ಶಿವರಾತ್ರಿಯ ನೆನಪುಗಳು

5

 


"ಶಿವರಾತ್ರಿಯ ದಿನ ಕೊಡಚಾದ್ರಿ ಪರ್ವತದಲ್ಲಿ ಬೆಂಕಿ ಕಾಣುತ್ತೆ"

ನಿಜ, ನಮ್ಮ ಮನೆಯಿಂದ ಹೊರಬಂದು ನೋಡಿದರೆ, ಕೊಡಚಾದ್ರಿ ಪರ್ವತವು ಉತ್ತರದಿಕ್ಕಿನ ಕಾಡಿನಿಂದಾಚೆ, ದೂರದಲ್ಲಿ ಕಾಣುತ್ತಿತ್ತು. ಶಿವರಾತ್ರಿಯ ಆಚರಣೆಯ ಸಂದರ್ಭದಲ್ಲಿ, ಆ ಪರ್ವತದಲ್ಲಿ ಬೆಳೆದ ಹುಲ್ಲುಗಿಡಗಳಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಕಾಣಬಹುದು. ಸಾಮಾನ್ಯವಾಗಿ, ವರ್ಷದಲ್ಲಿ ಮೊದಲ ಬಾರಿ ಆ ಪರ್ವತಶ್ರೇಣಿಯಲ್ಲಿ ಬೆಂಕಿ ಕಾಣುತ್ತಿದ್ದುದು ಶಿವರಾತ್ರಿಯ ದಿನವೇ. ಶಿವರಾತ್ರಿಯಂದು ಕೊಡಚಾದ್ರಿಗೆ ಹೋಗುವ ಭಕ್ತರು, ಅಲ್ಲಿ ಬೆಳೆದು ನಿಂತ ಒಣ ಹುಲ್ಲಿಗೆ ಬೆಂಕಿ ಹಾಕುತ್ತಿದ್ದುದರಿಂದ, ಆ ಪರ್ವತಗಳಲ್ಲಿ ಬೆಂಕಿಯ ಸರಮಾಲೆ ಕಾಣುತ್ತಿತ್ತೇನೊ. ಆಗಿನ ದಿನಗಳಲ್ಲಿ, ಶಿವರಾತ್ರಿ ಬರುವ ತನಕ ಜನಸಾಮಾನ್ಯರು ಕೊಡಚಾದ್ರಿಗೆ ಹೋಗುತ್ತಿರಲಿಲ್ಲವಂತೆ. ನಡುಗೆಯಿಂದಲೇ ಕೊಡಚಾದ್ರಿಯ ತುದಿಯನ್ನು ತಲುಪಬೇಕಾದ ಅಂದಿನ ದಿನಗಳಲ್ಲಿ, ಶಿವರಾತ್ರಿಗಿಂತ ಮುಂಚೆ ಕೊಡಚಾದ್ರಿಯನ್ನು ಏರುವುದು ಕಠಿಣವೂ ಆಗಿತ್ತು.

"ಕೊಡಚಾದ್ರಿಯಲ್ಲಿ ಬೆಂಕಿ ಕಂಡಿತು. ಇನ್ನು ನಾವು ಫಲಾರ ಸೇವಿಸಬಹುದು" ಎಂದು, ಆ ಬೆಂಕಿ ಸಾಲು ಕಾಣುವುದನ್ನೇ ಕಾಯುತ್ತಿದ್ದರವಂತೆ ಫಲಾರ ಸೇವಿಸಲು ಅನುವಾಗುತ್ತಿದ್ದರು, ನಮ್ಮ ಮನೆಯಲ್ಲಿ.

