ಮಕ್ಕಳ ಕತೆ : ಗಂಟೆ ದೆವ್ವ

0

 

ಮಕ್ಕಳ ಕತೆ : ಗಂಟೆ ದೆವ್ವ 
-------------------------- 
 
ಬಹಳ ಹಿಂದಿನ ಕಾಲ.ಚಿಕ್ಕದೊಂದು ಹಳ್ಳಿ. ದೊಡ್ಡವರು ಚಿಕ್ಕವರು ಎಲ್ಲರು ನೆಮ್ಮದಿಯಾಗಿದ್ದರು.
 
 ಹಾಗೆ ಊರ ಹೊರಗೆ ಒಂದು ದೊಡ್ಡ ಮರವಿತ್ತು. ಆ ಮರದ ಮೇಲೆ ಪುಟ್ಟದೊಂದು ದೆವ್ವ ವಾಸವಿತ್ತು. ಅದಕ್ಕೆ ಏನೊ ಬೇಸರ
ಆಡಲು ಯಾರು ಜೊತೆಗಿಲ್ಲ ಎಂದು. ಆಗೊಮ್ಮೆ ಈಗೊಮ್ಮೆ ಹಾರಾಡುವುದು ರಾತ್ರಿಯಲ್ಲಿ,   ಪುನಃ ಬೆಳಗಾದರೆ ಅದೆ ಮರಕ್ಕೆ ನೇತಾಕಿಕೊಳ್ಳುವುದು. ಅದಕ್ಕೆ ಅದರ ಜೀವನ ಬೇಸರವಾಗಿತ್ತು, ಎಂತ ಖುಷಿಯು ಇಲ್ಲ ಎಂದು.
 
ಒಮ್ಮೆ ಹೀಗೆ ಆಯಿತು. ಊರಿನಲ್ಲಿ ಒಬ್ಬನಿದ್ದ , ಗಾಡಿಯಲ್ಲಿ ಮಕ್ಕಳ ಆಡುವ ಸಾಮಾಗ್ರಿಗಳನ್ನೆಲ್ಲ ಒಂದು ತಳ್ಳುಗಾಡಿಗೆ ಹಾಕಿ. ಅದನ್ನು ತಳ್ಳುತ್ತ ವ್ಯಾಪಾರ ಮಾಡುತ್ತಿದ್ದ. ಹಾಗೆ ಜನರನ್ನು ಕರೆಯಲು ಗಾಡಿಗೊಂದು ಗಂಟೆ ಕಟ್ಟಿದ್ದ. ಗಂಟೆ ಬಾರಿಸಿದೊಡನೆ ಎಲ್ಲ ಮಕ್ಕಳು ಓಡಿಬರುವರು, ಆಟದ ಸಾಮಾನುಗಳನ್ನೆಲ್ಲ ಪಡೆದು ಓಡುವರು. ಅವನು ಗಾಡಿ ತಳ್ಳುತ್ತ ಹೋಗುತ್ತಿದ್ದರೆ, ಗಾಡಿಯ ತಳಬಾಗಕ್ಕೆ ಕಟ್ಟಿದ್ದ ಗಂಟೆ 'ಡಣ್ ಡಣ್ ಡಣ್' ಎಂದು ಶಬ್ದ ಮಾಡುತ್ತಿತ್ತು. 
 
