ಯಮನ‌ Appraisal

5

ಈ ಲೇಖನ ಬರೆಯಲು ಶುರು ಮಾಡಿ ಸುಮಾರು 2 ವರ್ಷ ಆಯಿತು. ಸರಿ ಹೇಗಿದ್ರು ಯಾವುದೇ ಲೇಖನ ಬರೆಯದೆ ತುಂಬಾ ದಿನಗಳಾದವು ಅಂತ ಈ ಲೇಖನ ಪೂರ್ತಿಗೊಳಿಸಿ ಪೋಸ್ಟ್ ಮಾಡಿದ್ದೇನೆ. ಇಲ್ಲಿ ಯಮ ಮತ್ತು ಶಿವ ಅಂತ ಬಳಸಿದ್ದಕ್ಕೆ ಕ್ಷಮೆ ಇರಲಿ (ದೇವರು ಅಂದ್ರೆ ಭಯ ಭಕ್ತಿ ಹಾಗು ಗೌರವ ನನಗೂ ಇದೆ, ಆದರೂ ದೇವ್ರು ಯಾವಾಗ್ಲೂ ನನ್ನ ಜೊತೆನೇ ಇರೋ ಸ್ನೇಹಿತ ಅನ್ನೋ ಫೀಲಿಂಗ್ ಕೂಡ ಜೊತೆಗಿದೆ ). As usual ಇದೆಲ್ಲ ಬರೇ ಕಾಲ್ಪನಿಕ ಅಷ್ಟೇ.....

ವರ್ಷದ ಟಾರ್ಗೆಟ್ ಮುಗಿಸಿದ ಸಂತೋಷದಲ್ಲಿ ಯಮನು ತನ್ನ Reporting Manager ಶಿವನ Chamber ಒಳಗೆ ಎಂಟ್ರಿ ಹಾಕ್ತಾ ಇದ್ದಾನೆ. ಈ ವರ್ಷದ Dead ಲೈನ್ ಟಾರ್ಗೆಟ್ ಅನ್ನು ಮೀಟ್ ಆಗಿದ್ದೇನೆ, ಆದ್ದರಿಂದ ಸರಿಯಾದ Hike ಸಿಕ್ಕೇ ಸಿಗತ್ತೆ. ರಂಭೆ, ಊರ್ವಶಿ, ಮೇನಕೆಯಂತ ಬೆಡಗಿಯರಿರೋ ಸ್ವರ್ಗಕ್ಕೆ ಪ್ರಮೋಶನ್ ಸಿಕ್ಕಿದರೂ ಸಿಗಬಹುದು ಅಂತ ಮನಸ್ಸಿನಲ್ಲಿ ಲೆಕ್ಕಾಚಾರ.... ಇತ್ತ ಶಿವನೋ ಇಂದ್ರನ Appraisal ಅನ್ನು ಈಗ ತಾನೇ ಮುಗಿಸಿದ್ದಾನೆ. ಹೊರ ಬರುತ್ತಿರೋ ಇಂದ್ರನ ಮುಖದಲ್ಲಿ ಏನೋ ಕಳವಳದ ಛಾಯೆ... ಈ ಇಂದ್ರನೋ ವರ್ಷವಿಡೀ ಅಪ್ಸರೆಯರ ನೃತ್ಯ ನೋಡೋದ್ರಲ್ಲಿ ಬ್ಯುಸಿ, ಸಾಲದು ಅಂತ ಕಾಲು ಕೆರೆದು ಅಸುರರೊಂದಿಗೆ ಜಗಳ ಆಡ್ತಾ ಇರ್ತಾನೆ. ಇನ್ನು ಇವನಿಗೆ ಎಲ್ಲಿ hike ಸಿಗಬೇಕು, ಏನಿದ್ರು ನನ್ ತರ ಹಾರ್ಡ್ ವರ್ಕ್ ಮಾಡೋವವರಿಗೆ ಮಾತ್ರ ಒಳ್ಳೆ hike ಸಿಗತ್ತೆ ಅಂತ ಯಮ ಮನಸ್ಸಲ್ಲೇ ಅಂದ್ಕೊಳ್ತಾನೆ.