ಶಿವರಾತ್ರಿಯ ನೆನಪುಗಳಲ್ಲಿ ಹಲವು ಪ್ರಕ್ರಿಯೆಗಳು ಸೇರಿಕೊಂಡಿದ್ದು, ಆ ದಿನಗಳಲ್ಲಿ ಶಿವರಾತ್ರಿಗೆ ಜನರು ನೀಡಿದ್ದ ಮಹತ್ವವನ್ನು ಗುರುತಿಸುತ್ತವೆ. ಚಳಿ ಹೋಗಿ, ಸೆಕೆ ಆರಂಭವಾಗುವ ಸಂಕ್ರಮಣ ಕಾಲ ಶಿವರಾತ್ರಿ. ಅದು ಹೇಗೋ ಗೊತ್ತಿಲ್ಲ, ಹಲವಾರು ವರ್ಷಗಳಲ್ಲಿ, ಶಿವರಾತ್ರಿಯ ಮರುದಿನವೇ ಸೆಕೆ ಶುರುವಾಗುತ್ತಿತ್ತು. ಹಿಂದಿನ ದಿನದ ತನಕ ಸ್ವಲ್ಪ ಸ್ವಲ್ಪ ಇದ್ದ ಚಳಿಯು, ಆ ದಿನದ ಅಮಾವಾಸ್ಯೆಯನ್ನು ಕಂಡ ತಕ್ಷಣ, ಕ್ವಚಿತ್ತಾಗಿ ಅಂದೇ ಮಾಯವಾಗಿ, ಸೆಕೆಯ ಬೇಗೆಗೆ ಅನುವು ಮಾಡಿಕೊಡುವ ವಾಸ್ತವವು, ಅದೆಷ್ಟೋ ವರ್ಷ ಮರುಕಳಿಸುವುದು ನಮಗೆಲ್ಲಾ ಒಂದು ಸೋಜಿಗವೇ ಆಗಿತ್ತು.

ಹಳ್ಳಿಯ ಜನರು ಮಾತಿನ ನಡುವೆ, ಶಿವರಾತ್ರಿಯ ದಿನವನ್ನು ಒಂದು ಗಡುವಿನ ರೂಪದಲ್ಲಿ ಗುರುತಿಸುತ್ತಿದ್ದುದು ಸಹಾ ಸಾಮಾನ್ಯ ಸಂಗತಿ.

"ಶಿವರಾತ್ರಿ ನಂತರ, ನಿಮ್ಮ ಊರಿಗೆ ಬರ್ತೀನಿ"

"ಶಿವರಾತ್ರಿಯ ನಂತರ, ಬಾವಿ ಕೆಲಸಕ್ಕೆ ಶುರು ಹಚ್ಚಿಕೊಳ್ಳಬೇಕು"

"ಈ ನೆಗಡಿ ಜ್ವರ ಯಾವಾಗ ಬಿಡ್ತದೆ ಮಾರಾಯ್ರ, ಶಿವರಾತ್ರಿ ಕಳೆದು ಬಿಡಬಹುದಲ್ವಾ?"

"ನಿಮ್ಮ ಸಾಲವನ್ನು ಶಿವರಾತ್ರಿ ಮರುದಿನ ವಾಪಸು ಕೊಡುವ..."

ಈ ರೀತಿ, ಆ ದಿನವು ಒಂದು ಹೊಸ ವರ್ಷವನ್ನೇ ಆರಂಭಿಸುವುದೇನೋ ಎಂಬ ಭಾವನೆಯಲ್ಲಿ ಆ ಹಬ್ಬವು ಜನಮಾನಸದಲ್ಲಿ ಗುರುತಿಸಲ್ಪಡುತ್ತಿತ್ತು.

ಶಿವನನ್ನು ಆರಾಧಿಸುವ ಭಕ್ತಿಪೂರ್ವಕ ಆಚರಣೆಗೆ, ಶಿವರಾತ್ರಿ ಹೆಸರಾಗಿರುವ ವಿಚಾರ ಎಲ್ಲರಿಗೂ ತಿಳಿದದ್ದೇ. ಕೇವಲ ನಮ್ಮ ಊರಿನಲ್ಲಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿ, ದಕ್ಷಿಣ ಭಾರತದಲ್ಲಿ, ಅಷ್ಟೇಕೆ ಭರತಖಂಡದಾದ್ಯಂತ ಶಿವರಾತ್ರಿಗೆ ತುಂಬಾ ಮಹತ್ವನೀಡಿ ಆಚರಿಸುವ ಪದ್ದತಿ ಚಾಲ್ತಿಯಲ್ಲಿದೆ. ಈಚಿನ ವರ್ಷಗಳಲ್ಲಿ ಈ ಆಚರಣೆಯಲ್ಲಿ ಸ್ವಲ್ಪ ಯಾಂತ್ರಿಕತೆ ಕಂಡು ಬರುತ್ತಿದ್ದು, ಅದಕ್ಕೆ ಜನರು ನೀಡುವ ಪ್ರಾಶಸ್ತ್ಯ ಕಡಿಮಾಗಿದ್ದರೂ, ಹಳ್ಳಿಯ ವಾತಾವರಣ ಇರುವ ಪ್ರದೇಶಗಳಲ್ಲೆಲ್ಲಾ ಇಂದಿಗೂ ಸಾಕಷ್ಟು ಪ್ರಮುಖವಾದ ಹಬ್ಬ ಶಿವರಾತ್ರಿ.

