ಮಳೆನೀರು ಸಂಗ್ರಹಿಸಿದರೆ ವರ್ಷಪೂರ್ತಿ ನೀರು

4.53846

 ಮಳೆಗಾಲ ಕಳೆದಂತೆ ಆಸುಪಾಸಿನ ರೈತರು ಬೋಳುಗುಡ್ಡದ ಮೇಲಿನ ತೋಟಕ್ಕೆ ನೀರುಣಿಸಲು ಹರಸಾಹಸ ಪಟ್ಟರೆ, ಇವರು ತೋಟದ ಮಳೆ ಹೊಂಡದಲ್ಲಿ ಮೀನುಸಾಕಣೆ ಆರಂಭಿಸಿದ್ದಾರೆ. 

 

 ಧಾರವಾಡ ಜಿಲ್ಲೆಯ ದಡ್ಡಿ ಕಮಲಾಪುರದ ಸುತ್ತಮುತ್ತ ಕಾಣಿಸುವುದು ಬೋಳು ಗುಡ್ಡ, ವಿಶಾಲವಾದ ಬಯಲು. ಆದರೆ ಡಾ|| ಸಂಜೀವ ಕುಲಕರ್ಣಿಯವರ ’ಸುಮನ ಸಂಗಮ’ ಹೊಕ್ಕಾಗ, ಬಯಲು ಸೀಮೆಯ ಈ ನೋಟಕ್ಕೆ ತೆರೆ. ಇವರ ತೋಟ ಸುತ್ತಾಡಿದರೆ, ಮಲೆನಾಡ ಕಾಡು ಹೊಕ್ಕ ಅನುಭವ. 1996ರಲ್ಲಿ 17 ಎಕರೆ ಜಾಗ ಕೊಂಡಾಗ ಪರಿಸ್ಥಿತಿ ಆಸುಪಾಸಿನ ನೋಟಕ್ಕಿಂತ ಭಿನ್ನವಾಗಿರಲಿಲ್ಲ. ಸಂಗಮ ಆಗಬೇಕು ಸುಮಂಗಳ, ಸು-ಮನಗಳ ಸಂಗಮ ಎಂಬ ಆಶಯದಲ್ಲಿ 15 ವರ್ಷಗಳ ಹಿಂದೆ ಕೈಗೊಂಡ ಪ್ರಯೋಗದ ಫಲ ಇದು.

 

 “ನಾವ್ ಇಲ್ಲಿಗ್ ಬಂದ್ ಮೊದಲ್ನಾಗ ಅಮಾಶಿ ದಿನ, ಹೆಣ್ಮಗು ಕೈಲಿ, 2 ಬೇವಿನ್ ಸಸಿ ನಡ್ಸಿದ್ವಿ. ಜನಾ ಅಮಾಶಿ ದಿನ ಬ್ಯಾಡ್ರಿ ಅಂದ್ರು. ಹೆಣ್ಮಗು ಕೈಲಿ ನಡಿಶ್ಬ್ಯಾಡ್ರಿ ಅಂದ್ರು. ಬೇವಿನ್ ಗಿಡ ಬ್ಯಾಡ, ಮಾವ್ ಹಾಕಿ ಅಂತಾನೂ ಅಂದ್ರು. ನಾ ಕೇಳಿಲ್ಲ”, ಬೇವಿನ ಸಸಿಗಳನ್ನು ತೋರಿಸಿತ್ತಾ ಅದರ ಹಿನ್ನೆಲೆಯನ್ನು ಕುಲಕರ್ಣಿಯವರು ವಿವರಿಸುತ್ತಿದ್ದರು. ಹೊಸತನ್ನು ಮಾಡಬೇಕೆಂಬ ಹಂಬಲ, ಪ್ರಯೋಗಶೀಲ ವ್ಯಕ್ತಿತ್ವ ಕುಲಕರ್ಣಿಯವರದ್ದು. ಈ ವ್ಯಕ್ತಿತ್ವವೇ ಬಯಲುಸೀಮೆಯ ಮಧ್ಯ ಮಲೆನಾಡ ಕಾಡು ತೋಟ ನಿರ್ಮಿಸುವ ಕಾರ್ಯಕ್ಕೆ ಸಹಾಯಕವಾಯ್ತು. ವೃತ್ತಿಯಲ್ಲಿ ಹೆರಿಗೆ ತಜ್ಞರಾದರೂ ಪರಿಸರವಾದಿ, ಸಮಾಜಮುಖೀ ಚಟುವಟಿಕೆಯಲ್ಲಿ ಆಸಕ್ತಿ.