Appraisal ಟೈಮ್ ಅಲ್ವಾ ಶಿವನ ಆಫೀಸ್ ಫುಲ್ ಜನ. ಯಮನಿಗೋ ಪಾರ್ಕಿಂಗ್ ಜಾಗ ಸಿಗದೇ ಕೋಣವನ್ನು ಅಲ್ಲೇ ಸೈಡ್ ಅಲ್ಲಿ ಪಾರ್ಕ್ ಮಾಡಿ ಒಳಗೆ ಬರ್ತಾನೆ. ಈ ಸಲ ಒಳ್ಳೆ hike ಆದ್ರೆ ಮೊದಲು ಈ vehicle ಅನ್ನು ಚೇಂಜ್ ಮಾಡ್ಬೇಕು, ಸಿಕ್ಕಾಪಟ್ಟೆ maintainance ಬರ್ತಾ ಇದೆ ಅಂತ ಯೋಚಿಸ್ತಾ ಇರೋವಾಗಲೇ "ಬನ್ನಿ ಯಮ ಮಹಾರಾಜರೇ ಅಂತ ಫುಲ್ ಮರ್ಯಾದೆ ಕೊಟ್ಟು ಒಳಗೆ ಕರೀತಾನೆ ಶಿವ. ಮರ್ಯಾದೆ ಯಾಕೋ ಸ್ವಲ್ಪ ಜಾಸ್ತಿ ಆದ ಹಾಗಿದೆಯಲ್ಲ ಅಂತ ಅಳುಕಿನಿಂದಲೇ ಬಲಗಾಲಿಟ್ಟು ಒಳಗೆ ಕಾಲಿಡ್ತಾನೆ ಯಮ.

ಶಿವ : ಮತ್ತೆ ಹೇಗಿತ್ತು ಈ ವರ್ಷ?

ಯಮ :(ಈ ಪ್ರಶ್ನೆ ಗೆ ಕೆಲವು ದಿನಗಳಿಂದ ಚೆನ್ನಾಗಿ Prepare ಆಗಿದ್ದರಿಂದ ಅಳುಕಿಲ್ಲದೆ ಶುರು ಹಚ್ಕೊಳ್ತಾನೆ ಯಮ) ಪರಶಿವಾ, ಈ ಸಲ ನೀವು ಕೊಟ್ಟ ಒಂದು ಕೋಟಿ ಜನರಿಗೆ ಸಾವು ಅನ್ನೋ ಟಾರ್ಗೆಟ್ ಅನ್ನು ರೀಚ್ ಆಗಿದ್ದೇನೆ. ಮದ್ಯದಲ್ಲಿ ಸ್ವಲ್ಪ efficiency ಕಡಿಮೆ ಆಗಿತ್ತು. ಆದರೆ ವರುಣ ದೇವ ಮತ್ತು ವಾಯು ದೇವನ ಜೊತೆ ಡೀಲ್ ಮಾಡಿಕೊಂಡು ಅಲ್ಲಲ್ಲಿ ಪ್ರವಾಹ, ಚಂಡಮಾರುತ ಬರಿಸಿ ಟಾರ್ಗೆಟ್ ಸರಿದೂಗಿಸಿದ್ದೇನೆ.

ಶಿವ : ಅದು As per process ನಿಮ್ಮ ಕೆಲಸ. ಅದಲ್ಲದೆ ಏನು ಮಾಡಿದ್ದೀರಿ...?

ಈಗ ಕಷ್ಟದಲ್ಲಿ ಸಿಕ್ಕಿಹಾಕಿಕೊಳ್ತಾನೆ ಯಮ. ಅಲ್ಲ ಗುರುವೇ ನಿಯತ್ತಾಗಿ ಟಾರ್ಗೆಟ್ ಮುಗಿಸಿ ಅದೇನೋ ಉದ್ದಾರ ಮಾಡ್ತಾನೆ ಅಂತ ಇವನ ಹತ್ರ ಬಂದ್ರೆ ಶಿವ ಈ ತರ ಬತ್ತಿ ಇಟ್ಟುಬಿಟ್ನಲ್ಲ . ನಾನು ಬೇರೆ ಈ ದರಿದ್ರ ಹೈಕ್ ನಂಬಿಕೊಂಡು ಕುಬೇರನ ಹತ್ರ ಸಾಲ ತಗೊಂಡು ಸ್ವರ್ಗದಲ್ಲಿ 30X40 ಸೈಟ್ ಬೇರೆ ತೆಗ್ದಿದೀನಿ. ಇವನು ಯಾಕೋ ಹೊಗೆ ಹಾಕ್ಸೋ ತರ ಕಾಣಿಸ್ತಾ ಇದೆಯಲ್ಲ ಅಂದುಕೊಂಡು ಸುಮ್ನೆ ಒಂದ್ಸಲ ಕೆಮ್ಮುತ್ತಾನೆ.......