ನಮ್ಮ ಹಳ್ಳಿಯಲ್ಲಿ ಶಿವರಾತ್ರಿಯ ಆಚರಣೆಗೆ ಹಲವು ಮಗ್ಗುಲುಗಳಿವೆ. ಮಧ್ಯಾಹ್ನದ ಸಮಯದಲ್ಲಿ, ಮನೆ ಮುಂದಿನ ದೇವಸ್ಥಾನದ ಗುಡ್ದದಲ್ಲಿರುವ ಮಹಾಲಿಂಗೇಶ್ವರ ದೇವಾಲಯದಲ್ಲಿ ಈಶ್ವರನಿಗೆ ರುದ್ರಾಭಿಷೇಕ. ಬಿಸಿಲಿದ್ದರೂ, ನಾಲ್ಕಾರು ಕಿ.ಮೀ. ದೂರದಿಂದ ಜನರು ನಡೆದು ಬಂದು ರುದ್ರಾಭಿಷೇಕದಲ್ಲಿ ಪಾಲ್ಗೊಂಡು, ಹಿಂತಿರುಗುತ್ತಿದ್ದರು. ಕೆಲವರದ್ದು ಉಪವಾಸ ವೃತವೂ ಇರುತ್ತದೆ. ಹಗಲಿಡೀ ಶಿವನ ನೆನಪಿನಲ್ಲಿ ಉಪವಾಸ ಮಾಡುವ ಆ ಪದ್ದತಿ, ಈಚೆಗೆ ಕಡಿಮೆಯಾಗಿರುವುದೂ ಒಂದು ವಾಸ್ತವ.

ಸಂಜೆಯಾದಂತೆ, ಶಿವರಾತ್ರಿಯ ನೆಪದಲ್ಲಿ ನಾನಾ ರೀತಿಯ ಕುಚೇಷ್ಟೆ ನಡೆಸುವ ಯುವ ಪಡೆ, ಮಕ್ಕಳ ಸೈನ್ಯಕ್ಕೆ ಅದೇನೋ ಒಂದು ರೀತಿಯ ಉತ್ಸಾಹ, ಗುಟ್ಟಿನ ಸಂಭ್ರಮ. ಆ ದಿನಗಳಲ್ಲಿ, ಶಿವರಾತ್ರಿಯ ಕತ್ತಲಿನಲ್ಲಿ ನಡೆಸುವ ಸಣ್ಣಪುಟ್ಟ ಕುಚೇಷ್ಟೆಯಂತಹ ಅಪರಾಧಗಳಿಗೆ ವಿನಾಯ್ತಿ ಇತ್ತು. ಈ ವಿನಾಯ್ತಿಯು ಶಿವರಾತ್ರಿಯಂದು ಮಾತ್ರ; ಜೊತೆಗೆ ಜನರೇ ರೂಪಿಸಿಕೊಂಡಿದ್ದ ಅಲಿಖಿತ ಕಾನೂನಿನ ಭಾಗ ಅದು. ಯಾರದ್ದೋ ಮನೆಯ ಬಾಳೆಕೊನೆಯನ್ನು ಶಿವರಾತ್ರಿಯ ಅಮಾವಾಸ್ಯೆಯ ಕತ್ತಲಿನಲ್ಲಿ ಕತ್ತರಿಸಿ ಕೊಂಡೊಯ್ದರೆ, ಆ ರಾತ್ರಿಯ ಮಟ್ಟಿಗೆ ಅದು ಕಳ್ಳತನವಲ್ಲ! ತೆಂಗಿನ ಕಾಯಿ, ಎಳನೀರು ಮೊದಲಾದವುಗಳನ್ನು ಆ ಕಗ್ಗತ್ತಲೆಯ ರಾತ್ರಿಯಲ್ಲಿ ಕದಿಯುವುದಕ್ಕೆಂದೇ ರೈತ ಮಕ್ಕಳು ಒಂದು ವಾರದಿಂದಲೇ ಯೋಜನೆಯನ್ನು ಹಾಕಿಕೊಂಡಿರುತ್ತಿದ್ದರು! ಒಬ್ಬರ ಮನೆಯ ಸ್ನಾನದ ಹಂಡೆಯನ್ನು ಇನ್ನೊಬ್ಬರ ಮನೆಯ ಹತ್ತಿರ ಒಯ್ದು ಇಡುವುದು, ಶೇಂದಿ ಅಂಗಡಿಯ ಬೋರ್ಡನ್ನು ಭಟ್ಟರ ಹೋಟಲಿಗೆ ಸಿಕ್ಕಿಸುವುದು - ಇವೆಲ್ಲಾ ಶಿವರಾತ್ರಿಯ ಕತ್ತಲಿನಲ್ಲಿ ನಡೆಯುವ ಸಾಹಸಮಯ ಚಟುವಟಿಕೆಗಳು.