  DSC00190_ 
ಸುಮನ ಸಂಗಮದಲ್ಲಿ ಸಂಜೀವ ಕುಲಕರ್ಣಿ

ದಡ್ಡಿ ಕಮಲಾಪುರದಲ್ಲಿ ವಾರ್ಷಿಕ ಮಳೆ ಸುಮಾರು 30 ಇಂಚುಗಳಷ್ಟು. ಒಂದು ಇಂಚು ಮಳೆಯಿಂದ ಒಂದು ಎಕರೆ ಜಾಗದಲ್ಲಿ ಸಂಗ್ರಹವಾಗುವ ನೀರು ಸುಮಾರು 1,02,789 ಲೀಟರ್. ಅಂದರೆ 17 ಎಕರೆಯಲ್ಲಿ ವರ್ಷಕ್ಕೆ ಸುರಿವ ನೀರು ಐದುಕಾಲು ಕೋಟಿ ಲೀಟರ್! ಇಷ್ಟೊಂದು ನೀರು ಗುಡ್ಡದಂತಹ ಮೇಲ್ಮೈಯ ಇಳಿಜಾರಿನಿಂದ ಹರಿದು ಪೋಲಾಗದಂತೆ ತಪ್ಪಿಸುವ ಯೋಚನೆ ಕುಲಕರ್ಣಿಯವರದ್ದು. ಈ ಇಳಿಜಾರಿನಲ್ಲಿ ಕಾಂಟೂರ್ ಮಾದರಿಯಲ್ಲಿ 30 ಅಡಿಗಳ ಅಂತರದಲ್ಲಿ 2 ಅಡಿ ಆಳದ ಅಡ್ಡ ಸಾಲುಗಳನ್ನು ತೋಡಿಸಿದ್ದಾರೆ. ಇದೂ ಅಲ್ಲದೇ ಅಲ್ಲಲ್ಲಿ ಸುಮಾರು ಸಾವಿರದಷ್ಟು 1X1 ಅಡಿ ಅಳತೆಯ ಚಿಕ್ಕ ಚಿಕ್ಕ ಗುಂಡಿಗಳನ್ನು ತೋಡಿಸಿದ್ದಾರೆ. ಇವು ಮಳೆಯ ನೀರು ಒಂದೇ ಕಡೆ, ಒಮ್ಮೆಲೇ ಹರಿದು ಹೋಗುವುದನ್ನು ತಪ್ಪಿಸಿ ವಿವಿಧ ಹಂತಗಳಲ್ಲಿ ನೀರನ್ನು ಇಂಗಿಸುವ ಕೆಲಸ ಮಾಡುತ್ತದೆ. ಇಲ್ಲಿಂದ ಹೆಚ್ಚಾಗಿ ಹರಿಯುವ ನೀರನ್ನು ಸಂಗ್ರಹಿಸಲು ವಿವಿಧ ಹಂತಗಳಲ್ಲಿ 6 ಮಳೆ ಹೊಂಡ ರಚಿಸಿದ್ದಾರೆ. ಮಳೆ ಹೊಂಡದ ಬದುವಿನಲ್ಲಿ ಮಣ್ಣಿನ ಸವಕಳಿ ತಡೆಗಟ್ಟಲು ಲಾವಂಚದ ಸಸಿಗಳನ್ನು ಹಚ್ಚಿದ್ದಾರೆ.