ಒಂದು ಸಂಜೆ ತನ್ನ ವ್ಯಾಪಾರ ಮುಗಿಸಿ, ಮನೆಗೆ ಹೊರಟಿದ್ದ ಗಾಡಿಯವರು, ಗಾಡಿ ತಳ್ಳುತ್ತ ಊರಹೊರಗಿನ ಮರದ ಹತ್ತಿರ ಹೋಗುತ್ತಿದ್ದ. ಆಗಿನ್ನು ಎದ್ದು ಕುಳಿತ್ತಿದ್ದ, ಪುಟ್ಟದೆವ್ವ , ಮೇಲಿನಿಂದ ಕುತೂಹಲದಿಂದ ಗಾಡಿಯತ್ತ ನೋಡಿತು. ಅದಕ್ಕೆ ಗಂಟೆಯ ಶಬ್ದ ತುಂಬ ಖುಷಿ ತಂದಿತು. ಸರಿ ಮತ್ತೇನು, ಮರದ ಮೇಲಿನಿಂದ 'ಸೂಊಊಊಯ್ ' ಎಂದು ಕೆಳಗೊಂದು "ಡೈವ್ ' ಹೊಡೆಯಿತು, ಸೀದ ಗಾಡಿಯ ಹತ್ತಿರ ಬಂದು ಗಾಡಿಗೆ ಕಟ್ಟಿದ ಗಂಟೆಯನ್ನು ಕಿತ್ತುಕೊಂಡು , ಪುನಃ ಮೇಲೆ ಹಾರಿತು. ಗಾಡಿಯನ್ನು ತಳ್ಳುತ್ತಿದ್ದವನು ಗಾಭರಿಯಿಂದ ಗಾಡಿ ಬಿಟ್ಟು ಓಟ.
 
ಪುಟ್ಟದೆವ್ವ ಗಂಟೆಯನ್ನು ಹಿಡಿದು ನೋಡಿತು. ಗಲ ಗಲ ಎಂದು ಅಲ್ಲಾಡಿಸಿದರೆ , 'ಡಣ್...ಡಾಣ್ ' ಎನ್ನುವ ಶಬ್ದ ಅದಕ್ಕೆ ಎಂತದೊ ಖುಷಿ, ನಗು, 
ಮತ್ತೆ ಮತ್ತೆ ಬಾರಿಸುತ್ತಲೆ ಇತ್ತು. 
ಅದಕ್ಕೆ ಆಸಕ್ತಿ ಹುಟ್ಟಿ ಆ ಗಂಟೆಯನ್ನು ತನ್ನ ಸೊಂಟಕ್ಕೆ ಕಟ್ಟಿ ಕೊಂಡಿತು. 
ಸೂಊಊಊಯ್ ಎಂದು ಗಾಳಿಯಲ್ಲಿ ಹಾರಿದರೆ, ಗಂಟೆ ಶಬ್ದ ಮಾಡುತ್ತಿತ್ತು.  ಆದಕ್ಕೆ ಆನಂದವೊ ಆನಂದ. 
ಊರ ಜನರೆಲ್ಲ ರಾತ್ರಿಯಲ್ಲಿ ಹೆದರಿ ಒಳಗೆ ಕುಳಿತ್ತಿದ್ದರು, ಇದೇನು ಊರಿನಲ್ಲೆಲ್ಲ ಗಾಳಿಯಲ್ಲಿ ಗಂಟೆಯ ಶಬ್ದ ಬರುತ್ತಿದೆ ಎಂದು. 
ಆ ದೆವ್ವಕ್ಕೆ ಗಂಟೆ ಎಂದರೆ ಆಸೆ ಹುಟ್ಟಿತ್ತು, ಊರಿನಲ್ಲಿ ಎಲ್ಲಿ ಗಂಟೆ ಕಂಡರು ಸರಿ, ತಂದು ತನ್ನ ಕಾಲಿಗೆ ಕೈಗೆ, ಸೊಂಟಕ್ಕೆ ಕುತ್ತಿಗೆಗೆ ಕಟ್ತಿಕೊಳ್ಳಲು ಪ್ರಾರಂಬಿಸಿತು.  ಬರುಬರುತ್ತ, ಎಲ್ಲರ ಮನೆಯೊಳಗೆ ನುಗ್ಗಿ, ದೇವರ ಮುಂದಿದ್ದ ಗಂಟೆಯನ್ನು ಬಿಡದೆ ತಂದು ತನ್ನ ಮೈಕೈಗೆಲ್ಲ ಕಟ್ಟಿಕೊಂಡಿತು. 
ಊರವರೆಗೆಲ್ಲ ಈ 'ಗಂಟೆ ದೆವ್ವದ" ಗಲಾಟೆಯಿಂದ ಸಾಕಾಗಿತ್ತು, ರಾತ್ರಿಯೆಲ್ಲ ದೆವ್ವ ಗಂಟೆ ಕಟ್ಟಿಕೊಂಡು ಊರೆಲ್ಲ ಹಾರಾಡುತ್ತಿದ್ದರಿಂದ ಎಲ್ಲರಿಗು ಗಂಟೆಯ ಶಬ್ದದಿಂದ ಹೆದರಿ ನಿದ್ದೆಯೆ ಬರುತ್ತಿರಲಿಲ್ಲ. ದನದ ಕುತ್ತಿಗೆಗೆ ಕಟ್ಟಿದ ಸಣ್ಣಗಂಟೆಯಿಂದ ಹಿಡಿದು ಎಲ್ಲ ಗಂಟೆಗಳು ಮಾಯ, ಎಲ್ಲರು ಏನುಮಾಡುವುದು ಎಂದು ತೋಚದೆ ಹೆದರಿ ಕೂತರು. 
 