ಶಿವ : (ಯಮನಿಂದ ಉತ್ತರ ಬರದಿದ್ದನ್ನು ಗಮನಿಸಿ): ಸರಿ ಬಿಡಿ ನರರನ್ನು ಎತ್ತಾಕೊಂಡು ಬರೋವಾಗ ಎಷ್ಟು ಸಲ Process violation ಆಗಿದೆ? ಆ ಚಿತ್ರಗುಪ್ತನ ಲೆಕ್ಕಾಚಾರದಲ್ಲಿ ಅದೇನೋ ಎಡವಟ್ಟು ಆಗಿ ಮೊನ್ನೆ ಯಾರೋ ತಪ್ಪು ವ್ಯಕ್ತಿನ ಕರ್ಕೊಂಡು ಬಂದ್ರಿ ಅಂತ ಸುದ್ದಿ ಬಂತು ನಂಗೆ. ನಿಮ್ಮ Error matrix ಹೇಳ್ತಾ ಇದೆ.

ಯಮ: ಮಹಾಸ್ವಾಮಿ ಅದು ಚಿತ್ರಗುಪ್ತನ ತಪ್ಪು ಅಲ್ಲವೆ. ಅವನ error matrix ಗೆ ಎಫೆಕ್ಟ್ ಆಗಬೇಕು ಅಲ್ವಾ ಅದು?

ಶಿವ: ನೋಡು ಯಮ, ನಿಮ್ಮ ಕೆಳಗೆ ಅವ್ನು ಕೆಲಸ ಮಾಡ್ತಾ ಇದಾನೆ ಅಂದ್ರೆ ಅವನು ಮಾಡಿದ ತಪ್ಪಿಗೂ ನೀನೇ ಹೊಣೆ. ಅದ್ದರಿಂದ ಅದು ನಿಮ್ಮ ಮ್ಯಾಟ್ರಿಕ್ಸ್ ಗೆ ಬರುತ್ತೆ. ಅದಿರಲಿ ನಿಮಗೆ ಕೊಟ್ಟ ಟಾರ್ಗೆಟ್ ಅಲ್ಲದೆ ಬೇರೆ ಏನು ಮಾಡಿದ್ದೀರಿ? ನಿಮಗೆ ಗೊತ್ತಿರಬೇಕು ಅಲ್ವಾ, ಕೆಲಸ ಎಲ್ಲರು ಮಾಡ್ತಾರೆ ಆದ್ರೆ ನಿಮ್ಮ Growth ಆಗಬೇಕು ಅಂದ್ರೆ ನೀವು ಬೇರೆಯವರಿಗಿಂತ ವಿಬಿನ್ನವಾಗಿರೋದು ಅಥವಾ ನೀವೇ ನೀವಾಗಿ Initiative ತಗೊಂಡು ಏನಾದ್ರೂ ಮಾಡಿರಬೆಕು. ಆ ರೀತಿಯದ್ದು ಏನಾದ್ರು ಇದೆಯಾ?

ಯಮ: ಮಹಾಸ್ವಾಮಿ ಒಂದು ಕೋಣ, ಒಂದೈವತ್ತು ಯಮಕಿಂಕರರು ಆಮೇಲೆ ಒಬ್ಬ ಕಂಪ್ಯೂಟರ್ ಸ್ಪೆಷಲಿಸ್ಟ್ ಚಿತ್ರಗುಪ್ತನನ್ನು ಕೊಟ್ಟು ಏನಾದರು ವಿಬಿನ್ನವಾಗಿ ಮಾಡಿ ಅಂದ್ರೆ ಏನು ಮಾಡಕ್ಕೆ ಅಗತ್ತೆ. I have my own limitations you know. ನನ್ನ ವರ್ಕಿಂಗ್ conditions ಎಷ್ಟು ಕಷ್ಟ ಇದೆ ಗೊತ್ತಾ ನಿಮಗೆ. ಎಲ್ಲಾ ಕಳ್ಳ ಕದೀಮರಿಗೆ ಶಿಕ್ಷೆ ಕೊಡಬೇಕು, ಅವರ ಪಾಪಕ್ಕನುಗುಣವಾಗಿ ಚಾಟಿಯೇಟು ಕೊಡಬೇಕು, ಎಣ್ಣೇಲಿ ಕುದಿಸಬೇಕು....... ಎಷ್ಟೋ ಸಲ ಯಮಕಿಂಕರರು ಸಾಲದೇ ನಾನೇ ಅವರ ಜೊತೆ Stay back ಮಾಡ್ತೇನೆ, ಅದ್ಕೆ Overtime ಕೂಡ ಸಿಗೋದಿಲ್ಲ. ಜೊತೆಗೆ ಶಿಕ್ಷೆಯ ಪ್ರಮಾಣ ಸರಿ ಇದೆಯಾ ಅಂತ Quality ಕೂಡ ಚೆಕ್ ಮಾಡ್ಬೇಕು ನಾನು. ನೀವು ಒಂದು Matrix ಮಾತ್ರ Maintain ಮಾಡ್ತೀರಿ. ಆದರೆ ನಾನು ಅದೆಷ್ಟು excel ಶೀಟ್ ಗಳನ್ನ Update ಮಾಡಬೇಕು ಅನ್ನೋದು ನನಗೆ ಮಾತ್ರ ಗೊತ್ತು.

ಶಿವ: ಏನ್ರಿ ನೀವು ಹೀಗೆ ಹೇಳ್ತೀರಲ್ಲ. ಏನೋ ನೀವೊಬ್ಬರೇ ಕೆಲಸ ಮಾಡಿದ ಹಾಗೆ. ನೀವು ಈಗ ಹೇಳಿದ ಎಲ್ಲಾ ಕೆಲಸಗಳನ್ನು ಎಸ್. ಎಸ್. ಎಲ್. ಸಿ ಫೇಲ್ ಆದವರೂ ಬೇಕಾದ್ರೆ ಮಾಡ್ತಾರೆ ಕಣ್ರೀ. ನಿಮ್ಮ B. E ಇನ್ Law and Order ಯಾಕೆ ಬೇಕು? ಪೋಸ್ಟ್ ಗ್ರಾಡ್ಜುವೇಶನ್ in Hell Maintainance ಬೇರೆ. ಏನಾದ್ರೂ ಹೊಸದು ಯೋಚನೆ ಮಾಡಬೇಕು ನೀವು...

ಯಮ: ನಾವು ಭೂಲೋಕದಲ್ಲಿ ಒಂದು ಬ್ರಾಂಚ್ ಆಫೀಸ್ ಇಟ್ಟು ಒಂದಿಬ್ಬರು ಯಮಕಿಂಕರರನ್ನು ಅಲ್ಲೇ ಲಾಂಗ್ ಟರ್ಮ್ ವೀಸಾದಲ್ಲಿಟ್ಟು ಲೈಫ್ ಟರ್ಮ್ ಮುಗಿದಿರೋ ಜನರನ್ನು ಡೈರೆಕ್ಟ್ ಆಗಿ ನರಕಕ್ಕೆ ಕಳಿಸಬಹುದು. ಪದೇ ಪದೇ ನಾವು ಭೂಲೋಕಕ್ಕೆ ಹೋಗೋ ಖರ್ಚು ಮತ್ತು ಟೈಮ್ ಉಳಿಯುತ್ತೆ ಅಂತ ಒಂದು ಐಡಿಯಾ ಕೊಟ್ಟೆ ನಾನು ನಿಮಗೆ. ಆದರೆ ನೀವು ಅದನ್ನು ಆಗೋದಿಲ್ಲ ಅಂದು ಬಿಟ್ರಿ.

ಶಿವ : ಆ ಐಡಿಯಾ ಚೆನ್ನಾಗೇ ಇತ್ತು ಆದ್ರೆ ಆ ಯಮಕಿಂಕರರ ಖರ್ಚು ವೆಚ್ಚ ಕ್ಕೆ ಬಜೆಟ್ ಅಪ್ರೂವಲ್ ಸಿಗೋದಿಲ್ಲ, ಅದಕ್ಕೆ ಆಗೋದಿಲ್ಲ ಅಂದಿದ್ದು. ನೀವು ಯೋಚನೆ ಮಾಡಬೇಕು Resourses ಕಮ್ಮಿ ಹೇಗೆ ಉಪಯೋಗಿಸಬೇಕು ಅಂತ. ಉದಾಹರಣೆಗೆ ಒಬ್ಬನ ಜೀವಿತಾವಧಿ ಮುಗಿದಿರತ್ತೆ ಅವನನ್ನು ಕರೆತರೋಕೆ ನೀವು ಹೋಗ್ತೀರ, ಆಗ ಅವ್ನು ಊಟ ಮಾಡ್ತಾ ಇರ್ತಾನೆ. ನೀವುಗಳು ಮಾನವೀಯತೆ ದೃಷ್ಟಿಯಿಂದ ಅವನ ಊಟ ಮುಗಿಯೋವರೆಗೆ ಕಾದಿದ್ದು ಆಮೇಲೆ ಅವನ ಜೀವ ಸೆಳೆದು ಕರೆದುಕೊಂಡು ಬರ್ತೀರ. ಅಷ್ಟು ಹೊತ್ತು ನಿಮ್ಮ ಟೈಮ್ ವೇಸ್ಟು. ಅವ್ನು ಮಾಡಿದ ಊಟ ವೇಸ್ಟ್. ನಿಮ್ಮ ಟಾರ್ಗೆಟ್ ಅಲ್ಲಿ ಒಂದು 20% ಕೇಸ್ ಗಳು ಹೀಗೆ ಆದರೆ ಒಟ್ಟು ಎಷ್ಟು ವೇಸ್ಟ್ ಅಲ್ವಾ? ಅದಕ್ಕೆ ಅವನ ಟೈಮ್ ಮುಗಿದ ಕೂಡ್ಲೇ ಅವನು ಏನೇ ಮಾಡ್ತಾ ಇದ್ದರು ಕರ್ಕೊಂಡು ಬಂದು ಬಿಡಬೇಕು. ಹೀಗೆ ಹೊಸ ಹೊಸ ಯೋಚನೆ ಮಾಡ್ತಾ ಇರಬೇಕು.. ಎಲ್ಲವನ್ನು ನಾನೇ ಹೇಳೋದಿಕ್ಕೆ ಆಗೋದಿಲ್ಲ. ನೀವೇ Initiative ತಗೋಬೇಕ್ರಿ....