DSC00192

 ಮಳೆಹೊಂಡವನ್ನು ಆಸಕ್ತರು ವೀಕ್ಷಿಸುತ್ತಿರುವುದು

 

ಎತ್ತರದ ಪ್ರದೇಶದಲ್ಲಿ ನಾಟಿ ಮಾಡಲು ಇವರು ಆಯ್ದುಕೊಂಡಿದ್ದು ಕಾಡು ಸಸ್ಯಗಳನ್ನು. ತೇಗ, ಬಿದಿರು, ನೇರಳೆ, ಮತ್ತಿ, ಹೊನ್ನಿ, ದಾಲ್ಚಿನ್ನಿ, ರಂಗುಮಾಲ ಮೊದಲಾದ ಸ್ಥಳೀಯ ಕಾಡು ಮರಗಳಿಗೆ ನೀರಿನ ಅವಶ್ಯಕತೆ ಕಡಿಮೆ, ಆರೈಕೆಯ ಅಗತ್ಯವೂ ಇಲ್ಲ. ಆರಂಭದಲ್ಲಿ ಸುಮಾರು ಸಾವಿರದಷ್ಟು ಗಾಳಿ ಸಸಿಗಳನ್ನೂ ನಾಟಿ ಮಾಡಿಸಿದ್ದರು. ಸಸ್ಯ ಸಂಪನ್ಮೂಲ ಹೆಚ್ಚುತ್ತಾ ಹೋದಂತೆ ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಕ್ಷಮತೆಯೂ ಹೆಚ್ಚುತ್ತಾ ಹೋಯಿತು. ಅಲ್ಲದೇ ಅವುಗಳ ಜೈವಿಕ ತ್ಯಾಜ್ಯದಿಂದ ಮಣ್ಣಿನ ಫಲವತ್ತತೆಯೂ ಹೆಚ್ಚಿತು. “ನಮ್ ತೋಟದಾಗ 60 ರಿಂದ 70 ಜಾತೀ ಹಕ್ಕಿಗಳಿದಾವ, 20 ಜಾತಿ ಚಿಟ್ಟಿಗಳ್ನ ಗುರ್ತಿಸೀವಿ”, ಎನ್ನುವಾಗ ಕುಲಕರ್ಣಿಯವರ ಮುಖದಲ್ಲಿ ಸಹಬಾಳ್ವೆಯ ಸಂತೃಪ್ತಿ. ಒಮ್ಮೆ ಈ ಕಾಡಿನ ವಾತಾವರಣ ಸೃಷ್ಟಿಯಾದ ನಂತರ ಇನ್ನಷ್ಟು ಗಿಡಗಳು ಹುಟ್ಟಿಕೊಂಡಿದ್ದು ಹಕ್ಕಿ, ಗಾಳಿ, ನೀರಿನಿಂದಾದ ಬೀಜ ಪ್ರಸಾರದ ಮೂಲಕ. ಒಮ್ಮೆ ಬೇಸಿಗೆ ಕಾಲದಲ್ಲಿ ಪಕ್ಕದ ಬೋಳು ಗುಡ್ಡದಲ್ಲಿ ಹಬ್ಬಿದ್ದ ಕಾಳ್ಗಿಚ್ಚು ಕೆಲವು ಸಸಿಗಳನ್ನು ಬಲಿ ತೆಗೆದುಕೊಂಡಿತ್ತು. ಅಲ್ಲದೇ ಸ್ಥಳೀಯ ದನಕರುಗಳ ಹಾವಳಿ. ಆಗ ಇವರಿಗೆ ಅಗತ್ಯ ಕಾಣಿಸಿದ್ದು ರಕ್ಷಣೆಗೆ ಬೇಲಿ. 17 ಎಕರೆಯ ಸುತ್ತ ಬೇಲಿ ಹಾಕಿಸುವುದೆಂದರೆ ಖರ್ಚಿನ ವಿಷಯ, ಅಲ್ಲದೇ ಅದರ ನಿರ್ವಹಣೆಗೆ ಆಗಾಗ್ಗೆ ವೆಚ್ಚ ಮಾಡುತ್ತಿರಬೇಕು. ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಜೀವಂತ ಬೇಲಿಯ ನಿರ್ಮಾಣಕ್ಕೆ ಕೈಹಚ್ಚಿದರು. ದಾಸವಾಳ, ಗ್ಲಿರಿಸೀಡಿಯಾ, ನೀಲಗಿರಿ, ಹಲಸು, ಅಕೇಶಿಯಾ, ಹುಣಸೆ, ಬಿದಿರು, ಅಗಾವೆ (Agave) ಮೊದಲಾದ ಸಸಿಗಳನ್ನು ಆವರಣದ ಸುತ್ತ ನಾಟಿ ಮಾಡಿಸಿದರು. ಎರಡೇ ವರ್ಷಗಳಲ್ಲಿ ಇವು ಮನುಷ್ಯರೂ ನುಸುಳಲಾರದಷ್ಟು ದಟ್ಟವಾದ ಜೀವಂತ ಬೇಲಿಯಾಯಿತು. ಜೀವಂತ ಬೇಲಿ ಮಳೆಗಾಲದಲ್ಲಿ ನೀರಿನ ಓಟವನ್ನು ತಗ್ಗಿಸುವಲ್ಲಿಯೂ ಸಹಾಯಕವಾಯ್ತು. 