ಹಾಗಿರುವ ಸಮಯ, ಊರಿನ ಮಾಸ್ತರರ ಮನೆಗೊಬ್ಬ  ಹುಡುಗ ಬಂದ., ಅವನು ಬೇರೆ ಊರಿನವನು, ಅವನಿಗೆ ಗಂಟೆ ದೆವ್ವದ ವಿಷಯ ತಿಳಿಯದು. ರಾತ್ರಿ ಮಲಗಿರುವಾಗ ಗಂಟೆಯ ಶಬ್ದ ಕೇಳಿ ಎಚ್ಚೆತ್ತು, 
'ಇದೇನು' ಎಂದು ಕೇಳಿದ, ಅವನಿಗೆ ಗಂಟೆ ಶಬ್ದದ ಕಾಟದ ವಿಷವೆಲ್ಲ ತಿಳಿಯಿತು. ಬೆಳಗ್ಗೆ ಏಳುವದರ ಒಳಗೆ ಅವನು ಮನದಲ್ಲಿಯೆ ಒಂದು ಲೆಕ್ಕ ಹಾಕಿದ, ಹೇಗಾದರು ಮಾಡಿ ಈ ಗಂಟೆಯ ಶಬ್ದವನ್ನು ಹೆದರಿಸಿ ಓಡಿಸಬೇಕು ಎಂದು.
 