ಒಂದು ಬಾರಿ ಶಿವರಾತ್ರಿಯಂದು, ನಮ್ಮ ಮನೆಗೆ ಅನತಿ ದೂರದಲ್ಲಿರುವ ಒಂದು ತೆಂಗಿನ ಮರದ ಎಲ್ಲಾ ಎಳನೀರುಗಳನ್ನು ಯಾರೋ, ತೆಗೆದು, ಕುಡಿದು ಹೋಗಿದ್ದರು. ಎಳನೀರಿನ ಖಾಲಿ ಬುರುಡೆಗಳು, ಅಲ್ಲೇ ಪಕ್ಕದ ತೋಡಿನಲ್ಲಿ ರಾಶಿ ಬಿದ್ದಿದ್ದವು. ಬೆಳಿಗ್ಗೆ ಹೋಗಿ ನೋಡಿದಾಗಲೇ ಈ ಕುಚೇಷ್ಟೆ ನಮ್ಮ ಅರಿವಿಗೆ ಬಂದಿದ್ದು.

ಶಿವರಾತ್ರಿಯಂದು ರಾತ್ರಿ ನಮ್ಮ ಮನೆಯಲ್ಲಿ ಒಪ್ಪೊತ್ತು - ಅಂದರೆ, ಅರ್ಧದಿನದ ಉಪವಾಸ. ಕಟ್ಟುನಿಟ್ಟಿನ ಉಪವಾಸವು ಮಕ್ಕಳಿಗೆ ಕಷ್ಟವಾಗುತ್ತದೆಂಬ ನೆಪದಿಂದ, ಲಘು ಉಪಹಾರವು ಎಲ್ಲರಿಗೂ ಉಪವಾಸದ ಅನುಭವವನ್ನು ನೀಡುತ್ತಿತ್ತು! ಒಗ್ಗರಣೆ ಹಾಕಿದ ಅವಲಕ್ಕಿ, ಹೆಸರು ಬೇಳೆಯ ಕೀರು ಆ ರಾತ್ರಿಯ ಖಾಯಂ ಮೆನು. ಪ್ರತಿವರ್ಷವೂ ಅದೇ ಮೆನು. ಅವಲಕ್ಕಿ ತಿನ್ನುತ್ತಾ, ಹೆಸರು ಬೇಳೆ ಕೀರು ಕುಡಿಯುವಾಗ, ಮನೆಯ ಮಾಡಿನ ಮೇಲೆ ಮತ್ತು ಅಂಗಳದಲ್ಲಿ "ಸೆಟ್ಟೆ"ಗಳು ಬೀಳಲು ಶುರುವಾಗುವುದು ಒಂದು ಸಾಮಾನ್ಯ ಸಂಗತಿಯಾಗಿತ್ತು. ಶಿವರಾತ್ರಿಯಂದು ಬೇರೆಯವರ ಮನೆಗೆ "ಸೆಟ್ಟೆ ಕುಟ್ಟುವುದು" ಹಬ್ಬದ ಆಚರಣೆಯ ಒಂದು ಅವಿಭಾಜ್ಯ ಅಂಗವಾದ ಕುಚೋದ್ಯಗಳ ಪಟ್ಟಿ ಸೇರಿ ಹೋಗಿತ್ತಲ್ಲವೆ? ಕತ್ತಲಿನ ಆ ರಾತ್ರಿಯಲ್ಲಿ ಯಾರು ನಮ್ಮ ಮನೆಯತ್ತ ಸೆಟ್ಟೆ ಎಸೆಯುತ್ತಿದ್ದರೆಂದು ಗೊತ್ತಾಗುತ್ತಿರಲಿಲ್ಲ. (ಸೆಟ್ಟೆ = ಗದ್ದೆಯಲ್ಲಿರುವ ಮಣ್ಣಿನ ಉಂಡೆ). ಎರಡು ಮುಡಿ ಗದ್ದೆಯನ್ನು ಒಂದು ವಾರದ ಹಿಂದೆ ಉಳುಮೆ ಮಾಡಿದ್ದರಿಂದ, ನಾನಾ ಗಾತ್ರದ ಸೆಟ್ಟೆಗಳು ಅಲ್ಲಿ ಹರಡಿಬಿದ್ದಿದ್ದವು. ಕತ್ತಲಿನ ಮರೆಯಲ್ಲಿ ಆ ಸೆಟ್ಟೆಗಳನ್ನು ನಮ್ಮ ಮನೆಯತ್ತ ಎಸೆಯುತ್ತಿದ್ದರು, ಪೋಕರಿ ಹುಡುಗರು. ಸೆಟ್ಟೆ ಬೀಸಿ ಬರುತ್ತಿದ್ದ ದಿಕ್ಕಿಗೆ ಬ್ಯಾಟರಿ ಬೆಳಕು ಬಿಟ್ಟು ನೋಡಿದರೆ, ಮನೆಯ ಹಿಂದಿನ ತೋಟದ ಕಡೆಯಿಂದ ಸೆಟ್ಟೆಗಳು ತೂರಿ ಬರುತ್ತಿದ್ದವು! ಒಂದೆರಡು ಗಂಟೆಗಳ ಕಾಲ, ಈ ಕುಚೋದ್ಯವನ್ನು ಸಹಿಸಿಕೊಳ್ಳದೇ ಬೇರೆ ದಾರಿ ಇರಲಿಲ್ಲ. ಶಿವರಾತ್ರಿಯ ದಿನ ಪ್ರತಿ ಒಬ್ಬರೂ ಒಂದೆರಡಾದರೂ ಸೆಟ್ಟೆಯನ್ನು ಬೇರೆಯವರ ಮನೆಯತ್ತ ಬೀಸಿ ಹೊಡೆಯಬೇಕೆಂಬ ಅಲಿಖಿತ ನಿಯಮ ಇದ್ದ ಕಾಲ ಅದು. ಮಕ್ಕಳೆಲ್ಲಾ ಶಾಲೆಗೆ ಹೋಗಿ, ಇಂಗ್ಲಿಷ್ ಅಕ್ಷರ ಕಲಿಯಲು ಪ್ರಾರಂಭಿಸಿದಂತೆಲ್ಲಾ, ಸೆಟ್ಟೆ ಕುಟ್ಟುವ ಕುಚೋದ್ಯ ಕಡಿಮೆಯಾಗತೊಡಗಿ, ಈಚಿನ ವರ್ಷಗಳ ಶಿವರಾತ್ರಿಯಂದು ಬಹುಮಟ್ಟಿಗೆ ನಿಂತೇ ಹೋಗಿದೆ. ಶಿವರಾತ್ರಿಯ ಬೆಳಗಿನ ಜಾವ ನಡೆಸುವ ಕಾಮದಹನದ ಪ್ರತಿರೂಪವಾದ "ಹಣಬು" ಎಂಬ ಆಚರಣೆಗೂ ಸಹಾ , ಹಿಂದೆ ಇದ್ದ ಮಹತ್ವ ಈಗ ಕಾಣಬರುತ್ತಿಲ್ಲ.