 

ನಂತರ ತಗ್ಗಿನ ಪ್ರದೇಶದಲ್ಲಿ ತೆಂಗು, ಮಾವು, ಚಿಕ್ಕು, ಪೇರಳೆ, ಗೇರು, ಲಿಂಬೆ, ಕೋಕಂ, ಕರಿಬೇವು, ಬಾಳೆ ಇನ್ನಿತರ ತೋಟಗಾರಿಕೆ ಬೆಳೆಗಳನ್ನು ನಾಟಿ ಮಾಡಿಸಿದರು. ತೋಟಗಾರಿಕಾ ಬೆಳೆಗಳಿಗಾಗಲೀ, ಕಾಡು ಸಸಿಗಳಿಗಾಗಲೀ ಪ್ರತ್ಯೇಕ ನೀರುಣಿಕೆ ಇಲ್ಲ, ಗೊಬ್ಬರದ ಗೊಡವೆಯೂ ಇಲ್ಲ. ಇವಲ್ಲದೇ ಭತ್ತ, ದ್ವಿದಳ ಧಾನ್ಯ, ತರಕಾರಿಗಳನ್ನೂ ಬೆಳೆಯುತ್ತಾರೆ. ಸಧ್ಯಕ್ಕೆ ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿರುವ ಇವುಗಳನ್ನು, ಫುಕುವೋಕಾರ ಮಾದರಿಯ ’ಸಹಜ ಕೃಷಿ’ಯಲ್ಲಿ ಬೆಳೆಯುವುದು ಮುಂದಿನ ಆಲೋಚನೆ. ಇವುಗಳಿಗೆ ಕೊಳವೆ ಬಾವಿಯಿಂದ ಅಗತ್ಯವಾದಲ್ಲಿ ನೀರಿನ ಪೂರೈಕೆ. ಮಳೆಕಡಿಮೆಯಾದ ವರ್ಷವೂ ಇವುಗಳ ಆರೈಕೆಗೆ ನೀರಿನ ಕೊರತೆಯಿಲ್ಲ. ಸಾವಯವ ಉತ್ಪನ್ನವಾದ್ದರಿಂದ ಬೇಡಿಕೆಯೂ ಹೆಚ್ಚು. ಬಂದುಗಳು, ಸ್ನೇಹಿತರು ಸಾಮಾನ್ಯವಾಗಿ ನೇರವಾಗಿ ಖರೀದಿಸುವುದರಿಂದ ಮಾರುಕಟ್ಟೆಯ ಚಿಂತೆಯಿಲ್ಲ.

 