ಮರುದಿನ, ಒಬ್ಬನೆ ಊರ ಹೊರಗಿನ ಮರದ ಹತ್ತಿರ ಹೋದ. ಗಂಟೆ ದೆವ್ವ,  ಖೂಷಿಯಾಗಿ, ತನ್ನ ಗಂಟೆಗಳೊಡನೆ ಲಾಗ ಹಾಕುತ್ತ ಕುಳಿತಿತ್ತು,  
ಹುಡುಗ ಮರದ ಕೆಳಗೆ ನಿಂತು, ದೆವ್ವಕ್ಕೆ ಕಾಣಿಸುವಂತೆ ಗಂಟೆ ಹಿಡಿದು ಬಾರಿಸಿದ, ದೆವ್ವ ನೋಡಿತು, 'ಹೊಸಗಂಟೆ' ಅದು ಬಿಡುವುದೆ. 
"ನನಗೆ ಕೊಡು ' ಎಂದು ಹತ್ತಿರ ಬಂದಿತು, 
ಹುಡುಗನೆಂದ
"ಇಲ್ಲ ಇದನ್ನು ಕೊಡಲಾಗದು, ಇದು ನನ್ನ ಗಂಟೆ, ಮಾಯಾಗಂಟೆ, ನಾನು ಮಾತ್ರ ಬಾರಿಸಬಲ್ಲೆ, ನಿನ್ನಿಂದ ಇದನ್ನು ಬಾರಿಸಲು ಆಗದು'
ದೆವ್ವ ಜೋರಾಗಿ ನಕ್ಕಿತ್ತು, 
'ಇಷ್ಟೊಂದು ಗಂಟೆ ಹೊತ್ತಿರುವ ನನಗೆ , ನೀನು ತಂದಿರುವ ಗಂಟೆ ಬಾರಿಸಲು ಆಗದೆ,  ಸುಮ್ಮನೆ ಕೊಡು" ಎಂದಿತು
ಹುಡುಗ
"ಅಷ್ಟು ಸುಲುಭ ಎಂದು ಬಾವಿಸಬೇಡ, ಈ ಗಂಟೆ ನಿನ್ನಿಂದ ಬಾರಿಸಲಾಗುವದಿಲ್ಲ,  ನೀನು ಬಾರಿಸಿದಲ್ಲಿ, ಈ ಗಂಟೆ ನಿನ್ನದೆ, ಈ ಗಂಟೆ ನಿನಗೆ ಬಾರಿಸಲಾಗದಿದ್ದಲ್ಲು ನೀನು ಊರು ಬಿಟ್ಟು ಹೋಗಬೇಕು, ನಿನಗೆ ಒಪ್ಪಿಗೆಯೆ"
ಎಂದು ಕೇಳಿದ
ದೆವ್ವ ಅಲಕ್ಷದಿಂದ 
"ಅದಿನೆಂತ ಗಂಟೆ ನನ್ನ ಕೈಲಿ ಬಾರಿಸಲು ಆಗದೆ, ಮೊದಲು ಕೊಡು, ಬಾರಿಸಲು ಆಗದಿದ್ದರೆ ನಾನು ಊರು ಬಿಟ್ಟು ಹೋಗುವೆ" ಎನ್ನುತ್ತ ಗಂಟೆ  ಕಿತ್ತು ಕೊಂಡಿತು.
ಕೊಬ್ಬಿನಿಂದ ಗಂಟೆ ಬಾರಿಸಲು ನೋಡಿತು, 
ಅರೆ ಗಂಟೆಯಿಂದ ಶಬ್ದವೆ ಬರುತ್ತಿಲ್ಲ!!!
ಮತ್ತೆ ಜೋರಾಗಿ ಕೈ ಬೀಸಿತು,
"ಊಹು!!! ಯಾವ ಶಬ್ದವು ಇಲ್ಲ" 
ಆಶ್ಚರ್ಯದಿಂದ, ಗಂಟೆಯನ್ನೆಲ್ಲ ತಿರುಗಿಸಿ ನೋಡಿತು, 
ಗಂಟೆಯ ಒಳಬಾಗದಲ್ಲಿ, ಶಬ್ದ ಬರಲು ಬೇಕಾದ ನಾಲಿಗೆಯೆ ಇಲ್ಲ !!!!!   ಮತ್ತೆ ಶಬ್ದ ಬರಲು ಹೇಗೆ ಸಾದ್ಯ !!
ಪುಟ್ಟ ದೆವ್ವ ಹೇಳಿತು
"ಇದು ಮೋಸ , ಮೋಸ , ನಾಲಿಗೆಯೆ ಇಲ್ಲದೆ ಗಂಟೆ ಶಬ್ದ ಹೇಗೆ ಮಾಡುತ್ತೆ. ಇದನ್ನು ನೀನು ಬಾರಿಸು ನೋಡೋಣ" 
ಹುಡುಗ ಹೇಳಿದ 
"ಇಲ್ಲಿಕೊಡು ಗಂಟೆಯನ್ನು, ನಾನು ಬಾರಿಸುವೆ, ಶಬ್ದ ಬಂದರೆ, ನೀನು ಕೊಟ್ಟಮಾತಿನಂತೆ ಊರು ಬಿಟ್ಟು ಹೋಗಬೇಕು, ಇಲ್ಲದಿದ್ದರೆ ನಿನ್ನ ಗತಿ ನೆಟ್ಟಗಾಲ್ಲ" ಎನ್ನುತ್ತ ಗಂಟೆಯನ್ನು ಪಡೆದ.
ದೆವ್ವ ಕುತೂಹಲದಿಂದ ನೋಡುತ್ತಿತ್ತು , ಹುಡುಗ ಗಂಟೆ ಹಿಡಿದು ಅಲ್ಲಾಡಿಸಿದ, 
"ಡಣ್ ಡಾಣ್ " ಎಂಬ ಶಬ್ದ ಬರುತ್ತಿದೆ , ಈಗ ಪುಟ್ಟದೆವ್ವಕ್ಕೆ ತುಂಬಾ ಗಾಭರಿಯಾಯಿತು, ನಾಲಿಗೆಯೆ ಇಲ್ಲದ ಗಂಟೆಯನ್ನು ಬಾರಿಸುತ್ತಾನೆ ಎಂದರೆ ಈ ಹುಡುಗ ಸಾಮಾನ್ಯನಲ್ಲ ಎಂದು ಹೆದರಿತು. ಈ ಊರು ಬಿಟ್ಟುಹೋಗುವುದು ಕ್ಷೇಮ ಎಂದು ಭಾವಿಸಿ, ಹುಡುಗನಿಗೆ ಕೊಟ್ಟ ಮಾತಿನಂತೆ , ಅಲ್ಲಿಂದ ಹಾರಿ ಮತ್ತೆಲ್ಲಿಗೊ ಹೊರಟು ಹೋಯಿತು. 
ಅಂದು ರಾತ್ರಿ ಊರಿನ ಜನರಿಗೆಲ್ಲ ಆಶ್ಚರ್ಯ, ರಾತ್ರಿಯೆಲ್ಲ ಗಂಟೆಯ ಶಬ್ದವೆ ಇಲ್ಲ . ಬೆಳಗ್ಗೆ ಎಲ್ಲರು ಕುತೂಹಲದಿಂದ  ಆ ಹುಡುಗನಿದ್ದ ಮನೆಯ ಹತ್ತಿರ ಬಂದರು, 
"ಅಲ್ಲಪ್ಪ ನೀನು ಆ ದೆವ್ವವನ್ನು ಹೇಗೆ ಓಡಿಸಿದೆ, ನಿನೆಷ್ಟು ಶಕ್ತಿವಂತ, ನಿನಗೆ ಮಾಯ ಮಂತ್ರವೆಲ್ಲ ಗೊತ್ತಿರಬೇಕು, ಇಲ್ಲದಿದ್ದರೆ ಆ ದೆವ್ವವನ್ನು ಹೇಗೆ ಸೋಲಿಸಲು ಸಾದ್ಯ,  ನಾಲಿಗೆ ಇಲ್ಲದ ಆ ಗಂಟೆ ಒಮ್ಮೆ ಬಾರಿಸು ನೋಡೋಣ" ಎಂದರು
 