ಯಮ: (ಇವ್ರು ಏನೋ ಒಂದು ಪರ್ಸಂಟೇಜ್ ಗೆ ಫಿಕ್ಸ್ ಆಗಿದ್ದಾರೆ, ಇನ್ನು ವಾದಿಸಿ ಫಲವಿಲ್ಲ ಅಂದುಕೊಂಡು) ಓಕೆ ಸರ್ ಬರೋ ವರ್ಷದಲ್ಲಿ ಹಾಗೇ ಮಾಡ್ತೇನೆ .....

ಶಿವ: (ಯಮನ ಹಾವಭಾವ ಗಮನಿಸಿ ) ಆದರೂ ನಿಮಗೆ ಕೊಟ್ಟ ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ್ದೀರಿ. ಎಲ್ಲಾ Processಗಳು, ಟಾರ್ಗೆಟ್ ಗಳು ಎಲ್ಲವನ್ನೂ ತುಂಬಾ ಚೆನ್ನಾಗಿ ನಿಭಾಯಿಸಿದ್ದೀರಿ. ಸೊ ನಿಮ್ಮ ರೇಟಿಂಗ್ 5 ರಲ್ಲಿ 3 . ನಿಜ ಹೇಳ್ಬೇಕು ಅಂದ್ರೆ ನೀವು 3 ಗಿಂತ ತುಂಬಾ ಹೆಚ್ಚು ಆದರೆ 4 ಕ್ಕಿಂತ ಮಾತ್ರ ಸ್ವಲ್ಪ ಕಮ್ಮಿ. 4 ಕೊಡಬೇಕು ಅನ್ನೋದು ನನಗೂ ಆಸೆ ಆದ್ರೆ ನನಗೂ ಕೆಲವು Limitations ಇರುತ್ತೆ ಅಲ್ವಾ. ನನ್ನ ಕೇಳೋದಾದ್ರೆ 3 ಕೂಡ ಒಳ್ಳೆ ರೇಟಿಂಗೇ ಬಿಡಿ. ಆದ್ರೆ ನೀವು ಇನ್ನೂ ಒಳ್ಳೆ ರೇಟಿಂಗ್ ತಗೋಬೋದಿತ್ತು. Anyhow there is always a next ಟೈಮ್ .... ಆಲ್ ದಿ ಬೆಸ್ಟ್. ಹಾ ಹೇಳೋದು ಮರೆತಿದ್ದೆ . ಸದ್ಯದಲ್ಲೇ ಕೆಲವು Organisation ಚೇಂಜ್ ಗಳು ಆಗುತ್ತೆ. ಅಲ್ಲಿ ಇಲ್ಲಿ ಕೆಲ ಸಣ್ಣ ಬದಲಾವಣೆಗಳು ಅಷ್ಟೇ. ನಿಮಗೆ ಮೇಲ್ ಬರತ್ತೆ ಬಿಡಿ ....

ಯಮ: (ಮುಖದಲ್ಲಿ ನಿರ್ಲಿಪ್ತ ಭಾವನೆ) ದನ್ಯವಾದಗಳು ಸರ್....

ಶಿವ: ನಿಮಗೆ ರಿಪೋರ್ಟ್ ಮಾಡಿಕೊಳ್ಳೋ ಕಾರ್ಮಿಕರಿಗೆ Organisation Changes ಬಗ್ಗೆ ಮೇಲ್ ಬಂದ ನಂತರವೇ review ಮೀಟಿಂಗ್ ಮುಗಿಸಿ ... ಅವಸರವೇನಿಲ್ಲ ....

ಯಮ: As u wish sir ......

ಬಾಗಿಲನ್ನು ದಡಾರನೆ ಹಾಕಿ ಹೊರನಡಿಯುತ್ತ ಯೋಚಿಸ್ತಾನೆ ಯಮ " ಸರಿ ನನ್ನ ಅಪ್ರೈಸಲ್ ಅಂತು ಹೊಗೆ ಆಯ್ತು. ನನಗೆ ರಿಪೋರ್ಟ್ ಮಾಡಿಕೊಳ್ಳೋ ಜನರಿಗೆ ಮೇಲ್ ಬಂದ ನಂತರ Review ಶುರು ಹಚ್ಕೊ ಅಂತಿದಾನೆ ಶಿವ . ಯಾವಾಗಲೇ ಆದರೂ ನಾನೇ ತಾನೇ ಮಾಡಬೇಕು, ಅದೂ ಅಲ್ದೆ ಇವತ್ತೇ ಇವರಿಗೆ ಕ್ಲಾಸ್ ತಗೊಂಡ್ರೆ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಗುತ್ತೆ. ನನ್ನ ಹೈಕ್ ಹೊಗೆ ಅಂದ್ರೆ ನನಗೆ ರಿಪೋರ್ಟ್ ಮಾಡ್ಕೊಳೋ ಚಿತ್ರಗುಪ್ತ ಹಾಗೂ ಯಮ ಕಿಂಕರರಿಗೂ ಹೊಗೇನೇ .... ಪಾಪ. ಸಿಕ್ಕಾಪಟ್ಟೆ ಓವರ್ ಟೈಮ್ ಮಾಡ್ತಾವೆ ಅವ್ವು, ಆದರೇನು ಮಾಡೋದು ತಲೆಗೆ ಹಾಕಿದ ನೀರು ಕಾಲಿಗೆ ಬರಲೇಬೇಕಲ್ಲವೇ ಅಂದುಕೊಳ್ತಾ ಮೀಟಿಂಗ್ ರೂಂ ಯಾವುದಾದರೂ ಖಾಲಿ ಇದೆಯಾ ಅಂತ ನೋಡ್ತಾನೆ ಯಮ. ಖಾಲಿ ರೂಮೊಂದರಲ್ಲಿ ಯಮಕಿಂಕರನೊಬ್ಬ ಅದ್ಯಾವುದೋ ಕ್ರೆಡಿಟ್ ಕಾರ್ಡ್ ಪಾರ್ಟಿ ಜೊತೆ ಮಾತಾಡ್ತಾ ಇರೋದು ಕಾಣಿಸತ್ತೆ, ಸರಿ ಸದ್ಯಕ್ಕೆ ಇದೇ ಬಕ್ರ ಅಂದುಕೊಂಡು ಲ್ಯಾಪ್ ಟಾಪ್ ಜೊತೆ ಒಳಗೆ ನಡಿತಾನೆ ಯಮ.

ಯಮಕಿಂಕರ: ಸರ್ ನಮಸ್ತೆ (ಫೋನ್ ಕಾಲ್ ಕಟ್ ಮಾಡ್ತಾ )

ಯಮ: ನಿಮ್ಮ Appraisal ಶುರು ಹಚ್ಹ್ಕೊಳ್ಳೋಣವೇ ?

ಯಮಕಿಂಕರ: ಸರಿ ಸಾರ್

ಯಮ ಲ್ಯಾಪ್ ಟಾಪ್ ಚಾರ್ಜರ್ ಕನೆಕ್ಟ್ ಮಾಡಿ ವಿಂಡೋಸ್ ಗೆ ಲಾಗಿನ್ ಆಗ್ತಾನೆ. ಬಡ್ಡಿ ಮಗಂದು ಕಿತ್ತೋಗಿರೋ ಲ್ಯಾಪ್ ಟಾಪ್ ಕೊಟ್ಟಿದಾರೆ, ಲಾಗಿನ್ ಆಗೋದಕ್ಕೆ ಒಂದು ಗಂಟೆ ತಗೊಳತ್ತೆ ಅಂತ ಮನಸ್ಸಲ್ಲೇ ಬೈಕೋತಾನೆ. ಅಷ್ಟರಲ್ಲೇ ಬಾಗಿಲು ಸದ್ದು ಮಾಡುತ್ತೆ, ತಲೆ ಎತ್ತಿ ನೋಡಿದರೆ ಚಿತ್ರಗುಪ್ತ... ಈ ನನ್ ಮಗನ್ನ ಯಾರು ಕರೆದರು? ಸಕತ್ ತಲೆ ತಿಂತಾನೆ ಅಂತ ಇವನ review ಲಾಸ್ಟ್ ಗೆ ಇಟ್ಟುಕೊಂಡಿದ್ದೆನಲ್ಲ ಅಂದುಕೊಳ್ಳೋ ವಷ್ಟರಲ್ಲಿ ಚಿತ್ರಗುಪ್ತನೇ ಮಾತು ಶುರು ಹಚ್ಕೊಳ್ತಾನೆ.