ಕೋಳಿ, ದನ, ಕುರಿಸಾಕಣೆಯಲ್ಲೂ ಕುಲಕರ್ಣಿಯವರು ತೊಡಗಿದ್ದಾರೆ. ಮಳೆಗಾಲದ ನಂತರ ಪಕ್ಕದ ರೈತರು ಕೊಳವೆ ಬಾವಿಗಳ ಮೂಲಕ ಒಣ ಭೂಮಿಯ ತೋಟಕ್ಕೆ ನೀರು ಹಾಯಿಸುವ ಪ್ರಯತ್ನದಲ್ಲಿದ್ದರೆ, ಇವರು ಇದರ ಗೊಡವೆಯಿಲ್ಲದೆಯೇ ಈಗ ಮೀನು ಸಾಕಣೆಗೂ ಮುಂದಾಗಿದ್ದಾರೆ. ತಾವು ನಿರ್ಮಿಸಿದ ಮಳೆ ಹೊಂಡವೊಂದನ್ನು ಇದಕ್ಕಾಗಿ ಆರಿಸಿಕೊಂಡಿದ್ದಾರೆ. ಮಳೆಯ ಹನಿಹನಿಯನ್ನೂ ಹಲವು ವರ್ಷಗಳಿಂದ ಭೂಮಿಗೆ ಕುಡಿಸಿದ್ದರೆ ಫಲ ಇದು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (13 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಉಲ್ಲಾಸಕರ, ಉತ್ತೇಜಕ, ಉತ್ತಮ ಬರಹ. ಓದಿ ಆನಂದವಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1 ಡಾ.ಕುಲಕರ್ಣಿಯವರ ಕಾರ್ಯ ನಿಜಕ್ಕೂ ಅನುಕರಣೀಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲಚಂದ್ರ ರವರೆ ವಂದನೆಗಳು. ನಿಮ್ಮ ಲೇಖನ ಉತ್ತಮವಾಗಿದೆ ಮತ್ತು ಸಕಾಲಿಕವಾಗಿದೆ, ಮಳೆ ನೀರಿನ ಕೊಯ್ಲಿನ ಕುರಿತು ಸೋದಾಹರಣ ಸಮೇತ ವಿವರಿಸಿದ್ದೀರಿ.ಡಾ.ಸಂಜೀವ ಕುಲಕರ್ಣಿಯವರ ' ಸುಮನ ಸಂಗಮ ' ದ ಕುರಿತ ತಮ್ಮ ವಿವರಣೆ ಮತ್ತು ಚಿತ್ರಗಳು ಸಂತಸ ತಂದವು. ಈ ಲೇಖನ ಆಸಕ್ತರಿಗೆ ಪ್ರೇರಣೆಯಾಗಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡಾಕ್ಟರರನ್ನಉ ಕೆಲ ವರ್ಷಗಳ ಹಿ0ದೆ ಭೇಟಿಯಾಗಿದ್ದೆ.. ಅವರ ’ಸುಮನ ಸಂಗಮ’ದ ಬಗ್ಗೆ ಗೊತ್ತಿರಲಿಲ್ಲ. ಒಳ್ಳೆಯ ಬರಹಕ್ಕೆ ನಿಮಗೂ ಮತ್ತು ಡಾಕ್ಟರರಿಗೂ ನನ್ನ ಅಭಿನ0ದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲ ಚಂದ್ರ ಅವ್ರೆ >>>>ರೈತರ ಆತ್ಮಹತ್ಯೆ ಕುರಿತ ಚರ್ಚೆ ವಿಧಾನಸಭೆಯಲ್ಲಿ ನಡೆವಾಗಲೇ ನೀವ್ ಪ್ರಕಟಿಸಿದ ಈ ಬರಹ ಓದಿದರೆ ರೈತರಿಗೆ ಉಪಯೋಗವಾಗಬಹುದು ... >>>>>>>> ಕೃಷಿ ಸಂಬಂಧಿ ಅದರಲ್ಲೂ ಸಹಜ ಕೃಷಿ ಸಾವಯವ ಕೃಷಿ ಮಳೆ ನೀರು ಕೊಯ್ಲು, ಹೊಂಡ ತೋಡಿ ನೀರು ಹಿಂಗಿಸುವಿಕೆ,ಶೇಖರಿಸುವಿಕೆ, ಭೂಮಿ, ಮಳೆ, ನೀರಿನ ಸಮರ್ಪಕ ಬಳಕೆ ಇವೆಲ್ಲ ನನಗೆ ಬಹು ಇಷ್ಟವಾದ ಅಂಶಗಳು, ಕೆಲವರು ನೋಡ್ತಾರೆ, ಹಲವರು ಆಲೋಚ್ಸಿ ಕೈ ಚೆಲ್ತಾರೆ,ಆದ್ರೆ ನಿಮ್ಮ ಬರಹದಲ್ಲ್ಲಿನ ಡಾಕ್ಟರ್ ತರಹದವರು ಮಾತ್ರ ಎದೆ ಗುಂದದೆ ಯೆಶಸ್ಸು ಪಡೆಯುತ್ತಾರೆ., ಬರಹ ಬಹು ಇಸ್ಟವಾಯ್ತು 'ಇಂತವರ' ಅವಶ್ಯಕತೆ ಈಗ ನಮ್ಮ ನಾಡಿಗೆ ಬಹು ಮುಖ್ಯ.. ದಡ್ಡಿ ಕಮಲಾಪುರದಲ್ಲಿ ವಾರ್ಷಿಕ ಮಳೆ ಸುಮಾರು 30 ಇಂಚುಗಳಷ್ಟು. ಒಂದು ಇಂಚು ಮಳೆಯಿಂದ ಒಂದು ಎಕರೆ ಜಾಗದಲ್ಲಿ ಸಂಗ್ರಹವಾಗುವ ನೀರು ಸುಮಾರು 1,02,789 ಲೀಟರ್. ಅಂದರೆ 17 ಎಕರೆಯಲ್ಲಿ ವರ್ಷಕ್ಕೆ ಸುರಿವ ನೀರು ಐದುಕಾಲು ಕೋಟಿ ಲೀಟರ್! ಇಷ್ಟೊಂದು ನೀರು ಗುಡ್ಡದಂತಹ ಮೇಲ್ಮೈಯ ಇಳಿಜಾರಿನಿಂದ ಹರಿದು ಪೋಲಾಗದಂತೆ ತಪ್ಪಿಸುವ ಯೋಚನೆ ಕುಲಕರ್ಣಿಯವರದ್ದು. >>>>> ಅವರ ಜಮೀನಿನ ಹತ್ತಿರವೇ ಇಷ್ಟು ನೀರು ಸಿಕ್ಕರೆ 'ಇಡೀ ಕರು ನಾಡಿನ' ಜಮೀನಿನ ಬಗ್ಗೆ ಅಲ್ಲಿ ದೊರೆಯಬಹುದಾದ 'ನೀರನ್ನು ಸಮರ್ಪಕವಾಗಿ' ಬಳಸಿದರೆ ಕನ್ನಡ ನಾಡು 'ಕಣಜದ ಬೀಡು' ಆಗೊಲ್ಲವೆ? ಸಚಿತ್ರವಾಗಿ ಒಳ್ಳೆ ಮಾಹಿತಿ ಪೂರ್ಣ ಬರಹ.. ಧನ್ಯವಾದಗಳು ಸಾರ್..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇತ್ತೀಚೆಗೆ ಬೇಸಾಯ ಅಂದರೆ ನೀನು ಸಾಯ, ನಾನು ಸಾಯ, ಮನೆಮಂದಿಯೆಲ್ಲಾ ಸಾಯ ಅನ್ನೋ ಹಾಗಿದೆ. ಆದರೆ ಕುಲಕರ್ಣಿಗಳ ರೀತಿ ಬೇಸಾಯವನ್ನು ನಾವು ಅಳವಡಿಸಿಕೊಂಡರೆ ಎಲ್ಲರೂ ವ್ಯವಸಾಯ....ವ್ಯವಸಾಯ....ಅನ್ನೋದರಲ್ಲಿ ಎರಡು ಮಾತಿಲ್ಲ. ಒಳ್ಳೆಯ ಲೇಖನಕ್ಕಾಗಿ ಅಭಿನಂದನೆಗಳು ಪಾಲಚಂದ್ರರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ಪಂದಿಸಿದವರೆಲ್ಲರಿಗೂ ಧನ್ಯವಾದ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡಾ|| ಸಂಜೀವ ಕುಲಕರ್ಣಿಯವರ ಈ ಕಾರ್ಯ ಎಲ್ಲರಿಗೂ ಮಾಧರಿಯಾದುದು. ವಿಧ್ಯಾವಂತರು ಮತ್ತು ವೃತ್ತಿಯಲ್ಲಿರುವವರು ಇಂತ ಕಾರ್ಯಗಳನ್ನು ಮ್ಯೆಗೂಡಿಸಿಕೊಂಡರೆ ಎಷ್ಟು ಚೆಂದ?! ಈ ಲೇಖನವನ್ನು ಬರೆದದಕ್ಕೆ ಧನ್ಯವಾದಗಳು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.