ಹುಡುಗ ಆ ಗಂಟೆ ತಂದು ಬಾರಿಸಿದ , ಅದು ಡಣ್ ಡಾಣ್ ಎಂದು ಶಬ್ದ ಮಾಡಿದಾಗ , ಎಲ್ಲರು ಕೇಳಿದರು, ಇದು ಹೇಗೆ ಸಾದ್ಯ ಎಂದು.
ಆಗ ಹುಡುಗ. ತಾನು ಹಾಕಿದ್ದ ಪೂರ್ಣ ತೋಳಿನ ಅಳ್ಳಕವಾಗಿದ್ದ ದೊಡ್ಡ ಜುಬ್ಬ ಸರಿಸಿ ತೋರಿದ, 
"ಅವನು ಜುಬ್ಬದೊಳಗೆ, ಕೈಗೆ ಮತ್ತೊಂದು ಗಂಟೆ ಕಟ್ಟಿಕೊಂಡಿದ್ದ, ಅವನು ಕೈ ಜೋರಾಗಿ ಆಡಿಸಿದಾದ, ಜುಬ್ಬದ ಒಳಗೆ ಕಟ್ಟಿದ , ಆ ಗಂಟೆ ಶಬ್ದ ಮಾಡುತ್ತಿತ್ತು. ಊರಿನ ಜನರೆಲ್ಲ, ನಗುತ್ತ ಹುಡುಗನ ಬುದ್ದಿವಂತಿಕೆ ಮೆಚ್ಚುತ್ತ,  ಹೆದರಿ ಓಡಿದ ದೆವ್ವದ ಪೆದ್ದುತನಕ್ಕೆ ನಗುತ್ತ ಅಲ್ಲಿಂದ ಹೊರಟರು.
 