ಒಣ ಹುಲ್ಲನ್ನು ದಪ್ಪನೆಯ ಮರದ ಕಾಂಡದ ರೀತಿ ಸುತ್ತಿ ಸುತ್ತಿ ನಾಲ್ಕಾರು ಜನ ಹೊತ್ತುಕೊಂಡು ಹೋಗುವಂತಹ ಹಣಬನ್ನು ಮಾಡಿ, ಅದರ ಒಂದು ತುದಿಗೆ ಬೆಂಕಿ ಹಚ್ಚಿ ಊರಿನ ತುಂಬಾ ಮನೆ ಮನೆಗೆ ಹೋಗುತ್ತಾರೆ. ಒಂದು ತುದಿಯಿಂದ ಹೊಗೆ ಕಾರುವ ಹಣಬಿನ ಸುತ್ತಲೂ ಮಕ್ಕಳ ಸೈನ್ಯ - ಜೊತೆಗೆ ದೊಡ್ಡವರೂ ಸೇರಿಕೊಳ್ಳುವ ಈ ಆಚರಣೆಯು ಅಷ್ಟು ದೂರರಿಂದಲೇ ಬರುತ್ತಿದ್ದುದು ಗೊತ್ತಾಗುತ್ತಿತ್ತು - ಅವರು ಹಾಡುವ ಧಿಂಸಾಲ್ ಹಾಡುಗಳಿಂದ.

"ಧಿಂಸಾಲ್ ಎನಿರೋ, ಒಂದೇ ದನಿರೋ, ಧಿಂಸಾಲ್!!" ಸ್ವಲ್ಪ ಉಢಾಳ ಎನ್ನಬಹುದಾದ ದೊಡ್ಡವರೊಬ್ಬರು ಹೇಳುವ ಮೊದಲ ಸಾಲಿಗೆ, ಎಲ್ಲರೂ "ಧಿಂಸಾಲ್" ಎಂದು ಕೂಗುತ್ತಾ ಕುಣಿಯುತ್ತಿದ್ದರು.

"ಆಚಾ. . .. . . . . .ಬಾಚಣಿಗೆ ಕೆಲ್ಲೋ, ಧಿಮ್ಸಾಲ್"

" ಕೊಂಕ. . . . . . . .ಕೊಂಕ್ ಬಾಳೆ ಹಣ್ಣೊ, ಧಿಂಸಾಲ್"

ನಂತರ ಮನೆಯವರು ಕೊಡುವ "ಕಾಣಿಕೆ"ಯನ್ನು ಸ್ವೀಕರಿಸುವ ತಂಡ, ಮುಂದಿನ ಮನೆಗೆ ಹೋಗುತ್ತಿತ್ತು. ಅಂದು ಧಿಂಸಾಲ್ ಹಾಡುತ್ತಿದ್ದ ಹುಡುಗರೆಲ್ಲ ಇಂಗ್ಲಿಷ್ ಶಾಲೆಯ ಪ್ರಭಾವಕ್ಕೆ ಸಿಕ್ಕು, ಧಿಂಸಾಲ್ ಹಾಡನ್ನೇ ಮರೆತುಬಿಟ್ಟಿದ್ದಾರೆ ಅನಿಸುತ್ತಿದೆ. ಅಂದು ನಮ್ಮ ಹಳ್ಳಿಯ ಎಲ್ಲಾ ಮಕ್ಕಳ ಬಾಯಿಯಲ್ಲಿ ಗುನುಗುನುತ್ತಿದ್ದ ಈ ಪೋಲಿಹಾಡುಗಳು ಶಿವರಾತ್ರಿಯ ನೆನಪುಗಳಲ್ಲಿ ತನ್ನದೇ ಸ್ಥಾನವನ್ನು ಗುಟ್ಟಾಗಿ ಪಡೆದಿರುವದಂತೂ ದಿಟ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