ಚಿತ್ರಗುಪ್ತ: ಯಮ ಮಹಾರಾಜರೇ ಮೇಲ್ ಚೆಕ್ ಮಾಡಿದಿರಾ ?

ಯಮ: ಇಲ್ಲ ಬೆಳಗ್ಗಿಂದ ಸ್ವಲ್ಪ ಬ್ಯುಸಿ ಆಗಿದ್ದೆ, ಏನಾದ್ರು ವಿಶೇಷ ಇದೆಯಾ?

ಚಿತ್ರಗುಪ್ತ: ಸ್ವಲ್ಪ ವಿಶೇಷಾನೇ, ನಂಗೆ ಪ್ರಮೋಶನ್ ಆಗಿದೆ.

ಯಮ: ಒಹ್ really ? Congrats. ಯಾವ ಡಿಪಾರ್ಟ್ ಮೆಂಟ್ ?

ಚಿತ್ರಗುಪ್ತ: ಡಿಪಾರ್ಟ್ ಮೆಂಟ್ ಏನು ಚೇಂಜ್ ಇಲ್ಲ, ರೋಲ್ ಚೇಂಜ್ ಆಗಿದೆ ಅಷ್ಟೇ. ಇನ್ನು ಮೇಲಿಂದ ನೀವು ನನಗೆ ರಿಪೋರ್ಟ್ ಮಾಡಬೇಕು. ನಿಮ್ಮ ಈ ವರ್ಷದ ಟಾರ್ಗೆಟ್ ನಾನು ಸೆಟ್ ಮಾಡ್ತೇನೆ. ಆಮೇಲೆ ಈ ಕಿಂಕರರಿಗೆಲ್ಲ ರಿವೀವ್ ಮೀಟಿಂಗ್ ನಾನೇ ಮಾಡ್ತೇನೆ. ಸರಿ ನಾನು HR ಹತ್ರ ಸ್ವಲ್ಪ ಹೋಗಿ ಬರ್ತೇನೆ. ನಾಳೆ ನಿಮ್ಮ ವರ್ಷದ ಟಾರ್ಗೆಟ್ ಸೆಟ್ ಮಾಡೋಣ, ಸ್ವಲ್ಪ ಬೇಗ ಬಂದು ಬಿಡಿ ನಾಳೆ....

ಬಾಗಿಲನ್ನು ಹಾಕಿ ಹೊರನಡೆದ ಚಿತ್ರಗುಪ್ತನ ಮುಖದಲ್ಲಿ ಏನೋ ಕಳೆ, ಮೀಸೆಯಂಚಿನಲ್ಲಿ ಒಂದು ಕಂಡೂ ಕಾಣದಂತಿರೋ ನಗು. ಯಮಕಿಂಕರ ಕಕ್ಕಾಬಿಕ್ಕಿ. ನಾಳೆಯಿಂದ ತನಗೆ ಯಾರು work assign ಮಾಡುವರೋ ಎಂಬ ಕಳವಳ. ಯಮನಿಗೆ ಆಕಾಶವೇ ತಲೆ ಮೇಲೆ ಬಿದ್ದ ಹಾಗಿದೆ, ಮಾತೇ ಹೊರಡ್ತಾ ಇಲ್ಲ. ಮುಂದೆ ಚಿತ್ರಗುಪ್ತನ ಆದೇಶ ಪಾಲನೆ ಮಾಡಬೇಕಾದ ಸನ್ನಿವೇಷ ಕಲ್ಪಿಸಿಕೊಂಡು ತಲೆ ಸುತ್ತು ಬಂದ ಹಾಗೆ ಆಗ್ತಾ ಇದೆ. ಲ್ಯಾಪ್ ಟಾಪ್ ಅನ್ನು ಸ್ವಿಚ್ ಆಫ್ ಮಾಡಿ ಮಾತಿಲ್ಲದೆ ಆಫೀಸಿಂದ ಮನೆಗೆ ಹೊರಡ್ತಾನೆ. ಆಫೀಸಿಂದ ಹೊರ ಬರುತ್ತಿದ್ದಂತೆ ಯಮನ ಕೋಣ ಪಕ್ಕಕ್ಕೆ ಬಂದು ನಿಲ್ಲುತ್ತೆ. ಯಾಕೋ ಇಡೀ ಪ್ರಪಂಚದಲ್ಲಿ ತನ್ನನು ಅರ್ಥ ಮಾಡಿಕೊಂಡ ಹಾಗೂ ತನ್ನನ್ನು ಸಮದಾನಪಡಿಸುವ ಜೀವ ಈ ಕೋಣ ಮಾತ್ರ ಅನ್ನಿಸುತ್ತೆ ಯಮಂಗೆ. ಅಲ್ಲೇ ಹೊರಗೆ ಹುಲ್ಲುಹಾಸಿನ ಮೇಲೆ ಕೂತ್ಕೊಂಡು ಯೋಚನೆ ಮಾಡ್ತಾ ಅದೇನೋ ಹೊಳೆದಂತೆ ಲ್ಯಾಪ್ ಟಾಪ್ ಓಪನ್ ಮಾಡಿ Naukri. com ಸೈಟ್ ಗೆ ಲಾಗಿನ್ ಆಗ್ತಾನೆ. ಅದೆಷ್ಟೋ ವರ್ಷದಿಂದ ನೋಡದೇ ಇದ್ದ Resume ಅನ್ನು Update ಮಾಡ್ತಾನೆ. ಅಲ್ಲಿ ಇಲ್ಲಿ ತಡಕಾಡಿ ಒಂದು ಹೊಸ ಕೆಲಸಕ್ಕೆ Apply ಮಾಡ್ತಾನೆ.....