ಅಂದ ಹಾಗೆ ಆ ಗಂಟೆ ಶಬ್ದದ ದೆವ್ವ ನಿಮ್ಮ ಊರಿಗೆ ಏನಾದರು ಬಂದಿದೆಯ ನೋಡಿ!!
 
---------------------------------------------------------------------------
ಸಂಗ್ರಹ : ತುಂಬಾ ಹಿಂದೊಮ್ಮೆ , ಸುಮಾರು ಹತ್ತಾರು ವರ್ಷಗಳ ಕೆಳಗೆ ಚಂದಮಾಮದಲ್ಲಿ ಓದಿದ್ದು, 
 
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಸೂಪರ್..
ಮಕ್ಕಳ‌ ಕತೆಯಲ್ಲಿರಬೇಕಾದ‌ ನಿರೂಪಣೆ ಮತ್ತು ಕುತೂಹಲಕಾರಿ ವಿಷಯ‌...
ಅದೇನೋ.. ದೆವ್ವಗಳು ನಿಮಗೆ ಅದೆಷ್ಟು ಪ್ರೀತಿ...!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ0ದನೆಗಳು ಪ್ರಸನ್ನರವರೆ
ಮಕ್ಕಳ‌ ಕತೆಯ‌ ನಿರೂಪಣೆ ಸ್ವಲ್ಪ ಕಷ್ಟವೆ. ....................................................................................
ದೆವ್ವಗಳು ನನಗೆ ಪ್ರೀತಿಯೆ ಹಾಗೆನಿಲ್ಲ
ಮಕ್ಕಳ ಕತೆಯಲ್ಲಿರಬೇಕಾದ‌ ಗುಣ ಕುತೂಹಲ‌ ಭಯ‌ ಅನ್ವೇಷಣೆ ನಗು ಇ0ತವೆ, ಅದು ಈ ಕತೆಯಲ್ಲಿದೆ ಎ0ದು ಭಾವಿಸಿದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಪಾರ್ಥರೇ. ನಿಮ್ಮ ಈ ಕಥೆಯನ್ನು ಮೊಮ್ಮಗಳಿಗೆ ಹೇಳುತ್ತಾ ಅವಳ ಶಾಲೆಯ ಗಂಟೆಯನ್ನೂ ಮರಿದೆವ್ವ ಕಿತ್ತುಕೊಂಡು ಹೋಯಿತು ಎಂದು ಹೇಳಿದಾಗ ಅವಳು ಕುಣಿಯುತ್ತಾ ಹೇಳಿದ ಪ್ರತಿಕ್ರಿಯೆ ಇದು:"ವಾವ್, ಥ್ಯಾಂಕ್ಸ್ ಮರಿದೆವ್ವ!." :))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) ಪಾರ್ಥರೆ, ಈಗಿನ ಮಕ್ಕಳಿಗೆ ದೆವ್ವದ ಭಯನೂ ಇಲ್ಲಾಂತೀನಿ.. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.