಗ್ಗೆ ನಾನು ಈಗಾಗಲೇ ಬರಹ ಪ್ರಕಟಿಸಿದ್ದೆ " ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಲೆಯುತಿದೆಯೇ" ). ಆದರೆ ನೀವು ಹೇಳಿದ ಹಾಗೆ ನಾವುಗಳು ಸ್ವಲ್ಪ ದೈರ್ಯ ತಂದುಕೊಂಡು ಅಂತಹ ಕೃತ್ಯವನ್ನು ವಿರುಧಿಸಿದರೆ ,ಸ್ವಲ್ಪ ಮಟ್ಟಿಗೆ ಆದರು ಬದಲಾವಣೆ ಆಗಬಹುದೆನು ಹಾಗು ನಮಗೆ ಅಂದರೆ ಇಂದಿನ ಹೆಣ್ಣು ಮಕ್ಕಳಿಗೆ ಮುಂಚಿತವಾಗಿ ಮನೆಯಲ್ಲಿ ಅಥವಾ ಶಾಲೆಯಲ್ಲಿ ಇದರ ಬಗ್ಗೆ ಸ್ವಲ್ಪ ತಿಳುವಳಿಕೆ ಕೊಟ್ಟರೆ,ಇದರಿಂದ ಅವರು ಮಾನಸಿಕವಾಗಿ ಸಿದ್ದವಾಗಬಹುದೆನು ಎಂದು ನನ್ನ ಅನಿಸಿಕೆ ಒಟ್ಟಿನಲ್ಲಿ ನಿಮ್ಮ ಸಾಮಾಜಿಕ ಕಳಕಳಿಗೆ ನನ್ನ ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮಿಯವರೇ, ನಿಮ್ಮ ಲೇಖನ ಓದಿದೆ. ಇಂದಿನ ಸಮಾಜದ ವ್ಯವಸ್ಥೆಯಲ್ಲಿ ಬರಿ ಹೆಣ್ಣು ಮಕ್ಕಳಿಗಷ್ಟೇ ಶೋಷಣೆಯಲ್ಲ, ಎಲ್ಲ ರಂಗಗಳಲ್ಲೂ, ಎಲ್ಲ ವಿಧದಲ್ಲೂ ಅಶಕ್ತರ ಶೋಷಣೆ ನಡೆಯುತ್ತಿದೆ. ಇದರಲ್ಲಿ ಹೆಣ್ಣು ಮಕ್ಕಳ ಶೋಷಣೆ ಜಾಸ್ತಿ ಇದೆ. ಎಲ್ಲೆಲ್ಲಿ ಅಶಕ್ತರು ಎಂದು ಶೋಷಕರು ಭಾವಿಸುತ್ತಾರೋ ಅಲ್ಲಿ ಶೋಷಣೆ ಖಂಡಿತ ನಡೆಯುತ್ತದೆ. ಎಲ್ಲ ಕಡೆಯಲ್ಲೂ ಅವ್ಯಾಹತವಾಗಿ ನಡೆದಿರುವ ಈ ಪಿಡುಗನ್ನು ಎದುರಿಸಲು ಅಶಕ್ತರು ಎನಿಸಿಕೊಂಡವರೆ ಎದ್ದು ನಿಲ್ಲ ಬೇಕಾಗುತ್ತದೆ. ಇಲ್ಲವಾದಲ್ಲಿ ಪರಿಸ್ಥಿತಿಗೆ ಹೊಂದಿಕೊಂಡು ಹೋಗ ಬೇಕಾಗುತ್ತದೆ. ನಮಗ್ಯಾಕೆ? ಎನ್ನುವ ಧೋರಣೆ ಮುಖ್ಯವಾಗಿ ಹೆಚ್ಚು ಜನರಲ್ಲಿ ಇರುವುದು. ಎದುರಿಸುವ ದೈರ್ಯವನ್ನು ಸಕಾಲದಲ್ಲಿ ತೋರದಿರುವುದು. ತಪ್ಪಿಗೆ ಸರಿಯಾದ ಶಿಕ್ಷೆ ಇಲ್ಲದಿರುವುದು. ಹೋಗಲಿ ಬಿಡಿ ಎಂದು ಸಮಜಾಯಿಷಿ ಕೊಟ್ಟುಬಿಡುವುದು. ಇತ್ಯಾದಿಗಳು ಶೋಷಣೆಗೆ ಒತ್ತು ಕೊಡುತ್ತಿವೆ. ಇಲ್ಲಿ ಒಂದು ಉರ್ದು ಶಾಯರಿ ಸಮಂಜಸ ಎನಿಸುತ್ತದೆ. ಅದರ ಕನ್ನಡ ಭಾವಾನುವಾದ ಈ ರೀತಿ ಇದೆ. " ಶೋಷಣೆ ಎಂದಿಗೆ ಹೆಚ್ಚು ಆಗುತ್ತದೋ ಆಗ ಅದು ಮಣ್ಣು ಆಗಲೇ ಬೇಕು, ಹೇಗೆಂದರೆ ರಕ್ತ ನೆಲಕ್ಕೆ ಬಿದ್ದು ಹೆಪ್ಪುಗಟ್ಟುವಂತೆ." ನಿಮ್ಮ ಲೇಖನಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1 ಪ್ರತಿಕ್ರಿಯೆಗೆ ನನ್ನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ಅಂಬಿಕಾ ಪ್ರವೀಣ್ +1 ನಿಮ್ಮ ಪ್ರತಿಕ್ರಿಯೆಗೆ ನನ್ನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.