kshamisi, nanna pc yalli yestu prayatnisidaru kannada font baruttilla adakke nanu kannadavanne english pada balasi bareyutiddene. "shivaratri" ee padada artha-gambhirya. nanu sahita sannavaniddaga nanna tandejoteyalli devastanakke hoguttidde.aavagina dinagala nenapu eendigusahita acchaliyade ulidide. tamagellarigu "shivaratri" shubhashashaya.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದ್ಹನ್ಯವಾದಗಳು. ನಿಮ್ಮ ಊರಿನಲ್ಲಿ ದೇವಸ್ಥಾನಕ್ಕೆ ಹೋಗುವ ಜೊತೆಗೆ, ಸಣ್ಣ ಪುಟ್ಟ ಕಳ್ಳತನ ಮಾಡುತ್ತಿದ್ದ ಉದಾಹರಣೆ ಗಳಿದ್ದವೆ? ಮತ್ತೆ, ಕನ್ನಡ ಅಕ್ಷರಗಳ ವಿಚಾರ. ಈಗ ಕನ್ನಡ ಟೈಪಿಸುವುದು ತುಂಬಾ ಸುಲಭ. ಎಡಭಾಗದಲ್ಲಿ ಟೈಪ್ ಇನ್ ಎಪ್(9) ಎಂಬ ಆಯ್ಕೆಯಲ್ಲಿ ಕನ್ನಡ ಪೋನೆಟಿಕ್ ಆಯ್ಕೆ ಮಾಡಿಕೊಂಡು ಟೈಪ್ ಮಾಡಬಹುದು. ಅಥವಾ, ಬಹುಷ ನಿಮ್ಮ ಪಿಸಿಯಲ್ಲಿ ಯುನಿಕೋಡ್ ಪಾಂಟ್ ಇಲ್ಲವೇನೊ! "ತುಂಗಾ ಯುನಿಕೋಡ್ ಪಾಂಟ್" ಎಂಬುದನ್ನು ಇಂಟರ್ನೆಟ್ ನಲ್ಲಿ ಡವನ್ ಲೋಡ್ ಮಾಡಿಕೊಂಡರೆ ಸುಲಭವಾದೀತೇನೊ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಈ ಲೇಖನ ನಮ್ಮ ಹಳೆಯ ದಿನಗಳನ್ನು ಮತ್ತು ಸಂಸ್ಕ್ರುತಿಯನ್ನು ನೆನಪಿಸುವಂತಿದೆ..... ನಾನು ಚಿಕ್ಕವಳಿದಾಗ ನಮ್ಮ ಊರಿನಲ್ಲು ಇಂತಹ ಆಚರಣೆಗಳು ಇದ್ದವು ಆದರೆ ಕಾಲ ಕಳೆದ ಹಾಗೆ ಇದು ತೆರೆಮರೆಗೆ ಸರಿದಿರುವುದು ವಿಷಾದದ ಸಂಗತಿ.............
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಬ್ಬಾರರೇ, ನಿಮ್ಮ ಊರಿನ ಶಿವರಾತ್ರಿ ಆಚರಣೆ ಸ್ವಲ್ಪ ಭಿನ್ನವೆನಿಸಿತು. ಏಕೆಂದರೆ ಇತರೇ ಪ್ರದೇಶಗಳಲ್ಲಿ ಕಾಮನ ಹಬ್ಬದಲ್ಲಿ ಮಾಡುವ ಚೇಷ್ಟೆಗಳು ನಿಮ್ಮಲ್ಲಿ ಶಿವರಾತ್ರಿಯಲ್ಲಿ ನಡೆಯುವುದು ಸ್ವಲ್ಪ ಸೋಜಿಗವೆನಿಸಿತು. ನೀವು ಹೇಳಿದ ಧಿಂಸಾಲ್ ತರಹದ ಆಚರಣೆಯೂ ಸಹ ಕಾಮನ ಹಬ್ಬದಲ್ಲಿ ಜರಗುವಂತಹುದೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.