Job Location: ತ್ರಿಶಂಕು ಸ್ವರ್ಗ ...................

Contact person: ವಿಶ್ವಾಮಿತ್ರ ..............

--ಶ್ರೀ :-) -----

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪಾಪ ಯಮ :) ಶ್ರೀ ಅವರೆ, ಸೂಪರ್ ಹಾಸ್ಯ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

danyavaadagalu sir....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನವಿರಾದ ಹಾಸ್ಯ ಮುದ ನೀಡಿತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದನ್ಯವಾದಗಳು ಸರ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀ ಪ್ರಸಾದರೆ, ನಿಮ್ಮ 'ಹಾಸ್ಯ' ಬರಹ ತುಂಬಾ ಮೋಸ. ಇಲ್ಲಿ ಹಾಸ್ಯಕ್ಕಿಂತ ವಾಸ್ತವವೆ ಜಾಸ್ತಿಯಿದೆ! ದೇವರುಗಳ ಬದಲು ಇಲ್ಲಿನ ಬಾಸು - ಉದ್ಯೋಗಿಗಳನ್ನು ಕಲ್ಪಿಸಿಕೊಂಡರೆ ಸಾಕು! ಒಟ್ಟಾರೆ ಎಲ್ಲಾ ಉದ್ಯೋಗಿಗಳ ಹಣೆಬರಹವೂ ಒಂದೇ ರೀತಿ - ವಾರ್ಷಿಕ 'ತಿಥಿ'ಯ ಸಂಧರ್ಭ ಬಂದಾಗ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ದನ್ಯವಾದಗಳು. ತಿಥಿ ....? ಚೆನ್ನಾಗಿದೆ. ಒಂದರ್ಥದಲ್ಲಿ ತಿಥಿನೇ ಸರಿ ಬಿಡಿ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರ-ಗುಪ್ತನಿಗೆ ಜಾತ್ಯಾಧಾರದ ಮೇಲೆ ಪ್ರಮೋಷನ್ ನೀಡಲಾಗಿದೆ ಎನ್ನಿಸುತ್ತಿದೆ :-) ಆಶ್ಚರ್ಯ ಎಂದರೆ ಕೋಣ ಇನ್ನೂ ಯಮನ ವಾಹನ ಎಂಬುದು ! ಇಷ್ಟು ಹೊತ್ತಿಗೆ ಅದೂ ಕೂಡ ಚಿತ್ರಗುಪ್ತನ ವಾಹನ ಆಗಬೇಕಿತ್ತು ... ಹಳೇ ಮಾಡಲ್ ಕೋಣ ಬೇಡ 'ಯಾಮಾಹ' ಇರಲಿ ಎಂದು ಚಿತ್ರಗುಪ್ತ ಬಯಸಿದ್ದಿರಬಹುದು !!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಣ ಕ್ಕೆ ಹೊಸ ರಿಪೋರ್ಟಿಂಗ್ ಮ್ಯಾನೇಜರ್ ಕೊಡೋದನ್ನ ಮರೆತು ಬಿಟ್ಟಿದ್ದೆ. ಜ್ಞಾಪಿಸಿದ್ದಕ್ಕೆ ದನ್ಯವಾದಗಳು :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-) :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲರಿಗೆ ದನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.